X
    Categories: ಕಥೆ

ದೇವತೆ

 

          ಮದುವೆಯಾಗಿ ಮಗಳನ್ನೂ ವಿದೇಶಕ್ಕೆ ಕರೆದುಕೊಂಡು

         ಹೋಗುವುದಾದರೆ ಮಾತ್ರ ಮದುವೆ ಎಂದರು ಮಾವ. ಆದರೆ

         ಮದುವೆಯಾದ  ಅನಂತರ ಮಗಳ ಬಾಯಿಂದ ಬಂದ

         ಮಾತುಗಳನ್ನು ಹಿತೇಶ ಬಡಪಟ್ಟಿಗೆ ನಂಬದಾದ

 

” ಕೊನೆಯ ಹಂತದಲ್ಲಿ ನಾನು ಇನ್ನೊಬ್ಬರ ಹಂಗಿನಲ್ಲಿ ಬದುಕಬೇಕು ಅಂತೀಯ ನೀನು. ಏನು ಮಾಡೋದು  ನನ್ನ ಹಣೆಬರಹವೇ ಇಷ್ಟು….”

ಎತ್ತಲೋ ನೋಡಿ ಅಮ್ಮ ಗದ್ಗದಿತಳಾಗಿ ನುಡಿದಾಗ ಹಿತೇಶ ಕಸಿವಿಸಿಗೊಳಗಾದ.

“ಅಮ್ಮ, ಹಂಗು ಅಂತ್ಯಾಕೆ ಭಾವಿಸ್ತಿಯಾ ನೀನು ? ನೀನಿರೋದು ನಿನ್ನ ಮಗಳ ಮನೇಲಿ ತಾನೇ?”

“ಮಗಳೇನೋ ನಮ್ಮವಳು ಸರಿ. ಆದರೆ ನಾಗರಾಜ ? ….ಅವನು ಎಷ್ಟಾದ್ರೂ ಅಳಿಯ. ಅವನು ನಮ್ಮವನಾಗಲು ಸಾಧ್ಯವಾ…..?”

“ಯಾಕೆ ಹಾಗಂತಿ?ನಮ್ಮವನು ಅಂತ ಭಾವಿಸಿದ್ರೆ ನಮ್ಮವನು. ಇಲ್ಲದಿದ್ರೆ ಅಲ್ಲ, ಎಲ್ಲಾ ನಾವು ಯೋಚಿಸೋ ರೀತಿಯಲ್ಲಿರುತ್ತೆ ಅಲ್ವ?”

“ನೀನೇನೋ ಸುಲಭವಾಗಿ ಹೇಳ್ತಿ ಹಿತೇಶ. ಆದರೆ ಅಲ್ಲಿ ನಾನು ಪ್ರತಿಕ್ಷಣವೂ ಅವರೇನನ್ತಾರೋ ಇವರೇನನ್ತಾರೋ ಎಂಬ ಆತಂಕದಲ್ಲಿಯೇ ಬದುಕಬೇಕು. ನನ್ನದೆನ್ನುವ ಸ್ವಾತಂತ್ರ್ಯ ನಂಗೆ ಕಿಂಚಿತ್ತಾದರೂ ಇರುತ್ತಾ ಹೇಳು …. ಈ  ವಯಸ್ಸಲ್ಲೂ ನಾನು ಇನ್ನೊಬ್ಬರಿಗೆ  ಅಂಜಿಕೊಂಡೇ ಬದುಕಬೇಕು…..”

ಹೌದಲ್ಲ…..ಮಗಳ ಮನೆಯಲ್ಲಿ ಬದುಕುವುದು ಒಂದು ರೀತಿಯ ಹಂಗೇ. ತುಂಬಾ ಸ್ವಾಭಿಮಾನಿಯಾದ ಅಮ್ಮನಿಗಂತೂ ಅದು  ಅಸಾಧ್ಯವೇ ಸರಿ. ಹಾಗಾದರೆ ತಾನೇನು ಮಾಡಲಿ…..?

“ನೀನು ಮದುವೆಯಾಗಿ ಸುನೀತಾಳನ್ನು ನಿನ್ನ ಜೊತೆಯಲ್ಲಿ ವಿದೇಶಕ್ಕೆ ಕರೆದುಕೊಂಡು ಹೋಗೋದಾದ್ರೆ ಮಾತ್ರ  ಮಾತುಕತೆ ಮುಂದುವರಿಸುವ .ಇಲ್ಲದಿದ್ರೆ ಅವಳನ್ನು ಮದುವೆಯಾಗುವ ಆಲೋಚನೆಯನ್ನೇ ಬಿಟ್ಟಿಡು….”

ಸುನೀತಾಳ ಮಾವ ಖಂಡತುಂಡವಾಗಿ ಹೇಳಿದ್ದರು. ಆದರೆ      ಸುನೀತಾಳನ್ನು ನೋಡಿದ ಅನಂತರ ಹಿತೇಶ ಇವಳೇ ತನ್ನ ಮಡದಿಯಾಗ ಬೇಕಾದವಳು ಎಂದು ನಿರ್ಧರಿಸಿಬಿಟ್ಟಿದ್ದ . ಹೃದಯಕ್ಕೆ ತೀರಾ ಆಪ್ತವೆನಿಸುವ ಅವಳ ನಡೆ-ನುಡಿ ,ರೂಪ -ಲಾವಣ್ಯ ಎಲ್ಲವೂ ಅವನನ್ನು ಪರವಶಗೊಳಿಸಿದ್ದವು . ಅವಳು ತನ್ನನ್ನು ಮದುವೆಯಾಗಲು ಒಪಿದ್ದರೆ ಅದು ತನ್ನ ಭಾಗ್ಯವೇ ಸರಿ ಎಂದು ಭಾವಿಸಿದ್ದ.

ದುಂಡಗಿನ  ಮುಖ …… ಎಣ್ಣೆಗಪ್ಪಿನ ಮೈಬಣ್ಣ ….. ಮುಖದಲ್ಲಿ ಮೂಡುವ ಮೋಹಕ ಮುಗುಳ್ನಗು …. ಎಲ್ಲವೂ ತನಗಾಗಿಯೇ ಸೃಷ್ಟಿಯಾಗಿದೆಯೆನಿಸಿತು ಹಿತೇಶನಿಗೆ . ಅವಳ ಸಂಬಂಧಿಕರ ಪರಿಚಯವಿದ್ದುದರಿಂದ ಅವರ ಮೂಲಕ ಅವಳನ್ನು ಮದುವೆಯಾಗುವ ಪ್ರಸ್ತಾವ ಇರಿಸಿದ್ದ. ಅವರ ಕಡೆಯಿಂದ ಒಪ್ಪಿಗೆಯೇನೋ ದೊರೆತಿತ್ತು. ಆದರೆ ಒಂದೇ ಒಂದು ಕಂಡೀಶನ್ …… ಮದುವೆಯ  ನಂತ್ರ ಅವಳನ್ನೂ ವಿದೇಶಕ್ಕೆ ಕರೆದೊಯ್ಯುವುದಾದರೆ ಮಾತ್ರ ……

ಹಿತೇಶನಿಗೆ ಬಿಸಿತುಪ್ಪ ಬಾಯಲಿಟ್ಟ ಅನುಭವ . ನುಂಗುವ ಹಾಗಿಲ್ಲ , ಉಗುಳಲು ಮನಸಿಲ್ಲ …. ಮದುವೆಯ ಅನಂತರ ಅವಳನ್ನೇನೋ ತನ್ನ ಜೊತೆ ಕರೆದೊಯ್ಯಬಹುದು . ಅಲ್ಲಯ ಖರ್ಚು – ವೆಚ್ಚಗಳನ್ನೂ ಹೇಗಾದರೂ ನಿಭಾಯಿಸಬಹುದು ……… ಅದರೆ ಅಮ್ಮ …! ಅಮ್ಮ ಇಲ್ಲಿ ಒಂಟಿಯಾಗುತ್ತಾರೆ. ಇಷ್ಟೊಂದು ದೊಡ್ಡ ಮನೆಯಲ್ಲಿ ತನ್ನವರೆನ್ನುವ ಒಂದೇ ಒಂದು ಜೀವವಿಲ್ಲದೆ ತೀರಾ ಒಂಟಿಯಾಗಿ ಅಮ್ಮನಿಗೆ ಬದುಕಲು ಸಾಧ್ಯವೇ ? ಅಪ್ಪನಾದರೂ ಇರುತ್ತಿದ್ದರೆ ….!

ಅಪ್ಪನನ್ನು ಅಕಾಲದಲ್ಲಿಕಳೆದುಕೊಂಡ ಹಿತೇಶ ಮತ್ತು ಲಕ್ಷ್ಮಿಗೆ ಅಮ್ಮನೇ ಎಲ್ಲವೂ ಆಗಿದ್ದರು . ಇದ್ದ ಅಲ್ಪಸಲ್ಪ  ಜಮೀನಿನಲ್ಲಿ ಹೇಗೋ ಮಕ್ಕಳನ್ನು ಓದಿಸಿದ್ದರು. ಅವರ ಒದಿಗೆ ಅವರು ಪಡಬಾರದು ಕಷ್ಟವಿರಲಿಲ್ಲ . ಓದಿನಲ್ಲಿ  ಜಾಣನಾಗಿದ್ದ  ಹಿತೇಶನಿಗೆ ಓದಿನ ಅನಂತರ ತತ್‍ಕ್ಷಣವೇ ವಿದೇಶದಲ್ಲಿ ಅತ್ಯುತ್ತಮವೆನಿಸುವ ಉದ್ಯೋಗವೂ ದೊರೆತಿತ್ತು . ಆಕರ್ಷಕ ವೇತನದ ಜೊತೆ ಉತ್ತಮ ಸವಲತ್ತುಗಳೂ ಇದ್ದವು. ಅವನು ತನ್ನ ತಂಗಿಗೆ ಹೆಚ್ಚಿನ ಓದ್ದನ್ನೂ ಮುಂದುವರಿಸಲು ಸಹಕರಿಸಿದ . ಇಬ್ಬರದೂ ಈಗ ವಿವಾಹದ ವಯಸ್ಸು . ಹಿತೇಶ ತಂಗಿಗೊಬ್ಬ ಸೂಕ್ತ ಅನುಕೂಲಸ್ಥ ಹುಡುಗನ ಜೊತೆ ಮದುವೆ ನಿಶ್ಚಯ ಮಾಡಿದ್ದ. ಅವಳ ಮದುವೆಯಾದರೆ ಅನಂತರ ತನಗೆ  ಸುನೀತಾಳನ್ನು ಮದುವೆಯಾಗ ಬಹುದು .  ಸುನೀತಾಳನ್ನು ತನ್ನ ಜೊತೆ ಕರೆದೊಯ್ಯುವ ಮನಸಿದ್ದರೂ ಅದು ಸಾಧುವಲ್ಲ ಎಂದವನಿಗೆ ತಿಳಿದಿತ್ತು.         

          “ನೀನು ಸುನೀತಾಳನ್ನು ಮದುವೆಯಾಗುವುದು ಸಂತೋಷವೇ. ಆದರೆ ಅವಳನ್ನು ನಿನು ಇಲ್ಲೇ ಬಿಟ್ಟು ಹೋಗ್ಬೇಕು . ನೀನು ವರ್ಷಕ್ಕೆರಡು ಬಾರಿ ಬಂದು ಹೋಗು. ಅವಳನ್ನು ಬೇಕಾದ್ರೆ ಇಲ್ಲಿ ಉದ್ಯೋಗಕ್ಕೂ  ಕಳುಹಿಸು . ನಾನು ಬೇಡ ಅನ್ನಲ್ಲ , ಆದರೆ ವಿದೇಶಕ್ಕೆ ಕರ್ಕೊಂಡು ಹೋಗ್ತೇನೆ ಅಂತ ಮಾತ್ರ ಹೇಳ್ಬೇಡ . ನಾನು ಒಬ್ಳೇ ಇಲ್ಲಿ ಹೇಗಿರೋದು …?”

ಅಮ್ಮನ ದನಿಯಲ್ಲಿ ಬೇಡಿಕೆಯೇ ಮೈವೆತ್ತಂತಿತ್ತು . ಅಮ್ಮ ಹೇಳಿದಂತೆ ನಡೆದರೆ ತನಗೂ ಕ್ಷೇಮ . ಒಂದು ಹತ್ತು ವರ್ಷದ ಅನಂತರ ಊರಿಗೇ ಬಂದು ಏನಾದರೂ ಒಂದು ಸ್ವಂತ ಉದ್ಯೋಗ ನೋಡಿಕೊಂಡರಾಯಿತು.         

          ಆದರೆ ಈ ವ್ಯವಸ್ಥೆಗೆ ಸುನೀತಾಳ ಮನೆಯವರ ಒಪ್ಪಿಗೆಯೇ ಇಲ್ಲ…

                    *           *           *           *           *           *           *           *           *                                              

ಸುನೀತಾಳಿಗೆ ಬೇರೆ ಮದುವೆಯಾಗದಿರಲಿ ದೇವರೇ ಎಂದು ಪ್ರಾರ್ಥಿಸುತ್ತಲೇ ಹಿತೇಶ ತಂಗಿಯ ಮದುವೆಯನ್ನು ಸಾಧ್ಯವಾದಷ್ಟೂ ಚೆನ್ನಾದ ರೀತಿಯಲ್ಲೇ ಮಾಡಿ ಮುಗಿಸಿದ . ಮದುವೆಯ ಗೌಜಿ, ಗದ್ದಲಗಳು, ಅವರ ತಿರುಗಾಟಗಳು  ಎಲ್ಲ ಮುಗಿದ ಬಳಿಕ ಹಿತೇಶ ಒಂದು ದಿನ ಅವರ ಜೊತೆ ಕುಳಿತು ತನ್ನ ವಿಚಾರವನ್ನು ಪ್ರಸ್ತಾವಿಸಿದ

ನಾಗರಾಜ ಧ್ವನಿಯಲ್ಲಿ ಯಾವುದೇ ಕೃತಕತೆ ಸೋಕದಂತೆ ನಯವಾಗಿ ನುಡಿದ , “ಅತ್ತೆಯನ್ನು ಕರೆದುಕೊಂಡು ಹೋಗಲು ನಂದೇನೂ ಅಭ್ಯಂತರವಿಲ್ಲ ಬಾವ .. ಅವರು ನನಗೆ ಅಮ್ಮನಂತೆಯೇ ಅಲ್ವೆ ? ಅದರೆ ಅವರಿಗೆ ನಮ್ಮನೆಯಲ್ಲಿ ಕಷ್ಟವಾಗಬಹುದೇನೋ…”

ಲಕ್ಷ್ಮಿಯಿಂದ ಯಾವ ಪ್ರತಿಕ್ರಿಯೆ ಇಲ್ಲ …

ನಾಗರಾಜನಿಲ್ಲದ ಸಂದರ್ಭದಲ್ಲಿ ಅವಳು ಹಿತೇಶ ಬಳಿ ನುಡಿದಳು :

“ಅಲ್ಲ .. ನಾನೇ ಅಲ್ಲಿಗೆ ಹೊಸಬಳು …ನಾನೇ ಅವರ ಜೊತೆ ಹೊಂದಿಕೊಳ್ಳುವುದು ಹೇಗೆಂದು ಯೋಚಿಸಬೇಕಷ್ಟೆ …  ಇನ್ನು ಅಮ್ಮನನ್ನೂ ಅಲ್ಲಿಗೆ ಕರೆದುಕೊಂಡು ಹೋಗಿ ಯಾಕವರಿಗೆ ಹಿಂಸೆ ನೀಡಲಿ..? ನಿಂಗೇಅಷ್ಟೂ ಗೊತ್ತಾಗೋಲ್ವ ? ಅಮ್ಮನನ್ನು ನಿಂಗೇ ನಿನ್ನ ಜೊತೆ ಕರ್ಕೊಂಡು ಹೋಗ್ಬಹುದಲ್ವ?”

“ನಿನಗೆ ನಿನ್ನ ಅಮ್ಮನನ್ನು ನಿನ್ನ ಜೊತೆ ಕರೆದುಕೊಂಡು ಹೋಗಲು ಮನಸ್ಸಿಲ್ಲ. ಇನ್ನು ನನ್ನ ಹೆಂಡ್ತಿಯಾಗುವವಳು ಅತ್ತೆಯನ್ನು ತನ್ನ ಜೊತೆ ಕರ್ಕೊಂಡು ಹೋಗಲು ಒಪ್ತಾಳೆ ಅಂತ ಹೇಗೆ ಹೇಳ್ತಿ ? ಈಗಿನ ಕಾಲದ ಹುಡುಗಿಯರ ವಿಚಾರ ನಿಂಗೆ ಗೊತ್ತಿಲ್ವಾ?”

“ನೀನು ಮಗ. ನೀನು ಹೇಳಿದರೆ ಅವಳು ಒಪ್ಪಲೇಬೇಕು.ಅಲ್ಲದೆ ಅಮ್ಮನ ವಿಚಾರದಲ್ಲಿ ಯಾರಿಗೆ ಬೇಕಾದ್ದು ಹೆಚ್ಚು ಜವಾಬ್ದಾರಿ? ನೀನಿನ್ನು ವಿದೇಶಕ್ಕೆ ಹೋಗೋದೇ ಬೇಡ. ಇಲ್ಲೇ ಎಲ್ಲಾದ್ರೂ ಒಂದು ಉದ್ಯೋಗ ನೋಡ್ಕೋ…”

“ಅಷ್ಟೊಂದು ಒಳ್ಳೇ ಉದ್ಯೋಗ ನಂಗೆ ಇಲ್ಲಿ ಸಿಗೋದು ಬಹಳ ಕಷ್ಟ ಲಕ್ಷ್ಮೀ…”

          “ಯಾವುದಾದರೂ ಒಂದನ್ನು ತ್ಯಾಗ ಮಾಡ್ಲೇಬೇಕು . ನಿನ್ನ ಸ್ವಾರ್ಥದ ಬಗ್ಗೆ ಮಾತ್ರ ಯೋಚಿಸಿದರೆ ಸಾಲ್ದು. ಇನ್ನೊಬ್ಬರ ಸಮಸ್ಯೆಯನ್ನೂ ಅರ್ಥಮಾಡ್ಕೋಬೇಕು ….

ನೇರವಾಗಿ ನುಡಿದ ಲಕ್ಷ್ಮೀ ಇನ್ನು ಮುಂದಕ್ಕೆ ಮಾತನಾಡುವ ಅಗತ್ಯವೇ ಇಲ್ಲವೆಂಬ ಭಾವದಲ್ಲಿ ನಿರ್ಗಮಿಸಿದ್ದಳು

ಉತ್ತಮ ಉದ್ಯೋಗದ ಆಯ್ಕೆಯಾದರೆ ಸುನೀತಾಳನ್ನು ಮರೆಯಬೇಕು…..

ಸುನೀತಾಳನ್ನು ಬೇಕಾದರೆ ಉತ್ತಮ ಸಂಪಾದನೆಯುಳ್ಳ ಉದ್ಯೋಗವನ್ನು ಮರೆಯಬೇಕು.. 

ಹಿತೇಶ ದ್ವಂದ್ವ ಗೊಂದಲಗಳಿಂದ ತೊಳಲಾಡಿದ . ಏನಾದರೂ ಒಂದು ನಿರ್ಧಾರ ಕೈಗೊಳ್ಳಲೇಬೇಕಾಗಿತ್ತು. ಸುನೀತಾಳ ಮಾವ ಅವನನ್ನು ನೆನಪಿಸುತ್ತಲೇ ಇದ್ದರು.

“ಏನಾದರೂ ಒಂದು ನಿರ್ಧಾರ ಹೇಳಿ.  ಇಲ್ಲದಿದ್ರೆ ನಾವು  ಸುನೀತಾಳಿಗೆ  ಬೇರೆ  ಸಂಬಂಧ ನೋಡ್ತೇವೆ….?”

“ನಾನೊಮ್ಮೆ ಸುನೀತಾಳ ಬಳಿ ಮಾತನಾಡಬಹುದೇ…?”

“ಇಲ್ಲ, ಅದು ಮಾತ್ರ ಸಾಧ್ಯವಿಲ್ಲ, ಈ ವಿಚಾರ ಹಿರಿಯರಿಗೆಲ್ಲ ಒಪ್ಪಿಗೆಯಾದ್ರೆ ಮಾತ್ರ ನಾವು ಮುಂದುವರಿಯುವುದು. ಹಿರಿಯರ ಒಪ್ಪಿಗೆಯಿಲ್ಲದೆ ಯಾವ ಮಾತುಕತೆಯೂ ಬೇಡ…”

ಎಲ್ಲರೂ  ಎಷ್ಟೊಂದು ಖಂಡತುಂಡವಾಗಿ ಮಾತಾಡುತ್ತಾರೆನಿಸಿತು ಹಿತೇಶನಿಗೆ

ಸುನೀತಾಳನ್ನು ಮರೆಯಲೇ…?ಯಾಕೋ ಹೃದಯ ಹಿಂಡಿಹೋದಂತನ್ನಿಸಿತು.

ಅವಳನ್ನು ಮರೆತರೆತನ್ನ ಬಾಳು ತೀರಾ ನೀರಸವೇ ಸರಿ…

ಸುನೀತಾಳನ್ನು ತನ್ನ ಜೊತೆ ಕರೆದುಕೊಂಡು ಹೋಗಲೇ….?

ಅಮ್ಮ…? ಅಮ್ಮ ಇಲ್ಲಿ ಅನಾಥೆಯಂತೆ ಬದುಕುವುದನ್ನು ನೆನೆಸಿಯೇಕಣ್ಣು ತೇವವಾಯಿತು.

ಇಲ್ಲೇ ಒಂದು ಉದ್ಯೋಗ ನೋಡಲೇ…?

ಅಷ್ಟೊಂದು ಒಳ್ಳೇ ಸವಲತ್ತುಗಳಿರುವ ಉದ್ಯೋಗ ಇಲ್ಲಿ ದೊರೆಯಲು ಸಾಧ್ಯವೇ…?

ಭಾವುಕತೆಗೆ ಬಲಿಬಿದ್ದು ಇದ್ದ ಉದ್ಯೋಗವನ್ನೂ ಕಳೆದುಕೊಂಡು ಮುಂದೆ ಪರರ ಮುಂದೆ ಕೈಚಾಚುವಂತಾದರೆ …?

ಸುನೀತಾಳನ್ನು ಮರೆತು ವಿದೇಶಕ್ಕೆ ಹಾರಿದರೆ ಸುನೀತಾ ಮತ್ತೆಂದೂ ತನ್ನವಳಾಗೋದಿಲ್ಲ. ಮತ್ತೆ ಹುಡುಕಾಟ…ಎಂಥ ಹುಡುಗಿಯರು ಸಿಗುತ್ತಾರೋ…ಅವರ ಬೇಡಿಕೆಗಳೇನಿರುತ್ತೋ… ಅವರ ಹಿರಿಯರ ಬೇಡಿಕೆಗಳೇನಿರುತ್ತೋ. ಈ ಬೇಡಿಕೆಗಳ ಪ್ರವಾಹದಲ್ಲಿ ತನ್ನ ಅಸ್ತಿತ್ವವೇ ಕೊಚ್ಚಿ ಹೋಗುವುದರಲ್ಲಿ ಯಾವುದೇ ಅನುಮಾನವಿಲ್ಲ…

“ಅಲ್ಲ ಹತ್ತು ವರ್ಷಗಳ ಅನಂತರ ನೀನು ಇಲ್ಲಿಗೇ ಬಂದು ಸ್ವಂತ ಉದ್ಯೋಗವನ್ನು ಮಾಡುವವನಾಗಿದ್ದರೆ ಈಗ್ಲೇ ಯಾಕೆ ಆ ಕೆಲ್ಸ ಮಾಡ್ಬಾರ್ದು…?” ಅಮ್ಮನ ಸಲಹೆ ಒಂದು ಆಶಾಕಿರಣ ತೋರಿಸಿತು. ಆದರೆ ಬಂಡವಾಳ…? ತಂಗಿಯ ಮದುವೆ…ಚಿನ್ನ …ವರೋಪಚಾರ…ತನ್ನ ಮದುವೆ…ಈ ಎಲ್ಲಾ ಖರ್ಚುಗಳಿಗೆ ಹಣ ಬಳಕೆಯಾಗಿ ಬಳಿಕ ಉಳಿಯುವುದಾದರೂ ಏನಿದೆ?

“ಆದ್ರೆ ಇಲ್ಲಿ ಈಗ್ಲೇ ಸೆಟ್ಲ್ ಆದ್ರೆ ಸುನೀತಾ ಸಿಕ್ತಾಳೆ. ನಾವೇ ಸಾಕಷ್ಟು ಶ್ರಮ ಹಾಕಿದರಾಯಿತು. ಹತ್ತು ವರ್ಷದ ಅನಂತರ ಮಾಡುವುದನ್ನು ಈಗ್ಲೇ ಮಾಡಿಬಿಡೋಣ…”

ಹೀಗೊಂದು ಬೆಳಕಿನ ಕಿರಣ ಗೋಚರಿಸಿದಾಗ ತುಸು ನೆಮ್ಮದಿಯೆನಿಸಿತು. ಸುನೀತಾ ತನ್ನ ಬಳಿ ಇದ್ದರೆ ಸಾಕು . ತಾನು ಏನು ಬೇಕಾದರೂ ಸಾಧಿಸಬಲ್ಲೆ. ಈ ವ್ಯವಸ್ಥೆಗೆ ಸುನೀತಾಳ ಮನೆಯವರ ಒಪ್ಪಿಗೆ  ದೊರೆತಾಗ ಹಿತೇಶನಿಗೆ ಸ್ವರ್ಗಕ್ಕೆ ಮೂರೇ ಗೇಣು…        

                    *           *           *           *           *           *           *           *           *          

          “ನಿಮ್ಮಲ್ಲೊಂದು ಮಾತು ಕೇಳಲಾ…?”

“ಕೇಳು…”

“ನೀವು ವಿದೇಶಕ್ಕೆ ಹೋಗೋದನ್ನು ಯಾಕೆ ಕ್ಯಾನ್ಸಲ್ ಮಾಡಿದ್ರಿ ?”

“ಯಾಕಂದ್ರೆ, ವಿದೇಶಕ್ಕೆ ಹೋಗೋದಾದ್ರೆ ನಿನ್ನನ್ನೂ ಕರೆದುಕೊಂಡು ಹೋಗ್ಲೇಬೇಕು. ಇಲ್ಲದಿದ್ರೆ ಸುನೀತಾಳನ್ನು ಮದುವೆಯಾಗೋ ಆಸೇನೇ ಬಿಟ್ಬಿಡು ಎಂದು ನಿನ್ನ ಮಾವ ಹಟ ಹಿಡಿದರು.

ನೀವಿಬ್ರೂ ಹೋದ್ರೆ ನಾನಿಲ್ಲಿ ಅನಾಥೆಯಂತೆ ಸತ್ತುಹೋಗ್ಲಾ ಅಂತ ಅಮ್ಮ ಕಣ್ಣೀರಾದರು.”

“ನಿಮ್ಮ ತಂಗಿ ಏನಂದ್ರು…?”

“ಅಮ್ಮನ ಜವಾಬ್ದಾರಿ ನೋಡ್ಕೋಬೇಕಾದವನು ಮಗ. ಮಗಳ ಮೇಲೆ ಅವರ ಭಾರ ಹಾಕ್ಬಾರ್ದು ಅಂದ್ಲು…”

“ಅಂದ್ರೆ ನೀವು ಕೇವಲ ನನಗೋಸ್ಕರ ವಿದೇಶಕ್ಕೆ ಹೋಗೋದನ್ನು ಕೈಬಿಟ್ರೆ…”

“ಹೌದು. ನನಗೆ ಬೇರೆ ದಾರಿ ಇರಲಿಲ್ಲ. ನನಗೆ ನಿನ್ನಂಥ ಹುಡುಗಿಯೇ ಹೆಂಡತಿಯಾಗಿ ಬೇಕಿತ್ತು…”

“ಮುಂದಿನ ಉದ್ಯೋಗ…?”

“ಏನಾದ್ರೂ ಸ್ವಂತದ್ದು ಮಾಡೋಣ ಅಂತ…”

“ಸ್ವಂತದ್ದು ಏನು…?”

“ಇನ್ನೂ ಪ್ಲಾನ್ ಮಾಡಿಲ್ಲ.”

“ಇನ್ನೂ ಪ್ಲಾನೇ ಮಡಿಲ್ವ? ಇನ್ನು ಹೊಸದಾಗಿ ಆರಂಭಿಸಬೇಕಷ್ಟೆಯಾ…! ನಮ್ಮ ಬದುಕಿನ ದಾರಿ…?”

ಹೊಸ ಹೆಂಡತಿಯ ಮಾತುಗಳಿಂದ ಹಿತೇಶನೆದೆ ಧಸಕ್ಕೆಂದಿತು. ಅದೇನೋ ಅನುನಯದ ಮಾತುಗಳಿಗಾಗಿ ಹಂಬಲಿಸಿದವನೆದೆಗೆ ತಣ್ಣಗೆ ಇರಿದ ಅನುಭವ….

“ನಿನ್ನನ್ನು ಸಾಕುವ ಜವಾಬ್ದಾರಿ ನಂದು …”

ಗಂಡನ ಅಹಮಿಕೆಯ ಅವೇಶದಿಂದ ಹಿತೇಶ ನುಡಿದ .

“ಸರಿ…. ಸ್ವಂತ ಉದ್ಯೋಗ ಅಂತೀರಿ… ಬಂಡವಾಳ… ?”

“ಸಾಲ ಎಲ್ಲಿಯಾದ್ರೂ ಸಿಗುತ್ತೋ ನೋಡೋಣ…”

“ಸಾಲ…!? ಮೂಲಧನ ಕೊಂಚವೂ ಇಲ್ಲದೆ ಕೇವಲ ಸಾಲದಲ್ಲೇ ಉದ್ಯಮ ಆರಂಭಿ ಸೋದಾ…? ಉದ್ಯಮ ಕೈಹಿಡಿಯದಿದ್ರೆ…?”

ಹಿತೇಶನ ಮುಖ ಕಪ್ಪಿಟ್ಟಿತು. ತಾನು ಬಯಸಿ ಬಯಸಿ ಮದುವೆಯಾದವಳ ಬಾಯಿಂದ ಬರುವ ಮಾತುಗಳೇ… ಈ ಹೆಣ್ಣಿಗಾಗಿ ತಾನು ಅಷ್ಟೊಂದು ಒಳ್ಳೇ ಉದ್ಯೋಗ ತೊರೆದು ಕೆಟ್ಟೆನೇ…?

ಏನಾದರೂ ಭರವಸೆಯ ಮಾತುಗಳನ್ನಾಡುತ್ತಾಳೋ ಎಂದು ತವಕಿಸಿದರೆ ಬರೀ ಅಧೈರ್ಯದ ಮಾತುಗಳು…

“ಯಾಕೆ ಅಪಶಕುನ ಮಾತಾಡ್ತೀಯ…?”

“ಅಪಶಕುನ ಅಂತ ಯಾಕೆ ಭಾವಿಸ್ತೀರಿ…?”

ಸ್ವಂತ ಉದ್ಯಮ ಅಂದ್ಮೇಲೆ ಎಲ್ಲವನ್ನೂ ಮನಸ್ಸಿನಲ್ಲಿಟ್ಟುಕೊಂಡು ಎಲ್ಲದಕ್ಕೂ  ತಯಾರಿರಬೇಕಲ್ವೇ ? ಅವೆಲ್ಲದಕ್ಕೂ ನೀವು ಸಿದ್ಧವಿದ್ದೀರಾ…?”

ಯಾಕೋ ಕೋಪ ಉಕ್ಕಿ ಬಂತು ಹಿತೇಶನಿಗೆ. ಸುನೀತಾಳ ಕೆನ್ನೆಗೆರಡು ಬಾರಿಸಿ ಎಲ್ಲಿಗಾದರೂ ಎದ್ದು ಹೋಗೋಣವೆನಿಸಿದರೂ  ಸಾವರಿಸಿಕೊಂಡು  ತನಗಿನ್ನು  ಯಾವ  ಮಾತನ್ನೂ  ಆಡಲು  ಇಷ್ಟವಿಲ್ಲವೆಂಬ ಭಾವದಲ್ಲಿ ಮೌನಿಯದ .

“ನಿಮ್ಮನ್ನು ಅಧೀರಗೊಳಿಸಬೇಕೆಂಬ ಉದ್ದೇಶ ನನಗಿಲ್ಲ. ನಾವೀಗ ದಂಪತಿ. ಮುಂದಿನ ಬದುಕಿನ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ , ಯೊಚನೆ ಇರಬೇಕಲ್ವೇ? ಯಾವ ಒಂದು ಗುರಿ, ಯೋಜನೆಗಳಿಲ್ಲದೆ ಗಾಳಿಗೆ ಸಿಲುಕುವ ನಾವೆಯಂತೆ ನಮ್ಮ ಬದುಕು ಸಾಗಬೇಕು ಅಂತೀರೇನು?”

“ಅದಕ್ಕೆ ನಾನೇನ್ ಮಾಡ್ಬೇಕು ಅಂತೀಯಾ ನೀನು…?”

“ನಾವ್ಯಾಕೆ ಮತ್ತೆ ವಿದೇಶಕ್ಕೆ ಹೋಗ್ಬಾರ್ದು?”

“ಅಮ್ಮನನ್ನೇನು ಬಾವಿಗೆ ತಳ್ಳು ಅಂತೀಯೇನು? ನಂಗೊತ್ತು. ಈಗಿನ ಕಾಲದ ಹುಡುಗಿಯರೇ ಹೀಗೆ… ಮದುವೆಯಾದ ತತ್‍ಕ್ಷಣ ಅತ್ತೆ-ಮಾವನನ್ನು ಎಲ್ಲಿಯಾದರೂ ವೃದ್ಧಾಶ್ರಮಕ್ಕೆ ಸೇರಿಸಬೇಕೆಂದು ಯೋಜನೆ ಹಾಕ್ತಾರೆ. ತಾವು ಮುಂದೊಮ್ಮೆ ಅತ್ತೆ ಆಗ್ತೇವೆ ಅನ್ನೋ ಕಲ್ಪನೆಯಿರೋಲ್ಲ” ಹಿತೇಶ ಆವೇಶದಿಂದ ಕೂಗಾಡಿದ .

“ಯಾಕೆ ನೀವು ಏನೇನೋ ಕಲ್ಪಿಸ್ತೀರಾ…?

ನಾನೆಲ್ಲಿ ಹಾಗೆ ಹೇಳಿದೆ? ನಾವು ನಮ್ಮ ಜೊತೆಯಲ್ಲೇ ಅತ್ತೆಯನ್ನೂ ಕರ್ಕೊಂಡು ಹೋಗೋಣ. ನಿಮ್ಮಮ್ಮ ಇನ್ನೂ ನನಗೆ ಅಮ್ಮನ ಹಾಗೇ ಅಲ್ವೇ?”

“ಅಲ್ಲಿ ಮೂರು ಜನರ ಖರ್ಚು ಎಷ್ಟು ದುಬಾರಿ ಗೊತ್ತಾ…?ಹೊಟ್ಟೆಗೇನು ಮಣ್ಣು ತಿನ್ನೋದಾ…?”

“ಅಯ್ಯೋ ಯಾಕೆ ಹೀಗೆಲ್ಲ ಮಾತಾಡ್ತೀರಿ…? ನನಗೂ ವಿದ್ಯೆಯಿದೆ. ನಾನೂ ಅಲ್ಲಿ ಏನಾದ್ರೂ ಕೆಲ್ಸಕ್ಕೆ ಸೇರ್ತೇನೆ. ನಮ್ಮ ಬದುಕಿನ ಬಂಡಿಯ ಚಕ್ರಗಳು ನಾವೇ ಅಲ್ವೇ? ನಿಮಗೆ ಹೆಗಲಾಗಿ ನಾನಿರ್ತೀನಿ. ನಮ್ಮಿಬ್ಬರ ಸಂಪಾದನೆಯಿಂದ ಒಂದು ಉತ್ತಮ ಬದುಕು ಕಟ್ಟೋಣ. ಇಳಿವಯಸ್ಸಿನ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳೋಣ. ಅಲ್ಲಿ ಸಾಕಷ್ಟು ಸಂಪಾದನೆ ಮಾಡಿ ಊರಿಗೆ ಬಂದು ನಮ್ಮ ಸಂಪಾದನೆಯ ಅರ್ಧ ಭಾಗಕ್ಕೆ ಸಾಲವನ್ನೂ ಸೇರಿಸಿ ಚೊತೆಯಾಗಿ ದುಡಿಯೋಣ ಏನಂತೀರಿ…?”

ಹೆಂಡತಿಯ ಮಾತುಗಳನ್ನೇ ಕೇಳುತ್ತಾ ಬೆಪ್ಪಾಗಿನಿಂತಿದ್ದ ಹಿತೇಶನಿಗೆ ನಾಚಿಕೆಯಿಂದ ಮಾತುಗಳೇ ಹೊರಡಲಿಲ್ಲ.

 

– ತೆಂಕಬೈಲು ಸೂರ್ಯನಾರಾಯಣ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post