ಅಂಕಣ

ಛಲ ಬಿಡಿದ ತ್ರಿವಿಕ್ರಮ ಸುಶೀಲ್ ಮೋದಿ!

2015ರಲ್ಲಿ ಬಿಜೆಪಿಯ ಚಾಣಾಕ್ಷ ಅಮಿತ್ ಶಾ ಲೆಕ್ಕಾಚಾರ ತಲೆಕೆಳಗಾಗದೆ ಇರುತ್ತಿದ್ದರೆ ಸುಶೀಲ್ ಕುಮಾರ್ ಮೋದಿ(ಸುಮೋ) ಬಿಹಾರದ ಮುಖ್ಯಮಂತ್ರಿಯಾಗಬೇಕಾಗಿತ್ತು. ನರೇಂದ್ರ ಮೋದಿ ಅಲೆಯಲ್ಲಿ ಬಿಹಾರ ಚುನಾವಣೆಯನ್ನೆದುರಿಸಿದ್ದ ಬಿಜೆಪಿ ಒಂದು ವೇಳೆ ಬಹುಮತ ಪಡೆದಿದ್ದಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಮುಖ್ಯಮಂತ್ರಿ ರೇಸಿನಲ್ಲಿ ಮೊದಲ ಸ್ಥಾನದಲ್ಲಿರುತ್ತಿತ್ತು. 2016ರಲ್ಲಿ ಬಿಹಾರದಿಂದ ರಾಜ್ಯಸಭೆಗೆ ಚುನಾವಣೆಯಾದಾಗಲೂ ಸುಶೀಲ್ ಮೋದಿ ಅವರ ಹೆಸರು ಪಟ್ಟಿಯಲ್ಲಿ ಬಂದು ನಂತರ ಮಾಯವಾಗಿತ್ತು. ರಾಜ್ಯಸಭಾ ಸೀಟು ದೊರಕದೇ ಇದ್ದಾಗ ಕೆಲವರು ಅದು ಅವರಿಗಾದ ಅನ್ಯಾಯವೆಂದರು, ಇನ್ನೂ ಕೆಲವರು ಸುಮೋ ತಾವೇ ಸ್ವತಃ ರಾಜ್ಯಸಭಾ ಸೀಟನ್ನು ನಿರಾಕರಿಸಿದರು ಎಂದರು. ಆದರೆ ಆಗುವುದೆಲ್ಲಾ ಒಳ್ಳೆಯದಕ್ಕೇ ಅನ್ನುವಂತೆ ರಾಜ್ಯಸಭೆಗೆ ಹೋಗದಿದ್ದದ್ದು ಸುಮೋಗೆ ಒಳ್ಳೆಯದೇ ಆಯಿತು. ಒಬ್ಬ ಜವಾಬ್ದಾರಿಯುತ ಪ್ರತಿಪಕ್ಷದ ನಾಯಕನಾಗಿ ಬಿಹಾರದ ಮಹಾ ಘಟ್ಬಂದನ್ ವಿರುದ್ಧ ಸದನದ ಒಳಗೂ ಹೊರಗೂ ಹೋರಾಡಿದರು. ಬೆಂಬಿಡದ ಬೇತಾಳದಂತೆ ಲಾಲೂ ಕುಟುಂಬವನ್ನು ಏಕಾಂಗಿಯಾಗಿ ಕಾಡಿದರು. ಲಾಲೂ ಯಾದವ್ ಮತ್ತವರ ಮಕ್ಕಳ ಒಂದೊಂದೇ ಹಗರಣಗಳನ್ನು ಬಯಲಿಗೆಳೆದರು ಮತ್ತು ಆಡಳಿತ ಪಕ್ಷದ ವಿರುದ್ಧ ಯಾವ ರೀತಿ ಹೋರಾಡಬೇಕೆಂದು ಬೇರೆ ರಾಜ್ಯದ ವಿರೋಧ ಪಕ್ಷಗಳ ನಾಯಕರಿಗೆ ಮಾದರಿಯಾದರು. ಬಿಹಾರದ ಮಹಾಘಟ್ಬಂದನ್ ಮುರಿದು ಬೀಳುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಮೂರನೇ ಬಾರಿಗೆ ಬಿಹಾರದ ಉಪಮುಖ್ಯಮಂತ್ರಿಯಾದರು.

ನಿತೀಶ್ ಕುಮಾರ್ ಮತ್ತು ಸುಶೀಲ್ ಮೋದಿ ಗೆಳೆತನ ಇಂದು ನಿನ್ನೆಯದಲ್ಲ. ಇಬ್ಬರೂ ತುರ್ತು ಪರಿಸ್ಥಿಯ ಸಮಯದಲ್ಲಿ ಜಯಪ್ರಕಾಶ ನಾರಾಯಣ್ ನೇತೃತ್ವದಲ್ಲಿ ವಿದ್ಯಾರ್ಥಿ ಚಳುವಳಿಯ ನಾಯಕತ್ವ ವಹಿಸಿದ್ದವರು. ಅಲ್ಲದೇ ಜೈಲುವಾಸವನ್ನೂ ಅನುಭವಿಸಿದ್ದರು. ನಂತರ ನಿತೀಶ್   ತನ್ನದೇ ರಾಜಕೀಯ ಮಾರ್ಗ ಕಂಡುಕೊಂಡು ಜನತಾ ಪಕ್ಷ ಸೇರಿದರು. ಆದರೆ ತನ್ನ ಹತ್ತನೇ ವರ್ಷದಲ್ಲೇ ಆರೆಸ್ಸೆಸ್ ಸೇರಿದ್ದ ಸುಶೀಲ್ ಮುಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಸ್ತಾರಕನಾಗಿ ಆಯ್ಕೆಯಾಗಿ ನಂತರ ಎಬಿವಿಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗುತ್ತಾರೆ. ಹೀಗೆ ಸಂಘದ ಗರಡಿಯಲ್ಲಿ ಪಳಗಿದ ರಾಜಕಾರಣಿ ಸುಶೀಲ್. 1990ರಲ್ಲಿ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದ ಪಾಟ್ನಾ ಸೆಂಟ್ರಲ್ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಲ್ಲಿ ಜಯಿಸಿ ಮುಂದಿನ ಎರಡು ಅವಧಿಗೆ ಸತತವಾಗಿ ಆ ಕ್ಷೇತ್ರದಲ್ಲಿ ಜಯಭೇರಿ ಭಾರಿಸುತ್ತಾರೆ. 2004ರಲ್ಲಿ ಭಗಲ್ಪುರ್ ಲೋಕಸಭಾ ಕ್ಷೇತ್ರದಿಂದ ಸಂಸತ್ತಿಗೂ ಆಯ್ಕೆಯಾಗುತ್ತಾರೆ. ಬಿಹಾರದ ವಿರೋಧ ಪಕ್ಷದ ನಾಯಕನಾಗಿ ಪರಿಣಾಮಕಾರಿ ಕೆಲಸ ಮಾಡಿದ ಸುಶೀಲ್ ಬಾಂಗ್ಲಾ ನುಸುಳುಕೋರರ ವಿರುದ್ಧ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡಿದ್ದರು.

1990ರಲ್ಲಿ ವಿಧಾನಸಭೆಗೆ ಆಯ್ಕೆಯಾದ ಮೇಲೆ ಸುಶೀಲ್ ಮೋದಿ ಲಾಲೂ ಪ್ರಸಾದ್ ಯಾದವ್’ಗೆ ಇನ್ನಿಲ್ಲದಂತೆ ಕಾಡಿದರು. ಬಹು ಕೋಟಿ ಮೇವು ಹಗರಣದಲ್ಲಿ ಲಾಲೂ ವಿರುದ್ಧ ಹೋರಾಡುತ್ತಿದ್ದ ಸಂಸ್ಥೆಗೆ ಬೆಂಬಲವಾಗಿ ನಿಂತರು. ಲಾಲೂ ರಾಜಕೀಯ ಪ್ರಭಾವದಿಂದಾಗಿ ಕುಂಟುತ್ತಾ ತೆವಳುತ್ತಾ ಸಾಗಿದ್ದ ಹಗರಣದ ವಿಚಾರಣೆ ಇನ್ನೇನು ನಿಂತೇ ಹೋಗುವ ಮಟ್ಟಿಗೆ ಬಂದಿತ್ತು. ಆದರೆ ಸುಶೀಲ್ ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿ ಸಿಬಿಐ ವಿಚಾರಣೆಯಾಗುವಂತಾಗಿ ಕೊನೆಗೂ ಲಾಲೂ ಜೈಲು ಸೇರುವಂತೆ ಮಾಡುವಲ್ಲಿ ಯಶಸ್ವಿಯಾದರು ಮತ್ತು 11 ವರ್ಷಗಳ ಕಾಲ ಪಂಚಾಯತ್ ಚುನಾವಣೆಗೂ ಲಾಲು ಸ್ಪರ್ಧಿಸದಂತೆ ಮಾಡಿದರು. 1998ರಲ್ಲಿ ಐಎಎಸ್ ಆಧಿಕಾರಿಯೊಬ್ಬರ ಕುಟುಂಬ ಸದಸ್ಯರ ಅತ್ಯಾಚಾರ ಪ್ರಕರಣದಲ್ಲಿ ಲಾಲೂ ಅತ್ಯಾಪ್ತ ಮೃತ್ಯುಂಜಯ ಯಾದವ್ ಮತ್ತವನ ಶಿಷ್ಯರನ್ನು ಲಾಲೂ ಪ್ರಭಾವದಿಂದಾಗಿ ಪೋಲಿಸರು ರಕ್ಷಿಸಲೆತ್ನಿಸುತ್ತಿದ್ದಾಗ ಮತ್ತೆ ರಂಗ ಪ್ರವೇಶ ಮಾಡಿದ ಸುಮೋ ಲಾಲೂ ಶಿಷ್ಯನನ್ನು ಜೈಲಿಗಟ್ಟುವ ತನಕ ಸುಮ್ಮನೆ ಕೂರಲಿಲ್ಲ. ಹೀಗೆ ತನ್ನ ರಾಜಕೀಯ ಜೀವನದುದ್ದಕ್ಕೂ ಲಾಲೂ ಅವ್ಯವಹಾರಗಳೇ ಸುಶೀಲ್ ಹೋರಾಟಕ್ಕೆ ಪ್ರಬಲ ಅಸ್ತ್ರವಾಯಿತು.

2005ರಲ್ಲಿ ಆಗಿನ ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಗೋಪಾಲ್ ನಾರಾಯಣ್ ಸಿಂಗರನ್ನು ಪದಚ್ಯುತಗೊಳಿಸಿ ಬಿಹಾರ ಬಿಜೆಪಿಯ ಚುಕ್ಕಾಣಿ ಸುಶೀಲ್ ಮೋದಿಯವರ ಕೈಗೆ ಕೊಡಲಾಯಿತು. ಕೊನೆಗೆ ನಿತೀಶ್ ಜೊತೆಗೂಡಿ ಲಾಲೂ ಜಂಗಲ್ ರಾಜನ್ನು ಕೊನೆಗೊಳಿಸಿ ಬಿಹಾರ ರಾಜಕೀಯದಲ್ಲಿ ಹೊಸ ಭಾಷ್ಯವನ್ನು ಬರೆದರು. ಎಂಟು ವರುಷಗಳ ಬಿಜೆಪಿ- ಜೆಡಿಯು ಸಮ್ಮಿಶ್ರ ಸರಕಾರದಲ್ಲಿ ಬಿಹಾರದ ಪುನಶ್ಚೇತನಕ್ಕೆ ನಿತೀಶ್ ಮತ್ತು ಸುಶೀಲ್ ಜೋಡಿ ಎತ್ತುಗಳ ಹಾಗೆ ಕೆಲಸ ಮಾಡಿದರು. ಆದರೆ ನಿತೀಶ್ ಜೊತೆ ಮೈತ್ರಿ ಕಡಿದುಕೊಂಡ ಮೇಲೆ ಉಗ್ರ ಮಾತುಗಳಿಂದ ತನ್ನ ಹಳೆಯ ಮಿತ್ರನನ್ನು ನಿಂದಿಸಿದ್ದರು. 2016ರಲ್ಲಿ ಸುಶೀಲ್ ಮೋದಿಯವರ ಬದಲಿಗೆ ಬಿಹಾರ ಬಿಜೆಪಿಯ ಹಳೆ ಹುಲಿ ಗೋಪಾಲ್ ನಾರಾಯಣ್ ಸಿಂಗ್ ರಾಜ್ಯಸಭೆಗೆ ಆಯ್ಕೆಯಾದರು. ಆಗ ಸುಶೀಲ್ ಮೋದಿ ರಾಜಕೀಯ ಬದುಕು ಮುಗಿಯಿತು, ಬಿಜೆಪಿ ಹೈಕಮಾಂಡ್ ಅವರನ್ನು ಕಡೆಗಣಿಸಿತು ಮತ್ತು ಸುಶೀಲ್ ಮೋದಿ ಬಿಜೆಪಿ ಬಿಡುವುದೇ ಲೇಸು ಎಂದು ಪುಂಖಾನುಪುಂಖ ಕಥೆಗಳನ್ನು ಬಿಜೆಪಿಯ ವಿರೋಧಿಗಳು ಹರಿಯಬಿಟ್ಟರು. ಆದರೆ ಪಕ್ಷ ನಿಷ್ಠ ಸುಶೀಲ್, ಗೋಪಾಲ್ ನಾಮಪತ್ರ ಸಲ್ಲಿಸುವಾಗ ಖುದ್ದು ಹಾಜರಿದ್ದು ರಾಜಕೀಯ ಪ್ರೌಢಿಮೆಯನ್ನು ಮೆರೆದಿದ್ದರು.

ಎಪ್ರಿಲ್ 4 2017ರಂದು ಲಾಲೂ ಕುಟುಂಬದ ವಿರುದ್ಧ ದಾಖಲೆಯ ಸುರಿಮಳೆಯನ್ನೇ ಗೈದಾಗ ಲಾಲೂ ಮೇಲೆ ಇದು ಹತ್ತರಲ್ಲಿ ಹನ್ನೊಂದನೆಯ ಆರೋಪ ಎಂದು ಭಾವಿಸಿದವರೇ ಜಾಸ್ತಿ. ಆದರೆ ಛಲಬಿಡದ ಸುಮೋ ಮಹಾಘಟ್ಬಂದನ್ ಮುರಿದು ಬೀಳುವವರೆಗೆ 30ಕ್ಕೂ ಹೆಚ್ಚು ಬಾರಿ ಪತ್ರಿಕಾಗೋಷ್ಠಿ ಕರೆದು ಲಾಲೂ ಅವ್ಯವಹಾರಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದರು. ಲಾಲೂ ಬಿಹಾರದ ರಾಬರ್ಟ್ ವಾದ್ರಾ ಎಂದೂ ಜರೆದರು. ಸುಮೋ ಬಿಡುಗಡೆ ಮಾಡಿದ ಒಂದೊಂದು ದಾಖಲೆಗಳೂ ಸಿಬಿಐ ಮತ್ತು ಐಟಿ ತಂಡ ಲಾಲೂ ಮನೆಯ ಬಾಗಿಲು ಬಡಿಯುವಂತೆ ಮಾಡಿತು ಮತ್ತು ನಿತೀಶ್ ಲಾಲೂ ದೋಸ್ತಿಗೆ ಹುಳಿ ಹಿಂಡಿತು. ಇಷ್ಟು ವರ್ಷ ರಾಜಕೀಯದಲ್ಲಿದ್ದರೂ ಹೆಸರು ಹಾಳು ಮಾಡಿಕೊಂಡ ವ್ಯಕ್ತಿಯಲ್ಲ‌ ಸುಶೀಲ್ ಮೋದಿ. ಅಧಿಕಾರದ ಮದ ತಲೆಗೆ ಏರಿ ಸ್ವಜನ ಪಕ್ಷಪಾತ, ಕುಟುಂಬ ರಾಜಕಾರಣಕ್ಕೆ ಒತ್ತು ಕೊಟ್ಟವರಲ್ಲ ಎನ್ನುವುದು ಸುಶೀಲ್ ಅವರನ್ನು ಹತ್ತಿರದಿಂದ ಬಲ್ಲ ನನ್ನ ಬಿಹಾರದ ಮಿತ್ರರೊಬ್ಬರ ಮಾತು. ಒಬ್ಬ ರಾಜಕಾರಣಿ ಇನ್ನೊಬ್ಬ ರಾಜಕಾರಣಿಯ ಭ್ರಷ್ಟಾಚಾರವನ್ನು ಕಟು ಶಬ್ಧಗಳಲ್ಲಿ ಟೀಕಿಸುವದಲ್ಲದೇ ಅದಕ್ಕೊಂದು ತಾರ್ಕಿಕ ಅಂತ್ಯ ಹಾಡುವುದು ರಾಜಕೀಯವಾಗಿ ತಾನು ಪರಿಶುದ್ಧನಿದ್ದಾಗ ಮಾತ್ರ ಸಾಧ್ಯ. ಅಂತಹ ರಾಜಕಾರಣಿಗಳಲ್ಲೊಬ್ಬರು ಸುಶೀಲ್ ಮೋದಿ.

ನಿತೀಶ್ ಕುಮಾರ್ ಜೊತೆ ಮೈತ್ರಿ ಕಡಿದುಕೊಂಡ ಮೇಲೂ ಸುಶೀಲ್ ಮೋದಿ ಒಳ್ಳೆಯ ಗೆಳೆತೆನ ಇಟ್ಟುಕೊಂಡಿದ್ದರು ಮತ್ತು ನಿತೀಶ್ ಬಗ್ಗೆ ಸುಶೀಲ್ ಮೋದಿ ಸಾಫ್ಟ್ ಕಾರ್ನರ್ ಹೊಂದಿದ್ದರು ಅನ್ನುವ ಅಭಿಪ್ರಾಯ ವ್ಯಕ್ತಪಡಿಸುವವರಿದ್ದಾರೆ. ಆದರೆ ಸುಶೀಲ್ ವಿರೋಧ ಪಕ್ಷದ ನಾಯಕನಾಗಿ ನಿತೀಶ್ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾ ಬಂದಿದ್ದರು. ನಿತೀಶ್ ಮೇಲೆ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲದೇ ಇರುವಾಗ ಸಹಜವಾಗಿಯೇ ಸುಶೀಲ್ ಆಯ್ಕೆ ಕಡು ಭ್ರಷ್ಟ ಲಾಲೂ ಮತ್ತವರ ಮಕ್ಕಳೇ ಆಗಿದ್ದರು. ತನ್ನ ಕ್ಲೀನ್ ಇಮೇಜಿಗೆ ಲಾಲೂ ಮತ್ತವರ ಮಕ್ಕಳ ಭ್ರಷ್ಟಾಚಾರಗಳು  ಧಕ್ಕೆ ತರಬಾರದು ಎನ್ನುವ ನಿತೀಶ್ ಅಭಿಮತ ಮತ್ತು ನಿತೀಶ್ ಜೊತೆಗೆ ಸುಶೀಲ್ ಹೊಂದಿದ್ದ ಗೆಳೆತನವೇ ಇವತ್ತು ಬಿಹಾರದಲ್ಲಿ ಎನ್.ಡಿ.ಎ ಸರಕಾರ ಸ್ಥಾಪನೆಯಾಗಲು ಮುಖ್ಯ ಕಾರಣ. ಏನೇ ಹೇಳಿ ಬಿಜೆಪಿಯ ಹಿರಿಯ ನಾಯಕರುಗಳೂ ಮುಂದಿನ ಲೋಕಸಭಾ ಚುನಾವಣೆಯವರೆಗೂ ಬಿಹಾರ ಬಹುತೇಕ ಮುಗಿದ ಅಧ್ಯಾಯ ಎಂದು ಭಾವಿಸಿದ್ದಾಗ, ಬಹುಮುಖ್ಯವಾಗಿ ಲ್ಯುತೇನ್ ಮಾಧ್ಯಮಗಳು ಬಿಹಾರದಲ್ಲಿ ಬಿಜೆಪಿಯ ಆಟ ಮುಗಿದಂತೆ ಎಂದು ಕೇಕೆ ಹಾಕುತ್ತಿದ್ದಾಗ, ಕೆಲವು ಕಟ್ಟರ್ ಮೋದಿ ವಿರೋಧಿಗಳು ೨೦೧೯ಕ್ಕೆ ಮೋದಿ ವಿರುದ್ಧ ವಿರೋಧ ಪಕ್ಷಗಳ ಪ್ರಧಾನಮಂತ್ರಿ ಅಭ್ಯರ್ಥಿ ನಿತೀಶ್ ಎಂದು ಕನಸು ಕಾಣುತ್ತಿದ್ದಾಗ ಛಲ ಬಿಡದ ತ್ರಿವಿಕ್ರಮನಂತೆ ಲಾಲೂ ಕುಟುಂಬದ ಮೇಲೆ ಮುಗಿ ಬಿದ್ದು ಬಿಜೆಪಿ ಮತ್ತು ಜೆಡಿಯು ಮೈತ್ರಿ ಮತ್ತೆ ಪ್ರತಿಷ್ಟಾಪನೆ ಮಾಡಿಸಿದ ಶ್ರೇಯಸ್ಸು ಸಲ್ಲಬೇಕಾದದ್ದು ಸುಶೀಲ್ ಮೋದಿಗೆ!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!