Featured ಅಂಕಣ

ಸತ್ತವನ ಹೆತ್ತವರ ದುಃಖಕ್ಕಿಂತ ರಾಜಕೀಯ ಸಮಾವೇಶವೇ ಮುಖ್ಯವೆನ್ನುವವರೇ, ಥೂ ನಿಮ್ಮ ಜನ್ಮಕ್ಕೆ!

ಆ ದಿನ ಒಬ್ಬರು ಲೇಖಕರ ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಹೋಗಬೇಕಾಗಿತ್ತು. ಮನೆಯಿಂದ ಹೊರಡುವಷ್ಟರಲ್ಲಿ ಧಾರವಾಡದಲ್ಲಿ ಡಾ. ಎಂ.ಎಂ. ಕಲ್ಬುರ್ಗಿಯವರ ಕೊಲೆಯಾಗಿದೆಯಂತೆ; ಇಬ್ಬರು ಅಪರಿಚಿತರು ಅವರ ಮನೆಗೆ ಬಂದು ಹಣೆಗೆ ಗುಂಡಿಟ್ಟು ಪರಾರಿಯಾಗಿದ್ದಾರಂತೆ ಎಂಬ ಸುದ್ದಿ ಬಂತು. ಟಿವಿ ಚಾಲೂ ಮಾಡಿದರೆ ಅಷ್ಟರಲ್ಲಾಗಲೇ ಅದನ್ನು ಬ್ರೇಕಿಂಗ್ ನ್ಯೂಸ್ ಎಂದು ಎಲ್ಲ ಸುದ್ದಿವಾಹಿನಿಗಳೂ ಪ್ರಸಾರ ಮಾಡುತ್ತಿದ್ದವು. ಒಂದು ಚಾನೆಲ್ಲಿನಲ್ಲಿ ಕನ್ನಡ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತಾಡುತ್ತ, ಕಲ್ಬುರ್ಗಿಯವರನ್ನು ಕೋಮುವಾದಿ ಶಕ್ತಿಗಳೇ ಕೊಲೆ ಮಾಡಿವೆ ಎಂದು ಖಚಿತದನಿಯಲ್ಲಿ ಹೇಳಿಕೆ ಕೊಡುತ್ತಿದ್ದರು. ಅದಾಗಿ ಒಂದೆರಡು ತಾಸುಗಳಲ್ಲಿ ಬಹುತೇಕ ಎಲ್ಲ ಪ್ರಗತಿಪರ, ಎಡಪಂಥೀಯ ಬುದ್ಧಿಜೀವಿಗಳೂ ಇದು ಕೋಮುವಾದಿಗಳ, ಆರೆಸ್ಸೆಸ್ ಕಾರ್ಯಕರ್ತರ ಕೃತ್ಯ ಎಂಬ ನಿರ್ಣಯಕ್ಕೆ ಬಂದುಬಿಟ್ಟಿದ್ದರು. ಅಲ್ಲಿಂದ ಮುಂದೆ ಆರು ತಿಂಗಳು ಈ ದೇಶದಲ್ಲಿ ನಡೆದ ಪ್ರಹಸನಗಳನ್ನೆಲ್ಲ ನಾವು ನೋಡಿದ್ದೇವೆ.

ಕಲ್ಬುರ್ಗಿಯವರ ಕೊಲೆ ಆಗಿ ಒಂದೆರಡು ದಿನಗಳಲ್ಲಿ ಕರ್ನಾಟಕದಲ್ಲಿ ನಡೆದ ಘಟನೆಗಳನ್ನು ನಾವು ಸೂಕ್ಷ್ಮವಾಗಿ ಗಮನಿಸಬೇಕು. ಕೊಲೆ ನಡೆದ ಸಂದರ್ಭದಲ್ಲಿ ಕರ್ನಾಟಕದ ಹೆಚ್ಚಿನವರಿಗೆ ನರೇಂದ್ರ ದಾಭೋಲ್ಕರ್, ಗೋವಿಂದ ರಾವ್ ಪನ್ಸಾರೆ ಎಂಬ ಹೆಸರುಗಳು ಗೊತ್ತಿರಲಿಲ್ಲ. ಜನಸಾಮಾನ್ಯರಿಗೆ ಬಿಡಿ, ಅನೇಕ ಪ್ರಗತಿಪರ, ಜೀವಪರ ಲೇಖಕರಿಗೂ ಅವರ್ಯಾರೆಂದು ತಿಳಿದಿರಲಿಲ್ಲ. ಇಬ್ಬರೂ ಮಹಾರಾಷ್ಟ್ರದಲ್ಲಿ ಬುದ್ಧಿಜೀವಿಗಳೆಂದು ಪ್ರಸಿದ್ಧರಾದವರು. ದಾಭೋಲ್ಕರ್, ಮೂಢನಂಬಿಕೆಗಳ ವಿರುದ್ಧ ಹೋರಾಡುತ್ತಿದ್ದರು. ಮಹಾರಾಷ್ಟ್ರದಲ್ಲಿ ಮೂಢನಂಬಿಕೆ ಪ್ರತಿಬಂಧಕ ಕಾಯಿದೆ ತರಲು ಸೆಣಸಿದ್ದರು. ಈ ಕಾಯಿದೆಯ ಮೂಲಕ ಬಂಧಿತನಾದ ಮೊದಲ ವ್ಯಕ್ತಿ ಒಬ್ಬ ಮುಸ್ಲಿಂ ಬಾಬಾ. ಕಾಯಿದೆ ಜಾರಿಗೆ ಬಂದು ಒಂದು ವರ್ಷದಲ್ಲಿ ದಾಖಲಾದ ಪ್ರಕರಣಗಳಲ್ಲಿ ಶೇ.60ರಷ್ಟು ಪ್ರಕರಣಗಳು ಮುಸ್ಲಿಂ ಬಾಬಾಗಳ ಮೇಲೆ ಬಿದ್ದಿದ್ದವು. ಹೀಗಾಗಿ, ದಾಭೋಲ್ಕರ್ ಮೇಲೆ ಖೊಟ್ಟಿ ಜ್ಯೋತಿಷಿಗಳು ಎಷ್ಟು ಕುಪಿತರಾಗಿದ್ದರೋ ಅಷ್ಟೇ ಮುಸ್ಲಿಂ ಸಮುದಾಯದ ಬಾಬಾಗಳು ಕೋಪದಿಂದ ಕುದಿಯುತ್ತಿದ್ದರು. ಅದೊಂದು ದಿನ ದಾಭೋಲ್ಕರ್ ಎಂದಿನಂತೆ ತನ್ನ ವಾಯುವಿಹಾರಕ್ಕೆ ಹೊರಟಿದ್ದ ಸಂದರ್ಭದಲ್ಲಿ ದೂರದಿಂದ ಗುರಿಯಿಟ್ಟು ಗುಂಡೇಟು ಹೊಡೆದು ಅವರನ್ನು ಸಾಯಿಸಲಾಯಿತು. 2013ರ ಆಗಸ್ಟ್ 20ರಂದು ದಾಭೋಲ್ಕರ್ ಇನ್ನಿಲ್ಲವಾದರು. ಗೋವಿಂದ ಪನ್ಸಾರೆ ದಾಭೋಲ್ಕರ್‍ರಂತೆ ಮೂಢನಂಬಿಕೆಗಳ ವಿರುದ್ಧ ಹೋರಾಟ ಮಾಡುತ್ತಿದ್ದವರಲ್ಲ. ಅವರ ಹೋರಾಟ ಜಾರಿಯಿದ್ದುದು ಶಿವಾಜಿಯ ಹಿಂದುತ್ವದ ವಿರುದ್ಧ. ಶಿವಾಜಿ, ಇತಿಹಾಸ ಬಣ್ಣಿಸುವಂತೆ, ಹಿಂದೂಗಳ ರಕ್ಷಕನಾಗಿರಲಿಲ್ಲ. ಅವನು ಮುಸ್ಲಿಮರನ್ನು ಓಲೈಸುತ್ತಿದ್ದ; ಅವನ ಸೇನೆಯಲ್ಲಿ ಮೂರನೇ ಒಂದರಷ್ಟು ಭಾಗ ಮುಸ್ಲಿಮರಿದ್ದರು ಎಂಬೆಲ್ಲ ವಿಷಯಗಳನ್ನಿಟ್ಟುಕೊಂಡು ಪನ್ಸಾರೆ “ಶಿವಾಜಿ ಕೋನ್ ಹೋತಾ” ಎಂಬ ಪುಸ್ತಕ ಬರೆದಿದ್ದರು. ಶಿವಾಜಿಯನ್ನು ದೈವೀಸಂಭೂತನೆಂದು ಬಗೆಯುವ ಮಹಾರಾಷ್ಟ್ರಿಗರಿಗೆ ಈ ಮಾತುಗಳು ಅಷ್ಟೇನೂ ರುಚಿಸಿರಲಿಲ್ಲ. ಅದಾಗಿ ಕೆಲದಿನಗಳ ನಂತರ ಪನ್ಸಾರೆಯ ಸಿಟ್ಟೆಲ್ಲವೂ ಆರೆಸ್ಸೆಸ್ ಮೇಲೆ ತಿರುಗಿತ್ತು. ನಾಥೂರಾಮ್ ಗೋಡ್ಸೆ ಆರೆಸ್ಸೆಸ್ ಕಾರ್ಯಕರ್ತನಾಗಿದ್ದ; ಮಹಾತ್ಮಾ ಗಾಂಧಿಯನ್ನು ಕೊಂದದ್ದು ಆರೆಸ್ಸೆಸ್ ಸದಸ್ಯರು ಎಂಬ ಹಳೆ ವರಸೆಯನ್ನೇ ಮತ್ತೆ ಹೊಸದಾಗಿ ಬಹಳ ಉಗ್ರವಾಗಿ ಪ್ರತಿಪಾದಿಸಲು ಪ್ರಾರಂಭಿಸಿದ್ದರು ಪನ್ಸಾರೆ. 2015ರ ಫೆಬ್ರವರಿ 16ರಂದು ಪನ್ಸಾರೆ ಕೂಡ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಈ ಇಬ್ಬರ ಕೊಲೆಗಳು ಮಹಾರಾಷ್ಟ್ರದಲ್ಲಿ ಸಂಚಲನ ಹುಟ್ಟಿಸಿದ್ದರೂ ಕರ್ನಾಟಕದಲ್ಲಿ ಅಷ್ಟೇನೂ ಪರಿಣಾಮ ಬೀರಿರಲಿಲ್ಲ. ಎರಡೂ ಕೊಲೆಗಳು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ನಡೆದದ್ದರಿಂದ, ಅವನ್ನು ರಾಜಕೀಯವಾಗಿ ಬಳಸಿಕೊಳ್ಳುವುದು ಹೇಗೆ ಎಂದು ಬುದ್ಧಿಜೀವಿಗಳು ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು.

ಇವೆರಡು ಕೊಲೆಗಳ ನಂತರ ಧಾರವಾಡದ ಕಲ್ಯಾಣ ನಗರದಲ್ಲಿ ಕಲ್ಬುರ್ಗಿಯವರನ್ನು ಮನೆಯಲ್ಲೇ ಗುಂಡಿಟ್ಟು ಹೋದಾಗ, ಕರ್ನಾಟಕದ ಬುದ್ಧಿಜೀವಿಗಳು ತಟಕ್ಕನೆ ಎದ್ದು ಕುಳಿತರು. ಒಂದೆರಡು ನಿರ್ದಿಷ್ಟ ವ್ಯಕ್ತಿಗಳು ದಾಭೋಲ್ಕರ್ ಮತ್ತು ಪನ್ಸಾರೆ ಹೆಸರನ್ನು ತೇಲಿ ಬಿಟ್ಟರು. ದೇವರ ಮೂರ್ತಿಗೆ ಮೂತ್ರ ಮಾಡಿದ ಪ್ರಕರಣದಲ್ಲಿ ಮುನ್ನೆಲೆಗೆ ಬಂದದ್ದು ಬಿಟ್ಟರೆ ಕಲ್ಬುರ್ಗಿಯವರನ್ನು ಆ ಹಿಂದೆ ಕರ್ನಾಟಕದ ಬಲಪಂಥೀಯರು ಯಾರೂ ಬುದ್ಧಿಜೀವಿ ಎಂಬ ನೆಲೆಯಲ್ಲಿ ನೋಡಿರಲಿಲ್ಲ. ದಾಭೋಲ್ಕರ್ ಅಥವಾ ಪನ್ಸಾರೆಯಂತೆ ಕಲ್ಬುರ್ಗಿ ಎಂದಿಗೂ ಹಿಂದೂ ಸಮಾಜದಲ್ಲಿ ಕೆಂಗಣ್ಣಿಗೆ ಗುರಿಯಾಗುವಂಥ ಧಾರ್ಮಿಕ ವಿಚಾರಗಳನ್ನು ಎತ್ತಿರಲಿಲ್ಲ. ಆದರೆ, ಕೊಲೆ ನಡೆದ ಮೇಲೆ ಮಾತ್ರ ಅವರನ್ನು ದಾಭೋಲ್ಕರ್ ಮತ್ತು ಪನ್ಸಾರೆ ಜೊತೆ ಕೂರಿಸಲಾಯಿತು. ಅಚ್ಚ ಇತಿಹಾಸಜ್ಞರಿಗೆ ಸಾಮಾಜಿಕ ಆಂದೋಲನಕಾರ, ಬುದ್ಧಿಜೀವಿ, ಎಡಪಂಥೀಯ ಎಂಬ ಹೊಸ ಹಣೆಪಟ್ಟಿ ಹಚ್ಚಲಾಯಿತು. ಹೇಗಾದರೂ ಮಾಡಿ ಕಲ್ಬುರ್ಗಿ ಸಾವನ್ನು ಕೋಮುವಾದಿಗಳ ತಲೆಗೆ ಕಟ್ಟಬೇಕು ಎಂದು ಒಂದು ವರ್ಗ ಸಿದ್ಧವಾಗಿ ಬಿಟ್ಟಿತ್ತು. ದಾಭೋಲ್ಕರ್ ಮತ್ತು ಪನ್ಸಾರೆ ಕೊಲೆಗಳನ್ನು ಮಾಡಿದವರು ಬಲಪಂಥೀಯರು ಎಂದು ಸಾಬೀತಾಗಿ ಬಿಟ್ಟರೆ, ಅದೇ ಅಸ್ತ್ರವನ್ನು ಬಳಸಿಕೊಂಡು ಕಲ್ಬುರ್ಗಿ ಶವವನ್ನು ಮುಂದಿಟ್ಟುಕೊಂಡು ಕರ್ನಾಟಕದಲ್ಲಿ ಬಲಪಂಥೀಯರನ್ನು ಸದೆಬಡಿಯಬಹುದೆಂಬ ಹೊಸ ಫಾರ್ಮುಲ ರಾತ್ರಿ ಬೆಳಗಾಗುವಷ್ಟರಲ್ಲಿ ಸಿದ್ಧವಾಗಿ ಬಿಟ್ಟಿತು. ತಮಾಷೆ ನೋಡಿ: ದಾಭೋಲ್ಕರ್ ಕೊಲೆ ನಡೆದದ್ದು ಕೇಂದ್ರದಲ್ಲಿ ಯುಪಿಎ ಸರಕಾರವಿದ್ದಾಗ. ಆದರೆ ಅದಕ್ಕೆ 2014ರ ಜೂನ್‍ನಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರಕಾರವನ್ನು ಗುರಿ ಮಾಡಲಾಯಿತು! ಹಾಗೆಯೇ, ಕರ್ನಾಟಕದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ರಾಜ್ಯ ಸರಕಾರದ್ದು ಎಂಬ ಕನಿಷ್ಠ ಜ್ಞಾನವೂ ಇಲ್ಲದಂತೆ ರಾಜ್ಯದ ಎಲ್ಲ ಬುದ್ಧಿಜೀವಿಗಳೂ ಕಲ್ಬುರ್ಗಿ ಕೊಲೆಗೆ ಕೇಂದ್ರದ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳತೊಡಗಿದರು! ಕಲ್ಬುರ್ಗಿ ಕೊಲೆಯ ತನಿಖೆ ನಡೆಸುತ್ತಿರುವುದು ಕೂಡ ರಾಜ್ಯ ಸರಕಾರದ ಕೈಯಲ್ಲಿರುವ ಸಿಐಡಿ ಎಂಬುದನ್ನು ಅವರು ಅದು ಹೇಗೋ ಬಹು ಜಾಣ್ಮೆಯಿಂದ ಮರೆತು ಬಿಟ್ಟರು!

ಯಾವುದೇ ಕೊಲೆ ನಡೆದಾಗ ಅದರ ಮೊದಲ ಒಂದೆರಡು ದಿನಗಳಲ್ಲಿ ನಡೆಸುವ ತನಿಖೆ ಅತ್ಯಂತ ಮಹತ್ವದ್ದಾಗಿರುತ್ತದೆ. ಯಾಕೆಂದರೆ, ಘಟನೆಗೆ ಸಂಬಂಧಿಸಿದ ಬಹುತೇಕ ಸಾಕ್ಷ್ಯಗಳು ಸಿಗುವ ಸಾಧ್ಯತೆ ನಿಚ್ಚಳವಾಗಿರುತ್ತದೆ. ಮತ್ತು ಹೆಚ್ಚಿನ ಪ್ರಕರಣಗಳಲ್ಲಿ ಕೊಲೆಯಾದ ವ್ಯಕ್ತಿಯ ಸಂಬಂಧಿಕರನ್ನು ಪ್ರಶ್ನಿಸುವುದು ಮುಖ್ಯವಾಗಿರುತ್ತದೆ. ಕುಟುಂಬದೊಳಗಿನ ಜಗಳ, ವೈಷಮ್ಯಗಳೇ ಹೆಚ್ಚಿನ ಕೊಲೆಗಳನ್ನು ಮಾಡಿಸಿರುತ್ತವೆಂಬುದು ನಿರ್ವಿವಾದ. ಆದರೆ ಈ ಯಾವ ಕೆಲಸಗಳನ್ನೂ ಕಲ್ಬುರ್ಗಿ ಕೊಲೆಯ ವಿಷಯದಲ್ಲಿ ಪೊಲೀಸರು ಮಾಡಲಿಲ್ಲ ಎಂಬುದು ಗಮನಾರ್ಹ. ಧಾರವಾಡದ ಆಸುಪಾಸಿನಲ್ಲಿ ತಮ್ಮ ತನಿಖೆಯನ್ನು ಕೇಂದ್ರೀಕರಿಸುವ ಬದಲು ಪೊಲೀಸರು ಜಾಲತಾಣಗಳಲ್ಲಿ ಅಭಿಪ್ರಾಯ ಬರೆದುಕೊಳ್ಳುತ್ತಿದ್ದ ಜನಸಾಮಾನ್ಯರನ್ನು ಬೇಟೆಯಾಡಲು ಇಳಿದು ಬಿಟ್ಟರು. ಕಲ್ಬುರ್ಗಿಯವರ ಮಗಳ ಆಸ್ತಿಯ ವಿಷಯದಲ್ಲಿ ತಕರಾರುಗಳಿದ್ದವು. ಆದ್ದರಿಂದ ಕಲ್ಬುರ್ಗಿಯವರು ಮಗಳ ನ್ಯಾಯಾಂಗ ಹೋರಾಟಕ್ಕೆ ಸಾಥ್ ಕೊಡುತ್ತಿದ್ದರು; ಆ ಪ್ರಕರಣದಲ್ಲಿ ನೂರಾರು ಕೋಟಿ ಬೆಲೆಬಾಳುವ ಅಳಿಯನ ಕುಟುಂಬವನ್ನು ಅವರು ಎದುರು ಹಾಕಿಕೊಂಡಿದ್ದರು – ಎಂಬ ಅತ್ಯಂತ ಮಹತ್ವದ ಅಂಶವನ್ನು ಪೊಲೀಸರು ಪರಿಗಣಿಸಲೇ ಇಲ್ಲ (ಇಂದಿಗೂ ಇಲ್ಲ!). ಯಾಕೆಂದರೆ, ಕರ್ನಾಟಕದ ಮುಖ್ಯಮಂತ್ರಿಗಳ ಆಪ್ತರೊಬ್ಬರು, ಕೊಲೆ ನಡೆದ ಎರಡೇ ದಿನಗಳಲ್ಲಿ ಕಲ್ಬುರ್ಗಿ ಕುಟುಂಬದೊಡನೆ ರಹಸ್ಯ ಮಾತುಕತೆಯಾಡಿ ಇಡೀ ಪ್ರಕರಣದ ದಿಕ್ಕು ಬದಲಿಸುವ ಭರವಸೆ ಕೊಟ್ಟಿದ್ದರು! ಮತ್ತು ಅದೇ ವ್ಯಕ್ತಿ, ತನ್ನ ಭರವಸೆಗೆ ತಕ್ಕಂತೆ, ರಾಷ್ಟ್ರಮಟ್ಟದ ದಿನಪತ್ರಿಕೆಯೊಂದರ ಪತ್ರಕರ್ತರನ್ನು ಬಳಸಿಕೊಂಡು ತನ್ನದೊಂದು ಹಿಟ್‍ಲಿಸ್ಟ್ ಬರುವಂತೆ ನೋಡಿಕೊಂಡರು. ತನ್ನ ಹೆಸರನ್ನು ಮೊದಲ ಸಾಲಲ್ಲಿ ಬರೆದುಕೊಂಡು, ಒಟ್ಟು ಹತ್ತು ಜನರ ಪಟ್ಟಿ ತಯಾರಿಸಿ “ನಾವೆಲ್ಲ ಕೋಮುವಾದಿಗಳು ಕೊಲೆ ಮಾಡಬಯಸುವ ಸಂಭಾವ್ಯರ ಪಟ್ಟಿಯಲ್ಲಿದ್ದೇವೆ. ನಮ್ಮನ್ನು ರಕ್ಷಿಸಿ” ಎಂದು ಬೊಬ್ಬೆ ಹೊಡೆಯತೊಡಗಿದರು. ಒಟ್ಟಾರೆ ಹೇಳುವುದಾದರೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ನಡೆದು ಹೋದ ಕೊಲೆಯನ್ನು ರಾಜಕೀಯಗೊಳಿಸಿ ತನ್ನ ಬೇಳೆ ಬೇಯಿಸಿಕೊಳ್ಳುವ ಅಜೆಂಡಾ ಕರ್ನಾಟಕ ಸರಕಾರದ್ದಾಗಿತ್ತು ಎನ್ನಬಹುದು. ಕಲ್ಬುರ್ಗಿ ಕೊಲೆಯನ್ನು ಮುಂದೆ ಪ್ರಶಸ್ತಿ ವಾಪಸಿ ಪ್ರಹಸನಕ್ಕೆ ತಳುಕು ಹಾಕಿ ರಾಜಕೀಯ ಲಾಭವೆತ್ತಲು ಯತ್ನಿಸಲಾಯಿತು.

ಕೊಲೆಯಾಗಿ ಎರಡು ವರ್ಷಗಳು ಕಳೆದರೂ ಇಂದಿಗೂ ಕಲ್ಬುರ್ಗಿ ಆತ್ಮ ಅತೃಪ್ತಿಯಿಂದ ಅಂಡಲೆಯುತ್ತಿದೆ. ತನಿಖೆ ನಡೆಸಲು ಆರ್ಥಿಕ ಬೆಂಬಲವಿಲ್ಲದೆ ಸಿಐಡಿ, ಪ್ರಕರಣವನ್ನು ಅರ್ಧದಲ್ಲೇ ನಿಲ್ಲಿಸಿ ಕೈ ತೊಳೆದುಕೊಂಡಿದೆ. ಇಬ್ಬರು ಸುಪಾರಿ ಹಂತಕರನ್ನು ಪೊಲೀಸರು ಬಂಧಿಸಿದ್ದಾರೆ; ಕೊಲೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ನಡೆದಿತ್ತು ಎಂದು ಆ ಹಂತಕರು ತಮ್ಮ ತಪ್ಪೊಪ್ಪಿಗೆಯಲ್ಲಿ ಹೇಳಿದ್ದಾರೆ – ಎಂಬ ಸುದ್ದಿಯನ್ನು ರಾಜ್ಯಮಟ್ಟದ ಪತ್ರಿಕೆಯೊಂದು ಪ್ರಕಟಿಸಿದ್ದು ಬಿಟ್ಟರೆ ಈ ಕೊಲೆಯ ಕುರಿತು ಇನ್ಯಾವ ಸುದ್ದಿಯೂ ಎಲ್ಲಿಯೂ ಹೊರ ಬಿದ್ದಿಲ್ಲ. ಸುದ್ದಿವಾಹಿನಿ (ಟಿವಿ ಚಾನೆಲ್)ಗಳಂತೂ ಅದರ ಬಗ್ಗೆ ಸ್ವಲ್ಪವೂ ತಲೆಕೆಡಿಸಿಕೊಂಡಿಲ್ಲ. ನಾವು ಮೂರು ವಾರದಲ್ಲಿ ಕೊಲೆಗಾರರನ್ನು ಪತ್ತೆ ಹಚ್ಚುತ್ತೇವೆ; ಅದ್ಯಾವ ಗುಹೆಯಲ್ಲಿ ಅಡಗಿದ್ದರೂ ಬಿಡುವುದಿಲ್ಲ ಎಂದು ಯಕ್ಷಗಾನ ಶೈಲಿಯಲ್ಲಿ ಆರ್ಭಟಿಸಿದ್ದ ಮುಖ್ಯಮಂತ್ರಿಗಳು ಮೆತ್ತಗಾಗಿದ್ದಾರೆ. ಯಾಕೆಂದರೆ ಕಲ್ಬುರ್ಗಿಯವರ ಶವವನ್ನು ಬಳಸಿಕೊಂಡು ರಾಜಕೀಯವಾಗಿ ಏನೆಲ್ಲ ಲಾಭಗಳನ್ನು ಗಳಿಸಬೇಕಿತ್ತೋ ಅವೆಲ್ಲವನ್ನೂ ಅವರು ಪಡೆದಾಗಿದೆ. ಹಣ್ಣು ತಿಂದ ಮೇಲೆ ಸಿಪ್ಪೆ ಎಸೆಯುವಂತೆ ರಾಜ್ಯದ ಕಾಂಗ್ರೆಸ್ ಸರಕಾರ ಕಲ್ಬುರ್ಗಿಯವರ ಶವವನ್ನು ತಿಪ್ಪೆಗೆ ಎಸೆದಿದೆ. ತಮಾಷೆ ಎಂದರೆ, ಕಲ್ಬುರ್ಗಿಯವರ ಕುಟುಂಬದ ಜೊತೆ ರಾಜಿ ವ್ಯವಹಾರ ಮಾಡಿಕೊಂಡ ಕಾಂಗ್ರೆಸ್ ಪಕ್ಷದ ವ್ಯಕ್ತಿ ಇದೀಗ, “ಆರೆಸ್ಸೆಸ್ ಎಂಬುದು ಬಿಜೆಪಿಯು ನಿರ್ದೇಶಿಸುವ ಸುಪಾರಿ ಕಿಲ್ಲರ್” ಎನ್ನುತ್ತ, ಯಡಿಯೂರಪ್ಪನವರನ್ನು ಹೊಗಳಿ ಮುಂದಿನ ಸರಕಾರದಲ್ಲೂ ತಾನು ಆಯಕಟ್ಟಿನ ಹುದ್ದೆಯಲ್ಲಿ ಮುಂದುವರಿಯಲು ಬೇಕಾದ ಅಡಿಪಾಯ ಹಾಕಿಕೊಳ್ಳುತ್ತ, ಆರಾಮಾಗಿ ಓಡಾಡಿಕೊಂಡಿದ್ದಾರೆ. ಸತ್ಯಗಳನ್ನು ಸಮಾಧಿ ಮಾಡುವುದರಲ್ಲಿ ಕಾಂಗ್ರೆಸ್ ನಿಷ್ಣಾತವಲ್ಲವೆ!

***

ಉತ್ತರ ಪ್ರದೇಶದ ದಾದ್ರಿ ಎಂಬಲ್ಲಿ ಮಹಮದ್ ಅಖ್ಲಾಕ್ ಎಂಬಾತನ ಹತ್ಯೆಯಾಯಿತು. ಆ ಒಂದು ಕೊಲೆಯನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಅಸಹಿಷ್ಣುತೆಯ ಬಿರುಗಾಳಿ ಭುಗಿಲ್ಲೆದ್ದಿತು. ಪ್ರಶಸ್ತಿ ವಾಪಸ್ ಪ್ರಹಸನ ನಡೆಯಿತು. ಇಡೀ ದೇಶವೇ ಕೋಮುದಳ್ಳುರಿಯಲ್ಲಿ ಹೊತ್ತಿ ಉರಿಯುತ್ತಿದೆ ಎಂಬು ಬೊಬ್ಬೆ ಹೊಡೆಯಲಾಯಿತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹರಾಜು ಹಾಕುವ ಕೆಲಸವನ್ನು ವ್ಯವಸ್ಥಿತವಾಗಿ ನಡೆಸಲಾಯಿತು. ಕರ್ನಾಟಕದ ಕೆಲವು ಸಾಹಿತಿಗಳೂ ಕೂಡ ತಮ್ಮ ಪ್ರಶಸ್ತಿ ಫಲಕಗಳನ್ನು ವಾಪಸ್ ಕೊಟ್ಟು, ಪ್ರಶಸ್ತಿ ಜೊತೆ ಬಂದಿದ್ದ ನಗದು ಹಣವನ್ನು ತಮ್ಮಲ್ಲೇ ಉಳಿಸಿಕೊಂಡು, ಅಂತೂ ಬೀಸುತ್ತಿದ್ದ ಗಾಳಿಯಲ್ಲಿ ತಮ್ಮ ಪಂಚೆಗಳನ್ನು ಒಣಗಿಸಿಕೊಂಡರು. ಅಖ್ಲಾಕ್‍ನ ಕೊಲೆ ನಡೆದು ಹೋದ ಅದೇ ಸಮಯದಲ್ಲಿ ಕರ್ನಾಟಕದ ಮೂಡುಬಿದಿರೆಯಲ್ಲಿ ಪ್ರಶಾಂತ್ ಪೂಜಾರಿ ಎಂಬ ತರುಣನ ಹತ್ಯೆಯೂ ನಡೆಯಿತು. 2015ರ ಅಕ್ಟೋಬರ್ 9ರಂದು, ಎಂದಿನಂತೆ ಮುಂಜಾನೆ ಆರೂವರೆ ಗಂಟೆಗೆ ತನ್ನ ಹೂವಿನಂಗಡಿಗೆ ಬಂದು, ಅಂಗಡಿ ತೆರೆದು ಹೂವಿನ ಅಟ್ಟೆಗಳನ್ನು ಜೋಡಿಸುತ್ತಿದ್ದನಷ್ಟೆ; ಮೂರು ಬೈಕ್‍ಗಳಲ್ಲಿ ಬಂದ ಆರು ದುಷ್ಕರ್ಮಿಗಳು ಪ್ರಶಾಂತ್ ಮೇಲೆ ಯದ್ವಾತದ್ವಾ ಮಚ್ಚು ಬೀಸಿ ಆತ ರಕ್ತದ ಮಡುವಿನಲ್ಲಿ ಬೀಳುತ್ತಲೇ ಪರಾರಿಯಾದರು. ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಆ ನತದೃಷ್ಟ, ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಕೊನೆಯುಸಿರೆಳೆದ.

ಅಖ್ಲಾಕ್‍ನ ಹತ್ಯೆ ದೇಶ-ವಿದೇಶಗಳಲ್ಲಿ ಮಾರ್ದನಿಸಿದರೆ ಪ್ರಶಾಂತ್ ಪೂಜಾರಿಯ ಕೊಲೆ ಕರ್ನಾಟಕದಲ್ಲಿ ಕೂಡ ಸುದ್ದಿಯಾಗಲಿಲ್ಲ! ಅಖ್ಲಾಕ್‍ನಿಗಾಗಿ ವಾರಗಟ್ಟಲೆ ಕಂಠಶೋಷಣೆ ಮಾಡಿಕೊಂಡ ಬರ್ಖಾ ದತ್, ರಾಜದೀಪ್ ಸರದೇಸಾಯಿಗಳು ಪ್ರಶಾಂತ್ ಕುರಿತು ಐದು ನಿಮಿಷ ಕೂಡ ಸಮಯ ವ್ಯಯಿಸಲಿಲ್ಲ. ಅಲ್ಪಸಂಖ್ಯಾತರಿಗೆ ಕಾಲಿಗೆ ಮುಳ್ಳು ಚುಚ್ಚಿದರೂ ಓಡಿ ಹೋಗಿ ಸಂತೈಸುವ ನಮ್ಮ ಮುಖ್ಯಮಂತ್ರಿಗಳು ಮತ್ತು ಸಚಿವರು ಶಿಷ್ಟಾಚಾರಕ್ಕಾದರೂ ಪ್ರಶಾಂತ್ ಮನೆಯವರನ್ನು ಮಾತಾಡಿಸುವ ಸೌಜನ್ಯ ತೋರಿಸಲಿಲ್ಲ. ಹತ್ಯೆಯಾದ ಮರುದಿನ ಮಂಗಳೂರಲ್ಲೇ ಓಡಾಡಿಕೊಂಡಿದ್ದ ಆರೋಗ್ಯ ಸಚಿವ ಯು.ಟಿ. ಖಾದರ್, “ಊರಲ್ಲಿ ದಿನವೂ ಜನ ಸತ್ತು ಬೀಳುತ್ತಿರುತ್ತಾರೆ. ಎಲ್ಲರ ಮನೆಗೂ ಹೋಗಿ ಸಮಾಧಾನ ಹೇಳುತ್ತ ಇರುವುದಕ್ಕಾಗುತ್ತದೆಯೇ?” ಎಂಬ ಆಣಿಮುತ್ತುಗಳನ್ನು ಉದುರಿಸಿದರು! ಪ್ರಶಾಂತ್ ಪೂಜಾರಿಯ ಕುಟುಂಬಕ್ಕೆ ಐದು ಲಕ್ಷ ಪರಿಹಾರ ಕೊಡುತ್ತೇವೆ, ಅದಕ್ಕಿಂತ ಹೆಚ್ಚಿಗೆ ಕೊಡುವುದು ಸಾಧ್ಯವಿಲ್ಲ ಎಂದು ಗೃಹ ಸಚಿವರು ಅಪ್ಪಣೆ ಕೊಡಿಸಿದರು. ಅಕ್ರಮ ದನಸಾಗಣೆಯ ವಿರುದ್ಧ ಏಕಾಂಗಿಯಾಗಿ ಹೋರಾಡುತ್ತಿದ್ದ ಪ್ರಶಾಂತ್‍ನನ್ನು ಕೋಮುವಾದಿ ಎಂದು ಕರೆಯಲಾಯಿತು. ಹಿಂದೂ ಭಯೋತ್ಪಾದಕ ಎಂಬ ಹಣೆಪಟ್ಟಿ ಹಚ್ಚಲಾಯಿತು. “ಅಖ್ಲಾಕ್ ಒಬ್ಬ ಅಮಾಯಕ ವ್ಯಕ್ತಿ. ಯಾವ ತಪ್ಪನ್ನೂ ಮಾಡಿರದಿದ್ದ ಅವನನ್ನು ನೂರಿನ್ನೂರು ಜನ ಮುತ್ತಿಗೆ ಹಾಕಿ ಹೊಡೆದು ಕೊಂದರು. ಆದರೆ ಪ್ರಶಾಂತ್ ಪೂಜಾರಿ ಸ್ಥಳೀಯ ರೌಡಿ. ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದವನು. ಕೋಮುವಾದಿ ಭಯೋತ್ಪಾದಕ. ಅವನ ಬಗ್ಗೆ ಯಾವ ಸಹಾನುಭೂತಿಯೂ ವ್ಯಕ್ತಪಡಿಸುವಂತಿಲ್ಲ” ಎಂದು ಪತ್ರಕರ್ತ ರಾಜ್‍ದೀಪ್ ಸರದೇಸಾಯಿ ಒಂದು ದೊಡ್ಡ ಲೇಖನವನ್ನೇ ಬರೆದುಬಿಟ್ಟ! ಹಾಡುಹಗಲಲ್ಲೇ ನಡೆದು ಹೋದ ಈ ಕೊಲೆಯ ಆರೋಪಿಗಳು ಯಾರು ಎಂಬುದು ಇಡೀ ಊರಿಗೆ ಗೊತ್ತಿದ್ದರೂ ಕೊಲೆಗೆ ಸಂಬಂಧಿಸಿದ ಮೊದಲ ನಾಲ್ಕು ಜನರನ್ನು ಬಂಧಿಸಲು ಪೊಲೀಸರು ಭರ್ತಿ ಹತ್ತು ದಿನ ತೆಗೆದುಕೊಂಡರು ಎಂದರೆ ನೀವು ನಂಬಲೇಬೇಕು.

ಇದುವರೆಗೆ ಈ ಕೊಲೆಗೆ ಸಂಬಂಧಿಸಿ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ಮೊಹಮ್ಮದ್ ಶರೀಫ್, ಮುಸ್ತಾಫಾ ಕಾವೂರು, ಮೊಹಮ್ಮದ್ ಮುಸ್ತಾಫಾ, ಕಬೀರ್ – ಹೀಗೆ ಎಲ್ಲ ಹನ್ನೊಂದು ಹೆಸರುಗಳೂ ಅಲ್ಪಸಂಖ್ಯಾತರವೇ. ಅಕ್ರಮ ದನ ಸಾಗಣೆಯ ವಿರುದ್ಧ ತೊಡೆತಟ್ಟಿ ನಿಂತದ್ದೇ ಪ್ರಶಾಂತ್ ಮಾಡಿದ್ದ ಅಪರಾಧ. “ನಿನ್ನನ್ನು ನೋಡಿಕೊಳ್ಳುತ್ತೇವೆ” ಎಂಬ ಬಹಿರಂಗ ಬೆದರಿಕೆ ಕೆಲವೇ ದಿನಗಳ ಹಿಂದೆ ಅವನಿಗೆ ಬಂದಿತ್ತು. ಕೊಲೆ ನಡೆದ ಮೇಲೆ ಬಂಧಿಸಲ್ಪಟ್ಟ ಹನ್ನೊಂದು ಮಂದಿಯಲ್ಲಿ ಇಬ್ಬರು ಜಾಮೀನು ಪಡೆದು ಹೊರ ಬಂದಿದ್ದಾರೆ. ಉಳಿದವರ ಕತೆ ಏನು ಎನ್ನುವುದು ಅಸ್ಪಷ್ಟ. ಅವರಿಗೆ ನ್ಯಾಯಾಂಗದ ಮೂಲಕ ಶಿಕ್ಷೆ ಆಗಬಹುದೇ ಎಂಬುದೂ ಅನುಮಾನವೇ. ಪ್ರಶಾಂತ್ ಕೊಲೆಯಾದ ಕೆಲವೇ ದಿನಗಳಲ್ಲಿ, ಆ ಪ್ರಕರಣದ ಪ್ರತ್ಯಕ್ಷದರ್ಶಿಯಾಗಿದ್ದ ವಾಮನ ಪೂಜಾರಿ, ತನ್ನ ಮಗಳ ಮನೆಯ ಶೆಡ್ಡಿನಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಕಂಡು ಬಂದರು. ಅದು ಕೊಲೆಯೇ ಆತ್ಮಹತ್ಯೆಯೇ ಎಂಬುದು ಸ್ಪಷ್ಟವಾಗಲಿಲ್ಲ. ಪ್ರಶಾಂತ್‍ನ ಕೊಲೆಗಾರರನ್ನು ಸ್ವಲ್ಪ ಬೇಗ ಹಿಡಿದಿದ್ದರೆ ವಾಮನರ ಜೀವವನ್ನಾದರೂ ರಕ್ಷಿಸಬಹುದಿತ್ತು ಎಂದು ಸ್ಥಳೀಯರು ಮಾತಾಡಿಕೊಳ್ಳುತ್ತಾರೆ. ಈ ಮಾತಿನ ಅಂತರಾರ್ಥವೇನು, ಊಹಿಸುವುದೇನೂ ಕಷ್ಟವಲ್ಲ.

***

ಕಳೆದ ವರ್ಷದ ನವೆಂಬರ್ 10ಕ್ಕೆ ರಾಜ್ಯ ಸರಕಾರ ಮತ್ತೊಮ್ಮೆ ಟಿಪ್ಪು ಜಯಂತಿ ಮಾಡಲು ಟೊಂಕ ಕಟ್ಟಿ ನಿಂತಾಗಲೇ ಈ ಸರಕಾರದ ಪ್ರಜ್ಞೆ ರಸಾತಳಕ್ಕೆ ಇಳಿದಿದೆ ಎಂಬುದನ್ನು ಯಾರು ಬೇಕಾದರೂ ಹೇಳಬಹುದಾಗಿತ್ತು ನೋಡಿ! 2015ರ ನವೆಂಬರ್ 10ರಂದು ಎಲ್ಲ ಜನವಿರೋಧದ ಮಧ್ಯೆಯೂ ಟಿಪ್ಪು ಜಯಂತಿ ಮಾಡಿ ಸರಕಾರ ಮೂರು ಜೀವಗಳನ್ನು ಬಲಿತೆಗೆದುಕೊಂಡಿತು. ಆ ದಿನ ಕೊಡಗಿನಲ್ಲಿ ಪ್ರಕ್ಷುಬ್ಧತೆ ಹುಟ್ಟಿಸಲೆಂದೇ ಐದು ಸಾವಿರ ಕೇರಳದ ಮಾಪಿಳ್ಳೆಗಳು ಬಂದು ತುಂಬಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಸ್ವತಃ ಗೃಹಸಚಿವರೇ ಒಪ್ಪಿಕೊಂಡಿದ್ದರು. ಈ ಮುಸ್ಲಿಂ ಮೂಲಭೂತವಾದಿಗಳು ಅದ್ಯಾವ ಬಗೆಯಲ್ಲಿ ಕೊಡಗಿನಲ್ಲಿ ಗಲಭೆ ಎಬ್ಬಿಸಿದರು ಎಂಬ ಎಲ್ಲ ದಾಖಲೆಗಳೂ ಜನರಿಗೆ ಗೊತ್ತಿವೆ. ಮುಸ್ಲಿಮರು ಕೈಯಲ್ಲಿ ದೊಡ್ಡ ದೊಡ್ಡ ಕಲ್ಲುಗಳನ್ನು ಎತ್ತೆತ್ತಿ ಎಸೆಯುತ್ತಿದ್ದ ದೃಶ್ಯಾವಳಿಗಳನ್ನು ರಾಜ್ಯದ ಜನತೆ ನೋಡಿದ್ದಾರೆ. ಈ ಗಲಭೆಯಲ್ಲಿ ಸಿಕ್ಕಿಕೊಂಡ ವಿಶ್ವ ಹಿಂದೂ ಪರಿಷತ್ ಮುಖಂಡ, 62 ವರ್ಷ ವಯಸ್ಸಿನ ಕುಟ್ಟಪ್ಪನವರನ್ನು ಎಲ್ಲೂ ಓಡಿ ತಪ್ಪಿಸಿಕೊಳ್ಳಲಾಗದಂತೆ ತಡೆ ಹಿಡಿದು ಕೊನೆಗೆ ಕಲ್ಲು ಹೊಡೆದು ಸಾಯಿಸಿದ ಹೃದಯ ವಿದ್ರಾವಕ ದೃಶ್ಯವನ್ನು ಕೂಡ ಕನ್ನಡ ಚಾನೆಲ್ಲುಗಳು ಪ್ರಸಾರ ಮಾಡಿದ್ದವು. ಇಡೀ ರಾಜ್ಯವೇ ಸರಕಾರದ ನಿರ್ಧಾರದ ವಿರುದ್ಧ ನಿಂತಿದ್ದರೂ ತಲೆಕೆಡಿಸಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ ಮಾತುಗಳೇನು ಗೊತ್ತೆ? “ಕುಟ್ಟಪ್ಪ ಅವರು ಓಡುವಾಗ ಬಿದ್ದು ಸತ್ತಿರುವುದು. ಟಿಪ್ಪು ಜಯಂತಿ ದಿನ ಬಂದ್ ಕರೆದಿರುವುದು ತಪ್ಪು. ಸರಕಾರದ ತಪ್ಪಿಲ್ಲ. ಕೋಮುವಾದಿಗಳು ಪ್ರತಿಭಟನೆ ನಡೆಸುವ ಬಗ್ಗೆ ಗೊತ್ತಿತ್ತು. ಜವಾಬ್ದಾರಿಯನ್ನು ಬಂದ್ ಕರೆದವರೇ ಹೊತ್ತುಕೊಳ್ಳಬೇಕಾಗುತ್ತದೆ”.

ಕುಟ್ಟಪ್ಪನವರ ಕೊಲೆಯಾದ ದಿನ ಪೊಲೀಸರು ಐಪಿಸಿ ಸೆಕ್ಷನ್ 302ರ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದರು. ಆದರೆ, ಸರಕಾರದ ಹಸ್ತಕ್ಷೇಪ ನಡೆದ ಮೇಲೆ ಅದನ್ನು ಐಪಿಸಿ ಸೆಕ್ಷನ್ 304ಕ್ಕೆ ಬದಲಾಯಿಸಲಾಯಿತು. ಇದರಿಂದಾಗಿ, “ಕೊಲೆ” ಎಂಬ ಶಬ್ದ ಹೋಗಿ, “ಉದ್ದೇಶಪೂರ್ವಕವಲ್ಲದ ಕೊಲೆ” ಎಂಬ ಹೊಸ ಪದಪುಂಜದಡಿ ಪ್ರಕರಣವನ್ನು ತನಿಖೆ ಮಾಡುವಂತಾಯಿತು. ಸೆಕ್ಷನ್ 302ರಲ್ಲಿ ಅಪರಾಧಿಗಳನ್ನು ಜಾಮೀನು ಮೇಲೆ ಬಿಡುವ ಅನುಕೂಲ ಇರಲಿಲ್ಲ. ಆದರೆ, ಸೆಕ್ಷನ್ 304, ಅಪರಾಧಿಗಳ ಕೃತ್ಯದಿಂದ ಸಾವು ನಡೆದಿರುವುದೇನೋ ನಿಜ; ಆದರೆ ಕೊಲೆ ಮಾಡಬೇಕೆಂಬ ಉದ್ದೇಶದಿಂದ ನಡೆಸಿದ ಕೃತ್ಯ ಅಲ್ಲ – ಎಂಬ ಉದಾರತೆ ತೋರಿಸುವುದರಿಂದ ಆರೋಪಿಗಳಿಗೆ ಜಾಮೀನು ಮೇಲೆ ಬಿಡುಗಡೆಯಾಗಿ ಹೊರ ಬರುವ ಅನುಕೂಲ ಕೂಡ ಇದೆ. ಕುಟ್ಟಪ್ಪನವರನ್ನು ಕೊಂದ ಟಿ.ಎ.ಖಾಲಿದ್, ಅಬ್ದುಲ್ ಗಫೂರ್, ಕೆ.ವೈ. ರಝಾಕ್, ಸಿ.ಟಿ. ಫೈಜಲ್, ಅಕ್ಬರ್ ಅಲಿ, ಷಂಶೀರ್, ಅಶ್ರಫ್, ಸೈಫುದ್ದೀನ್, ಶಾಹುಲ್ ಹಮೀದ್ ಮುಂತಾದವರೆಲ್ಲ ಇಂದಿಗೂ ಆರಾಮಾಗಿದ್ದಾರೆ. ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೂಲಭೂತವಾದಿ ಭಯೋತ್ಪಾದಕರನ್ನು ಬೆಂಬಲಿಸುವ ಸಿದ್ದರಾಮಯ್ಯನವರ ಸರಕಾರವಿರುವವರೆಗೆ ಪ್ರಕರಣ ಒಂದು ತಾತ್ತ್ವಿಕವಾದ ಅಂತ್ಯ ಕಾಣುವ ಭರವಸೆಯೇನೂ ಇಲ್ಲ.

***

ಹೇಳುತ್ತ ಹೋದರೆ ಪಟ್ಟಿ ದೊಡ್ಡದಿದೆ. ಕಲಬುರಗಿಯ ನಿಷ್ಠಾವಂತ ಪೊಲೀಸ್ ಅಧಿಕಾರಿಯಾಗಿದ್ದ ಮಲ್ಲಿಕಾರ್ಜುನ ಬಂಡೆ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾದ ಮೇಲೆ, ಅವರ ಕುಟುಂಬಕ್ಕೆ ಐವತ್ತು ಲಕ್ಷ ರುಪಾಯಿಗಳ ಪರಿಹಾರ, ಜೊತೆಗೊಂದು ನಿವೇಶನ ಕೊಡುವ ಭರವಸೆ ಕೊಟ್ಟಿತ್ತು ಸಿದ್ದರಾಮಯ್ಯನವರ ಸರಕಾರ. ಆದರೆ, ತನ್ನ ಸೊಸೆಯ ಮಿದುಳಿನ ಕಾಯಿಲೆಗೆ ಶಸ್ತ್ರಚಿಕಿತ್ಸೆ ನಡೆಸಲು ಹಣವಿಲ್ಲದೆ ಪರದಾಡುತ್ತಿದ್ದ ಬಂಡೆಯವರ ತಂದೆ ಬೀದಿಯಲ್ಲಿ ಕೂತು ಪ್ರತಿಭಟಿಸಬೇಕಾಯಿತು. ಬಂಡೆ ಕೊಲೆ ಪ್ರಕರಣವನ್ನು ಇನ್ನೂ ಭೇದಿಸಲು ಆಗಿಲ್ಲ ಎನ್ನುವುದು ಇನ್ನೊಂದು ವಿಪರ್ಯಾಸ. ಮುನ್ನಾ ಎಂಬ ರೌಡಿಯ ಜೊತೆ ಕಾಳಗದಲ್ಲಿ ಸೆಣಸುತ್ತಿದ್ದಾಗ ಅಕಸ್ಮಾತ್ತಾಗಿ ಗುಂಡೇಟು ಬಿದ್ದು ಬಂಡೆ ತೀರಿಕೊಂಡರು ಎಂಬ ಕತೆ ಕಟ್ಟಿ ಅದನ್ನೇ ಪೊಲೀಸ್ ಇಲಾಖೆಯ ಕಡತಗಳಲ್ಲಿ ತುಂಬಿಸಿ ಪ್ರಕರಣಕ್ಕೆ ಇತಿಶ್ರೀ ಹಾಡಲಾಗಿದೆ. ಆದರೆ, ಅದು ಅಕಸ್ಮಾತ್ತಾಗಿ ಬಿದ್ದ ಗುಂಡೇಟಲ್ಲ; ಬಂಡೆಯನ್ನು ಕೊಲ್ಲಲು ರಾಜಕೀಯ ವಲಯದಲ್ಲೇ ಒಂದು ಯೋಜನೆ ಹಾಕಲಾಗಿತ್ತು. ಎನ್‍ಕೌಂಟರ್ ಎಂಬುದು ಆ ಯೋಜನೆಯ ಒಂದು ಭಾಗವಾಗಿತ್ತಷ್ಟೇ ಎಂಬ ಮಾತುಗಳು ದಟ್ಟವಾಗಿವೆ. ಬಂಡೆಯ ಆತ್ಮ ಮೋಕ್ಷ ಕಾಣದೆ ಅಸಹಾಯವಾಗಿ ನಿಂತಿದೆ.

ನಿಷ್ಠಾವಂತ, ಪ್ರಾಮಾಣಿಕ ಅಧಿಕಾರಿಗಳನ್ನು ನೈತಿಕವಾಗಿ ಮಾತ್ರವಲ್ಲ ಭೌತಿಕವಾಗಿಯೂ ಮುಗಿಸುವ ಯೋಜನೆ ಹಾಕಿದ್ದ ರಾಜಕೀಯ ಶಕ್ತಿಗಳಿಗೆ ಸಿಕ್ಕಿದ ಎರಡನೇ ವ್ಯಕ್ತಿ ಡಿ.ಕೆ. ರವಿ. ದುಷ್ಟರಿಗೆ ಸಿಂಹಸ್ವಪ್ನರಾಗಿದ್ದ ವ್ಯಕ್ತಿ ಏಕಾಏಕಿ ಆತ್ಮಹತ್ಯೆ ಮಾಡಿಕೊಂಡದ್ದು ಏಕೆ? “ಆತ್ಮಹತ್ಯೆ” ನಡೆದು ಹೋದೊಡನೆ ತನಿಖಾಧಿಕಾರಿಗಳು ಅವಸರವಸರವಾಗಿ ಬಂದು ರವಿಯವರ ಲ್ಯಾಪ್‍ಟಾಪ್ ಮತ್ತು ಕೆಲವೊಂದು ಕಡತಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಹೋದದ್ದು ಏಕೆ? ಕುಟುಂಬದವರು ಬರುವುದಕ್ಕೆ ಮೊದಲೇ ಅಪಾರ್ಟ್‍ಮೆಂಟಿಗೆ ನುಗ್ಗಿ ಪೊಲೀಸರು ಪಂಚನಾಮೆಯ ಶಾಸ್ತ್ರ ಮುಗಿಸಿದ್ದು ಏಕೆ? ಸರಕಾರದ ಸಲಹೆಗಾರರು ರವಿಯವರ ಮನೆಯವರನ್ನು ಗುಪ್ತವಾಗಿ ಭೇಟಿಯಾದದ್ದು ಏಕೆ? ತನಿಖೆಗೆಂದು ತೆರಳಿದ್ದ ಅಧಿಕಾರಿಗಳು ರವಿಯವರ ಅಪಾರ್ಟ್‍ಮೆಂಟಿನ ಮೆಟ್ಟಿಲುಗಳನ್ನು ತಿಕ್ಕಿತಿಕ್ಕಿ ತೊಳೆದು ಬೆರಳಚ್ಚುಗಳನ್ನು ಅಳಿಸಿದ್ದು ಏಕೆ? ರವಿಯವರ ಸಾವಿಗೆ ಕೆಲವೇ ಕ್ಷಣಗಳ ಮೊದಲು ಮೂವರು ಅಪರಿಚಿತರು ಅವರ ಮನೆಗೆ ಹೋದದ್ದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆದರೆ ಆಮೇಲೆ ಅದು ಎಲ್ಲಿಯೂ ಚರ್ಚೆಗೊಳಪಡದೆ ಮುಚ್ಚಿಯೇ ಹೋದದ್ದು ಏಕೆ? ರವಿ ತನ್ನ ಸಹೋದ್ಯೋಗಿಗೆ 44 ಸಲ ಕಾಲ್ ಮಾಡಿದ್ದರು; ಅವರು ಪ್ರೀತಿಯಲ್ಲಿ ಬಿದ್ದಿದ್ದರು; ಹತಾಶರಾಗಿದ್ದರು; ತನ್ನ ಪ್ರೀತಿ ಸಫಲವಾಗದ ಹಿನ್ನೆಲೆಯಲ್ಲಿ ಮಾನಸಿಕವಾಗಿ ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಂಡರು – ಎಂದು ಕನ್ನಡದ ಟ್ಯಾಬ್ಲಾಯಿಡ್ ಪತ್ರಿಕೆಯೊಂದು ಮೂರು ವಾರ ಸತತವಾಗಿ ಮುಖಪುಟ ವರದಿಗಳನ್ನು ಪ್ರಕಟಿಸಿದ್ದು ಮತ್ತು ಅದಾಗಿ ಕೆಲವೇ ದಿನಗಳಲ್ಲಿ ಅದರ ಸಂಪಾದಕರು ಹೊಸ ಕಾರು ಖರೀದಿಸಿದ್ದು ಏಕೆ? ಕನ್ನಡದ ವಿಶ್ವಾಸಾರ್ಹ ಪತ್ರಿಕೆಯೊಂದು ರವಿಯವರ ತೇಜೋವಧೆಗೆ ನಿಂತು ಅತ್ಯಂತ ಕೆಟ್ಟ ವರದಿಗಳನ್ನು ಪ್ರಕಟಿಸಿದ ಬೆನ್ನಿಗೇ ಆ ಪತ್ರಿಕೆಗೆ ಬನ್ನೇರುಘಟ್ಟ ರಸ್ತೆಯಲ್ಲಿ ಎರಡು ಸೈಟುಗಳು “ಕಾಣದ ಕೈ”ಗಳಿಂದ ದೊರೆತದ್ದು ಏಕೆ? – ಇಂಥ ಯಾವ ಪ್ರಶ್ನೆಗಳಿಗೂ ಇದುವರೆಗೆ ಉತ್ತರ ಸಿಕ್ಕಿಲ್ಲ. ಕೂಡ್ಲಿಗಿಯ ಡಿವೈಎಸ್ಪಿಯಾಗಿದ್ದ ಅನುಪಮಾ ಶೆಣೈ ಅವರು ತನ್ನ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರ ನಡೆದಾಗ ಕರ್ನಾಟಕ ಸರಕಾರದ ಸ್ಪೀಕರ್ ಆಗಿದ್ದ ಕಾಗೋಡು ತಿಮ್ಮಪ್ಪ, ಆಕೆ ಸರಕಾರದ ವಿರುದ್ಧ ಬಂಡಾಯ ಏಳಬಾರದು. ಡಿ.ಕೆ. ರವಿಗೆ ಕೊನೆಗೆ ಏನಾಯಿತು ಎಂಬುದನ್ನು ಮರೆಯಬಾರದು – ಎಂಬ ಮಾತುಗಳನ್ನು ಪತ್ರಿಕೆಗಳ ಮುಂದೆಯೇ ರಾಜಾರೋಷದಲ್ಲಿ ಹೇಳಿದರು. ರವಿಯವರದ್ದು ಕೊಲೆಯಲ್ಲ, ಆತ್ಮಹತ್ಯೆ ಎಂಬುದನ್ನು ಸಾಧಿಸುವ ಅನಿವಾರ್ಯತೆ ಸರಕಾರಕ್ಕೆ ಏಕಿತ್ತು ಎಂಬ ಪ್ರಶ್ನೆಗೆ ಇಲ್ಲಿ ಉತ್ತರ ಇದೆ.

2016ರ ಮಾರ್ಚ್ 14ರಂದು ಮೈಸೂರಲ್ಲಿ ರಾಜು ಎಂಬ ಆರೆಸ್ಸೆಸ್ ಕಾರ್ಯಕರ್ತನ ಕೊಲೆಯಾಯಿತು. ಮೈಸೂರಿನ ಕೆಲವು ಸ್ಥಳಗಳಲ್ಲಿ ಮುಸ್ಲಿಮರ ಪ್ರಾರ್ಥನಾ ಸ್ಥಳಗಳು ಹೆಚ್ಚಾಗುತ್ತಿವೆ. ಅನಧಿಕೃತವಾಗಿ ಹಲವು ಕಟ್ಟಡಗಳು ತಲೆ ಎತ್ತುತ್ತಿವೆ ಎಂದು ಹೇಳಿದ್ದೇ ತನ್ನ ಜೀವಕ್ಕೆ ಮುಳುವಾಗಬಹುದು ಎಂದು ಆ ಯುವಕನಿಗೆ ಗೊತ್ತಿರಲಿಲ್ಲ. ನಮ್ಮ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಅದೆಷ್ಟು ಹದಗೆಟ್ಟು ಹೋಗಿದೆಯೆಂದರೆ ಸ್ವತಃ ಮೈಸೂರಿನ ಸಂಸದರೇ ಕೊಲೆಗಾರರನ್ನು ಬಂಧಿಸಬೇಕೆಂದು ಸರಕಾರವನ್ನು ಒತ್ತಾಯಿಸಿ ಧರಣಿ ಕೂರಬೇಕಾಯಿತು! ಒಬ್ಬ ವ್ಯಕ್ತಿಯ ಕೊಲೆ ನಡೆದು ಹೋದಾಗ ಕೊಂದವರನ್ನು ಬಂಧಿಸಿ ಎಂದು ಸರಕಾರಕ್ಕೂ ಪೊಲೀಸ್ ಇಲಾಖೆಗೂ ಮನವಿ ಮಾಡಬೇಕಾದ ಪರಿಸ್ಥಿತಿ ಈ ರಾಜ್ಯದಲ್ಲಿ ಹಿಂದೆ ಇರಲಿಲ್ಲ! ಅಲ್ಪಸಂಖ್ಯಾತರಿಗೆ ಜೀವಹಾನಿಯಾದಾಗ ಲಕ್ಷಗಟ್ಟಲೆ ಪರಿಹಾರವನ್ನು ಹಿಂದೆ ಮುಂದೆ ಯೋಚಿಸದೆ ಘೋಷಿಸಿಬಿಡುವ ಸರಕಾರ ರಾಜು ವಿಷಯದಲ್ಲಿ ಮಾತ್ರ ಜಿಪುಣತನ ಮೆರೆಯಿತು. ಗೃಹಸಚಿವ ಪರಮೇಶ್ವರ್, “ಮೃತ ರಾಜು ಕುಟುಂಬಕ್ಕೆ ಐದು ಲಕ್ಷ ಪರಿಹಾರ ಘೋಷಿಸಲಾಗಿದೆ. ಅದಕ್ಕಿಂತ ಜಾಸ್ತಿ ಕೊಡಲು ಸಾಧ್ಯವಿಲ್ಲ” ಎಂದು ಕಡ್ಡಿ ಮುರಿದಂತೆ ಹೇಳಿ ಬಿಟ್ಟರು. ಪರಿಹಾರದ ಮಾತು ಅತ್ತ ಇರಲಿ. ಕೊಲೆಗಾರರನ್ನು ಹಿಡಿಯಲಿಕ್ಕೇ ಪೊಲೀಸರಿಗೆ ವರ್ಷದಷ್ಟು ಸಮಯ ಹಿಡಿಯಿತು! ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳಿಂದ ಅತ್ಯಂತ ಬರ್ಬರವಾಗಿ ದಾಳಿಗೊಳಗಾಗಿಯೂ ಬದುಕಿದ ಮಂಗಳೂರಿನ ಜಯ ಕೋಟ್ಯಾನ್, ಬೆಂಗಳೂರಿನ ಫಣೀಂದ್ರ ಮುಂತಾದವರ ಬಳಿ ಕೇಳಿ ನೋಡಿ. ಈ ರಾಜ್ಯದಲ್ಲಿ ಹೆಚ್ಚುತ್ತಿರುವ “ಅನ್ಯಕೋಮಿ”ನ ಹಿಂಸಾಚಾರಕ್ಕೆ ಸರಕಾರ ಯಾವೆಲ್ಲ ಬಗೆಯಲ್ಲಿ ಕುಮ್ಮಕ್ಕು ಕೊಡುತ್ತಿದೆ ಎಂಬ ವಿಷಯದಲ್ಲಿ ಪುಸ್ತಕ ಬರೆಯಬಹುದಾದಷ್ಟು ಮಾಹಿತಿ ಕೊಡುತ್ತಾರೆ. ರಾಜಕೀಯ ಕೊಲೆಗಳು, ರಾಜಕೀಯ ಪ್ರೇರಿತ ಕೊಲೆಗಳು ಮತ್ತು ರಾಜಕಾರಣಿಗಳ ಕೃಪಾಕಟಾಕ್ಷವಿರುವ ಕೊಲೆಗಳು – ಈ ವಿಷಯದಲ್ಲಿ, ಕರ್ನಾಟಕ ಇನ್ನೊಂದು ಕೇರಳ ಅಥವಾ ಸಿರಿಯಾ ಆಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಶಿವಾಜಿನಗರದಲ್ಲಿ ಹಾಡುಹಗಲೇ ರುದ್ರೇಶ್ ಕೊಲೆಯಾಗಿ ಹೋದಾಗ ನಮ್ಮ ರಾಜ್ಯ ಸರಕಾರ ಮತ್ತು ಅದರ ಮುಖ್ಯಸ್ಥನಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಹನಿ ಕಣ್ಣೀರಾದರೂ ಹಾಕಿದ್ದರೇ? ರುದ್ರೇಶ್‍ರ ಕೊಲೆ ಮಾಡಿದ ಹಂತಕರು ತಪ್ಪೊಪ್ಪಿಗೆ ಹೇಳಿಕೆ ಕೊಡುವಾಗ “ನಮಗೆ ಆರೆಸ್ಸೆಸ್ ಸಂಘಟನೆಯಲ್ಲಿರುವ ಒಂದಿಬ್ಬರು ಕಾರ್ಯಕರ್ತರನ್ನಾದರೂ ಕೊಲೆ ಮಾಡಬೇಕು ಎಂಬ ಸ್ಪಷ್ಟ ಆದೇಶವಿತ್ತು. ಆರೆಸ್ಸೆಸ್ ಕಾರ್ಯಕರ್ತರನ್ನು ಕೊಂದರೆ ಆ ಸಂಘಟನೆಗೆ ಜನ ಸೇರಲು ಭಯಪಡುತ್ತಾರೆ, ಹಿಂದೇಟು ಹಾಕುತ್ತಾರೆ ಎಂಬುದೇ ಕೊಲೆ ನಡೆಸಲು ಕಾರಣ” ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿದ್ದರು. ಹಾಗಿದ್ದರೂ ರಾಜ್ಯ ಸರಕಾರ ಅಂಥ ಸುಪಾರಿ ಹಂತಕರ ಅಟ್ಟಹಾಸವನ್ನು ಮಟ್ಟ ಹಾಕುವ ಯಾವೊಂದು ಕ್ರಮವನ್ನಾದರೂ ಕೈಗೊಂಡಿತೇ? 19-02-2015ರಂದು ಕೊಲೆಯಾಗಿ ಹೋದ ವಿಶ್ವನಾಥ್ ಅವರಿಂದ ಹಿಡಿದು, ಪ್ರಶಾಂತ್ ಪೂಜಾರಿ (9-10-2015), ಕುಟ್ಟಪ್ಪ (10-11-2015), ರಾಜು ಮೈಸೂರು (13-3-2016), ಮಡಿಕೇರಿಯ ಪ್ರವೀಣ್ ಪೂಜಾರಿ (14-8-2016), ರುದ್ರೇಶ್ (16-10-2016), ಮಾಗಳಿ ರವಿ (5-11-2016), ಯೋಗೀಶ್ ಗೌಡರ್ (16-11-2016), ಕಿತಗಾನಹಳ್ಳಿ ವಾಸು (14-2-2017) ಮುಂತಾದವರನ್ನೆಲ್ಲ ಹಾದು ಇದೀಗ ಶರತ್ ಮಡಿವಾಳ (7-7-2017) ಎಂಬಲ್ಲಿಯವರೆಗೆ ಒಟ್ಟು ಹತ್ತು ಮಂದಿ ಆರೆಸ್ಸೆಸ್ ಕಾರ್ಯಕರ್ತರು ಕರ್ನಾಟಕದಲ್ಲಿ ಬರ್ಬರವಾಗಿ ಕೊಲೆಯಾಗಿದ್ದಾರೆ. ವಿಪರ್ಯಾಸವೆಂದರೆ ಅಂತಾರಾಷ್ಟ್ರೀಯ ಗಡಿರೇಖೆಯಲ್ಲಿ ನಡೆಯುತ್ತಿರುವ ಭಯೋತ್ಪಾದನೆಯನ್ನು ಮಟ್ಟ ಹಾಕುವುದು ಹೇಗೆ ಎಂದು ತಲೆಕೆಡಿಸಿಕೊಂಡು ಇಸ್ರೇಲ್, ಅಮೆರಿಕಾಗಳ ಪ್ರವಾಸ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶದೊಳಗೆ ನಡೆದು ಹೋಗುತ್ತಿರುವ ಕೊಲೆಗಳ ಬಗ್ಗೆ ಒಂದೇ ಒಂದು ಚಕಾರವನ್ನೂ ಎತ್ತದಿರುವುದು! ಮುಸ್ಲಿಂ ವ್ಯಕ್ತಿಯ ಕೊಲೆಯಾದಾಗ ಅದರ ಬಗ್ಗೆ ಸೂಚ್ಯವಾಗಿ ಮಾತಾಡಿ ಹಿಂದೂವಾದಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಪ್ರಧಾನಿಗಳು ಕೇರಳದಲ್ಲಿ, ಕರ್ನಾಟಕದಲ್ಲಿ, ಬಂಗಾಳದಲ್ಲಿ ನಿರಂತರವಾಗಿ ನಡೆಯುತ್ತಿರುವ ಹಿಂದೂದಮನದ ಬಗ್ಗೆ ಯಾಕೆ ತುಟಿ ಬಿಚ್ಚಿಲ್ಲ? ಇನ್ನೂ ಎಷ್ಟು ಹೆಣಗಳು ಉರುಳಬೇಕೆಂದು ಕಾಯುತ್ತಿದ್ದಾರೆ? ಎಂಬ ಪ್ರಶ್ನೆ ಸಹಜವಾಗಿಯೇ ಏಳುತ್ತದೆ.

ಒಂದು ವಿಷಯವನ್ನು ನಾವು ನೆನಪಿಡಬೇಕು. ಕರ್ನಾಟಕದಲ್ಲಿ ಕಳೆದ ನಾಲ್ಕೂವರೆ ವರ್ಷಗಳಿಂದ ನಡೆದು ಹೋಗಿರುವ ಕೊಲೆಗಳು – ಅವು ಚಿಂತಕರದ್ದಾಗಿರಲಿ, ಆರೆಸ್ಸೆಸ್ ಸ್ವಯಂಸೇವಕರದ್ದಾಗಿರಲಿ ಅಥವಾ ದಲಿತರದ್ದೇ ಆಗಿರಲಿ, ಯಾವ ಕೊಲೆಗಳ ಬಗ್ಗೆಯೂ ನಮ್ಮ ರಾಜ್ಯ ಸರಕಾರ ಗಂಭೀರತೆಯನ್ನು ಪ್ರದರ್ಶಿಸುತ್ತಿಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ನಡೆಯುತ್ತಿರುವುದು ಕೇವಲ ಜಾತಿ-ಮತಗಳಿಗೆ ಸಂಬಂಧಿಸಿದ ವೈಷಮ್ಯದ ಕೊಲೆಗಳಲ್ಲ; ಆ ಹಂತವನ್ನು ದಾಟಿ ಮುಂದೆ ಹೋಗಿರುವ ಕೊಲೆಗಳು. ಕರ್ನಾಟಕದಲ್ಲಿ ಇಂದು ಎಂಥ ಪರಿಸ್ಥಿತಿ ಇದೆ ಎಂದರೆ ಯಾವುದೇ ಬಲಪಂಥೀಯ ವಿಚಾರದ ಪರವಾದ ನಿಲುವು ಉಳ್ಳ ವ್ಯಕ್ತಿ ರಸ್ತೆಯಲ್ಲಿ ಹೋಗುತ್ತಿದ್ದಾಗ ಯಾವುದೇ ಕಡೆಯಿಂದ ಹಂತಕನೊಬ್ಬ ನುಗ್ಗಿ ಬಂದು ಕೊಲೆ ಮಾಡಬಹುದು! ನೆನಪಿಡಿ: ಪ್ರಶಾಂತ್ ಪೂಜಾರಿ ಕೊಲೆಯಾದದ್ದು ಸಾರ್ವಜನಿಕ ಸ್ಥಳದಲ್ಲಿ; ತನ್ನ ಹೂವಿನಂಗಡಿ ತೆರೆಯುತ್ತಿದ್ದಾಗ. ಯಾರ ಜೊತೆಗೂ ದ್ವೇಷ-ವೈಷಮ್ಯ-ವೈರತ್ವಗಳಿಲ್ಲದೇ ಇದ್ದ ಶರತ್ ಮೇಲೆ ಮಾರಣಾಂತಿಕ ಹಲ್ಲೆಯಾಗಿದ್ದು ಅವರು ತಮ್ಮ ಲಾಂಡ್ರಿ ಅಂಗಡಿಯನ್ನು ಮುಚ್ಚುತ್ತಿದ್ದ ಸಂದರ್ಭದಲ್ಲಿ. ರುದ್ರೇಶ್, ಬೆಂಗಳೂರಿನ ಜನನಿಬಿಡ ಪ್ರದೇಶವಾದ ಶಿವಾಜಿನಗರದಲ್ಲಿ ಕೊಲೆಯಾಗಿದ್ದು ನಟ್ಟಹಗಲಿನಲ್ಲಿ, ರಸ್ತೆ ಬದಿ ತನ್ನ ವಾಹನ ನಿಲ್ಲಿಸಿ ಗೆಳೆಯನ ಜೊತೆ ಲೋಕಾಭಿರಾಮ ಮಾತಾಡುತ್ತ ನಿಂತಿದ್ದಾಗ. ಅಂದರೆ, ಸಿರಿಯಾ, ಅಫಘಾನಿಸ್ತಾನ, ಪಾಕಿಸ್ತಾನದಂಥ ದೇಶಗಳ ಭಯೋತ್ಪಾದಕ ಸ್ಥಳಗಳಲ್ಲಿ ಎಂಥ ಪರಿಸ್ಥಿತಿ ಇದೆಯೋ ಅಂಥಾದ್ದೇ ಒಂದು ಪ್ರಕ್ಷುಬ್ಧ ದಮನಕಾರಿ ಪರಿಸ್ಥಿತಿ ನಮ್ಮ ರಾಜ್ಯದಲ್ಲೇ ನಿರ್ಮಾಣಗೊಳ್ಳುತ್ತಿದೆ. ಐಸಿಸ್ ಮನಸ್ಥಿತಿಯ ಜೆಹಾದಿ ಶಕ್ತಿಗಳು ಕರ್ನಾಟಕದಲ್ಲಿ ಈಗಾಗಲೇ ಭದ್ರವಾಗಿ ಬೇರೂರಿದ್ದು ತಮ್ಮ ಅಟ್ಟಹಾಸ ಮೆರೆಯಲು ಪ್ರಾರಂಭಿಸಿಬಿಟ್ಟಿವೆ. ಕಾಂಗ್ರೆಸ್ ಕಳೆದ ಏಳು ದಶಕಗಳಲ್ಲಿ ದೇಶವನ್ನು ಹೇಗೆ ನರಿನಾಯಿಗಳಿಗೆ ಹಂಚಿಕೊಂಡು ಬಂದಿದೆಯೋ ಅದರ ಮುಂದುವರಿಕೆಯೆಂಬಂತೆ ಕರ್ನಾಟಕದಲ್ಲಿ ಅದೇ ಪಕ್ಷ ಜೆಹಾದಿಸ್ಟ್‍ಗಳಿಗೆ ನೆಲೆಯೊದಗಿಸುತ್ತಿದೆ. ಸಣ್ಣಪುಟ್ಟ ವಿಷಯಗಳಿಗೆಲ್ಲ ಜಾಲತಾಣದಲ್ಲಿ ಬರೆದುಕೊಳ್ಳುವ ನಿಷ್ಪಾಪಿಗಳನ್ನು ಇಲ್ಲಸಲ್ಲದ ಕೇಸುಗಳಲ್ಲಿ ಸಿಕ್ಕಿಸಿ ಹಾಕಿ ಠಾಣೆ-ಕೋರ್ಟು ಅಲೆಸುವ ವ್ಯವಸ್ಥೆ, “ಇವತ್ತು ನಿನ್ನ ಕೊಲೆ, ನಾಳೆ ಅವನ ಕೊನೆದಿನ” ಎಂದೆಲ್ಲ ಓಪನ್ ಆಗಿ ಫೇಸ್‍ಬುಕ್‍ನಲ್ಲಿ ಕೊಲೆ ಬೆದರಿಕೆ ಹಾಕುವ ಜೆಹಾದಿ ಗುಂಪುಗಳನ್ನು ಮುಟ್ಟುವುದಕ್ಕೇ ಹೋಗಿಲ್ಲ! ಇವನ್ನೆಲ್ಲ ನೋಡಿದರೆ ನಾವು ಭಾರತವೆಂಬ ಗಣತಂತ್ರ ವ್ಯವಸ್ಥೆಯೊಳಗಿರುವ ರಾಜ್ಯದಲ್ಲಿ ಇದ್ದೇವೆಂದು ನಿಜಕ್ಕೂ ಅನ್ನಿಸುತ್ತದೆಯೇ? ನಮ್ಮ ರಾಜ್ಯಪಾಲರು ಏನು ಮಾಡುತ್ತಿದ್ದಾರೆ? ದೇಶದ ಆಂತರಿಕ ಸುಭದ್ರತೆ ಕಾಪಾಡಬೇಕಿದ್ದ ಇಂಟೆಲಿಜೆನ್ಸ್ ಬ್ಯೂರೋ ಏನು ಮಾಡುತ್ತಿದೆ? ಅಂತಾರಾಷ್ಟ್ರೀಯ ಸಂಬಂಧಗಳ ಬಗ್ಗೆ ಮಾತಾಡುವುದನ್ನು ಕ್ಷಣ ಹೊತ್ತಾದರೂ ಬದಿಗಿಟ್ಟು ನಮ್ಮ ಪ್ರಧಾನಿಗಳು ದೇಶದೊಳಗಿನ ವಿಚ್ಛಿದ್ರಕಾರಿ ಶಕ್ತಿಗಳ ರುದ್ರತಾಂಡವಕ್ಕೆ ಉತ್ತರ ಕೊಡುವುದಾದರೂ ಯಾವಾಗ? ರಾಜ್ಯದಲ್ಲಿ ಮೇಲಿಂದ ಮೇಲೆ ನಡೆದು ಹೋಗಿರುವ ಕೊಲೆಗಳ ಬಗ್ಗೆ – ಅವು ಯಾರದ್ದೇ ಇರಲಿ, ಯಾವ ಸಿದ್ಧಾಂತಕ್ಕೆ ಸೇರಿದವರದ್ದೇ ಇರಲಿ – ಯಾಕೆ ನಡೆಯುತ್ತಿದೆ ಎಂಬ ಬಗ್ಗೆ ಸಣ್ಣ ಸೊಲ್ಲಾದರೂ ಎತ್ತಬೇಕಿದ್ದ ವಿರೋಧಪಕ್ಷ ಈ ರಾಜ್ಯದಲ್ಲಿ ಎಲ್ಲಿ ಕುಡಿದು ಮಲಗಿದೆ? ಸಿಕ್ಕಸಿಕ್ಕವರಿಗೆಲ್ಲ ನೇರವಾಗಿ ಕೊಲೆ ಬೆದರಿಕೆ ಹಾಕುತ್ತ ಸಮಾಜದಲ್ಲೊಂದು ಭಯಭೀತ ವಾತಾವರಣ ಸೃಷ್ಟಿಸುತ್ತಿರುವ ಫೇಸ್‍ಬುಕ್ ಪೇಜ್‍ಗಳನ್ನು ನಿಯಂತ್ರಿಸಲು ಸರಕಾರ ಇನ್ನೆಷ್ಟು ವರ್ಷ ತೆಗೆದುಕೊಳ್ಳಬಹುದು? ಇವೆಲ್ಲ ರಾಜ್ಯದ ಪ್ರಜ್ಞಾವಂತ ಪ್ರಜೆಗಳನ್ನು ನಿತ್ಯ ಕಾಡುತ್ತಿರುವ ಪ್ರಶ್ನೆಗಳು. ಉತ್ತರ ಕೊಡುವವರು ಯಾರು?

ಯು.ಆರ್. ಅನಂತಮೂರ್ತಿಯವರ “ಅವಸ್ಥೆ” ಕಾದಂಬರಿಯಲ್ಲಿ ಒಂದು ಪ್ರಸಂಗ ಬರುತ್ತದೆ. ಸತ್ತುಬಿದ್ದ ಒಂದು ಹುಡುಗಿಯ ಶವವನ್ನು ಇಟ್ಟುಕೊಂಡು ಹಲವರು ಹಲವು ಬಗೆಯ ವ್ಯಾಖ್ಯಾನಗಳನ್ನು ಮಾಡುತ್ತಾರೆ. ಆದರೆ ಅವರ ಎಲ್ಲ ವ್ಯಾಖ್ಯಾನಗಳೂ, ಆ ಕೊಲೆಯನ್ನು ಮುಖ್ಯಮಂತ್ರಿ ತನ್ನ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬೇಕು; ಅದನ್ನು ಬಳಸಿಕೊಂಡು ಮುಂದಿನ ಚುನಾವಣೆಯಲ್ಲಿ ಮತ್ತೆ ಗೆದ್ದು ಬರಬೇಕು ಎಂದೇ ಕೊನೆಯಾಗುತ್ತವೆ. ಅವನ್ನೆಲ್ಲ ಕೇಳಿದ ರಾಜಕೀಯ ಮುಖಂಡ, ಛೆ, ನಾವು ಈ ಸಾವಿಗಾಗಿ ರೋದಿಸುವಷ್ಟೂ ಮಾನವೀಯತೆಯನ್ನು ಉಳಿಸಿಕೊಂಡಿಲ್ಲವೇ? ಶವವನ್ನು ಎದುರಿಟ್ಟುಕೊಂಡು ರಾಜಕೀಯ ಲಾಭ ಎತ್ತಬೇಕಾದಷ್ಟು ಬರಗೆಟ್ಟು ಹೋಗಿದ್ದೇವೆಯೇ? ಆ ಹೆಣ್ಣಿನ ಸಾವಿಗೆ ಶೋಕ ವ್ಯಕ್ತಪಡಿಸುವುದು ನಾವು ಮಾಡಬೇಕಿದ್ದ ಮೊಟ್ಟಮೊದಲ ಕೆಲಸ – ಎಂದು ಹೇಳುತ್ತಾನೆ. ಆ ಪಾತ್ರ ಉತ್ತರಧ್ರುವದಲ್ಲಿ ಕೂತಿದ್ದರೆ ನಮ್ಮ ರಾಜ್ಯದ ಮುಖ್ಯಮಂತ್ರಿಗಳು ದಕ್ಷಿಣ ಧ್ರುವದಲ್ಲಿ ಕೂತಿದ್ದಾರೆ ಎಂದು ಹೇಳಬೇಕು. ಯಾಕೆಂದರೆ, 7ನೇ ತಾರೀಖು ಶುಕ್ರವಾರ, ಮಂಗಳೂರಿನಲ್ಲಿ ಕಾಂಗ್ರೆಸ್ ಸಮಾವೇಶ; ಮುಖ್ಯಮಂತ್ರಿಗಳು ಬಂದು ಹೋಗುವ ಕಾರ್ಯಕ್ರಮ ಇತ್ತು. ಆದರೆ, ಅತ್ಯಂತ ಮಾರಣಾಂತಿಕ ಹಲ್ಲೆಗೆ ಒಳಗಾಗಿ ಹಲವು ಲೀಟರ್‍ಗಳಷ್ಟು ರಕ್ತ ಕಳೆದುಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಮಲಗಿದ್ದ ಆರೆಸ್ಸೆಸ್ ಸ್ವಯಂಸೇವಕ ಶರತ್ 6ನೇ ತಾರೀಖು – ಅಂದರೆ ಗುರುವಾರ – ಬೆಳಗ್ಗೆಯೇ ಮೃತರಾಗಿದ್ದಾರೆ; ಆದರೆ ಸರಕಾರ ಪೊಲೀಸ್ ಇಲಾಖೆಯ ಮೂಲಕ ಆಸ್ಪತ್ರೆಯ ಮೇಲೆ ಒತ್ತಡ ತಂದು, ಶರತ್ ಅವರ ಸಾವಿನ ಸುದ್ದಿಯನ್ನು ಕಾಂಗ್ರೆಸ್ ಸಮಾವೇಶ ಮುಗಿದ ಬಳಿಕವೇ ಬಿಡುಗಡೆಯಾಗುವಂತೆ ಮಾಡಿದೆ ಎಂದು ಮಂಗಳೂರು ಮೂಲದ ವೆಬ್ ಪತ್ರಿಕೆಯೊಂದು  ವರದಿ ಮಾಡಿದೆ. ಇದು ನಿಜವೇ ಆಗಿದ್ದರೆ ಸದ್ಯದ ಈ ಕಾಂಗ್ರೆಸ್ ಮುಖಂಡರಿಗೆ ಜಗತ್ತಿನಲ್ಲೇ ಅತ್ಯಂತ ಲಜ್ಜೆಗೇಡಿ ರಾಕ್ಷಸರು ಎಂಬ ಬಿರುದು ಕೊಡಬಹುದು. ಹೆತ್ತ ತಾಯ ಕರುಳ ಸಂಕಟಕ್ಕಿಂತ ಇವರಿಗೆ ಇವರ ರಾಜಕೀಯ ಸಮಾವೇಶವೇ ಮುಖ್ಯವಾಯಿತೆ? ಶರತ್ ತೀರಿಕೊಂಡ ಸುದ್ದಿಯನ್ನು ಗುರುವಾರವೇ ಬಿಡುಗಡೆಗೊಳಿಸಿಬಿಟ್ಟಿದ್ದರೆ ಮುಖ್ಯಮಂತ್ರಿಗೆ ಕರಾವಳಿ ಕಡೆ ಬರುವುದು ಇರಲಿ, ಸಮಾವೇಶ ನಡೆಸುವುದಕ್ಕೇ ಆಗುತ್ತಿರಲಿಲ್ಲ ಎಂಬ ಕಾರಣಕ್ಕೆ ಸಾವಿನ ಸುದ್ದಿಯನ್ನು ತಡೆ ಹಿಡಿದದ್ದು ಬಹುಶಃ ಕರ್ನಾಟಕದ ಇತಿಹಾಸದಲ್ಲೇ ನಡೆದಿರುವ ಅತ್ಯಂತ ಅಮಾನವೀಯ ಘಟನೆ. ಇಂಥ ರಕ್ಕಸರ ನಡತೆಗೆ ಆ ತಾಯಿಯ ಕರುಳು ಅದೆಂಥ ಶಾಪ ಕೊಟ್ಟಿದೆಯೋ ದೇವರಿಗೇ ಗೊತ್ತು!  

ಮಲ್ಲಿಕಾರ್ಜುನ ಬಂಡೆ, ಡಿ.ಕೆ. ರವಿ, ಡಾ. ಎಂ.ಎಂ. ಕಲ್ಬುರ್ಗಿ, ವಿಶ್ವನಾಥ್, ಕುಟ್ಟಪ್ಪ, ಮೈಸೂರು ರಾಜು, ಪ್ರಶಾಂತ್ ಪೂಜಾರಿ, ವಾಮನ ಪೂಜಾರಿ, ರುದ್ರೇಶ್, ಯೋಗೀಶ್, ವಾಸು, ಶರತ್ – ಇವೆಲ್ಲ ಕೆಲವು ಹೆಸರುಗಳಷ್ಟೇ. ರಾಜ್ಯದಲ್ಲಿ ತಿಂಗಳಿಗೊಂದು ಎನ್ನುವಂತೆ ಇಂಥ ಕೊನೆಗಾಣದ ಕೊಲೆ ಪ್ರಕರಣಗಳು ಹೊಸದಾಗಿ ದಾಖಲಾಗುತ್ತಿವೆ. ಕೆಲವು ಕೊಲೆಗಳನ್ನು ಸರಕಾರದೊಳಗಿರುವವರೇ ದ್ವೇಷದಿಂದ ಮಾಡಿಸುತ್ತಿದ್ದಾರೋ ಎಂಬ ಅನುಮಾನ ಬರುವಂತಿದೆ. ತನಿಖೆ ಶುರು ಮಾಡಿದ ಹೆಚ್ಚಿನ ಯಾವ ಪ್ರಕರಣಗಳೂ ಕೊನೆ ಕಂಡಿಲ್ಲ. ಕಲ್ಬುರ್ಗಿಯಂಥ ಪ್ರಮುಖರ ಕೊಲೆಗಳ ವಿಚಾರದಲ್ಲಿ ಆರ್ಥಿಕ ತೊಂದರೆಯ ಕಾರಣ ಕೊಟ್ಟು ಸಿಐಡಿಯಂಥ ಇಲಾಖೆಯೇ ಕೈ ಚೆಲ್ಲಿ ಕೂತಿದೆ! ಈ ಎಲ್ಲ ಶವಗಳಿಗೆ ಎಂದು ಅಂತ್ಯಸಂಸ್ಕಾರ? ಎಂದು ಮೋಕ್ಷ? ಮುಂದಿನ ಎಂಟು ತಿಂಗಳಲ್ಲಿ ಕನಿಷ್ಠ ಎರಡಾದರೂ ಪ್ರಕರಣಗಳನ್ನು ಸರಕಾರ ಭೇದಿಸೀತೇ? ಅಥವಾ ಇವನ್ನೆಲ್ಲ ನೀರು-ನೆಲೆ ಕಾಣದ ರಣಪಿಶಾಚಿಗಳಂತೆ ಹಾಗೇ ಅನುಮಾನದ ಕೊಕ್ಕೆಗಳಿಗೆ ತೂಗಿಸಿ ದಿನ ತಳ್ಳೀತೇ? ಕಾನೂನು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವಾಲಯವೇ ಸದ್ಯಕ್ಕೆ ಸತ್ತುಬಿದ್ದಿದೆ ಎಂಬ ಅನುಮಾನ ರಾಜ್ಯದ ಜನತೆಯದ್ದು!

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!