ಅಂಕಣ ಸಿನಿಮಾ - ಕ್ರೀಡೆ

ಬೋಳುತಲೆಯ ಮೇಲೆ ಜೀವನಪಾಠವನ್ನು ಅನಾವರಣಗೊಳಿಸುವ ಕಥೆ!

ಅವನ ಹೆಸರು ಜನಾರ್ದನ, ವೃತ್ತಿಯಲ್ಲಿ ಕನ್ನಡ ಪ್ರಾಧ್ಯಾಪಕ. ಪ್ರಾಯ ಇಪ್ಪತ್ತೆಂಟಾದರೂ ಮದುವೆ ಮಾತ್ರ ಆಗಿರುವುದಿಲ್ಲ. ಮತ್ತು ಅದಕ್ಕಾಗಿ ಕಷ್ಟ ಪಟ್ಟು ಹೈರಾಣಾಗಿರುತ್ತಾನೆ. ಯಾವುದೆಲ್ಲಾ ಹುಡುಗಿಯರು ಇವನ ನೋಡುತ್ತಾರೋ ಅವರೆಲ್ಲಾ ಇವನನ್ನು ಒಂದೇ ಏಟಿಗೆ ರಿಜೆಕ್ಟ್ ಮಾಡುತ್ತಾರೆ, ಕಾರಣ ಈತನ ಬೊಕ್ಕತಲೆ. ಬೊಕ್ಕತಲೆಯಿಂದಾಗಿ ಆತ ಎದುರಿಸುವ ಸಮಸ್ಯೆ, ಮದುವೆಯಾಗಲು ಪಡುವ ಕಷ್ಟ, ಕಡೇಗೆ ಕಲಿಯುವ ಜೀವನಪಾಠವನ್ನು ಹೇಳುವ ಕಥೆಯೇ ಈ ಮೊಟ್ಟೆಯಾ ಕಥೆ.

ಮಂಗಳೂರಿನ ಜನರೇ ಹೆಚ್ಚಾಗಿರುವ, ಆಲ್’ಮೋಸ್ಟ್ ಹೊಸಬರೇ ಸೇರಿಕೊಂಡು ಮಾಡಿರುವ ಟಿಪಿಕಲ್ ಸಿನೆಮಾ ಇದು.  ಲೋ ಬಜೆಟ್ಟು, ಪರಿಶ್ರಮವೇ ಕ್ರೆಡಿಟ್ಟು. ಸುಹಾನ್ ಪ್ರಸಾದ್ ಜೊತೆಗೆ  ಲೂಸಿಯಾ ಖ್ಯಾತಿಯ ಪವನ್’ಕುಮಾರ್ ನಿರ್ಮಾಣ ಪ್ಲಸ್ಸು, ಎಲ್ಲೂ ಸಿಗದು ಮೈನಸ್ಸು.. ರಾಜ್ ಬಿ ಶೆಟ್ಟಿ ನಿರ್ದೇಶನ ಮತ್ತು ನಟನೆಯಲ್ಲಿ ಅದ್ಭುತವಾಗಿ ಮೂಡಿಬಂದಿರುವ,  ಎರಡು ಘಂಟೆಗಳ ಉದ್ದಕ್ಕೂ ನಕ್ಕು ನಗಿಸುವ ಚಿತ್ರ ಈ “ಒಂದು ಮೊಟ್ಟೆಯಾ ಕಥೆ”

ರಂಗಿತರಂಗ,ರಾಮಾ ರಾಮಾ ರೇ, ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರಗಳಂತೆ,  ಚಿತ್ರದಲ್ಲಿ ಫೈಟ್-ಐಟಂ ಸಾಂಗ್  ಇರಲೇಬೇಕು, ಎನ್ನುವ ಅಲಿಖಿತ ಸಂವಿಧಾನವನ್ನೆಲ್ಲಾ ಗಾಳಿಗೆ ತೂರಿ ಮೂಡಿ ಬಂದ ಚಿತ್ರಗಳಲ್ಲಿ ಇದೂ ಸಹ ಒಂದು.  ಇದುವರೆಗೆ ಹೆಚ್ಚಿನವರು ರಾಜ್’ಕುಮಾರ್ ಅವರ ಹೆಸರನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಂಡಿದ್ದಾರೆ. ರಾಜ್ ಬಿ ಶೆಟ್ಟಿಯವರೂ ಇದಕ್ಕೆ ಹೊರತಲ್ಲ. ಆದರೆ ಎಲ್ಲೂ ಸಹ ಅತಿರಿಕ್ತವೆನಿಸುವುದಿಲ್ಲ. ಇನ್’ಫ್ಯಾಕ್ಟ್.., ರಾಜ್ ಅವರ ಹೆಸರನ್ನು, ಅವರ ಚಿತ್ರಗಳ ಹಾಡನ್ನು ಬಹಳ ಜಾಣ್ಮೆಯಿಂದ ಬಳಸಿಕೊಂಡು ಆ ಹಾಡುಗಳ  ಮೌಲ್ಯವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ಅಂದರೆ ತಪ್ಪಾಗಲಾರದು.  ಮಧ್ಯ-ಮಧ್ಯ ಮೂಡಿ ಬರುವ ಸುಮಧುರವಾದ ಇತರ ಹಾಡುಗಳು ವಿಭಿನ್ನತೆಯನ್ನು ಮೆರೆಯುತ್ತವೆ. ಅದಕ್ಕೊಪ್ಪುವಂತಹಾ ಸಂಗೀತವನ್ನು ಮಿಧುನ್ ಮುಕುಂದನ್ ನೀಡಿದ್ದಾರೆ. ಪ್ರವೀಣ್ ಶ್ರೀಯಾನ್ ಅವರ ಛಾಯಾಗ್ರಹಣವೂ ಉತ್ತಮವಾಗಿಯೇ ಮೂಡಿ ಬಂದಿದೆ.

ಜನಾರ್ದನನ ಪಾತ್ರದಲ್ಲಿ ರಾಜ್ ಬಿ ಶೆಟ್ಟಿಯವರು ಚಿತ್ರದುದ್ದಕ್ಕೂ ಮಿಂಚಿದ್ದಾರೆ. ಎಷ್ಟೊಂದು ನ್ಯಾಚುರಲ್ಲಾಗಿ ನಟಿಸಿದ್ದಾರೆಂದರೆ ಜನಾರ್ದನ ಎನ್ನುವವನು ನಮ್ಮ  ನಡುವೆಯೇ ಇರುವ ಒಬ್ಬ ವ್ಯಕ್ತಿಯಂತೆ ಭಾಸವಾಗುತ್ತದೆ. ಬಹುಶಃ  ಇತರ ಯಾವುದೇ ನಟರಾದರೂ ಅದಕ್ಕಿಂತಲೂ ಹೆಚ್ಚಿಗೆ ನ್ಯಾಚುರಲ್ಲಾಗಿ, ಸರಳವಾಗಿ ನಟಿಸಲು ಸಾಧ್ಯವೇ ಇಲ್ಲವೇನೋ.  ಮುಖ್ಯ ಭೂಮಿಕೆಯಲ್ಲಿ ಬಂದು ಹೋಗುವ ಮೂವರು(ಶ್ರೇಯಾ ಆಂಚನ್,ಶೈಲಾಶ್ರೀ, ಅಮೃತಾ ನಾಯಕ್) ನಟಿಮಣಿಯರೂ ಸಹ ತಮ್ಮ ತಮ್ಮ ಪಾತ್ರಕ್ಕೆ ಸಹಜ ನ್ಯಾಯವನ್ನೊದಗಿಸಿದ್ದಾರೆ.  ಹಾಸ್ಯದೊಂದಿಗೆ ಚಿತ್ರ  ಮುಂದೆ ಸಾಗಿದಂತೆ  ಜನಾರ್ದನನ ನೋವು, ಸಂಕಟಗಳೆಲ್ಲವೂ ಎಲ್ಲೋ ಒಂದು ಕಡೆ ನಮ್ಮದೇ ನೋವು, ಸಂಕಟದಂತೆ ಭಾಸವಾಗುತ್ತದೆ.  ನಾವು ಮದುವೆಯಾಗುವ ಹುಡುಗಿ ದಪ್ಪ ಇರಬಾರದು,  ಹುಡುಗ ಎತ್ತರ ಇರಬೇಕು, ತುಂಬಾ ಪ್ರೆಸ್ಟೀಜುಳ್ಳ ಕೆಲಸದಲ್ಲಿರಬೇಕು, ಆತ ಕಪ್ಪಗೆ ಇದ್ದಾನೆ ಇತ್ಯಾದಿ ಇತ್ಯಾದಿ ಕಂಡೀಶನ್  ಹಾಕಿಕೊಳ್ಳುವ ಮನಸ್ಥಿತಿಯನ್ನು ಹೋಗಲಾಡಿಸಿ, ಅಂತಹಾ ಯಾವುದೇ ಕಂಡೀಶನ್’ಗಳಿಲ್ಲದೆ ಬರೀ ಅಂತಃಸೌಂದರ್ಯವೊಂದಿದ್ದರೆ ಸಾಕು ಮದುವೆಯಾಗುವುದಕ್ಕೆ, ಕೂಡಿ ಬಾಳುವುದಕ್ಕೆ  ಎನ್ನುವ ಸಂದೇಶವನ್ನು ಬಹಳ ಸಿಂಪಲ್  ಆಗಿ ಅಷ್ಟೇ ಎಫೆಕ್ಟಿವ್ ಆಗಿ ಎಕ್ಸಿಕ್ಯೂಟ್ ಮಾಡಿರುವ ಹೆಗ್ಗಳಿಕೆ ನಿರ್ದೇಶಕರದ್ದು.   ಮದುವೆಯಾಗಲು ಹೆಣಗಾಡುವ  ಒಬ್ಬ ಬೊಕ್ಕ ತಲೆಯ ಯುವಕನ ಗೋಳನ್ನು ತೋರಿಸುವುದರ ಜೊತೆಗೆ, ಮದುವೆಯಾಗದೇ ಬಾಕಿ ಉಳಿದ ಹುಡುಗಿ, ತಂಗಿಯರಿಗೂ ಮದುವೆ ಆಗಬೇಕಷ್ಟೇ ಎಂಬ  ಕಾರಣದಿಂದಾಗಿ   ಆಕೆಗೆ ಮನೆಯಲ್ಲಿರುವ ಒತ್ತಡ, ಅನಿವಾರ್ಯತೆಯನ್ನು  ಅತ್ಯಂತ ಸಹಜವಾಗಿ ತೋರಿಸಿರುವ ನಿರ್ದೇಶಕರ  ತಲೆಗೆ ಕೊಡಲೇಬೇಕು.. ಬಹುಮಾನ!  ಅದರಲ್ಲೂ  ಕಡೇಗೆ, “ಬದುಕನ್ನು ಇದ್ದ ಹಾಗೆಯೇ, ಇನ್ನೊಬ್ಬರನ್ನು ಅವರಿದ್ದ ಹಾಗೆಯೇ ಆಕ್ಸೆಪ್ಟ್ ಮಾಡಿಕೊಳ್ಳೋಣ” ಎಂದು ಸಾರುವ ಕೈಮ್ಯಾಕ್ಸನ್ನು ಅತ್ಯಂತ ಅರ್ಥಗರ್ಭಿತವಾಗಿ, ಮನಮುಟ್ಟುವಂತೆ ತೆರೆಗೆ ತಂದ ರಾಜ್ ಬಿ ಶೆಟ್ಟಿಯವರ ನಿರ್ದೇಶನಕ್ಕೆ ಎಲ್ಲರೂ ಹ್ಯಾಟ್ಸ್ ಆಫ್ ಹೇಳಲೇಬೇಕು. ‘ರಾಜ್ ಬಿ ಶೆಟ್ಟಿಯವರ ಬಹಿರ್ತಲೆಯಷ್ಟೇ ಖಾಲಿ, ಅದರೊಳಗೆ ಅಗಾಧ   ಪ್ರತಿಭೆಯು ತುಂಬಿ ತುಳುಕುತ್ತಿದೆ’ ಎನ್ನುವುದನ್ನು ಬರೀ ಬೋಳುತಲೆಯ ಮೇಲೆ ಜೀವನಪಾಠವನ್ನು ಅನಾವರಣಗೊಳಿಸಿದ ರೀತಿಯನ್ನು ನೋಡಿ ಧೈರ್ಯದಿಂದ  ಹೇಳಬಲ್ಲೆ.

ಓವರಾಲ್… ಕನ್ನಡದಲ್ಲಿ ಸ್ವಮೇಕ್ ಚಿತ್ರಗಳು ಹೆಚ್ಚುತ್ತಿವೆ ಎನ್ನುವುದೇ ಖುಷಿಯ ಸಂಗತಿ. ಅಂತಹಾ ಸ್ವಮೇಕ್ ಚಿತ್ರಗಳು ಗೆಲ್ಲುತ್ತಿವೆ ಎನ್ನುವುದು ದೊಡ್ಡ ಖುಷಿಯ ಸಂಗತಿ. ರಂಗಿತರಂಗ, ಲೂಸಿಯಾ, ಉಳಿದವರು ಕಂಡಂತೆ, ರಾಮಾ ರಾಮಾ ರೆ ಮುಂತಾದ  ಹೊಸಬರೇ ಮಾಡಿದ ಹೊಸತನದ ಚಿತ್ರಗಳು ಈಗಾಗಲೇ ಗೆದ್ದಿವೆ. ಅಂತವುಗಳ ಸಾಲಿಗೆ ‘ಒಂದು ಮೊಟ್ಟೆಯ ಕಥೆ’ಯೂ ಸೇರುತ್ತಿರುವುದು ಖುಷಿಯ ವಿಚಾರ. ನೀವೂ ಸಹ ಒಮ್ಮೆ ಈ ಚಿತ್ರವನ್ನು ನೋಡಿ, ಹೊಸಬರನ್ನು ಪ್ರೋತ್ಸಾಹಿಸಿ ಎನ್ನುವುದು ನನ್ನ ಕಳಕಳಿಯ ವಿನಂತಿ!

ರೇಟಿಂಗ್ಸ್: *****

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!