ಅಂಕಣ

ಬೇಲಿ ಹಾಕಿರದ ಭೂಮಿ ಕತೆ – ಹೊಂಬಣ್ಣ

ಪ್ರಕೃತಿ, ಮನುಷ್ಯ, ಬದುಕು ಮತ್ತು ಹೋರಾಟ ನಿರಂತರವಾಗಿ ಜಾರಿಯಲ್ಲಿರುವ ಸಂಗತಿಗಳು. ನಕಾಶೆಯಲ್ಲಿ ಗಡಿಗಳ ತಿದ್ದುವ ನಾವು, ಜಗತ್ತು ಏಕಮಾತ್ರ ಅನ್ನುವ ಪರಿಕಲ್ಪನೆಯನ್ನ ಮರೆತುಬಿಡ್ತೀವಿ. ಜೊತೆಗೆ ನಮ್ಮೊಳಗೇ ಬೇಲಿಗಳನ್ನಿಡುವ ಹುನ್ನಾರದ ಭಾಗವಾಗ್ತೀವಿ.. ಪ್ರಕೃತಿಯ ಅಂಗಳದಲ್ಲಿ ಎಲ್ಲ ಪ್ರಕಾರಗಳನ್ನೊಳಗೊಂಡ ಜನಸಮೂಹವಿದೆ. ಬೇಡಿಕೆಯೊಂದು ಸಂಘರ್ಷವಾದಾಗ, ಹಸಿರು ಬಣ್ಣ ಕೆಂಪು ಕಲೆಗಳ ಆವಾಸವಾಗುತ್ತ ಸಾಗುತ್ತದೆ. ಮನುಷ್ಯನ ಜೀವಿತದ ಅನುಕೂಲಕ್ಕೆ ಕಾನೂನು ಇರಬೇಕೋ ಅಥವಾ ಕಾನೂನಿನ ಚೌಕಟ್ಟಿನಲ್ಲಿ ಮಾತ್ರವೇ ಬದುಕಿನ ಉಸ್ತುವಾರಿ ಹೊತ್ತು ನಡೆಯಬೇಕೋ.. ಅದೆಷ್ಟೋ ವರ್ಷಗಳ ನಡುವಿನ ಪ್ರಕೃತಿಯ ಒಡನಾಟ, ಒಂದು ಭಾವನಾತ್ಮಕ ಸಂಬಂಧ ಇವೆಲ್ಲವನ್ನೂ ಕಾನೂನಿನ ತೀಕ್ಷ್ಣತೆ ಅದೆಷ್ಟರ ಮಟ್ಟಿಗೆ ಎತ್ತಿ ಹಿಡಿಯಬಲ್ಲದು, ಜೊತೆಗೆ ಜನಸಾಮಾನ್ಯ, ಸಮಾಜ ಮತ್ತು ನಾವೇ ರಚಿಸಿಕೊಂಡ ಸರ್ಕಾರಗಳು ಅದೆಷ್ಟರ ಮಟ್ಟಿಗೆ ಸಮಾಜದ ಸೂಕ್ಷ್ಮಗಳಿಗೆ ಇಂದಿನ ಕಾಲಘಟ್ಟದಲ್ಲಿ ಸ್ಪಂದನೀಯವಾಗಿವೆ.. ?! ಹೀಗೆ `ಯಾವ ಪ್ರಾಣಿಯೂ ತನ್ನದೇ ಸಂಕುಲದ ಜೊತೆಗೆ ಸಂಘರ್ಷಕ್ಕೆ ನಿಲ್ಲದಿರುವಾಗ, ಮನುಷ್ಯ ಮಾತ್ರವೇ ನಿರಂತರವಾಗಿ ಇದನ್ನ ಜಾರಿಯಲ್ಲಿಟ್ಟವನು’ ಅನ್ನುವ ಕಟುಸತ್ಯದ ಕಥಾಹಂದರವೇ ಹೊಂಬಣ್ಣ..

ಸುಚೇಂದ್ರ ಪ್ರಸಾದ್ ಅವರ ಧ್ವನಿಯಿಂದ ಶುರುವಾಗುವ ಸಿನೆಮಾ , ಮಲೆನಾಡೆಂಬ ಹಸಿರು ಲೋಕದ ಜನಜೀವನ ಮತ್ತು ಅಲ್ಲಿಯೂ ಇರಬಹುದಾದ ಸಾಧ್ಯತೆಗಳ ಬಗೆಗಿನ ಹೊಸ ಆಯಾಮವನ್ನ ತೆರೆದಿಡುತ್ತಾ ಹೋಗುತ್ತದೆ. ಅದೆಷ್ಟೋ ತಲೆಮಾರಿನಿಂದ `ಆಸೆಯಿಂದಲ್ಲ, ಆದರೆ ಅಗತ್ಯದಿಂದ’ ಸರಕಾರಿ ಭೂಮಿಯಲ್ಲಿ ಕೃಷಿ ನಡೆಸುತ್ತಾ ಬಂದು, ಒಕ್ಕಲೆಬ್ಬಿಸುವ ಹೊತ್ತಲ್ಲಿ ಮುಖಾಮುಖಿಯಾಗುವ ತಲ್ಲಣಗಳ ಕುರಿತಾದ ಕತೆ. ಅಧಿಕಾರ, ಕಾನೂನು ಮತ್ತು ಅಮಾಯಕ ಕುಟುಂಬಗಳ ನಡುವಿನ ಅಸ್ತಿತ್ವದ ಸಂಭಾಷಣೆಯ ಕತೆ. ಜೊತೆಜೊತೆಗೆ ಕ್ರೌರ್ಯದ ಬಗಲಿನಲ್ಲಿ ಜಜ್ಜಿಹೋಗುವ ಮುಗ್ಧತೆಯ ಕತೆ..

ಕಾನೂನಿನ ಅಂಶಗಳನ್ನಿಟ್ಟುಕೊಂಡು ಸಿನೆಮಾ ಮಾಡುವುದು ಕಷ್ಟದ ಕೆಲಸ; ಒಂಥರಾ ಕತ್ತಿಯ ಮೇಲಿನ ನಡಿಗೆಯಂತೆ. ಎಲ್ಲಿಯೂ ಸಂವಿಧಾನಕ್ಕೆ ಅಗೌರವವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ.. ಸಮರ್ಥವಾಗಿ ನಿರ್ದೇಶಕರು ಅದನ್ನ ನಿಭಾಯಿಸಿದ್ದಾರೆ. ಒಂದಷ್ಟು ಪ್ರಶ್ನೆಗಳನ್ನ ಸಿನೆಮಾ ಕೇಳುತ್ತದೆ; ಮಾನವೀಯತೆಯ ನೆಲೆಗಟ್ಟೋ ಅಥವಾ ಕಾನೂನಿನ ಚೌಕಟ್ಟೋ ಅನ್ನೋದು ಸಿನೆಮಾದ ಪೂರ್ತಿ ಧ್ವನಿ.. ಒಂದಷ್ಟು ವರ್ಷಗಳ ಈ ಸಮಸ್ಯೆಯ ಅಧ್ಯಯನ, ನಿರ್ದೇಶನದಲ್ಲಿ ಎದ್ದು ಕಾಣುತ್ತದೆ.. ಅದೆಷ್ಟರ ಮಟ್ಟಿಗೆ ಸೂಕ್ಷ್ಮ ವಿಷಯಗಳಿಗೂ ಗಮನ ಕೊಡಲಾಗಿದೆ ಅಂದರೆ, `ಅದು ಮುಗಿದ ಅಧ್ಯಾಯ’ ಅನ್ನೋವಾಗ ಒಂಟಿ ಕೊಡೆಯೊಂದು ಜಡಿಮಳೆಯಲ್ಲಿ ಹಾರಿಹೋಗುತ್ತದೆ ಮತ್ತೆ ಕಾಣದಂತೆ!! ಮಲೆನಾಡಿನ ದೈನಂದಿನ ಬದುಕು, ಅಲ್ಲಿನ ಆಡುಭಾಷೆ, ಆಚರಣೆಗಳು, ಸಾಮಾಜಿಕ ನಂಬಿಕೆಗಳು, ಉಡುಪು, ಆಹಾರ ಪದ್ಧತಿ ಮತ್ತು ಇವೆಲ್ಲದರ ಮಧ್ಯ ಹೃದಯಗಳ ಪಿಸುಮಾತು.. ಬೂಟಾಟಿಕೆಯಿಲ್ಲದ ಮನಸುಗಳ ಕಲರವದಲ್ಲೂ ಒಂದಷ್ಟು ಕೀರಲು ಸ್ವರದ ಪ್ರವೇಶವಾಗುತ್ತದೆ ಮತ್ತು ಅದು ಎಲ್ಲ ಸಮಾಜದ ಲಕ್ಷಣ ಕೂಡಾ.. ಹೀಗೇ ನಿಸ್ವಾರ್ಥ ಕುಟುಂಬಗಳ ಅಸ್ತಿತ್ವದ ಹೋರಾಟ, ಸಿನೆಮಾ ಅನ್ನುವುದಕ್ಕಿಂತಲೂ ಮಿಗಿಲಾಗಿ ಒಂದು ಮೂಕಸಾಕ್ಷಿಯಾಗಿ ಉಳಿಯುತ್ತದೆ..

ಕತೆಯ ಸೂತ್ರಧಾರನಂತೆ ಸುಚೇಂದ್ರ ಪ್ರಸಾದ್ ಅವರು ಪೂರ್ತಿ ಸಿನೆಮಾವನ್ನ ಆವರಿಸಿಕೊಳ್ತಾರೆ ಮತ್ತು ಎಲ್ಲ ಸಂಘರ್ಷದಲ್ಲಿಯೂ ಕಾಲ ಬಿಟ್ಟುಹೋದ ಪಳೆಯುಳಿಕೆಯಾಗಿಯೂ, ಬದಲಾವಣೆಯ ಇದಿರಾಗುವ ಚಾತಕಪಕ್ಷಿಯಂತೆಯೂ ಕಾಣುತ್ತಾರೆ. ಮುಗ್ಧ ಮಲೆನಾಡ ನಿವಾಸಿಯಾಗಿ ಸುಬ್ಬು ತಲಬಿ ಜೀವ ತುಂಬಿದ್ದಾರೆ. ವರ್ಷಾ ಮತ್ತು ಪವಿತ್ರಾ , ಮಲೆನಾಡ ಹುಡುಗಿಯ ನಾಚಿಕೆಯ ಪ್ರತಿರೂಪದಂತಿದ್ದಾರೆ. ಧನು ಗೌಡ ನಮ್ಮ ಚಿತ್ರರಂಗದ ಮುಂದಿನ ಭರವಸೆಯ ನಟರಲ್ಲಿ ಒಬ್ಬರಾಗ್ತಾರೆ ಅನ್ನೋ ಭರವಸೆ ಅಂತೂ ಮೂಡ್ತಿದೆ. ದತ್ತಣ್ಣ ಅವ್ರದ್ದು ಎಂದಿನಂತೆ ಮಾಗಿದ ಅಭಿನಯ. ಅರಣ್ಯಾಧಿಕಾರಿ ಪಾತ್ರದ ಎರಡು ಭಿನ್ನ‌ ಆಯಾಮ ಚೆನ್ನಾಗಿದೆ. ಪೋಲೀಸ್ ಅಧಿಕಾರಿಯ ಖಡಕ್ ಪಾತ್ರಕ್ಕೆ ಖಂಡಿತವಾಗಿಯೂ ಖದರ್ ಇದೆ.. ಸಹಕಲಾವಿದರೆಲ್ಲರೂ ಅವರವರ ಪರಿಧಿಯಲ್ಲಿ ಮಾಗಿದ ಅಭಿನಯವನ್ನೇ ನೀಡಿದ್ದಾರೆ. ಹಿನ್ನೆಲೆ ಸಂಗೀತ ಒಂದು ವಿಭಿನ್ನ ವಾತಾವರಣವನ್ನ ಕಟ್ಟಿಕೊಡುತ್ತದೆ ಮತ್ತು ಆಚೆ ಬಂದಮೇಲೂ ಗುಂಗಲ್ಲಿ ಹಿಡಿದಿಟ್ಟುಕೊಳ್ಳುತ್ತದೆ. ಸಿನೆಮಾದ ಬಹುತೇಕ ಭಾಗ ಮಲೆನಾಡ ಕಾಡುಗಳಲ್ಲಿ ಚಿತ್ರೀಕರಣಗೊಂಡಿದೆ; ಸಿನೆಮಾಟೋಗ್ರಫಿ ಅಚ್ಚುಕಟ್ಟಷ್ಟೇ ಅಲ್ಲದೇ ಖುಷಿ ಕೊಡತ್ತೆ.. ರಾಮಕೃಷ್ಣ ನಿಗಡೆಯವರಂಥ ನಿರ್ಮಾಪಕರ ಅವಶ್ಯಕತೆ ಖಂಡಿತವಾಗಿಯೂ ನಮ್ಮ ಚಿತ್ರರಂಗಕ್ಕಿದೆ; ಗುಣಮಟ್ಟದ ಇನ್ನಷ್ಟು ಚಿತ್ರಗಳನ್ನ ಅವರು ನಿರ್ಮಿಸುವಂತಾಗಲಿ. ಇನ್ನು ನಿರ್ದೇಶನ, ತುಂಬಾನೇ ಶ್ರದ್ಧೆ ಮತ್ತು ಕಾಳಜಿಯಿಂದ ಒಂದು ಸಾಮಾಜಿಕ ಸಮಸ್ಯೆಯನ್ನ ತೆರೆಮೇಲೆ ತಂದು ಸಿನಿಮೀಯವಾಗಿಸಿ ಸಹನೀಯವಾಗಿಸುವುದು ಸುಲಭದ ಮಾತಲ್ಲ. ತುಡಿತವಿರುವ ಇನ್ನೊಬ್ಬ ನಿರ್ದೇಶಕ ನಮ್ಮ ಚಿತ್ರರಂಗಕ್ಕೆ ದೊರಕಿದ್ದಾರೆ ಎನ್ನಬಹುದು. ಇಡೀ ಸಿನೆಮಾದಲ್ಲಿ ಹಾಡುಗಳು ಸ್ವಲ್ಪ ಜಾಸ್ತಿ ಆದವೇನೋ ಅಂತ ಒಂಚೂರು ಅನಿಸುತ್ತದೆ. ವಾಣಿಜ್ಯಿಕ ( ಕಮರ್ಶಿಯಲ್) ಸಿನಿಮೀಯ ಅಂಶಗಳು ಕಡಿಮೆ ಅಂತನ್ನಿಸಬಹುದು. ಇಲ್ಲಿನ ಕತೆಗೆ ನಾವು ನೀವು ಎಣಿಸುವಂಥ ಅಂತ್ಯ ಸಿಗಲಾರದೇನೋ ಬಹುಶಃ. ತಾರ್ಕಿಕವಾಗಿ ಅಂತ್ಯದಂತೆ ಕಂಡರೂ, ಅಲ್ಲಿಂದ ಮತ್ತಷ್ಟು ಪ್ರಶ್ನೆಗಳು ಹುಟ್ಟಿಕೊಂಡು ಉತ್ತರಕ್ಕಾಗಿ ಪೀಡಿಸುತ್ತವೆ.

ಒಂದು ಊರಿನ ಸಮಸ್ಯೆಯ ಕುರಿತಾಗಿದ್ದ ಹೋರಾಟ ಕೊನೆಯಲ್ಲಿ ಒಂದು ಸಮಾಜ ಮತ್ತು ಸಮಸ್ತ ಮನುಕುಲದ ವ್ಯವಸ್ಥಿತ ಪಿಡುಗುಗಳಿಗೆ ಮುಖಾಮುಖಿಯಾಗುತ್ತದೆ.. ಒಟ್ಟಿನಲ್ಲಿ ನಮ್ಮ ಚಿತ್ರರಂಗದ ಸಿದ್ಧಸೂತ್ರಗಳ ಮೊರೆ ಹೋಗದೇ ತಯಾರಾದ ಭಿನ್ನ‌ ಅಭಿರುಚಿಯ ಚಿತ್ರ ಇದು. ಊರದಾರಿಗಳು ಮತ್ತೆ ನಮ್ಮನ್ನ ಮಾತನಾಡಿಸಿದಂತೆ ಅನಿಸಬೇಕಿದ್ದಲ್ಲಿ , ಊರ ಮಣ್ಣ ವಾಸನೆ ಮತ್ತೆ ಮೂಗಿಗೆ ಅಡರಬೇಕೆಂದಲ್ಲಿ ಖಂಡಿತಾ ಒಮ್ಮೆ ಹೋಗಿ ನೋಡಿ.

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!