ಅಂಕಣ

ಬರವಣಿಗೆಯೆನ್ನುವ ಹುಣ್ಣನ್ನು ಕೆರೆಯುತ್ತಿದ್ದರೇನೇ ಸುಖ!

ಬಿಟ್ಟರೂ ಬಿಡದೀ ಮಾಯೆ ಎನ್ನುತ್ತಾರಲ್ಲ…ಪ್ಯಾಶನ್ನ್ ಎನ್ನುವುದು ಸಹ ಹಾಗೇನೇ.. ಪ್ರೊಫೆಶನ್’ನಲ್ಲಿ ನಾವು ಏನೇ ಅಗಿರಲಿ. ಪ್ಯಾಶನ್ ಕಡೆಗಿನ ತುಡಿತ ಹೆಚ್ಚುತ್ತಲೇ ಇರುತ್ತದೆ. ಲೈಫಲ್ಲಿ  ನಾವು ಅದೆಷ್ಟೇ ಬ್ಯುಸಿಯಾಗಿರಲಿ, ಗುಡ್ಡ ಕಡಿಯುವ ಕೆಲಸವೇ ಇರಲಿ, ಅವೆಲ್ಲದರ ನಡುವೆಯೂ ನಮ್ಮನ್ನು ಇನ್ನಿಲ್ಲದಂತೆ ಕಾಡುವುದು ಈ ಪ್ಯಾಶನ್. ಅದು ಬರೀ ಹವ್ಯಾಸವೋ ಇಲ್ಲಾ ಚಟವೋ.. ಗೊತ್ತಿಲ್ಲ. ಅಪರೂಪಕ್ಕೊಮ್ಮೆಯಾದರೂ ಅದರೊಂದಿಗೆ ಮಿಲನ ಹೊಂದದಿದ್ದರೆ ಜೀವನದಲ್ಲಿ ಸುಖವೇ ಇಲ್ಲ.  ಯಾವ ರಸವೂ ಇಲ್ಲ.  ಒಮ್ಮೆ ಮಿಲನ ಹೊಂದಿದರೆ ಸುಖವೋ ಸುಖ! ನನ್ನ ಲೆಕ್ಕದಲ್ಲಿ, ಜೀವನದಲ್ಲಿ ಪ್ಯಾಶನ್ ಅನ್ನೋದು ಇಲ್ಲದ ಮನುಷ್ಯ  ಇರಲಿಕ್ಕಿಲ್ಲ. ಓದುವುದೋ, ಬರೆಯುವುದೋ, ನಟಿಸುವುದೋ, ಆಡುವುದೋ.. ಹೀಗೆ ಒಂದಲ್ಲಾ ಒಂದು ರೀತಿಯ ಪ್ಯಾಶನ್ ಇದ್ದೇ ಇರುತ್ತದೆ. ಏನಾದರೂ ಇರಲಿ, ನಾನಿಲ್ಲಿ ಹೇಳಲು ಹೊರಟಿರುವುದು ನನ್ನ ಪ್ಯಾಶನ್, ಬರವಣಿಗೆಯ ಬಗ್ಗೆ.

ಒಂದು ಲೆಕ್ಕದಲ್ಲಿ ಇದೊಂದು ಅತ್ಯಂತ ಕ್ಲಿಷ್ಟಕರವಾದ ಪ್ಯಾಶನ್. ನೀವು ಹವ್ಯಾಸಿ ಯಕ್ಷಗಾನ ಕಲಾವಿದರಾಗಬೇಕೆಂದುಕೊಂಡರೆ ನಿಮಗದನ್ನು ಹೇಳಿ ಕೊಡುವ ಗುರು ಸಿಗುತ್ತಾರೆ, ಸಂಗೀತ ಕಲಿಯಬೇಕೆಂದರೆ ಅದನ್ನೂ ಹೇಳಿಕೊಡುವವರು ಸಿಗುತ್ತಾರೆ. ಅವೆಲ್ಲ ಸುಲಭ ಅಂತ ಸಣ್ಣ ಮಾಡುತ್ತಿಲ್ಲ. ಒಂದಷ್ಟು ಸಮಯ, ಮತ್ತು ಆಸಕ್ತಿಯಿದ್ದರೆ ಆಯಿತು. ಆದರೆ ಬರವಣಿಗೆಯೆನ್ನುವುದು ಹಾಗಲ್ಲ. ಅದನ್ನು ಯಾರೂ ಹೇಳಿ ಕೊಡುವುದೂ ಇಲ್ಲ, ಹೇಳಿಕೊಟ್ಟು ಬರುವಂತದ್ದೂ ಅದಲ್ಲ. ಮೊದಮೊದಲು ಅಪ್ರಬುದ್ಧವಾಗಿ ಹುಟ್ಟಿಕೊಂಡು ಬರೆಯುತ್ತಾ ಹೋದಂತೆ ಪ್ರಬುದ್ಧವಾಗುತ್ತಾ ಹೋಗುವುದು ಬರವಣಿಗೆ. ಬರೆದದ್ದರಲ್ಲೇನು ತಪ್ಪಿದೆ? ಅದನ್ನು ಹೇಗೆ ಸರಿಪಡಿಸಿಕೊಳ್ಳಬಹುದು? ಹೇಗೆ ಬರೆದರೆ ಓದುಗ ದೊರೆ ಸಂತೃಪ್ತನಾಗಬಹುದು? ಮುಂತಾದ ಪಾಠಗಳನ್ನು ಅದುವೇ ಸ್ವತಃ ನಮಗೆ ಕಲಿಸಿಕೊಡುತ್ತದೆ. ಇನ್ನೊಬ್ಬರು ಹೇಳಿ ಕಲಿಯುವುದಕ್ಕಿಂತ ಓದುಗರ ಅಭಿರುಚಿಗೆ ಹೊಂದಿಕೊಂಡು  ನಾವೇ ಕಲಿತುಕೊಳ್ಳುತ್ತೇವೆ.

ನಾನು ಮೂಲತಃ ವಿಜ್ಞಾನದ ವಿದ್ಯಾರ್ಥಿ. ಪಬ್ಲಿಕ್ಕು ಎಕ್ಸಾಮು, ಸಿಯಿಟಿ ಕ್ಲಾಸು, ತಲೆಯಲ್ಲಿ  ಇಂಜಿನಿಯರಿಂಗ್ ಕೋರ್ಸು ಮುಂತಾದ ಜಂಜಾಟಗಳ ನಡುವೆಯೂ ನನಗೆ ಬರವಣಿಗೆಯೆನ್ನುವ ಗೀಳು ಹತ್ತಿಕೊಂಡಿದ್ದು ಹೇಗೆ ಅಂತ ಓಪನ್ನಾಗಿ ಹೇಳುತ್ತೇನೆ ಕೇಳಿ. ಚಿಕ್ಕಂದಿನಿಂದಲೇ ಬಾಲಮಂಗಳ, ಚಿತ್ರಕಥೆ ಮುಂತಾದವುಗಳನ್ನು ಓದುವ ಹವ್ಯಾಸ ಶುರುವಾಗಿತ್ತು. ಮನೆಗೆ ತರಿಸಿ ಓದುವಷ್ಟು ಅನುಕೂಲ ನಮಗಿಲ್ಲದಿದ್ದರಿಂದ ಸ್ನೇಹಿತನೊಬ್ಬನ ಬಳಿ ಎರವಲು ಪಡೆದು ಓದಿಕೊಳ್ಳುತ್ತಿದ್ದೆ. ದೊಡ್ಡವನಾದಂತೆ ಬಾಲಮಂಗಳ ಹೊಗಿ ಮಂಗಳ ಕೈ ಸೇರಿತು. ಮೀಸೆ ಚಿಗುರುವ ಪ್ರಾಯದಲ್ಲಿ  ವಾರಕ್ಕೊಮ್ಮೆ ಬರುತ್ತಿದ್ದ ಮಸಾಲೆಭರಿತ  ಪತ್ತೇಧಾರಿ ಕಾದಂಬರಿಗಳುಗಳು ಓದುವ ಗೀಳನ್ನು ಮತ್ತಷ್ಟು ಹೆಚ್ಚಿಸಿತು.  ಆದರೆ ಅವೆಲ್ಲವೂ ನನ್ನನ್ನು ಓದಿಸಿಕೊಂಡು ಹೋಗಿತ್ತೇ ವಿನಹ ಬರವಣಿಗೆಯತ್ತ ಎಂದೂ ಕರೆದೊಯ್ಯಲಿಲ್ಲ.

ಆದರೆ, ಒಂಬತ್ತು ಹತ್ತನೆ ತರಗತಿಯ ಆಸುಪಾಸಿನಲ್ಲೆಲ್ಲೋ ವಿಜಯಕರ್ನಾಟಕ ಪತ್ರಿಕೆ ಓದುವುದಕ್ಕೆ ಸಿಕ್ಕಿತ್ತು.  ವಿಜಯಕರ್ನಾಟಕ ಪತ್ರಿಕೆ ಉತ್ತುಂಗದಲ್ಲಿದ್ದ ಕಾಲ ಅದು. ನನ್ನಂತಹ ಅದೆಷ್ಟೋ ಯುವ ಮನಸ್ಸುಗಳನ್ನು ಮೋಡಿ ಮಾಡಿದ, ಪ್ರಚೋದಿಸಿದ ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ ಮುಂತಾದ ಫೈರ್ ಬ್ರಾಂಡ್ ಅಂಕಣಕಾರರ ಉತ್ಕೃಷ್ಠ ಮಟ್ಟದ ಲೇಖನಗಳು ಬರುತ್ತಿದ್ದ ಕಾಲ ಅದು. ಇವತ್ತು ನನಗೆ ಮೇಲೆ ಉಲ್ಲೇಖಿಸಿದ ಇಬ್ಬರ ಕೆಲವು  ವಿಚಾರಧಾರೆಗಳಲ್ಲಿ ಭಿನ್ನಾಭಿಪ್ರಾಯಗಳಿರಬಹುದು. ಹಾಗಂದ ಮಾತ್ರಕ್ಕೆ ತಮ್ಮ ಬರಹಳಿಂದಲೇ ನನಗೆ ಪ್ರೇರಣೆ ನೀಡಿದ ಅವರನ್ನು ನೆನೆಯದೇ ಇರಲು ನನ್ನ ಆತ್ಮಸಾಕ್ಷಿ ಖಂಡಿತಾ ಒಪ್ಪದು.

ಸೆಕೆಂಡ್ ಪಿಯುಸಿಯಲ್ಲಿದ್ದಾಗ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಪ್ರತಾಪ್ ಸಿಂಹ ಬಂದಿದ್ದರು. ಪ್ರತಾಪ್ ಹವಾ ಎಷ್ಟಿತ್ತೆಂದರೆ, ಅವರು ಗೆಸ್ಟ್ ಅಗಿ ಬರುತ್ತಾರೆ ಎನ್ನುವ ವಿಷಯ ಬರೀ ನಮ್ಮ ಪಿಯು ಕಾಲೇಜು ಮಾತ್ರವಲ್ಲದೆ ಪಕ್ಕದ ಡಿಗ್ರಿ, ಇಂಜಿನಿಯರಿಂಗ್ ಕಾಲೇಜಿನಲ್ಲೂ ಸೆನ್ಸೇಶನ್ ಕ್ರಿಯೇಟ್ ಮಾಡಿತ್ತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರತಾಪ್’ರನ್ನು ನೋಡಲು ವಿದ್ಯಾರ್ಥಿಗಳು  ಮುಗಿ ಬಿದ್ದಿದ್ದರು ಮತ್ತು ಸಾಲುಗಟ್ಟಿ ನಿಂತು ಹಸ್ತಾಕ್ಷರ ಪಡೆದುಕೊಂಡಿದ್ದರು. ಸೆಲ್ಫಿ ಆವಾಗ ಇಲ್ಲದಿದ್ದರೂ ಸಹ ಫೋಟೋ ಹೊಡೆಸಿಕೊಂಡಿದ್ದರು. ಅಂತಹಾ ವಿದ್ಯಾರ್ಥಿಗಳಲ್ಲಿ ನಾನೂ ಸಹ ಒಬ್ಬ!

ಪ್ರತಾಪ್ ಬರುವುದಕ್ಕೆ ಮೊದಲೇ ಲೇಖನವೊಂದನ್ನು ಬರೆದು ರೆಡಿ ಇಟ್ಟುಕೊಂಡಿದ್ದ ನಾನು ಅವರನ್ನು ಭೇಟಿಯಾಗುತ್ತಲೇ ಲೇಖನವನ್ನು ಕೈಗಿತ್ತು “ಇದನ್ನು ವಿಜಯಕರ್ನಾಟಕದಲ್ಲಿ ಪ್ರಕಟಿಸಿ” ಅಂತ ಕೋರಿಕೊಂಡಿದ್ದೆ. ಒಂದು ವಾರದ ಬಳಿಕ ಆ ಲೇಖನ ‘ವಾಚಕರ ವಿಜಯ’ದಲ್ಲಿ  ಪ್ರಕಟವಾಯ್ತು. ವಾಚಕರ ವಿಜಯದಲ್ಲಿ ಬಂದಿದ್ದು ನನಗೆ ಎಷ್ಟು ಮಾತ್ರಕ್ಕೂ ಸಮಾಧಾನ ಕೊಡಲಿಲ್ಲ. ಬರೆದದ್ದು  ಮೊದಲ ಲೇಖನವಾದರೂ ಮೇನ್ ಕಾಲಂನಲ್ಲೇ ಬರಬೇಕೆಂಬುದು ನನ್ನ ಎಕ್ಸ್’ಪೆಕ್ಟೇಶನ್ ಆಗಿತ್ತು.

ಏನಾದರಾಗಲಿ.. ಮೇನ್ ಕಾಲಂನಲ್ಲೇ ಬರಬೇಕೆಂಬ ಹಠ ನನಗೆ.. ಎಂತೆಂತವರ ಲೇಖನಗಳೇ ಪ್ರಕಟವಾಗುವುದಿಲ್ಲ ಇನ್ನು ನನ್ನದು ಯಾವ ಲೆಕ್ಕ? ಎಂಬುದು ನನಗೆ ತಿಳಿದಿದ್ದರೂ ಸಹ ಪ್ರಯತ್ನವನ್ನಂತೂ ಮುಂದುವರಿಸಿದೆ. ಮತ್ತೊಂದು ಲೇಖನ ಬರೆದೆ. ಒಮ್ಮೆ ಬರೆದಿದ್ದನ್ನು ಮತ್ತೊಮ್ಮೆ ಓದಿ ಹತ್ತಾರು ಕಡೆ ಚಿತ್ತು ಚಿತ್ತು ಮಾಡಿ ಅದಕ್ಕೊಂದು ಫೈನಲ್ ಟಚ್ ಕೊಟ್ಟೆ. ಆವತ್ತು ನನ್ನ ಬಳಿ ಕಂಪ್ಯೂಟರ್ ಆಗಲೀ, ಇಂಟರ್’ನೆಟ್ ಆಗಲೀ ಇರಲಿಲ್ಲ, ಹೋಗಲಿ ಇ-ಮೇಲ್ ಐಡಿಯೂ ಇರಲಿಲ್ಲ. ಅದೇ, ಬಾಲಮಂಗಳ ಎರವಲು ಕೊಡುತ್ತಿದ್ದನಲ್ಲಾ, ಅವನ ಬಳಿ ಎಲ್ಲವೂ ಇದ್ದಿದ್ದರಿಂದ, ಅವನ ಮನೆಯಲ್ಲಿಯೇ ಲೇಖನವನ್ನು ಟೈಪಿಸಿ ವಿಜಯಕರ್ನಾಟಕಕ್ಕೆ ಮೇಲ್ ಮಾಡಿದೆ.

ಅದಕ್ಕೆ ಉತ್ತರ ಬರಬಹುದೆಂಬ ಯಾವ ನಿರೀಕ್ಷೆಯೂ ನನಗಿರಲಿಲ್ಲ. ಮರುದಿನ ಮೇಲ್ ಚೆಕ್ ಮಾಡಿದ ಸ್ನೇಹಿತ ನನ್ನನ್ನು ಕರೆದು “ನಿನ್ನ ಲೇಖನವನ್ನು ಓದಿ ವಿಶ್ವೇಶ್ವರ ಭಟ್ಟರು ರಿಪ್ಲೈ ಮಾಡಿದ್ದಾರೆ” ಎಂದಾಗ ನನಗೆ ನಂಬಿಕೆಯೇ ಬರಲಿಲ್ಲ. ಮಾನಿಟರನ್ನು ಕಣ್ಣಿಗೆ ಹತ್ತಿರ ಮಾಡಿ ಎರಡೆರಡು ಸಲ ನೋಡಿದಾಗಲೂ ನನಗೆ ಅದೊಂದು ಸ್ವಪ್ನದಂತೆ ಕಂಡಿತು ಅಷ್ಟೇ. “ಆತ್ಮೀಯ ಶಿವಪ್ರಸಾದ್, ನಿಮ್ಮ ಲೇಖನ ಚೆನ್ನಾಗಿದೆ. ಸದ್ಯದಲ್ಲೇ ವಿಜಯಕರ್ನಾಟಕದಲ್ಲಿ ಪ್ರಕಟಿಸುತ್ತೇವೆ” ಎಂಬ ಆ ಎರಡೇ ಎರಡು ವಾಕ್ಯಗಳ ಮೇಲ್ ನೋಡಿದಾಗ ಆದ ಸಂತಸಕ್ಕೆ ಪಾರವೇ ಇರಲಿಲ್ಲ. ಎರಡು ವಾಕ್ಯಗಳ ಆ ಉತ್ತರ ನನಗೆ ನೂರಾರು ವಾಕ್ಯಗಳ ಚಂದದ ಲೇಖನದಂತೆ ಕಂಡಿತ್ತು. ನಿಜ ಹೇಳಬೇಕೆಂದರೆ ನನಗೆ ಬರವಣಿಗೆಯ ಹುಚ್ಚನ್ನು ಹಿಡಿಸಿದ್ದು ಇದೇ ಇ-ಮೇಲ್!  ಇದರ ಪ್ರಿಂಟೌಟನ್ನು  ಸುಮಾರು ವರ್ಷಗಳ ಕಾಲ ತೆಗೆದಿರಿಸಿಕೊಂಡಿದ್ದೆನೆಂದರೆ ಅದು ನನ್ನ ಮೇಲೆ ಎಷ್ಟು ಪ್ರಭಾವ ಬೀರಿತ್ತೆಂದು ನಿಮಗೇ ಅಂದಾಜಿಸಿಕೊಳ್ಳಬಹುದು. ಆದರೆ, ಸ್ಥಳಾವಾಕಾಶದ ಕೊರತೆಯೋ ಇಲ್ಲಾ ಬೇರೇನೋ ಕಾರಣವೋ, ಆ ಲೇಖನವನ್ನವರು ಪ್ರಕಟಿಸಲೇ ಇಲ್ಲ ಎನ್ನುವುದು ಬೇರೆ ವಿಷಯ. ಈಗ ನಾನು ಭಟ್ಟರ ಕೆಲ ವಿಚಾರಗಳಲ್ಲಿ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗಲೆಲ್ಲಾ ಕೆಲವರು ನನಗವರ ಮೇಲೆ ವೈಯಕ್ತಿಕ ದ್ವೇಷ ಅಂತ ಹೇಳ್ತಾರೆ. ಒಂದು ವೇಳೆ ಅದು ನಿಜವೇ ಆಗಿದ್ದರೆ ಆ ದ್ವೇಷ ಮೊದಲು ಹುಟ್ಟಿಕೊಂಡಿದ್ದು ಇಲ್ಲೇ ನೋಡಿ!

ಇದೇ ಸಮಯದಲ್ಲಿ ನನ್ನ ಪಿಯುಸಿ ಮುಗಿದಿತ್ತಷ್ಟೇ. ಅದಾಗಲೇ ಲೇಖನ ಬರೆಯುವ ಗೀಳು ಹತ್ತಿಸಿಕೊಂಡಿದ್ದ ನನಗೆ ಪತ್ರಿಕೋದ್ಯಮ ಸೇರಬೇಕೆನ್ನುವ ತುಡಿತ… “ಬೇಡ, ಅದರಲ್ಲಿ ನಿನಗೆ ಹೆಸರಷ್ಟೇ ಸಿಗೋದು, ಸಂಬಳ ಸಿಗೋದಿಲ್ಲ, ಇಂಜಿನಿಯರಿಂಗ್ ಮಾಡು” ಎನ್ನುವ ಮನೆಯವರ, ನೆಂಟರಿಷ್ಟರ  ಒತ್ತಡ.. ಕೆಮಿಸ್ಟ್ರಿ ಲೆಕ್ಚರರ್ ಒಬ್ಬರು ಕೊಟ್ಟ  ಸಂದರ್ಭೋಚಿತವಾದ ಸಲಹೆ ಏನಂದರೆ “ಇಂಜಿನಿಯರಿಂಗನ್ನೇ ಮಾಡು, ಬರವಣಿಗೆ ಮುಂದುವರಿಸಬೇಕೆಂದಿದ್ದರೆ ಫ್ರೀಲಾನ್ಸರ್ ಆಗಿಯೂ ಮುಂದುವರಿಸಬಹುದು”. ಈ ಐಡಿಯಾಕ್ಕೆ ಮನಸೋತ ನಾನು ಇಂಜಿನಿಯರಿಂಗ್ ಸೇರಿಕೊಂಡೆ. ಲ್ಯಾಬು, ಇಂಟರ್’ನಲ್ಲು, ಎಕ್ಸ್’ಟರ್ನಲ್ಲು, ಕ್ಯಾಂಪಸ್ ಸೆಲೆಕ್ಷನ್’ನ ಸುತ್ತ ಸುತ್ತುವ  ಅದೊಂದು ಮೆಕಾನಿಕಲ್ ಲೈಫ್ ಇದ್ದ ಹಾಗೆ.. ಲೈಫ್ ಅದರಷ್ಟಕ್ಕೆ ಹೋಗುತ್ತಿತ್ತು ಬಿಟ್ಟರೆ ಬೇರೆ ಯಾವುದಕ್ಕೂ ಪುರುಸೊತ್ತು ಇರುತ್ತಿರಲಿಲ್ಲ. ಪುರುಸೊತ್ತು  ಮಾಡಿಕೊಂಡು ಬರೆದು ಕಳುಹಿಸಿದ ಕೆಲ ಲೇಖನಗಳು ಎಲ್ಲೂ ಪ್ರಕಟವಾಗಲಿಲ್ಲ, ಹೋಗಲಿ ಅದಕ್ಕೊಂದು ಉತ್ತರವೂ ಬರಲಿಲ್ಲ. ಬರೆದದ್ದು ಎಲ್ಲೂ ಪ್ರಕಟವಾಗದಿದ್ದರೆ, ಯಾರೂ ಓದದಿದ್ದರೆ ಯಾವ ಕರ್ಮಕ್ಕೆ ಬರೆಯುವುದು? ಇದು ಬರವಣಿಗೆಯನ್ನು ಮುಂದುವರಿಸಿಕೊಂಡು ಹೋಗೆಬೇಕೆಂದಿದ್ದ  ನನ್ನನ್ನು ಅದರಿಂದ ವಿಮುಖನನ್ನಾಗಿಸಿತು.

ಮತ್ತೆ ನಾಲ್ಕು ವರ್ಷ ಬರೆಯಬೇಕೆಂಬ ಆಸೆ ಮೂಗಿನ ಮೇಲೆ ಇದ್ದರೂ  ಸಹ ಬರೆಯಲಾಗಲಿಲ್ಲ. ಮೊದಲು ನನ್ನ ಕೆಲ ಬರಹಗಳನ್ನು ಓದಿಕೊಂಡಿದ್ದ ಕೆಲ ಆತ್ಮೀಯರು “ಬರೆಯುವುದನ್ನು ಬೀಡಬೇಡ, ಕಂಟಿನ್ಯೂ ಮಾಡು” ಅಂದರು. ಇಂಜಿನಿಯರಿಂಗ್ ಮುಗಿಯಿತು. ಕೆಲಸಕ್ಕೆ ಸೇರಿಕೊಂಡ ಬಳಿಕ ಅದರಲ್ಲಿನ ಒತ್ತಡದಿಂದಾಗಿ ಸಮಯವಿದ್ದರೂ ಸಹ ಬರೆಯುವ ಮೂಡ್ ಇರುತ್ತಿರಲಿಲ್ಲ. ಮತ್ತದೆ ಪ್ರಶ್ನೆ,  ಬರೆದದ್ದು ಎಲ್ಲೂ ಪ್ರಕಟವಾಗದಿದ್ದರೆ, ಯಾರೂ ಓದದಿದ್ದರೆ ಯಾವ ಕರ್ಮಕ್ಕೆ ಬರೆಯುವುದು?? ಇದೇ ಸಮಯದಲ್ಲಿ ಸ್ನೇಹಿತನೊಬ್ಬನ ಐಡಿಯಾದಿಂದ ರೀಡೂ ಕನ್ನಡ ಎಂಬ ವೆಬ್’ತಾಣ ಶುರು ಮಾಡಿದೆವು. ಅದು ನನ್ನ ಬರವಣಿಗೆಗೆ ಒಂದು ವೇದಿಕೆಯನ್ನು, ಹತ್ತಾರು ಜನ ಓದುಗರನ್ನೂ ಕೊಟ್ಟಿತು. ಅದಕ್ಕಿಂತಲೂ ಖುಷಿ ಏನಂದ್ರೆ ನನ್ನಂತಹಾ ಹತ್ತಾರು ಹವ್ಯಾಸಿ, ಪ್ರತಿಭಾವಂತ ಬರಹಗಾರರಿಗೆ ತಮ್ಮ ಬರಹಗಳು  ನೂರಾರು ಜನರಿಗೆ ತಲುಪುವಂತೆ ಮಾಡಿತು.

ಇದೊಂದು ದೊಡ್ಡ ಯಶೋಗಾಥೆ ಅಂತ ನಾನಿದನ್ನು ಹೇಳುತ್ತಿಲ್ಲ. ಇನ್’ಫ್ಯಾಕ್ಟ್ ಇದೊಂದು ಹೇಳಿಕೊಳ್ಳುವಂತಹಾ ಮ್ಯಾಟರ್ರೇ ಅಲ್ಲ. ಆದರೆ,  ಅಸಕ್ತಿಯೊಂದಿದ್ದರೆ ಜೀವನಚಕ್ರದ ಜಂಜಾಟದ ನಡುವೆಯೂ  ಎಂತಹಾ ಪ್ಯಾಶನ್ನನ್ನಾದರೂ ಮುಂದುವರಿಸಿಕೊಂಡು ಹೋಗಲು ಸಾಧ್ಯವಿದೆ ಎನ್ನುವುದನ್ನಷ್ಟೇ ಹೇಳುತ್ತಿದ್ದೇನೆ.  ಶ್ರದ್ಧೆ, ನಿರಂತರ ಅಧ್ಯಯನ, ಹೊಸತನವನ್ನು ಅಪ್ಪಿಕೊಳ್ಳುವುದರಿಂದ  ಅದನ್ನು ಸಾಕಾರಗೊಳಿಸಬಹುದು. ಅಂತಹಾ ಪ್ಯಾಶನ್ನುಗಳಲ್ಲಿ  ಬರವಣಿಗೆ ಎನ್ನುವುದು ಕಠಿಣ ತಪಸ್ಸಿದ್ದಂತೆ. ಎಷ್ಟೇ ಕಠಿಣ ತಪಸ್ಸನ್ನು ಮಾಡಿದರೂ  ಅದು ಸಿದ್ಧಿಸುವುದು ಕೆಲವರಿಗೆ ಮಾತ್ರ. ಅದರಲ್ಲೂ ಜನರನ್ನು ಮೆಚ್ಚಿಸುವಂತೆ ಬರೆಯುವ ಕಲೆ ಸಿದ್ಧಿಸುವುದು ಕೆಲವೇ ಕೆಲವರಿಗೆ ಮಾತ್ರ. ಏನೂ  ಬರೆದಿಲ್ಲವೆಂದರೆ ಈ ವಾರ ಬರೆದೇ ಇಲ್ಲ ಎನ್ನುವ ಅಸಮಧಾನ, ಬರೆದ ನಂತರ ಅದನ್ನು ಪರಿಪೂರ್ಣಗೊಳಿಸುವ ತವಕ, ಅದಕ್ಕೆ ಬಂದ ಓದುಗನ ಪ್ರತಿಕ್ರಿಯೆಯನ್ನು ಒಪ್ಪಿಕೊಂಡು ಮುಂದೆ ಸರಿ ಮಾಡಿಕೊಳ್ಳುವ ಗುಣ.. ಒಂದು ಲೆಕ್ಕದಲ್ಲಿ ಬರವಣಿಗೆ ಹುಣ್ಣು ಇದ್ದಂತೆ. ಅವಾಗಾವಾಗ ಕೆರೆದುಕೊಂಡಿದ್ದರೆ ಮಾತ್ರ ಸುಖ.. ನೆಮ್ಮದಿ.. ಸಮಾಧಾನ….. !

Facebook ಕಾಮೆಂಟ್ಸ್

ಲೇಖಕರ ಕುರಿತು

Shivaprasad Bhat

Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!