ಅಂಕಣ

ನಂದನವನದ ನಂದದ ನೆನಪುಗಳು

“ಗತೇ ಶೋಕೋ ನ ಕರ್ತವ್ಯೋ, ಭವಿಷ್ಯಂ ನೈವ್ ಚಿಂತಯೇತ್,ವರ್ತಮಾನೇನ ಕಾಲೇನ ವರ್ತಯಂತಿ ವಿಚಕ್ಷಣಃ” ಎಂಬ  ಸಂಸ್ಕೃತದ ಸುಭಾಷಿತದಂತೆ ಅತೀತದ ಬಗ್ಗೆ ಪಶ್ಚಾತಾಪಿಸದೇ, ಭವಿಷ್ಯದ ಬಗ್ಗೆ ಚಿಂತಿಸದೇ, ಬುದ್ಧಿವಂತರು ಯಾವಾಗಲೂ ವಾಸ್ತವದಲ್ಲಿ ಬದುಕುತ್ತಾರೆ. ಆದರೆ, ಅರಿಯದ ನಾಳೆಯ ಸುಂದರ ಕನಸಿನ ಮಾಯಾಲೋಕದಲ್ಲಿ ಭ್ರಮಿಸುತ್ತಾ, ಇಂದಿನ ವಾಸ್ತವವನ್ನು ಮರೆಯುವ ನಮಗೆ, ಸದಾ ಸವಿನೆನಪಾಗಿ ಮನದಲ್ಲಿ ಅಚ್ಚಾಗಿ  ನಂದದೇ ಉಳಿದ ಎಂದಿಗೂ ಮರೆಯಲಾಗದ ನಿನ್ನೆಯ ದಿನಗಳ ಮಧುರ ನೆನಪಿನ ಸುರುಳಿ ಸದಾ ಆಹ್ಲಾದಕರ!!

ಬಾಲ್ಯದ ಬುಹುಕಾಲ ಕಳೆದದ್ದು ಅಂದಿನ ಕಾಲದ ನಮ್ಮ ಪಾಲಿನ ನಂದನವನವಾಗಿದ್ದ ಬೆಳಗಾವಿ ಜಿಲ್ಲೆಯ ಹಿಡಕಲ್-ಡ್ಯಾಮನಲ್ಲಿ. ಆರ್. ಕೆ.ನಾರಾಯಣರ ಮಾಲ್ಗುಡಿಯಂತೆ ಜೀವನದ ಪ್ರತಿಯೊಂದು ಮಗ್ಗುಲಿನ ನೈಜ ದೃಷ್ಟಿಕೋನವನ್ನು  ತೋರಿಸಿ ತಿಳಿಸಿಕೊಟ್ಟ, ಹಳ್ಳಿ ಮತ್ತು ಪಟ್ಟಣದ ಸಮ್ಮಿಶ್ರ ಪರಿಸರದ ಅಪೂರ್ವ ಸಂಗಮ ಹಿಡಕಲ್ ಡ್ಯಾಮಿನದು. ಉತ್ತಮ ಗುಣಮಟ್ಟದ ಸರಕಾರಿ ಪ್ರಾಥಮಿಕ ಶಾಲೆ ಮತ್ತು ಊರಿಗೆ ಮುಕುಟಪ್ರಾಯವಾದ ಉತ್ಕೃಷ್ಟ ಮಾಧ್ಯಮಿಕ ಶಾಲೆ (ಎಚ್.ಡಿ.ಪಿ.ಎಚ್.ಎಸ್.),ಸೋರುವ ಛತ್ತಿನ ಸದಾ ಚಟುವಟಿಕೆಯ ತಾಣವಾಗಿದ್ದ ಚಿಕ್ಕ ಬಸ್ ನಿಲ್ದಾಣ, ಮಾದಕ ಸುಂದರಿಯರ೦ತಿದ್ದ – ಕಪ್ಪು ಹೊಗೆ ಚಿಮ್ಮಿಸಿ ವಾತಾವರಣವನ್ನು ಕಲುಷಿತಗೊಳಿಸುತ್ತಿದ್ದ ಕಪ್ಪು ಮುಖದ ಹಳೆಯ ಟ್ಯಾಕ್ಸಿಗಳು, ಕ್ರಿಕೇಟ್-ಪ್ರಿಯರ ನೆಚ್ಚಿನ ವಿಶಾಲವಾದ ಮೈದಾನ, ಭಕ್ತಿ-ಪ್ರೇಮರಸದ ಸಂಗಮವಾದ ಶಿವಾಲಯ ಮತ್ತು ಹನುಮಂತದೇವರ ದೇವಾಲಯಗಳು, ಸಾಲು ಸಾಲಾಗಿದ್ದ ತಮಿಳು-ಮಲೆಯಾಳಿಗಳ  ಕಿರಾಣಿ ಅಂಗಡಿಗಳು,ಪ್ರತಿ ಆದಿತ್ಯವಾರಕ್ಕೊಮ್ಮೆ ಸೇರುತ್ತಿದ್ದ ಜನನಿಬಿಡ ಸಂತೆ, ಉಳ್ಳವರ-ಕಳೆದುಕೊಳ್ಳುವರ ಆಶೋತ್ತರ ಈಡೇರಿಸುತ್ತಿದ ಇಸ್ಪೀಟ್ ಕ್ಲಬ್, ಪ್ರೇಮಿಗಳು ಕದ್ದು ಮುಚ್ಚಿ ಓಡಾಡಲು ಅವಕಾಶ ಕಲ್ಪಿಸಿ ಯುವಜನತೆಯ ಸ್ವರ್ಗದಂತಿದ್ದ  ಫಿಲ್ಟರ್ ಹೌಸ್,ಐ.ಬಿ.(ಪರಿವೀಕ್ಷಣ ಮಂದಿರ) ಹಾಗೂ ಡ್ಯಾಮಿನ ಅಕ್ಕಪಕ್ಕದ ಕಾಲುವೆಗಳು, ಪಡ್ಡೆ ಹುಡುಗರ ನೆಚ್ಚಿನ ತಾಣಗಳಾಗಿದ್ದ ಆಗ ತಾನೆ ನಿರ್ಮಾಣ ಹಂತದಲ್ಲಿದ್ದ ಕೆ.ಪಿ.ಸಿ.ಯ ಕ್ವಾರ್ಟರ್ಸ್-ಗಳು (ವಸತಿ  ಕಟ್ಟಡಗಳು)   ಹೀಗೆ ಸಹಜವೆನಿಸಿದರೂ ಅಗಮ್ಯ-ಅನನ್ಯ ವಾತಾವರಣ!

ವಿವಿಧತೆ/ವಿಭಿನ್ನತೆ/ವಿವಾದ-ವಿಷಾದ/ಭಿನ್ನಾಭಿಪ್ರಾಯಗಳ ಮೀರಿ, ಎಡ-ಬಲದ ವಿಚಾರಧಾರೆಯರಿಯದ ನೈಜ ಜ್ಯಾತ್ಯಾತೀತ ಸಮಾಜವನ್ನು ಕಣ್ಣಾರೆ ಕಂಡು ಅನುಭಿಸಿದ ಅನುಭೂತಿಯನ್ನು ಅಕ್ಷರವಾಗಿಸುವ ಪ್ರಯತ್ನವಿದು. ಈಗ ಹೊಳಿ ಹಬ್ಬದಲ್ಲಿ ಅನ್ಯಧರ್ಮೀಯರು ಭಾಗವಹಿಸಿದರೆ ಅದು ಧರ್ಮಕ್ಕೆ ಅಪಚಾರ ಮಾಡಿದಂತಾಗುತ್ತದೆನೋ ಎಂಬ ಭಾವ ಮನೆ ಮಾಡಿ, ಆಚರಣೆಗಳು ಒಂದು ಧರ್ಮ ವಿಶಿಷ್ಟಕ್ಕೆ ಮಾತ್ರ ಸೀಮಿತವಾಗಿವೆ.   ಏಕಮೇವ ಗಂಡಸರ ಹಬ್ಬವೆಂದು ಖ್ಯಾತವಾದ  ಹೋಳಿ ಹುಣ್ಣಿಮೆಗೆ ಹೋಳಿಗೆ ತಿಂದು ಹೊಯ್ಕೊಳ್ಳುವದೆಂದರೆ ಮಕ್ಕಳಿಗೆ ಎಲ್ಲಿಲ್ಲದ ಸಂಭ್ರಮ! ಕಾಮ ದಹನಮಾಡಲು ಕಟ್ಟಿಗೆ ಕಳುವು ಮಾಡುವದು, ಹಲಗೆ ಬಾರಿಸುತ್ತಾ, ಹೊಯ್ಕೊಳ್ಳುತ್ತ  ಕಾಮನ-ಪಟ್ಟಿ(ವಂತಿಗೆ) ಸಂಗ್ರಹಿಸಲು ಮನೆ ಮನೆಗೆ ತೆರಳುವದು ವಾಡಿಕೆ. ಕೇರಿಯೊಂದರ ಇಂತಹ  ವಿಶಿಷ್ಟವಾದ ಶೈಲಿಯ ಹಲಗೆ ಮೇಳವನ್ನು ಮುನ್ನಡೆಸಿ ಹೋಳಿ ಆಚರಣೆಯ ನೇತೃತ್ವ ವಹಿಸುತ್ತಿದ್ದುದು ಒಬ್ಬ ಮುಸ್ಲಿಂ ಯುವಕ!! ಜ್ಯಾತ್ಯತೀತತಗೆ-ಭಾವೈಕ್ಯತೆಗೆ-ಬಾಂಧವ್ಯಕ್ಕೆ-ಸಹಬಾಳ್ವೆಗೆ  ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ?   ಮತ್ತೊಂದು ಕೇರಿಯಲ್ಲಿ ಹೋಳಿಯ ಸಮಯದಲ್ಲಿ ಜರುಗಿದ ಪ್ರಸಂಗವೊಂದು ಅನೇಕ ದಿನಗಳ ಕಾಲ ಓಣಿಯ ಜನರ ಬಾಯಿಗೆ ಆಹಾರವಾಗಿ ಗುಸುಗುಸು ಸುದ್ದಿಗೆ ಕಾರಣವಾಗಿತ್ತು. ಹೋಳಿಯ ಸಂದರ್ಭದಲ್ಲಿ ಸಂಗ್ರಹಿಸಿದ ವಂತಿಗೆಯಿಂದ ಹಬ್ಬ ಆಚರಿಸಿ ಉಳಿದ ಹಣದಲ್ಲಿ ಓಣಿಯ ಮಕ್ಕಳಿಗೆಲ್ಲ ಉಪಹಾರದ ವ್ಯವಸ್ಥೆಯಾಗುತ್ತಿತ್ತು.ಇನ್ನೂ   ಮಿಕ್ಕಿದ ಹಣದಿಂದ ಕ್ರಿಕೇಟ್ ಬ್ಯಾಟ ಖರೀದಿಸುವದಾಗಿ ಠರಾವು ಮಾಡಲಾಯಿತು ಮತ್ತು  ಇದರ ಹೊಣೆಯನ್ನು  ಓಣಿಯ ಹೋಳಿ ಆಚರಣೆ ಸಮಿತಿಯ ಇಬ್ಬರು ಪುಢಾರಿಗಳಿಗೆ ವಹಿಸಲಾಯಿತು. ಮೊದಲೇ  ನಿರ್ಧರಿಸಿದಂತೆ ಹತ್ತಿರದ ಬೆಳಗಾವಿಗೆ ತೆರಳಿ ಉತ್ತಮ ದರ್ಜೆಯ ಬ್ಯಾಟೊ೦ದನ್ನು ಖರೀದಿಸಿ ತಂದರು. ಆದರೆ ಇವರು ಬೆಳಗಾವಿಯಲ್ಲಿ ಭರ್ಜರಿ ಕೋಳಿಯೂಟಮಾಡಿ, ಕಾಶಿನಾಥರ ‘ಅನಂತನ ಅವಾಂತರ’ ಚಿತ್ರನೋಡಿ ಸೃಷ್ಟಿಸಿದ ಅವಾಂತರದ ವೃತ್ತಾಂತ ಕೇರಿಯ ಜನರ ಹುಬ್ಬೇರಿಸಿ,  ಬೆಚ್ಚಿ ಬೀಳಿಸಿತ್ತು!!

ಈಗಿನಂತೆ ಸುಲಲಿತ ಸಂಚಾರ ಸಾಧನಗಳಿರದ ಆ ಕಾಲದಲ್ಲಿ ಪರ ಊರಿಗೆ  ಕಾಲೇಜು ಹಾಗೂ ಕಚೇರಿಗೆ ಹೋಗುವ  ಬಹುತೇಕ ಜನರ ಆಯ್ಕೆ ಅಮಿತಾಭ್’ರ  ಡಾನ್ ಚಿತ್ರದಲ್ಲಿ ಬಳಸಿದ ವಾಹನವನ್ನು ಹೋಲುವ ಶೌಕತ್’ರ ಟೆಂಪೋ…. ಸೌಮ್ಯ ಸ್ವಭಾವದ ಸಂಕೇಶ್ವರ ಮೂಲದ ಶೌಕತ್’ರಿಗೆ ಹಿಡಕಲ್ ಡ್ಯಾಮ್ ಎರಡನೇಯ ತವರಾಗಿತ್ತು. ಗುಂಪಾಗಿ ನಾಲ್ಕೈದು ಕುಟುಂಬಗಳು  ಒಟ್ಟಾಗಿ ಎಲ್ಲಾದರು ಪ್ರಯಾಣ ಬೆಳೆಸಲು ನಿರ್ಧರಿಸಿದರೆ ಅದು ಕೇವಲ ಶೌಕತ್’ರ ಟೆಂಪೊದಲ್ಲೇ…… ಪ್ರತಿಬಾರಿ ಗಣೇಶ ಚತುರ್ಥಿಯ ಪ್ರಯುಕ್ತ  ಶೌಕತ್’ರ ಟೆಂಪೋದಲ್ಲಿ ಸಂಕೇಶ್ವರ್ ಹಾಗೂ ಬೆಳಗಾವಿಗೆ ಗಣಪತಿ ನೋಡಲು ಹೋಗುವದೆಂದರೆ ಮಕ್ಕಳಿಗಂತೂ ಹಿಗ್ಗೋ ಹಿಗ್ಗು. ಶೌಕತ್’ರಿಗೆ ಹಿಡಕಲ್ ಡ್ಯಾಮ್ ಕುರಿತು ಅಪಾರ ಪ್ರೀತಿ ಮತ್ತು  ಅಭಿಮಾನವಿತ್ತು, ತಮ್ಮ ತವರಾದ ಸಂಕೇಶ್ವರ್ ತಂಡದ ವಿರುದ್ಧ ಕ್ರಿಕೇಟ್ ಪಂದ್ಯದಲ್ಲೂ ಅವರ ಬೆಂಬಲ ಸದಾ ಹಿಡಕಲ್  ತಂಡಕ್ಕಿರುತ್ತಿತ್ತು. ಕೆಲವೊಮ್ಮೆ ದುಡ್ಡಿಲ್ಲದಿರುವ ಬಡವರಿಗೆ ಉಚಿತವಾಗಿ ತಮ್ಮ ಟೆಂಪೋದಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿ ಮಾನವಿಯತೆಯನ್ನು ಮೆರೆಯುತ್ತಿದ್ದರು.   

ಸಮಾಜದಲ್ಲಿ ಪರರ ಮೋಜಿಗೆ ಮತ್ತು ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದ ಕೆಲ ವಿಶಿಷ್ಟ-ವಿಚಿತ್ರ ವ್ಯಕ್ತಿಗಳ ಉಲ್ಲೇಖ ಅವಶ್ಯವೆನಿಸುತ್ತದೆ. ದೊಗಳೆ ಚಡ್ಡಿಯಲ್ಲಿ  ವೃದ್ಧರಂತೆ ಕಾಣುತ್ತಿದ್ದ ೫೦ರ ಆಸುಪಾಸಿನ ಬ್ರಹ್ಮಚಾರಿ ವಾಸು, ಹಲವು ಮನೆಗಳಲ್ಲಿ ನಲ್ಲಿಯ ನೀರನ್ನು ದೂರದಿಂದ ಹೊತ್ತು ತಂದು-ತುಂಬಿ, ಪೇಟೆಯಿಂದ ದಿನದ ದಿನಸಿ ಕಾಯಿಪಲ್ಲೆ ತಂದು ಕೊಟ್ಟು ಅವರಿವರ ಮನೆಯಲ್ಲಿ ಊಟ ಮಾಡಿ ಹೊಟ್ಟೆಹೊರೆಯುತ್ತಿದ್ದ. ಚಿಕ್ಕವರು ದೊಡ್ಡವರು ಎಲ್ಲರೂ ವಾಸುನ್ನ ಛೇಡಿಸುವರೇ.. ರಜನೀಕಾಂತ ಶೈಲಿಯಲ್ಲಿ ಚುಟ್ಟಾ ಮೇಲೆ ಹಾರಿಸಿ,ಬಾಯಿಗಿತ್ತು ಸುರ್ ಅಂತ ಝುರಕಿ ಎಳೆದು,ಇಲ್ಲ ಸಲ್ಲದ ಹಾಸ್ಯ ಮಾಡುತ್ತಾ ಮುಖದಲ್ಲಿ ವಿಲಕ್ಷಣ  ಹಾವಭಾವಗಳನ್ನು ತೋರುತ್ತಾ ಎಲ್ಲರನ್ನು ರಂಜಿಸುತ್ತಿದ್ದ. ಅವನ ದುಡಿಮೆಯ ಹುಮ್ಮಸು  ಮತ್ತು ಆಲಸ್ಯರಹಿತ ಸ್ವಾಭಿಮಾನದ ಜೀವನವನ್ನು ಮೆಚ್ಚಲೇಬೇಕು.

ಸರಿ ಸುಮಾರು ವಾಸೂನ ವಯಸ್ಸಿನವನೇ ಆದ ‘ಪಾಯಿಂಟ್-ಪರಿಮಳ’ ಎಂಬ ವಿಚಿತ್ರ ಹೆಸರಿನಿಂದ ಕರೆಯಲ್ಪುಡುತ್ತಿದ್ದ ವ್ಯಕ್ತಿ ಸಮಾಜದ ಸಾಮೂಹಿಕ ಮೋಜಿನ ವಸ್ತುವಾಗಿದ್ದ. ಅರೆ–ಬರೆ ಬಟ್ಟೆಯಲ್ಲಿ ಬಸ್’ಸ್ಟ್ಯಾಂಡ್’ನಲ್ಲಿ ಬಿದ್ದು ಕೊಂಡು, ವಾಣಿಯ ಮೇಲೆ ನಿಯಂತ್ರಣವಿಲ್ಲದೆ ಒಮ್ಮೊಮ್ಮೆ ಸಭ್ಯ ಸಂಸಾರಸ್ಥರನ್ನು ಮುಜುಗುರಕ್ಕೀಡುಮಾಡುತ್ತಿದ್ದ. ಆದೊಮ್ಮೆ ಕೆಲ ಕಿಡಗೇಡಿ ಹುಡುಗರು ‘ಪಾಯಿಂಟ್-ಪರಿಮಳ’ ಮಲಗಿದಾಗ ಅವನ ಚೊಣ್ಣಕ್ಕೆ ಪಟಾಕಿಯನ್ನು ಕಟ್ಟಿ, ಪಟಾಕಿಯ ಸದ್ದಾದಾಗ ಗಾಬರಿಯಿಂದ   ಬಸ್’ಸ್ಟ್ಯಾಂಡ್’ನ ಸುತ್ತ ಓಡಾಡಿ ಸುಸ್ತಾಗಿ, ಆ ಹುಡುಗರನ್ನು ವಾಚಾಮಗೋಚರವಾಗಿ ನಿಂದಿಸಿದ್ದ. ಸಮಾಜದಲ್ಲಿ ಪರರನ್ನು ಸ೦ಕಷ್ಟಕ್ಕೆ ಸಿಲುಕಿಸಿ ಸಂತೋಷಪಡುವ ವಿಕೃತ ಮನಸ್ಥಿತಿ ಬದಲಾಗಬೇಕು, ಸಮಾಜದಲ್ಲಿ ಸಕಲರು ಗೌರವದಿಂದ ಬಾಳಿ ಬದುಕುವಂತಾಗಬೇಕು, ಅಂದಾಗ ಮಾತ್ರ ಗಾಂಧೀಜಿಯ ರಾಮ ರಾಜ್ಯದ ಕನಸಿಗೆ ಒಂದು ಅರ್ಥ ಕಲ್ಪಿಸಿದಂತಾಗುತ್ತದೆ. ಹಿಡಕಲ್ ಡ್ಯಾಮ್ ಬಸ್ ಸ್ಟಾಂಡ್’ನಲ್ಲಿ ಎಲ್ಲರ ಗಮನಸೆಳೆಯುತ್ತಿದ್ದ, ಬರು-ಹೋಗುವ ಬಸ್, ಟ್ಯಾಕ್ಸಿ, ಟೆ೦ಪೊಗಳಲ್ಲಿ ಎರಡೂ ಕಾಲುಗಳ ಮೇಲೆ ಸ್ಥಿಮಿತವಿಲ್ಲದಿದ್ದರೂ ಪಾದರಸದಂತೆ ಸಂಚರಿಸಿ ಭಿಕ್ಷೆ ಬೇಡುತ್ತಿದ್ದ ಇನ್ನೊಬ್ಬ ವ್ಯಕ್ತಿಯೇ ‘ಕಾಕಾ ಕಾಲ ಇಲ್ಲ!!’ ಒಮ್ಮೊಮ್ಮೆ ಬೇರೆ ಊರುಗಳಿಗೂ ಉಚಿತವಾಗಿ ಪ್ರಯಾಣ ಬೆಳೆಸುತ್ತಿದ ಈತನ ಹೆಸರನ್ನು ಯಾರೂ ಅರಿಯರು, ‘ಕಾಕಾ ಕಾಲ ಇಲ್ಲ’ ಅಂತಲೇ ಎಲ್ಲರಿಗೂ ಚಿರಪರಿಚಿತ.

ಹಿಡಕಲ್ ಡ್ಯಾಮ್’ನ ಗಾಸಿಪ್ ಕೇಂದ್ರಗಳೆಂದೇ ಹೆಸುರುವಾಸಿಯಾದ ಎರಡು ಕಟ್ಟೆಗಳು, ಕ್ರಿಕೇಟ್ ಮೈದಾನದ ಕಟ್ಟೆ ಮತ್ತು ಇನ್ನೊಂದು ಗ್ರಂಥಾಲಯ ಸಂಕೀರ್ಣದ ಕಟ್ಟೆ. ಈ ಎರಡೂ ಸ್ಥಳಗಳು ದೇಶದ,ಜಗತ್ತಿನ ಹಾಗೂ ಊರಿನ ಆಗು ಹೋಗುಗಳ ಕುರಿತು ನಡೆಯುವ ಕುತೂಹಲಕರ  ಚರ್ಚೆಗಳಿಗೆ,ಗಾಸಿಪ್’ಗಳಿಗೆ  ವೇದಿಕೆಯಾಗಿ ಸಾಕ್ಷಿಯಾಗಿದ್ದವು. ಹೈಸ್ಕೂಲ್’ನಲ್ಲಿ  ಓದುತ್ತಿದ್ದ ಹದಿಹರೆಯದ  ನಮಗೆ ಇಂತಹ ಚರ್ಚೆಗಳಲ್ಲಿ ನಮಗಿಂತ ಹಿರಿಯರ ಮಾತುಗಳನ್ನು ಕೇಳಿ ವಿಷಯದ ಕುರಿತು ನಮಗಿದ್ದ ಜ್ಞಾನವನ್ನು ಪ್ರದರ್ಶಿಸುವ ಅವಕಾಶ ದೊರೆಯುತ್ತಿತ್ತು. ಲೈಬ್ರರಿಯಲ್ಲಿ ಕನ್ನಡ ದಿನ ಪತ್ರಿಕೆ, ವಾರ ಪತ್ರಿಕೆಗಳಾದ ತರಂಗ,ಸುಧಾ,ಪ್ರಜಾಮತ ಹಾಗೂ ಸ್ಪೋರ್ಟ್ಸ್ ಸ್ಟಾರ್’ನ ಪುಟಗಳನ್ನು ತಿರುವಿ ಹಾಕುತ್ತಾ, ಪಕ್ಕದಲ್ಲಿ ಯಾರು ಇಲ್ಲದನ್ನು ಖಚಿತ ಪಡಿಸಿಕೊಂಡು ಆಗಿನ ಕಾಲದ ಬಹುತೇಕ ವಯಸ್ಕರರು ಓದಲು ಹವಣಿಸುತ್ತಿದ್ದ ವಿಶೇಷ ಅಂಕಣಕ್ಕಾಗಿ ಸಂಕೋಚದಿಂದಲೇ ‘ಪೊಲೀಸ್ ನ್ಯೂಸ್’ ಪತ್ರಿಕೆಯಲ್ಲಿ ಇಣುಕುತ್ತಿದ್ದುದ್ದು, ಯಾರಾದರೂ ಬಂದರೆ ಮುಜುಗುರವಾಗದಿರಲೆಂದು ಬೇರೊಂದು ಪತ್ರಿಕೆಯನ್ನು ಅದರ ಮೇಲೆ ಇರಿಸುವದನ್ನು ನೆನಸಿಕೊಂಡರೆ ಮನ ಪುಳುಕಿತಗೊಳ್ಳುತ್ತದೆ!

ಹಿಡಕಲ್ ಜನರ ಕ್ರೀಡಾಸಕ್ತಿ ಮತ್ತು ಕ್ರೀಡಾಭಿನಕ್ಕೆ ಮೆರಗು ತಂದುಕೊಟ್ಟದ್ದು ೮೦ರ ದಶಕದ ಮಧ್ಯಭಾಗದಲ್ಲಿ ಆಯೋಜಿಸಲಾದ ರಾಜಮಟ್ಟದ ಹೊನಲು ಬೆಳಕಿನ ವ್ಹಾಲಿಬಾಲ್ ಪಂದ್ಯಾವಳಿ. ರಾಜ್ಯದ ನಾನಾ ಪ್ರದೇಶಗಳಿಂದ ಬಂದ ಹೆಸರಾಂತ ವ್ಹಾಲಿಬಾಲ್- ಪಟುಗಳು ಭಾಗವಹಿಸಿದ ಆ ಪಂದ್ಯಾವಳಿಯಲ್ಲಿ ಆಡಿದ ಹೊಸಮನಿಯವರು ಮುಂದೆ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದರು. ಬೆಳಗಾವಿ ಜಿಲ್ಲೆಯ ಪ್ರಾಥಮಿಕ ಶಾಲೆಗಳ ಜಿಲ್ಲಾಮಟ್ಟದ ಕ್ರೀಡಾಕೂಟವೂ ಕೂಡ ಹಿಡಕಲ್ ಡ್ಯಾಮಿನಲ್ಲಿ ಆಯೋಜಿಸಲ್ಪಟ್ಟಿತ್ತು, ನನ್ನ ಹೃದಯದಲ್ಲಿ ಶಾಶ್ವತವಾಗಿ ಮನೆಮಾಡಿದ್ದು ಹುಕ್ಕೇರಿ ತಾಲೂಕಿನ ಶಾಲೆಯೊಂದರ ವಯೋವೃದ್ಧ ಮುಖ್ಯೋಧ್ಯಾಪಕಿಯೊಬ್ಬರು  ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಲಯಬದ್ಧವಾಗಿ ಹಾಡಿದ “ಒಪ್ಪತ್ತು ಮಾಡತಾರ ಬೋಗೋಣಿ ಉಪ್ಪಿಟ್ಟು ಬಡುತಾರ…. ಮತ್ತು ಸೆಜ್ಜಿ ರೊಟ್ಟಿ ಚವಳಿಕಾಯಿ ಹಪ್ಪಳಸಂಡಿಗಿ ಉಪ್ಪಿನಕಾಯಿ ಮಂದಿ ಭಾಳ ಬಂದರಾಂತ ಅರ್ಧಾ ಗಿರ್ದಾ ನೀಡತಾರ ಬಂದೇವರಪ್ಪ ಬಂದೇವ ನಾವು ಬೀಗರ ಮನಿಗೆ.. ” ಎಂಬ ಜಾನಪದ ಗೀತೆಗಳು.  ಒಟ್ಟಾರೆಯಾಗಿ ಹೇಳುವಾದದರೆ ಕ್ರೀಡೆಗಳ ವಿಷಯದಲ್ಲಿ  ಹಿಡಕಲ್ ಡ್ಯಾಮ್ ಸಮಯವನ್ನು  ಹಿಂದಿಕ್ಕಿತ್ತು. ೧೯೮೮-೧೯೮೯ರಲ್ಲಿ ನಮ್ಮ ಮಾಧ್ಯಮಿಕ ಶಾಲಾ ತಂಡ ಬಾಲ್ ಬ್ಯಾಡ್ಮಿಂಟನ್-ಲ್ಲಿ ಜಿಲ್ಲಾ ಚಾಂಪಿಯನ್ ಆಗಿತ್ತು!

ನಮಗಿದ್ದ ಕ್ರಿಕೇಟ್-ನ ಅಪರಿಮಿತ ಹುಚ್ಚಿನ ಕುರಿತು ಬೆಳಕು ಚೆಲ್ಲುವ ಘಟನೆಯೊಂದು ನಡೆದದ್ದು  1985ರಲ್ಲಿ. ಏಳನೆಯ ತರಗತಿಯಲ್ಲಿ ಓದುತ್ತಿದ್ದ ಸಮಯ, ಬೆನ್ಸನ್ ಐಂಡ್ ಹೇಜಿಸ್ ವರ್ಲ್ಡ್ ಚಾಂಪಿಯನ್’ಶಿಪ್ ಕ್ರಿಕೇಟ್ ಪಂದ್ಯಾವಳಿಯ ಫೈನಲ್ ಪಂದ್ಯ, ಭಾರತ ಮತ್ತು ಪಾಕಿಸ್ತಾನ ಪರಸ್ಪರ  ಎದುರಾಳಿಗಳು. ದೂರದರ್ಶನ ನಿಜಕ್ಕೂ ಸಾಮಾನ್ಯರಿಂದ ತುಂಬಾ ದೂರವಿದ್ದ ಕಾಲವದು, ಇಡೀ ಊರಿನಲ್ಲಿ ಒಂದೋ ಎರಡು ಟಿ.ವಿ.ಗಳು, ಅವುಗಳಿಗೆ ಬಾನೆತ್ತರದ ಎಂಟೆನಾಗಳು, ಸರ್ಕಸ್ ಮಾಡಿ 360ಕೋನದಲ್ಲಿ ಸಂಪೂರ್ಣವಾಗಿ ತಿರುಗಿಸಿದಾಗ, ಯಾವುದೋ ಒಂದು ಕೋನದಲ್ಲಿ ಚುಕ್ಕೆ ತುಂಬಿದ ಚಿತ್ರಗಳು ಟಿ.ವಿ.ಪರದೆಮೇಲೆ  ಮೂಡಿ ಬರುತ್ತಿದ್ದವು. ಅಂತಿಮ ಪಂದ್ಯದ ವೀಕ್ಷಣೆಗಾಗಿ ಊರಲ್ಲಿನ ಟಿ.ವಿ.ಯನ್ನು ಸ್ಪಷ್ಟ ಸಿಗ್ನಲ್ ದೊರೆಯುವ ಹತ್ತಿರದ ಗುಡ್ಡದ ಮೇಲಿದ್ದ ಹುನ್ನೂರ್ ಐ.ಬಿ.ಗೆ ಒಯ್ಯಲಾಗಿತ್ತು. ಈ ಸುದ್ದಿ ಕ್ರಿಕೇಟ್ ಪ್ರೇಮಿಗಳಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ, ತಂಡೋಪತಂಡವಾಗಿ ಸಿಕ್ಕ ಸಿಕ್ಕ ವಾಹನಗಳಲ್ಲಿ ಹುನ್ನೂರ್ ಐ.ಬಿ. ತಲುಪಹತ್ತಿದರು. ನಾವು ಮನೆಯಲ್ಲಿ ತಿಳಿಸದೇ ಯಾವುದೋ ಒಂದು ಟೆಂಪೋದಲ್ಲಿ ದುಡ್ಡಿಲ್ಲದೇ ಕಾಡಿ ಬೇಡಿ, ಹುನ್ನೂರ್ ಐ.ಬಿ. ಸೇರಿ ಆ ಪಂದ್ಯವನ್ನು ವೀಕ್ಷಿಸಿದ್ದು ಮರೆಯಲು ಸಾಧ್ಯವೇ ಇಲ್ಲ. ಶ್ರೀಕಾಂತ್ ಪಂದ್ಯ ಶ್ರೇಷ್ಠ ಮತ್ತು ರವಿ ಶಾಸ್ತ್ರಿ ಸರಣಿ ಶ್ರೇಷ್ಠರಾಗಿ (ಚಾಂಪಿಯನ್ ಆಫ್ ಚಾಂಪಿಯನ್ಸ್) ಬಹುಮಾನವಾಗಿ ದೊರೆತ ಕಾರನ್ನೇರಿ  ಮೈದಾನದ ಸುತ್ತ ಪ್ರದಕ್ಷಿಣೆ ಹಾಕಿದ ದ್ರಶ್ಯಗಳು ನೆನಪು ಇನ್ನೂ ಮಾಸಿಲ್ಲ! ಕೇಬಲ್ ಟಿ.ವಿ.ಯ ಆಗಮನವಾದ ನಂತರದಲ್ಲಿ ಭಾರತದ ಕ್ರಿಕೇಟ್ ಪಂದ್ಯವೊಂದು ನಡೆಯುತ್ತಿದ್ದಾಗ ಕೆ.ಇ.ಬಿ. ಕೃಪೆಯಿಂದ ವಿದ್ಯುತ್ ಕೈಕೊಟ್ಟು ದಿನವಿಡೀ ಕರೆಂಟ್ ಬರುವದಿಲ್ಲವೆನ್ನುವದು ಖಾತ್ರಿಯಾಗಿ ಕ್ರೀಡಾಭಿಮಾನಿಗಳೆಲ್ಲ ಸೇರಿ ದುಡ್ಡು ಸಂಗ್ರಹಿಸಿ ಕೇಬಲ್ ಟಿ.ವಿ. ರೂಮ್ ಮುಂದೆ ಜನೇರಟರ್’ನಿಂದ ಸಂಪರ್ಕ ಒದಗಿಸಿ ಪಂದ್ಯ ವೀಕ್ಷಿಸುವ ವ್ಯವಸ್ಥೆ ಮಾಡಿದ್ದರು!     

ಹೀಗೆ ಇನ್ನೂ ಅನೇಕ ನೆನಪುಗಳು ಬುತ್ತಿಯನ್ನು ಬಿಚ್ಚಿ ಬಡಿಸಿ ಮೆಲಕು ಹಾಕುವ ಆಸೆ………..

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!