ಅಂಕಣ

ದಮಯಂತಿ ತಾಂಬೆಯ ಸಂಘರ್ಷ ಯಾವುದೇ ಯುದ್ಧಖೈದಿಗಿಂತ ಭಿನ್ನವೇ?

   ೧೯೭೧ರ ಡಿಸೆಂಬರ್ ತಿಂಗಳು, ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ನಡೆಯುತ್ತಿದ್ದ ಸಂದರ್ಭ. ರೇಡಿಯೋದಲ್ಲಿ ಯುದ್ಧದ ಕುರಿತು ಸುದ್ದಿಗಳನ್ನು ಕೇಳಲೆಂದು ಕುಳಿತಿದ್ದ ದಮಯಂತಿ ತಾಂಬೆಗೆ ಸಿಕ್ಕ ಸುದ್ದಿ ಫ್ಲೈಟ್ ಲೆಫ್ಟಿನೆಂಟ್ ವಿಜಯ್ ವಸಂತ್ ತಾಂಬೆ ಸೆರೆ ಸಿಕ್ಕಿದ್ದಾರೆಂಬ ಸುದ್ದಿ. ಈಗ ೨೦೧೭, ಸುಮಾರು ೪೫ ವರ್ಷಗಳೇ ಕಳೆದು ಹೋಗಿವೆ, ಈ ೪೫ ವರ್ಷಗಳಲ್ಲಿ ಸರಕಾರಗಳು ಬದಲಾದವು, ಎಷ್ಟೋ ಪ್ರಧಾನಮಂತ್ರಿಗಳು ಬಂದು ಹೋದರು, ಎಷ್ಟೋ ವಿದೇಶಾಂಗ ಸಚಿವರು ಬಂದು ಹೋದರು ಎಲ್ಲರ ಕದ ತಟ್ಟಿದ್ದಾರೆ ದಮಯಂತಿ! ಆದರೆ ಪ್ರಯೋಜನ ಮಾತ್ರ ಶೂನ್ಯ. ಇಷ್ಟೆಲ್ಲ ಆದರೂ ಇನ್ನೂ ಆಕೆಯ ಹೋರಾಟ ನಿಂತಿಲ್ಲ. ಇಂದಿಗೂ ದಮಯಂತಿ ತನ್ನ ಗಂಡ ಇಂದಲ್ಲ ನಾಳೆ ಪಾಕಿಸ್ತಾನದ ಜೈಲಿನಿಂದ ಹೊರಬರಬಹುದು ಎಂದು ಕಾಯುತ್ತಿದ್ದಾರೆ.

    ದಮಯಂತಿ ಸುಬೇದಾರ್ ಬ್ಯಾಡ್ಮಿಂಟನ್ ಆಟಗಾರ್ತಿ. ೧೯೬೮-೭೦ರವರೆಗೆ ಮೂರು ಬಾರಿ ನ್ಯಾಷನಲ್ ಸಿಂಗಲ್ ಗೆದ್ದವರು. ಅರ್ಜುನ ಪ್ರಶಸ್ತಿ ವಿಜೇತೆ ಕೂಡ. ೧೯೭೦ರಲ್ಲಿ ಫೈಟರ್ ಪೈಲಟ್ ಆಗಿದ್ದ ವಿಜಯ್ ವಸಂತ್ ತಾಂಬೆಯವರ ಕೈ ಹಿಡಿದಾಗ ಆಕೆಗಿನ್ನೂ ೨೨ ವರ್ಷ. ವಿಜಯ್ ಪಾಕಿಸ್ತಾನದ ವಿರುದ್ಧ ಯುದ್ಧಕ್ಕೆಂದು ಹೊರಟಾಗ ಮದುವೆಯಾಗಿ ಕೇವಲ ೧೮ ತಿಂಗಳುಗಳಾಗಿತ್ತು ಅಷ್ಟೇ! ಸೈನಿಕರು ತಮ್ಮ ಜೀವ ಒತ್ತೆಯಿಟ್ಟು ದೇಶದ ರಕ್ಷಣೆಗೆ ನಿಂತರೆ, ಅವರ ಕುಟುಂಬಗಳು ತಮ್ಮ ಬದುಕಿನ ಬಹುದೊಡ್ದ ಅಂಗವನ್ನು, ತಮ್ಮ ಪ್ರೀತಿಪಾತ್ರರನ್ನು ಗಡಿಯಲ್ಲಿ ನಿಲ್ಲಿಸಿ ಜೀವನ ಸವೆಸುತ್ತವೆ. ಇದೆಲ್ಲ ಸುಲಭದ ಮಾತಲ್ಲ. ಅಂಥದ್ದರಲ್ಲಿ ತಮ್ಮ ಪ್ರೀತಿಪಾತ್ರರು ಶತ್ರು ದೇಶದಲ್ಲಿ ಸೆರೆಯಾಳಾಗಿ ಬಿಟ್ಟರೆ?!! ಈ ೪೫ ವರ್ಷಗಳಲ್ಲಿ ದಮಯಂತಿಯವರ ಸಂಘರ್ಷವನ್ನು ನಾವು ಕಲ್ಪನೆ ಮಾಡಿಕೊಳ್ಳಲೂ ಸಾಧ್ಯವಿಲ್ಲ. ಆಕೆ ಸಿಂಗಲ್ ಅಲ್ಲ, ಡಿವೋರ್ಸಿ ಹೇಗೂ ಅಲ್ಲ, ವಿಧವೆಯೇ ಎಂದರೆ ಅದೂ ಅಲ್ಲ. ಆಕೆ ಪತ್ನಿ ಹೌದು, ತನ್ನ ಗಂಡ ಪಾಕಿಸ್ತಾನದ ಜೈಲಿನಲ್ಲಿದ್ದರು ಅಥವಾ ಇದ್ದಾರೆ ಎಂಬಷ್ಟೇ ಮಾಹಿತಿ ಇಟ್ಟುಕೊಂಡು ಅವರ ಬಿಡುಗಡೆಗಾಗಿ ಹೋರಾಡುತ್ತಿರುವ ಪತ್ನಿ!! ಅಂದು ೧೯೭೧ರಲ್ಲಿ ವಿಜಯ್ ಸೆರೆ ಸಿಕ್ಕಿದ್ದಾರೆ ಎಂದು ಕೇಳಿದಾಗ ಒಂದು ಸಮಾಧಾನವಾಗಿತ್ತಂತೆ ದಮಯಂತಿಗೆ, ತನ್ನ ಗಂಡ ಯುದ್ಧಭೂಮಿಯಲ್ಲಿಲ್ಲ, ಅವರ ಪ್ರಾಣಕ್ಕೆ ಅಪಾಯವಿಲ್ಲ ಎಂದು. ಇಂದಲ್ಲ ನಾಳೆ ಅವರನ್ನು ವಾಪಾಸ್ಸು ಕಳುಹಿಸಲಾಗುವುದು ಎಂದು. ಆದರೆ ಆ ನಂಬಿಕೆ ಹುಸಿಯಾಗಿತ್ತು!

     ೧೯೭೨ರಲ್ಲಿ ಶಿಮ್ಲಾ ಒಪ್ಪಂದದ ನಂತರ ಭಾರತ ತಾನು ಸೆರೆ ಹಿಡಿದಿದ್ದ ಪಾಕಿಸ್ತಾನಿ ಸೈನಿಕರೆಲ್ಲರನ್ನು ಬಿಡುಗಡೆಗೊಳಿಸಿತ್ತು. ಪಾಕಿಸ್ತಾನ ಕೂಡ! ಆದರೆ ವಿಜಯ್ ಹಿಂದಿರುಗಲಿಲ್ಲ. ಪಾಕಿಸ್ತಾನ ತಮ್ಮಲ್ಲಿ ಯಾವುದೇ ಯುದ್ಧಖೈದಿಗಳು ಉಳಿದಿಲ್ಲ ಎಂದು ಬಿಟ್ಟಿತು. ಹಾಗಿದ್ದಾಗ ವಿಜಯ್ ಕೂಡ ಹಿಂದಿರಗಬೇಕಿತ್ತು. ವಿಜಯ್ ಅಲ್ಲಿ ಸೆರೆಯಾಗಿದ್ದರ ಬಗ್ಗೆ ಪುರಾವೆಗಳು ಕೂಡ ಇದ್ದವು. ಪಾಕಿಸ್ತಾನದ ಪತ್ರಿಕೆಯೇ ೫ ಜನ ಫೈಟರ್ ಪೈಲಟ್’ಗಳ ಸೆರೆಸಿಕ್ಕ ಬಗ್ಗೆ ವರದಿ ಮಾಡಿತ್ತು ಅದರಲ್ಲಿ ವಿಜಯ್ ವಸಂತ್ ತಾಂಬೆಯ ಹೆಸರು ಕೂಡ ಇತ್ತು. “ತಮ್ಮೆಲ್ಲಾ ಸೈನಿಕರು ಹಿಂದಿರುಗಿದ್ದಾರೋ ಇಲ್ಲವೋ ಎನ್ನುವುದನ್ನು ಕೂಡ ಪರಿಶೀಲಿಸಲಿಲ್ಲವಲ್ಲ” ಎಂಬ ದಮಯಂತಿಯವರ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ.

’ಮಿಸ್ಸಿಂಗ್ ಇನ್ ಆಕ್ಷನ್’ ಎಂದು ಹೇಳಿ ಸರಕಾರ ಸುಮ್ಮನಾಯಿತು, ಆದರೆ ದಮಯಂತಿಯವರಿಗೆ ಇದೆಲ್ಲ ಸುಲಭವಾಗಿರಲಿಲ್ಲ. ಆ ಅನಿಶ್ಚಿತತೆ ಅಸಹನೀಯವಾಗಿತ್ತು. ಆಗ ಅವರಿಗೆ ಧೈರ್ಯ ತುಂಬಿದ್ದು ವಿಜಯ್ ಅವರ ತಂದೆ. ಯಾವುದಾದರು ಕೆಲಸ ಪಡೆದು ಅದರಲ್ಲಿ ಮಗ್ನರಾಗುವಂತೆ ಸಲಹೆ ನೀಡಿದ್ದರು.  ಹತಾಶೆಯ ನಡುವೆಯೇ ಆಕೆ ಜೆ.ಎನ್.ಯು’ನಲ್ಲಿ ಸ್ಪೋರ್ಟ್ಸ್ ಆಫಿಸರ್ ಆಗಿ ಕೆಲಸ ಪಡೆಯುತ್ತಾರೆ.

  ಆಕೆಯ ಭರವಸೆ ಮತ್ತೆ ಚಿಗುರಿದ್ದು, ಆರ್.ಎಸ್. ಸೂರಿಯವರಿಂದ. ೧೯೭೪ರಲ್ಲಿ ಮೊದಲ ಬಾರಿ ಕರಾಚಿ ಜೈಲಿನಿಂದ ಪತ್ರವೊಂದು ಬಂದಿತ್ತು. ಮೇಜರ್ ಅಶೋಕ್ ಸೂರಿ ತಾನು ಇತರ ೨೦ ಭಾರತೀಯ ಸೈನಿಕರೊಂದಿಗೆ ಪಾಕಿಸ್ತಾನದ ಜೈಲಿನಲ್ಲಿರುವುದಾಗಿ ತಿಳಿಸಿದ್ದಲ್ಲದೇ ತಮ್ಮ ಬಿಡುಗಡೆಗಾಗಿ ಪ್ರಯತ್ನಿಸುವುವಂತೆ ಭಾರತ ಸರ್ಕಾರಕ್ಕೆ ಮನವಿ ಮಾಡುವಂತೆ ತಿಳಿಸಿದ್ದರು. ಅದಾದ ಕೆಲ ಸಮಯದಲ್ಲೆ ಇನ್ನೂ ಎರಡು ಪತ್ರಗಳು ಬಂದಿದ್ದವು. ತಮ್ಮ ಮಗನ ಬಿಡುಗಡೆಗಾಗಿ ಪ್ರಯತ್ನ ಆರಂಭಿಸಿದ ಅರ್.ಎಸ್.ಸೂರಿಯವರು ತಮ್ಮಂತೆಯೇ ಇತರ ಕುಟುಂಬಗಳೊಂದಿಗೆ ಸೇರಿಕೊಂಡು’ ’ಮಿಸ್ಸಿಂಗ್ ಡಿಫೆನ್ಸ್ ಪರ್ಸನಲ್ ರಿಲೇಟಿವ್ಸ್ ಅಸೋಸಿಯೇಷನ್’ನ್ನು( Missing Defence Personnel Relatives Association.) ಆರಂಭಿಸಿದರು. ದಮಯಂತಿ ಕೂಡ ಇದರಲ್ಲಿ ಒಬ್ಬರಾಗಿದ್ದರು.  ಅಲ್ಲದೇ ೧೯೮೦ರಲ್ಲಿ ಪ್ರಕಟಗೊಂಡ ವಿಕ್ಟೋರಿಯಾ ಶೆಫೋಲ್ಡ್ ಅವರ ಪುಸ್ತಕ “ಭುಟ್ಟೋ: ಟ್ರಯಲ್ ಅಂಡ್ ಎಕ್ಸಿಕ್ಯೂಷನ್” ಎಂಬ ಪುಸ್ತಕ ಪಾಕಿಸ್ತಾನದ ಜೈಲಿನಲ್ಲಿ ಭಾರತೀಯ ಸೈನಿಕರ ಇರುವಿಕೆಗೆ ಇನ್ನಷ್ಟು ಪುಷ್ಟಿ ನೀಡಿತು. ಕೋಟ್ ಲಕ್’ಪತ್ ಜೈಲಿನಲ್ಲಿ ಭುಟ್ಟೊ ಅವರ ಪಕ್ಕದ ಸೆಲ್’ನಲ್ಲಿ ಕೆಲ ಮಾನಸಿಕ ಸ್ಥಿಮಿತ ಕಳೆದುಕೊಂಡ ಯುದ್ಧಖೈದಿಗಳನ್ನು ಇಡಲಾಗಿತ್ತು ಹಾಗೂ ಅವರ ಚೀರಾಟ ರಾತ್ರಿಯಿಡೀ ಭುಟ್ಟೋ ಅವರಿಗೆ ಕೇಳುತ್ತಿತ್ತು ಎಂದು ಉಲ್ಲೇಖಿಸಲಾಗಿತ್ತು ಆ ಪುಸ್ತಕದಲ್ಲಿ.

ಸತತ ಪ್ರಯತ್ನದ ಫಲವಾಗಿ ೧೯೮೩ರಲ್ಲಿ ಆರ್.ಎಸ್.ಸೂರಿ, ದಮಯಂತಿ ತಾಂಬೆ ಹಾಗೂ ಇನ್ನು ಕೆಲವರಿಗೆ ಕಾನ್ಸುಲಾರ್ ಆಕ್ಸೆಸ್ ನೀಡಲಾಯಿತು. ಮುಲ್ತಾನ್ ಜೈಲಿಗೆ ಭೇಟಿ ನೀಡಲು ಅನುಮತಿ ನೀಡಿತು. ಆದರೆ ಕೆಲವರನ್ನಷ್ಟೇ ತೋರಿಸಿ ’ನೀವು ಹುಡುಕುತ್ತಿರುವವರು ಈ ಜೈಲಿನಲ್ಲಿಲ್ಲ’ ಎಂದು ಹೇಳಿ ವಾಪಾಸ್ಸು ಕಳುಹಿಸಲಾಯಿತು. ಇಂದಿರಾಗಾಂಧಿಯವರ ಹೇಳಿಕೆಗಳು ಹಾಗೂ  ಸರಕಾರ ಪಾಕಿಸ್ತಾನಕ್ಕೆ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎನ್ನುವುದೇ ಇದಕ್ಕೆಲ್ಲ ಕಾರಣ ಎನ್ನಲಾಗುತ್ತದೆ. ಕಾರಣ ಏನೇ ಇದ್ದರೂ ಆ ಸೈನಿಕರ ಕುಟುಂಬಕ್ಕೆ ಸಿಕ್ಕಿದ್ದು ಮಾತ್ರ ನಿರಾಶೆ! ಪಾಕಿಸ್ತಾನದವರೆಗೆ ಹೋದರೂ ಕೂಡ ಪ್ರಯೋಜನವಾಗಲಿಲ್ಲ ಎಂಬ ಕೊರಗು.

೧೯೮೮ರಲ್ಲಿ ಪಾಕಿಸ್ತಾನದ ಜೈಲಿನಿಂದ ತನ್ನ ದೇಶಕ್ಕೆ ಹಿಂದುರುಗಿ ಬಂದ ದಲ್ಜಿತ್ ಸಿಂಗ್ ಎಂಬುವವರು, ೧೯೭೮ರಲ್ಲಿ ತಾಂಬೆಯವರನ್ನು ಲಾಹೋರ್ ಇಂಟರೋಗೆಷನ್ ಸೆಂಟರ್’ನಲ್ಲಿ ನೋಡಿದ್ದಾಗಿ ತಿಳಿಸುತ್ತಾರೆ. ದಮಯಂತಿಯವರ ಪ್ರಯತ್ನ ಮತ್ತಷ್ಟು ಪ್ರಬಲಗೊಳ್ಳುವುದಕ್ಕೆ ಇಷ್ಟು ಸಾಕಿತ್ತು.  ೧೯೮೯ರಲ್ಲಿ ಅಂಡರ್ ೧೯ ಕ್ರಿಕೆಟ್ ತಂಡದ ಮ್ಯಾನೇಜರ್ ಆಗಿ ಪಾಕಿಸ್ತಾನಕ್ಕೆ ಹೊರಟು ನಿಂತಿದ್ದ ವಿಜಯ್ ಅವರ ಚಿಕ್ಕಪ್ಪ ಜಯಂತ್ ಜಾಥರ್ ದಮಯಂತಿಯವರಿಗೆ ಮತ್ತೊಂದು ಆಶಾಕಿರಣವಾಗಿದ್ದರು. ಜಯಂತ್ ಅವರು ಜೆನೆರಲ್ ಅವರೊಂದಿಗೆ ಮಾತನಾಡಿ ತಾಂಬೆಯವರನ್ನು ನೋಡಲು ಅವಕಾಶ ನೀಡುವಂತೆ ಬೇಡಿಕೊಂದಿದ್ದರು. ಅದಕ್ಕೆ ಒಪ್ಪಿ ಜಯಂತ್ ಅವರನ್ನು ಲ್ಯಾಲ್’ಪುರ(ಈಗಿನ ಫೈಸಲಾಬಾದ್) ಜೈಲಿಗೆ ಕಳುಹಿಸಿ ಕೊಡಲಾಗಿತ್ತು. ಅಲ್ಲಿ ಅವರು ವಿಜಯ ತಾಂಬೆಯವರನ್ನು ಗುರುತಿಸಿದ್ದರು ಕೂಡ. ಆದರೆ ಅವರೊಂದಿಗೆ ಮಾತನಾಡಲು ಅವಕಾಶ ನೀಡಲೇ ಇಲ್ಲ. ಅಲ್ಲಿಗೆ ಆ ಅವಕಾಶವೂ ಕೈ ತಪ್ಪಿ ಹೋಗಿತ್ತು. ಆರ್.ಎಸ್.ಸೂರಿ ಕೂಡ ೧೯೯೯ರಲ್ಲಿ ಇಹಲೋಕ ತ್ಯಜಿಸಿದರು. ತಮ್ಮ ಕೊನೆಯುಸಿರಿನವರೆಗೂ ತಮ್ಮ ಮಗನ ಬಿಡುಗಡೆಗಾಗಿ ಸಂಘರ್ಷ ಮಾಡಿದ ಸೂರಿಯವರು, ಕೊನೆ ಘಳಿಗೆಯಲ್ಲಿ “ನನಗಿನ್ನು ಶಾಂತಿ ಸಿಗುವುದು ನನ್ನ ಸಮಾಧಿಯಲ್ಲಿಯೇ ಇರಬೇಕು” ಎಂದು ನೊಂದು ನುಡಿದಿದ್ದರು. ದಮಯಂತಿ ತಾಂಬೆಯವರು ತಮ್ಮ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತಿದ್ದ ಸೂರಿಯವರನ್ನು ಕೂಡ ಕಳೆದುಕೊಂಡರು.

ಒಮ್ಮೆ ಹೀಗೆ ಯಾವುದೋ ಟಾಕ್ ಶೋನಲ್ಲಿ ಮಾತನಾಡುತ್ತಾ, “ಈ ರಾಜಕಾರಣಿಗಳಿಗೆ ಹೇಗೆ ನಮ್ಮ ನೋವು ಅರ್ಥವಾಗಬೇಕು? ನನ್ನ ಬದುಕಿನ ಒಂದೊಂದು ಕ್ಷಣವನ್ನು ಹೇಗೆ ಕಳೆದಿದ್ದೇನು ಎಂದು ನನಗೆ ಮಾತ್ರ ಗೊತ್ತು. ನನ್ನ ಗಂಡ ಶತ್ರುದೇಶಕ್ಕೆ ಸೆರೆ ಸಿಕ್ಕಿದ್ದು ನಮ್ಮ ದೇಶಕ್ಕಾಗಿ ಹೋರಾಡುವಾಗ, ತನಗಾಗಿ ಹೋರಾಡುತ್ತಿರಲಿಲ್ಲ ಅವರು. ಅವರನ್ನು ವಾಪಾಸ್ಸು ಕರೆ ತರುವುದು ಈ ದೇಶದ ರಾಜಕಾರಣಿಗಳ ಜವಾಬ್ದಾರಿಯಲ್ಲವೇ” ಎಂದು ಕೇಳಿದ್ದರು ದಮಯಂತಿ, ಇದರಿಂದ ಕೋಪಗೊಂಡಿದ್ದ ಪ್ರಣಬ್ ಮುಖರ್ಜಿ, “ನೀವು ತುಂಬಾ ಆಕ್ರೋಶಭರಿತ ಮಾತುಗಳನ್ನಾಡುತ್ತಿದ್ದೀರಿ” ಎಂದಿದ್ದರಂತೆ. ಆದರೆ ಆ ಆಕ್ರೋಶ, ಅಸಹನೆ, ಸಿಟ್ಟು ಸಹಜವೇ ತಾನೆ? ಅದಕ್ಕೆ ಪ್ರತ್ಯುತ್ತರವಾಗಿ, “ಯಾವ ರಾಜಕಾರಣಿಯ ಮಕ್ಕಳು ಸೇನೆಯಲ್ಲಿದ್ದಾರೆ. ನಿಮ್ಮ ಮಕ್ಕಳು ಸೇನೆಯಲ್ಲಿದ್ದಿದ್ದರೆ, ಅವರು ಮಡಿದಿದ್ದರೆ ಅಥವಾ ಶತ್ರುದೇಶದಲ್ಲಿ ಸೆರೆಯಾಗಿದ್ದಿದ್ದರೆ ಆಗ ನಮ್ಮ ನೋವು ಏನೆಂದು ನಿಮಗೆ ಅರ್ಥವಾಗುತ್ತಿತ್ತು” ಎಂದು ಖಾರವಾಗಿ ನುಡಿದಿದ್ದರು. ಶಿಮ್ಲಾ ಒಪ್ಪಂದ ಆಗುತ್ತಿದ್ದಂತೆ ಸರಕಾರಕ್ಕೆ ಬಾಕಿ ಎಲ್ಲ ನಗಣ್ಯ ಎಂದಾಗಿ ಬಿಟ್ಟಿತ್ತು ಎನ್ನುತ್ತಾರೆ ದಮಯಂತಿ. “೬೦೦ಚದರ ಮೈಲು ಭೂಮಿಯನ್ನು ಪಾಕಿಸ್ತಾನಕ್ಕೆ ಬಿಟ್ಟು ಕೊಟ್ಟರಲ್ಲ, ನಮ್ಮ ಸೇನೆಯ ತ್ಯಾಗಕ್ಕೆ ಬೆಲೆಯಿಲ್ಲದಂತಾಗಲಿಲ್ಲವೇ” ಎಂದು ಪ್ರಶ್ನಿಸುತ್ತಾರೆ ಆಕೆ. ಆದರೆ ಅದಕ್ಕೆ ಸಮಂಜಸ ಉತ್ತರ ಮಾತ್ರ ಯಾರ ಬಳಿಯೂ ಇಲ್ಲ.

 ಮದುವೆಯ ನಂತರ ವಿಜಯ್ ಜೊತೆಗಿನ ಫೋಟೋದಲ್ಲಿ ಕಾಣ ಸಿಗುವ ಅವರ ನಗು ಈ ೪೫ ವರ್ಷಗಳಲ್ಲಿ ಮಾಸಿ ಹೋಗಿದೆ. ವಿಜಯ್ ಜೊತೆಗೆ ಕಳೆದ ೧೮ ತಿಂಗಳುಗಳ ನೆನಪಿನಲ್ಲೇ ಬದುಕು ಸವೆಸುತ್ತಾ ಎಂದಾದರೊಂದು ದಿನ ತನ್ನ ಗಂಡ ಹಿಂದಿರುಗಬಹುದು ಎಂದು ಕಾಯುತ್ತಿದ್ದಾರೆ. “ಒಬ್ಬಳೇ ಇರುವುದು ಅಭ್ಯಾಸವಾಗಿ ಬಿಟ್ಟಿದೆ.. ಆದರೂ ಒಮ್ಮೊಮ್ಮೆ ಒಂಟಿತನ ಕಾಡುತ್ತದೆ” ಎನ್ನುತ್ತಾರೆ ದಮಯಂತಿ. ವಿಜಯ್ ಇದ್ದಿದ್ದರೆ ಎಷ್ಟು ಖುಶಿ ಪಡುತ್ತಿದ್ದರು, ವಿಜಯ್ ಇದ್ದಿದ್ದರೆ ಇನ್ನೂ ಒಳ್ಳೆಯ ಸಲಹೆ ನೀಡುತ್ತಿದ್ದರೇನೋ, ವಿಜಯ್ ಇದ್ದಿದ್ದರೆ ಇದು ಇನ್ನೂ ಸರಳವಾಗುತ್ತಿತ್ತೇನೋ ಎನ್ನುವಂತಹ ಎಷ್ಟೋ ಕ್ಷಣಗಳು ಬಂದು ಹೋಗಿವೆ, ’ವಿಜಯ್ ಇದ್ದಿದ್ದರೆ’ ಎನ್ನುವ ಕೊರಗು ಇನ್ನೂ ಕೂಡ ಕಾಡುತ್ತಲೆ ಇದೆ.   

ಮೇಜರ್ ಗೊಗೊಯ್ ಅಂದು ಜೀಪಿಗೆ ಕಲ್ಲೆಸುಯುವವನನ್ನು ಕಟ್ಟಿದ್ದು ಅಮಾನವೀಯ ಎಂದು ಬೊಬ್ಬೆ ಹಾಕುವ, ಮಾನವಹಕ್ಕುಗಳು ಅಂತೆಲ್ಲ ಬಾಯಿ ಬಡಿದುಕೊಳ್ಳುವ ಬುದ್ಧಿಜೀವಿಗಳಿಗೆ ದಮಯಂತಿ ತಾಂಬೆಯಂತವರ ಹಕ್ಕುಗಳ ಬಗ್ಗೆ, ಪಾಕಿಸ್ತಾನದ ಜೈಲಿನಲ್ಲಿರುವ ಯುದ್ಧಖೈದಿಗಳ ಹಕ್ಕುಗಳ ಬಗ್ಗೆ ಮಾತನಾಡಲು ಸಮಯವಿಲ್ಲ. ಶಾಂತಿ ಬೇಕು ಎಂದು ವೀಡಿಯೋ ಮಾಡಿ ಮಾಡಿ ಅಪ್ಲೋಡ್ ಮಾಡುವವರಿಗೆ ಆರ್.ಎಸ್.ಸೂರಿಯಂತವರು ಕಾಣುವುದೇ ಇಲ್ಲ. ಅವರಂತಹ ಎಷ್ಟೋ ಕುಟುಂಬಗಳ ಶಾಂತಿ, ನೆಮ್ಮದಿಯ ಬಗ್ಗೆ ಪರಿವೆ ಇಲ್ಲ..!! ಯಾರು ಧ್ವನಿ ಎತ್ತದಿದ್ದರೂ ದಮಯಂತಿ ಮಾತ್ರ ಇನ್ನೂ ಕೋರ್ಟು, ಕಛೇರಿ, ಸಚಿವರು ಎಂದು ಅಲೆಯುತ್ತಲೇ ಇದ್ದಾರೆ. ನಿರಾಶೆ, ಭರವಸೆ, ಕಾಯುವಿಕೆ, ನಿರಂತರ ಪ್ರಯತ್ನ, ಒಂಟಿತನಗಳ ಮಧ್ಯೆ ಬಂಧಿಯಾಗಿರುವ ದಮಯಂತಿಯವರ ಬದುಕು ಯಾವ ಯುದ್ಧಖೈದಿಯ ಬದುಕಿಗಿಂತ ಭಿನ್ನವಾಗಿದೆ? ಇವರು ಕೇವಲ ಒಂದು ಉದಾಹರಣೆಯಷ್ಟೇ, ಇಂತಹ ಅದೆಷ್ಟೋ ಪತ್ನಿಯರು ನಮ್ಮ ನಡುವೆ ಇದ್ದಾರೆ. ಆರ್.ಎಸ್. ಸೂರಿಯಂತಹ ಎಷ್ಟೋ ತಂದೆಯಿದ್ದಾರೆ. ಇನ್ನೂ ಎಷ್ಟೋ ಕುಟುಂಬಗಳು ತಮ್ಮವರಿಗಾಗಿ ಸಂಘರ್ಷ ಮಾಡುತ್ತಲೇ ಇವೆ. ಇವುರುಗಳ ಸಂಘರ್ಷಕ್ಕೆ ಎಂದಾದರೂ ತೆರೆ ಬೀಳುವುದಾ ಎಂಬ ಪ್ರಶ್ನೆಗೆ ಮಾತ್ರ ಉತ್ತರವಿಲ್ಲ.

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!