Featured ಅಂಕಣ

ಆರ್‍ಎಸ್‍ಎಸ್ ಒಂದು ದಲಿತ ವಿರೋಧಿಯೇ?

‘ಕೈಯಲ್ಲಿ ಕತ್ತಿ ಸುತ್ತಿಗೆ ಹಿಡಿದ ದಲಿತರು ಇಂದೂ ಕೂಡ ಹಾಗೆಯೇ ಇದ್ದಾರೆ, ಆದರೆ ಚೆಡ್ಡಿ ಹಾಕಿ ಶಾಖೆಗೆ ಬಂದವರು ರಾಷ್ಟ್ರಪತಿಯಾಗಿದ್ದಾರೆ. ಯಾರು ಇಲ್ಲಿ ದಲಿತೋದ್ದಾರಕರು!?’ ರಾಮನಾಥ್ ಕೋವಿಂದ್ ರಾಷ್ಟ್ರಪತಿಯಾದ ಕ್ಷಣದಿಂದ ಇಂತಹುದೊಂದು ಮೆಸೇಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಮೆಸೇಜ್ ಸಣ್ಣದಾದರೂ ಇದರೊಳಗಿರುವ ‘ಮೆಸೇಜ್’ ಮಾತ್ರ ನಿಜಕ್ಕೂ ಅಧ್ಬುತವಾದುದೇ. ಕೆಲ ವರ್ಷಗಳ ಹಿಂದೆ ನಾನು ನನ್ನ ಮಿತ್ರನೋರ್ವನಲ್ಲಿ ಹೀಗೆ ಮಾತನಾಡುತ್ತಾ ಆರ್‍ಎಸ್‍ಎಸ್ ವಿಚಾರಧಾರೆಗಳ ಬಗೆಗೆ ಪ್ರಸ್ತಾಪಿಸಿದಾಗ ಅವನು ಆರ್‍ಎಸ್‍ಎಸ್ ಹಾಗೂ ಅದರದ್ದೇ ಶಿಶುವಾಗಿರುವ ಬಿಜೆಪಿಯು ಒಂದು ಮೇಲ್ವರ್ಗದವರ ಕೂಟವೆಂತಲೂ ಅದು ನಮ್ಮಂತಹ ಕೆಳವರ್ಗದ ಜನರನ್ನು ಬಳಸಿಕೊಳ್ಳುತ್ತದೆಯೇ ಹೊರತು ನಾಯಕನಾಗಲು ಬಿಡದು ಎಂಬ ತರ್ಕವನ್ನು  ನನ್ನ ಮುಂದೆ ಬಡಬಡಿಸಿದ್ದ. ನಾನದನ್ನು ಅಂದು ಒಪ್ಪಿರದಿದದ್ದರು ಅವನ ವಾದವನ್ನು ಕಂಡು ಒಂದು ಬಾರಿ ‘ಹೌದಲ್ವ’ ಅನ್ನಿಸಿಬಿಡ್ತು. ಆದರೆ ಇವತ್ತಿನ ಪರಿಸ್ಥಿತಿಯನ್ನು ನೋಡಿದರೆ ನಿಜಕ್ಕೂ ಆರ್‍ಎಸ್‍ಎಸ್‍ನ ಹೆಚ್ಚುಗಾರಿಕೆ ಎಲ್ಲರಿಗೂ ಮನವರಿಕೆಯಾಗಲೇಬೇಕು. ಯಾಕೆಂದರೆ ದೇಶದ ಅತ್ಯುನ್ನತ ಹುದ್ದೆಯಾದ ‘ರಾಷ್ಟ್ರಪತಿ’ ಇವತ್ತು ಆರ್‍ಎಸ್‍ಎಸ್ ಕಾರಣದಿಂದಾಗಿಯೇ ದಲಿತ ವರ್ಗದಿಂದ ಪ್ರತಿನಿಧಿಸಲ್ಪಟಿದೆ. ದೇಶದ ಎರಡನೇ ಅತಿ ದೊಡ್ಡ ಹುದ್ದೆಯಾದ ಪ್ರಧಾನ ಮಂತ್ರಿಯು ಕೂಡ ಇದೇ ಆರ್‍ಎಸ್‍ಎಸ್ ಕೃಪೆಯಿಂದಾಗಿ ಒಬಿಸಿ ವರ್ಗದ ವಶವಾಗಿದೆ. ಒಂದು ವೇಳೆ ವಿರೋಧಿಗಳ ವಾದದಂತೆ  ಆರ್‍ಎಸ್‍ಎಸ್ ಕೇವಲ ಮೇಲ್ವರ್ಗದ ಸಂಘಟನೆಯಾಗಿರುತ್ತಿದ್ದರೆ ಇವತ್ತು ಈ ಎರಡೂ ಹುದ್ದೆಗಳು ಅದ್ಯಾವ ಕಾರಣಕ್ಕೂ ಮೇಲ್ವರ್ಗದಿಂದ ಹೊರಗೆ ಹೋಗುತ್ತಲೇ ಇರಲಿಲ್ಲ! ಆರ್‍ಎಸ್‍ಎಸ್ ಕೇವಲ ಬ್ರಾಹ್ಮಣವರ್ಗದ್ದು ಎಂದು ಈವರೆಗೂ ಅಪಪ್ರಚಾರ ಮಾಡುತ್ತ ಬಂದಿರುವವರು ನಿಜಕ್ಕೂ  ಇದೀಗ ತಮ್ಮ ಯೋಚನಾ ಮಟ್ಟವನ್ನು ಬದಲಿಸಿಕೊಳ್ಳುವುದು ಒಳಿತು ಅನ್ನಿಸುತ್ತೆ.

ಒಂದು ರಾಷ್ಟ್ರೀಯ ಪ್ರೇರಕ ಶಕ್ತಿಯಾದ ಆರ್‍ಎಸ್‍ಎಸ್‍ನ ರಾಷ್ಟ್ರ ಪ್ರೇಮದ ಬಗ್ಗೆ ನಿಜಕ್ಕೂ ಎಲ್ಲರೂ ಹೆಮ್ಮೆ ಪಡಬೇಕು. ಪಾಕೃತಿಕ ವಿಕೋಪದಂತಹ ದುರ್ಘಟನೆಗಳು, ಇಲ್ಲವೇ ಇನ್ನಾವುದೇ ಅವಘಡಗಳು ಸಂಭವಿಸಿದಾಗ ತಮ್ಮ ಪ್ರಾಣದ ಹಂಗು ತೊರೆದು ಮುಂಚೂಣ ಯಲ್ಲಿ ನಿಂತು ಜನರ ನೆರವಿಗೆ ಧಾವಿಸುವುದು ಇದೇ ಆರ್‍ಎಸ್‍ಎಸ್ ಎಂಬುದು ಸತ್ಯ. ದೇಶದ ರಾಜಕೀಯ ಚಿಂತನೆಗಳು ಕಮ್ಯುನಿಷ್ಟ್ ಪ್ರೇರಿತಗೊಂಡು ಏಕಮುಖವಾಗಿ ಬೆಳೆಯುವ ಅಪಾಯಕ್ಕೆ ಎದುರಾದಾಗ ಅದಕ್ಕೆ ಸಡ್ಡು ಹೊಡೆದು ರಾಷ್ಟ್ರೀಯ ವಾದದ ಮೂಲಕ ಬಲಪಂಥೀಯತೆಗೆ ನೀರೆರದ್ದು ಕೂಡ ಇದೇ ಆರ್‍ಎಸ್‍ಎಸ್! ಆರ್‍ಎಸ್‍ಎಸ್‍ನ ರಾಷ್ಟ್ರೀಯ ವಿಚಾರಗಳು ಫಲ ಪಡೆದು ಹೆಮ್ಮರವಾದ ಪರಿಣಾಮದಿಂದಲೇ ಇಂದು ದೇಶದ ರಾಜಕೀಯ ಚಿತ್ರಣವು ಬದಲಾಗಿರುವುದು. ಎಡಪಂಥೀಯವಾದವು ಸದ್ದೇ ಇಲ್ಲದೆ ಮೂಲೆ ಪಾಲಾಗುತ್ತಾ ಸಾಗಿದ್ದು! ರಾಷ್ಟ್ರ ಚಿಂತನೆಯ ಈ ಸ್ವಯಂ ಸೇವಾ ಸಂಘಟನೆಯು  ರಾಜಕೀಯ ರಂಗದಲ್ಲಿ ವಿರೋಧಿಗಳಿಗೆ ಶತ್ರುವಾಗಿ ಕಂಡಿರುವುದು ಇದೇ ಕಾರಣಕ್ಕೆ. ಆದ್ದರಿಂದಲೇ ಆರ್‍ಎಸ್‍ಎಸ್ ರಾಷ್ಟ್ರವ್ಯಾಪಿಯಾಗಿ ಬೆಳೆದರೆ ನಮಗೆ ಉಳಿಗಾಲವಿಲ್ಲ ಎಂದರಿತ ಶತ್ರು ಪಾಳಯವು ಹೇಗಾದರೂ ಸರಿ ಈ ಆರ್‍ಎಸ್‍ಎಸ್‍ನ್ನು ಬದಿಗೆ ಸರಿಸಲೇಬೇಕು ಎಂಬ ನಿಟ್ಟಿನಲ್ಲಿ ಹಲವಾರು ಪ್ರಯತ್ನಗಳನ್ನು ಪಟ್ಟಿವೆ. ಈ ನಿಟ್ಟಿನಲ್ಲಿ ಅದು ಗಟ್ಟಿಯಾಗಿ ಹಿಡಿದುಕೊಂಡ ಒಂದು ಪ್ರಬಲ ಅಸ್ತ್ರವೆಂದರೆ ಅದು ಆರ್‍ಎಸ್‍ಎಸ್ ದಲಿತ ಹಾಗೂ ಹಿಂದುಳಿದ ವರ್ಗದ ವಿರೋಧೀಯಾಗಿದ್ದು ಅದು ಕೇವಲ ಬ್ರಾಹ್ಮಣರ ಸಂಘವಷ್ಟೇ ಎಂಬ ವಿತಂಡವಾದ ವಾದವನ್ನ!. ಆದರೆ ಅದೆಷ್ಟು ಬಾರಿ ಆರ್‍ಎಸ್‍ಎಸ್ ತಾನು ದಲಿತ ವಿರೋಧಿಯಲ್ಲ ಎಂದು ವಾದಿಸಿದರೂ, ಸಾಧಿಸಿ ತೋರಿಸಿದರೂ ವಿರೋಧಿಗಳು ಮಾತ್ರ ಜಪ್ಪಯ್ಯ ಅಂದರೂ ಈ ವಾದದಿಂದ ಹಿಂದೇ ಸರಿದೇ ಇಲ್ಲ! ಬ್ರಾಹ್ಮಣೇತರ ವರ್ಗದಿಂದ ಬಂದ ರಜ್ಜು ಬಯ್ಯಾ (ರಾಜೇಂದ್ರ ಸಿಂಗ್)ರವರು ಆರ್‍ಎಸ್‍ಎಸ್‍ನ 4ನೇ ಸರಸಂಘಚಾಲಕನಾಗಿ ಆಯ್ಕೆಯಾದಾಗಲಾದರೂ  ಈ ವಿರೋಧಿಗಳು ತೆಪ್ಪಗಾಗುತ್ತಾರೆ ಅಂದುಕೊಂಡರೆ ಅದೂ ಸುಳ್ಳಾಗಿ ಹೋಯಿತು! ತಮ್ಮ ಸೋಲನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳದ ವಿರೋಧಿ ಬಣವು  ರಜ್ಜು ಬಯ್ಯಾರವರು ಬ್ರಾಹ್ಮಣ ಅಲ್ಲದಿದ್ದರೇನಂತೆ ಅವರೂ ಕೂಡ ಮೇಲ್ವವರ್ಗದಿಂದಲೇ ಬಂದ ವ್ಯಕ್ತಿ ಎಂದು ಹೇಳಿಕೊಂಡು ಮತ್ತೆ ತಮ್ಮ ಹಳೇ ವಾದವನ್ನೇ ಮುಂದುವರೆಸಿದ್ದು ವಿಪರ್ಯಾಸ!

ಈ ಆರ್‍ಎಸ್‍ಎಸ್‍ನ್ನು ಹಳಿಯುವ ಕೆಲಸದಲ್ಲಿ ಬಹಳ ಮುಂದಿರುವವರು ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಎಡಪಂಥೀಯರು ಎಂಬದನ್ನು ಬೇರೆ ಹೇಳಬೇಕಾಗಿಲ್ಲ. ಆರ್‍ಎಸ್‍ಎಸ್‍ನಿಂದ ಅದ್ಯಾವ ಒಳ್ಳೆಯ ಕೆಲಸ ನಡೆಯಲಿ, ರಾಷ್ಟ್ರಸೇವೆಯ ಕಾರ್ಯವೇ ನಡೆಯಲಿ ಆದರೆ ಈ ಆರ್‍ಎಸ್‍ಎಸ್‍ನ್ನು ಟೀಕಿಸಲೇಬೇಕು ಎಂಬುದು ಈ ಪಕ್ಷಗಳ ಧ್ಯೇಯವೆಂಬಂತಿದೆ! ಅದಕ್ಕಾಗಿಯೇ ಇವುಗಳು ಸಮಯ ಸಂದರ್ಭ ಸಿಕ್ಕಾಗೆಲ್ಲಾ ಆರ್‍ಎಸ್‍ಎಸ್‍ನ್ನು ಭಯೋತ್ಪಾದನಾ ಸಂಘಟನೆ ಎಂಬಂತೆಯೂ, ಇಲ್ಲವೇ ದಲಿತರ ವಿರೋಧಿ ಎಂಬಂತೆಯೂ ಪ್ರಚುರಡಿಸುವ ಪ್ರಯತ್ನ ಪಡುತ್ತಿದೆ. ಆರ್‍ಎಸ್‍ಎಸ್‍ನ್ನು ನಿಷೇಧಿಸಬೇಕು ಎಂಬ ಕೂಗನ್ನೂ ಕೂಡ ಹಲವಾರು ಬಾರಿ ಎಬ್ಬಿಸಿ ಸೋತಿದೆ!

ಹಾಗೆ ನೋಡಿದರೆ  ಆರ್‍ಎಸ್‍ಎಸ್ ದಲಿತ ವಿರೋಧಿ ಅಲ್ಲ. ಆರ್‍ಎಸ್‍ಎಸ್‍ನೊಳಗೆ ಮೇಲ್ವರ್ಗ ಕೆಳವರ್ಗ ಎಂಬ ತಾರತಮ್ಯ ಕೂಡ ಇಲ್ಲ ಎಂದು ಸ್ವತಃ ಡಾ.ಬಿ.ಆರ್ ಅಂಬೇಡ್ಕರ್‍ವರೇ ಹೇಳಿರುತ್ತಾರೆ! ಹೌದು, 1939 ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್‍ರವರು ಇದೇ ಆರ್‍ಎಸ್‍ಎಸ್ ಬಗ್ಗೆ ಮೆಚ್ಚುಗೆ ಸೂಸುತ್ತಾ ‘ನಾನು ಇದೇ ಮೊದಲ ಬಾರಿಗೆ ಆರ್‍ಎಸ್‍ಎಸ್‍ನ ಶಾಖೆಗೆ ಬೇಟಿ ನೀಡಿದೆ. ಆರ್‍ಎಸ್‍ಎಸ್‍ನ ಒಳಗೆ ಸವರ್ಣನೀಯ ಹಾಗೂ ಹರಿಜನ ಎಂಬ ಅದ್ಯಾವುದೇ ಬೇಧ ಬಾವ ಇಲ್ಲದೇ ಇರುವುದನ್ನು ಕಂಡು ಮೂಕ ವಿಸ್ಮಿತನಾಗಿ ಹೋದೆ’ ಎಂಬ ಪ್ರಶಂಸೆಯ ಮಾತುಗಳನ್ನಾಡಿದ್ದರು (“This is the first time that I am visiting the camp of Sangh volunteers. I am happy to find absolute equality between Savarniyas (Upper Caste) and Harijans (Lower Caste) without any one being aware of such difference existing.”)

ಅಷ್ಟು ಮಾತ್ರವೇ ಅಲ್ಲದೆ ಸರಿಸುಮಾರು ಇದೇ  ಅಭಿಪ್ರಾಯವನ್ನು ಮಹಾತ್ಮಗಾಂಧಿಜಿಯವರು ಕೂಡ ಆರ್‍ಎಸ್‍ಎಸ್ ಬಗ್ಗೆ ಹೊಂದಿದ್ದರು ಎನ್ನುವುದು ಇನ್ನೊಂದು ಸತ್ಯ. (Mahatma Gandhi in 1934: “When I visited the RSS Camp, I was very much surprised by your discipline and absence of untouchablity.”)

ಒಟ್ಟಿನಲ್ಲಿ ಆರ್‍ಎಸ್‍ಎಸ್‍ನ ಮೇಲಿರುವ ‘ದಲಿತ ವಿರೋಧೀ’ ಟೀಕೆಯು ಬರೇ ರಾಜಕೀಯ ಪ್ರೇರಿತವಷ್ಟೇ ಎಂಬುದಕ್ಕೆ ಈ ಮಹಾನೀಯರುಗಳು ಹೇಳಿಕೆಗಳನ್ನೇ ಸಾಕ್ಷಿಯಾಗಿ ಪರಿಗಣಿಸಬಹುದು. ಇಷ್ಟಿದ್ದರೂ ಆರ್‍ಎಸ್‍ಎಸ್‍ನ್ನು  ದಲಿತ ವಿರೋಧಿ ಎಂದೆನ್ನುವುದು ನಿಜಕ್ಕೂ ದುರಾದೃಷ್ಟಕರ. ಆರ್‍ಎಸ್‍ಎಸ್ ಯಾವುದೇ ಜಾತಿಯ ಸ್ವತ್ತಲ್ಲ ಮತ್ತು ಅಲ್ಲಿ ಎಲ್ಲರನ್ನೂ ಏಕಪ್ರಕಾರವಾಗೇ ಕಾಣಲಾಗುತ್ತದೆ, ಗೌರವಿಸಲಾಗುತ್ತದೆ ಎಂಬ ಬಗ್ಗೆ ಸವಿವರಾದ ಮಾಹಿತಿಗಳು ಬೇಕಿದ್ದರೆ ರಮೇಶ್ ಪತಂಗೆ  ಅವರು ಬರೆದಿರುವ ‘ಮನು, ಸಂಘ ಮತ್ತು ನಾನು’ (Manu, sangha and I) ಎಂಬ ಪುಸ್ತಕವನ್ನು ಕೂಡ ಆಧಾರವಾಗಿ ತೆಗೆದುಕೊಳ್ಳಬಹುದು. ವಿಚಿತ್ರವೆಂದರೆ ಸ್ವತಃ  ಆರ್‍ಎಸ್‍ಎಸ್ ಕಟ್ಟಾಳುವಾಗಿದ್ದ ಈ ರಮೇಶ್ ಪತಂಗೆ ಕೂಡ ಓರ್ವ ದಲಿತ ಸಮುದಾಯದ ವ್ಯಕ್ತಿಯೇ ಆಗಿದ್ದರು! ‘ತಾನು ಸಾರ್ವಜನಿಕ ಜೀವನದಲ್ಲಿ ಸಾಕಷ್ಟು ಬಾರಿ ನನ್ನ ಜಾತಿಯ ಕಾರಣಕ್ಕಾಗಿ ಅವಮಾನಿಗೊಂಡಿರುವೆನಾದರೂ ಆರ್‍ಎಸ್‍ಎಸ್‍ನ ಒಳಗಡೆ ಅದೆಂದಿಗೂ ಜಾತಿ ತಾರತಮ್ಯತೆಯನ್ನು ಕಂಡೇ ಇಲ್ಲ, ಇಲ್ಲಿ ಎಲ್ಲರೂ ಜಾತಿಯನ್ನು ಹೊರಗಡೆಯೇ ಬಿಟ್ಟು ಸ್ವಯಂ ಸೇವೆಯಲ್ಲಿ ತೊಡಗುತ್ತಾರೆ’ ಎಂಬ ಸತ್ಯವನ್ನು ಅವರು ಇದೇ ಪುಸ್ತಕದಲ್ಲಿ ದಾಖಲಿರಿಸುತ್ತಾರೆ. ಆರ್‍ಎಸ್‍ಎಸ್ ಎಂದರೆ ಹೇಗೆ? ಮತ್ತು ಏನು? ಎಂಬುದಕ್ಕೆ ಖಂಡಿತವಾಗಿಯೂ ಇವೆಲ್ಲಾ ದಾಖಲೆಗಳು ಪೂರಕವಾಗಬಲ್ಲುದು.  ತಮಾಷೆಯ ಸಂಗತಿಯೆಂದರೆ ಆರ್‍ಎಸ್‍ಎಸ್‍ನ್ನು ದಲಿತ ವಿರೋಧಿ, ಅಲ್ಲಿ ದಲಿತ ಹಾಗು ಹಿಂದುಳಿದ ವರ್ಗದ ಜನರಿಗೆ ಯಾವುದೇ ಬೆಂಬಲವಿಲ್ಲ, ತಾಕತ್ತಿದ್ದರೆ ಆರ್‍ಎಸ್‍ಎಸ್ ಸರಸಂಘಚಾಲಕರಾಗಿ ದಲಿತ ಸಮುದಾಯದ ವ್ಯಕ್ತಿಯನ್ನು ಆಯ್ಕೆಗೊಳಿಸಲಿ ಎಂದು ಹೇಳುತ್ತಲೇ ಬಂದಿರುವ ಸಿಪಿಐ(ಎಮ್)ನಲ್ಲಿ ಈ ವರೆಗೂ ದಲಿತನೋರ್ವ ಪಾಲಿಟ್ ಬ್ಯೂರೋ ಆದ ಉದಾಹರಣೆಯಿಲ್ಲ ಎಂಬುದು ನಂಬಲೇಬೇಕಾದ ಸತ್ಯ! ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಸಿಪಿಐನ ಸೀತಾರಾಮ ಯಚೂರಿ, ಪ್ರಕಾಶ್ ಕಾರಟ್, ಬೃಂದಾಕಾರಟ್ ಇವರೆಲ್ಲಾ ಮೇಲ್ವರ್ಗದ ಪ್ರತಿನಿಧಿಗಳೇ! ತಮ್ಮಲ್ಲೇ ದೋಷವಿಟ್ಟುಕೊಂಡು ಆರ್‍ಎಸ್‍ಎಸ್‍ನ್ನು ಹಳಿಯುತ್ತಿದ್ದಾರಲ್ಲಾ ಇವರೆಲ್ಲಾ ಏನನ್ನಬೇಕು ಇವರ ಮನೋಸ್ಥಿತಿಗೆ!? ಆರ್‍ಎಸ್‍ಎಸ್ ಕೊನೆಪಕ್ಷ ಐವತ್ತು ಸಾವಿರಕ್ಕೂ ಅಧಿಕ ‘ಏಕಲ್ ವಿದ್ಯಾಲಯಗಳ’ ಮೂಲಕ ದಲಿತ ವಿದ್ಯಾರ್ಥಿಗಳಿಗಾಗಿಯೇ ಶಿಕ್ಷಣ ನೀಡುತ್ತಿದೆ. ಈಶಾನ್ಯ ರಾಜ್ಯಗಳ ಗುಡ್ಡ ಗಾಡು ಜನಾಂಗದ ಜನರಿಗೆ ಬದುಕ ಕಲ್ಪಿಸಿಕೊಡುತ್ತಿದೆ.  ದೇಶದ್ಯಾಂತ ದಲಿತರಿಗೆ, ಹಿಂದುವಳಿದವರ್ಗದವರಿಗೆ ಸಹಾಯ ಹಸ್ತ ಚಾಚುತ್ತಿದೆ. ತನ್ನ ನಿಷ್ಟಾವಂತಹ ಕಾರ್ಯಕರ್ತರನ್ನು ಜಾತಿ, ಗೋತ್ರ ನೋಡದೆ ರಾಜಕೀಯ ನಾಯಕರುಗಳನ್ನಾಗಿಸಿ ದೇಶದ ಅತ್ಯುನ್ನತ ಪದವಿಗೇರಿಸಿದೆ! ಎಮ್.ಎಸ್ ಗೊಲ್ವಾಲ್ಕರ್‍ರವರಂತ ಸರಸಂಘಚಾಲಕರು ಟ್ರೈಬಲ್ ಜನರಿಗೆ ಉಪನಯನದ ದೀಕ್ಷೆ ನೀಡುವ ಬಗ್ಗೆಯೂ ಸಹಮತ ತಳೆದ ಉದಾಹರಣೆಯಿದೆ. ಆದರೆ ಈ ನಮ್ಮ ಕಮ್ಯುನಿಷ್ಟರು ದಲಿತರಿಗೆ ನೀಡಿದ ಕೊಡುಗೆಗಳೇನು ಎಂದು ಕೇಳಿದರೆ ಮಾತ್ರ ಆ ದೇವರೇ ಉತ್ತರಿಸಬೇಕಿದೆ! ಇನ್ನು ಕಾಂಗ್ರೆಸ್‍ನಲ್ಲಿ ಅಧಿಕಾರಯುತ ಸ್ಥಾನವೇನಿದ್ದರೂ ಅದು ‘ಗಾಂಧೀ’ ಕುಟಂಬದ್ದು ಮಾತ್ರ ಎಂಬುದನ್ನೂ ಕೂಡ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ! ಒಟ್ಟಿನಲ್ಲಿ ಯಾರು ದಲಿತೋದ್ದಾರಕರು, ಅಭಿವೃದ್ಧಿಯ ಚಿಂತಕರು ಎಂಬುದನ್ನು ಜನರೇ ವಿಮರ್ಶಿಸಿ ಅರಿತುಕೊಳ್ಳಬೇಕಿದೆಯಷ್ಟೇ!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!