ಅಂಕಣ

ರಾಜ್ ಸಾಧನೆಯ ಬೆನ್ನೆಲುಬು ಅಷ್ಟೇ ಅಲ್ಲ ಅವರ ಅಸ್ಥಿಪಂಜರ. .

ಸಿನಿಮಾ ಎಂಬ ಚಂಚಲ ಜಗತ್ತಿನಲ್ಲಿ ದಶಕಗಳ ಕಾಲ ಉಳಿಯುವುದು ಕಷ್ಟದ ಕೆಲಸ ಮಾತ್ರವಲ್ಲ ಸಾಧನೆಯೂ ಹೌದು. ಅಂಥ ಶೃಂಗ ಸಾಧನೆಯ ಪರ್ವತವನ್ನು ಅಣ್ಣಾವ್ರು ಏರಲು ಜೊತೆಗಿದ್ದದ್ದು ಪಾರ್ವತಮ್ಮ. ರಾಜ್’ಕುಮಾರ್ ಅವರ ಸಾಧನೆಯ ಬೆನ್ನೆಲುಬು ಎಂದರೆ ಅಪೂರ್ಣವಾದೀತು ಅವರ ಇಡೀ ಸಾಧನೆಯ ಅಸ್ತಿಪಂಜರವೇ ಅವರಾಗಿದ್ದರು. ಒಬ್ಬ ಲೌಕಿಕ ಜಗತ್ತಿನಿಂದ ಮುಕ್ತವಾದಾಗಲೇ ಸಾಧನೆಯ ಶಿಖರ ಮುಟ್ಟಲು ಸಾಧ್ಯ. ಆದರೆ ಕುಟುಂಬ ನಿರ್ವಹಣೆಗಾಗಿ ಹಣ ಗಳಿಕೆಯ ಹಿಂದೆ ಬೀಳುವವನಿಗೆ ಲೌಕಿಕ ಜಗತ್ತಿನಿಂದ ಸಾಧನೆಯ ದಾರಿಗೆ ಬರುವುದು ಕಷ್ಟ. ಆದರೆ ರಾಜ್’ ಅವರ ವ್ಯವಹಾರಿಕ ಮತ್ತು ಕೌಟುಂಬಿಕ ಜಗತ್ತಿನ ನಿರ್ವಹಣೆಯನ್ನು ತಾನು ಹೊತ್ತು ಅವರಿಗೆ ನಟನೆಯ ದಾರಿಯಲ್ಲಿನ ಅಡೆತಡೆಗಳನ್ನು ನಿವಾರಿಸಿ ಹಚ್ಚಹಸಿರ ಸಮೃದ್ಧಿಯ ದಾರಿಯನ್ನು ಕೊರೆದು ಕೊಟ್ಟವರು ಪಾರ್ವತಮ್ಮ. ಹಲವು ಜನ ಹೇಳುತ್ತಿರುವುದೇನೆಂದರೆ ದುಡ್ಡಿದ್ದವರು ಯಾರೂ ಬೇಕಾದರೂ ನಿರ್ಮಾಣ ಮಾಡುತ್ತಾರೆ ಅಂತ. ಆದರೆ ಪಾರ್ವತಮ್ಮ ನಿರ್ಮಾಣ ಕಾರ್ಯಕ್ಕೆ ಕೈ ಹಾಕಿದ ಸಮಯದ ಸಂದಿಗ್ಧದ ಬಗ್ಗೆ ಪರಿಚಯವಿಲ್ಲದ ವ್ಯಕ್ತಿಗಳು ಮಾತ್ರ ಹೀಗೆ ಹೇಳಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ದುಡ್ಡು ಇರುವವನು ಮಾತ್ರ ಸಿನಿಮಾ ಮಾಡುತ್ತಿರುವುದು ಮತ್ತು ದುಡ್ಡು ಖರ್ಚು ಮಾಡಿ ಹಳಸಲು ಚಿತ್ರವನ್ನು ವೈಭವೀಕರಿಸೋದು ಚಾಳಿ ಆಗಿದೆ. ಅಂತವರಿಗೂ ಪಾರ್ವತಮ್ಮನವರಿಗೂ ಬಹಳ ವ್ಯತ್ಯಾಸ ಇದೆ.

   ಹಾಗೇ ಅವರು ದುಡ್ಡಿರುವುದನ್ನು ಖರ್ಚು ಮಾಡಲೋ ಅಥವಾ ದುಡ್ಡು ಮಾಡಲೋ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿಲ್ಲ. ಅದಕ್ಕೊಂದು ದೊಡ್ಡ ಹಿನ್ನೆಲೆ ಇದೆ. ಮುಗ್ಧತೆಯ ಪ್ರತಿರೂಪವಾದ ರಾಜ್ ಅವರು ಅಜಾತಶತ್ರುಗಳಲ್ಲ .ಅವರ ಶತ್ರುಗಳ ಸುಪ್ತ ರೀತಿಯಲ್ಲಿದ್ದರು. ಅದನ್ನು ಗುರುತಿಸಿದ ಚಾಣಾಕ್ಷತನ ಮತ್ತು ಅವರ ಮುಂದೆ ತಲೆ ಎತ್ತಿ ನಿಲ್ಲುವುದಲ್ಲದೇ ಕನ್ನಡ ಸಿನಿಮಾಕ್ಕೆ ಸ್ಥಿರಾಸ್ಥಿತ್ವವನ್ನು ಒದಗಿಸುವ ಗಟ್ಟಿತನವಿದ್ದದ್ದು ಪಾರ್ವತಮ್ಮನವರಿಗೆ ಮಾತ್ರ.

    ರಾಜ್ ಮೇರು ಪರ್ವತದ ಮಟ್ಟದಲ್ಲಿದ್ದಾಗ ಸಮಯ ಸಿಗದೇ ಕೆಲವೊಬ್ಬರಿಗೆ ಕಾಲ್’ಶೀಟ್ ಕೊಡೋಕೆ ಆಗುತ್ತಿರಲಿಲ್ಲ. ಅಂಥ ಕೆಲವು ನಿರ್ಮಾಪಕರು ರಾಜ್ ಅವರನ್ನು ಹಾಕಿಕೊಂಡು ಚಿತ್ರ ಮಾಡಿದರೆ ಚಿತ್ರಕ್ಕೆ ಯಶಸ್ಸು ಸಿಗೊಲ್ಲ ಎಂದು ಹೇಳಿಕೊಂಡು ತಿರುಗಾಡುತ್ತಿದ್ದರು. ಈ ಸುದ್ದಿ ಒಬ್ಬರಿಂದ ಇನ್ನೊಬ್ಬರಿಗೆ ತಲುಪುವ ವೇಳೆಗೆ ಗುಣೋತ್ತರವಾಗಿ ಮಸಾಲೆ ತುಂಬಿಕೊಳ್ಳುತ್ತಿತ್ತು. ಅಂಥ ಸಂದರ್ಭ ರಾಜ್ ನೇಪಥ್ಯಕ್ಕೆ ಸರಿಯುವ ಸೂಚನೆಯೂ ಇತ್ತು.  ರಾಜ್ ಅನುಪಸ್ಥಿತಿಯಲ್ಲಿ ಮತ್ತೊಬ್ಬರು ಬಂದು ಪಾರುಪಥ್ಯ ಹಿಡಿಯುವ ವೇಳೆಗೆ ಇಡಿಯ ಚಿತ್ರರಂಗವೇ ಮೇಲು ಕೆಳಗಾಗುತ್ತಿತ್ತು. ಪರಭಾಷಾ ಚಿತ್ರಗಳು ನಮ್ಮ ಮೇಲೆ ಸವಾರಿ ಶುರು ಮಾಡಿ ಇಡಿಯ ಚಿತ್ರರಂಗ ತಾಟಸ್ಥ್ಯಕ್ಕೆ ಸಿಲುಕುವ ಸಂದರ್ಭವಿತ್ತು. ಅಂಥ ಸಂದರ್ಭದಲ್ಲಿ ನಿರ್ಮಾಪಕಿಯಾಗಲು ಹೊರಟಿದ್ದು ಪಾರ್ವತಮ್ಮ ರಾಜ್’ಕುಮಾರ್. ಪ್ರಥಮ ಚಿತ್ರ ತ್ರಿಮೂರ್ತಿ ಯಶಸ್ವಿಯಾಗಿದ್ದಷ್ಟೇ ಅಲ್ಲದೇ ನಂತರ ಬಂದ ಶಂಕರ್ ಗುರು ಕೂಡಾ ತನ್ನದೇ ಛಾಪು ಮೂಡಿಸಿತು. ಸಿನಿಮಾ ನಿರ್ಮಾಣ ಕಾರ್ಯಕ್ಕೆ ಶಿಸ್ತು,ಸಮಯಪ್ರಜ್ಞೆ  ತಂದು ಕೊಟ್ಟದ್ದು ಅವರೇ. ರಾಜ್’ಕುಮಾರ್ ಅವರ ಚಿತ್ರದ ಆಯ್ಕೆಯಿಂದ ಹಿಡಿದು, ಸಮಯವನ್ನು ಸರಿದೂಗಿಸಿ ಕಾಲ್’ಶೀಟ್ ಕೊಡುವುದು, ನಾಯಕಿಯರನ್ನು ಆಯ್ಕೆ ಮಾಡುವುದು, ಹೊಸ ನಾಯಕಿಯರನ್ನು ಮುನ್ನೆಲೆಗೆ ತರುವುದು, ಚಿತ್ರಕ್ಕೆ ಕಥೆ ಆಯ್ಕೆ ಮಾಡುವುದು ಹೀಗೆ ಎಲ್ಲದರಲ್ಲೂ ತಮ್ಮನ್ನು ತೊಡಗಿಸಿಕೊಂಡೂ ಎಲ್ಲದರಿಂದ ದೂರವಿದ್ದವರು ಅವರು.ಅಂದರೆ ಚಿತ್ರಕ್ಕೆ ಬೇಕಾದ ತಯಾರಿ ಮಾಡಿಕೊಟ್ಟು ಯಶಸ್ಸನ್ನು ಮತ್ತೊಬ್ಬರ ಮಡಿಲಿಗೆ ಹಾಕಿ ತನ್ನದೇನು ಇಲ್ಲ ಎಂಬಂತಿರುತ್ತಿದ್ದರು. ದುಡ್ಡು ಖರ್ಚು ಮಾಡುವುದಕ್ಕಿಂತ ಬುದ್ಧಿ ಖರ್ಚು ಮಾಡಿ ಎಂದು ಪದೇ ಪದೇ ಹೇಳುವುದಷ್ಟೇ ಅಲ್ಲದೇ ಅದರಲ್ಲಿ ತೊಡಗಿಸಿಕೊಂಡಿದ್ದರು. ಒಂದು ಸ್ವಂತ ಕಥೆಯನ್ನು ಬರೆಯಲಾಗದ ಸೃಜನಶೂನ್ಯ ಚಿತ್ರರಂಗದ ಈಗಿನ ಜನ ಮತ್ತೊಂದು ಭಾಷೆಯಿಂದ ರೀಮೇಕ್ ಮಾಡಿಯೋ ಅಥವಾ ಎರಡು ಮೂರು ಚಿತ್ರಗಳ ಕಲಬೆರಕೆ ಮಾಡಿಯೋ ಚಿತ್ರ ಮಾಡುತ್ತಿದ್ದಾರೆ. ಆದರೆ ಪಾರ್ವತಮ್ಮ ಸ್ವತಃ ವಾಚನಾಭಿರುಚಿ ಉಳ್ಳವರಾಗಿದ್ದರು. ಕನ್ನಡದ ಖ್ಯಾತ ಕಾದಂಬರಿಗಳನ್ನು ಓದಿ ವರದಪ್ಪ ಮತ್ತು ಚಿ.ಉದಯಶಂಕರ್ ಅವರಿಗೆ ಓದಲು ಹೇಳಿ ಚಿತ್ರ ನಿರ್ಮಿಸುವುದಕ್ಕೆ ಸಲಹೆ ಕೊಡುತ್ತಿದ್ದರು. ಒಂದು ಸುಂದರವಾದ ಚಿತ್ರಕತೆ ನಿರ್ಮಾಣವಾಗುತ್ತಿತ್ತು. ಅದಕ್ಕೆ ಅಷ್ಟೇ ಪ್ರತಿಭಾವಂತರ ಟೀಮ್ ಕಟ್ಟಿಕೊಂಡಿದ್ದರು. ಸಾಹಿತ್ಯ ಚಿ.ಉದಯಶಂಕರ್, ಸಂಗೀತ ರಾಜನ್ ನಾಗೇಂದ್ರ, ನಿರ್ದೇಶಕ ದೋರೈ ಭಗವಾನ್ ತಾರಾಬಳಗವೆಲ್ಲಾ ಅಭಿನಯದ ಹಸಿವಿದ್ದವರಿಂದಲೇ ಕೂಡಿರುತ್ತಿತ್ತು. ನರಸಿಂಹರಾಜು, ಬಾಲಕೃಷ್ಣ, ಅಶ್ವತ್ಥ್, ವಜ್ರಮುನಿ, ತೂಗುದೀಪ ಶ್ರೀನಿವಾಸ್, ಶನಿ ಮಹಾದೇವಪ್ಪ ಹೀಗೆ ಅವರಿಗವರೇ ಅವರು ಎಂಬ ರೀತಿಯಲ್ಲಿ ಮತ್ತು ಮತ್ತೊಬ್ಬರನ್ನು ಅವರ ಜಾಗಕ್ಕೆ ಊಹಿಸಿಕೊಳ್ಳಲು ಸಾಧ್ಯವಿಲ್ಲವೇನೋ ಎಂಬ ರೀತಿಯಲ್ಲಿದ್ದರು. ಇಂಥ ಅಮೃತ ಘಳಿಗೆಯಲ್ಲಿ ಮೂಡಿಬಂದ ಕಾದಂಬರಿ ಆಧಾರಿತ ಚಿತ್ರಗಳು ಎರಡು ಕನಸು, ಚಲಿಸುವ ಮೋಡಗಳು ಇತ್ಯಾದಿ ಕನ್ನಡದ ಮತ್ತೊಂದು ಶ್ರೇಷ್ಟ ಪ್ರತಿಭಾ ಗಣಿಯಾದ ಶಂಕರ್ ನಾಗ್ ಅವರ ನಿರ್ದೇಶನದ ಒಂದು ಮುತ್ತಿನ ಕಥೆಯೂ ಕಾದಂಬರಿ ಆಧಾರಿತ ಚಿತ್ರ.

   ಈ ರೀತಿ ಚಿತ್ರ ನಿರ್ಮಿಸಿ ಹಿಟ್ ಚಿತ್ರಗಳನ್ನು ಕೊಡುತ್ತಿರುವಾಗ ಉತ್ತರ ಕರ್ನಾಟಕದ ಪರಭಾಷಾ ಪ್ರಭಾವವಿರುವ ಜಾಗಗಳಲ್ಲಿ ರಾಜ್ ಚಿತ್ರಗಳು ಬರೀ ಬೆಂಗಳೂರಿಗೆ ಸೀಮಿತ ಇಲ್ಲಿ ಅವುಗಳು ಓಡುವುದಿಲ್ಲ ಎಂದು ಕೆಲವು ಹಂಚಿಕೆದಾರರು ಖ್ಯಾತೆ ತೆಗೆಯಲು ಶುರುವಿಟ್ಟುಕೊಂಡರು. ಲೆಕ್ಕದಲ್ಲಿ ಹೆಚ್ಚು ಕಡಿಮೆ ತೋರಿಸಿ ತಮ್ಮ ಮಾತನ್ನು ನಿರೂಪಿಸಿಕೊಂಡಿದ್ದರು. ಆ ಸಂದರ್ಭಕ್ಕೆ ಉತ್ತರ ಕರ್ನಾಟಕದಲ್ಲಿ ಕನ್ನಡ ಚಿತ್ರಗಳ ಉಳಿವಿಗಾಗಿ ಪಾರ್ವತಮ್ಮ ಹಂಚಿಕೆದಾರರಾಗಬೇಕಾಯಿತು. ಆಗ ಹುಟ್ಟಿಕೊಂಡಿದ್ದೆ ವಜ್ರೇಶ್ವರಿ ಸಂಸ್ಥೆ.ಅದಲ್ಲದೆ ಬೆಳಗಾವಿ ಮತ್ತು ಹುಬ್ಬಳ್ಳಿಗಳಲ್ಲಿ ಹಂಚಿಕೆಯ ಶಾಖೆಗಳನ್ನು ನಿರ್ಮಿಸಿತು. ನಷ್ಟವಾದರೆ ನಮಗೆ ಆಗಲಿ ಹಂಚಿಕೆದಾರರಿಗೆ ಯಾಕೆ ಆಗಬೇಕು ಎಂಬ ನಿಲುವಿನಲ್ಲಿ ಹುಟ್ಟಿದ ಸಂಸ್ಥೆ ಕನ್ನಡ ಚಿತ್ರರಂಗಗಳನ್ನು ಗಡಿಭಾಗದಲ್ಲಿ ಗೆಲ್ಲಿಸಿದ್ದಷ್ಟೇ ಅಲ್ಲದೇ ಅದರ ಉಳಿವಿಗೂ ಕಾರಣವಾಯಿತು. ರಾಜ್ ಚಿತ್ರ ಉತ್ತರ ಕರ್ನಾಟಕದಲ್ಲಿ ಓಡೊಲ್ಲ ಎಂಬ ಹಂಚಿಕೆದಾರರ ಮಾತನ್ನು ಸುಳ್ಳು ಎಂದು ನಿರೂಪಿಸಿದ ಜನತೆ ರಾಜ್ ಅವರ ರೀ ರಿಲೀಸ್ ಆದ ಚಿತ್ರಗಳನ್ನು ನೂರು ದಿನ ಓಡುವ ಮಟ್ಟಿಗೆ ಯಶಸ್ಸನ್ನು ತಂದುಕೊಟ್ಟರು..

ಇಂಥ ಎರಡು ಸಂದಿಗ್ಧ ಸ್ಥಿತಿಗಳಲ್ಲಿ ಪಾರ್ವತಮ್ಮ ನಿರ್ಮಾಣ ಮತ್ತು ಹಂಚಿಕೆಯ ಹೊಣೆ ಹೊತ್ತದ್ದು ಶ್ಲಾಘನೀಯ. ಹಲವು ಬಾರಿ ಒಂದು ಪೀಳಿಗೆ ಮುಪ್ಪಿಗೆ ಜಾರುತ್ತಿದ್ದಂತೆ ಹೊಸ ಪೀಳಿಗೆಯ ನಾಡಿ ಮಿಡಿತ ಹಿಡಿಯುವ ಕಲೆ ಹಳಬರಿಗೆ ದಕ್ಕಲ್ಲ. ಆದರೆ ಚಿತ್ರರಂಗದ ಎರಡನೇ ಪೀಳಿಗೆಯ ಸಾಲಿನಲ್ಲಿ ಬರುವ ಶಿವರಾಜ್’ಕುಮಾರ್ ಚಿತ್ರಗಳು ಮತ್ತು ಅದರ ನಂತರದ ಪೀಳಿಗೆಯಲ್ಲಿ ಬಂದ ಪುನೀತ್ ರಾಜ್ ಕುಮಾರ್ ಚಿತ್ರಗಳ ಕಥೆಗಳ ಆಯ್ಕೆಯನ್ನೂ ಪಾರ್ವತಮ್ಮನವರೇ ಮಾಡುತ್ತಿದ್ದದ್ದು ಬದಲಾವಣೆಯನ್ನು ಗ್ರಹಿಸುವ ಅವರ ಚಾಣಾಕ್ಷಮತಿಗೆ ಹಿಡಿದ ಕನ್ನಡಿ. ಸುಧಾರಾಣಿ, ತಾರಾ, ರಮ್ಯಾ, ರಕ್ಷಿತಾ, ಪ್ರೇಮಾರಂಥ 32 ನಟಿಯರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದ್ದು ಪಾರ್ವತಮ್ಮ. ಸುಮ್ಮನೆ ಆ ನಟಿಯರ ಸಾಧನೆಯನ್ನು ನೋಡಿ ಪ್ರತಿಯೊಬ್ಬರ ಒಂದೊಂದು ದಶಕವನ್ನು ತಮ್ಮದು ಎಂಬಂತೆ ಮೇರು ನಟಿಯರಾಗಿ ಮೆರೆದು ಹೋದವರು. ಹೀಗೆ ಕಲಾವಿದರಲ್ಲಿನ ಪ್ರತಿಭಾ ಪ್ರಚನ್ನ ಶಕ್ತಿಯನ್ನು ಗುರುತಿಸಿ ಅದರ ಹರಿವಿಗೆ ವೇದಿಕೆ ಒದಗಿಸುವುದು ಕೂಡಾ ದೊಡ್ಡಗುಣ ಮತ್ತು ಜಾಣ್ಮೆ. ಶಿವರಾಜ್ ಕುಮಾರ್ ಅವರ ‘ಓಂ’ ಚಿತ್ರ ಮಾಡಿದ ಖ್ಯಾತಿ ತಮಗೆ ಗೊತ್ತೆ ಇದೆ. ಅದರ ಜೊತೆಗೆ ‘ಜನುಮದ ಜೋಡಿ’ ಚಿತ್ರವಂತೂ ಬಿಡುಗಡೆಗೆ ಮುನ್ನವೇ ಹಾಕಿದ ದುಡ್ಡಿಗಿಂತ ದುಪ್ಪಟ್ಟು ಬರೀ ಹಾಡಿನ ಕ್ಯಾಸೆಟ್ ಮಾರಾಟದಲ್ಲಿ ಪಡೆದಿತ್ತು. ಪುನಿತ್ ರಾಜ್’ಕುಮಾರ್ ಅವರ ‘ಮಿಲನ’ ಚಿತ್ರವೂ ೨೦೦ ದಿನಗಳ ಭರ್ಜರಿ ಪ್ರದರ್ಶನ ಕಂಡಿತ್ತು. ಹೊಸತನಕ್ಕೆ ಬೇಕಾದಂತೆ ಚಿತ್ರಕತೆ ಸಂಗೀತ ಸಾಹಿತ್ಯ ಬರುತ್ತಿತ್ತೇ ಹೊರತು ಯಾವ ಕಾಲಕ್ಕೂ ಸಭ್ಯತೆಯ ಎಲ್ಲೆ ಮೀರಲಿಲ್ಲ ಎಂಬುದನ್ನು ಗಮನಿಸಬೇಕು.

      ಇದೆಲ್ಲದರ ನಡುವೆ ಕುಟುಂಬ ನಿರ್ವಹಣೆ. ಮದುವೆಯಾದ ಮರುದಿನಕ್ಕೆ ತುಂಬು ಕುಟುಂಬದಿಂದ ಚುಟುಕು ಕುಟುಂಬಕ್ಕೆ ಸರಿದು ಹೋಗುವ ಹಲವು ಜನರನ್ನು ನೋಡುತ್ತೇವೆ. ರಾಜ್ ಅವರ ಇಡೀ ಕುಟುಂಬದ ಹೊಣೆ ಹೊತ್ತು ಎಲ್ಲವನ್ನೂ ಹೊಂದಿಸಿಕೊಂಡು ಹೋಗುವ ಗೃಹಿಣಿಯ ಪಾತ್ರವನ್ನು ಅಷ್ಟೇ ಸಮರ್ಥವಾಗಿ ನಿರ್ವಹಿಸಿದವರು ಪಾರ್ವತಮ್ಮ.

ಅದಲ್ಲದೆ ಮಾನವೀಯತೆಗೆ ಮತ್ತೊಂದು ಹೆಸರು ಎಂಬಂತಿದ್ದವರು. ಚಿತ್ರರಂಗದ ದೊಡ್ಡ ನಟರಿಗೆ ಮಾತ್ರ ಒಳ್ಳೆಯ ಊಟ ಕೊಡುತ್ತಿದ್ದ ನಿರ್ಮಾಣ ಸಂಸ್ಥೆಗಳಿದ್ದ ಕಾಲದಲ್ಲಿ ಇವರ ನಿರ್ಮಾಣ ಸಂಸ್ಥೆಯಲ್ಲಿ ಒಬ್ಬ ಕ್ಲಾಪ್ ಮಾಡುವ ಹುಡುಗನಿಗೂ ಅದೇ ಊಟ ಕೊಡುತ್ತಿದ್ದರು.ಚಿತ್ರರಂಗದ  ಹಲವರ ಕಷ್ಟಕ್ಕೆ ಸಹಾಯಹಸ್ತ ಚಾಚುತ್ತಿದ್ದರು. ರಾಜ್ ನೇತ್ರದಾನ ಸಂಸ್ಥೆಯನ್ನು ತೆರೆದು ಅಲ್ಲಿ ಹಲವು ಅಂಧರ ಬದುಕಿಗೆ ಬೆಳಕು ನೀಡಿದ್ದಾರೆ. ಮೈಸೂರಿನ ಶಾಂತಿಧಾಮ ಆಶ್ರಯ ಎಂಬ ಸಂಸ್ಥೆಯಲ್ಲಿ ೧೫೦೦ ಮಕ್ಕಳು ಮತ್ತು ೩೦೦ ಮಹಿಳೆಯರಿಗೆ ಊಟ ವಸತಿ, ಮಕ್ಕಳಿಗೆ ಶಿಕ್ಷಣ ಮತ್ತು ೨೫೦ ನೌಕರರಿಗೆ ಉದ್ಯೋಗ ನೀಡಿದ್ದಾರೆ. IAS ಉದ್ಯೋಗ ಆಕಾಂಕ್ಚಿಗಳಿಗೆ ಉಚಿತ ತರಬೇತಿ ರಾಜ್ ಕುಟುಂಬದ ವತಿಯಿಂದ ನಡೆಯುತ್ತಿದೆ. ಇದೆಲ್ಲ ಸಿನಿಮೇತರ ಕೊಡುಗೆಗಳು. ಮೂರು ಕೊಟ್ಟು ನೂರು ಕೊಟ್ಟೆವು ಎಂದು ಹೇಳಿಕೊಳ್ಳುವ ಪ್ರಚಾರಪ್ರೀಯರ ಮಧ್ಯೆ ಬಲಗೈ ಕೊಟ್ಟದ್ದು ಎಡಗೈಗೆ ಗೊತ್ತಾಗದ ಹಾಗೆ ಕೊಟ್ಟವರ ಹೆಸರುಗಳು ಕೇಳಿ ಬರುವುದಿಲ್ಲ ಅಂಥವರು ಪಾರ್ವತಮ್ಮನವರು ಮತ್ತು ರಾಜ್ ಕುಟುಂಬದವರು.

ತನ್ನ ಕೈಯಲ್ಲಿ ಚಿಕ್ಕಾಸು ಇದ್ದರೆ ಅದನ್ನೇ ಹಾಕಿ ಅಲ್ಲಿಂದ ಇಲ್ಲಿಂದ ಕಥೆ ಕದ್ದು. ಉಚ್ಛಾರ ಸ್ಪಷ್ಟತೆ ಅಷ್ಟೇ ಅಲ್ಲದೇ ಕನ್ನಡದ ಗಾಳಿ ಗಂಧವೇ ಇಲ್ಲದವರನ್ನು ನಟರಾಗಿಸಿ. ಚಿತ್ರದಲ್ಲೊಂದು ಪೈಟಿಂಗ್, ನಟನಿಗೊಂದು ಅದ್ದೂರಿ ಎಂಟ್ರಿ, ಕಾಮಿಡಿ ಎಂದರೇ ಬರೀ ಪ್ರಹಸನಗಳನ್ನೇ ತುಂಬಿ, ಉತ್ತರ ಭಾರತದ ಕಡೆಯಿಂದ ಬಂದ ಹುಡುಗಿಯರ ಕೈಲಿ ಐಟಮ್ ಡ್ಯಾನ್ಸ್ ಮಾಡಿಸಿ. ಸಾಹಿತ್ಯ ಬರೆಯಲಾಗದಿದ್ದಾಗ ಬರೆದಿದ್ದನ್ನೇ ಹಾಡು ಮಾಡಿ ಅಬ್ಬರದ ಸಂಗೀತದ ನಡುವೆ ತಮ್ಮ ಹಳಸಲು ಸಾಹಿತ್ಯವನ್ನು ಮುಚ್ಚಿ ಹಾಕುವ ತಮ್ಮ ಬೆನ್ನು ತಾವೇ ತಟ್ಟಿ ಕೊಳ್ಳುತ್ತಿರುವ ಚಿತ್ರರಂಗ ಒಂದೆಡೆಯಾದರೆ, ಅಂಥವರ ಕಟೌಟಿಗೆ ಕ್ಷೀರಾಭೀಷೇಕ ಮಾಡಿ ಅವರಾಡುವ ಅರ್ಧಂಬರ್ಧ ಕನ್ನಡವನ್ನೇ ಮೆಚ್ಚಿ ಅದನ್ನೇ ಕನ್ನಡದ ದೊಡ್ಡ ಸೇವೇ ಅಂದುಕೊಳ್ಳುವವರಿರಿವುದು ಮತ್ತೊಂದೆಡೆ..

ಶುದ್ಧ ಕಥಾಹಂದರದ, ಅರ್ಥಪೂರ್ಣ ಸಾಹಿತ್ಯದ, ಮಾಧುರ್ಯ ಸಂಗೀತದ, ಸ್ಪಷ್ಟೋಚ್ಛಾರದ ಸಂಭಾಷಣೆಯ, ಅಶ್ಲೀಲತೆ ನುಸುಳದಂತೆ ರಸಿಕತನವನ್ನು ಕೊಡಬಲ್ಲ ಸಂಸ್ಕಾರಯುತ ಜಾಣ್ಮೆಯ, ಸಮಾಜದ ಸ್ವಾಸ್ಥ್ಯ ಕದಡದ ಮತ್ತು ನೈತಿಕತೆಯ ರೂವಾರಿಯಾಗಿರುವ ಚಿತ್ರಗಳು ನಿಜಕ್ಕೂ ಕನ್ನಡಕ್ಕೆ ರಾಜ್ ಕುಟುಂಬ ಕೊಟ್ಟ ಕಾಣಿಕೆಯೇ ಸರಿ. ಯಾರೊಪ್ಪದಿದ್ದರೂ ಬಿಟ್ಟರೂ ಅದೊಂದು ಸಾಧನೆಯೇ ಸರಿ. ಇಷ್ಟೆಲ್ಲ ಸಾಧನೆ ಮಾಡಿದರೂ ಇಷ್ಟೆಲ್ಲಾ ಕೊಡುಗೆ ನೀಡಿದರು. ಕೆಲವರಿಗೆ ಒಂದೇ ಚಾಳಿ ಇರುತ್ತೆ. ತಾನು ಏನು ಮಾಡದಿದ್ದರೂ ಮತ್ತೊಬ್ಬರ ಸಾಧನೆಯನ್ನು ಅಳೆದು ಅವರು ಸಾಧಕರೋ ಅಲ್ಲವೋ ಎಂಬ ಸರ್ಟಿಫಕೇಟ್ ಕೊಡುವುದು. ಫೇಸ್ಬುಕ್ ಟ್ವೀಟರ್’ನಂಥ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಸ್ಟೇಟಸ್ ಶೂರರಿಗೆ ವಸ್ತುಸ್ಥಿತಿಯನ್ನು ಅರಿತುಕೊಳ್ಳುವ ವ್ಯವಧಾನವಾಗಲಿ ತಾಳ್ಮೆಯಾಗಲಿ ಇರುವುದಿಲ್ಲ.  ಲೈಕು ಕಮೆಂಟ್’ಗಳ ಖಯಾಲಿಗೆ ಬಿದ್ದು ಪರಿಸ್ಥಿತಿ ಪರಿಕರಗಳನ್ನು ಅವಲೋಕಿಸಿದೇ ತಮ್ಮ ಮೂಗಿನ ನೇರಕ್ಕೆ ಇರುವುದೇ ಸತ್ಯ ಅಂತ ನಂಬಿರುವವರನ್ನು ಬದಲಿಸಲು ಸಾಧ್ಯವಿಲ್ಲ. ಅವರನ್ನು ಬದಲಿಸುತ್ತೇನೆ ಎಂಬ ಭ್ರಮೆಯಲ್ಲಿ ಈ ಲೇಖನ ಬರೆಯುತ್ತಿಲ್ಲ. ಬದಲಾಗಿ ತೀರಿ ಹೋದವರಿಗೆ ಅಕ್ಷರ ರೂಪದ ಶೃದ್ಧಾಂಜಲಿ ಅರ್ಪಿಸಿ,ಅವರಂಥವರು ಮತ್ತೆ ಹುಟ್ಟಿ ಬರಲಿ ಎಂದು ಆಶಿಸುತ್ತಾ. ಅವರ ಕೊಡುಗೆಗಳ ಬಗ್ಗೆ ಪಕ್ಷಿನೋಟ ಮತ್ತು ಬೆರಗು ನೋಟವನ್ನು ಬೀರುವುದೇ ಲೇಖನದ ಆಶಯ…

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!