ಅಂಕಣ

ಬಿಡು ಒರಟು ನರಭಾಷೆ, ಆಲಿಸೊಳಗಿನ ಮಾತು ಕೂಸೇ !

ಮಂಕುತಿಮ್ಮನ ಕಗ್ಗ ಟಿಪ್ಪಣಿ ೬೩.

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು ? |

ಅರಿಯದದು ನಮ್ಮೆದೆಯ ಭಾವಗಳನೊರೆಯ ||

ಪರಮಾನುಭಾವಗಳುಲಿಯನುಭವಿಗಳೊಳಕಿವಿಗೆ |

ಒರಟುಯಾನವೊ ಭಾಷೆ – ಮಂಕುತಿಮ್ಮ || ೬೩ ||

ಮಾನಸ ಸರೋವರ ಕನ್ನಡ ಚಿತ್ರದ ಮಧುರವಾದ ‘ಹಾಡು ಹಳೆಯದಾದರೇನು ಭಾವ ನವನವೀನ, ಎದೆಯ ಭಾವ ಹೊಮ್ಮುವುದಕೆ ಭಾಷೆ ಒರಟು ಯಾನ’ ಸಾಲುಗಳನ್ನು ನಾವೆಲ್ಲಾ ಕೇಳಿಯೇ ಇರುತ್ತೇವೆ. ಆ ಸಾಲುಗಳಲ್ಲಿನ ಭಾವನೆ ಮತ್ತು ಪದಗಳನ್ನು ನೇರ ಈ ಕಗ್ಗದಿಂದಲೇ ಪ್ರಕ್ಷೇಪಿಸಿ ಹಾಡಿಗೆ ವರ್ಗಾಯಿಸಿದಂತಿದೆ – ಸಾರ ರೂಪದಲ್ಲಿ. ಕಗ್ಗದ ಸಾಲುಗಳಲ್ಲಿ ಅಡಗಿರುವ ಅದರ ವಿಸ್ತೃತ ಮಥಿತಾರ್ಥವನ್ನು ಮುಂದಿನ ವಿವರಣೆಯಲ್ಲಿ ನೋಡೋಣ.

ಇಲ್ಲಿ ಮಂಕುತಿಮ್ಮ ನಮ್ಮ ನರಮಾನವ ಭಾಷೆಯಲ್ಲಿರುವ ಸೀಮಿತತೆಯನ್ನು, ಅಶಕ್ತತೆಯನ್ನು ಮತ್ತದರ ದೌರ್ಬಲ್ಯವನ್ನು ಎತ್ತಿ ತೋರಿಸುತ್ತಾನೆ – ಅದರಲ್ಲು ಪರಬ್ರಹ್ಮದ ಪರಮಾತ್ಮ ಸ್ವರೂಪದಂತಹ ಗಹನ ತತ್ವವನ್ನು ವಿವರಿಸುವ ಮಾತಿಗೆ ಬಂದಾಗ. ನಮ್ಮ ಈ ಭಾಷೆ ಪರಸತ್ತ್ವ ರೂಪವನ್ನು ಬಣ್ಣಿಸುವುದಿರಲಿ, ನಮ್ಮ ಭಾವನೆಗಳನ್ನೆ ಸರಿಯಾಗಿ ಬಣ್ಣಿಸುವ ಸಾಮರ್ಥ್ಯವೂ ಅದಕ್ಕಿಲ್ಲ ಎನ್ನುತ್ತಾ.

ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು ? |

ಅರಿಯದದು ನಮ್ಮೆದೆಯ ಭಾವಗಳನೊರೆಯ ||

ಪರಸತ್ತ್ವ ರೂಪವನ್ನು ವರ್ಣಿಸಬೇಕಾಗಿ ಬಂದಾಗ ನಮ್ಮ ಭಾಷೆಯ ಸಾಮರ್ಥ್ಯ ಎಷ್ಟು ಕಿರಿದು ಎನ್ನುವ ವಿಷಯ ಅರಿವಿಗೆ ಬರುತ್ತದೆ. ಅದರ ಸಾಕಾರ-ನಿರಾಕಾರ ರೀತಿ, ಸಗುಣ-ನಿರ್ಗುಣ ರೂಪ, ಪುರುಷ-ಪ್ರಕೃತಿ ಸ್ವರೂಪ, ‘ ಅದು’ ಎಂದು ಸಂಭೋಧಿಸಲ್ಪಡುವ ರೀತಿ – ಹೀಗೆ ಇಡೀ ಶಬ್ದ ಭಂಢಾರದ ಹಿಂದೆ ಬಿದ್ದು ಏನೆಲ್ಲಾ ತಿಪ್ಪರಲಾಗ ಹಾಕಿದರು ಇಂದ್ರೀಯಗಳ ಪರಿಕಲ್ಪನೆಗೆಟುಕುವಂತೆ ಒಂದು ಸರಳ ವಿವರಣೆ ಕೊಡಲಾಗುವುದಿಲ್ಲ. ‘ಅದು ಏನು?’ ಎಂದು ವಿವರಿಸಲು ಆಗದ ಕಾರಣಕ್ಕೆ ಅದನ್ನು ನೇರ ವಿವರಿಸುವ ಗೋಜನ್ನು ಬಿಟ್ಟು, ಪರೋಕ್ಷ ವಿವರಣೆಗಿಳಿಯುವ ಅನಿವಾರ್ಯ ಬಂದುಬಿಡುತ್ತದೆ – ‘ಅದು ಏನಲ್ಲ? ‘ ಎಂದು ವಿವರಿಸುವ ಮೂಲಕ. ಬೆಂಕಿ ಸುಡದ, ನೀರಲ್ಲಿ ಒದ್ದೆಯಾಗದ, ಗಾಳಿಯ ಹಿಡಿತಕ್ಕೂ ಸಿಗದ – ಎಂತೆಲ್ಲ ಹೆಣಗಾಡುತ್ತಾ ನಡೆವಾಗ ನಮ್ಮ ನರಭಾಷೆ ಎಷ್ಟು ಸೀಮಿತ ಸಾಮರ್ಥ್ಯದ್ದು ಎನ್ನುವ ಅಂದಾಜು ಸಿಗುತ್ತದೆ. ಅದರಿಂದ ‘ನಮ್ಮ ಸೀಮಿತ ನರಭಾಷೆಯಲ್ಲಿ ನಿಜಕ್ಕೂ ಪರಸತ್ತ್ವವನ್ನು ವರ್ಣಿಸಲಾದೀತೇ ? ಬಿಡು ಬಿಡು’ ಎನ್ನುವ ತೀರ್ಮಾನಕ್ಕೆ ಬರುತ್ತಾನೆ ಮಂಕುತಿಮ್ಮ.

ಹಾಗೆಂದು ಸುಮ್ಮನೆ ತೀರ್ಮಾನಕ್ಕೆ ಬಂದರಾಯ್ತೆ ? ಅದರ ಕಾರಣಗಳನ್ನೂ ಮನದಟ್ಟಾಗಿಸಬೇಕಲ್ಲವೇ ? ಆ ಯತ್ನ ಎರಡನೇ ಸಾಲಿನಲ್ಲಿ ಕಾಣಿಸಿಕೊಳ್ಳುತ್ತದೆ. ನಮ್ಮ ನರಭಾಷೆ ಅದೆಷ್ಟು ಬಾಲಿಶದ್ದೆಂದರೆ ಕೇವಲ ಸರಳ ಬಾಹ್ಯ ಭೌತಿಕ ಸಂವಹನಕಷ್ಟೇ ಅದರ ಸಾಮರ್ಥ್ಯ ಸೀಮಿತ – ಅದೂ ಸರಿಯಾದ ಪದ ಬಳಕೆ, ಸುಸಂಬದ್ಧ ವಾಕ್ಯ ಸಂಯೋಜನೆ, ಗೊಂದಲರಾಹಿತ್ಯತೆ ಇತ್ಯಾದಿ ನಿಯಮಗಳು ಸರಿಯಾಗಿ ಬಳಕೆಯಾದಾಗ. ಇಲ್ಲವಾದಲ್ಲಿ, ಆ ಸಂವಹನವೂ ಅಸ್ಪಷ್ಟವಾಗಿದ್ದು ತಪ್ಪು ಗ್ರಹಿಕೆಗೆ ಕಾರಣವಾಗಬಹುದು. ಸಾಲದ್ದಕ್ಕೆ ಅದಕ್ಕೆ ಮಾತಿನ ಜತೆಗೆ ಬರಹದ ಸಾಂಗತ್ಯವು ಇರಬೇಕು – ದಾಖಲೆಯಾಗಿ ಮಾತ್ರವಲ್ಲದೆ ಸಂವಹನದ ದಕ್ಷತೆ ಮತ್ತು ಸುಸೂತ್ರತೆಗಾಗಿ. ಇಂತಿರುವಾಗ, ಆಂತರ್ಯದಲ್ಲಿ ನಮಗೇ ಸರಿಯಾಗಿ ಮತ್ತು ಪೂರ್ಣವಾಗಿ ಸ್ಪಷ್ಟವಾಗದ ಮತ್ತು ಪೂರ್ಣವಾಗಿ ಅರ್ಥವಾಗದ ನಮ್ಮೆದೆಯೊಳಗಿನ ಭಾವನೆಗಳನ್ನು ಆ ಸೀಮಿತ ಭಾಷೆಯ ಮೂಲಕ ಗ್ರಹಿಸಿ, ಸಂವಹಿಸಲು ಸಾಧ್ಯವೇ ? ಆಂತರ್ಯದ ಆಳದ ತೀವ್ರಭಾವಗಳ ಮಾತಿರಲಿ, ಕಡಲ ನೀರಿನ ತೆರೆಗಳಿಗಂಟಿಕೊಂಡ ನೊರೆಗಳ ಹಾಗೆ ಆ ಭಾವದ ಮೇಲ್ಪದರಕ್ಕಂಟಿಕೊಂಡ, ಹೊರಪದರದಲ್ಲಿ ಲೇಪನಗೊಂಡಂತಿರುವ ತಾತ್ಕಾಲಿಕ ತುಣುಕುಗಳನ್ನು ಸಂವಹಿಸಲು ಕೂಡ ತಿಣುಕಾಡುವಂತಾಗುತ್ತದೆ – ನಮ್ಮ ಭಾಷೆಯಲ್ಲಿ ಅದನ್ನು ಸಂವಹಿಸಲು ಹೊರಟಾಗ. ಅದರಲ್ಲೂ ನೊರೆಯಂತೆ ಎಂದಾಗ ಅದರ ಇರುವಿಕೆ ಕೆಲಕ್ಷಣಗಳವರೆಗೆ ಮಾತ್ರ; ಹಾಗೆ ಬಂದು ಹೀಗೆ ಮರೆಯಾಗಿಬಿಡುತ್ತದೆ. ಅಷ್ಟರೊಳಗೆ ಆ ನೊರೆಯಂತಹ ಭಾವಗಳನ್ನು ಸೆರೆಹಿಡಿದು ನಮ್ಮ ಭಾಷೆಯ ಪರಿಕರಗಳ ಸಹಾಯದಿಂದ ಪದಸಾಲುಗಳಾಗಿಸಿಬಿಡಬೇಕು. ಅದೆಲ್ಲವೂ ಕ್ಷಣಿಕ ಕಾಲದಲ್ಲೇ ವೇಗವಾಗಿ ನಡೆಯಬೇಕಾದ ಕಾರಣ, ಎಷ್ಟೋಬಾರಿ ಬಂದ ಭಾವಗಳೆಲ್ಲ ನೊರೆಯ ಹಾಗೆ ತೋರಿಕೊಂಡು ಮಾಯವಾಗಿಬಿಡುತ್ತವೆ. ಕೆಲವೊಮ್ಮೆ ಕೈಗೆ ಸಿಕ್ಕಂತಾದರೂ ಅದನ್ನು ಸಶಕ್ತವಾಗಿ ಹಿಡಿದಿಡಲು ಶಬ್ದಗಳ ಭಂಢಾರ, ಭಾಷಾ ಪ್ರಾವೀಣ್ಯತೆ, ಸ್ಪಷ್ಟಾನಾಸಾಮರ್ಥ್ಯ ಸಾಲದೇ ಹೋಗಿ ಆಂಗಿಕ ಸನ್ನೆ, ಸಂವಹನ ಮತ್ತು ಒಳಮನದ ಅನಿಸಿಕೆಗಳ ಸಹಾಯವನ್ನು ಪಡೆಯಬೇಕಾಗುತ್ತದೆ. ಅಷ್ಟಿದ್ದೂ, ಅದು ಬರಿಯ ನೊರೆಯ ಮಾತಷ್ಟೇ; ಇನ್ನೂ ಆಳದ ಭಾವದ ಮಾತಿಗೆ ಹೋದರೆ ಉತ್ತರವೇ ಇಲ್ಲ – ಅದರ ಗೋಚರ ರೂಪವೇ ಅಸ್ಪಷ್ಟವಿರುವುದರಿಂದ. ಅಷ್ಟರಮಟ್ಟಿಗೆ ನಮ್ಮ ಭಾಷಾಸತ್ತ್ವ ಅಶಕ್ತವಾದದ್ದು.

ಪರಮಾನುಭಾವಗಳುಲಿಯನುಭವಿಗಳೊಳಕಿವಿಗೆ |

ಒರಟುಯಾನವೊ ಭಾಷೆ – ಮಂಕುತಿಮ್ಮ ||

ಪರಮಾನುಭಾವಗಳು ಅಂದರೆ ಪರಮ + ಅನುಭಾವಗಳು. ಉಲಿ ಅಂದರೆ ದನಿ ; ಉಲಿಯನುಭವಿಗಳೊಳಕಿವಿಗೆ ಅಂದರೆ ಉಲಿ (= ದನಿ, ಸಂದೇಶವಾಗುತ್ತದೆ) + ಅನುಭವಿಗಳ + ಒಳಕಿವಿಗೆ. ಇಲ್ಲಿ ನಮಗೆ ಗೊತ್ತಿರುವ ನರಭಾಷೆಯನ್ನು ಮೀರಿದ ಮತ್ತಾವುದೋ ಸಂವಹನದ ಆಯಾಮ ಪ್ರಸ್ತಾವಿತವಾಗಿದೆ. ನರಭಾಷೆ ಶಬ್ದದ ಮೂಲಕ ವ್ಯಕ್ತವಾಗುವ, ಸದ್ದುಗದ್ದಲಗಳಿಂದ ಕೂಡಿದ ಒರಟುತನವಿರುವ ಮಾಧ್ಯಮ. ಅದರ ಭಾವಸಂವಹನ ಶಕ್ತಿ ಸೀಮಿತವಾದದ್ದು. ಆದರೆ ಆ ಭೌತಿಕ ಮಾತಿನ ಗೊಡವೆ ಬಿಟ್ಟು ಒಳಗಿನ (ಮನದೊಳಗಿನ) ಕಿವಿಯನ್ನು ತೆರೆದು ಆಲಿಸುವ ಅನುಭವಸ್ತರಿಗೆ ಮಾತ್ರ ಮತ್ತಾವುದೋ ಉಲಿ, ದನಿಯ ಇರುವಿಕೆಯ ಗ್ರಹಿಕೆಯಾಗುತ್ತದೆ – ಅಲೌಕಿಕ, ಅಭೌತಿಕ ಪರಮಾನುಭಾವಗಳ ರೂಪದಲ್ಲಿ. ಇದು ವಿವರಿಸಬಲ್ಲ ಅನುಭವ ಎನ್ನುವುದಕ್ಕಿಂತ ಅಲೌಕಿಕವೆನ್ನುವ ಅನುಭಾವವಾದ ಕಾರಣ ಪರಮಾನುಭಾವ ಎನ್ನುತ್ತಾನೆ ಮಂಕುತಿಮ್ಮ. ಸಾರದಲ್ಲಿ ಹೇಳುವುದಾದರೆ, ಅಂತಹ ಪರಮಾನುಭಾವಗಳೇ ಅನುಭವಿಗಳೊಳಕಿವಿಗೆ ಅಂತರ್ದನಿಯ ರೂಪದಲ್ಲಿ ಗೋಚರವಾಗುತ್ತ ಮಾರ್ದನಿಸುತ್ತಿರುತ್ತವೆ. ಆ ದನಿಗೆ ಶಬ್ದ, ಪದದ ಗೊಡವೆಯಿಲ್ಲದ ಕಾರಣ ಒಂದು ರೀತಿಯ ಅತಿಂದ್ರೀಯ ಸ್ವರೂಪದಲ್ಲಿ ಹೇಳಲಾಗದ್ದೆಲ್ಲ ಗ್ರಹಿಕೆಯಾಗಿಬಿಡುತ್ತದೆ. ಎರಡು ಅನುಭವೀ ಮನಗಳು ಮೌನದಲ್ಲೇ ಮಾತಾಡಿಕೊಂಡಾಗ ಇದೆ ರೀತಿಯ ಶಬ್ದರಹಿತ, ಪದರಹಿತ ಸಂವಹನ ತಾನೇ ತಾನಾಗಿ ನಡೆಯುವುದು ಎಷ್ಟೋಬಾರಿ ನಮ್ಮ ಅನುಭವಕ್ಕೂ ಬಂದಿರುತ್ತದೆ. ಇದು ನರಭಾಷೆಯ ತಾಕತ್ತನ್ನು ಮೀರಿಸಿದ ಉನ್ನತ ಸ್ತರದ ಸಂವಹನ ಸಾಮರ್ಥ್ಯ – ಹೀಗಾಗಿಯೇ ಅದರ ಮೂಲಕ ಭಾವದ ಸಂವಹನವೂ ಸಾಧ್ಯ – ದಕ್ಷ ರೀತಿಯಲ್ಲಿ, ಕ್ಷಮತೆಯಲ್ಲಿ ಕುಂದಾಗದ ಹಾಗೆ.

ಅದು ಹೇಗೆಂದು ಅರ್ಥವಾಗದಿದ್ದರೂ, ಅದು ಏನೆಂದು ಅರ್ಥವಾಗುವ ಈ ಬಗೆಯ ಸಂವಹನ ಪರಿಯನ್ನು ಕಂಡಾಗ ನಮ್ಮಲ್ಲೂ ಮೂಡುವ ಅನಿಸಿಕೆ – ನಮ್ಮ ನರಮಾನವ ಭಾಷೆ ಅದೆಷ್ಟು ಸಂಕುಚಿತವಾದದ್ದು ಎಂದು. ಅದರಲ್ಲೂ ನಮ್ಮಲ್ಲಿರುವ ದೇಶಕಾಲಕೋಶಗಳನುಸಾರ ನೂರೆಂಟು ಭಾಷೆ ಮತ್ತವುಗಳ ಪ್ರಬೇಧಗಳು ಬೇರೆ. ಅವೆಲ್ಲದರ ಸಂಯೋಜಿತ ಸಂಕೀರ್ಣತೆಯಲ್ಲಿ ಸರಳತೆಯು ಎಲ್ಲೋ ಮಾಯವಾಗಿಬಿಟ್ಟಿರುತ್ತದೆ. ಸ್ವಲ್ಪ ಏಮಾರಿ ತಪ್ಪಾಗಿ ಅರ್ಥೈಸಿಕೊಂಡರೆ ಸಂಬಂಧಗಳೇ ದಾರಿತಪ್ಪಿ ಜಗಳ, ಕದನ, ಕೋಲಾಹಲಗಳ ಮೂಲಸರಕಾಗಿಬಿಡುತ್ತದೆ – ನಮ್ಮ ಇದೇ ಭಾಷೆ. ಇವುಗಳನ್ನು ಕಲಿಯಲೆಂದೇ ಅದೆಷ್ಟು ಹರಸಾಹಸ ಮಾಡುತ್ತೇವೆ, ತೊಡಕನುಭವಿಸುತ್ತೇವೆ; ಅಧ್ಯಯನ ಮಾಡುತ್ತೇವೆ, ಅಭ್ಯಸಿಸುತ್ತೇವೆ, ಪರೀಕ್ಷೆಯೆಲ್ಲ ಬರೆದು ಪದವಿ ಪತ್ರ ಪಡೆದುಕೊಳ್ಳುತ್ತೇವೆ. ಆದರೂ ಅದರ ಸೀಮಿತತೆಯನ್ನು ವಿವಾದಾತೀತವಾಗಿ, ಭಾವಾತೀತವಾಗಿ ವಿಸ್ತರಿಸಲಾಗುವುದಿಲ್ಲ. ಪ್ರೀತಿಯ ತೋರ್ಪಡಿಕೆಯಲ್ಲಿ ನಯವಾದ, ಹಿತವಾದ ಸಂಗೀತವಾಗುವ ಶಕ್ತಿ, ಸಾಮರ್ಥ್ಯವೇನೋ ಇದಕ್ಕಿದೆಯೆನ್ನುವುದು ನಿಜವಾದರೂ ಅದು ಬಳಕೆದಾರರ ಹಿನ್ನಲೆ, ಸೌಜನ್ಯ, ಇಂಗಿತಾದಿಗಳನ್ನವಲಂಬಿಸಿದ ಸಂಕೀರ್ಣ ಸಮೀಕರಣ. ಎಲ್ಲರಲ್ಲೂ ಒಂದೇ ಬಗೆಯಲ್ಲಿಲ್ಲದ ಅವಲಂಬಿತ ವಿದ್ಯಾಮಾನ. ಜಗಳವಾಡುವ ಹೊತ್ತಲಿ ಇದೇ ಭಾಷೆ ಬಳಸುವ ಪದ, ದನಿಯ ಏರಿಳಿತ, ಕೈ ಮಿಲಾಯಿಸುವಂತಾಗಿಸುವ ಮಾತಿನ ಮೊನಚು, ಸ್ವಲ್ಪ ಹದ ತಪ್ಪಿದರೂ ಧೀರ್ಘಕಾಲಿಕ ಬಿರುಕುಂಟಾಗಿಸುವ ಇದರ ಕಟುಕ-ಸಾಮರ್ಥ್ಯ, ಪತಿ-ಪತ್ನಿ, ಮಕ್ಕಳು-ಪೋಷಕರು ಇತ್ಯಾದಿ ತರಹದ ಹತ್ತಿರದ ಸಂಬಂಧಗಳಲ್ಲೇ ಒಡಕನ್ನುಂಟುಮಾಡಬಲ್ಲ ಅಪರಿಪಕ್ವತೆ – ಇವೆಲ್ಲವನ್ನೂ ಕಂಡಾಗ ಮಾತಿಲ್ಲದ ಅನುಭಾವವೇ ಮಾತಿಗಿಂತ ಎಷ್ಟೋ ಪಟ್ಟು ಹೆಚ್ಚು ನಯ ಮತ್ತು ಹೆಚ್ಚು ಪರಿಣಾಮಕಾರಿ (ಪ್ರತಿಯೊಬ್ಬನು ಅದನ್ನು ಶಾಸ್ತ್ರೋಕ್ತವಾಗಿ ಭಾಷೆಯನ್ನು ಕಲಿಯುವ ಹಾಗೆ ಕಲಿಯದಿದ್ದರೂ ಸಹ) ಎಂದು ಅನಿಸುವುದರಲ್ಲಿ ಅಚ್ಚರಿಯೇನಿಲ್ಲ. ಅದನ್ನೇ ಮಂಕುತಿಮ್ಮನೂ ತನ್ನ ಉದ್ಗಾರದಲ್ಲಿ ಧ್ವನಿಸುತ್ತಾನೆ – ನಾವು ಬಳಸುವ ಭಾಷೆ ಒಂದು ರೀತಿಯ ಒರಟು ಯಾನ ಎಂದು. ಡಾಂಬರು ಬಳಿದಿಲ್ಲದ ಕಲ್ಲುಮಣ್ಣಿನ, ಏರು ತಗ್ಗುಗಳಿಂದಷ್ಟೇ ತುಂಬಿದ ಕಚ್ಚಾ ರಸ್ತೆಯಲ್ಲಿ, ಎತ್ತಿನ ಗಾಡಿಯೊಂದರಲ್ಲಿ ಮೆತ್ತೆಯಿಲ್ಲದ ಚಾಪೆಯ ಮೇಲೆ ಕುಳಿತು ಸುಧೀರ್ಘ ಪಯಣ ಹೊರಟಾಗ ಆಗುವ ಅನುಭವ ಹೇಗಿರುತ್ತದೆಂದು ನೆನೆಸಿಕೊಂಡರೆ ಸಾಕು – ಒರಟುಯಾನದ ಚಿತ್ರ, ಅನುಭಾವ ಮನಸಿಗೆ ದಕ್ಕಿಬಿಡುತ್ತದೆ. ಮಸಲಾ, ಎತ್ತಿನಗಾಡಿಯೇ ಆಗಬೇಕೆಂದಿಲ್ಲ – ನಮ್ಮ ಶಟಲ್ ಬಸ್ಸುಗಳೇನು ಕಡಿಮೆಯಿಲ್ಲ, ಇದೇ ಅನುಭವವನ್ನು ಹಂಚುವಲ್ಲಿ. ಅಂತಹ ಒರಟುತನದ, ಒರಟುಯಾನದ ಹಾಗೆ ನಮ್ಮ ಭಾಷೆಯ ಜತೆಗಿನ ಪಯಣವೂ ಕೂಡ. ಇಹಜಗದ ಸಾಮಾನ್ಯ ವ್ಯಾಪಾರಕ್ಕೆ ಅದು ಸಾಕೆಂದೆನಿಸಿದರು ಅದರಾಚೆಯ ಅರಿವಿಗೆ, ಗ್ರಹಿಕೆಗೆ ಅದು ಸಾಲದು; ದೂರ ಪಯಣಕ್ಕೆ ವಿಮಾನವೇರಿ ತೇಲಿಕೊಂಡು, ಹಾರಿಕೊಂಡು ಹೋಗುವ ಹಾಗೆ ಮತ್ತಾವುದೋ ಮಾಧ್ಯಮದ ಸಾಂಗತ್ಯ ಬೇಕಾಗುತ್ತದೆ. ಅಂತರಾಳದ ಅನುಭಾವದ ರೂಪದಲ್ಲಿ ಅದು ನಮ್ಮೊಳಗಲ್ಲಿ, ನಮಗೇ ಕಾಣದಂತೆ (ಆಲಿಸಬಯಸಿದವರ ಗ್ರಹಿಕೆಗೆ ಮಾತ್ರ ನಿಲುಕುತ್ತ) ಅಡಗಿ ಕೂತಿರುತ್ತದೆ ಎನ್ನುವ ಸೂಕ್ಷ್ಮ ಸಂಜ್ಞೆಯೂ ಇಲ್ಲಿ ಅಡಕವಾಗಿದೆ

ಒಟ್ಟಾರೆ, ಮಾತಿಗೆ ಮೀರಿದ ಸಂವಹನ ಮಾಧ್ಯಮಗಳು ನಮ್ಮೊಳಗೇ ಅದೆಷ್ಟೋ ಇವೆ, ಅವನ್ನು ಜಾಗೃತಗೊಳಿಸಿಕೊಂಡು ಸೂಕ್ತವಾಗಿ ಬಳಸಿಕೊಂಡರೆ ಒರಟು ಭಾಷೆಯ ಸೀಮಿತತೆಯನ್ನು ಅಧಿಗಮಿಸುವ ಸುಲಭದ ದಾರಿ ಸಿಕ್ಕಂತಾಗುತ್ತದೆ ಎನ್ನುತ್ತಿದ್ದಾನಿಲ್ಲಿ ಮಂಕುತಿಮ್ಮ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!