Featured ಅಂಕಣ

ಕನ್ನಡಿಗರೇ ಕೇಳಿ ಇಲ್ಲಿ…

ಮೊನ್ನೆ ಬೆಳ್ಳಂದೂರಿನ ಮುಖ್ಯ ರಸ್ತೆಯಲ್ಲಿ ನನ್ನ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದೆ. ನೋಡ ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ರಸ್ತೆಯ ಮೇಲೆ ಬಂದು ಬಿಟ್ಟ. ನಾನು ಗಡಿಬಿಡಿಯಲ್ಲಿ ನಿಯಂತ್ರಕವನ್ನು ಅದುಮಿ ವಾಹನ ನಿಲ್ಲಿಸಿದೆ. “ನೋಡೇ ಇಲ್ಲಾ ಗುರು.. ಕ್ಷಮಿಸಿಬಿಡು (ಆಂಗ್ಲ ಭಾಷೆಯಲ್ಲಿ ಕ್ಷಮಿಸಿಬಿಡು) ಎಂದ. ಅವನು ಗೋಲಗಪ್ಪಾ ಮಾರುವ ಉತ್ತರಭಾರತೀಯ ಹುಡುಗ. ಇಳಿದು ತಬ್ಬಿಕೊಂಡುಬಿಡುವಷ್ಟು ಖುಷಿಯಾಯಿತು. (ಆದರೆ ಅವನು ಮುಕ್ಕಾಲು ಮೀಟರ್ ದೂರದಿಂದಲೇ (ದುರ್)ಘಮಿಸಿದ ಪರಿಗೆ ನಾನು ತಬ್ಬಿಕೊಳ್ಳುವ ಧೈರ್ಯ ಮಾಡಲಿಲ್ಲ.)

ಅದೆಷ್ಟು ಚಂದವಾಗಿ ಕನ್ನಡವ ನುಡಿದನು ಆ ಹುಡುಗ.

ನೀವು ರೇಷ್ಮೆ ನಿಗಮದ ಸಂಚಾರಿ ದೀಪವನ್ನು ದಾಟಿ ಅತ್ತ ಹೊಸೂರಿನ ಕಡೆಗೋ, ಇತ್ತ ಮಾರತ್ತಳ್ಳಿ ಕಡೆಗೋ ಹೋದರೆ ನಿಮಗೆ ಅಭ್ಯಾಸವಾಗುತ್ತದೆ. ಅಲ್ಲಿ ಯಾರೇ ನಿಮ್ಮನ್ನು ಮಾತನಾಡಿಸುವದಿದ್ದರು ಹಿಂದಿಯಲ್ಲೇ ಸಂಭಾಷಣೆ ಆರಂಭವಾಗುತ್ತದೆ. ನೀವಾಗಿಯೇ ಕನ್ನಡ ಮಾತನಾಡಿದರೆ ಮಾತ್ರ, ಒಂದು ಹತ್ತಿಪ್ಪತ್ತು ಶೇಕಡಾ ಜನ ನಿರರ್ಗಳ ಕನ್ನಡ ಮಾತನಾಡಬಲ್ಲರು. ಒಂದಿಪ್ಪತ್ತು ಶೇಕಡಾ ಜನ ಕನ್ನಡ ಆಂಗ್ಲ ಸೇರಿಸಿ ಮಾತನಾಡುತ್ತಾರೆ.

ಇವತ್ತು ಹಿಂದಿ ಬೇಡ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಹುಯಿಲೆಯೆಬ್ಬಿಸುತ್ತಿರುವ ಮಾಹಿತಿ ತಂತ್ರಜ್ಞಾನ ಸ್ನೇಹಿತರೆ ಇಲ್ಲಿ ಕೇಳಿ,

ನೀವು ಬಸವನಗುಡಿ, ಜಯನಗರ, ರಾಜಾಜಿ ನಗರ, ಚಾಮರಾಜಪೇಟೆ ಕಡೆಗೆಲ್ಲ ಇರುವವರಾದರೆ ನಿಮಗೆ ಕನ್ನಡದ ಸಂಸ್ಕೃತಿ ಪರಿಚಯ ಚೆನ್ನಾಗೇ ಇರುತ್ತದೆ. ಆದರೆ ಮಾಹಿತಿ ತಂತ್ರಜ್ಞಾನ ಮುಖ್ಯವಾಗಿರುವ ಕಡೆಗೆಲ್ಲ ಅದೊಂದು ಬಹುಸಂಸ್ಕೃತಿಗಳ ಸಮೂಹ. ಅಲ್ಲೆಲ್ಲ ನಮ್ಮತನವೇ ಇಲ್ಲ. ಅವರಿಗಾರಿಗೂ ನಮ್ಮ ಸಂಸ್ಕೃತಿಯ ಅಗತ್ಯವಿಲ್ಲ. ನಮ್ಮ ನಗರದಲ್ಲಿ ಒಂದು ಕೋಟಿ ಜನರಿದ್ದಾರೆ. ಇಲ್ಲಿನ ನೆಲದ ಬೆಲೆ ಗಗನಕ್ಕೇರಿದೆ. ನಿಜವಾಗಿಯೂ ಅದಕ್ಕೆ ತಕ್ಕ ಪ್ರಾಥಮಿಕ ಸಾಮಾಜಿಕ ಸೌಕರ್ಯಗಳು ನಮ್ಮಲ್ಲಿ ಇದೆಯೇ ಎಂದು, ಎಂದಾದರೂ ಧ್ವನಿ ಎತ್ತಿದ್ದೀರಾ? ಹೊರ ವರ್ತುಲ ರಸ್ತೆಯ ಇಕ್ಕೆಲಗಳಲ್ಲೂ ದೈತ್ಯ ಮಾಹಿತಿ ಮತ್ತು ಸೇವಾ ಸಂಸ್ಥೆಗಳ ಉದ್ಯಾನಗಳನ್ನೇ ಕಟ್ಟಿ, ನಾಯಿಕೊಡೆಯಂತೆ ಕಟ್ಟಡಗಳನ್ನೆಬ್ಬಿಸಿ, ಇಷ್ಟೇ ಇಷ್ಟು ಚಿಕ್ಕ ರಸ್ತೆಯನ್ನು ಮಾಡಿ, ಜನರು ಘಂಟೆಗಟ್ಟಲೆ ರಸ್ತೆಯ ಮೇಲೆ ಕಳೆಯುವಂತೆ ಮಾಡಿದ್ದಾರೆ. ಜಗತ್ತೇ ನಗುತ್ತಿದೆ ಇಲ್ಲಿನ ಸಂಚಾರ ದಟ್ಟಣೆಯನ್ನು ನೋಡಿ. ಎಷ್ಟು ಚಂದವಿತ್ತು ನಮ್ಮೂರು. ಇಂಚಿಂಚು ಮಾರಿಕೊಂಡು ಕೆರೆದು ತಿಂದವು ಇಲ್ಲಿನ ಸರ್ಕಾರಗಳು. ನಿಮಗ್ಯಾರಿಗೂ ಎಚ್ಚರವೇ ಆಗಲಿಲ್ಲವಾ? ಒಂದು ಮಳೆ ಬಂದರೆ ಸಾಕು ನಗರವೇ ಅಲ್ಲೋಲ ಕಲ್ಲೋಲ. ಬೆಂಗಳೂರಿನ ಮಳೆಯ ಅಂದವನ್ನೇ ಕೊಂದರು ಪಾಪಿಗಳು. ಕಂಡ ಕಂಡಲ್ಲಿ ಅವೈಜ್ಞಾನಿಕವಾಗಿ ಕಟ್ಟಲ್ಪಟ್ಟಿರುವ ಕಟ್ಟಡಗಳು, ಅವುಗಳ ಕಟ್ಟುವಾಗಿನ ಮಾಲಿನ್ಯ. ಇನ್ನು ಅದೆಷ್ಟು ಅನುಭವಿಸಬೇಕು ನಾವು?

ಮೂರು ವರ್ಷಗಳಿಂದ ನಮ್ಮ ನಗರವನ್ನು ಕೇವಲ ವಸತಿಗಾಗಿ ಬಳಸಿಕೊಂಡ ನಿದ್ದೆಯ ಸರಕಾರ. ನೀವು  ಹಿಂದಿ ಬರಹವನ್ನು ವೇಗ ಸಂಚಾರಿ ನಗರ ರೈಲ್ವೆಯಲ್ಲಿ ಬಳಸಬಾರದೆಂದು ಹೋರಾಡುತ್ತಿದ್ದೀರಿ. ಭಾಷೆಯ ಬಗ್ಗೆ ಅಷ್ಟು ಕಾಳಜಿಯಿರುವ ನೀವು ಅದೆಷ್ಟು ಜನ ಬ್ಯಾಂಕಿನ ನಗದು ನೀಡುವ ಯಂತ್ರದಲ್ಲಿ ಕನ್ನಡ ಬಳಸುತ್ತೀರಿ? ಗ್ರಾಹಕ ಸೇವೆಗೆ ಕರೆ ಮಾಡಿದಾಗ ನೀವು ಅದೆಷ್ಟು ಜನ ಕನ್ನಡ ಸೇವೆ ಬೇಕೆಂದು ಕೇಳುತ್ತೀರಿ?

ಭಾಷೆಯ ಸೇವೆ ಎಂದರೆ ಸಂಸ್ಕೃತಿಯ ಬೇರುಗಳನ್ನು ಗಟ್ಟಿಗೊಳಿಸುವ ಕೆಲಸವಾಗಬೇಕು. ನಾವೆಲ್ಲಾ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಅದೆಷ್ಟು ಸುಲಭವಾಗಿ ಒಪ್ಪಿಕೊಂಡೆವು. ಇವತ್ತಿಗೂ ಮಕ್ಕಳಿಗೆ ಮೂರು ಭಾಷೆ ಕಲಿಸುವದಾದರೆ ಹಿಂದಿಯನ್ನು ಸೇರಿಸಿ ಎಂದು ನಾನು ಬೆಂಬಲಿಸುತ್ತೇನೆ. ಕನ್ನಡವನ್ನು ಕಡ್ಡಾಯವಾಗಿ ಕಲಿಸಲಿ ಎಂಬುದು ನಾವೆಲ್ಲಾ ಹೋರಾಡಲೇ ಬೇಕಾದ ವಿಷಯ. ಹಿಂದಿಯಲ್ಲಿ ಫಲಕವಿದ್ದೊಡೆ ಏನು ತೊಂದರೆ? ಕನ್ನಡದ ಸ್ಥಾನ ಹಿರಿಯದಾಗಿದ್ದರೆ ನಾವ್ಯಾಕೆ ಭಯ ಪಡಬೇಕು? ಮೊದಲು ನಾವು ನಮ್ಮ ಭಾಷೆ ಸಂಸ್ಕೃತಿಗಳನ್ನು ಉಳಿಸಬೇಕು. ಕಳೆದು ಹೋಗುತ್ತಿರುವ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು. ಭಾಷೆಯನ್ನು ಉಳಿಸುವುದು  ಅದನ್ನು ಬಳಸುವದರಲ್ಲಿದೆ. ಸಂಭಾಷಣೆ, ಸಾಹಿತ್ಯ, ಚಲನಚಿತ್ರ, ರಂಗಮಂಚ, ಊಟ, ಉಪಹಾರ, ಉಡುಗೆ ತೊಡುಗೆ, ಆಚಾರ ವಿಚಾರ ಇವೆಲ್ಲ ಒಂದು ಭಾಷೆ, ನಾಡಿನ ಸಂಸ್ಕೃತಿಯ ಆಯುಷ್ಯವನ್ನು ನಿರ್ಧರಿಸುತ್ತವೆ.

ಬೆಂಗಳೂರು ಜಾಗತಿಕ ಮಟ್ಟಕ್ಕೆ ಬೆಳೆದು ನಿಂತಿದೆ, ನಮ್ಮ ಸಮೃದ್ಧ ನಗರವೇ ಬೇಕು ಎಲ್ಲ ವಿದೇಶಿ ಸಂಸ್ಥೆಗಳಿಗೂ. ಇಲ್ಲಿ ಕೋಟಿಗಟ್ಟಲೆ ಹೂಡಿಕೆ ಮಾಡಲು ಯಾರೂ ಹಿಂಜರಿಯುವದಿಲ್ಲ. ದಿನದಿಂದ ದಿನಕ್ಕೆ ಇಲ್ಲಿಯ ವಸತಿ ವೆಚ್ಚ ಕೂಡ ಗಗನಕ್ಕೇರುತ್ತಿದೆ. ಸರ್ಕಾರಕ್ಕೆ ಲಕ್ಷ್ಯವಿಲ್ಲ. ಐದು ವರ್ಷ ಆಳಿ  ಹೋಗುವ ಇವರಿಗೆ ಒಂದು ತುರಿಕೆ ಬಂದಂತೆ. ಎಲ್ಲೆಲ್ಲಿ ಬಾಚಿಕೊಂಡು ಕಾಸು ಮಾಡಿಕೊಳ್ಳಬೇಕೆಂದು ನೋಡುತ್ತಾರೆ. ಇವತ್ತಿನದು ನಿದ್ದೆ ಸರ್ಕಾರ, ಹಾಗಂತ ಹಿಂದೆ ಬಂದಿದ್ದವರೇನು ಸುಭಗರಲ್ಲ. ಬೆಂಗಳೂರಿನ ವಿಸ್ತಾರ ಎಲ್ಲೆಲ್ಲಿಗೋ ಚಾಚುತ್ತಿದೆ. ಇಲ್ಲಿ ನಗರವನ್ನು ಚಂದವಾಗಿ ಕಟ್ಟುವ ದರ್ದು ಯಾರಿಗೂ ಇದ್ದಂತಿಲ್ಲ. ಇವರನ್ನೆಲ್ಲ ನೋಡಿ ನಿಮಗೆ ಪ್ರತಿಭಟಿಸಬೇಕು, ಒಂದಾಗಬೇಕೆಂಬ ಹಂಬಲವೇ ಬರಲಿಲ್ಲ. ಹಿಂದಿಯಲ್ಲಿ ಫಲಕ ಬೇಡೆಂದು ಪ್ರತಿಭಟಿಸುವ ನೀವು ನಿಮ್ಮ ಕಚೇರಿಗಳಲ್ಲಿ ಕೇವಲ ಉತ್ತರ ಭಾರತೀಯ ಊಟ ಮಾತ್ರ ಮಾರುವ ಬಗ್ಗೆ ಕೇಳಿದ್ದೀರಾ? ಅದೆಷ್ಟೋ ಕಡೆ ಸಪ್ಪೆ ತೋವೆಯನ್ನು ಮಾತ್ರ ಮಾರುತ್ತಾರೆ. ಒಂದಿಷ್ಟು ತಿಳಿ ಸಾರು ಮಾಡಿಕೊಡ್ರೋ ಎಂದು ಬೇಡಿ ಕೊಂಡರು ಕೇಳುವವರಿಲ್ಲ ಅದೆಷ್ಟೋ ಕಡೆ. ಕೆಲಸ ಮಾಡುವ ಕಡೆ ಕನ್ನಡದಲ್ಲಿ ನೀವು ಅದೆಷ್ಟು ಜನ ಮಾತಾಡುತ್ತೀರಿ? ಇಬ್ಬರು ತಮಿಳು ಭಾಷಿಕರು, ಇಬ್ಬರು ಕನ್ನಡದವರಿರುವಾಗ ನಾಲ್ಕೂ ಜನ ತಮಿಳು ಮಾತನಾಡುತ್ತಾರೆ. ಇದು ಆಶ್ಚರ್ಯವಲ್ಲ, ಸತ್ಯ. ನೀವದೆಷ್ಟು ಜನ  ಉಪಹಾರ ಕೇಂದ್ರದಲ್ಲಿ ಇರುವ ಹಿಂದಿ ಹುಡುಗನಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡುತ್ತೀರಿ?

ಮೊದಲು ನಮ್ಮಲ್ಲಿ ಕನ್ನಡದ ಸಂಸ್ಕೃತಿ, ಸಂವಹನ ಉಳಿಯಲಿ. ಒಂದಾಗಿ ಹೋರಾಡುವದಿದ್ದರೆ ಬನ್ನಿ. ಒಂದಾಗಿ ಎಬ್ಬಿಸುವ ಸರ್ಕಾರವನ್ನು. ಕನ್ನಡದ ಮಕ್ಕಳೆಲ್ಲ ಒಂದಾಗಿ ನಿಂತರೆ ಅದ್ಯಾರು ಅಡ್ಡ ನಿಂತಾರು? ಇಷ್ಟು ಚಿಕ್ಕ ಚಿಕ್ಕ ವಿಷಯಗಳನ್ನು ಸುಮ್ಮನೆ ದೊಡ್ಡದಾಗಿಸುವ ಅಗತ್ಯವಿಲ್ಲ. ದೇಶಕ್ಕೆಲ್ಲ ಒಂದೇ ಭಾಷೆ ಇದ್ದರೆ ಅದರಲ್ಲಿ ಒಂದು ಬಲವಿರುತ್ತದೆ. ಆ ನಿಟ್ಟಿನಲ್ಲಿ ನಾವೇ ಮೊದಲು ಬದಲಾವಣೆಗೆ ನಾಂದಿ ಹಾಡೋಣ. ದೇಶಕ್ಕೆಲ್ಲ ನಮ್ಮದೇ ಒಂದು ಭಾಷೆ ಇದ್ದರೆ ಅದೆಷ್ಟು ಅಂದವಲ್ಲವೇ. ನಮ್ಮ ತಾಯಿ ಕನ್ನಡವೇ, ಅದೆಲ್ಲಿ ಹೋದರು ನಾವು ಕನ್ನಡದ ಮಕ್ಕಳೇ. ನಮ್ಮ ಭಾಷೆಯನ್ನೂ ಉಳಿಸಲು ಅದರ ಬೇರುಗಳನ್ನು ಗಟ್ಟಿಗೊಳಿಸಬೇಕು. ಕನ್ನಡವನ್ನು ಅದರ ಸೊಗಡಿನೊಂದಿಗೆ ಉಳಿಸೋಣ. ಮುಂದೊಂದು ದಿನ ನಮ್ಮ ಮಕ್ಕಳು, ಅವರ ಮಕ್ಕಳು ಎಲ್ಲರು ಕುಳಿತು ಆಡಿಕೊಳ್ಳಲು ನಮ್ಮ ಭಾಷೆಯನ್ನೂ ಉಳಿಸುವ ಕೆಲಸ ಮಾಡೋಣ. ಅದಕ್ಕಾಗಿ ಹೋರಾಡೋಣ. ಅವರೆಲ್ಲ ಉಳಿದು ಬೆಳೆಯಲು ಒಂದು ಸುಂದರ ಊರು ಬೆಂಗಳೂರಾಗಲಿ.

ನಿಮಗೆ ತಿಳಿದಿರಲಿ ನಮ್ಮ ನಗರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯುನ್ನತ ಬೆಲೆಯಿದೆ. ಇಲ್ಲಿಯ ಭೌಗೋಳಿಕ ಮತ್ತು ಸಾಂಸ್ಕೃತಿಕ ಹಿನ್ನೆಲೆಯೇ ಇದಕ್ಕೆ ಮೂಲ ಕಾರಣ. ನಮ್ಮ ನಗರದ ಹೆಸರನ್ನು ಹಳಿಯಲು ಅದೆಷ್ಟೋ ಮಾಧ್ಯಮಗಳು ಕಾಯುತ್ತಿರುತ್ತವೆ. ಅದರಲ್ಲಿಯೂ ಹೆಚ್ಚು ಹಿಂದಿ ಮಾಧ್ಯಮಗಳೇ. ಯಾವುದೋ ಊರಿಂದ ಬಂದವನು ಇನ್ಯಾವನೋ ಒಬ್ಬನಿಗೆ ಚಾಕು ಹಾಕಿದರೂ ಸಹ, ಸುದ್ದಿಯಲ್ಲಿ ಬರುವುದು ಬೆಂಗಳೂರೇ. ಸುಮ್ಮನೆ ದಾರಿ ಬದಿಯಲ್ಲಿ ವಯಕ್ತಿಕ ವಿಷಯಗಳಲ್ಲಿ  ಗುದ್ದಾಡಿಕೊಂಡು ಆಮೇಲೆ ಕನ್ನಡ ಮಾತಾಡದೆ ಇರುವದಕ್ಕೆ ಗಲಾಟೆಯಾಯಿತೆಂದು ವರದಿಯಾಗಿಬಿಡುತ್ತದೆ. ನಿಮ್ಮದೇ ಮುಖ ಪುಸ್ತಕಗಳಲ್ಲಿ ನೋಡಿ, ಅದು ಎಷ್ಟು ಕೆಟ್ಟ ಕೆಟ್ಟ ತಮಾಷೆಗಳಾಗುತ್ತವೆ ನಮ್ಮ ಊರಿನ ಬಗ್ಗೆ. ಅದು ಯಾರೋ ಬ್ಯಾಂಕಾಕ್ ನಿಂದ ಹೊರಟ ವಿಮಾನ ಮತ್ತು ಕೆಂಗೇರಿಯಿಂದ ಹೊರಟ ಗಾಡಿ ಒಟ್ಟಿಗೆ ವಿಮಾನ ನಿಲ್ದಾಣ ತಲುಪುತ್ತದೆ ಎಂದರೆ ನಾವೆಲ್ಲಾ ನಕ್ಕು ಅದನ್ನು ದೊಡ್ಡ ತಮಾಷೆಯೇನೆಂಬಂತೆ ಹಂಚಿಕೊಂಡೆವು. ಹೊಟ್ಟೆ ಉರಿಯಲಿಲ್ಲವಾ ನಿಮಗೆಲ್ಲ? ನಮ್ಮ ಊರಿನ ಬಗ್ಗೆ ಅಷ್ಟು ತಮಾಷೆಯಾದರೆ ಅದಕ್ಕೆ ಕಾರಣ ಯಾರು? ಜಯನಗರದ ಮನೆ ಬಾಡಿಗೆಗೆ ಕೊಟ್ಟು ಮುರುಘೇಶಪಾಳ್ಯದ ವಸತಿ ಸಮುಚ್ಚಯದಲ್ಲಿ  ಧೂಳು ತಿನ್ನುತ್ತಾ ವಾಸಿಸುವ ನಮಗೆ ನಮ್ಮ ಬಾಲ್ಯದ ಜಯನಗರವೇ ಬೇಕೆಂದು ಕಾಣುವದಿಲ್ಲ ಯಾಕೆ? ನಮ್ಮ ಊರನ್ನು ಉಳಿಸಲು ಹೋರಾಡೋಣ. ಹಿಂದಿ  ನಾಮಫಲಕದಲ್ಲಿ ಇದ್ದರೆ ಅದೇನು ಮಾಡೀತು? ನಾವು ಕನ್ನಡವನ್ನೇ ಓದೋಣ. ನೀವು ಹಿಂದಿಯಲ್ಲಿರುವ ನಾಮ ಫಲಕ ತೆಗೆಸಿದ ಕಾರಣಕ್ಕೆ ಹಿಂದಿ ಮಾತನಾಡುವವರಾರೂ ಕನ್ನಡ ಓದುವುದನ್ನು ಕಲಿಯುವದಿಲ್ಲ. ನಮ್ಮಲ್ಲೇ ಯಾರನ್ನೋ ಕೇಳುತ್ತಾರೆ, ನಾವೇ ಅವರಿಗೆ ಅವರದೇ ಭಾಷೆಯಲ್ಲಿ ಉತ್ತರ ಕೊಟ್ಟು ಸಹಾಯ ಮಾಡುತ್ತೇವೆ. ನಾವು ಕನ್ನಡಿಗರಲ್ಲವೋ, ವಿಶಾಲ ಹೃದಯದವರು.

ಹೋರಾಟವೆಂದರೆ ತೆಲುಗರನ್ನು ನೋಡಿ. ಉಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಆರಂಭವಾದ ಒಂದು ಹೋರಾಟ ಒಂದು ರಾಜ್ಯವನ್ನೇ ಒಡೆಯಿತು. ಅದೆಷ್ಟು ಬಲವಿತ್ತು ಹೋರಾಟದಲ್ಲಿ. ಅಂತರ್ಜಾಲ ತಾಣದಲ್ಲಿ ಒಂದು ಸಾಮಾನ್ಯ ಪದಪುಂಜ ಬಳಸುವ ಹೋರಾಟ ನಾಳೆಗೆ ಮರೆತು ಹೋಗುತ್ತದೆ. ಹೋರಾಟ ನಿತ್ಯ ನೂತನವಾಗಿರಬೇಕು. ರಾಜಕೀಯ ಹೊರತಾಗಿರಬೇಕು. ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಒಂದಾಗುವ ಜನ ಸಮೂಹವನ್ನು ಎದುರಿಸುವ ಶಕ್ತಿ ಯಾವ ಆಡಳಿತಕ್ಕೂ ಇಲ್ಲ. ಹಾಗಾಗಿ ನಮ್ಮ ಹೋರಾಟಗಳು ಅರ್ಥಪೂರ್ಣವಾಗಿರಲಿ. ಧನಾತ್ಮಕವಾಗಿರಲಿ. ಸುಮ್ಮನೆ ಹೋರಾಡುವ ಹೆಸರಲ್ಲಿ ಕಿರುಚುವ ಕನ್ನಡದ ಕೀರ್ತಿ ಕುವರರೆಲ್ಲ ಸ್ವಚಿತ್ರ ಮತ್ತು ಚಲನಚಿತ್ರಗಳ ಚಿತ್ರೀಕರಣದಲ್ಲಿ ಕಳೆದು ಹೋಗುತ್ತಾರೆ. ಹಸ್ತಾಕ್ಷರ ನೀಡುವವನು ನಿಷ್ಠಾವಂತ ಸಾಂಸ್ಕೃತಿಕ ಹೋರಾಟಗಾರನೇ ಅಲ್ಲ. ನಮ್ಮ ಹೋರಾಟ ನಿಜವಾದ ಸಂಸ್ಕೃತಿ ರಕ್ಷಣೆಗಿರಲಿ.

ನಮ್ಮ ಊರಲ್ಲಿ ನಾವು ಗಟ್ಟಿ ಇದ್ದರೆ ಹೇರಿಕೆ ಮಾಡಲು ಬರುವವರಾರು? ನಾವು ಒಂದಾಗಬೇಕು. ನಮ್ಮ ಭಾಷೆ ಸಂಸ್ಕೃತಿ ಉಳಿಯಬೇಕು. ಬೆಳೆಯಬೇಕು. ನಮ್ಮ ಊರು ಸಮೃದ್ಧವಾಗಬೇಕು. ನಮ್ಮ ಊರು ನಮ್ಮ ಹೆಮ್ಮೆಯಿರಲಿ. ಊರಲ್ಲಿ ಮಳೆಯಿರಲಿ-ನೀರಿರಲಿ-ಬೆಳೆಯಿರಲಿ-ಕನ್ನಡವಿರಲಿ.

ದೇಶದ ಎಲ್ಲ ಜನರು ಒಂದೇ ಭಾಷೆ ಮಾತನಾಡಿದರೆ ಅದರಲ್ಲೊಂದು ರಾಷ್ಟ್ರೀಯ ಭಾವವಿದೆ. ಚಿಕ್ಕ ಚಿಕ್ಕ ವಿಷಯಗಳಿಗೆ ಮಹತ್ವ ಕೊಡದೆ, ಈಡೇರಬೇಕಾದ ಬೇಡಿಕೆಗಳಿಗೋಸ್ಕರ ಹೋರಾಡೋಣ. ಒಂದು ಬಾರಿ ಬೆಳ್ಳಂದೂರಿನ ಕೆರೆಯ ಬದಿಯ ರಸ್ತೆಯಲ್ಲಿ ಗಾಳಿಗೆ ಮೂಗು ಕೊಟ್ಟು ಓಡಾಡಿ, ನಿಮಗೆ ಅರ್ಥವಾಗುತ್ತದೆ ಆಗಬೇಕಾಗಿರುವ ಹೋರಾಟದ ಅನಿವಾರ್ಯ.

ಪುನೀತ್ ಅಭಿನಯದ ‘ರಾಜಕುಮಾರ’ ಚಿತ್ರದ ‘ಗೊಂಬೆ ಹೇಳುತೈತೆ’ ಹಾಡು ಯೂಟ್ಯೂಬ್ ನಲ್ಲಿ ಎರಡು ಕೋಟಿಗೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ. ಅಂತರ್ಜಾಲದಲ್ಲಿ ಕನ್ನಡದ ಛಾಪು ದಟ್ಟವಾಗಿಯೇ ಇದೆ. ಧನಾತ್ಮಕವಾಗಿ ಬಳಸಿಕೊಳ್ಳಬೇಕಷ್ಟೆ.

ವೇಗ ಸಂಚಾರ ರೈಲ್ವೆಯಲ್ಲಿ ಹಿಂದಿಯ ಫಲಕವಿದೆ ಎಂದು ಹೋರಾಡುವ ಅರ್ಧ ಜನ ಅದೃಷ್ಟವಂತ (Fortuner)  ವಾಹನದಲ್ಲಿ ಹವಾ ನಿಯಂತ್ರಕದಲ್ಲಿ ಕುಳಿತು ಹೋಗುತ್ತಾರೆ. ವೇಗ ಸಂಚಾರಕ ರೈಲ್ವೆಯಲ್ಲಿ ನಿತ್ಯ ಓಡಾಡುವ ಕನ್ನಡಿಗನಿಗೆ ಪಾಪ ಮನೆ ಬಾಡಿಗೆಗೆ ದುಡ್ಡು ಹೊಂಚುವ ತವಕ. ಮನೆ ಮಾಲೀಕ ಹಿಂದಿಯವ. ತನ್ನೂರಲ್ಲಿ ತಾನೇ ಪರಕೀಯ.

ಎಬ್ಬಿಸೋಣ  ಮಲಗಿರುವ ಸರ್ಕಾರವನ್ನು. ಹೋರಾಡೋಣ ನಮ್ಮ ಊರನ್ನು ಉಳಿಸಲು. ಹಿಂದಿ, ತೆಲುಗು, ತಮಿಳು, ಮಲಯಾಳಿ, ಪಂಜಾಬಿ, ಗುಜರಾತಿ, ನೇಪಾಳಿ, ಅವನು, ಇವನು, ಮಗದೋರ್ವನು, ಮನೆ ಹಾಳನು ಎಲ್ಲರು ನಾಚಬೇಕು ನಾವು ನಮ್ಮ ಊರನ್ನು ಪ್ರೀತಿಸುವ ಪರಿ ನೋಡಿ. ತೆರಿಗೆಯನ್ನು ಮಾತ್ರ ಉಂಡು ನಮ್ಮ ಊರನ್ನು ಕಂಡಕಂಡಲ್ಲಿ ಅಗೆಯುವ ಸರ್ಕಾರಕ್ಕೆ ಛೀಮಾರಿ ಹಾಕೋಣ. ಯೋಜನಾತ್ಮಕ ಮತ್ತು ಭವಿಷ್ಯದ ದೂರದೃಷ್ಟಿಯಿಂದ ನಗರವನ್ನು ಕಟ್ಟಲಿ. ಪರಭಾಷಿಕರೆಲ್ಲ ಬಂದಾಗಿದೆ. ಓಡಿಸಲು ನಾವಷ್ಟು ಕಟುಕರಲ್ಲ. ಇರಲಿ. ಆದರೆ ನಮ್ಮ ಊರು  ನಮಗೆ ಹಿಂಸೆಯಾಗದಂತೆ ಇರಲಿ.

ಅದು ಯಾಕೋ ಅಡಿಗರ ಪದ್ಯ ಭಗವದ್ಗೀತೆಯಂತೆ ಧ್ವನಿಸುತ್ತದೆ. “ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು..”.

– ಸುಬ್ರಹ್ಮಣ್ಯ ಹೆಗಡೆ

hegde2007@yahoo.co.in

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!