ಅಂಕಣ

ಆಸ್ಕರ್ ನಾಮಾಂಕಿತ ಇವನ ಚಿತ್ರಗಳನ್ನು ವಿದೇಶಗಳಲ್ಲಿ ತೋರಿಸಿ ನಮ್ಮ ಮಾನ ಕಳೆಯಬೇಡಿ ಎಂದಿದ್ದರು…!!

ಇಂದಿಗೆ ಸುಮಾರು 65 ವರ್ಷಗಳ ಹಿಂದೆ ಮೂವತ್ತು ವರ್ಷದ ಯುವಕನೊಬ್ಬ ಬಂಗಾಳಿ ಬರಹಗಾರರಾದ ಭೀಹುತಿ ಭೂಷಣ್ ಬಂಡೋಪಾಧ್ಯಾಯ್ ಅವರ ಕಾದಂಬರಿಯನ್ನು ಆಧರಿಸಿ ಚಿತ್ರವೊಂದನ್ನು ನಿರ್ದೇಶಿಸುವ ಕನಸನ್ನು ಕಟ್ಟಿಕೊಳ್ಳತೊಡಗುತ್ತಾನೆ. ಚಿತ್ರನಿರ್ದೇಶನ, ಚಿತ್ರಕಥೆ ಬರೆಯುವುದು ಎಲ್ಲವೂ ಅವನ ಬಹುಕಾಲದ ಕನಸು. ಕನಸೇನೋ ಸರಿ, ಸಾಧಿಸುವುದೂ ಬಲು ದಿಟ, ಆದರೆ ತನ್ನ ಮೊದಲ ಆರಂಭಕ್ಕೆ ಬೇರೊಬ್ಬರ ಕೃತಿಯೇ ಯಾಕಾಗಬೇಕು? ಸ್ವಂತ ಕಲ್ಪನೆ ಹಾಗು ಸೃಜನಶೀಲತೆಯಿಂದ ಒಂದೊಳ್ಳೆ ಕಥೆಯನ್ನು ಕಟ್ಟಲು ನಿನಗೆ ಸಾಧ್ಯವಿಲ್ಲವೇ? ಒಂದು ಪಕ್ಷ ಚಿತ್ರ ಗೆದ್ದರೂ ಅದರ ಬಹುಪಾಲು ಶ್ರೇಯ ಮೂಲ ಕತೆಗಾರನಿಗೆ ಹೋಗುತ್ತದೆ. ಎಂಬೆಲ್ಲ ಪ್ರಶ್ನೆ, ಸಲಹೆಗಳನ್ನು ಎಳೆದುಕೊಂಡು ಮುನ್ನೆಡೆದ ಆತ ಯಾವುದೇ ಅನ್ಯ ಕಾರಣಗಳಿಗೂ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಚಿತ್ರ ಸೆಟ್ಟೇರಿತು. ಅಲ್ಲಿನ ರಾಜ್ಯಸರ್ಕಾರವೇ ಚಿತ್ರ ನಿರ್ಮಾಣದ ಹೊಣೆಯನ್ನು ಹೊತ್ತಿತು! ಆದರೇನಂತೆ, ಚಿತ್ರ ಶುರುವಾದ ಕೆಲವೇ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಚಿತ್ರದ ಬಗ್ಗೆ ಹಲವರಿಗಿದ್ದ ನಿರುತ್ಸಾಹಗಳಿಗಿಂತ ಹೆಚ್ಚಾಹಿತು. ಕಥೆ ಹಾಗೂ ನಿರ್ದೇಶನಕ್ಕೆ ಅಡ್ಡಿ ತಂದೊಡ್ಡುವಂತೆ ಸಮಸ್ಯೆಗಳು ಬೆಳೆದವು. ಆದರೆ ಧೃತಿಗೆಡದ ಆತ ತಂಡವನ್ನು ಮುನ್ನೆಡೆಸುತ್ತಾನೆ. ಚಿತ್ರವನ್ನು ಪೂರ್ಣಗೊಳಿಸಿಯೇ ತೀರುತ್ತಾನೆ. ಅಂತೂ ಆಗಸ್ಟ್ 25, 1955 ಕ್ಕೆ ಚಿತ್ರ ಬಿಡುಗಡೆಗೆ ಸಿದ್ಧಗೊಂಡಿತು. ದೇಶದ ಪ್ರಧಾನಿ ನೆಹರು ಹಾಗು ಪಶ್ಚಿಮ ಬಂಗಾಳದ ಅಂದಿನ ಮುಖ್ಯಮಂತ್ರಿ ಬಿಧಾನ್ ಚಂದ್ರ ರಾಯ್ ಅವರು ಖುದ್ದಾಗಿ ಚಿತ್ರವನ್ನು ವೀಕ್ಷಿಸಲು ಬಂದಿದ್ದರು. ಇಷ್ಟೆಲ್ಲಾ ಸವಾಲುಗಳನ್ನು ಸಹಿಸಿ ಜೀವಪಡೆದ ಚಿತ್ರವೊಂದು ಜನಮಾನಸದಲ್ಲಿ ಬದುಕುತ್ತದೆಯೇ ಎಂಬ ಪ್ರಶ್ನೆ ಒಂದೆಡೆಯಾದರೆ, ಹಾಕಿರುವ ದುಡ್ಡು ವಾಪಾಸ್ ಬಂದರೆ  ಸಾಕಪ್ಪ ಎಂಬುದು ಅದೆಷ್ಟೋ ಸರ್ಕಾರೀ ಅಧಿಕಾರಿಗಳ ಹರಕೆ. ಆಗಿನ ಪೌರಾಣಿಕ ಚಿತ್ರಗಳಿಗೆ ಹೋಲಿಸಿದರೆ ತೀರಾ ಬಿನ್ನವಾಗಿದ್ದ ಆ ಚಿತ್ರ ಗೆಲ್ಲುವುದು ಕಷ್ಟ-ಕಷ್ಟ ಎಂಬುದು ಅಂದಿನ ಕೆಲ ವಿಮರ್ಶಕರ ಅಭಿಪ್ರಾಯವಾಗಿದ್ದಿತು. ಆದರೆ ದೇಶದ ಚಿತ್ರರಂಗಕ್ಕೇ ಒಂದು ಗಟ್ಟಿ ಬುನಾದಿಯನ್ನು ಹಾಕಲು ಆ ಚಿತ್ರ ಹೊರಟಿದೆಯೆಂದು ಅಂದು ಯಾರೊಬ್ಬರಿಗೂ ಊಹಿಸಲೂ ಸಾದ್ಯವಿರಲಿಲ್ಲ. ಯಾರೊಬ್ಬರ ನಿರೀಕ್ಷೆಗೂ ನಿಲುಕದ ಮಟ್ಟಿಗೆ ಚಿತ್ರ ಗೆದ್ದಿತು! ರಾಷ್ಟ್ರ ಮಟ್ಟದಲ್ಲಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಮಿಂಚನ್ನು ಹರಿಸಿತು. ಫ್ರಾನ್ಸ್, ಇಟಲಿ, ಸ್ಕಾಟ್ಲೆಂಡ್, ಮನಿಲಾ, ಬರ್ಲಿನ್, ಕೆನೆಡಾ, ಅಮೇರಿಕ, ಜಪಾನ್ ಹೀಗೆ ಹೊಡದೆಯಲ್ಲ (ಫಿಲಂ ಫೆಸ್ಟಿವಲ್ನ) ಒಂದಲ್ಲೊಂದು ಪ್ರಶಸ್ತಿಯನ್ನು ಗೆದ್ದೇ ಬರುತ್ತಿತ್ತು. ಸ್ವಾತಂತ್ರ್ಯ ದಕ್ಕಿದ ದಶಕದೊಳಗೇ ಭಾರತದ ಚಿತ್ರರಂಗವನ್ನು ವಿಶ್ವದ ಎಲ್ಲೆಡೆಗೂ ಪಸರಿಸಿದ ಖ್ಯಾತಿ ಈ ಚಿತ್ರಕ್ಕೆ ಸಲ್ಲಬೇಕು. ಅಂದು  ಮೂವತ್ತು ವರ್ಷದ ಆ ಯುವಕನ ಕನಸು, ನಿರ್ದೇಶನ, ಚಿತ್ರಕಥೆ ಎಲ್ಲಕ್ಕೂ ಮಿಗಿಲಾಗಿ ಆತನ ಆಯ್ಕೆ ನಿಜವಾಗಿಯೂ ‘ಎಕ್ಸಲೆಂಟ್’ ಎಂದು ಜನರು ಕೊಂಡಾಡಿದರು. ಆ ಲೆಜೆಂಡರಿ ಚಿತ್ರದ ಹೆಸರೇ ‘ಪಥೇರ್ ಪಾಂಚಾಲಿ’. ನಿರ್ದೇಶಕ, ಮುಂದೆ ಭಾರತದಲ್ಲೇಕೆ, ವಿಶ್ವದಲ್ಲೇ ಮಹಾನ್ ನಿರ್ದೇಶಕರಲೊಬ್ಬನೆನಿಸಿಕೊಂಡ ಸತ್ಯಜಿತ್ ರೇ ಅಥವಾ ಬೆಂಗಾಲಿಗರ ನೆಚ್ಚಿನ ಮಾಣಿಕ್ -ದಾ.

ಸತ್ಯಜತ್ ಹುಟ್ಟಿ (1921) ಬೆಳೆದದ್ದೆಲ್ಲ ಬಂಗಾಳದ ನೆಲದಲ್ಲೇ. ಸಣ್ಣವನಿದ್ದಾಗಲೇ ತಂದೆಯ ಅಕಾಲಿಕ ಮೃತ್ಯು. ತಾಯಿಯ ಪ್ರೋತ್ಸಾಹದ ಮೇರೆಗೆ ಹೆಚ್ಚಿನ ವಿದ್ಯಾಭ್ಯಾಸ. ಅದೂ ಸಹ ‘ಗೀತಾಂಜಲಿ ಕವಿ’ ರವೀಂದ್ರನಾಥ್ ಠಾಗೂರರ ಶಾಂತಿನಿಕೇತನದಲ್ಲಿ. ಬತ್ತಿದ ಕೆರೆಯಲ್ಲಿ ವಿಲ-ವಿಲ ಹೊದ್ದಾಡುತ್ತಿದ್ದ ಜೀವಕ್ಕೆ ಚೈತನ್ಯದ ಮಳೆ ಸುರಿದ ಅನುಭವ. ಚಿಗುರೊಡೆಯುತ್ತಿದ್ದ ಹಸಿರಿಗೆ ಹೆಮ್ಮರವಾಗುವ ಕನಸ್ಸನ್ನು ಸತ್ಯಜಿತ್ ಕಂಡಿದ್ದೆ ಅದೇ ಶಾಂತಿನಿಕೇತನದಲ್ಲಿ. ಕಲೆ ಹಾಗು ಸಾಹಿತ್ಯದ ಆಳವಾದ ಅಧ್ಯಯನ, ಚಿತ್ರಕಲೆ ಹಾಗು ಸಂಗೀತವನ್ನೂ ಕಲಿಯುವಂತೆ ಪ್ರೇರೇಪಿಸಿತು. 1942 ರ ಸುಮಾರಿಗೆ ಯುವ ಸತ್ಯಜಿತ್ ಕ್ರಿಯಾಶೀಲ ಕಲೆಗಾರನಾಗಿ ಅಲ್ಲಿಂದ ಹೊರಬರುತ್ತಾನೆ. ಚಿತ್ರಕಥೆ, ಚಿತ್ರ ನಿರ್ದೇಶನ ಎಂಬುದು ಆತನ ನಾಡಿ-ನಾಡಿಗಳಲ್ಲಿ ಸಂಚರಿಸಲ್ಪಡುತ್ತಿರುತ್ತದೆ. ಅಷ್ಟರಲ್ಲಾಗಲೇ ಬಂಗಾಳದಲ್ಲಿ  ತನ್ನ ಸ್ನೇಹಿತರೊಳಗೂಡಿ ನಗರದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸುವುದು, ಚಿತ್ರಗಳನ್ನು ವಿಮರ್ಶಿಸುವುದು ಹಾಗು ಅವುಗಳ ಬಗ್ಗೆ ಸಾಧ್ಯವಾದಷ್ಟು ಮಟ್ಟಿನ ಅದ್ಯಯನವನ್ನು ಮಾಡುವುದನ್ನೂ ಬೆಳೆಸಿಕೊಂಡಿರುತ್ತಾನೆ. ಶಾಂತಿನಿಕೇತನದಿಂದ ಹೊರ ಬಂದವನೇ ಖಾಸಗಿ ಕಂಪನಿಯೊಂದರಲ್ಲಿ ‘ಗ್ರಾಫಿಕ್ ಡಿಸೈನರ್’ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಅದು ಮೂಲತಃ ಬ್ರಿಟನ್ ದೇಶಕ್ಕೆ ಸೇರಿದ ಕಂಪೆನಿಯಾದ್ದರಿಂದ ಮುಂದೆ ಇದೆ ಕಂಪನಿ ಸತ್ಯಜಿತ್ ಅವರನ್ನು ಕೆಲಕಾಲಕ್ಕೆಂದು ಬ್ರಿಟನ್’ಗೂ ಕಳುಹಿಸುತ್ತದೆ. ಅಲ್ಲಿ ಇದ್ದ ಕೆಲ ತಿಂಗಳ ಕಾಲದಲ್ಲೇ ವಿವಿಧ ದೇಶಗಳ ಸುಮಾರು ನೂರು ಚಿತ್ರಗಳನ್ನು ನೋಡಿ, ಪಾಶ್ಚಾತ್ಯ ಚಿತ್ರ ನಿರ್ಮಾಣದದಿಂದ ತುಂಬಾನೇ ಪ್ರಭಾವಿತನಾಗುತ್ತಾನೆ. ಏತನ್ಮದ್ಯೆ ಫ್ರಾನ್ಸ್ ನ ಪ್ರಸಿದ್ಧ ಚಿತ್ರ ನಿರ್ದೇಶಕ ಜೀನ್ ರೆನೊಯ್ರ್ ಅವರ ಪರಿಚಯ ಹಾಗು ಪ್ರೋತ್ಸಾಹ ಇವನ್ನಲ್ಲಿ ಚಿತ್ರ ನಿರ್ಮಾಣದದ ಬಗ್ಗೆ ಇನ್ನಷ್ಟು ಒಲವನ್ನು ಮೂಡಿಸುತ್ತದೆ. ನಂತರದ ಕೆಲವೇ ವರ್ಷಗಳಲ್ಲಿ ಎಳೆ ಹುಡುಗರ ತಂಡವೊಂದನ್ನು ಕಟ್ಟಿ 1952 ರ ಚಳಿಗಾಲದಲ್ಲಿ ತನ್ನ ಮೊದಲ ಚಿತ್ರದ ಚಿತ್ರೀಕರಣಕ್ಕೆ ಆರಂಭವನ್ನು ಹಾಡುತ್ತಾನೆ. ‘ಪಥೇರ್ ಪಾಂಚಾಲಿ’ ಚಿತ್ರ ನಿರ್ಮಾಣಕ್ಕೆ ತಗುಲಿದ ಸಮಯ ಬರೋಬ್ಬರಿ ಮೂರು ವರ್ಷ. ಚಿತ್ರದ ವೆಚ್ಚ ಒಂದು ಲಕ್ಷಕ್ಕೂ ಕಡಿಮೆ.

ಸತ್ಯಜಿತ್ ತಮ್ಮ ಜೀವನದ  ಸುಮಾರು ನಾಲ್ಕು ದಶಕಗಳನ್ನು ಚಿತ್ರ ನಿರ್ಮಾಣಕ್ಕಾಗಿಯೇ ಮೀಸಲಿಟ್ಟರು. ಪ್ರತೀ ಚಿತ್ರವೂ ಮತ್ತೊಂದಕ್ಕಿಂತ ತೀರಾ ಭಿನ್ನ ಹಾಗು ಅಷ್ಟೇ ಆಳವಾಗಿರುತ್ತಿದ್ದವು ಹಾಗು ಸಾಮಾನ್ಯನ ಮನ ಕುಲುಕುವಂತಿರುತ್ತಿದ್ದವು. ಕಥೆ ಹಾಗು ಪಾತ್ರದ ಆಳವನ್ನು ಅರಿಯಬಲ್ಲವನಾಗಿದ್ದ ಅಂದಿನ ಬಂಗಾಲಿ ಪ್ರೇಕ್ಷಕ ಸತ್ಯಜಿತ್’ರ ಮೊದಲ ಕ್ರಿಯಾಕ್ಷೇತ್ರ. ತಾನು ಮಾಡುವ ಚಿತ್ರಗಳು ಅತಿ ನಿಧಾನ ಹಾಗು ನೋಡುಗರ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂಬ ವಾದ ಒಂದೆಡೆಯಾದರೆ, ಪ್ರತೀ ಚಿತ್ರಗಳು ದೇಶವಿದೇಶದಲ್ಲಿ ಪ್ರಶಸ್ತಿಗಳನ್ನು ಗೆದ್ದು ತರುತ್ತಿದ್ದದ್ದು ರಾಜಕೀಯ ನಾಯಕರಿಗೆ, ನಟರಿಗೆ ನಾಚಿಕೆಯನ್ನು ತರುತ್ತಿದ್ದದ್ದು ಮತ್ತೊಂದೆಡೆ. ಕಾರಣ ಈತ ದೇಶದ ಬಡ ಪರಿಸ್ಥಿಯನ್ನು, ಅಂದಿನ ಒಬ್ಬ ಸಾಮನ್ಯನ ಜೀವನದ ವೇತನೆಯನ್ನು ಅದ್ಯಾವ ಪರಿಗೆ ಚಿತ್ರದಲ್ಲಿ ಕಟ್ಟುತ್ತಿದ್ದನೆಂದರೆ ತಂಪು ಕೋಣೆಯಲ್ಲಿ ಪಾನೀಯಗಳೊಟ್ಟಿಗೆ ಸೂಟು ಬೂಟುಗಳಲ್ಲಿ ಚಿತ್ರವನ್ನು ನೋಡುವ ವಿದೇಶಿ ಪ್ರೇಕ್ಷಕನಿಗೆ ಕಡುಗಷ್ಟವೆಂದರೆ ಇದೇನಾ? ಭಾರತವೆಂದರೆ ಇಷ್ಟೇನಾ? ಎಂಬೊಂದು ಕೀಳರಿಮೆಯನ್ನು ತಂದಿಡುತ್ತಿತ್ತು. ಇದನ್ನು ಎದುರಿಸಲಾಗದೆ ನಮ್ಮ ಅಂದಿನ ಕೆಲ ಘನ ರಾಜಕಾರಣಿಗಳು ತಮ್ಮ ಮಾನಕ್ಕೆ ಎಲ್ಲಿ ಕುತ್ತು ಬಂದಿತೆಂದು ಚಿತ್ರವನ್ನು ಬೇರ್ಯಾವ ದೇಶದಲ್ಲೂ ತೋರಿಸಬಾರದೆಂದು ಬೊಬ್ಬೆಯೊಡೆಯುತ್ತಿದ್ದರು. ಆದರೆ ಕಲೆಗೆ ಯಾವ ತಡೆ? ಜಗತ್ತು ಸತ್ಯಜಿತ್ ಅವರ ಕಲೆಯನ್ನು ಗುರುತಿಸಲು ಹೆಚ್ಚು ಸಮಯ ತೆಗೆದುಕೊಳ್ಳಲಿಲ್ಲ. ತಮ್ಮ ಗ್ರಾಫಿಕ್  ಡಿಸೈನರ್  ವೃತ್ತಿಯ ತಂತ್ರಗಾರಿಕೆ, ಪಾಶ್ಚಾತ್ಯ ಚಿತ್ರ ನಿರ್ಮಾಣದ ಪ್ರಭಾವಳಿ ಹಾಗು ಅದಕ್ಕೆ ಪೂರಕವಾದ ಓದು, ಸಂಗೀತ ಹಾಗು ಬರವಣಿಗೆ ಸತ್ಯಜಿತ್’ರನ್ನು ನಿರ್ದೇಶಕರ ಸಾಲಿನಲ್ಲಿ ತೀರಾ ಭಿನ್ನವಾಗಿಸಿತು. ಸತ್ಯದ ನೆರಳಿನಲ್ಲಿ, ಯಾವುದೇ ಕಪೋಲಕಲ್ಪಿತ ಅವೈಜ್ಞಾನಿಕ ಕತೆಗಳಿಗೆ ಜೋತುಬೀಳದೆ ಸತ್ಯಜಿತ್  ಒಬ್ಬ ಜನಸಾಮನ್ಯನ ನೈಜ ದೃಷ್ಟಿಕೋನದಲ್ಲಿ ಚಿತ್ರವನ್ನು ನಿರ್ಮಿಸುತ್ತಿದ್ದರು.

ಟ್ರೈಲಾಜಿ ( ಕ್ರಮಾನುಗತ ತ್ರಿವಳಿ ಕಥೆಗಳು / ಚಿತ್ರಗಳು ) ಇಂದಿನ ಕಾಲದ ಪುಸ್ತಕ ಬರಹಗಾರರ ಟ್ರೆಂಡ್ ಎನ್ನಬಹುದು. ಆದರೆ ಆಗಿನ ಕಾಲಕ್ಕೆ  ಅದನ್ನು ಚಿತ್ರದ  ಮೂಲಕ ಸಾಧಿಸಿ ತೋರಿಸಿದವರು ಸತ್ಯಜಿತ್. ‘ಪಥೇರ್-ಪಾಂಚಾಲಿ’, ‘ಅಪಾರ್ಜಿತೋ’  ಹಾಗು ‘ಅಪುರ್-ಸಂಸಾರ್’ ಎಂಬ ಟ್ರೈಲಾಜಿ ಚಿತ್ರಗಳು ಕೇವಲ ಚಿತ್ರಗಳಾಗಿರದೆ ಬಂಗಾಳಿ ಹಾಗು ಭಾರತೀಯ ಸಿನಿಮಾಗಳ ದಂತಕಥೆಗಳೆನಿಸಿದವು. ಮೊದಲೇ ಹೇಳಿದಂತೆ ಕೇವಲ ಒಂದೇ ಕಥೆಗೆ ಅಥವಾ ವರ್ಗಕ್ಕೆ ಸೇರದ ವರ್ಸಾಟೈಲ್ ವ್ಯಕ್ತಿತ್ವ ಸತ್ಯಜಿತ್’ರದು. ಅರವತ್ತರ ದಶಕದಲ್ಲಿ ಬಂಗಾಲದ ಪೋರರ ಹರಟೆಗಳಲ್ಲಿ ಹಾಗು ಓದುಗಳಲ್ಲಿ ಹೆಚ್ಚಾಗಿ ಇರುತ್ತಿದ್ದದ್ದು ಪ್ರೊಫೆಸರ್ ಶೊನ್ಕು, ಫೆಲ್ಯೂಡ ಎಂಬ ಹಲವು ಪತ್ತೇದಾರಿ ಪಾತ್ರಗಳು ಹಾಗು ಅವುಗಳನ್ನು ಆಧರಿಸಿದ ಕಥೆಗಳು. ಆ ಕಥೆಗಳು ಅಂದಿನ ಕಾಲದ ಓದುಗರ ಕಲ್ಪನೆಗೂ ಮೀರಿದ ಧಾಟಿಯಲ್ಲಿ ಹಣೆಯಲ್ಪಡುತ್ತಿದ್ದವು. ಹಾಗಾಗಿ ಆ ಪಾತ್ರಗಳು ಇಂದಿಗೂ ಬಂಗಾಳದಲ್ಲಿ ಚಿರಪರಿಚಿತ. ಒಂತರ ಕನ್ನಡಿಗರಿಗೆ ಮಾಲ್ಗುಡಿ ಡೇಸ್ ಇದ್ದ ಹಾಗೆ. ಅಂತಹ ಪಾತ್ರಗಳ ಸೂತ್ರದಾರಿಯೇ ಈ ಸತ್ಯಜಿತ್. ಇವರ ಈ ಮಟ್ಟಿನ ಬಹುಮುಖ ಪ್ರತಿಭೆಗೆ 1967 ರಲ್ಲೇ  ‘ ದಿ ಏಲಿಯನ್’ ಎಂಬ ಇಂಡೋ -ಅಮೆರಿಕನ್ ಸೈಂಟಿಫಿಕ್-ಫ್ರಿಕ್ಷನ್ ಚಿತ್ರವೊಂದು ಸಟ್ಟೇರಲು ರೆಡಿಯಾಗಿತ್ತು. ಅದರ ಚಿತ್ರಕಥೆಯನ್ನೂ ಸತ್ಯಜಿತ್ ಬರೆದು ಮುಗಿಸಿದ್ದರು. ಆದರೆ  ಕಾರಣಾಂತರಗಳಿಂದ ಚಿತ್ರ ನಿರ್ಮಾಣ ನಿಂತರೂ ಮುಂದೆ ಬಂದ ಸ್ಟೀವನ್ ಸ್ಪಿಲ್ ಬರ್ಗ್ ರವರ ‘ಈ.ಟಿ’  (The Extra Terrestrial ) ಚಿತ್ರಕ್ಕೆ ಬಳಕೆಯಾಗಿದ್ದು ಸತ್ಯಜಿತ್’ರವರ  ಅದೇ ಚಿತ್ರಕಥೆಯೇ ಎಂಬ ವಾದ ಇಂದಿಗೂ ಕೇಳಿಬರುತ್ತದೆ!

ದೇಶವನ್ನು ಅತಿ ಹೆಚ್ಚು ಬಾರಿ ಆಸ್ಕರ್’ನಲ್ಲಿ ಪ್ರತಿನಿಧಿಸಿದ ಖ್ಯಾತಿ, ಜೀವಮಾನದ ಸಾಧನೆಗೆ ಆಸ್ಕರ್’ಅನ್ನು ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ, ಫ್ರಾನ್ಸ್ ದೇಶದ ಗೌರವ ಲೀಜನ್, ಭಾರತ ರತ್ನ, ಪದ್ಮಶ್ರೀ, ಪದ್ಮಭೂಷಣ ಅಲ್ಲದೆ ಮೊನ್ನೆಯಷ್ಟೇ ನಮ್ಮ ದೊರೆ ಭಗವಾನ್’ರಿಗೆ ಕೊಡಲ್ಪಟ್ಟ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಇನ್ನೂ ನೂರಾರು ಪ್ರಶಸ್ತಿಗಳಿಗೆ ಭಾಜನರರಾಗಿರುವ ಇವರು ಬಂಗಾಲ ಚಿತ್ರ ಪ್ರೇಮಿಗಳಿಗೆ ಅಕ್ಷರ ಸಹ ದೇವತಾಮನುಷ್ಯರಂತೆ ಭಾಸವಾಗುತ್ತಾರೆ. ನಮ್ಮ ನಿಮ್ಮ ನಡುವಿನ ಹುಡುಗನೊಬ್ಬ ಬೆಳೆದು ವಿಶ್ವದಲ್ಲೇ ಅಗ್ರಮಾನ್ಯ ನಿರ್ದೇಶಕನಿಸಿಕೊಂಡರೆ ಇರಬೇಕಾದ ಸಹಜ ಅಭಿಮಾನ ಬಂಗಾಳದವರಿಗೂ ಇದೆ ಅಷ್ಟೇ. ಮಾಣಿಕ್-ದಾ ಎಂದರೆ ಬಂಗಾಳ. ಬಂಗಾಳದ ಕಲೆ, ಸಾಹಿತ್ಯ ಹಾಗು ಸೃಜನಶೀಲತೆಯನ್ನು ದೇಶಕ್ಕೆ ವಿಶ್ವಕ್ಕೆ ಪರಿಚಯಿಸಿಕೊಟ್ಟ ಮೂರ್ತ ರೂಪ. ದೇಶ ಹಸಿವು ಬರಗಾಲವೆಂಬ ಬೆಂಕಿಯಲ್ಲಿ ಬೇಯುತ್ತಿದ್ದಾಗಲೇ ಪಥೇರ್ ಪಾಂಚಾಲಿಯಂತ ಚಿತ್ರವನ್ನು ಮಾಡಿ ಚಿತ್ರನಿರ್ಮಾಣದಲ್ಲಿ ನಾವೇನು ಕಡಿಮೆ ಎಂಬೊಂದು ದಿಟ್ಟ ಸವಾಲನ್ನು ಜಗತ್ತಿನ ಮುಂದಿಟ್ಟ ಪ್ರತಿಭೆ. ಕಡು ಬಿಳಿ ಬಣ್ಣದ ಜುಬ್ಬಾ ಹಾಗು ಧೋತಿಯನ್ನು ತೊಟ್ಟು, ಘಾಡವಾದ ಕಣ್ಣುಗಳೊಳಗೆ ಆತ್ಮಾಭಿಮಾನದ ದೃಷ್ಟಿಯನ್ನು ನೆಟ್ಟು ಬಂಗಾಳದ ಬೀದಿಗಿಳಿದರೆ ಇಡೀ ಊರಿಗೆ ಊರೇ ಅವರ ಮುಂದೆ ತಲೆಬಾಗುತಿತ್ತು. ವಿಪರ್ಯಾಸವೆಂಬಂತೆ ಈ ಅಭಿಮಾನ, ಗೌರವ ಹಾಗು ಕಾಳಜಿಗಳು ಕೇವಲ ಬೆಂಗಾಲಕ್ಕೆ ಮಾತ್ರ ಸೀಮಿತವಾದವು. ವಿಶ್ವವನ್ನೇ ತನ್ನೆಡೆಗೆ ಮುಖ ಮಾಡುವಂತೆ ಮಾಡಿದ ಇವರ ಚಿತ್ರಗಳಾಗಲಿ, ಅವುಗಳು ದೇಶಕ್ಕೆ ತಂದ ಕೀರ್ತಿಯನ್ನಾಗಲಿ ಅಥವಾ ಅಂತಹ ಚಿತ್ರಗಳಿಂದ ಪ್ರೇರಿತರಾಗಿ ‘ಕ್ವಾಲಿಟಿ’ ಚಿತ್ರಗಳನ್ನು ತೆಗೆಯುವ ಮನೋಭಾವವಾಗಲಿ ನಮ್ಮ ದೇಶದ ಇತರ ನಿರ್ಮಾಪಕ ನಿರ್ದೇಶಕರಲ್ಲಿ ಬರಲಿಲ್ಲ. ‘ಅಂಡ್ರೆಡ್ ಕ್ರೋರ್ ಬಾಕ್ಸ್ ಆಫೀಸ್’, ‘ಕಿಂಗ್ ಖಾನ್’, ‘ಡ್ರೀಮ್ ಗರ್ಲ್’, ‘ಐಟಂ ಸಾಂಗ್’ ಎಂಬ ಕಪೋಲಕಲ್ಪಿತ ಪದಗಳು, ಬಿರುದುಗಳು ಹಾಗು ನಾಯಕನೇ ಚಿತ್ರದ ಮೂಲಸ್ತಂಭ ಎಂದಾಗಿಸಿರುವ ಇಂದಿನ ಕಾಲದಲ್ಲಿ ಸಾಮಾಜಿಕ ಕಳಕಳಿಯೊಟ್ಟಿಗೆ  ಅಪ್ಪಟ ಸಾಹಿತ್ಯ ಹಾಗು ಸಂಗೀತದಿಂದ ಮೂಡುವ ಚಿತ್ರಗಳು ಮೂಡುವ ಕಾಲ ಮುಗಿದು ದಶಕಗಳೇ ಆಗಿವೆಯೋ ಎಂಬಂತಿದೆ. ಇಂತಹ ಸ್ಥಿತ್ಯಂತರದ ಕಾಲದಲ್ಲಿ ದೇಶೀ ಸಿನಿಮಾ ಇತಿಹಾಸದ ಪುಟಗಳಲ್ಲಿ ಸತ್ಯಜಿತ್ ಎಂಬ ಹೆಸರು ಧ್ರುವತಾರೆಯಂತೆ ಕಂಗೊಳಿಸುತ್ತಿದೆ. ಇಂತಹ ಧ್ರುವತಾರೆ ಜನಿಸಿ ಕಳೆದ ಮೇ 2ಕ್ಕೆ ಬರೋಬ್ಬರಿ ತೊಂಬಾತ್ತರು ವರ್ಷ. ರಾಜಕೀಯವೆಂಬ ಬಿಸಿನೆಸ್’ನ ನಾಟಕದಾರಿಗಳನ್ನು ಅಥವಾ ಮಾಡಿರುವ ಮೂರು ಮುಕ್ಕಾಲು ಚಿತ್ರಕ್ಕೇ ಆಸ್ಕರ್ ಪ್ರಶಸ್ತಿಯನ್ನು ಮುಡಿಗೇರಿಸಿ ಸಾಧನೆಗೈದ ನಟಿಯೇನೋ ಎಂಬ ರೇಂಜಿನಲ್ಲಿ ದಿನ ಪೂರ್ತಿ ನಡೆಯುವ ಅವರ ಆಡಂಬರದ ಮದುವೆಯ ತುಣುಕುಗಳನ್ನು ವೈಭವೀಕರಿಸಿ ತೋರಿಸುವ ನಮ್ಮ ಮಾಧ್ಯಮಗಳು, ದೇಶದ ಹೆಸರನ್ನು ವಿದೇಶಿ ನೆಲಗಳಲ್ಲಿ ಮೊಳಗಿಸಿದ ಸತ್ಯಜಿತ್’ರಂತಹ ಧೀಮಂತರ ಹೆಸರನ್ನೇ ಅರಿಯದಿರುವುದು ಇತ್ತೀಚಿನ ದಿನಗಳ ನಮ್ಮ ವಿಪರ್ಯಾಸ.

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!