ಅಂಕಣ

ಸಂಬಿತ್ ಪಾತ್ರನೆಂಬ ಮಾತಿನ ಅಕ್ಷಯ ಪಾತ್ರ!

ಸಂಬಿತ್ ಪಾತ್ರ!…

ನೀವು ರಾಜಕೀಯ ಪ್ರೇಮಿಯಾಗಿದ್ದು, ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿ ಪ್ರಸಕ್ತ ಹಾಗೂ ರಾಜಕೀಯ ವಿದ್ಯಮಾನಗಳ ಪ್ಯಾನೆಲ್ ಡಿಸ್ಕಶನ್ ನೋಡುವ ಹವ್ಯಾಸ ಹೊಂದಿದ್ದರೆ ಈ ಹೆಸರು ನಿಮ್ಮ ಸ್ಮೃತಿ ಪಟಲದಲ್ಲಿ ಹಾಸು ಹೊಕ್ಕಿರುವುದು ಪಕ್ಕಾ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ವಕ್ತಾರನಾಗಿ ಸಂಬಿತ್ ಪಾತ್ರ ಕೊಡುಗೆ ಅಷ್ಟಿಷ್ಟಲ್ಲ. ಚರ್ಚಾ ಕಾರ್ಯಕ್ರಮಗಳಲ್ಲಿ ಸಂಬಿತ್ ಪಾತ್ರ ಇದ್ದರೆ ಅದು ಬಹಳ ರಸವತ್ತಾದ ಕಾರ್ಯಕ್ರಮವಾಗುವುದರಲ್ಲಿ ಸಂಶಯವೇ ಇಲ್ಲ. ಮುಳ್ಳನ್ನು ಮುಳ್ಳಲ್ಲೇ ತೆಗೆಯಬೇಕು ಎಂಬಂತೆ ಬೇರೆ ಪ್ಯಾನಲಿಸ್ಟ್ ಮತ್ತು ಕಾರ್ಯಕ್ರಮ ನಿರೂಪಕರ ಮಾತಿನೇಟಿಗೆ ನೇರ ಹಾಗೂ ವ್ಯಂಗಮಿಶ್ರಿತ ಉತ್ತರ ಕೊಡುವಲ್ಲಿ ಸಂಬಿತ್ ಸಿದ್ಧಹಸ್ತರು. ಇದೇ ಕಾರಣದಿಂದಲೇ ಭಾರತೀಯ ಜನತಾ ಪಕ್ಷದ ಯುವ ಅಭಿಮಾನಿಗಳು ಸಂಬಿತ್ ಅವರ ವಾಕ್ಚತುರತೆಗೆ ಮಾರು ಹೋಗುತ್ತಿರುವುದು.

ಸಂಬಿತ್ ಹುಟ್ಟಿದ್ದು ಜಾರ್ಖಂಡಿನಲ್ಲಾದರೂ ಕಟಕ್’ನಲ್ಲಿ ವೈದಕೀಯ ಪದವಿ ಪಡೆದು ದೆಹಲಿಯ ಹಿಂದೂರಾವ್ ಆಸ್ಪತ್ರೆಗೆ ಕರ್ತವ್ಯಕ್ಕೆಂದು ನೇಮಿಸಲ್ಪಡುತ್ತಾರೆ. ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದಾಗ ಸ್ವರಾಜ್ ಎನ್ನುವ ಹೆಸರಿನ ಎನ್.ಜಿ.ಒ ಒಂದನ್ನು ಶುರು ಮಾಡಿ ಒರಿಸ್ಸಾ ಮತ್ತು ಛತ್ತೀಸ್ಗಢ ರಾಜ್ಯಗಳಲ್ಲಿ ದಲಿತರಿಗೆ ಮತ್ತು ಆದಿವಾಸಿಗಳಿಗೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಹಾಯಹಸ್ತ ಚಾಚುತ್ತಾರೆ. ನಂತರ ೨೦೧೧ರಲ್ಲಿ ವೈದ್ಯ ವೃತ್ತಿಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ ಸಂಬಿತ್ ಒರಿಸ್ಸಾ ರಾಜ್ಯವನ್ನು ಪ್ರತಿನಿಧಿಸುವ ಪಕ್ಷದ ಕೇಂದ್ರ ಸಮಿತಿಗೆ ಸೇರ್ಪಡೆಗೊಂಡರು. ೨೦೧೨ರ ದೆಹಲಿ ಮಹಾನಗರಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನ್ನನುಭವಿಸಿದರೂ ಸಂಬಿತ್ ಪಾತ್ರಾರ ವಾಕ್ಚತುರತೆಯನ್ನು ಪರಿಗಣಿಸಿದ ಬಿಜೆಪಿ ಹೈಕಮಾಂಡ್ ಸಂಬಿತರನ್ನು ಪಕ್ಷದ ರಾಷ್ಟ್ರೀಯ ವಕ್ತಾರನನ್ನಾಗಿ ನೇಮಿಸುತ್ತದೆ. ಯುಪಿಎ ಸರಕಾರದ 2ಜಿ ಮತ್ತು ಕಲ್ಲಿದ್ದಲು ಹಂಚಿಕೆಯಂತಹ ವಿವಿಧ ಹಗರಣಗಳ ಬಗ್ಗೆ ಬಿಜೆಪಿಯ ಅಭಿಪ್ರಾಯಗಳನ್ನು ಪ್ರಸ್ತುತಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲರನ್ನೂ ಬೆರಗುಗೊಳಿಸುವಂತೆ  ನಿರರ್ಗಳವಾಗಿ ಹಿಂದಿ ಮತ್ತು ಇಂಗ್ಲೀಷ್ ಎರಡರಲ್ಲೂ ಸ್ಪಷ್ಟತೆಯೊಂದಿಗೆ ಮಾತನಾಡುವ ಕಲೆ  ಸಂಬಿತ್ ಪ್ಲಸ್ ಪಾಯಿಂಟ್. ಯಾವುದೇ ವಿವಾದವನ್ನು ಸಮರ್ಥಿಸಿಕೊಳ್ಳಲು ಪಕ್ಷವು ಜವಾಬ್ದಾರಿ ವಹಿಸಿದಾಗ ಅದನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಸಾಮರ್ಥ್ಯ ಅವರಿಗಿದೆ.

ರಾಷ್ಟ್ರೀಯ ಪಕ್ಷವೊಂದರ ವಕ್ತಾರನ ಕೆಲಸವೆಂದರೆ ಸುಲಭದ ಮಾತೇನಲ್ಲ. ದಿವಸಕ್ಕೆ ನಾಲ್ಕೋ ಐದು ವಾಹಿನಿಗಳ ಚರ್ಚೆಯಲ್ಲಿ ಭಾಗವಹಿಸಬೇಕಾಗುತ್ತದೆ. ಕೇವಲ ವಾಗ್ಪರಿ ಮಾತ್ರ ಇದ್ದರೆ ಸಾಲದು, ಪ್ರಸ್ತುತ ಮತ್ತು ಹಿಂದಿನ ರಾಜಕಾರಣದ ಆಗುಹೋಗುಗಳ ಅರಿವು ಅಪಾರವಾಗಿರಬೇಕು. ಮತ್ತು ಯಾವುದೇ ವಿಷಯವನ್ನು ಎಲ್ಲಾ ಆಯಾಮಗಳಿಂದಲೂ ಅಧ್ಯಯನ ಮಾಡಿ, ವಿಷಯ ಮಂಡನೆ ಮಾಡುವ ತಾಕತ್ತಿರಬೇಕು. ಪ್ರಶ್ನೆಗಳಿಗೆ ಆಳೆದು ತೂಗಿ ಉತ್ತರ ಕೊಡಲು ಗೊತ್ತಿರಬೇಕು‌. ಪಕ್ಷವೊಂದು ಮುಜುಗರಕ್ಕೊಳಗಾದಾಗ ಸುದ್ದಿ ವಾಹಿನಿಗಳ ನಿರೂಪಕರು ಸಿಕ್ಕಿದ್ದೇ ಚಾನ್ಸ್ ಅಂದುಕೊಂಡು ಮೊದಲು ಜಾಡಿಸುವುದು ಆ ಪಕ್ಷದ ವಕ್ತಾರರನ್ನು. ೨೦೧೪ರಲ್ಲಿ ರಾಹುಲ್ ಗಾಂಧಿ ಅರ್ನಾಬ್ ಗೋಸ್ವಾಮಿಗೆ ನೀಡಿದ್ದ ಸಂದರ್ಶನದಲ್ಲಿ ಅದ್ಯಾವ ಪರಿ ಇಕ್ಕಟ್ಟಿನಲ್ಲಿ ಸಿಕ್ಕಿ ಹಾಕಿಕೊಂಡಿದ್ದರೆಂದರೆ ಅದಾದ ಮೇಲೆ ಮತ್ಯಾವ ಚಾನೆಲ್ ನಲ್ಲಿಯೂ ರಾಹುಲ್ ಕಾಣಿಸಿಕೊಂಡಿರಲಿಲ್ಲ. ಬೇರೆ ಪಕ್ಷದ ವಕ್ತಾರರು ಟಿವಿ ನಿರೂಪಕರು ಕೇಳೋ ಪ್ರಶ್ನೆಗಳಿಗೆ ಉತ್ತರವಿಲ್ಲದೇ ಬೆಪ್ಪಾಗುತ್ತಾರೆ. ಆದರೆ ಸಂಬಿತ್ ಪಾತ್ರ ಮಾತ್ರ ಎಲ್ಲೂ ಎಡವಟ್ಟು ಮಾಡಿಕೊಳ್ಳುವುದಿಲ್ಲ. ಎಂತಹದೇ ಕ್ಲಿಷ್ಟಕರ ಸನ್ನಿವೇಶವಾಗಿದ್ದರೂ ಬಹಳ ನಾಜೂಕಾಗಿ ಉತ್ತರ ಕೊಡುವ ಚಾಕಚಕ್ಯತೆ ಪಾತ್ರರಿಗಿದೆ. ಬೆಣ್ಣೆಯಿಂದ ಕೂದಲು ತೆಗೆದ ಹಾಗೆ ಪ್ಯಾನೆಲ್ ನಲ್ಲಿರುವ ವಿರೋಧ ಪಕ್ಷದ ಮುಖಂಡರ ಬಾಯಿ ಮುಚ್ಚಿಸುತ್ತಾರೆ. ಭಾರತೀಯ ಜನತಾ ಪಕ್ಷದ ವಕ್ತಾರರಲ್ಲಿ ಸಂಬಿತ್ ಪಾತ್ರ ಬಹಳ ಪ್ರಸಿದ್ಧಿಯನ್ನು ಪಡೆದವರು. ಸಂಬಿತ್ ಪಾತ್ರ ಇರುವ ಚರ್ಚೆಯೆಂದರೆ ಅದರಲ್ಲಿ ಫೈರ್’ವರ್ಕ್ ಇರುವುದು ಪಕ್ಕಾ!

ಅರ್ನಾಬ್ ಗೋಸ್ವಾಮಿ ಟೈಮ್ಸ್ ನೌ ಸುದ್ದಿ ವಾಹಿನಿಯಲ್ಲಿದ್ದಾಗ ನಡೆಸಿಕೊಡುತ್ತಿದ್ದ ನ್ಯೂಸ್ ಹವರ್ ಕಾರ್ಯಕ್ರಮದಲ್ಲಿ ಅದೆಷ್ಟು ರೌದ್ರಾವತಾರ ತಾಳುತ್ತಿದ್ದರು ಎಂದು ಆ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದವರಿಗೆ ಸರಿಯಾಗಿ ಗೊತ್ತಿರುತ್ತೆ. ಸಂಬಿತ್ ಪಾತ್ರ ಅವರ ಕುಹಕ ಮಿಶ್ರಿತ ಮಾತುಗಳಿಂದ  ಅರ್ನಾಬ್ ಕೂಡಾ ಬಿದ್ದೂ ಬಿದ್ದು ನಕ್ಕ ಹಲವು ಸನ್ನಿವೇಶಗಳಿವೆ. ಅದು ನೋಟ್ ಬ್ಯಾನ್, ಕಪ್ಪುಹಣ ಅಥವಾ ಆಮ್ ಆದ್ಮಿಗಳ ಮುಖವಾಡ ಕಳಚಿ ಬಿದ್ದ ಸನ್ನಿವೇಶವಿರಬಹುದು, ರಾಹುಲ್ ಗಾಂಧಿ ಬೇಜವಾಬ್ದಾರಿ ಹೇಳಿಕೆ ನೀಡಿದ ಪ್ರಸಂಗವಿರಬಹುದು, ಅಥವಾ ಆಜಾದಿ ಗ್ಯಾಂಗಿನ ಹಾರಾಟ ಹೋರಾಟವಿರಬಹುದು ಅಥವಾ ಬಿಜೆಪಿ ಪಕ್ಷವನ್ನೇ ಗುರಿಯಾಗಿಸಿ ನಡೆಸಲಾಗುತ್ತಿರುವ ಚರ್ಚೆಯಾಗಿರಬಹುದು ಸಂಬಿತ್ ಪಾತ್ರ ಹಾಜರಾಗುತ್ತಾರೆ. ಕೆಲವೊಂದು ಪಕ್ಷದ ವಕ್ತಾರರು ಹೇಗೆ ಅಂದರೆ ಪರಿಸ್ಥಿತಿ ಅವರಿಗೆ ಅನುಕೂಲಕರವಾಗಿಲ್ಲವೆಂದರೆ ಮಾಧ್ಯಮಗಳ ಸ್ಟುಡಿಯೋದತ್ತ ಸುಳಿಯುವುದೂ ಇಲ್ಲ. ಉದಾಹರೆಣೆಗೆ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣದ ಬಗ್ಗೆ ಟೈಮ್ಸ್ ನೌ ಬಹಳ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿದಾಗ ಕಾಂಗ್ರೆಸ್ ಪಕ್ಷದ ವಕ್ತಾರರು ಆ ವಾಹಿನಿಯನ್ನೇ ಬಹಿಷ್ಕರಿಸಿದ್ದರು. ಅಸಾದುದ್ದೀನ್ ಓವೈಸಿ, ಕವಿತಾ ಕೃಷ್ಣನ್, ಕನ್ನಯ್ಯ ಕುಮಾರ್, ಹಾಗೂ  ಆಜಾದಿ ಗ್ಯಾಂಗಿನವರ ಎಡಬಿಡಂಗಿತನವನ್ನು ದೇಶದ ಜನರ ಮುಂದೆ ಬಿಚ್ಚಿಟ್ಟ ಕೀರ್ತಿ ಸಂಬಿತ್ ಪಾತ್ರರಿಗೆ ಸಲ್ಲಬೇಕು. ಚರ್ಚೆಯೊಂದರಲ್ಲಿ ಬುರ್ಹಾನ್’ವಾನಿ ಭಯೋತ್ಪಾದಕ ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಒಂದು ಸಾರಿ ಹೇಳಿ ಬಿಡಿ ಅನ್ನುವ ಸಂಬಿತ್ ಕೋರಿಕೆಗೆ ಆಜಾದಿ ಗ್ಯಾಂಗಿನ ಬೆಂಬಲಿಗರು ಅವಾಕ್ಕಾಗಿದ್ದರು.!

ಸಂಬಿತ್’ಗೆ ಈಗ ಪ್ರಾಯ ೪೨ ವರ್ಷ ಅಷ್ಟೇ.  ಮುಂದಿನ ದಿನಗಳಲ್ಲಿ ಸಂಬಿತ್ ಲೋಕಸಭಾ ಸದಸ್ಯರಾಗಲಿ. ಅವರಂತಹ ಉತ್ತಮ ವಾಗ್ಮಿಗಳ ಅವಶ್ಯಕತೆ ನಮ್ಮ ಸಂಸತ್ತಿಗಿದೆ. ಸ್ಪಷ್ಟ ವಿಷಯ ಮಂಡನೆ, ಖಡಕ್ ಮಾತು, ಹಿಂದಿ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಉತ್ತಮ ಹಿಡಿತ, ವಿರೋಧಿಗಳ ಮಾತಿನ ದಾಳಿಗೆ ಮೊನಚಾದ ಮಾತಿನ ಪ್ರತಿದಾಳಿ, ಒಂದೇ ಒಂದು ಮಾತಿನಿಂದ ವಿರೋಧಿಗಳು ಮರು ಮಾತಾಡದಂತೆ ಮಾಡುವ ಕಲೆ ಸಂಬಿತ್ ಪಾತ್ರಾಗೆ ಬಹಳ ಚೆನ್ನಾಗಿ ಸಿದ್ಧಿಸಿದೆ. ಇವರ ಒನ್ ಲೈನರ್ ಪಂಚ್ ಗಳು ಟ್ವಿಟರ್’ನಲ್ಲೂ ಬಹಳ ಸದ್ದು ಮಾಡುತ್ತವೆ. ರಾಜಕೀಯವಾಗಿ ಅಷ್ಟು ಅನುಭವವಿಲ್ಲದಿದ್ದರೂ ಒಬ್ಬ ಅನುಭವಿ ರಾಜಕಾರಣಿಯೂ ನಾಚುವಂತೆ ತನ್ನ ಪಕ್ಷವನ್ನು ಸಂಬಿತ್ ಡಿಫೆಂಡ್ ಮಾಡುತ್ತಾರೆ! ಒಂದು ಆಂಗಲ್’ನಲ್ಲಿ ಸಂಬಿತ್ ನೋಡಲು ಮಾಜಿ ಪ್ರಧಾನಿ ವಾಜಪೇಯಿಯವರನ್ನು ಹೋಲುತ್ತಾರೆ ಅಂತ ಸಾಮಾಜಿಕ ಜಾಲತಾಣಗಳ ಪೇಜ್ಗಳು ಪೋಸ್ಟ್ ಗಳನ್ನೂ ಮಾಡಿವೆ. ಅದೇನೇ ಇರಲಿ ಅಕ್ಷಯ ಪಾತ್ರ ಎಂದಿಗೂ ಬರಿದಾಗದು ಎಂಬುದು ಎಲ್ಲರ ನಂಬಿಕೆ. ಅದೇ ರೀತಿ ಸಂಬಿತ್ ಬತ್ತಳಿಕೆಯಲ್ಲಿರೋ ಮಾತಿನ ಬಾಣಗಳೂ ಎಂದಿಗೂ ಬರಿದಾಗದು ಅನ್ನುವ ಮಾತು ಉತ್ಪ್ರೇಕ್ಷೆಯಾಗಲಾರದು. ಸಂಬಿತ್ ರಾಜಕೀಯದಲ್ಲಿ ಬಲು ಎತ್ತರಕ್ಕೆ ಏರಲಿ!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!