Featured ಅಂಕಣ

ಭೂಪಟ ಬಿಡಿಸುವಾಗ ಒಮ್ಮೆ ಈ ಭೂಪನ ನೆನಪಿರಲಿ.

ದೇಶ ಜೋಡಿಸುವ ಕೆಲಸವನ್ನು ಸ್ವಇಚ್ಛೆಯಿಂದ ಹೆಗಲ ಮೇಲೆ ಹೊತ್ತುಕೊಂಡ ಪಟೇಲರು ನಮ್ಮ ದೇಶದ ಹೊರತು ಬೇರೆ ದೇಶಗಳಲ್ಲಿದ್ದರೆ ವಿಶ್ವಮಾನ್ಯರಾಗುತ್ತಿದ್ದರು. ನಮ್ಮ ದೇಶದ ದುರ್ದೈವವೆಂದರೆ ನಮ್ಮ ದೇಶದ ಮಕ್ಕಳಿಗೆ ಪಟೇಲರು ಚಿರಪರಿಚಿತರಾಗಲಿಲ್ಲ. ಮೋತಿಲಾಲ್ ನೆಹರುವಿನಿಂದ ಹಿಡಿದು ರಾಹುಲ್ ಗಾಂಧಿಯವರೆಗೆ ಎಲ್ಲರೂ ಪಠ್ಯದಲ್ಲಿ ಬಂದು ಹೋದರು. ಆದರೆ ಪಟೇಲರಂಥ ಧೀಮಂತ ವ್ಯಕ್ತಿಗೆ ಪ್ರಶಸ್ತಿ ಪುರಸ್ಕಾರಗಳಿರಲಿ ಸೌಜನ್ಯಕ್ಕೂ ಅವರ ಹೆಸರನ್ನು ಎಲ್ಲೂ ಹೇಳುವುದಿಲ್ಲ. ಮೂರು ಸಂಸ್ಥಾನಗಳ ವಿಲೀನದ ಬಗ್ಗೆ ವಿಶೇಷ ಬೆಳಕು ಚೆಲ್ಲಿ ಮಿಕ್ಕ ಭಾಗಗಳನ್ನು ಹಾಗೇ ಬಿಟ್ಟ ಮಾತ್ರಕ್ಕೆ ಅವೆಲ್ಲ ಸುಲಭವಾಗಿ ದೇಶಕ್ಕೆ ಸೇರಲ್ಪಟ್ಟವು ಅಂಥ ಅರ್ಥವಲ್ಲ ಅಲ್ಲಿಯೂ ಹಲವು ಕಷ್ಟಗಳಿದ್ದವು. ಭೂಪಾಲದ ರಾಜ, ತ್ರಾವನ್ಕೋರಿನ ರಾಜ ಇವರೆಲ್ಲ ಬಂಡಾಯದ ಭಾವುಟ ಹಿಡಿದು ನಿಂತಿದ್ದರು. ಕೆಲವರಿಗೆ ಜಿನ್ನಾನಿಂದ ಹಲವು ರೀತಿಯ ರಿಯಾಯಿತಿಗಳು ದೊರಕುತ್ತಿದ್ದವು. ಅವರಿಗೆಲ್ಲಾ ಇವರು ಮತ್ತಷ್ಟು ಹೊಸ ರಿಯಾಯಿತಿಗಳನ್ನು ಕೊಟ್ಟು ಒಳಗೆಳೆದುಕೊಳ್ಳಬೇಕಾಗಿತ್ತು.

ಇಷ್ಟೆಲ್ಲಾ ಕಷ್ಟಗಳನ್ನು ಸಹಿಸಿಕೊಂಡು ದೇಶಕ್ಕಾಗಿ ಜೀವ ತೇಯ್ದ ಅವರನ್ನು ನಾವು ಅದೆಷ್ಟರ ಮಟ್ಟಿಗೆ ನೆನೆದಿದ್ದೇವೆ ಮತ್ತು ಗೌರವಿಸಿದ್ದೇವೆ?

       ನೆಹರೂ, ಇಂದಿರಾ ಗಾಂಧಿ ತಮ್ಮ ಅಧಿಕಾರವಧಿಯಲ್ಲಿ ತಮಗೆ ತಾವೇ ಭಾರತ ರತ್ನ ಪ್ರಶಸ್ತಿ ಕೊಟ್ಟುಕೊಂಡರು. ಈ ಬಗ್ಗೆ ಮೊದಲು ಒಂದು ಲೇಖನ ಬರೆದಿದ್ದೆ. ನೆಹರು ಕೊಡುವಾಗಿನ ಕಾರಣ ಕೆದಕಿದರೆ ಸಿಕ್ಕ ಮಾಹಿತಿ ಅವರು ದೇಶದ ಸ್ವತಂತ್ರಕ್ಕೋಸ್ಕರ ಹೋರಾಟ ಮಾಡಿದ ಕಾರಣಕ್ಕಾಗಿ ಕೊಟ್ಟೆವು ಎಂದು ತಿಪ್ಪೆ ಸಾರಿಸಿ ಬಿಟ್ಟರು. ಆದರೆ ಪ್ರಧಾನಿ ಆಫೀಸಿಂದ ಅದರ ಶಿಫಾರಸು ಹೋಗಬೇಕು. ಅವತ್ತು ಪ್ರಧಾನಿಯಾಗಿದ್ದು ನೆಹರು! ತಮ್ಮ ಹೆಸರನ್ನು ತಾವೇ ಸೂಚಿಸುವಾಗ ಪಟೇಲರು ಅವರಿಗೆ ಸ್ವತಂತ್ರ ಹೋರಾಟಗಾರರಾಗಿ ಕಾಣಲೇ ಇಲ್ಲವೇ?  ಹೋದರೆ ಹೋಗಲಿ ಸ್ವತಂತ್ರದ ನಂತರ ನಿಜವಾಗಲೂ ದೇಶದ ಸಾರ್ವಭೌಮತೆಗೆ ಕಾರಣವಾದ ಸಂಸ್ಥಾನಗಳ ಜೋಡನೆಯ ಕೆಲಸವೂ ಸ್ವತಂತ್ರ ಹೋರಾಟಕ್ಕಿಂತ ದೊಡ್ಡದು. ಯಾಕೆಂದರೆ ಸ್ವತಂತ್ರ ಹೋರಾಟದಲ್ಲಿ ಎಲ್ಲರಿಗೂ ಒಬ್ಬನೇ ಸಾಮಾನ್ಯ ಶತ್ರುವಿದ್ದ. ಆದರೆ ಪ್ರತಿ ಸಂಸ್ಥಾನದ ರಾಜನ ಮನಸ್ಸು ವಿಭಿನ್ನ. ಅದೂ ಬಿಡಿ ನ್ಯಾಯಯುತವಾಗಿ, ಅರ್ಹತೆಯ ಆಧಾರದ ಮೇಲೆ ಮತ್ತು ಓಟಿನ ಆಧಾರದ ಮೇಲೂ ಪಟೇಲರಿಗೆ ಪ್ರಧಾನಿಯಾಗುವ ಅವಕಾಶವಿತ್ತು. ಆದರೆ ಅದನ್ನು ಎತ್ತಿ ನೆಹರೂ ಕೈಯಲ್ಲಿ ಇಟ್ಟದ್ದಕ್ಕಾದರೂ ಋಣ ಬೇಡವೇ? ಪಟೇಲರ ಮರಣದ 41 ವರ್ಷಗಳ ನಂತರ ಭಾರತ ರತ್ನ ದಕ್ಕುತ್ತದೆ. ಅದೇ ರಾಜೀವ್ ಗಾಂಧಿ ಮರಣದ ಕೆಲವೇ ದಿನಗಳಲ್ಲಿ ಭಾರತ ರತ್ನ ದೊರಕುತ್ತದೆ. ಪಟೇಲರಿಗೆ ಆ ಗೌರವ ಸಂದಿದ್ದು ಪಿ.ವ್ಹಿ.ನರಸಿಂಹರಾವ್ ಅವರ ಸರ್ಕಾರವಿದ್ದಾಗ(ನೆಹರು, ಗಾಂಧಿ ಕುಟುಂಬ ಕ್ಷಣಕಾಲ ಸಕ್ರೀಯ ರಾಜಕಾರಣದಿಂದ ದೂರವಿದ್ದ ಸಮಯ.).2009 ರ ವೇಳೆ ಒಬ್ಬರು RTI ಮೂಲಕ ಪಡೆದ ಮಾಹಿತಿಯಿಂದ ತಿಳಿದು ಬರುವುದೇನೆಂದರೆ ನೆಹರು ಕುಟುಂಬದ ಹೆಸರಿನಲ್ಲಿರುವ ಒಟ್ಟು ಸರ್ಕಾರಿ ಯೋಜನೆಗಳು 450!

     ಭಾರತ ರತ್ನದ ವಿಷಯ ಹಾಗಿರಲಿ ಕನಿಷ್ಠ ಪಕ್ಷ ಅವರ ಕಾರ್ಯದ ಕುರಿತು ಪಠ್ಯಗಳಲ್ಲಾದರೂ ಅಳವಡಿಸಬಹುದಿತ್ತು. ಅದೂ ಕೂಡಾ ನಡೆಯುತ್ತಿಲ್ಲ.ಇತ್ತೀಚೆಗೆ ಅಂತೂ ಪಠ್ಯದಲ್ಲಿ ದೇಶಪ್ರೇಮ ಜಾಸ್ತಿ ಆಯಿತು ಎಂಬ ಕಾರಣಕ್ಕಾಗಿ ಪರಿಷ್ಕರಣೆ ನಡೆಯುತ್ತಿರುವ ಸಂದರ್ಭದಲ್ಲಿ ಪಟೇಲರನ್ನು ನೆನೆಯುವುದಾದರೂ ಹೇಗೆ ಸಾಧ್ಯ. ಆ ಮಟ್ಟಿಗಿನ ಧೀಮಂತಿಕೆ ಮತ್ತು ದೇಶಪ್ರೇಮವನ್ನು ತುಂಬಿಕೊಂಡ ವ್ಯಕ್ತಿಯನ್ನು ಪಠ್ಯಪುಸ್ತಕ ಸಮಿತಿಯವರು ಅದು ಹೇಗೆ ತಾನೆ ಸಹಿಸಿಕೊಂಡಾರು? ಪಟೇಲರ ಪಠ್ಯ ಓದಿ ಮತ್ತೊಬ್ಬ ಭಗತ್ ಸಿಂಗ್ ಜನ್ಮ ತಾಳಿದರೆ ಇವರ ಅಸ್ತಿತ್ವಕ್ಕೆ ಧಕ್ಕೆ ಅಲ್ಲವೇ. ಇವರಿಗೆ ಬೇಕಾದದ್ದು ದೇಶವನ್ನು ತುಂಡರಿಸುವ ಕನ್ನಯ್ಯಾಕುಮಾರ್ ಸಂತತಿಯೇ ಹೊರತು ದೇಶವನ್ನು ಜೋಡಿಸಿದ ಪಟೇಲರ ಸಂತತಿ ಅಲ್ಲ ಅಲ್ಲವೇ?

    ಇದೆಲ್ಲದರ ನಂತರ ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದಾಗ ಸರದಾರರ ಹೆಸರಿನಲ್ಲಿ “ಏಕತಾ ದಿವಸ” ಎಂಬ ಆಚರಣೆ ಜಾರಿಗೆ ತರುವ ವಿಚಾರ ಬಂತು. ಆಗ ಕಾಂಗ್ರೆಸ್’ನವರೆಲ್ಲ ಸರದಾರರನ್ನು ಅಪ್ಪಿಕೊಳ್ಳಲು ಓಡಿ ಬಂದರು. ಅವರು ನಮ್ಮ ನಾಯಕ ಅಂದರು. ಇಷ್ಟು ದಿನದವರೆಗೂ ಅವರಿಗೆ ಸಲ್ಲಬೇಕಾದ ಸನ್ಮಾನ ದಕ್ಕಲಿಲ್ಲ. ಅಕ್ಟೋಬರ್ ೩೧ರಂದು “RUN FOR UNITY” ಎಂಬ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಮೋದಿ ” ಶ್ರೇಷ್ಟ ಶಿಷ್ಯನಿಂದ ಗುರುವಿಗೆ ಶ್ರೇಷ್ಟತೆ ಲಭಿಸುತ್ತದೆ. ವಿವೇಕಾನಂದರಿಂದ ರಾಮಕೃಷ್ಣ ಪರಮಹಂಸರಿಗೆ ಶ್ರೇಷ್ಟತೆ ದಕ್ಕಿತ್ತು. ಅಂತೆಯೇ ಸರ್ದಾರ್ ಅವರು ಇಲ್ಲದೇ ಹೋಗಿದ್ದರೆ ಗಾಂಧಿ ಏನೂ ಅಲ್ಲ.” ಅಂದರು. ಸೂಲಿಬೆಲೆಯವರ ಸರದಾರ ಪುಸ್ತಕದಲ್ಲಿಯೂ ಇದೇ ಉಲ್ಲೇಖವಿದೆ “ಗಾಂಧಿಯನ್ನು ನೆಹರುವಿನ ಕಿಟಕಿಯಿಂದ ನೋಡಿದರೆ ಅಗೌರವ ಮೂಡುತ್ತದೆ. ಅದೇ ಪಟೇಲರ ಕಿಟಕಿಯಿಂದ ನೋಡಿದರೆ ಹೆಮ್ಮೆಯಾಗುತ್ತದೆ.” ಗಾಂಧಿ ತೆಗೆದುಕೊಂಡು ಹಲವು ತಪ್ಪು ನಿರ್ಧಾರಗಳು ಪಟೇಲರ ಕೊಡುಗೆಯ ಮುಂದೆ( ಇಂಥ ಒಬ್ಬ ವ್ಯಕ್ತಿಯನ್ನು ನಿರ್ಮಾಣ ಮಾಡಿದರಲ್ಲ ಎಂಬ ಕಾರಣಕ್ಕೆ ) ನಗಣ್ಯವಾಗಿಬಿಡುತ್ತವೆ. ಅದೇ ಅಕ್ಟೋಬರ್ ೩೧ ರಂದು ಇಂದಿರಾಗಾಂಧಿಯವರ ಪುಣ್ಯತಿಥಿ ಆಚರಣೆಯಲ್ಲಿದ್ದ ಕಾಂಗ್ರೆಸ್ ಏಕತಾದಿನದೆಡೆಗೆ ಮೂಗು ಮುರಿದರು. ಪಟೇಲರು ಕೂಡಾ ಕಾಂಗ್ರೆಸ್ಸಿನವರೇ ಎಂಬ ಮಾತನ್ನು ಒತ್ತಿ ಹೇಳಿದರು.  ಜನರಲ್ಲಿ ಗೊಂದಲ ಮೂಡಿಸುವ ಸಲುವಾಗಿ ಈ ಆಚರಣೆ ಎಂದು ಬೊಬ್ಬೆ ಹಾಕಿದರು. ಪಟೇಲರು ಕಾಂಗ್ರೆಸ್’ನವರೇನೋ ನಿಜ. ಇಂದಿರಾಗಾಂಧಿಯವರ ಪುಣ್ಯತಿಥಿಗೆ ಕೊಟ್ಟಷ್ಟು ಪ್ರಾಮುಖ್ಯತೆ ಪಟೇಲರ ಜನ್ಮದಿನಕ್ಕೆ ಕಾಂಗ್ರೆಸ್ಸಿನವರು ಯಾವತ್ತಾದರೂ ಕೊಟ್ಟಿದ್ದಾರಾ? ಇಂದಿರಾಗಾಂಧಿಯವರು ಬದುಕಿದ್ದಾಗಲಾದರೂ ಪಟೇಲರ ಜನ್ಮದಿನವನ್ನು ಆಚರಿಸಲಿಲ್ಲ.

      ನರೇಂದ್ರ ಮೋದಿಯವರ STATUE OF UNITY ಎಂಬ ಹೆಸರಿನಲ್ಲಿ ಸರದಾರರ ಪ್ರತಿಮೆ ನಿರ್ಮಾಣದ ಕಾರ್ಯವನ್ನು ಕೈಗೆತ್ತಿಕೊಂಡರು. ಇದಾದ ಮೇಲೂ ಸಹಿಸದ ಜನ ವಿದೇಶಿ ಕಂಪನಿಯೊಂದಕ್ಕೆ ಕಾಂಟ್ರಾಕ್ಟ್ ಕೊಡಲಾಗಿದೆ ಎಂದು ಬೊಬ್ಬೆ ಹಾಕಿದವು. ಆದರೆ ದಾಖಲೆಗಳ ಪ್ರಕಾರ L&T ಕಂಪನಿ 2989 ಕೋಟಿಗೆ ಕಾಂಟ್ರ್ಯಾಕ್ಟ್ ಪಡೆದಿತ್ತು. 31 ಅಕ್ಟೋಬರ್ 2014 ರಂದು ಮೂರ್ತಿ ನಿರ್ಮಾಣ ಕಾರ್ಯ ಶುರುವಾಗಿದ್ದು 2018 ರ ಹೊತ್ತಿಗೆ ಮುಗಿಯುವ ಸೂಚನೆ ಇದೆ. 2989 ಕೋಟಿಯಲ್ಲಿ 1347 ಕೋಟಿ ಮೂರ್ತಿಗಾದರೆ, 235 ಕೋಟಿಯ ಎಕ್ಸಿಬಿಷನ್ ಹಾಲ್ ಮತ್ತು ಕನ್ವೆನ್ಷನ್ ಸೆಂಟರ್ ನಿರ್ಮಾಣಕ್ಕೆ ಮೀಸಲಿಡಲಾಗಿದೆ. 83 ಕೋಟಿ ಮೂರ್ತಿಯಿಂದ ಮುಖ್ಯ ರಸ್ತೆಗೆ ಜೋಡಿಸುವ ಬ್ರಿಡ್ಜ್ ನಿರ್ಮಾಣಕ್ಕೆ ಹಾಗೂ 657 ಕೋಟಿ ಮುಂದಿನ 15 ವರ್ಷದ ನಿರ್ವಹಣಾ ಶುಲ್ಕವಾಗಲಿದೆ. ಈ ಪ್ರತಿಮೆ ನರ್ಮದಾ ಡ್ಯಾಮಿಗೆ ಅಭಿಮುಖವಾಗಿ ಸಾಧು ಬೇಟ್ ಎಂಬ ದ್ವೀಪದಿಂದ 3.2 ಕಿಮೀ ದೂರದಲ್ಲಿ ನಿರ್ಮಾಣವಾಗಲಿದ್ದು 240 ಮೀಟರ್ ಎತ್ತರವಿದೆ. ಇಷ್ಟು ದಿನ ಇಂಥ ಮೂರ್ತಿ ನಿರ್ಮಾಣದ ಕೆಲಸಕ್ಕೆ ಕೈ ಹಾಕದವರು ಇದನ್ನು ಕಂಡು ಮತ್ತೊಮ್ಮೆ ಮೂಗು ಮುರಿಯಬಹುದು. ಆದರೆ ಆನೆ ಇದ್ದರೂ ನೂರು ಹೋದರೂ ನೂರು ಎಂಬಂತೆ ಸರದಾರರು ಹೋದ ನಂತರವೂ ಇಂಥ ಒಂದು ಪ್ರತಿಮೆಯಲ್ಲಿ ಮೈ ತಾಳಿ ದೇಶದ ಪ್ರವಾಸೋದ್ಯಮಕ್ಕೆ ಆದಾಯ ತಂದುಕೊಡಬಲ್ಲವರಾಗಿದ್ದಾರೆ. ಅಪ್ಪಟ ಭಾರತೀಯ ವಸ್ತ್ರಧಾರಿ, ದಿವ್ಯನೇತ್ರಗಳ ದಿಟ್ಟ ನೋಟದ, ಗಂಭೀರ ನಡಿಗೆಯ ಅವರ ಚಲನಶೀಲತೆಯನ್ನು ತೋರಿಸುವ ಪ್ರತಿಮೆಯೊಂದು ಅವರು ತೀರಿಹೋದ ಇಷ್ಟು ದಿನದ ನಂತರವಾದರೂ ನಿರ್ಮಾಣವಾಗುತ್ತಿರುವುದು ಹೆಮ್ಮೆಯ ವಿಚಾರ.

      ಹಲವು ಕೃತಘ್ನ ಪೀಳಿಗೆಗಳ ನಂತರ ನಮ್ಮ ಕಾಲಮಾನದಲ್ಲಿ ಇಂಥ ಒಂದು ಮಹತ್ಕಾರ್ಯ ಜರಗವುದಲ್ಲದೇ ಸರದಾರರ ಬಗ್ಗೆ ಪಠ್ಯದಲ್ಲೂ ಅಳವಡಿಸಬೇಕು. ದೇಶದ ಪ್ರತಿಯೊಂದು ಮಗುವು ಅವರ ಪ್ರಾಮುಖ್ಯತೆಯನ್ನು ಅರಿಯುವಂತಾಗಬೇಕು. ಭಾರತ ಭೂಪಟವನ್ನು ಬಿಡಿಸುವಾಗಲೆಲ್ಲ ಸರದಾರರನ್ನೊಮ್ಮೆ ನೆನೆಯಲೇಬೇಕು. ಅವರಿಲ್ಲದೇ ಹೋಗಿದ್ದರೆ ಭೂಪಟ ಅಪೂರ್ಣವಾಗೇ ಉಳಿದಿರುತ್ತಿತ್ತು. ಹಲವು ಕಾಶ್ಮೀರಗಳು ಮೂಡುತ್ತಿದ್ದವು. ಎಲ್ಲೆಡೆಯಲ್ಲೂ ಗಡಿ ವಿವಾದಗಳು. ಹಲವು ಕಡೆ ರಾಜನ ಆಡಳಿತ ತಾರತಮ್ಯಗಳೇ ಮುಂದುವರೆಯುತ್ತಿದ್ದವು. ಅಂಥವರನ್ನು ನೆನೆಯದಿದ್ದರೆ ಹೇಗೆ?

 

Facebook ಕಾಮೆಂಟ್ಸ್

ಲೇಖಕರ ಕುರಿತು

Rahul Hajare

ಬಾಹುಬಲಿ ತಾಂತ್ರಿಕ ವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ ಎಂಡ್ ಕಮ್ಯನಿಕೇಶನ್ ಇಂಜನೀಯರಿಂಗ್ ಪದವಿ
ಸದ್ಯಕ್ಕೆ ಮಂಗಳೂರಿನ ಬ್ಯಾಂಕ್'ನಲ್ಲಿ ಉದ್ಯೋಗ ಕತೆ,ಲೇಖನ, ಕವಿತೆ ಬರೆಯುವುದು ಪ್ರವೃತ್ತಿ. ಚೆಸ್,ಕ್ರಿಕೆಟ್ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!