ಅಂಕಣ

ಪುಂಡ ಪಾ(ತ)ಕಿಸ್ತಾನದ ಭಂಡತನ

ಯುದ್ಧವಿರಾಮದ ಕರಾರುಗಳನ್ನು ಉಲ್ಲಂಘಿಸುತ್ತಾ ಸದಾ ಒಂದಿಲ್ಲೊಂದು ವಿಷಯಕ್ಕೆ ತಕರಾರು ತೆಗೆಯುತ್ತಲೇ ನೆರೆ ರಾಷ್ಟ್ರಗಳ ಪಾಲಿಗೆ ಅಕ್ಷರಶಃ ಹೊರೆಯಾಗಿರುವ ದೇಶವೆಂದರೆ ಅದು ಪಾಕಿಸ್ಥಾನ. ಇದರ ದುರ್ವರ್ತನೆಯ ಧೂರ್ತತನ ಹಾಗೂ ಕುಟಿಲ ತಂತ್ರಗಳ ಕ್ಷುಲ್ಲಕ ವರ್ತನೆಯನ್ನು ನೋಡಿದರೆ “ಅಯ್ಯೋ! ಏನಾದರೂ ಸರಿಯೇ ನೆರೆ ಹೊರೆ ಮಾತ್ರ ಚೆನ್ನಾಗಿರಬೇಕು” ಎಂಬ ಹಿರಿಯರ ಮಾತು ಮತ್ತೆ ಮತ್ತೆ ನೆನಪಾಗದೇ ಇರದು. ನೆರೆಹೊರೆ ಚೆನ್ನಾಗಿರದಿದ್ದರೆ ಏನಾದೀತು ಎಂಬ ಪ್ರಶ್ನೆಗೆ, ಪಾಕಿಸ್ತಾನದತ್ತ ಕೈ ತೋರಿಸಿಬಿಟ್ಟರೆ ಸಾಕು, ಸಮರ್ಪಕ ಉತ್ತರ ಸಿಗುತ್ತದೆ. ಅಸಂಖ್ಯಾತ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿ ವಿಲವಿಲನೆ ಒದ್ದಾಡುತ್ತಿದ್ದರೂ ಈ ದೇಶ ಅಕ್ಕಪಕ್ಕದ ರಾಷ್ಟ್ರಗಳ ಪಾಲಿಗೆ ಮಾತ್ರ ವಿಲನ್. ವಿದೇಶಾಂಗ ನೀತಿಯ ತತ್ವಸಿದ್ಧಾಂತ ಹಾಗೂ ಅಂತರಾಷ್ಟ್ರೀಯ ಸಂಬಂಧಗಳೆಂಬ ಹಾಲಿಗೆ ಬಿದ್ದ ಹುಳಿಯ ಉಂಡೆ ಈ ಪಾಕ್. ಇನ್ನು ಇದನ್ನೇ  ದುರುಪಯೋಗಪಡಿಸಿಕೊಂಡು ತಮಗಾಗದವರ ಮೇಲೆ ಛೂ ಬಿಡುವ ಛುತಿಯಾ ಬುದ್ದಿ ಕೆಲವು ರಾಷ್ಟ್ರಗಳದ್ದಾದರೆ, ಒಪ್ಪಂದ ಹಾಗೂ ಘೋಷಣೆಗಳ ಬದ್ಧತೆಗಳಿಗೆ ಚ್ಯುತಿಯಾಗಬಾರದೆಂಬ ಕಾರಣಕ್ಕೆ ತಕ್ಕಶಾಸ್ತಿ ಮಾಡಲಾಗದ ಅನಿವಾರ್ಯತೆ ಇನ್ನು ಕೆಲವು ದೇಶಗಳದ್ದು.

ಭಯೋತ್ಪಾದನೆಗೆ ಸಂಬಂಧಿಸಿದಂತೆ ಅತ್ಯಂತ ಹೆಚ್ಚು ಸುದ್ದಿಯಲ್ಲಿರುವ ದೇಶಗಳ ಪಟ್ಟಿಯಲ್ಲಿ ಪಾಕಿಸ್ತಾನ ಶಾಶ್ವತ ಸ್ಥಾನ ಪಡೆದಿದೆ. ಯಾವುದೇ ಕಾರಣಕ್ಕೂ ಆ ಸ್ಥಾನಕ್ಕೆ ಕುತ್ತು ಬರದಂತೆ ಕಾಯ್ದುಕೊಳ್ಳುವಲ್ಲಿ ಆ ರಾಷ್ಟ್ರ ಎಂದಿಗೂ ಹಿಂದೆ ಬಿದ್ದಿಲ್ಲ ಎಂದು ಘಂಟಾಘೋಷವಾಗಿ ಹೇಳಬಹುದು. ಎದುರಾಳಿ ದೇಶಗಳ ವಿರುದ್ಧ ಕತ್ತಿ ಮಸೆಯುವ, ಅವಕಾಶ ಸಿಕ್ಕಾಗ ಹಿಂದಿನಿಂದ ಬಂದು ಕತ್ತು ಹಿಸುಕುವ ಠಕ್ಕತನ ಮೆರೆಯುವುದರಲ್ಲಿ ಪಾಕ್ ಸದಾ ಮುಂಚೂಣಿಯಲ್ಲಿದೆ. ಭಯೋತ್ಪದಾಕರೆಂಬ ಕಿರಾತಕರಿಗೆ ಆಶ್ರಯ ನೀಡಿ ನೆರೆ ರಾಷ್ಟ್ರಗಳ ಮೇಲೆ ವಾಮ ಮಾರ್ಗಗಳ ಮೂಲಕ ದಾಳಿ ಮಾಡಿಸಿ ಗೆದ್ದೇವೆಂದು ಬೀಗುವುದರಲ್ಲಿ ಪರಮ ನಿಸ್ಸೀಮರು. Manufacture defect ಎಂಬಂತೆ ಎಷ್ಟೋ ಬಾರಿ ಅಲ್ಲಿ ಸಿದ್ಧಗೊಂಡ ಬಾಂಬ್’ಗಳು ಅಲ್ಲೇ ಸಿಡಿದು ಅಮಾಯಕ ಜನರೇ ಅದಕ್ಕೆ ಬಲಿಯಾದರೂ ಈ ಕೆಟ್ಟ ಚಾಳಿಯನ್ನು ಮಾತ್ರ ಅದು ಅಷ್ಟು ಸುಲಭಕ್ಕೆ ಬಿಡುತ್ತಿಲ್ಲ. ತನ್ನ ಎರಡೂ ಕಣ್ಣು ಹೋದರೂ ಅಡ್ಡಿಯಿಲ್ಲ ಎದುರಾಳಿಯ ಒಂದು ಕಣ್ಣಾದರೂ ಹೋಗಬೇಕೆಂಬ ಹಿನಾಯ ಮನಃಸ್ಥಿತಿಯ ಪರಮಾವಧಿಯದು.

ಭಾರತದ ಪಾಲಿಗಂತೂ ಪಾಕ್, ‘ಸೆರಗಲ್ಲಿ ಕಟ್ಟಿಕೊಂಡ ಕೆಂಡ’ವೇ ಸರಿ. ಅಪ್ರಚೋದಿತ ದಾಳಿ, ಯುದ್ಧವಿರಾಮ ಉಲ್ಲಂಘನೆ, ಭಯೋತ್ಪಾದಕರ ಒಳನುಸುಳುವಿಕೆಗೆ ಕುಮ್ಮಕ್ಕು ಇವೇ ಮುಂತಾದ ಅನೈತಿಕ ಮಾರ್ಗಗಳ ಮೂಲಕ ಸಡ್ಡುಹೊಡೆಯಲು ಪ್ರಯತ್ನಿಸುತ್ತಿರುವ ಪಾಕಿಸ್ತಾನ ಅದೆಷ್ಟೋ ಭಾರಿ ತಾನೇ ತೋಡಿದ ಖೆಡ್ಡಾಕ್ಕೆ ಬಿದ್ದರೂ ಬುದ್ದಿ ಮಾತ್ರ ಕಲಿಯುತ್ತಿಲ್ಲ. ರಣಾಂಗಣದಲ್ಲಿ ನೇರಾನೇರ ಸೆಣಸುವ ಎದೆಗಾರಿಕೆಯಿಲ್ಲದವರೂ ಬೆನ್ನಿಗೆ ಚೂರಿ ಹಾಕುವ ಕೆಲಸವಲ್ಲದೆ ಇನ್ನೇನನ್ನು ತಾನೇ ಮಾಡಿಯಾರು ಅಲ್ಲವೇ? ಭಾರತವನ್ನು ಕೆಣಕಿ ಕಾಲ್ಕೀಳುವ ಪುಂಡತನ ತೋರುವ ಪಾಕ್, ಭಾರತ ಇನ್ನೇನು ಎದಿರೇಟು ನೀಡಲು ಮುನ್ನುಗ್ಗಬೇಕು ಎನ್ನುವಷ್ಟರಲ್ಲಿ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಕಣ್ಣೀರು ಹಾಕಿ ತನ್ನ ಭಂಡತನವನ್ನು ಮೆರೆಯುವ ಮೂಲಕ ಪಲಾಯನಗೈಯ್ಯುತ್ತಿದೆ. ಅತ್ತ ನಿರ್ಲಕ್ಷಿಸಲೂ ಆಗದ ಇತ್ತ ಗಂಭೀರವಾಗಿ ಪರಿಗಣಿಸಿ ತೀಕ್ಷ್ಣ ತಿರುಗೇಟೂ ನೀಡಲಾಗದ ಉಭಯ ಸಂಕಟ. ಪಾಕಿನ ಸಂಚಿಗೆ ತಕ್ಕ ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದವರ ಗುಂಡಿಗೆಯ ಸುತ್ತಳತೆಯ ಇಂಚಿನ ಬಗ್ಗೆಯೂ ಈಗ ಚರ್ಚಿಗಳೆದ್ದಿವೆ. ಏನೇ ಆದರೂ ಯೋಧರ ಬಲಿದಾನ ವ್ಯರ್ಥವಾಗಬಾರದೆಂದರೆ ಪುಂಡಾಟಿಕೆ ಹಾಗೂ ಭಂಡತನವನ್ನು ಬಿಡಿಸಲು ಪಾಕ್’ನ ಬೆಂಡೆತ್ತಲೇಬೇಕು.

ಓವರ್ ಡೋಸ್: ಮಾನವ ಹಕ್ಕುಗಳ ಬಗ್ಗೆ ಚಿಂತಿಸುವ ದೇಶಗಳು ಹಲವಾರಿವೆ ಆದರೆ ಮಾನವ ಬಾಂಬರ್’ಗಳ ಬಗ್ಗೆ ಚಿಂತಿಸುವ ಕೆಲವೇ ಕೆಲವು ದೇಶಗಳ ಪೈಕಿ ಪಾಕಿಸ್ತಾನವೂ ಒಂದು.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!