ಅಂಕಣ

ನಾರಾಯಣ ಮೂರ್ತಿಯವರೊಂದಿಗೆ ಒಂದು ಸಂದರ್ಶನ…

ನಾರಾಯಣ ಮೂರ್ತಿ ಭಾರತದ ಐಟಿ ಇಂಡಸ್ಟ್ರಿಯ ದಿಗ್ಗಜರಲ್ಲಿ ಒಬ್ಬರು. ೧೯೮೧ರಲ್ಲಿ ಆರಂಭಿಸಿದ ಇನ್ಫೋಸಿಸ್ ಭಾರತದ ೬ನೇ ಅತಿದೊಡ್ಡ ಕಂಪನಿಯಾಗಿದೆ. ಈ ಸಂದರ್ಶನದಲ್ಲಿ ಮೂರ್ತಿಯವರು ತಾವು ಪಡೆದ ಮೌಲ್ಯಯುತ ಸಲಹೆಗಳ ಬಗ್ಗೆ, ನಾಯಕತ್ವ, ಕಾರ್ಯನಿರ್ವಹಣೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ ಹಾಗೂ ಇಂದಿನ ಯುವ ಪೀಳಿಗೆಗೆ ತಮ್ಮ ಕೆಲವು ಸಲಹೆಗಳನ್ನು ಕೂಡ ನೀಡಿದ್ದಾರೆ.

ನೀವು ಯುವಕರಾಗಿದ್ದಾಗ ಪಡೆದ ಅತ್ಯುತ್ತಮ ಸಲಹೆ ಯಾವುದು ಮತ್ತು ಇಂದಿನ ಯುವಕರಿಗೆ ಯಾವ ರೀತಿಯ ಸಲಹೆಯನ್ನು ನೀಡಬಯಸುತ್ತೀರಿ?

ನಾನು ನನ್ನ ಮೊದಲ ಪಾಠವನ್ನು ಕಲಿತದ್ದು ನನ್ನ ತಂದೆಯಿಂದ. ಅವರು ಯಾವಾಗಲೂ ತಮ್ಮ ಮಕ್ಕಳಿಗೆ ಅಗ್ಗದ ಹವ್ಯಾಸಗಳನ್ನ ಮೈಗೂಡಿಸಿಕೊಳ್ಳಲು ಹೇಳುತ್ತಿದ್ದರು. “ನೀವು ಅಗ್ಗದ ಹವ್ಯಾಸಗಳನ್ನ ಮೈಗೂಡಿಸಿಕೊಂಡರೆ ಎಂದೂ ಕೂಡ ಹಣಕ್ಕೆ ಬಲಿಯಾಗುವುದಿಲ್ಲ. ದುರಾಸೆಯ ಸುಳಿಯಲ್ಲಿ ಸಿಕ್ಕಿಕೊಂಡು ಮುಂದೊಂದು ದಿನ ಪಶ್ಚಾತ್ತಾಪ ಪಡುವಂತಾಗುವುದಿಲ್ಲ” ಎನ್ನುತ್ತಿದ್ದರು ನನ್ನ ತಂದೆ.

ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವಂತೆ ಹೇಳುತ್ತಿದ್ದರು. ಆಗಿನ ದಿನಗಳಲ್ಲಿ (ಈಗಲೂ ಕೂಡ) ಸಣ್ಣ ಪಟ್ಟಣಗಳ್ಳಲ್ಲಿಯೂ ಸಾರ್ವಜನಿಕ ಗ್ರಂಥಾಲಯಗಳಿರುತ್ತಿತ್ತು. ಅಲ್ಲಿ ದಿನಪತ್ರಿಕೆಗಳನ್ನ, ಮಾಸಪತ್ರಿಕೆಗಳನ್ನ ಓದಬಹುದಿತ್ತು. ಹಾಗೆಯೇ ನಿಮಗೆ ಬೇಕಾದ ಪುಸ್ತಕವನ್ನು ಎರವು ಪಡೆದುಕೊಂಡು ಓದಬಹುದಿತ್ತು. ಈ ಹವ್ಯಾಸಕ್ಕೆ ಹಣ ಬೇಕಾಗುವುದಿಲ್ಲ.

ಹಾಗೆಯೇ “ಸಂಗೀತವನ್ನು ಆನಂದಿಸಲು ಕಲಿಯಿರಿ” ಎಂದು ಹೇಳುತ್ತಿದ್ದರು ತಂದೆ. ನನ್ನ ತಂದೆ ಶಿಕ್ಷಕರಾಗಿದ್ದರು. ಅವರಿಗೆ ನಾವು ಎಂಟು ಜನ ಮಕ್ಕಳು. ತುಂಬಾ ಬಡವರಾಗಿದ್ದೆವು ನಾವು, ನಮ್ಮ ಮನೆಯಲ್ಲಿ ರೇಡಿಯೋ ಕೂಡ ಇರಲಿಲ್ಲ.೧೯೫೦ರ ಕಾಲ ಅದು. ಅದಕ್ಕೆ, “ನೀವು ಯಾಕೆ ಉದ್ಯಾನವನಕ್ಕೆ ಹೋಗಿ ಕೂರಬಾರದು. ಅಲ್ಲಿ ಸಂಜೆ ೫.೩೦ರಿಂದ ೭.೩೦ರವರೆಗೆ ಸಂಗೀತವನ್ನು ಹಾಕುತ್ತಾರೆ” ಎನ್ನುತ್ತಿದ್ದರು. ಹಾಗಾಗಿ ನಾವು ಅಲ್ಲಿಗೆ ಆಗಾಗ್ಗೆ ಹೋಗಿ ಕುಳಿತು ಸಂಗೀತವನ್ನು ಆಲಿಸಿ ಬರುತ್ತಿದ್ದೆವು. ಅದಕ್ಕೆ ಕೂಡ ಹಣ ಬೇಕಾಗಿರಲಿಲ್ಲ.

“ಉತ್ತಮ ಸ್ನೇಹಿತರನ್ನ ಮಾಡಿಕೊಳ್ಳಿ. ಅವರೊಂದಿಗೆ ಉಪಯುಕ್ತ ಚರ್ಚೆಯನ್ನ ಮಾಡಿ. ಅದಕ್ಕೆ ಕೂಡ ಹಣ ಬೇಕಾಗುವುದಿಲ್ಲ” ನನ್ನ ತಂದೆ ಹೇಳಿಕೊಟ್ಟ ಈ ಮೂರು ಹವ್ಯಾಸಗಳನ್ನ ನಾನು ಈಗಲೂ ಪಾಲಿಸುತ್ತಿದ್ದೇನೆ.

  1. ಪುಸ್ತಕಗಳನ್ನ ಓದುವುದು- ಈಗಲೂ ನನ್ನ ಸಾಕಷ್ಟು ಸಮಯವನ್ನು ಭೌತಶಾಸ್ತ್ರ, ಗಣಿತ ಹಾಗೂ ಕಂಪ್ಯೂಟರ್ ಸೈನ್ಸ್’ಗೆ ಸಂಬಂಧಪಟ್ಟ ಪುಸ್ತಕಗಳನ್ನ ಓದಲು ಮೀಸಲಿಟ್ಟಿದ್ದೇನೆ.

2.ಸಂಗೀತವನ್ನು ಆಲಿಸುವುದು – ಭಾರತೀಯ ಶಾಸ್ತ್ರೀಯ ಸಂಗೀತ, ಹಿಂದಿ ಹಾಗೂ ಕನ್ನಡ ಸಿನಿಮಾ ಹಾಡುಗಳು, ಪಾಶ್ಚಾತ್ಯ ಪಾಪ್ ಹಾಡುಗಳು ಹಾಗೂ ಬೇರೆ ಬೇರೆ ದೇಶದ ಶಾಸ್ತ್ರೀಯ ಸಂಗೀತವನ್ನು ಆಲಿಸುತ್ತೇನೆ.

  1. ಕೆಲವು ಗೆಳೆಯರಿದ್ದಾರೆ ಅವರೊಂದಿಗೆ ಸಮಯ ವ್ಯಯಿಸುತ್ತೇನೆ. ಇವು ಯಾವುದಕ್ಕೂ ಹೆಚ್ಚು ಹಣ ಬೇಕಾಗುವುದಿಲ್ಲ.

ಎರಡನೇ ಪಾಠವನ್ನು ಕಲಿತದ್ದು ನನ್ನ ಹೈಸ್ಕೂಲು ಮುಖ್ಯೋಪಾಧ್ಯಾರಾದ ಕೆ.ವಿ. ನಾರಾಯಣ್ (ಕೆ.ವಿ.ಎನ್)ಅವರಿಂದ. ನಾನಾಗ ೧೩ ವರ್ಷದವನಾಗಿದ್ದೆ. ಸಾರ್ವಜನಿಕ ಆಸ್ತಿಯನ್ನು ಹೇಗೆ ಬಳಸಬೇಕು ಎನ್ನುವುದನ್ನ ಹೇಳಿಕೊಟ್ಟಿದ್ದು ಕೆ.ವಿ.ಎನ್. ನಮ್ಮ ಸ್ವಂತ ಆಸ್ತಿಗಿಂತ ಸಾರ್ವಜನಿಕ ಆಸ್ತಿಯನ್ನು ಹೆಚ್ಚು ನಾಜೂಕಾಗಿ ಬಳಸಬೇಕು ಎನ್ನುತ್ತಿದ್ದರು. ಒಮ್ಮೆ ಅವರು ಕೆಮೆಸ್ಟ್ರಿಯ ಪ್ರಯೋಗವೊಂದನ್ನು ಮಾಡುತ್ತಿದ್ದರು. ಅದರಲ್ಲಿ  ಸೋಡಿಯಂ ಕ್ಲೋರೈಡ್ (ಉಪ್ಪು) ಬಳಸುತ್ತಿದ್ದರು. ಟೆಸ್ಟ್ ಟ್ಯೂಬ್’ಗೆ ಉಪ್ಪನ್ನು ಹಾಕುವಾಗ ಬಹಳ ಗಮನವಿಟ್ಟು ಸ್ವಲ್ಪವೂ ಹೆಚ್ಚು ಕಡಿಮೆ ಆಗದಂತೆ ಹಾಕುತ್ತಿದ್ದರು. ಅದನ್ನ ನೋಡಿ ನನ್ನ ಪಕ್ಕದಲ್ಲಿದ್ದ ಗೆಳೆಯ ಕೆ.ವಿ.ಎನ್ ಎಷ್ಟು ಜಿಪುಣರು ಎಂದು ನಗತೊಡಗಿದ. ಕೆ.ವಿ.ಎನ್ ತಮ್ಮ ಪ್ರಯೋಗವನ್ನು ನಿಲ್ಲಿಸಿ, ಹತ್ತಿರ ಬಂದು ನನ್ನ ಗೆಳೆಯ ಬಳಿ ನಗುವಂತದ್ದೇನಿದೆ  ಎಂದು ಕಾರಣ ಕೇಳಿದರು. ಅದಕ್ಕೆ ಆತ, “ಸಾರ್.. ಕಡಿಮೆ ಬೆಲೆಗೆ ಸಿಗುವ ಆ ಉಪ್ಪಿಗೆ ಅಷ್ಟು ಜಿಪುಣತನ ತೋರಿಸಿದರಲ್ಲ ಅದಕ್ಕೆ ನಕ್ಕಿದ್ದು” ಎಂದು. ಅಂದು ಕೆ.ವಿ.ಎನ್ ನೀಡಿದ ಉತ್ತರ ನನಗೆ ಈಗಲೂ ನೆನಪಿದೆ ಹಾಗೂ ಇಂದಿಗೂ ಪಾಲಿಸುತ್ತಿದ್ದೇನೆ. “ನೆನಪಿಡು..ಈ ಅಗ್ಗದ ಬೆಲೆಯ ಉಪ್ಪು ಶಾಲೆಗೆ ಸೇರಿದ್ದು. ನನಗೆ, ನಿನಗೆ, ಈ ಕ್ಲಾಸಿನವರಿಗೆ ಹಾಗೂ ಇಡೀ ಶಾಲೆಗೆ ಸಂಬಂಧಪಟ್ಟಿದ್ದು. ಅದಕ್ಕಾಗಿಯೇ ಇದನ್ನ ಬಳಸುವಾಗ ನಾನು ಹೆಚ್ಚು ಜಾಗರೂಕನಾಗಿರಬೇಕು. ನೀನು ನಮ್ಮ ಮನೆಗೆ ಬಾ.. ದೊಡ್ಡ ಜಾರಿಯಲ್ಲಿ ನ್ನಗೆ ಉಪ್ಪು ಕೊಡುತ್ತೇನೆ ಅದು ಕೂಡ ಫ್ರೀ ಆಗಿ. ಯಾಕಂದರೆ ಅದು ನನ್ನ ಸ್ವಂತದ್ದು. ನಾನು ಎಷ್ಟು ಬೇಕಾದರೂ ಕೊಡಬಹುದು. ಆದರೆ ಸಾರ್ವಜನಿಕರಿಗೆ ಸಂಬಂಧಪಟ್ಟ ವಸ್ತುಗಳ ವಿಷಯ ಬಂದಾಗ ನಾನು ಹಾಗೆ ಮಾಡುವಂತಿಲ್ಲ.” ಇದು ಒಂದು ಅತಿ ಮುಖ್ಯ ಪಾಠ. ಜನ ಇದನ್ನ ಪಾಲಿಸದೇ ಇದ್ದಾಗ ನನಗೆ ಬಹಳ ಕೋಪ ಬರುತ್ತದೆ.

ಮೂರನೇ ಪಾಠ ನಾನು ಕಲಿತದ್ದು ಫ್ರೊ. ಜೆ.ಜಿ.ಕೃಷ್ಣಯ್ಯ (ಜೆ.ಜಿ.ಕೆ) ಅವರಿಂದ. ಅಹಮದಾಬಾದ್’ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್’ನಲ್ಲಿ ನಾನು ಕೆಲಸ ಮಾಡುತ್ತಿದ್ದಾಗ ಜೆ.ಜಿ.ಕೆ  ಅವರು ನನ್ನ ಬಾಸ್ ಆಗಿದ್ದರು. ಪ್ರತಿ ವ್ಯವಹಾರವು ಜೀರೋ ಬೇಸ್ ಇಂದ ಆರಂಭಿಸಬೇಕು, ಯಾವುದೇ ಪೂರ್ವಗ್ರಹಿಕೆ ಇಲ್ಲದೇ ವ್ಯವಹರಿಸಬೇಕು ಎನ್ನುತ್ತಿದ್ದವರು ಅವರು. ನಾನೊಂದು ಉದಾಹರಣೆ ಕೊಡುತ್ತೇನೆ. ನಾನು ಮತ್ತು ಜೆ.ಜಿ.ಕೆ ಟೆಕ್ನಿಕಲ್ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಿದ್ದವು. ಕೆಲವೊಮ್ಮೆ ಚರ್ಚೆಯ ಮಧ್ಯೆ ಉದ್ವೇಗದಲ್ಲಿ ಅನುಚಿತವಾದದ್ದನ್ನು ಒಬ್ಬರಿಗೊಬ್ಬರು ಹೇಳಿಬಿಡುತ್ತಿದ್ದೆವು. ಆಗೆಲ್ಲ ನನಗೆ ರಾತ್ರಿಯಿಡಿ ನಿದ್ದೆ ಬರುತ್ತಿರಲಿಲ್ಲ. ಜೆ.ಜಿ.ಕೆ ನನ್ನ ಮೇಲೆ ಖಂಡಿತ ಮುನಿಸಿಕೊಂಡಿರುತ್ತಾರೆ ಎಂದು ಚಿಂತಿಸುತ್ತಿದ್ದೆ. ಆದರೆ ಮಾರನೇ ದಿನ ಅವರನ್ನು ಭೇಟಿಯಾದಾಗ ಅವರು ನಗುಮುಖದಿಂದ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಅಂತದ್ದೇನೂ ನಡೆದೇ ಇಲ್ಲವೇನೋ ಎನ್ನುವಂತಿರುತ್ತಿದ್ದರು. ಇನ್ಫೋಸಿಸ್’ನಲ್ಲಿ ನನ್ನ ಸಹವರ್ತಿಗಳು ನನ್ನಲ್ಲಿ ಜೆ.ಜಿ.ಕೆ ಅವರ ಆ ಗುಣವನ್ನೇ ಈಗ ನೋಡುತ್ತಾರೆ. ನನ್ನ ಮಾತುಗಳು ಕೇವಲ ಆ ಸನ್ನಿವೇಶಕ್ಕೆ ಸಂಬಂಧಪಟ್ಟಿದ್ದಾಗಿರುತ್ತದೆಯೇ ಹೊರತು ವ್ಯಕ್ತಿಗತವಾಗಿರುವುದಿಲ್ಲ ಎಂದು ಅವರಿಗೂ ತಿಳಿದಿರುತ್ತದೆ.

ಜೆ.ಜಿ.ಕೆ’ಯಿಂದ ಕಲಿತ ಇನ್ನೊಂದು ಪಾಠ ಎಂದರೆ, ಡೇಟಾ ಮತ್ತು ಫ್ಯಾಕ್ಟ್’ಗಳ ಆಧಾರದ ಮೇಲೆ ತೀರ್ಮಾನಕ್ಕೆ ಬರಬೇಕು ಎನ್ನುವುದು. ಹಾಗಿದ್ದಾಗ ನಾವು ಪೂರ್ವಗ್ರಹಪೀಡಿತರಾಗುವುದಿಲ್ಲ ಎನ್ನುತ್ತಿದ್ದರು. ನನ್ನ ಇಡೀ ಜೀವನದಲ್ಲಿ ಇದನ್ನ ಪಾಲಿಸುತ್ತಲೇ ಬಂದಿದ್ದೇನೆ ಹಾಗೂ ಯಾವುದೇ ನಾಯಕನಲ್ಲಿರಬೇಕಾದ ಪ್ರಮುಖ ಗುಣ ಎಂದು ಭಾವಿಸಿದ್ದೇನೆ.

ಇಂದಿನ ಯುವ ವೃತ್ತಿಪರರಿಗೆ ನೀವು ಕೊಡ ಬಯಸುವ ಸಲಹೆ ಏನು?

ನಾನು ನನ್ನ ಸಮಯವನ್ನು ಕಾರ್ಪೋರೇಟ್ ಜಗತ್ತಿನಲ್ಲಿಯೇ ಕಳೆಯುತ್ತೇನೆ. ಜಗತ್ತಿನೆಲ್ಲೆಡೆ ಯುವಕರೊಂದಿಗೆ ಮಾತನಾಡಿ ನಾನು ಅರಿತಿದ್ದೇನೆಂದರೆ ಯುವ ಪೀಳಿಗೆಗೆ ನಮ್ಮ ಸಲಹೆ, ಐಡಿಯಾಗಳನ್ನು ನೀಡುವ ಉತ್ತಮ ರೀತಿ ಎಂದರೆ ಚಿಕ್ಕ, ಸರಳ ಹಾಗೂ ಆಕರ್ಷಕವಾದ ವಾಕ್ಯಗಳನ್ನು ಬಳಸುವುದು. ಉದಾಹರಣೆಗೆ ನಾನು ಯುವ ಜನರಿಗೆ “ದೇವರಲ್ಲಿ ನಾವು ನಂಬಿಕೆ ಇಡುತ್ತೇವೆ. ಉಳಿದವರು ಟೇಬಲ್ಲಿಗೆ ಡೇಟಾ ತಂದುಕೊಡುತ್ತಾರೆ” ಇದು ಅವರ ಮನಸ್ಸಿನಲ್ಲಿ ಉಳಿಯುತ್ತದೆ,

ಎರಡನೆಯದಾಗಿ ನಾನು ಅವರಿಗೆ, ಪ್ರಾಮಾಣಿಕತೆ, ದೃಢತೆ, ಶಿಸ್ತು ಹಾಗೂ ನಿಷ್ಪಕ್ಷಪಾತ ಇವುಗಳನ್ನ ಮೈಗೂಡಿಸಿಕೊಳ್ಳುವ ಸಲಹೆ ನೀಡುತ್ತೇನೆ, ಆಕರ್ಷಕವಾಗಿ ಅದನ್ನ “ಶುದ್ಧ ಆತ್ಮಸಾಕ್ಷಿಯೇ ಮೃದುವಾದ ತಲೆದಿಂಬು” ಎನ್ನುತ್ತೇನೆ. ಅವರಿಗೆ ಅರ್ಥವಾಗುತ್ತದೆ ನಾನು ಪ್ರಾಮಾಣಿಕವಾಗಿರುವಂತೆ, ನಿಷ್ಪಕ್ಷಪಾತವಾಗಿರುವಂತೆ ಸಲಹೆ ನೀಡುತ್ತಿದ್ದೇನೆ ಎಂದು. ಅವರಿಗೆ ಅರ್ಥವಾಗುತ್ತದೆ ಪ್ರಾಮಾಣಿಕವಾಗಿದ್ದರೆ ಮಾತ್ರ ರಾತ್ರಿ ಸುಖನಿದ್ದೆ ಸಾಧ್ಯ. ಯಾಕೆಂದರೆ ತಾವೇನು ತಪ್ಪು ಮಾಡಿಲ್ಲವೆಂದು ಗೊತ್ತಿರುತ್ತದೆ, ಅವರ ಅತ್ಮಸಾಕ್ಷಿ ಶುದ್ಧವಾಗಿರುತ್ತದೆ.

ಮೂರನೆಯದಾಗಿ ನಾನು ಅವರ ಬಗ್ಗೆ ಪಾರದರ್ಶಕತೆಯ ಬಗ್ಗೆ ಹೇಳುತ್ತೇನೆ. ಅದನ್ನ “ಸಂಶಯದಲ್ಲಿದ್ದಾಗ ಬಹಿರಂಗಪಡಿಸು..” ಎನ್ನುತ್ತೇನೆ.ಕಾರ್ಪೋರೇಟ್ ಜಗತ್ತಿನಲ್ಲಿ ಪಾರದರ್ಶಕವಾಗಿರುವುದು ಬಹಳ ಮುಖ್ಯವಾದುದು. ಪಾರದರ್ಶಕತೆ ಎನ್ನುವುದು ಯಾವುದೇ ಸಮಾಜದ ಒಬ್ಬ ಉತ್ತಮ ವೃತ್ತಿಪರನ, ಉತ್ತಮ ಮನುಷ್ಯನ ಹಾಗೂ ಉತ್ತಮ ನಾಗರಿಕನ ಗುಣ.

ನಿಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ನೀವು ಮಾಡಿದ ತಪ್ಪು ಯಾವುದು ಮತ್ತು ಅದರಿಂದ ಯಾವ ಪಾಠವನ್ನು ಕಲಿತಿರಿ?

ಇನ್ಫೋಸಿಸ್ ಆರಂಭದ ದಿನಗಳಲ್ಲಿ ನಾನು ನನ್ನ ಸುತ್ತ ಬುದ್ಧಿವಂತ ವ್ಯಕ್ತಿಗಳನ್ನ ಇಟ್ಟುಕೊಂಡಿದ್ದೆ. ನಾವು ಆಗ ಎಲ್ಲ ನಿರ್ಧಾರಗಳನ್ನು ಸಾಕಷ್ಟು ಚರ್ಚಿಸಿದ ನಂತರವೇ ತೆಗೆದುಕೊಳ್ಳುತ್ತಿದ್ದೆವು. ಕೆಲವು ನಾನ್-ಕ್ಲಾಸಿಫೈಡ್ ವಿಷಯಗಳಿಗಾಗಿ ಹಲವು ಬಾರಿ ಹೊರಗಿನಿಂದ ತಜ್ಞರನ್ನ, ಆ ಕ್ಷೇತ್ರದಲ್ಲಿ ಅನುಭವಿಗಳನ್ನು ಕರೆಸುತ್ತಿದ್ದೆವು. ಅವರ ಅಭಿಪ್ರಾಯಗಳನ್ನ ಕೇಳುತ್ತಿದ್ದೆವು, ಅದರ ಸಾಧಕ- ಬಾಧಕಗಳನ್ನ ಚರ್ಚಿಸುತ್ತಿದ್ದೆವು. ಹಾಗಾಗಿ ದೊಡ್ಡ ತಪ್ಪು ಅನ್ನುವಂತಹದ್ದು ಆಗಲಿಲ್ಲ. ಹಾಗಂತ ಎಲ್ಲವೂ ಅತ್ಯುತ್ತಮ ನಿರ್ಧಾರ ಎನ್ನುವಂತೆಯೂ ಇಲ್ಲದಿರಬಹುದು. ಅದರೆ ಕೆಲವೊಮ್ಮೆ ಅತ್ಯುತ್ತಮ ನಿರ್ಧಾರ ಎನ್ನುವುದಕ್ಕಿಂತ, ಆ ಸಂದರ್ಭಕ್ಕೆ ಯಾವುದು ಉತ್ತಮ ಎನ್ನುವುದು ಮುಖ್ಯವಾಗಿರುತ್ತದೆ. ಉತ್ತಮ ಚರ್ಚೆಗಳಳಿಗೆ ಮುಕ್ತ ಅವಕಾಶ ಇದ್ದಾಗ, ಅಂತಹ ಚರ್ಚೆಗಳಿಂದ ತೆಗೆದುಕೊಂಡ ನಿರ್ಧಾರಗಳಿಂದ ದುರಂತಗಳನ್ನ ತಪ್ಪಿಸಬಹುದು.

ನೀವು  ಜೊತೆಯಾಗಿ ಕೆಲಸ ಮಾಡಿದ ಅತ್ಯುತ್ತಮ ನಾಯಕ ಅಥವಾ ಮ್ಯನೇಜರ್ ಯಾರು? ಮತ್ತು ಯಾವುದು ಅವರನ್ನು ಅತ್ಯುತ್ತಮ ಎನ್ನುವಂತೆ ಮಾಡಿದ್ದು?

ನಾನು ಬಹಳ ಅದೃಷ್ಟವಂತ, ಯಾಕೆಂದರೆ ಅದ್ಭುತ ವ್ಯಕ್ತಿಗಳನ್ನ ನನ್ನ ಬಾಸ್ ಆಗಿ ಪಡೆದಿದ್ದೆ. ಪ್ರತಿಯೊಬ್ಬರಿಂದಲೂ ಸಾಕಷ್ಟು ಕಲಿತಿದ್ದೇನೆ. ನನ್ನ ಮೇಲೆ ಸಾಕಷ್ಟು ಪ್ರಭಾವ ಬೀರಿದ್ದು ಎಂದರೆ ನಾನು ಪ್ಯಾರಿಸ್’ನಲ್ಲಿದ್ದಾಗ ನನ್ನ ಬಾಸ್ ಆಗಿದ್ದವರು. ಅವರು ಒಬ್ಬ ಸೌತ್ ಆಫ್ರಿಕಾದ ಇಂಗ್ಲಿಷ್’ಮನ್. ಅವರು ಅಸಿಸ್ಟೆಂಟ್’ಗಳಿಂದ ತಪ್ಪುಗಳು ನಡೆದಾಗ ಅದರ ಹೊಣೆ ಹೊರುವುದು ಹೇಗೆ ಹಾಗೂ ಅಂತಹ ಸಂದರ್ಭಗಳಲ್ಲಿ ಹೇಗೆ ಅವರಿಗೆ ಪ್ರೋತ್ಸಾಹ ನೀಡಿ ಅದನ್ನು ಸರಿಪಡಿಸುವಲ್ಲಿ ಸಹಾಯ ಮಾಡಬೇಕು ಎನ್ನುವುದನ್ನ ಹೇಳಿಕೊಟ್ಟವರು.

ಒಂದು ಶುಕ್ರವಾರದ ಸಂಜೆ ನಾವು ಆಪರೇಟಿಂಗ್ ಸಿಸ್ಟಮ್’ನ್ನು ತಯಾರುಮಾಡುತ್ತಿದ್ದೆವು. ಅದರಲ್ಲಿ ದೊಡ್ಡ ತಪ್ಪೊಂದು ಉಂಟಾಗಿತ್ತು. ಆ ತಪ್ಪು ನನ್ನಿಂದ ಆಗಿತ್ತು. ಸಂಜೆ ೬ ಗಂಟೆ ಎನ್ನುವಷ್ಟರಲ್ಲಿ ಅದೇನು ಎಂದು ತಿಳಿದುಬಂದಿತು. ನನ್ನ ಜೊತೆ ಕೆಲಸಗಾರರೆಲ್ಲ ವಾಪಸ್ಸು ಮನೆ ಹೊರಟರು. ಯಾರು ಆರು ಗಂಟೆಯ ನಂತರವೂ ಕೆಲಸ ಮಾಡಬಯಸುತ್ತಾರೆ, ಅದೂ ಶುಕ್ರವಾರ ಪ್ಯಾರಿಸ್’ನಂತಹ ನಗರದಲ್ಲಿ! ನಾನು ನನ್ನ ಬಾಸ್’ಗೆ ಅಗಿರುವ ತಪ್ಪನ್ನು ಹಾಗೂ ಆಗಬೇಕಾಗಿರುವ ಕೆಲಸಗಳನ್ನ ವಿವರಿಸಿದೆ. ಅವರು ಅದೆಲ್ಲವನ್ನು ತಾಳ್ಮೆಯಿಂದ ಕೇಳಿಸಿಕೊಂಡರು. ಅದನ್ನ ಮಾಡಿ ಮುಗಿಸಲು ೨೪ ಗಂಟೆಯಂತೂ ಬೇಕಾಗಿತ್ತು. ಅಂದು ಅವರು ತಮ್ಮ ಪತ್ನಿಯೊಂದಿಗೆ ಹೊರಗೆ ಡಿನ್ನರ್’ಗೆ ಹೋಗುವವರಿದ್ದರು, ಅದರೆ ಅದನ್ನ ಕ್ಯಾನ್ಸಲ್ ಮಾಡಿ, ನನ್ನೊಂದಿಗೆ ಕುಳಿತರು. ಅವರು ನನಗೆ ಜೋಕ್’ಗಳನ್ನು ಹೇಳುತ್ತಿದ್ದರು, ಊಟ ಮತ್ತು ಕಾಫಿ ತಂದುಕೊಡುತ್ತಿದ್ದರು. ಅಂತೂ ಮರುದಿನ ಸಂಜೆ ೪ ಗಂಟೆ ಎನ್ನುವಷ್ಟರಲ್ಲಿ  ಕೆಲಸ ಮುಗಿಯಿತು. ಅಲ್ಲಿಯವರೆಗೂ ಅವರು ನನ್ನ ಜೊತೆಯೇ ಇದ್ದರು. ಅದೆಲ್ಲ ಮುಗಿದ ಮೇಲೆ, “ಕಿಡ್.. ನೀನು ಇನ್ನೊಮ್ಮೆ ಈ ರೀತಿ ಮಾಡಿದರೆ ಬಾರಿಸುತ್ತೇನೆ” ಎಂದಿದ್ದರು.

ಅಲ್ಲಿಯ ತನಕವೂ ಅವರು ನಾನೇನು ತಪ್ಪು ಮಾಡಿಯೇ ಇಲ್ಲವೇನೋ ಎನ್ನುವಂತೆ ವರ್ತಿಸಿ, ನನ್ನ ಆ ಕೆಲಸ ಮುಗಿಸಲು ಆತ್ಮವಿಶ್ವಾಸ ತುಂಬಿದರು. ಆಗಲೇ ಅರ್ಥವಾಗಿದ್ದು ನಾಯಕ ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ಸಂಪೂರ್ಣ ಸಹಕಾರ ನೀಡುವಂತವನಾಗಿರಬೇಕು, ಆ ನಂತರ ಬುದ್ದಿ ಹೇಳುವಂತಾಗಿರಬೇಕು ಎಂದು.  ನಾನು ಅದನ್ನೇ ಪಾಲಿಸಿಕೊಂಡು ಬಂದಿದ್ದೇನೆ.

ಭಾರತೀಯ ಕಂಪನಿಗಳಿಗೆ ಇಂದು ಯಾವ ರೀತಿಯ ಪ್ರತಿಭೆಗಳು ಬೇಕಾಗಿವೆ?

ಮೊದಲನೆಯದಾಗಿ ನಾವು ವಿವಿಧ ಸಾಂಸ್ಕೃತಿಕ ವಾತಾವರಣಕ್ಕೆ ಒಗ್ಗಿಕೊಳ್ಳುವುದನ್ನ ಕಲಿತುಕೊಳ್ಳಬೇಕು. ಜಾಗತೀಕರಣ ಹೆಚ್ಚು ಪ್ರಸಿದ್ಧವಾಗುತ್ತಿದೆ ಇಂದು. ಭಾರತೀಯರು ಬೇರೆ ಬೇರೆ ದೇಶಗಳಿಗೆ ಹೋಗಿ ಅಲ್ಲಿ ಕೆಲಸ ಮಾಡುಬೇಕಾಗುತ್ತದೆ. ಅದರಲ್ಲೂ ನಮ್ಮ ಕ್ಷೇತ್ರದಲ್ಲಿ ಈ ಬಹುಸಾಂಸ್ಕೃತಿಕ (ಮಲ್ಟಿಕಲ್ಚರಲ್) ಮನೋಭಾವ ಇರಲೇಬೇಕು. ಬೇರೆ ಬೇರೆ ಸಂಸ್ಕೃತಿಗಳ ಹಿನ್ನಲೆಯಿಂದ ಬಂದವರನ್ನು ಪ್ರೋತ್ಸಾಹಿಸುವುದನ್ನ ಕಲಿತುಕೊಳ್ಳಬೇಕು ನಾವು.

ಎರಡನೇಯದು, ಭಾರತೀಯರು ಶ್ರಮವಹಿಸಿ ಕೆಲಸ ಮಾಡುತ್ತಾರೆ ಹಾಗೆಯೇ ಬುದ್ಧಿವಂತರು ಕೂಡ ಹೌದು. ಇಲ್ಲಿಯ ವೃತ್ತಿಪರರು ಏನೇನು ಮಾಡಬೇಕೆಂಬುದನ್ನ ತಮ್ಮ ಬಾಸ್ ತಮಗೆ ವಿವರವಾಗಿ ತಿಳಸಲಿ ಎಂದು ಬಯಸುತ್ತಾರೆ. ಆನಂತರ ಅದನ್ನು ಉತ್ತಮವಾಗಿ ನಡೆಸುತ್ತಾರೆ. ನಮ್ಮ ವೃತ್ತಿಪರರು ತಾವೇ ಸ್ವತಃ ಹೊಸ ಸನ್ನಿವೇಶಗಳಿಗೆ ಹೋಗಿ, ಅಲ್ಲಿಯ ಸಮಸ್ಯೆಯನ್ನು ಕಂಡುಕೊಂಡು ಅದಕ್ಕೆ ತಮ್ಮದೇ ಪರಿಹಾರವನ್ನ ಡಿಸೈನ್ ಮಾಡುವಂತಾಗಬೇಕು.

ಮೂರನೇಯದಾಗಿ, ನಾವು ನಮ್ಮ ಕಮ್ಯುನಿಕೇಷನ್’ನಲ್ಲಿ ಉತ್ತಮಗೊಳ್ಳಬೇಕು, ಮುಖ್ಯವಾಗಿ ಇಂಗ್ಲಿಷ್’ನಲ್ಲಿ. ಭಾರತದಲ್ಲಿನ ಇಂಗ್ಲಿಷ್ ವ್ಯಾಕರಣಬದ್ಧವಾದುದು. ನಮ್ಮ ಐಡಿಯಾಗಳನ್ನ ವ್ಯಕ್ತಪಡಿಸುವಾಗ ಅಗತ್ಯಕ್ಕಿಂತ ಹೆಚ್ಚು ಶಬ್ದಗಳನ್ನ ಬಳಸುತ್ತೇವೆ. ನಾವು ನಮ್ಮ ಐಡಿಯಾಗಳನ್ನು ಸರಳ ಹಾಗೂ ನೇರವಾದ ರೀತಿಯಲ್ಲಿ ವ್ಯಕ್ತಪಡಿಸುವುದನ್ನ ಕಲಿಯಬೇಕಾಗಿದೆ. ನಾವು ಸುಲಲಿತವಾಗಿ ಕಮ್ಯುನಿಕೇಟ್ ಮಾಡುವುದನ್ನ ಕಲಿತರೆ ಇನ್ನೂ ಉತ್ತಮವಾಗಬಹುದು.!

ಮೂಲ ಲೇಖನ: ಅರ್ನಿ ಬರ್ನ್’ಸ್ಟೀನ್ – link

ಕನ್ನಡಕ್ಕೆ ಅನುವಾದ: ಶ್ರುತಿ ರಾವ್

Facebook ಕಾಮೆಂಟ್ಸ್

ಲೇಖಕರ ಕುರಿತು

Shruthi Rao

A cancer survivor dwells in a village of hosanagara. Author of Kannada book 'Baduku dikku badalisida osteosarcoma', and recepient of Karnataka sahitya academy award.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!