ಅಂಕಣ

ದೇಹ ಮುಪ್ಪಾದರೂ ಕಲೆ ಸುಕ್ಕಾಗದು ಎಂದು ತೋರಿಸಿಕೊಟ್ಟವರಿವರು!!

ಮೊನ್ನೆ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ಬ್ಯಾಟಿಂಗ್ ಮಾಡ್ತಾ ಇತ್ತು. ಮೈದಾನದಲ್ಲಿರೋ ದೊಡ್ಡ ಪರದೆಯಲ್ಲಿ ಪಂದ್ಯ ನೋಡುತ್ತಿದ್ದ ವೃದ್ಧ ದಂಪತಿಗಳನ್ನು ಎರಡು ಮೂರು ಬಾರಿ ತೋರಿಸಿದರು. ಒಂದು ಕ್ಷಣ ಅವರನ್ನು ನೋಡಿ, ಅರೇ ಇವರನ್ನೆಲ್ಲೋ ನೋಡಿದ್ದೇನಲ್ಲ ಎಂದು ಯೋಚಿಸತೊಡಗಿದೆ. ಆಮೇಲೆ ಹೊಳೆಯಿತು ಅವರು ವೊಡಾಫೋನ್ ಕಪಲ್ಸ್ ಅಂತ! ಕಳೆದ ಐದಾರು ತಿಂಗಳುಗಳಿಂದ ಜಿಯೋ ನೆಟ್ವರ್ಕ್ ಕೊಟ್ಟ ಏಟಿನಿಂದ ಎಲ್ಲಾ ನೆಟ್ವರ್ಕ್ಗಳ ಹಾಗೆ ಪತರಗುಟ್ಟಿ ಹೋಗಿದ್ದ ವೊಡಾಫೋನ್ ಕಳೆದ ಒಂದೂವರೆ ತಿಂಗಳಿಂದ ಐಪಿಲ್ ಪಂದ್ಯಗಳ ಪ್ರಸಾರದ ಸಮಯದಲ್ಲಿ ಹೊಸ ಮಾರ್ಕೆಟಿಂಗ್ ಸ್ಟ್ರಾಟೆಜಿಯಾಗಿ ಬಳಸಿಗೊಂಡದ್ದು ಆ ವೃದ್ಧ ದಂಪತಿಗಳನ್ನು. ನೀವು ಟೀವಿ ಅಥವಾ ಯೂಟ್ಯೂಬಿನಲ್ಲಿ ವೊಡಾಫೋನಿನ ಹೊಸ ಜಾಹೀರಾತು ಸರಣಿ ನೋಡಿದ್ದರೆ ನಾನಿಂದು ಹೇಳಲು ಹೊರಟಿರೋ ದಂಪತಿಗಳನ್ನು ಖಂಡಿತಾ ನೋಡಿರುತ್ತೀರಿ. ಆ ವೃದ್ಧ ದಂಪತಿಗಳೇ ಚೆನ್ನೈ ಮೂಲದ, ನೃತ್ಯ ಕ್ಷೇತ್ರದಲ್ಲಿ ಅಪರಿಮಿತ ಸಾಧನೆಯನ್ನು ಮಾಡಿರುವ, ಪದ್ಮಭೂಷಣ ಪುರಸ್ಕೃತ ಶ್ರೀ ಧನಂಜಯನ್(೭೮) ಮತ್ತು ಶ್ರೀಮತಿ ಶಾಂತಾ ಧನಂಜಯನ್ (೭೩)!. ಧನಂಜಯನ್ ದಂಪತಿ ನೃತ್ಯ ಕ್ಷೇತ್ರದಲ್ಲಿ “ಧನಂಜಯನ್ಸ್’ ಎಂದೇ ಖ್ಯಾತರಾಗಿದ್ದಾರೆ.

ವೊಡಾಫೋನ್ ನೆಟ್‌ವರ್ಕಿನ ಹೊಸ ಜಾಹೀರಾತಿನ ಸರಣಿಯಲ್ಲಿ ಆಶಾ ಮತ್ತು ಬಾಲ ಎನ್ನುವ ವೃದ್ಧ ದಂಪತಿಗಳು ಎರಡನೆಯ ಬಾರಿಗೆ ಮಧುಚಂದ್ರಕ್ಕೆ ಗೋವಾಗೆ ಟೂರ್ ಹೋಗುತ್ತಿರುವುದು ಮತ್ತು ಆ ಟೂರಿನಲ್ಲಿ ವೊಡಾಫೋನಿನ ಫಾಸ್ಟೆಸ್ಟ್ (ವೊಡಾಫೋನಿನ ಪ್ರಕಾರ) 4ಜಿ ನೆಟ್ವರ್ಕ್ ಯಾವ ತರ ಉಪಯೋಗಿಸಬಹುದು ಅನ್ನುವುದನ್ನು ತೋರಿಸಿದ್ದಾರೆ. ಜಾಹಿರಾತಿಗಾಗಿ ಧನಂಜಯನ್ ದಂಪತಿಗಳು ಗೋವಾದಲ್ಲಿ ಟ್ಯಾಟೂ ಹಾಕಿಸುತ್ತಾ, ಅಪರಿಚಿತರೊಂದಿಗೆ ಪಾರ್ಟಿ, ಬೋಟಿನಲ್ಲಿ ಡ್ಯಾನ್ಸ್ ಮಾಡಿದರು. ಗೂಗಲ್ ಮ್ಯಾಪ್ ರೂಟ್ ನೋಡುತ್ತಾ ಬೈಕ್ನಲ್ಕಿ ಜಾಲಿ ರೈಡ್ ಹೋದರು. ವಯಸ್ಸು ಎಪ್ಪತ್ತು ದಾಟಿದ್ದರೂ ಗೋವಾದ ಕೋಟೆಗಳನ್ನು ನೋಡುತ್ತಾ ಪ್ಯಾರಾಸೈಲಿಂಗ್ ಮಾಡಿದರು. ಫೇಸ್ಬುಕ್ ಲೈವ್ ವಿಡಿಯೋವನ್ನೂ ಮಾಡಿದರು ಧನಂಜಯನ್ ದಂಪತಿ. ಧೋತಿ ಪಂಚೆ ಉಡುತ್ತಿದ್ದ ಅಜ್ಜ ಧನಂಜಯನ್ ಶರ್ಟ್ ಮತ್ತು ಶಾರ್ಟ್ ಚಡ್ಡಿಯಲ್ಲಿ ಹೀರೋ ತರ ಪಳಪಳ ಮಿಂಚುತ್ತಿದ್ದರು.! ತಮ್ಮ ಗೋವಾ ಪ್ರವಾಸದ ಫೋಟೋ ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾ ವೊಡಾಫೋನ್ ಫಾಸ್ಟೆಸ್ಟ್ ನೆಟ್‌ವರ್ಕ್ ಎಂಬುವುದನ್ನು ಜನರಿಗೆ ತಿಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದರು. ಈ ಜಾಹೀರಾತು ನೋಡಿ ಎಷ್ಟು ಹೊಸ ಗ್ರಾಹಕರು ವೊಡಾಫೋನ್ ನೆಟ್‌ವರ್ಕ್ ಆಯ್ಕೆ ಮಾಡಿಕೊಂಡರೋ ಗೊತ್ತಿಲ್ಲ ಆದರೆ ತಮ್ಮ ಮನೋಜ್ಞ ಅಭಿನಯ ಕೌಶಲ್ಯ, ಸ್ವಾಭಾವಿಕ ನಟನೆ‌ಯಿಂದ ದೇಶವೇ ತಮ್ಮತ್ತ ಮೂಗಲ್ಲಿ ಬೆರಳಿಟ್ಟು ನೋಡುವಂತೆ ಮಾಡಿದ್ದು ಮಾತ್ರ ಸುಳ್ಲಲ್ಲ! ಯುವ ದಂಪತಿಗಳೂ ನಾಚುವಂತೆ ಧನಂಜಯನ್ ದಂಪತಿಗಳು ಬಹಳ ಅದ್ಭುತವಾಗಿ ವೋಡಾಫೋನಿನ ಜಾಹೀರಾತಿನಲ್ಲಿ ಅಭಿನಯಿಸಿದ್ದರು.

ವನ್ನಾಡಿಲ್ ಪುದಿಯವೀಟಿಲ್ ಧನಂಜಯನ್ ಹುಟ್ಟಿದ್ದು ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನ್ನೂರಿನ ಪೊಡುವಾಳ್ ಕುಟುಂಬದಲ್ಲಿ. ಧನಂಜಯನ್ ಗೆ ಬಾಲ್ಯದಿಂದಲೇ ಕಲೆಯ ಬಗ್ಗೆ ಎಲ್ಲಿಲ್ಲದ ತುಡಿತ. ತಂದೆಯ ಜೊತೆ ನಾಟಕಕ್ಕಾಗಿ ಊರೂರು ಪ್ರವಾಸ ಮಾಡಿ ಬಣ್ಣ ಹಚ್ಚುತ್ತಿದ್ದರು. ಧನಂಜಯನ್ ಬದುಕನ್ನು ಬದಲಿಸಿದ್ದು ಆಗಿನ ಮದ್ರಾಸ್( ಈಗಿನ ಚೆನ್ನೈ). ಮದ್ರಾಸಿನ ಕಲಾಕ್ಷೇತ್ರದ ನಿರ್ಮಾಪಕಿ ರುಕ್ಮಿಣೀದೇವಿಯವರ ಮಾರ್ಗದರ್ಶನದಲ್ಲಿ ಕಥಕ್ಕಳಿ ಮತ್ತು ಭರತನಾಟ್ಯದಲ್ಲಿ ಪಳಗಿ ಖ್ಯಾತ ಪುರುಷ ನೃತ್ಯಪಟುವಾಗಿ ಪ್ರಸಿದ್ಧರಾದರು. ಖ್ಯಾತ ನೃತ್ಯಗಾರ್ತಿ ಶಾಂತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು ಧನಂಜಯನ್. ಕಲಾಕ್ಷೇತ್ರದಲ್ಲಿ ಭರತನಾಟ್ಯ, ಕಥಕ್ಕಳಿ. ಮೃದಂಗ, ಹಾಗೂ ಸಂಗೀತವನ್ನು ಅಧ್ಯಯನ ಮಾಡಿದ ಧನಂಜಯನ್ ದಂಪತಿಗಳು ಕಲಾಕ್ಷೇತ್ರವನ್ನು ಬಿಟ್ಟು ೧೯೬೮ರಲ್ಲಿ ಚೆನ್ನೈನ ಅಡ್ಯಾರಿನಲ್ಲಿ ಭಾರತ ಕಲಾಂಜಲಿ ಎನ್ನುವ ಹೆಸರಿನ ತಮ್ಮದೇ ನೃತ್ಯಶಾಲೆಯನ್ನು ಸ್ಥಾಪಿಸುತ್ತಾರೆ. ಅಂದು ಬೆರಳೆಣಿಕೆಯಷ್ಟು ಮಂದಿ ವಿದ್ಯಾರ್ಥಿಗಳನ್ನು ಹೊಂದಿದ್ದ ನೃತ್ಯಶಾಲೆ ಇಂದು ನೂರಾರು ಪ್ರತಿಭೆಗಳನ್ನು ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ಕೊಡುಗೆಯನ್ನಾಗಿ ನೀಡಿದೆ. ವಿದ್ಯಾರ್ಥಿಗಳಿಗೆ ಪ್ರೀತಿಯ ಅಣ್ಣ ಮತ್ತು ಅಕ್ಕ ಆಗಿರುವ ಧನಂಜಯನ್ ದಂಪತಿಗಳು ನಾಟ್ಯ ಕ್ಷೇತ್ರದಲ್ಲಿ ಟ್ರೆಂಡ್ ಸೆಟ್ಟರ್ಸ್ ಅಂದರೆ ತಪ್ಪಾಗಲಾರದು. ಭಾರತದ ಶ್ರೇಷ್ಠ ನಾಗರಿಕ ಪ್ರಶಸ್ತಿ ಪದ್ಮಭೂಷಣ ಸೇರಿದಂತೆ ಕೇರಳ, ತಮಿಳುನಾಡು ಸರಕಾರಗಳು ಹಾಗೂ ಅನೇಕ ಸಂಘ-ಸಂಸ್ಥೆಗಳು ನೀಡಿರುವ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ. ಈ ಸಾಲಿನ ಆಳ್ವಾಸ್ ವಿರಾಸತ್ ಪ್ರಶಸ್ತಿಗೂ ಧನಂಜಯನ್ ಪಾತ್ರರಾಗಿದ್ದಾರೆ. ಭಾರತೀಯ ನೃತ್ಯ ಲೋಕದಲ್ಲಿ ಬಹಳ ಪ್ರಸಿದ್ಧಿಯನ್ನು ಪಡೆದ ದಂಪತಿಗಳಿವರು.

ಈ ಜಾಹೀರಾತು ಸರಣಿಯ ಮೊದಲು ಧನಂಜಯನ್ ಅವರು ನಿರೋಲಾಕ್ ಪೈಂಟ್ಸ್ ಮತ್ತು ಶಾಂತಾ ಅವರು ಕುಮಾರನ್ ಸಿಲ್ಕ್ಸ್ ಜಾಹೀರಾತುಗಳಲ್ಲೂ ಅಭಿನಯಿಸಿದ್ದರು. ವಿಶ್ವದಡಲ್ಲೆಡೆ ಓಡಾಡಿದ್ದರೂ ಗೋವಾಕ್ಕೆ ಮಾತ್ರ ಭೇಟಿ ನೀಡಿರಲಿಲ್ಲ. ಅಚಾನಕ್ಕಾಗಿ ವೋಡಾಫೋನ್ ಕಂಪನಿಯ ಜಾಹೀರಾತು ವಿಭಾಗದ ಮುಖ್ಯಸ್ಥರ ಕರೆ ಬಂತು. ಒಪ್ಪಿಕೊಂಡು ಬಿಟ್ಟೆವು. ಶೂಟಿಂಗ್ ಮಾಡಿದ್ದು, ಗೋವಾದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಿದ್ದು ಮಜಾವಾಗಿತ್ತು ಅನ್ನುತ್ತಾರೆ ಧನಂಜಯನ್ ದಂಪತಿಗಳು. ಪ್ರಾಯಶಃ ಹಲವು ವರ್ಷಗಳ ಬಂದಿದ್ದ ವೋಡಾಫೋನ್ ಜೂಜು ಮತ್ತು ಇತ್ತೀಚಿಗೆ ಬಂದ ಏರ್ಟೆಲ್ ೪ಜಿ ಹುಡುಗಿಯ ನಂತರ ಜನರ ಮನಸ್ಸಿನಲ್ಲಿ ಉಳಿಯಬಹುದಾದಂತಹ ಜಾಹೀರಾತು ಪಾತ್ರಗಳು ಧನಂಜಯನ್ ದಂಪತಿಗಳದ್ದು. ಮೇಕ್ ದ ಮೋಸ್ಟ್ ಆಫ್ ನವ್ ಅನ್ನುವ ಟ್ಯಾಗ್ ಲೈನ್ ನಲ್ಲಿ ಆರು ಜಾಹೀರಾತು ವೀಡಿಯೋಗಳನ್ನು ವೋಡಾಫೋನ್ ಬಿಟ್ಟಿತ್ತು. ಇಲ್ಲಿ ವೊಡಾಫೋನಿನ ಮಾರ್ಕೆಟಿಂಗ್ ಕೌಶಲ್ಯವನ್ನೂ ಮೆಚ್ಚಲೇಬೇಕು. ಸಾಮಾನ್ಯವಾಗಿ ಜಾಹೀರಾತು ಬಂದರೆ ಜನ ಬೇರೆ ಚಾನೆಲ್ ನೋಡುವುದು ವಾಡಿಕೆ. ಆದರೆ ಕ್ಯೂಟೆಸ್ಟ್ ವೃದ್ಧ ದಂಪತಿಗಳ ಈ ಅದ್ಭುತ ಮತ್ತು ಸೂಪರ್ ಡೂಪರ್ ಜಾಹೀರಾತು ಸರಣಿಯ ಮೂಲಕ ಜನರನ್ನು ಜಾಹೀರಾತು ನೋಡುವಂತೆ ಮಾಡಿದ್ದೂ ಗಮನಿಸಬೇಕಾದ ಸಂಗತಿ. ಧನಂಜಯನ್ ದಂಪತಿ ಈ ಇಳಿವಯಸ್ಸಿನಲ್ಲೂ ಮೋಜು ಮಸ್ತಿಯಿಂದ ಕೂಡಿದ ಜಾಹೀರಾತು ಒಂದರಲ್ಲಿ ಅಭಿನಯಿಸಿದ್ದೇ ದೊಡ್ಡ ಸಾಹಸ. ಇಬ್ಬರೂ ಭರತನಾಟ್ಯ ಪ್ರವೀಣರಾಗಿದ್ದರಿಂದ ನಟನೆಯೇನೂ ಹೊಸತಲ್ಲ. ಆದರೆ ಕಲೆಯ ಬಗ್ಗೆ ಅವರಿಗಿರೋ ತುಡಿತ, ಜಾಹೀರಾತಿನಲ್ಲಿ ನಟಿಸಲು ಅವರಿಗಿರೋ ಉತ್ಸಾಹ ಎಂತವರಿಗೂ ಪ್ರೇರಣೆಯಾಗುವಂತದ್ದು. ಅದಕ್ಕೆ ಅಲ್ಲವೇ ಹೇಳುವುದು ವಯಸ್ಸು ಕೇವಲ ನೆಪ ಮಾತ್ರ ಅಂತ. ನಿಜ. ಕಲೆಗೆ ಪ್ರಾಯದ ಹಂಗಿಲ್ಲ. ದೇಹ ಮುಪ್ಪಾದರೂ ಕಲೆ ಸುಕ್ಕಾಗದು ಅಂತ ತೋರಿಸಿಕೊಟ್ಟಿದ್ದಾರೆ ಧನಂಜಯನ್ ದಂಪತಿಗಳು!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!