ಸಿನಿಮಾ - ಕ್ರೀಡೆ

ಕಿರು ತೆರೆಯ ಹಿರಿಯ ಮಾಂತ್ರಿಕ ಹಿರಿತೆರೆಯಲ್ಲೂ ಗೆಲ್ಲಲಿ

ನನಗಿನ್ನೂ ನೆನಪಿದೆ, ಅದು ಚಿಗುರು ಮೀಸೆಯ ಕಾಲೇಜು ದಿನಗಳಿಗೆ ಕಾಲಿಟ್ಟ ಘಳಿಗೆ. ಬೆಳಗ್ಗೆ ಪದವಿ ಕಾಲೇಜಿನ ತರಗತಿ ನಡೆಯುತ್ತಿದ್ದರೆ ಮಟ ಮಟ ಮಧ್ಯಾಹ್ನ ಪದವಿ ಪೂರ್ವ ತರಗತಿಗಳು ನಡೆಯುತ್ತಿದ್ದವು, ಆಗೆಲ್ಲ ಕಾಲೇಜು ಅಂದರೆ ಬೆಂಗಳೂರಿನಲ್ಲಿ ಕಾಣ ಸಿಗುವ ೩೦* ೪೦ ಅಥವಾ ೬೦*೪೦ ಅಳತೆಯ ಜಾಗದ ಕಟ್ಟಡಗಳಲ್ಲಿ ಒಂದು ೨೦ ಕೋಣೆ ಅದ್ರಲ್ಲಿ ಹವಾನಿಯಂತ್ರಣ ಕೊಠಡಿಗಳಲ್ಲ, ಮುಕ್ತ ಮುಕ್ತ ಅಂದರೆ ಅತಿ ವಿಶಾಲವಾದ ಕೊಠಡಿಗಳು, ಕಿಟಕಿಗಳಿಗೆ ಚೌಕಟ್ಟೇ ಇರುತ್ತಿರಲಿಲ್ಲ ಅಂದ ಮೇಲೆ ಬಾಗಿಲೆಲ್ಲಿಂದ, ಇಷ್ಟು ವಿವರ ಕೊಟ್ಟ ಮೇಲೆ ಹಾಜರಾತಿ ಹಾಕಿದ ಮೇಲೆ ಹುಡುಗರು ಏನು ಮಾಡುತ್ತಿದ್ದರೆಂದು ಹೇಳುವ ಅವಶ್ಯಕತೆಯಿಲ್ಲ ಎಂದು ಕೊಂಡಿದ್ದೇನೆ. ಅದಿರಲಿ ವಿಷಯವನ್ನು ಪ್ರಸ್ತಾಪಿಸುವ ಭರದಲ್ಲಿ ಈ ಪ್ರಾರಂಭಿಕ ಒಕ್ಕಣೆಯನ್ನು ನಿಮಗೊಪ್ಪಿಸಬೇಕಾಯಿತು. ತರಗತಿಗಳು ೧೨:೧೫ ಕ್ಕೆ ಪ್ರಾರಂಭವಾದರೆ ೪:೧೫ ಕ್ಕೆ ಮುಕ್ತಾಯ, ಇಷ್ಟವಿದೆಯೋ ಇಲ್ಲವೋ ಕ್ಲಿಷ್ಟ ವಿಷಯಗಳಾದ ಅರ್ಥಶಾಸ್ತ್ರ, ಸ್ಟಾಟಿಸ್ಟಿಕ್ಸ್, ಅಕೌಂಟೆನ್ಸಿ ತರಗತಿಗಳು ನಡೆಯುತ್ತಿದುದ್ದೇ ಕಾಲೇಜಿನ ಕೊನೆಯ ಅವಧಿಯಲ್ಲಿ ಆದ್ದರಿಂದ ಮೊದಲನೇ ಬೆಂಚಿನ ವಿದ್ಯಾರ್ಥಿಗಳೊಂದಿಗೆ ಲಾಸ್ಟ ಬೆಂಚಿನ ವಿದ್ಯಾರ್ಥಿಗಳೂ  ಹಾಜರ್.

ಇಂತಹ ಸಂದರ್ಭದಲ್ಲಿ ನನ್ನ ಒಬ್ಬ ಸ್ನೇಹಿತ ಉಮೇಶ ಅಥವಾ ರಘು ಇರಬಹದು ಸರಿಯಾಗಿ ನೆನಪಾಗುತಿಲ್ಲ, ಮೂರು ಗಂಟೆಗೊ ನಾಲ್ಕು ಘಂಟೆಗೊ ಚಡಪಡಿಸಲು ಪ್ರಾರಂಭಿಸುತ್ತಿದ್ದರು – ಹೋಗ್ಬೇಕಪ್ಪ ಹೋಗ್ಬೇಕು ಎಂದು, ಎಲ್ಲಿ ಹೋಗ್ಬೇಕು ಗುರುವೇ ಅಂದೇ ಮನೆಗೆ ಗುರು ಎಂಬ ಉತ್ತರ ಬಂತು. ಯಾಕಪ್ಪ ಮನೆಗೆ ಹೋಗೋ ಆತುರ ಎಂದರೆ, ಮಾಯಾಮೃಗ ಸೀರಿಯಲ್ ಶುರು ಆಗತ್ತೆ ಕಣಪ್ಪ ನೋಡ್ಬೇಕು ಎಂದಾಗ ನನ್ನನ್ನು ಒಡಗೂಡಿ ಸ್ನೇಹಿತರೆಲ್ಲರೂ ಬೇರೆಯ ಗ್ರಹದಿಂದ ಯಾವುದೊ ಜೀವಿಯೊಂದು ಬಂದಂತೆ ಅವನನ್ನು ದಿಟ್ಟಿಸಿ ನೋಡಿದೆವು. ಆಗ ಧಾರಾವಾಹಿಗಳೆಂದರೆ ಅದು ಕೇವಲ ಹೆಂಗಳೆಯರಿಗಷ್ಟೇ ಸೀಮಿತವಾದದ್ದು ಎಂದು ನಂಬಿದಂತಹ ಸಮಯ, ಕೊನೆಗೆ ಅವನು ನಮ್ಮಿಂದ ಹೇಗೋ ತಪ್ಪಿಸಿಕೊಂಡು ಹೋದ, ಆದ್ರೆ ಅವನು ಹೋದ ನಂತರ ಒಬ್ಬೊಬರಾಗಿ ಅವನು ಹೇಳಿದ್ದು ನಿಜ ನಮ್ಮ ಮನೇಲೂ ಎಲ್ರು ನೋಡ್ತಾರೆ , ಟೈಟಲ್ ಸಾಂಗ್ ಅಂತೂ ಸೂಪರ್ ಎಂದು ಬಾಯಿ ಬಿಡತೊಡಗಿದರು. ಸರಿ ಹಾಗಾದರೆ ನೋಡಿಯೇ ಬಿಡೋಣ ಎಂದು ಎಲ್ಲರು ಧಾರಾವಾಹಿಯನ್ನು ಚಕ್ಕರ್ ಹೊಡೆದಾದರೂ ಸರಿ ನೋಡಿಯೇ ಬಿಡುವುದೆಂದು ತೀರ್ಮಾನಿಸಿ ಮನೆಕಡೆ ಹೊರಟರೆ, ಮನೆಯ ಆಸು ಪಾಸು, ಓಣಿ ಗಳೆಲ್ಲ ಸ್ತಬ್ದ. ಆ ಬಗೆಯ ಕ್ರೇಜ್, ಮನೆಗೆ ಹೋದರೆ ಟೀ ಬೇಕಾದ್ರೆ ಈಗಲೇ ಹೇಳಬೇಕು, ಆ ಮೇಲೆ ಸೀರಿಯಲ್ ಶುರುವಾದ ಮೇಲೆ ಅದು ಇದು ಕೇಳಬೇಡ ಎಂಬ ತಾಕೀತು, ಹೀಗೆ ಅಕ್ಕ ಪಕ್ಕದವರು, ಸ್ನೇಹಿತರು ಎಲ್ಲರು ಟೀ ವಿ ಯ ಮುಂದೆ ಹಾಜರ್, ಒಂದು ರೀತಿಯ ರಾಮಾಯಣ, ಮಹಾಭಾರತ್ ಪ್ರಸಾರವಾಗುತ್ತಿದ್ದಾಗ ಇರುತ್ತಿದ್ದ ನಿಶಬ್ದ ವಾತಾವರಣವನ್ನು ನೆನಪಿಸುತ್ತಿತ್ತು.

ಇದೆಲ್ಲದರ ನಡುವೆ ಮಾಯಾಮೃಗದ ಶೀರ್ಷಿಕೆ ಗೀತೆ    

“ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯಾ ಕೆಳಗೆ, ಬಲು ದೂರದಿ ಹೊಳೆಯುತ್ತಿದೆ ಬಾನೀಲಿಯಾ ಕೆಳಗೆ

ಹೊಳೆಯುತ್ತಿದೆ ಕಣ್ಣಂತೂ ಗಿರಿವಜ್ರದ ಹಾಗೆ, ಹೊಳೆಯುತ್ತಿದೆ ಕಣ್ಣಂತೂ ಗಿರಿವಜ್ರದ ಹಾಗೆ

ಶರ ವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ , ಶರ ವೇಗದಿ ಚಲಿಸುತ್ತಿದೆ ಮಾಯಾಮೃಗವೆಲ್ಲಿ

ಮಾಯಾಮೃಗ  ಮಾಯಾಮೃಗ  ಮಾಯಾಮೃಗವೆಲ್ಲಿ ಎಂದು ರಿಂಗಣಿಸಿತು ನೋಡಿ,  

ನಾಡಗೀತೆಯೋ ಎಂಬಂತೆ ಎಲ್ಲರ ದನಿ ಟಿವಿಯ ದನಿಗೆ ಗೊತ್ತಿಲ್ಲದೆ ದನಿ ಗೂಡಿಸುತ್ತಿತ್ತು.

ಹೀಗೆ ಸೀತಾರಾಮ್ ಅವರ ಕಿರು ತೆರೆಯ ಮಾಂತ್ರಿಕತೆಗೆ ಹಿರಿಯರು ಕಿರಿಯರು ಎನ್ನದೆ ಎಲ್ಲ ಜನರು ಮಾರುಹೋಗಿದ್ದರು, ಮಾಯಾಮೃಗ , ಮುಕ್ತ , ಮುಕ್ತ ಮುಕ್ತ , ಮನ್ವಂತರ ದಂತ ಧಾರಾವಾಹಿಯಿಂದ ಕಿರು ತೆರೆಯ ನಿರ್ದೇಶಕರಿಗೂ ಒಂದು ಸ್ಟಾರ್ ವ್ಯಾಲ್ಯೂ ಸೀತಾರಾಮ್  ತಂದುಕೊಟ್ಟರು, ಜನರಿಗೆ ಇಷ್ಟವಾಗುತ್ತಿದ್ದುದು ಅವರ ಧಾರಾವಾಹಿಗಳಲ್ಲಿ ಆಯ್ಕೆ ಮಾಡಿಕೊಳ್ಳುತ್ತಿದ್ದ ವಸ್ತು ಮತ್ತು ಅದರ ಆಶಯಗಳು. ಮಧ್ಯಮ ವರ್ಗದ ದಿನ ನಿತ್ಯದ ಆಗು ಹೋಗುಗಳು, ಬಂದೆರಗುವ ಪ್ರಯಾಸಗಳು, ಅದರೊಡನೆ ಸೆಣಸಾಡುವ ಮಧ್ಯಮ ವರ್ಗ, ಕೋರ್ಟ್ ಸೀನ್. ಹೀಗೆ ಮಧ್ಯಮ ವರ್ಗದಲ್ಲಿ ಕೆಲವು ಪಾತ್ರಗಳ ಮೂಲಕ, ನೈತಿಕ ಜವಾಬ್ಧಾರಿ , ಸ್ಥೈರ್ಯ, ಆತ್ಮ ವಿಶ್ವಾಸ ಮತ್ತು ಒಂದು ಆಶಾಭಾವ ವನ್ನು ತುಂಬುವ ಪ್ರಯತ್ನ ಹಾಗು ಸಮಯೋಚಿತವಾಗಿ ಹಿರಿಯ ಕವಿಗಳ ಕವಿತೆಗಳ ಬಳಕೆ ಹೀಗೆ ಒಂದೇ ಎರಡೇ ಹೇಳುತ್ತಾ ಹೋದರೆ ಹಲವು ವೈವಿಧ್ಯಗಳ ಸರಮಾಲೆ ಸೃಷ್ಟಿಸಿದ ಶಕ್ತಿ ಟಿ ಎನ್ ಸೀತಾರಾಮ್ ಅವರದು. ಅವರ ಸಿ ಎಸ್ ಪಿ ಎಂಬ ಪಾತ್ರವಂತೂ ಜನಮಾನಸದಲ್ಲಿ ಎಷ್ಟೊಂದು ಪ್ರಭಾವ ಬೀರಿತ್ತೆಂದರೆ ನನ್ನ ವಕೀಲ ಮಿತ್ರರ ಬಾಯಲ್ಲೇ ಕೇಳಬೇಕು, ಕೆಲವು ಕಕ್ಷಿದಾರರು ಬಂದು ಸರ್ ಬೇಕಾದ್ರೆ ಆ ಸಿ ಎಸ್ ಪಿ ಸೀರಿಯಲ್ ರೆಕಾರ್ಡ್ ಮಾಡ್ಕೊಂಡ್ ನೋಡ್ರಿ, ಬೇಕಾದ್ರೆ ನಿಮಿಗೆ ರೊಕ್ಕ ಕೊಡ್ತೀವಿ ಒಂದ್ ಸಲ ಭೇಟಿ ಮಾಡಿ ಬರ್ರಿ ಕೇಸ್ ಫೈಟ್ ಹ್ಯಾಂಗ ಮಾಡಬೇಕು ಅಂತ ಭಾಳ್ ಚಲೋ ಹೇಳ್ತಾರ್ ಎನ್ನುತ್ತಿದ್ದರಂತೆ, ಹೀಗೆ ತನ್ನದೇ ಆದ ಸಹೃದಯ ನೋಡುಗ ವೃಂದವನ್ನ ಸೃಷ್ಟಿಸಿಕೊಂಡ ಸಿ ಸ್ ಪಿ ಖ್ಯಾತಿಯ ಸೀತಾರಾಮ್  ಅವರಿಗೆ ಅವರೇ ಸಾಟಿ.

ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಯುವಕರನ್ನು ನಾಚಿಸುವಂತೆ ಹೆಚ್ಚು ಹೆಚ್ಚು ಕಾರ್ಯಶೀಲರಾಗಿರುವ ಅವರ ಹೊಸ ಹೊಸ ಯೋಜನೆಗಳನ್ನು ನೋಡಿದಾಗ ಇದನೆಲ್ಲ ನಿಮ್ಮ ಬಳಿ ಹಂಚಿಕೊಳ್ಳಬೇಕೆನಿಸಿತು, ಕಿರು ತೆರೆಯ ಮೋಡಿಗಾರ ಹಿರಿ ತೆರೆಯಲ್ಲೂ ಅವರ ನೂತನ ಚಿತ್ರ “ಕಾಫಿ ತೋಟ” ಮೂಲಕ ಮೋಡಿ ಮಾಡಲಿ ಎಂಬ ಹಾರೈಕೆ , ಏಕೆಂದರೆ ಕಿರು ತೆರೆಯ ಮಾಯಾಮೃಗ, ಮುಕ್ತ , ಮನ್ವಂತರ ದಂತ ಸಾಲು ಸಾಲು ಯಶಸ್ಸು ನಾವು ದೊಡ್ಡ ಪರದೆಯಲ್ಲೂ ನೋಡಬೇಕು , ಸಮಾಜದೆಡೆಗೆ ಕಾಳಜಿ ಇಟ್ಟುಕೊಂಡ ಮನಸ್ಸಿನ ಗೆಲುವು ಇಡೀ ಕನ್ನಡಿಗರ ಗೆಲುವು ಹೌದು ಎಂದು ಹೇಳುತ್ತಾ ಅವರಿಗೊಂದು ಬೆಸ್ಟ್ ಆಫ್ ಲಕ್.

ದೊಡ್ಡ ಪರದೆಯಲ್ಲು ಮಾಯಾಮೃಗ ಮುಕ್ತವಾಗಿ ಓಡಾಡುತ್ತ ಹೊಸ ಮನ್ವಂತರಕ್ಕೆ ನಾಂದಿ ಹಾಡಲಿ.

 

ಕಾರ್ತಿಕ್ ಬಾಪಟ್

karthik.bapat@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!