ಅಂಕಣ

ವೃದ್ಧಾಪ್ಯದಲ್ಲೂ ಅಸಾಮಾನ್ಯ ಲವಲವಿಕೆ – ಮುಪ್ಪಿನಲ್ಲೂ ಸಾರ್ಥಕ ಜೀವನಕ್ಕೊಂದು ಊರುಗೋಲು

ಯಾರೂ ಅನುಭವಿಸದ, ಕಂಡೂ ಕಾಣರಿಯದ ಸಾವಿನಾಚೆಯ ಅದ್ಭುತ ಲೋಕವನ್ನು ಬಲ್ಲವರಾರು? ಅಂತಹದೊಂದು ಲೋಕವೇನಾದರೂ ನಿಜವಾಗಿಯೂ ಅಸ್ಥಿತ್ವದಲ್ಲಿದೆಯಾ? ಸಕಲ ಚರಾಚರ ಜೀವರಾಶಿಗಳಿಗೆ ಸೃಷ್ಟಿಕರ್ತನು ತನ್ನದೇ ಆದ ವೈವಿಧ್ಯತೆಯನ್ನು ದಯಪಾಲಿಸಿದ್ದಾನೆ. ಅದರಲ್ಲೂ ಮಾನವ ಜನ್ಮ ಪಡೆದ ನಾವೆಲ್ಲಾ ಧನ್ಯರು. ಸುಖದಲ್ಲಿ ಹಿಗ್ಗದೇ ದುಃಖದಲ್ಲಿ ಕುಗ್ಗದೇ ಹುಟ್ಟಿನಿಂದ ಸಾವಿನವರೆಗಿನ ಪಯಣವನ್ನು ಸಮರ್ಪಕವಾಗಿ ಎದುರಿಸಿ ಸಾರ್ಥಕ ಜೀವನ ನಡೆಸುತ್ತಿರುವ,ಸಾಮಾನ್ಯರಲ್ಲೂ ಅಸಾಮಾನ್ಯರೆನಿಸುವ ನಾ ಕಂಡ ಕೆಲ ವೃದ್ಧ ಜೀವಗಳೇ ನನ್ನೀ ಲೇಖನಕ್ಕೆ ಪ್ರೇರಣೆ.

ಬಯಸದೆ ಬರುವ ವಯೋಸಹಜವಾದ ಜೀವನದ ಕೊನೆಯ ಕಾಲಘಟ್ಟವೆನ್ನಬಹುದಾದ ದೈಹಿಕ ಸ್ಥಿತಿಯೇ ವೃದ್ಧಾಪ್ಯ. ಜೀವನದ ಸಕಲ ಸಂಕೋಲೆಗಳಿಂದ ಮಾನಸಿಕವಾಗಿ ಮುಕ್ತರಾಗಿ ೮೨ರ ಇಳಿ ಪ್ರಾಯದಲ್ಲೂ ಕುಂದದ ಜೀವನೋತ್ಸಾಹ!! ಅಬ್ಬಾ ಅಪ್ಪಯ್ಯ ಶಾಸ್ತ್ರಿಗಳನ್ನು ನೋಡಿ ಬದುಕುವದನ್ನು ಕಲಿಯಬೇಕು. ಬಹುತೇಕ ಮಧ್ಯಮವರ್ಗದವರ೦ತೆ ಸರಕಾರಿ ಕೆಲಸದಲ್ಲಿದ್ದು ಐಷಾರಾಮದ ಬದುಕಲ್ಲದಿದ್ದರು ಹೊಟ್ಟೆ ಬಟ್ಟೆಗೆ ಕಡಿಮೆಯಿಲ್ಲದ ಧಾರ್ಮಿಕತೆಯಿಂದ ಕೂಡಿದ ತುಂಬು ಕುಟುಂಬದ ಸಂತೃಪ್ತ ಜೀವನ ಶಾಸ್ತ್ರಿಗಳದು. ಕಾಲಕ್ರಮೇಣ ಮಗಳ ಮದುವೆ ಮಾಡಿ, ಮಕ್ಕಳಿಬ್ಬರನ್ನೂ ಅವರ ಯೋಗ್ಯತೆಗೆ ತಕ್ಕಂತೆ ಓದಿಸಿ ಮದುವೆ ಮಾಡಿ ವಿಶ್ರಾಂತ ಜೀವನ ನಡೆಸಲು ಅರೆಸಿ ಬಂದದ್ದು ಬೆಂದಕಾಳೂರನ್ನು.

ಜೀವಿತಾವಧಿಯ ಕೊನೆಯ ಕಾಲದಲ್ಲಿ ವಿಧಿಯು ಕಾರಣಾಂತರಗಳಿಂದ ಶಾಸ್ತ್ರಿಗಳನ್ನು ಮತ್ತು ಅವರ ಪತ್ನಿಯನ್ನು ಮಕ್ಕಳಿಂದ ದೂರ ಮಾಡಿತು. ಒಬ್ಬ ಮಗ ಸಂಸಾರವನ್ನು ತ್ಯಜಿಸಿ ಮನತೋಚಿದಂತೆ ಎಲ್ಲೋ ಹೋಗಿ ದೇವಸ್ಥಾನವೊಂದರ ಪೂಜೆ ಮಾಡುತ್ತಾ ಜೀವನ ಸಾಗಿಸುತ್ತಿದ್ದರೆ, ಇನ್ನೊಬ್ಬ ತಕ್ಕ ಮಟ್ಟಿಗೆ ಒಳ್ಳೆಯ ಕೆಲಸದಲ್ಲಿದ್ದು ತಂದೆ ತಾಯಿಯರಿಗೆ ನಿಯಮಿತವಾಗಿ ತೀರ್ಥಯಾತ್ರೆಯನ್ನು ಮಾಡಿಸುತ್ತಾ ಸುಖೀ ಜೀವನ ಸಾಗಿಸುತ್ತಿದ್ದ. ಆದರೆ ಕಾಯಿಲೆ ರೂಪದಲ್ಲಿ ಬಂದೊದಗಿದ ಗಂಡಾಂತರವೊಂದು ಆತನ ಜೀವನದ ದಿಕ್ಕನ್ನೇ ಬದಲಾಯಿಸಿತು. ಶಾಸ್ತ್ರಿಗಳ ಪರಿಶ್ರಮ ಮತ್ತು ಪುಣ್ಯದ ಫಲದಿಂದ ಕಾಯಿಲೆಯೇನೋ ವಾಸಿಯಾಯಿತು. ಆದರೆ ಆತ ದುಡಿಯುವ ಸ್ಥಿತಿಯಲ್ಲಿ ಇಲ್ಲ. ಅನಿವಾರ್ಯವಾಗಿ ತನ್ನ ಪುಟ್ಟ ಸಂಸಾರದೊಂದಿಗೆ ಸುಖವಾಗಿರಲು ಬೇರೆ ಮನೆಯಲ್ಲಿ ವಾಸವಾಗಿದ್ದಾನೆ. ಇಂತಹ ನೋವುಗಳೆಲ್ಲವನ್ನೂ ನುಂಗಿ ಎದೆಗುಂದದೇ ಸಮಚಿತ್ತರಾಗಿ ತಮ್ಮ ಕಾಲು ಊರಿ ನಡೆದಾಡಲೂ ಆಗದೆ ಕುಂಡಿ ಸವರುವ (ಹೊಸೆಯುವ) ಅರ್ಧಾಂಗಿಣಿಗೆ ಬೆನ್ನೆಲುಬಾಗಿ ಚಿಕ್ಕ ಬಾಡಿಗೆ ಮನೆಯಲ್ಲಿ ಚೊಕ್ಕ ಸಂಸಾರ ಸಾಗಿಸುತ್ತಿರುವ ಶಾಸ್ತ್ರಿಗಳಿಗೆ ತಮ್ಮ ಜೀವನದ ಕುರಿತು ಯಾವುದೇ ತಕರಾರಾಗಲಿ,ತಾತ್ಸಾರವಾಗಲಿ, ಜಿಗುಪ್ಸೆಯಾಗಲಿ ಇಲ್ಲ. ಬದಲಿಗೆ ತಮ್ಮ ಎರಡನೆಯ ಹೆಂಡತಿಯಂತಿರುವ ಹಳೆಯ ಸೈಕಲ್ ಮೇಲೆ ಸಾವಕಾಶವಾಗಿ ಸವಾರಿ ಮಾಡುತ್ತಾ ಮನೆಗೆ ಬೇಕಾಗುವ ಸರ೦ಜಾಮುಗಳನ್ನು ಇಳಿ ವಯಸ್ಸಿನಲ್ಲೂ ನಗುಮುಖ ಉತ್ಸಾಹದಿಂದ ಅನಾಯಾಸವಾಗಿ ತರುವದನ್ನು ಕಂಡ ಎಂಥವರಿಗೂ ಬದುಕಿನ ಪಾಠ ಎದ್ದು ಕಾಣುತ್ತದೆ. ಹತ್ತಿರವಿರುವ ಆಸ್ಪತ್ರೆಯೊಂದರಲ್ಲಿ ಮೂರು ತಿಂಗಳಿಗೊಮ್ಮೆ ಮೆಡಿಕಲ್ ಚೆಕ್-ಅಪ್ ಮಾಡಿಸಿಕೊಂಡು ಬಂದ ಪೆನ್ಷನ್’ನಲ್ಲಿ ನಿಶ್ಚಿಂತ ಜೀವನ ನಡೆಸುತ್ತಿರುವ ಶಾಸ್ತ್ರಿಗಳ ಜೀವನ ಇಂದಿನ ಯುಗದಲ್ಲಿ ಬೇಡದಿರುವ ಟೆನ್ಷನೆಲ್ಲ ತಲೆಯಲ್ಲಿ ತುಂಬಿಸಿಕೊಂಡು ಅವಧಿಗೆ ಮುನ್ನ ಶುಗರ್,ಬಿ.ಪಿ. ಮಂಡಿ ನೋವಿಗೆ ತುತ್ತಾಗಿ,ಕಿವಿ ಕೇಳದೆ ನರಳುವ ಸಕಲರಿಗೂ ಮಾದರಿ. ನೆಲದ ಮೇಲೆ ಛಪ್ಪೆ ಹೊಸೆದು ಅರ್ಧಾಂಗಿಣಿ ಅಡುಗೆ ಮಾಡಬೇಕು , ಶಾಸ್ತ್ರಿಗಳು ಪೂಜೆ ಮುಗಿಸಿ ಬಾಳೆ ಎಲೆಯಲ್ಲಿ ಊಟ ಮಾಡಿ ಹೆಂಡತಿಯ ಸಕಲ ಕಾರ್ಯಗಳಲ್ಲಿ ಕೈಜೋಡಿಸುತ್ತಾ ಯುವ ಜೋಡಿಗಳು ನಾಚುವಂತೆ ಮನೆಯನ್ನು ಅಚ್ಚುಕಟ್ಟಾಗಿಟ್ಟು ಬಂದ ಅತಿಥಿಗಳ ಉಪಚಾರ ಮಾಡುತ್ತಾ, ಖುದ್ದಾಗಿ ‘ಕೂಡಪಾ..ಕಾಫಿ ಮಾಡತೀನಿ…’ ಎನ್ನುತ್ತಾ ತಮ್ಮ ಕೋಣೆಯಿಂದ ಪ್ಲೇಟಿನಲ್ಲಿ ಹಚ್ಚಿದ (ವಗ್ಗರಣೆ) ಅವಲಕ್ಕಿ ಹಾಕಿ ನಂತರ ಕಾಫಿ ಕುಡಿಸಿ… ಅಡಕೆ ಪುಡಿ ಕೊಟ್ಟು…. ಆತ್ಮೀಯತೆಯಿಂದ “ಇನ್ನೊಮ್ಮೆ ಬಂದಾಗ ಹೆಂಡ್ತಿ ಮಕ್ಕಳನ್ನೂ ಕರಕೊಂಡ ಬಾರಪಾ…” ಎಂದಾಗ, ವೃದ್ಧಾಪ್ಯಕ್ಕೆ ಸವಾಲೆಸಿಯುವಂತಿರುವ ಶಾಸ್ತ್ರಿಗಳನ್ನು ಮಧ್ಯ ವಯಸ್ಸಿನಿಂದ ಕಂಡ ನನ್ನ ಮನ ಕರಗಿ ನೀರಾಗಿತ್ತು.

**************
ಇದೇ ಸಾಲಿಗೆ ಸೇರುವ ಇನ್ನೊಬ್ಬ ವೃದ್ಧೆ ೮೧ರ ಹರೆಯದ ಅನುಸೂಯಜ್ಜಿ…ನನ್ನ ಸ್ನೇಹಿತನೋರ್ವನ ಹತ್ತಿರದ ಸಂಬಂಧಿಯಾದ ಅನುಸೂಯಜ್ಜಿಯನ್ನು ಸಂಧಿಸಿ,ಅಕ್ಷರಶಃ ಅಜ್ಜಿ ಕಥೆಯನ್ನು ಅವರ ಬಾಯಿಯಿಂದ ಕೇಳುವ ಭಾಗ್ಯ ಒದಗಿ ಬಂದದ್ದು ಕೆಲ ತಿಂಗಳುಗಳ ಹಿಂದೆ ಸ್ನೇಹಿತನೊ೦ದಿಗೆ ಧಾರವಾಡಕ್ಕೆ ಭೇಟಿ ಇತ್ತಾಗ. ಈ ಇಳಿ ವಯಸ್ಸಿನಲ್ಲಿಯೂ ಚುರುಕಾದ ಕಿವಿಗಳು, ಸರಾಗವಾದ-ಸ್ಪಷ್ಟವಾದ ಮಾತಿನ ಧಾಟಿ ಸಮಯ ಪ್ರಜ್ಞೆ,ಅಗಾಧ ಸಾಮಾನ್ಯ ಜ್ಞಾನ,ಸ್ವಾವಲಂಬಿ ಜೀವನ ನನ್ನನ್ನು ಚಕಿತಗೊಳಿಸಿತ್ತು. ಮೊದಲನೆಯ ಮಹಡಿಯಲ್ಲಿ ವಾಸಿಸುತ್ತಿದ್ದರೂ ತಪ್ಪದೆ ಪ್ರತಿ ಗುರುವಾರ ಯಾರ ಸಹಾಯವಿಲ್ಲದೆ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಹೋಗಿ ರಾಯರ ದರ್ಶನ ಮಾಡಿ ತೀರ್ಥ ಪ್ರಸಾದ ಸ್ವೀಕರಿಸುವ ಪರಿಪಾಠವನ್ನು ಅಜ್ಜಿ ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಸಾಮಾನ್ಯವಾಗಿ ವೃದ್ಧಾಪ್ಯವೆಂದರೆ ಶಾಪ, ಬಾಗಿದ ಬೆನ್ನು,ರೋಗಗ್ರಸ್ತ ದೇಹ, ಯಾಕಾಗಿ ಹೀಗೆ ಬದುಕಬೇಕು, ದೇವರು ಬೇಗ ಎತ್ತಿಕೊಂಡು ಹೋದರೆ ಸಾಕಪ್ಪಾ ಎನ್ನುವರ ಸಂಖ್ಯೆಯೇ ಹೆಚ್ಚಿರುವ ಇಂದಿನ ಯುಗದಲ್ಲಿ ತಮ್ಮ ಜೀವನದ ಕುರಿತು ಹೆಮ್ಮೆಯಿಂದ ಹೇಳುತ್ತಾ ನೋವುಗಳೆನ್ನೆಲ್ಲಾ ನುಂಗಿ ಸಂತೋಷದ ಬದುಕುವ ಅನುಸಯಜ್ಜಿಂತವರು ತುಂಬಾ ಅಪರೂಪ.

ಅಜ್ಜಿಯೇ ಹೇಳುವಂತೆ ಅನುಸೂಯಜ್ಜಿಯನ್ನು ಅವರ ಗಂಡ ದಿವಂಗತ ಹನುಮಂತರಾವ್(೨೧ರ ಹರೆಯದ), ಅಜ್ಜಿಯ ಊರಿಗೆ ಬಂದಾಗ ಹದಿನಾರರ ಪ್ರಾಯದ ಅನುಸೂಯಾಳನ್ನು ಮೆಚ್ಚಿ ಹಿರಿಯರ ಮುಂದೆ ಮದುವೆಯ ಪ್ರಸ್ತಾಪವಿಟ್ಟಿದ್ದರಂತೆ. ಅಜ್ಜಿಯದು ಒಂಥರಾ ಪ್ರೇಮ ವಿವಾಹವೆಂದರೂ ಅಡ್ಡಿ ಇಲ್ಲ. ಅನುಸೂಯ ಅತ್ತೆಯ ಮನೆಯಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿ ಸೈ ಎನಿಸಿಕೊಂಡಿದ್ದರು…. ಮುಂದೆ ಹನುಮ೦ತರಾವರಿಗೆ ಪೋಸ್ಟ್ ಮಾಸ್ತರ್ ಅಂತ ಮುಂಬೈಗೆ ವರ್ಗವಾಯಿತು,ಅನಸೂಯ ಗಂಡನನ್ನು ಕೆಲ ದಿನಗಳ ಮಟ್ಟಿಗೆ ಅಗಲಬೇಕಾಯಿತು. ಕೆಲ ತಿಂಗಳುಗಳ ತರುವಾಯ ಅಜ್ಜಿ ಒಂಟಿಯಾಗಿ, ಇಡ್ಲಿ-ವಡಾಗೆ ಹೆಸರಾದ ತೆಲಗಿ ಸ್ಟೇಷನ್’ನಿಂದ ರೈಲಿನಲ್ಲಿ ಸೋಲಾಪುರ್ ಮಾರ್ಗವಾಗಿ ಮಾಯಾನಗರಿ ಮುಂಬೈಗೆ ಪ್ರಯಾಣ ಬೆಳೆಸಬೇಕಾಯಿತು. ಮರಾಠಿಯ ಲವಲೇಶವೂ ಗೊತ್ತಿಲ್ಲದ ಅನುಸೂಯ ಮುಂಬೈಗೆ ಹೋಗಿದ್ದು ೬೦ವರುಷಗಳ ಹಿಂದೆ!! ಅಜ್ಜಿಯ ದಿಟ್ಟತನವನ್ನು ಮೆಚ್ಚಲೇಬೇಕು. ಮುಂಬೈಯ ಉಪನಗರವೊಂದರ ಪುಟ್ಟ ಮನೆಯಲ್ಲಿ ಬೆಳಗ್ಗೆ ೪ ಘಂಟೆಗೆ ಎದ್ದು ಗಂಡನಿಗಾಗಿ ಡಬ್ಬಿ ಕಟ್ಟಿ ಲೋಕಲ್ ಟ್ರೈನಿನಲ್ಲಿ ಪೋಸ್ಟ್ ಮಾಸ್ತರನ್ನು ಬೀಳ್ಕೊಡಬೇಕು. ಈ ರೀತಿ ಚಾಣಾಕ್ಷತೆಯಿಂದ ಸಂಸಾರ ನಡೆಸುತ್ತಾ ಮುದ್ದಾದ ಮೂರು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿ ಮಮತೆಯ ಸಾಕಾರ ಮೂರ್ತಿಯಾಗಿ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದಳು. ಇಬ್ಬರು ಹೆಣ್ಣು ಮಕ್ಕಳಿಗೆ ಸರಕಾರಿ ಉದ್ಯೋಗವೂ ದೊರೆತು ಸಮಯಕ್ಕೆ ಸರಿಯಾಗಿ ಎಲ್ಲಾ ಮಕ್ಕಳ ಮದುವೆಯಾಯಿತು. ಆದರೆ ವಿಧಿಯ ಆಟ ಅವಧಿಗೆ ಮುನ್ನ ಬ್ಯಾಂಕ್’ನಲ್ಲಿ ಉದ್ಯೋಗಿಯಾಗಿದ್ದ ಮಗಳು ಕ್ಯಾನ್ಸರ್’ಗೆ ತುತ್ತಾಗಿ ಪ್ರಾಣ ಬಿಟ್ಟಳು. ಹನುಮ೦ತರಾಯರು ಹುಬ್ಬಳ್ಳಿಗೆ ವರ್ಗವಾಗಿ ಬಂದು ಪ್ಲಾಟ್ ಖರೀದಿಸಿ ನೆಲೆಸಲು ಪುಟ್ಟ ಮನೆಯೊಂದನ್ನು ಕಟ್ಟಿಸಿದರು ಎಂದು ಅಜ್ಜಿ ಹೆಮ್ಮೆಯಿಂದ ಹೇಳುತ್ತಾಳೆ.ಅನಸೂಯಾ ಅಜ್ಜಿಯ ಕಣ್ಣ ಮುಂದೆಯೇ ಮುಂದೆ ಜೀವನಸಾಥಿಯಾದ ಹನುಮಂತರಾಯರು ತೀರಿ ಹೋದಾಗ ಅಜ್ಜಿಯ ದುಃಖ ಹೇಳ ತೀರದು, ಆಕಾಶವೇ ಕಳಚಿ ಬಿದ್ದಂತಾಗಿತ್ತು. ಆದರೂ ಅಜ್ಜಿ ಸುಧಾರಿಸಿಕೊಂಡು ಜೀವನದಲ್ಲಿ ಉತ್ಸಾಹವನ್ನು ಕಳೆದುಕೊಳ್ಳದೇ ಆಶಾವಾದಿಯಾಗಿ ಮಗ, ಸೊಸೆ ಮತ್ತು ಪುಟ್ಟ ಮೊಮ್ಮಗಳೊಂದಿಗೆ ಮಗ ಕಟ್ಟಿಸಿದ ಮೊದಲನೆಯ ಮಹಡಿಯ ಮನೆಯಲ್ಲಿ ನಿಶ್ಚಿಂತೆಯಿಂದ ವಿಶ್ರಾಂತ ಜೀವನ ನಡೆಸುತ್ತಿದ್ದಾರೆ. ಅನಸೂಯಜ್ಜಿಯು ಇಂದಿಗೂ ಮನೆಗೆ ಬಂದ ಪರಿಚಿತರು ಬಂಧು ಬಳಗದವರನ್ನು ಬರಮಾಡಿಕೊಂಡು, ಸಕಲ ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಭಾಗವಹಿಸುತ್ತಾ,ಸದಾ ಹಸನ್ಮುಖಿಯಾಗಿದ್ದಾರೆ. ಅಜ್ಜಿಯ ಎದೆಗಾರಿಕೆಯನ್ನು, ಪ್ರಭುದ್ದತೆಯನ್ನು ಎಷ್ಟು ಕೊಂಡಾಡಿದರೂ ಕಡಿಮೆಯೇ.

**************
ಅನಿಯಮಿತ-ಅನಿಯಂತ್ರಿತ ಜೀವನಶೈಲಿಯ ಫಲವಾಗಿ, ಜೀವನದ ತೊಳಲಾಟದ ಶರಶಯ್ಯಯ ಮೇಲೆ ಮಲಗಿ – ನಲುಗಿ ಭೀಷ್ಮರಂತೆ ಇಚ್ಛಾ ಮೃತ್ಯುವಿನ ಭಾಗ್ಯವನ್ನು ಪಡೆಯದೇ, ವೃದ್ಧಾಪ್ಯ ಒಂದು ಶಾಪ…… ಹೇಗೋ ಬದುಕಿ ಕೊನೆಗೆ ಭಗವಂತನ ಪಾದ ಸೇರೋದು…….. ಎಂದು ಶಪಿಸುತ್ತಾ ಬದುಕುವ ಜನರೇ ಹೆಚ್ಚು. ಅಪ್ಪಯ್ಯ ಶಾಸ್ತ್ರಿಗಳು ಮತ್ತು ಅನುಸೂಯಜ್ಜಿಯ೦ಥವರ ಅಸಾಮಾನ್ಯ ಲವಲವಿಕೆ-ಚಟುವಟಿಕೆ-ಜೀವೊನತ್ಸಾಹ-ಉಲ್ಲಾಸ, ಬದುಕಿನ ಬವಣೆಯನ್ನು ನುಂಗಿ-ಮರೆತು, ಮುಪ್ಪಿಗೆ ಸವಾಲೆಸೆದು ಬದುಕನ್ನು ಅನುಭವಿಸುವ ಬಗೆ ಸಕಲರಿಗೂ ಆದರ್ಶಪ್ರಾಯವಾಗಿ ಮುಪ್ಪಿನ ಜೀವನಕ್ಕೊಂದು ಊರುಗೋಲಾಗುತ್ತದೆಂದರೆ ತಪ್ಪಾಗಲಾರದು. ಇಂತಹ ಇನ್ನೂ ಅನೇಕ ವೃದ್ಧರೊಂದಿಗಿನ ಒಡನಾಟದ ಕುರಿತು ಬರೆಯುವದು ಸಾಕಷ್ಟಿದೆ ಆದರೆ ಸದ್ಯಕ್ಕೆ ಇಷ್ಟು ಸಾಕು.

Facebook ಕಾಮೆಂಟ್ಸ್

ಲೇಖಕರ ಕುರಿತು

Srinivas N Panchmukhi

ಮೂಲತಃ ಬಾಗಲಕೋಟೆಯವರಾದ ಶ್ರೀನಿವಾಸ ಪಂಚಮುಖಿ, ಕೈಗಾದಲ್ಲಿ  ತಾಂತ್ರಿಕ ಅಧಿಕಾರಿಯಾಗಿ   ಸೇವೆ ಸಲ್ಲಿಸುತ್ತಿದ್ದಾರೆ.  ಕ್ವಿಜ್ಜಿಂಗ್, ಪಕ್ಷಿ ವೀಕ್ಷಣೆ, ರಾಜಕೀಯ ವಿಶ್ಲೇಷಣೆ ಮತ್ತು  ಬರವಣಿಗೆ ಇವರ ಹವ್ಯಾಸಗಳು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!