ಅಂಕಣ

ನಂಜನಗೂಡು ಫಲಿತಾಂಶ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರ ಗೆಲುವು.

ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ಅವರ ಪ್ರತಿಷ್ಠೆಯ ಕಣವಾಗಿದ್ದ ನಂಜನಗೂಡಿನ ಉಪಚುನಾವಣೆಯಲ್ಲಿ ಅಧಿಕೃತವಾಗಿ ಕಾಂಗ್ರೆಸ್ ನ ಬಿ.ಜೆ.ಪಿ.ಅಭ್ಯರ್ಥಿಯ ಎದುರು ಜೆ.ಡಿ.ಎಸ್.ನ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ.ಆದರೆ ನಿಜಕ್ಕೂ ಈ ಚುನಾವಣೆಯಲ್ಲಿ ಗೆದ್ದಿದ್ದು ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರು!

ಹೌದು.ಮೇಲ್ನೋಟಕ್ಕೆ ಈ ಚುನಾವಣೆ ಬಿ.ಜೆ.ಪಿ.ಮತ್ತು ಕಾಂಗ್ರೆಸ್ ಪಕ್ಷದ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದರೂ ಇಲ್ಲಿನ ಮತದಾರರಿಗೆ ಎಲ್ಲ ಉಪಚುನಾವಣೆಗಳಂತೆ ಕೇವಲ ಇದೂ ಒಂದು ಉಪ ಚುನಾವಣೆಯಾಗಿತ್ತು.ಬಹುತೇಕ ಉಪ ಚುನಾವಣೆಗಳಲ್ಲಿ ಆಡಳಿತ ಪಕ್ಷವೇ ಗೆಲುವು ಸಾಧಿಸುವುದು ಅತ್ಯಂತ ಸಾಮಾನ್ಯ.ಈಗ ಸೋತಿರುವ ಬಿ.ಜೆ.ಪಿ.ಒಂದು ವೇಳೆ ಈ ಚುನಾವಣೆಯನ್ನು ತನ್ನ ಪ್ರತಿಷ್ಠೆಯನ್ನಾಗಿ ಮಾಡಿಕೊಳ್ಳದೆ ತನ್ನದೇ ಪಕ್ಷದ ಸ್ಥಳೀಯ ನಾಯಕರೊಬ್ಬರಿಗೆ ಟಿಕೆಟ್ ನೀಡುವ ಮೂಲಕ ಚುನಾವಣೆ ಎದುರಿಸಿದ್ದರೆ ಆಗಲೂ ಸಹ ಬಹುಷಃ ಸೋಲುತ್ತಿತ್ತು.ಆದರೆ ಈ ಮಟ್ಟಿಗಿನ ಮುಖಭಂಗಕ್ಕೊಳಗಾಗುವ ಅಗತ್ಯವಿರಲಿಲ್ಲ.

ಹಳೇ ಮೈಸೂರಿನ ಭಾಗದಲ್ಲಿ ಪಕ್ಷ ಸಧೃಢವಾಗುತ್ತದೆ,ದಲಿತರ ಮತಗಳು ಮುಂದೆ ಬಿ.ಜೆ.ಪಿ.ಗೆ ಸಿಗುತ್ತದೆ,ಬಿ.ಜೆ.ಪಿ.ಗೆ ಒಬ್ಬ ದಲಿತ ನಾಯಕ ಸಿಕ್ಕಂತಾಗುತ್ತದೆ ಎನ್ನುವ ಏನೇ ವಾದಗಳಿರಲಿ. ಆದರೆ ನಾವು ಇಷ್ಟು ವರ್ಷ ವಿರೋಧಿಸಿಕೊಂಡು ಬಂದ ವ್ಯಕ್ತಿಯೊಬ್ಬನನ್ನು ನಾವೇ ಮುಂದೆ ನಿಂತು ಗೆಲ್ಲಿಸಬೇಕು,ನಾವೇ ಆತನ ಪರ ಉರಿಬಿಸಿಲಿನಲ್ಲಿ ಬೀದಿಬೀದಿಗಳಲ್ಲಿ ಓಡಾಡಿ ಪ್ರಚಾರ ಮಾಡಬೇಕು ಎಂದಾಗ ಎಂತಹಾ ಕಾರ್ಯಕರ್ತನಿಗಾದರೂ ಒಂದು ಕ್ಷಣ ಬೇಸರವಾಗಿಯೇ ಆಗುತ್ತದೆ.ಇನ್ನು ಆ ಕ್ಷೇತ್ರದಲ್ಲಿ ಅತೀ ಹೆಚ್ಚು ಮತದಾರರಿರುವ ಒಂದಿಡೀ ಸಮುದಾಯದ ವಿರುದ್ಧ ದಶಕಗಳಿಂದಲೂ ಕಿಡಿ ಕಾರುತ್ತಿದ್ದ ವ್ಯಕ್ತಿಯನ್ನು ಅದೇ ಸಮುದಾಯದ ಮತದಾರರು ಯಡಿಯೂರಪ್ಪನವರ ಮುಖ ನೋಡಿ ಗೆಲ್ಲಿಸಬೇಕೆಂದರೆ ಆ ಇಡೀ ಜನಾಂಗದವರಿಗೆ ಮುಜುಗರವಾಗದೇ ಇರುವುದಿಲ್ಲ.ಹಾಗೆಂದು ರಾಜಕೀಯದಲ್ಲಿ ಈ ರೀತಿಯ ಒಂದುಗೂಡುವಿಕೆ ಸಾಧ್ಯವೇ ಇಲ್ಲ ಎಂದೇನೂ ಅಲ್ಲ.ಆದರೆ ಪರಸ್ಪರ ಕತ್ತಿ ಮಸೆಯುತ್ತಿದ್ದ ನಾಯಕರುಗಳು ಯಾವುದೋ ಒಂದು ಪಂಚತಾರಾ ಹೋಟೆಲ್ ನಲ್ಲಿ ಪರಸ್ಪರ ಅಪ್ಪಿಕೊಂಡು ಶಾಲು ಹಾಕಿ ಕೈ ಕೈ ಹಿಡಿದು “ರಾಜಕೀಯದಲ್ಲಿ ಯಾರೂ ಮಿತ್ರರೂ ಅಲ್ಲ,ಯಾರೂ ಶತ್ರುವೂ ಅಲ್ಲ” ಎಂದು ಒಂದಾಗುವ ಹಾಗೆ ಒಂದೇ ದಿನದಲ್ಲಿ ಎಲ್ಲ ಮರೆತು ಒಂದಾಗಲು ಸ್ಥಳೀಯ ಕಾರ್ಯಕರ್ತರುಗಳಿಗೆ ಅಥವಾ ಮತದಾರರುಗಳಿಗೆ ಸಾಧ್ಯವಾಗುವುದಿಲ್ಲ.ಏಕೆಂದರೆ ಅದೇ ನಾಯಕರನ್ನು ನೆಚ್ಚಿಕೊಂಡು,ಅದೇ ಪಕ್ಷವನ್ನು ನೆಚ್ಚಿಕೊಂಡು ಸ್ಥಳೀಯ ಕಾರ್ಯಕರ್ತರುಗಳು ತಮ್ಮೂರಿನಲ್ಲೇ ತಮ್ಮ ತಮ್ಮಲ್ಲೇ ವಿರೋಧ ಕಟ್ಟಿಕೊಂಡಿರುತ್ತಾರೆ.ತಮ್ಮೂರಿನಲ್ಲೇ ತಮ್ಮ ತಮ್ಮಲ್ಲೇ ಕಿತ್ತಾಟಗಳು ನಡೆದಿರುತ್ತವೆ.ಇದೇ ರಾಜಕಾರಣಿಗಳ ಮಾತು ಕಟ್ಟಿಕೊಂಡು ಅದೆಷ್ಟೋ ಬಾರಿ ತಮ್ಮೂರಿನಲ್ಲೇ ತಮ್ಮ ತಮ್ಮಲ್ಲೇ ಹೊಡೆದಾಟ ಬಡಿದಾಟಗಳೂ ನಡೆದಿರುತ್ತವೆ.ಪರಸ್ಪರ ದೂರುಗಳನ್ನು ಕೂಡಾ ದಾಖಲಿಸಿಕೊಂಡಿರುತ್ತಾರೆ.ಹಾಗಿರುವಾಗ ಆ ನಾಯಕರು ಅದೆಲ್ಲೋ ಕುಳಿತು ನಾವುಗಳು ಒಂದಾಗಿದ್ದೇವೆ,ಇನ್ನುಮುಂದೆ ಇವರೇ ನಿಮ್ಮ ನಾಯಕ ಎಂದಕೂಡಲೇ ಕೆಲವೇ ದಿನದಲ್ಲಿ ಆತನನ್ನು ತಮ್ಮ ನಾಯಕನೆಂದು ಒಪ್ಪಿಕೊಳ್ಳುವುದು ಸ್ವಾಭಿಮಾನಿಗಳಾದ ಕಾರ್ಯಕರ್ತರುಗಳಿಗೆ ಕಷ್ಟಸಾಧ್ಯವೇ ಸರಿ.ಇದರ ಮಧ್ಯೆ ನನ್ನನ್ನೇ ಅಭ್ಯರ್ಥಿ ಎಂದುಕೊಂಡು ಇವರಿಗೆ ಮತ ನೀಡಿ,ಇವರನ್ನು ಗೆಲ್ಲಿಸಿದರೆ ನೀವು ನನ್ನನ್ನು ಗೆಲ್ಲಿಸಿದಂತೆ,ಇವರನ್ನು ಗೆಲ್ಲಿಸುವ ಮೂಲಕ ನನ್ನ ಪ್ರತಿಷ್ಠೆ ಉಳಿಸಿ ಎನ್ನುವ ಮಾತುಗಳೆಲ್ಲಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರುಗಳಿಗೆ ಹಾಸ್ಯಾಸ್ಪದವಾಗಿ ಕಾಣಿಸತೊಡಗುತ್ತವೆ.

ಅಷ್ಟಾಗಿಯೂ ಒಂದು ವೇಳೆ ನಾಯಕರ ಪ್ರತಿಷ್ಠೆ ಉಳಿಸುವ ಸಲುವಾಗಿ ತಮ್ಮ ಅವಮಾನಗಳನ್ನೆಲ್ಲಾ ನುಂಗಿಕೊಂಡು ಕಾಂಗ್ರೆಸ್ ಪಕ್ಷದ ಬಿ.ಜೆ.ಪಿ.ಯ ಅಭ್ಯರ್ಥಿಯನ್ನೇನಾದರೂ ಬಿ.ಜೆ.ಪಿ.ಕಾರ್ಯಕರ್ತರು ಶ್ರಮವಹಿಸಿ ಗೆಲ್ಲಿಸಿದ್ದರೆ ಏನಾಗುತ್ತಿತ್ತು ಎನ್ನುವ ಕಡೆ ಒಮ್ಮೆ ಗಮನ ಹರಿಸೋಣ;

ಆಗ ಕಾಂಗ್ರೆಸ್ಸಿಗರಿಗೆ ಬೇಡವಾದ ಶ್ರೀನಿವಾಸ್ ಪ್ರಸಾದ್ ಬಂದಂತೆ,ಕಾಂಗ್ರೆಸ್ಸಿಗರಿಗೆ ಬೇಡವಾದ ಎಸ್.ಎಂ.ಕೃಷ್ಣ ಅವರು ಬಂದಂತೆ ಕಾಂಗ್ರೆಸ್ಸಿಗೆ ಬೇಡವಾದ ವಿಶ್ವನಾಥ್ ಅವರೂ ಬಿ.ಜೆ.ಪಿ.ಗೆ ಬರುತ್ತಿದ್ದರು.ಕಾಂಗ್ರೆಸ್ಸಿಗೆ ಬೇಡವಾದ ಜಾಫರ್ ಷರೀಫ್ ಅವರೂ ಕೂಡಾ ಬಿ.ಜೆ.ಪಿ.ಗೆ ಬರುತ್ತಿದ್ದರು.ಕಾಂಗ್ರೆಸ್ಸಿಗೆ ಬೇಡವಾದ ಅಂಬರೀಷ್ ಅವರೂ ಸಪತ್ನೀಸಮೇತರಾಗಿ ಬಿ.ಜೆ.ಪಿ.ಗೆ ಬರುತ್ತಿದ್ದರು.ಕಾಂಗ್ರೆಸ್ಸಿಗೆ ಬೇಡವಾದ ರಮ್ಯಾ ಸ್ಪಂದನ,ಜನಾರ್ಧನ ಪೂಜಾರಿಯವರು ಕೂಡಾ ಬಹುಷಃ ಬಿ.ಜೆ.ಪಿ.ಗೆ ಬರುತ್ತಿದ್ದರು.ಹೀಗೆ ಆ ಪಕ್ಷಕ್ಕೆ ಬೇಡವಾದ ಬಹಳಷ್ಟು ನಾಯಕರು ಬಿ.ಜೆ.ಪಿ.ಗೆ ಬರುತ್ತಿದ್ದರು.

ಹಾಗೆಂದು ಬರೀ ನಾಯಕರು ಮಾತ್ರ ಬರುತ್ತಿದ್ದರೆ?ಖಂಡಿತಾ ಇಲ್ಲ.ಅವರ ಜೊತೆ ಅವರ ನಿಷ್ಠಾವಂತ ಸ್ಥಳೀಯ ನಾಯಕರುಗಳೂ,ಕಾರ್ಯಕರ್ತರುಗಳೂ ಕೂಡಾ ಬರುತ್ತಿದ್ದರು.ಆ ಸ್ಥಳೀಯ ನಾಯಕರು, ಕಾರ್ಯಕರ್ತರಾದರೂ ಯಾರು ಗೊತ್ತೇ? ಅವರೆಲ್ಲಾ ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರ ಜೊತೆ ಸ್ಥಳೀಯ ಮಟ್ಟದಲ್ಲಿ ರಾಜಕೀಯ ಕಾರಣಕ್ಕಾಗಿ ಈಗಲೂ ಬದ್ಧ ವೈರಿಗಳಂತೆ ಕಿತ್ತಾಡುದ್ದಾರೋ ಅವರೇ!

ಇದೆಲ್ಲವನ್ನೂ ಅವಲೋಕಿಸಿದಾಗ ನಂಜನಗೂಡಿನ ಉಪಚುನಾವಣೆಯ ಈ ಸೋಲು ರಾಜ್ಯದ ಬಿ.ಜೆ.ಪಿ.ಕಾರ್ಯಕರ್ತರಿಗೆ ದೊಡ್ಡ ಗೆಲುವೆಂದೇ ಪರಿಗಣಿಸಬೇಕಾಗುತ್ತದೆ.ಒಂದು ವೇಳೆ ಈ ಚುನಾವಣೆಯಲ್ಲಿ ನಂಜನಗೂಡಿನ ಮತದಾರರೇನಾದರೂ ಜಾತಿ ನೋಡಿ,ನಾಯಕರ ಮುಖ ನೋಡಿ,ಇನ್ಯಾರದ್ದೋ ಪ್ರತಿಷ್ಠೆ ಉಳಿಸಲು ಹೋಗಿ ಬಿ.ಜೆ.ಪಿ.ಯನ್ನೇನಾದರೂ ಗೆಲ್ಲಿಸಿದ್ದರೆ ಖಂಡಿತವಾಗಿಯೂ ಮುಂದಿನ ವಿಧಾನಸಭಾ ಚುನಾವಣೆಯ ಹೊತ್ತಿಗೆ ಭಾರತೀಯ ಜನತಾ ಪಕ್ಷ ಕಾಂಗ್ರೆಸ್ ಪಕ್ಷದ ಬಿ.ಟೀಮ್ ಆಗಿ ಬದಲಾಗಿರುತ್ತಿತ್ತು.ರಾಜ್ಯದ ಬಹುತೇಕ ಕ್ಷೇತ್ರಗಳಲ್ಲಿ ಬಿ.ಜೆ.ಪಿ.ಕಾರ್ಯಕರ್ತರುಗಳು ಕಾಂಗ್ರೆಸ್ ನ ಮಾಜಿ ನಾಯಕರುಗಳ,ಮಾಜಿ ಕಾರ್ಯಕರ್ತರುಗಳ ಅಡಿಯಾಳಾಗಿ ಕೆಲಸ ಮಾಡಬೇಕಿತ್ತು.ಅಂತಹಾ ಸಂಭಾವ್ಯ ಅನಾಹುತವೊಂದನ್ನು ತಡೆದು ರಾಜ್ಯದಲ್ಲಿ ಬಿ.ಜೆ.ಪಿ.ಯ ಭವಿಷ್ಯವನ್ನು ಮತ್ತು ಅದರ ತತ್ವ ಸಿದ್ಧಾಂತವನ್ನು ಉಳಿಸಿದ ಕೀರ್ತಿಗೆ ನಂಜನಗೂಡಿನ ಬಿ.ಜೆ.ಪಿ.ಕಾರ್ಯಕರ್ತರು ಹಾಗೂ ಅಲ್ಲಿನ ಮತದಾರರು ಭಾಜನರಾಗಿದ್ದಾರೆ. ಹಾಗಾಗಿ ಬಿ.ಜೆ.ಪಿ.ಯ ಈ ಸೋಲು ಬಿ.ಜೆ.ಪಿ.ಯ ನಿಷ್ಠಾವಂತ ಕಾರ್ಯಕರ್ತರುಗಳ ಗೆಲುವೆಂದೇ ಪರಿಗಣಿಸಬೇಕಾಗುತ್ತದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Praven Kumar Mavinakadu

ಮೂಲತಃ ಪರಿಸರಪ್ರೇಮಿ.ಹವ್ಯಾಸೀ ಬರಹಗಾರ.
ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸಿಕೊಳ್ಳುವ ಮಹತ್ವಾಕಾಂಕ್ಷೆಯಿಂದ ಪರಿಸರ ಸ್ನೇಹಿ ಸೋಲಾರ್ ಅಡುಗೆ ಉಪಕರಣಗಳ ತಂತ್ರಜ್ಞಾನ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದ್ದು ಮುಂದೆ ಅವುಗಳನ್ನು ದೇಶದ ಮನೆಮನೆಗೂ ಮುಟ್ಟಿಸಬೇಕೆನ್ನುವ ಕನಸಿದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!