Featured ಅಂಕಣ

ದೆಹಲಿಯ ಜನರ ಉತ್ತರಕ್ಕೆ ಸ್ವಯಂಘೋಷಿತ ಆಮ್ ಆದ್ಮಿಗಳು ತತ್ತರ!!

ಇತ್ತೀಚಿಗೆ ನಡೆದ ಪಂಜಾಬ್ ಮತ್ತು ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಗೆದ್ದೇ ಗೆಲ್ಲುತ್ತೇವೆಂದು ಅಬ್ಬರಿಸಿ ಬೊಬ್ಬಿರಿದಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲರು ಚುನಾವಣಾ ಫಲಿತಾಂಶದ ದಿನ ನಿಂತಲ್ಲಿಯೇ ಬೆವತಿದ್ದರು. ಪಂಜಾಬಿನಲ್ಲಿ ಆಮ್ ಆದ್ಮಿಗಳ ಮರ್ಯಾದೆ ಸ್ವಲ್ಪವಾದರೂ ಉಳಿದಿತ್ತಾದರೂ ಗೋವಾದಲ್ಲಿ ಒಂದೂ ಸ್ಥಾನವನ್ನು ಗಳಿಸಲಾಗದೇ ಆಮ್ ಆದ್ಮಿ ಪಕ್ಷ ಮಕಾಡೆ ಮಲಗಿತ್ತು. ಜಯಸಿಯೇ ಸಿದ್ಧ ಎನ್ನುವ ಭ್ರಮಾಲೋಕದಲ್ಲಿ ಶುಭಾಶಯ ಕೋರಲು ಮುದ್ರಿಸಿದ್ದ ಫ್ಲೆಕ್ಸ್, ಬ್ಯಾನರ್ಗಳು ಅನಾಥವಾಗಿ ಆಮ್ ಆದ್ಮಿ ಪಕ್ಷದ ಕಛೇರಿಯ ಮೂಲೆಯಲ್ಲಿ ಬಿದ್ದಿದ್ದವು! ಸೋಲಿನಿಂದ ಜರ್ಜರಿತರಾದ ಕೇಜ್ರಿವಾಲ್ ಇವಿಮ್ ಮಷೀನ್ ಮತ್ತು ಚುನಾವಣಾ ಆಯೋಗದ ಮೇಲೆ ಗೂಬೆ ಕೂರಿಸಿದರು. ಇದಾದ ಕೆಲ ದಿನಗಳಲ್ಲಿ ಗಾಯದ ಮೇಲೆ ಬರೆ ಎಳೆದಂತೆ ಪಶ್ಚಿಮ ದೆಹಲಿಯ ರಜೌರಿ ಗಾರ್ಡನ್ ವಿಧಾನಸಭಾ ಕ್ಷೇತ್ರದ  ಮರುಚುನಾವಣೆಯಲ್ಲಿ ಆಪ್ ಸೋತಿತ್ತಲ್ಲದೇ ಠೇವಣಿಯನ್ನೂ ಕಳೆದುಕೊಂಡಿತ್ತು. ಇಲ್ಲಿಗೇ ಮುಗಿಯದ ಆಪ್ ಪಕ್ಷದ ಸೋಲಿನ ಸರಮಾಲೆ ಇದೀಗ ದೆಹಲಿ ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿಯೂ ಮುಂದುವರಿದಿದೆ. ಈ ಮೂಲಕ ದೇಶಾದ್ಯಂತ ಪಕ್ಷದ ಬಲವರ್ಧನೆಗೆ ಕೈ ಹಾಕಿ ದೆಹಲಿಯ ಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದ ಕೇಜ್ರಿವಾಲ್ ಸರಕಾರಕ್ಕೆ ಜನ ತಕ್ಕ ಶಾಸ್ತಿ ಮಾಡಿದ್ದಾರೆ. ದೆಹಲಿಯಲ್ಲಿಯೇ ಪಕ್ಷದ ಬುಡ ಅಲ್ಲಾಡುವುದನ್ನು ನೋಡಿ ಆಮ್ ಆದ್ಮಿಗಳು ಪತರಗುಟ್ಟಿ ಹೋಗಿದ್ದಾರೆ.

ದೆಹಲಿಯಲ್ಲಿ ಅಧಿಕಾರಕ್ಕೆ ಬಂದ ಹೊಸದರಲ್ಲಿ ಸಾಲು ಸಾಲು ಆಶ್ವಾಸನೆಗಳನ್ನಿತ್ತಿದ್ದರು ಕೇಜ್ರಿವಾಲರು. ಇದರಲ್ಲಿ ಪ್ರಮುಖವಾದದ್ದು ಭ್ರಷ್ಟಾಚಾರ ರಹಿತ ಆಡಳಿತ, ಪ್ರತಿ ಕುಟುಂಬಕ್ಕೆ ೨೦೦೦೦ ಲೀಟರ್ ನೀರು ಕೊಡುವುದು, ೫೦ ಶೇಕಡ ಕಡಿಮೆ ದರದಲ್ಲಿ ವಿದ್ಯುತ್‌ ಕೊಡುವುದು, ಉಚಿತ ವೈಫೈ ಕೊಡುವುದು, ಸಾರ್ವಜನಿಕ ಸ್ಥಳಗಳಲ್ಲಿ ಸಿಸಿ ಟಿವಿ ಅಳವಡಿಸುವುದು ಇತ್ಯಾದಿ. ಇದರಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಬಿಲ್ ನಲ್ಲಿ ಕಡಿತದಂತಹ ಆಶ್ವಾಸನೆಯನ್ನು ಪೂರ್ತಿಯಾಗಿಯಲ್ಲದಿದ್ದರೂ ಸ್ವಲ್ಪಮಟ್ಟಿಗೆ ಜಾರಿ ಮಾಡಿದ್ದೇ ಆಪ್ ಸಾಧನೆ! ವಿವಿಐಪಿ ಸಂಸ್ಕೃತಿಗೆ ಕಡಿವಾಣ ಹಾಕುವೆ ಅಂದಿದ್ದ ಕೇಜ್ರಿವಾಲರು ಇತರ ಪಕ್ಷಗಳನ್ನು ನಾಚಿಸುವಂತೆ ಅಧಿಕಾರದ ಅಮಲಿನಲ್ಲಿ ಮೆರೆದರು. ಇನ್ನು ಮಹಾನಗರ ಪಾಲಿಕೆ ಚುನಾವಣೆಯ ಸಮಯದಲ್ಲಿ ದೆಹಲಿಯನ್ನು ಲಂಡನಿನಂತಾಗಿಸುತ್ತೇನೆ ಎಂದು ಹುಸಿ ಭರವಸೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ನಗೆಪಾಟಲಿಗೀಡಾದರು. ದೆಹಲಿಯ ಆಡಳಿತ ಸರಿಯಾಗಿ ನೋಡಿಕೊಳ್ಳುವ ಬದಲು ಭಯೋತ್ಪಾದಕರು ಮತ್ತು ಪಾಕಿಸ್ತಾನಕ್ಕೆ ಬೆಂಬಲವಾಗಿ ಹೇಳಿಕೆ ನೀಡಿವುದು, ಪ್ರಧಾನಿ ಮೋದಿಯವರ  ವೈಯಕ್ತಿಕ ವಿಚಾರ, ಅರುಣ್ ಜೇಟ್ಲಿ ಬ್ಯಾಂಕ್ ಖಾತೆ ವಿವರ, ಸರ್ಜಿಕಲ್ ಸ್ಟ್ರೈಕ್ ನ ವಿಡಿಯೊ ಸಾಕ್ಷಿ, ದೇಶವಿರೋಧಿ ಆಜಾದಿ ಗ್ಯಾಂಗಿಗೆ ಬಹಿರಂಗ ಬೆಂಬಲ, ದೆಹಲಿಯ ಜನರ ತೆರಿಗೆಯ ದುಡ್ಡಿನಲ್ಲಿ ದುಂದುವೆಚ್ಚ, ಇತರ ರಾಜ್ಯಗಳಲ್ಲಿ ಪಕ್ಷದ ಬಲವರ್ಧನೆ ಮುಂತಾದ ವಿಷಯಗಳಲ್ಲಿ ಎಲ್ಲಿಲ್ಲದ ಆಸಕ್ತಿ ಕೇಜ್ರಿವಾಲರಿಗೆ! ಕಳೆದ ವರುಷ ದೆಹಲಿಗೆ ದೆಹಲಿಯೇ ಚಿಕುನ್ ಗುನ್ಯಾದಿಂದಾಗಿ ನರಳುತ್ತಿದ್ದರೂ ಕೇಜ್ರಿವಾಲ್ ಮತ್ತವರ ತಂಡ ಕ್ಯಾರೇ ಅಂದಿರಲಿಲ್ಲ. ಪಾರದರ್ಶಕತೆ ಇಲ್ಲದಿರುವ ಆಡಳಿತ, ಮಾಧ್ಯಮಗಳ ಮುಂದೆ ಬೇಜವಾಬ್ದಾರಿಯುತ ಹೇಳಿಕೆ, ಪ್ರಚಾರ ಪ್ರಿಯತೆ, ಅಧಿಕಾರದ ಲಾಲಸೆ, ಭ್ರಷ್ಟಾಚಾರ, ವಂಚನೆ, ಫೋರ್ಜರಿ ಮತ್ತು ಸೆಕ್ಸ್ ಸ್ಕಾಂಡಲ್’ಗೆ ಸಿಕ್ಕಿ ಆಪ್ ಸರಕಾರ ಅದಾಗಲೇ ದೆಹಲಿ ಮತ್ತು ದೇಶದ ಜನರ ಮುಂದೆ ಬೆತ್ತಲಾಗಿತ್ತು. ಈ ಎಲ್ಲಾ ವಿಷಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ದೆಹಲಿಯ ಜನತೆ ಮೊದಲು ರಜೌರಿ ಗಾರ್ಡನ್ ಉಪಚುನಾವಣೆ ನಂತರ ಇದೀಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಪ್ ಪಕ್ಷಕ್ಕೆ ಜಾಡಿಸಿ ಒದ್ದಿದ್ದಾರೆ!

ಕಳೆದ ಡಿಸೆಂಬರ್ ನಲ್ಲಿ ಪ್ರಧಾನಿ ಮೋದಿಯವರ ವಿದ್ಯಾರ್ಹತೆ ಬಗ್ಗೆ ಟ್ವೀಟ್ ಮಾಡಿ ವಿವಾದ ಸೃಷ್ಟಿಸಿದ್ದ ಕೇಜ್ರಿವಾಲ್ ವಿರುದ್ಧ ಕೆಲ ದಿನಗಳ ಹಿಂದೆ ಅಸ್ಸಾಂನ ಕೋರ್ಟೊಂದು ಬಂಧನದ ವಾರಂಟ್ ಜಾರಿಮಾಡಿತ್ತು. ಹಣಕಾಸು ಸಚಿವ ಅರುಣ್ ಜೇಟ್ಲಿ ಮೇಲೆ ದೆಹಲಿ ಕ್ರಿಕೆಟ್ ಅಸೋಸಿಯೇಷನಲ್ಲಿ ಅವ್ಯವಹಾರ ಕುರಿತಂತೆ ಸಾಕ್ಷಿ ರಹಿತ ಗಂಭೀರ ಆರೋಪ ಮಾಡಿದ್ದರು. ನಂತರ ಜೇಟ್ಲಿ ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದಾಗ ತಮ್ಮ ಪರವಾಗಿ ವಾದಿಸಲು ಕೇಜ್ರಿವಾಲ್ ಖ್ಯಾತ ವಕೀಲ ರಾಮ್ ಜೇಟ್ಮಲಾನಿಯವರನ್ನು ನೇಮಿಸಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಜೇಟ್ಮಲಾನಿಯವರ ಎಲ್ಲಾ ವೆಚ್ಚಗಳನ್ನು ಭರಿಸಿದ್ದು ದೆಹಲಿ ಸರಕಾರದ ಖಜಾನೆಯಿಂದ! ತಮ್ಮ ಪ್ರಚಾರದ ತೆವಲಿಗೆ ಬಾಯಿಗೆ ಬಂದಂತೆ ಹೇಳಿಕೆ ನೀಡಿ ನಂತರ ಆ ಕುರಿತಂತೆ ತಮ್ಮ ವಿರುದ್ಧ ದಾಖಲಾಗುವ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಲು ತನ್ನನ್ನು ಆರಿಸಿದ ದೆಹಲಿ ಜನತೆಯ ತೆರಿಗೆ ಹಣವನ್ನು ಪೋಲು ಮಾಡುತ್ತಾರೆ ಕೇಜ್ರಿವಾಲ್! ದೆಹಲಿಯಲ್ಲಿ ಅನಧಿಕೃತವಾಗಿ ಗೂಡಾಚಾರಿ ತಂಡವನ್ನು ಆರಂಭಿಸಿ ಮಾಹಿತಿ ಕಲೆ ಹಾಕುತ್ತಿದ್ದ ಕೇಜ್ರಿವಾಲರ ಇನ್ನೊಂದು ಕರ್ಮಕಾಂಡವನ್ನು ರಾಷ್ಟ್ರೀಯ ಸುದ್ದಿವಾಹಿನಿಯೊಂದು ಬಹಿರಂಗಗೊಳಿಸಿತ್ತು. ಜನ ಈ ಪ್ರಕರಣ ಮರೆಯುವಷ್ಟರಲ್ಲಿ ಕೇಜ್ರಿವಾಲ್ ಸರಕಾರ ಜಾಹೀರಾತಿನ ನೆಪದಲ್ಲಿ ಪಕ್ಷದ ಪ್ರಚಾರಕ್ಕಾಗಿ ಬಳಸಿದ ೯೭ ಕೋಟಿ ರೂಪಾಯಿಯನ್ನು ಪಕ್ಷದಿಂದ ಮರು ಪಾವತಿ ಮಾಡುವಂತೆ ಆದೇಶ ಹೊರಬಿತ್ತು. ಇಷ್ಟೇ ಅಲ್ಲದೇ ದೆಹಲಿ ಸರಕಾರದ ದುಡ್ಡಿನಲ್ಲಿ ಪಂಜಾಬ್ ಮತ್ತು ಗೋವಾದಲ್ಲಿ ಪ್ರಚಾರ ಮಾಡಿದ್ದು, ದುಂದು ವೆಚ್ಚ ಮಾಡಿದ್ದು ಸಿಎಜಿ ವರದಿಯಲ್ಲಿ ಬಯಲಾಗಿತ್ತು. ಉಫ್.. ಒಂದಾ..‌ ಎರಡಾ?? ಹೇಳುತ್ತಾ ಹೋದರೆ ಕೇಜ್ರಿವಾಲರ ಎಡವಟ್ಟುಗಳು ಹನುಮಂತನ ಬಾಲದಂತೆ ಬೆಳೆಯುತ್ತಲೇ ಸಾಗುತ್ತದೆ. ದೆಹಲಿಯ ಅಭಿವೃದ್ದಿಯನ್ನು  ಮಾಡಬೇಕಾಗಿದ್ದ ಕೇಜ್ರಿವಾಲರು ತಮ್ಮ ಸ್ವಯಂ ಅಭಿವೃದ್ಧಿಯಲ್ಲೇ ನಿರತರಾದರು!

ಪಂಜಾಬ್ ಮತ್ತು ಗೋವಾದಲ್ಲಿ ಸೋಲಾದ ಮೇಲೆ ಆಮ್ ಆದ್ಮಿ ಪಕ್ಷ ಮೈ ಕೊಡವಿ ಏಳಲು ದೆಹಲಿಯ ಮಹಾನಗರ ಪಾಲಿಕೆ ಚುನಾವಣೆ ಒಳ್ಳೆಯ ಸಂದರ್ಭವಾಗಿತ್ತು. ಆದರೆ ದೆಹಲಿಯ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿ ಎಲ್ಲಾ ಮಂತ್ರಿಗಳನ್ನು, ಶಾಸಕರನ್ನು ಚುನಾವಣಾ ಪ್ರಚಾರಕ್ಕಾಗಿ ಬಳಸಿಕೊಂಡರೂ ಆಪ್ ಪಕ್ಷಕ್ಕೆ ಈ ಚುನಾವಣೆಯಲ್ಲಿ ಗೆಲ್ಲಲಾಗಲಿಲ್ಲ. ಬಿಜೆಪಿಯ ಮುಂದೆ ಹೀನಾಯವಾಗಿ ಸೋತು ಮಲಗಿದೆ ಆಮ್ ಆದ್ಮಿ ಪಕ್ಷ. ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಬಿಜೆಪಿ ಜಯಗಳಿಸಿದ್ದು ನೋಡಿದರೆ ದೆಹಲಿಯ ಜನತೆ ಅದ್ಯಾವ ಪರಿಗೆ ಕೇಜ್ರಿವಾಲ್ ಮತ್ತವರ ಪಕ್ಷದ ಮೇಲೆ ಭ್ರಮನಿರಸರಾಗಿದ್ದಾರೆ ಎನ್ನುವುದನ್ನು ಊಹಿಸಿ! ದೆಹಲಿ ಮಹಾನಗರಪಾಲಿಕೆ ಚುನಾವಣೆಯ ಫಲಿತಾಂಶ ಹೊರಬಿದ್ದಾಗ  ಸೋಲನ್ನು ಜೀರ್ಣಿಸಲಸಾಧ್ಯವಾಗಿ ಆಮ್ ಆದ್ಮಿಗಳು ಮತ್ತದೇ ರಾಗದಂತೆ  ಮತಯಂತ್ರಗಳು ದೋಷ ಪೂರಿತವಾಗಿದ್ದರಿಂದ ಪಕ್ಷಕ್ಕೆ ಸೋಲಾಯಿತು ಎನ್ನುವ ಹಾಸ್ಯಾಸ್ಪದ ಹೇಳಿಕೆ ನೀಡುತ್ತಾರೆ!  ಯಾರೋ ಒಬ್ಬ ಅವಿದ್ಯಾವಂತ ರಾಜಕಾರಣಿ ಈವಿಎಂ ಸಾಧನದ ಬದಲಿಗೆ ಹಳೆಯ ಬ್ಯಾಲೆಟ್ ಪೇಪರ್ ವಿಧಾನವೇ ಚುನಾವಣೆಗೆ ಸೂಕ್ತ ಅಂದಿದ್ದರೂ ಸಹಿಸಬಹುದಿತ್ತು. ಆದರೆ ಕೇಜ್ರಿವಾಲರಂತಹ ಐಐಟಿ ಪದವೀಧರರನ ಬಾಯಲ್ಲಿ ಈ ರೀತಿಯ ಮಾತುಗಳು ಬರುತ್ತವೆ ಅಂದರೆ ಯೋಚಿಸಿ ಈ ಮನುಷ್ಯನ ಅಧಿಕಾರ ಲಾಲಸೆ. ಒಂದಂತೂ ಸ್ಪಷ್ಟ. ಕೇಜ್ರವಾಲರಿಗೆ ಜನರ ಹಿತ ಮುಖ್ಯ ಅಲ್ಲ. ಕೇವಲ ಪಕ್ಷದ ಹಿತ ಮುಖ್ಯ. ಇದನ್ನು ದೆಹಲಿಯ ಜನತೆ ತಡವಾಗಿಯಾದರೂ ಅರ್ಥ ಮಾಡಿಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆ ದೆಹಲಿಯಲ್ಲಿ ಕೇಜ್ರಿವಾಲ್ ಮುಖ್ಯಮಂತ್ರಿಯಾಗಿದ್ದು ಇದೇ ಇವಿಎಮ್ ಯಂತ್ರಗಳಿಂದ ಅನ್ನುವುದನ್ನುವನ್ನು ಅವರೇ ಮರೆತಿದ್ದಾರೆ ಅನ್ನಿಸುತ್ತೆ.

ರಾಷ್ಟ್ರ ರಾಜಕಾರಣದಲ್ಲಿ ಸದಾ ಸುದ್ದಿಯಲ್ಲಿರುವಂತೆ ಹಪಾಹಪಿಸುವ ವ್ಯಕ್ತಿಯೆಂದರೆ ಅರವಿಂದ್ ಕೇಜ್ರಿವಾಲ್. ಇಡೀ ದೇಶದ ಗಮನ ತನ್ನತ್ತ ಸೆಳೆಯಲು ಯಾವುದೇ ಮಟ್ಟಕ್ಕೂ ಇಳಿಯಲು ತಾನು ಸಿದ್ಧ ಎನ್ನುವುದನ್ನು ಕಳೆದ ಎರಡು ಮೂರು ವರ್ಷಗಳಿಂದ ಮತ್ತೆ ಮತ್ತೆ ಸಾಬೀತು ಪಡಿಸುತ್ತಲೇ ಬರುತ್ತಿದ್ದಾರೆ ಕೇಜ್ರಿವಾಲ್. ಪ್ರಧಾನಿ ಮೋದಿಯವರ ವೈಯಕ್ತಿಕ ವಿಷಯಗಳಿಂದ ಹಿಡಿದು, ದೇಶವನ್ನು ಕಾಯುತ್ತಿರುವ ಸೈನಿಕರ ಮನೋಬಲ ಕುಗ್ಗಿಸುವ ಮಟ್ಟಿನವರೆಗೂ ಪ್ರತೀ ವಿಷಯದಲ್ಲಿಯೂ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುವ ವ್ಯಕ್ತಿಯೊಬ್ಬರಿದ್ದರೆ ಅದು ಕೇಜ್ರಿವಾಲ್ ಮಾತ್ರ. ಆದರೆ ಇತ್ತೀಚಿಗಿನ ಸರಣಿ ಸೋಲುಗಳು ಕೇಜ್ರಿವಾಲ್ ಮತ್ತವರ ತಂಡಕ್ಕೆ ಬಹಳ ದೊಡ್ಡ ಹೊಡೆತವನ್ನು ನೀಡಿದೆ. ಪಂಜಾಬ್ ಮತ್ತು ಗೋವಾ ಸೋಲಿನ ಬೆನ್ನಲ್ಲೇ ದೆಹಲಿಯಲ್ಲಿಯೂ ಪಕ್ಷದ ಬುಡ ಅಲ್ಲಾಡತೊಡಗಿದ್ದು ಸ್ವಯಂಘೋಷಿತ ಆಮ್ ಆದ್ಮಿಗಳನ್ನು ಚಿಂತಾಕ್ರಾಂತರನ್ನಾಗಿಸಿದೆ. ಇನ್ನು ಗುಜರಾತ್ ನಲ್ಲಿಯೂ ಕಮಾಲ್ ಮಾಡುವ ಕನಸಿನಲ್ಲಿದ್ದ ಆಪ್ ಪಕ್ಷಕ್ಕೆ ಬಹಳ ದೊಡ್ಡ ಹಿನ್ನಡೆ ಯಾಗಿದೆ. ದೆಹಲಿ ಜನರು ಕೊಟ್ಟಿರುವ ಉತ್ತರಕ್ಕೆ ತತ್ತರಿಸಿ ಹೋಗಿರುವ ಕೇಜ್ರಿವಾಲರು ಮತ್ತವರ ತಂಡ ಇನ್ನಾದರೂ ದೆಹಲಿ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಾರಾ ಅನ್ನುವುದೇ ಸದ್ಯದ ಕುತೂಹಲ!!

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!