Featured ಅಂಕಣ

ಭಾವತೋಟದಲ್ಲಿ ಅರಳಿ ಮೆರೆದ ಆಶಾಲತಾ  

ಬರೋಬ್ಬರಿ ಇಪ್ಪತ್ತೈದು ಸಾವಿರ ಹಾಡುಗಳು ಅಥವಾ ಇನ್ನೂ ಹೆಚ್ಚಿರಬಹುದು. ಭಕ್ತಿಗೀತೆ, ಭಾವಗೀತೆ, ಹಾಗು ಚಿತ್ರಗೀತೆಗಳು. ರಾಗ, ತಾಳ, ಶ್ರುತಿಗಳ ಸೂಕ್ತ ಮಿಶ್ರಣದಿಂದ ಹಾಗು ಕೋಗಿಲೆಯೂ ಅಸೂಯೆಪಡುವಂತಹ ಇಂಪಾದ ಸ್ವರಗಳಿಂದ ಮೂಡಿದ ಹಾಡುಗಳಿವು. ಸೈನಿಕನ ಆತ್ಮಸ್ಥೈರ್ಯವನ್ನು ಬಡಿದೆಬ್ಬಿಸುವುದರಿಂದ ಹಿಡಿದು, ನಟನೆಯ ಮೂಲಕವೂ ಸಾಧ್ಯವಾಗದ ಭಾವಗಳನ್ನು ಪ್ರೇಕ್ಷಕನ ಚಿತ್ತದಲ್ಲಿ ಸ್ಫುರಿಸುವ ಮಟ್ಟಿಗೆ ಈ ಹಾಡುಗಳು ಪ್ರಚಲಿತ. ನಮ್ಮ ಫೋನಿನಲ್ಲೂ ಇಷ್ಟೊಂದು ಹಾಡುಗಳನ್ನು ಹಿಡಿದಿಡುವ ಸಾಮರ್ಥ್ಯವಿರದಿರುವಾಗ ಅಕ್ಕತಂಗಿಯರಿಬ್ಬರ ಮಧುರ ಸ್ವರದಿಂದ ಇಷ್ಟೆಲ್ಲಾ ಹಾಡುಗಳು ಮೂಡಿಬಂದಿವೆ ಎಂದರೆ ನಾವು ನಂಬಲೇಬೇಕು. ಯೆಸ್, ಇಂದು ನಾವು ಮಾತನಾಡಲು ಹೊರಟಿರುವುದು ಭಾರತ ದೇಶ, ಅಷ್ಟೇ ಏಕೆ, ವಿಶ್ವವೇ ಕಂಡ ಮಹಾನ್ ಹಾಡುಗಾರ್ತಿಯರಲ್ಲಿಬ್ಬರು. ನಮ್ಮ ದೇಶದ ಮಟ್ಟಿಗೆ ಅಕ್ಷರ ಅರಿಯದ ಮುದುಕಪ್ಪನಿಗೂ ಇದು ಇವರದೇ ಧ್ವನಿಯೆಂದು ಗುರುತಿಸಬಲ್ಲಷ್ಟು ಮನೆಮಾತಾಗಿರುವ ಸಹೋದರಿಯರಿಬ್ಬರು. ಫಿಲಂಫೇರ್, ಪದ್ಮ ಪ್ರಶಸ್ತಿಗಳಿಂದಿಡಿದು ‘ಭಾರತ ರತ್ನ’ದವರೆಗೂ ಸುಮಾರು ನೂರಕ್ಕೂ ಹೆಚ್ಚಿನ ಬಿರುದು ಸಮ್ಮಾನಗಳನ್ನು ಗಳಿಸಿರುವವರು!

ಆಶಾ ಹಾಗೂ ಲತಾ. ಸ್ವಾತಂತ್ರ್ಯಪೂರ್ವ ಭಾರತದ ಸಿನಿಮಾ ಜಗತ್ತಿನಿಂದ ಇಂದಿನವರೆಗೂ, ಸರಿಸುಮಾರು ಎಪ್ಪತ್ತು ವರ್ಷಗಳಿಂದ ಆ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರವ ಬೆರಳೆಣಿಕೆಯ ವ್ಯಕ್ತಿಗಳಲ್ಲಿ ಇಬ್ಬರು. 1929 ಸೆಪ್ಟೆಂಬರ್ 28 ರಂದು ಜನಿಸಿದ ಲತಾ ಮಂಗೇಶ್ಕರ್, ಕುಟುಂಬದ ಐವರು ಮಕ್ಕಳಲ್ಲಿ  ಹಿರಿಯಳು. ಆಶಾ ಅಕ್ಕನಿಗಿಂತ ನಾಲ್ಕು ವರ್ಷ ಕಿರಿಯಳು. 1942 ರಲ್ಲಿ ತಂದೆ (ಹಾಡುಗಾರ ದೀನನಾಥ್ ಮಂಗೇಶ್ಕರ್) ತೀರಿಕೊಂಡಾಗ  ಸಂಸಾರದ ಪೂರಾ ಹೊಣೆ ಲತಾಳ ಎಳೆಯ ಹೆಗಲ ಮೇಲೆ ಬಂದೆರಗಿತು. ತನ್ನ ಐದನೇ ವಯಸ್ಸಿಗೆ ಹಾಡುವುದನ್ನು ಕಲಿತಿದ್ದ ಈಕೆ ಅಂದು ಆಯ್ಕೆ ಮಾಡಿಕೊಂಡಿದ್ದೂ ಸಹ ಅದೇ ಕ್ಷೇತ್ರವನ್ನೇ. ತಂದೆಯೂ ಸಹ ಹಾಡುಗಾರರಾಗಿ ಹೆಸರು ಮಾಡಿದ್ದರಿಂದ ಒಂದೆರಡು ಅವಕಾಶಗಳು ಕೂಡಲೇ ಈಕೆಗೆ ಸಿಕ್ಕವು. ಆದರೆ ಅಂದಿನ ಹಾಡುಗಳು ಈಕೆಯ ಮನಸಂತೃಪ್ತಿಗಿಂತ ಹೆಚ್ಚಾಗಿ ತಂಗಿ ತಮ್ಮಂದಿರ ಉದರ ತೃಪ್ತಿಗಾಗೇ ಆಗಿದ್ದಿತು. ಅಷ್ಟೇನೂ ಬಲಿಯದ ಕಂಠಸಿರಿಯಿಂದ ಸಂಗೀತ ನಿರ್ದೇಶಕರು ಸಂತೃಪ್ತರಾಗುತ್ತಿರಲಿಲ್ಲ. ಪರಿಣಾಮ ಅವಕಾಶಗಳು ಕ್ಷೀಣಿಸತೊಡಗಿದವು. ದಾರಿ ಕಾಣದೆ ಲತಾ ಆಶಾ ಜೊತೆಯಾಗಿ ನಟನೆಗೆ ಇಳಿಯುತ್ತಾಳೆ. ಆದರೆ ಯಶಸ್ಸೆಂಬುದು ಇಲ್ಲಿಯೂ ಮರೀಚಿಕೆಯಾಗುತ್ತದೆ.

ಆದರೆ ಸಂಗೀತ ಲತಾಳನ್ನು ಅಷ್ಟು ಸುಲಭವಾಗಿ ಕೈ ಬಿಟ್ಟಿರಲಿಲ್ಲ. ಅದು ಆಕೆಯನ್ನು ಹಿಂದುಸ್ಥಾನಿ ಸಂಗೀತದ ಆಳ ಅಗಲವನ್ನು ಕಲಿಯಲು ಪ್ರೇರೇಪಿಸಿಸುತ್ತದೆ. ಅಂದು ದೈನ್ಯಭಾವದಿಂದ ಅವಿರತವಾಗಿ ಸಂಗೀತಾಭ್ಯಾಸವನ್ನು ಆರಂಭಿಸಿದ ಲತಾಳಿಗೆ ಸಂಗೀತ ನಿರ್ದೇಶಕ ಗುಲಾಮ್ ಹೈದೆರ್ ಅವರ ಮಾರ್ಗದರ್ಶನದಲ್ಲಿ (1948) ‘ಮಜಬೂರ್’ ಚಿತ್ರದಲ್ಲಿ ಮೂಡಿಬಂದ ಹಾಡುಗಳು ಯಶಸ್ಸಿನ ಮೈಲುಗಲ್ಲಾದವು. ಕೂತವ ಕೂತಲ್ಲೇ ಕಲ್ಲಾಗಿಬಿಡುವ ಮಟ್ಟಿಗಿನ ಮಧುರ ವಾಣಿಗೆ ಮನಸೋತು ಸಂಗೀತ ನಿರ್ದೇಶಕರು ಈಕೆಯ ಮನೆಯ ಮುಂದೆ ಸಾಲುಗಟ್ಟಿ ನಿಲ್ಲತೊಡಗಿದರು. ಅಂತೂ ಸಂಸಾರವನ್ನು ಪೋಷಿಸುವ ನೆಪದಲ್ಲಿ ಇತಿಹಾಸವೇ ಹೆಮ್ಮೆ ಪಡುವ ಹಾಡುಗಾರ್ತಿಯಾಗಿ ಲತಾ ಬೆಳೆಯತೊಡಗಿದಳು.

ಒಮ್ಮೆ ಪ್ರಧಾನಿ ನೆಹರು ಅವರೇ ಕೇಳಿ ಅತ್ತುಬಿಟ್ಟಿದ್ದ ‘ಏ ಮೇರೇ ವತನ್ ಕೆ ಲೋಗೋ’ ಹಾಡಿನ ಮೂಲಕ (1962 ರ ಇಂಡೋ ಚೈನಾ ಸಮರದ ಸಮಯದಲ್ಲಿ ) ದೇಶ ಕಾಯುವ ಸೈನಿಕರ ಕೆಚ್ಚೆದೆಯ ವ್ಯಕ್ತಿತ್ವವನ್ನು ಇಂಪಾಗಿ ಹಾಡಿ ತಿಳಿಸಿದ್ದರಿಂದ ಹಿಡಿದು, A R ರೆಹ್ಮಾನ್ ಅವರ ನವ ಮಾದರಿಯ ವಂದೇ ಮಾತರಂವರೆಗೂ ಲತಾ ಜನಸಾಗರದಲ್ಲಿ ಆಪ್ತಳಾದಳು. ದೇಶದ ‘ನೈಟಿಂಗೇಲ್’ ಎಂಬ ಬಿರುದು ಆಕೆಗೆ ಸುಮ್ಮನೆ ಬರಲಿಲ್ಲ. ಸುಮಾರು 35 ಭಾಷೆಗಳಲ್ಲಿ ಹನ್ನೆರೆಡು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವ ಇವರಿಗೆ ಕೇಂದ್ರ ಸರ್ಕಾರ 2001 ರಲ್ಲಿ ‘ಭಾರತ ರತ್ನ’ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಇತ್ತ ಕಡೆ ಆಶಾ ಅಕ್ಕ ನಡೆದ ಹಾದಿಯಲ್ಲೇ ತನ್ನ ಕೆರಿಯರ್’ನ್ನು ರೂಪಿಸಿಕೊಳ್ಳುತ್ತಾಳೆ. ಆದರೆ ಈಕೆ ಅಕ್ಕನ ಹಾಗೆ ಕೇವಲ ಭಾವ ಹಾಗು ಭಕ್ತಿ ಪ್ರಧಾನ ಹಾಡುಗಳಿಗೆ ಸೀಮಿತವಾಗಿರದೆ ರಾಕ್, ಡಿಸ್ಕೋ, ಪಾಪ್, ಗಝಲ್ಸ್ ಹಾಗು ಇನ್ನು ಹಲವು ಪ್ರಕಾರಗಳಲ್ಲಿ ತೊಡಗಿಸಿಕೊಂಡು ವರ್ಸಟೈಲ್ ಹಾಡುಗಾರ್ತಿ ಎಂಬ ಬಿರುದನ್ನು ಪಡೆಯತೊಡಗಿದಳು. ರೋಮ್ಯಾಂಟಿಕ್ ಹಾಡುಗಳೆಂದರೆ ಅದು ನೃತ್ಯಗಾರ್ತಿಯ ಮೂಲಕ, ಆಕೆಯ ಕನಿಷ್ಠ ಬಟ್ಟೆಗಳ ಸಿಂಗಾರದಲ್ಲಿ ಮಾತ್ರ ಸಾಧ್ಯವೆಂಬುದು ಒಂದೆಡೆಯಾದರೆ, ಐಟಂ ಸಾಂಗ್’ಗಳೆಂದು ಕರೆಯುವ ಹಾಡುಗಳಿಗೇ ಸವಾಲೆಸೆಯುವ ಮಟ್ಟಿನ ಮಾಟದ ಕಂಠದಿಂದ, ನಾಯಕಿಯ ಯಾವುದೇ ಬಿಂಕ ಬಿಗುಮಾನಗಳ ಅವಶ್ಯಕತೆಯಿರದೆ, ಕೇಳುಗ ತನ್ನ ಕಲ್ಪನಾಶಕ್ತಿಗೇ ಸವಾಲೆಸೆಯುವಂತೆ ಮಾಡುತ್ತಿದ್ದದ್ದು ಆಶಾಳ ಕಲೆ. ‘ಧಮ್ ಮಾರೋ ಧಮ್’, ‘ಜಬ್ ಛಾಯೆ ಮೇರಾ ಜಾದು’ವಿನಿಂದ ಹಿಡಿದು ‘ರಾಧಾ ಕೈಸೇ ನ ಜಲೇ’ ಎಂಬ ರಾಧೆಯ ಹುಸಿ ಮುನಿಸ್ಸನ್ನು ಕೇಳುಗ ತನ್ನಲ್ಲೇ ಪ್ರಶ್ನಿಸಿಕೊಳ್ಳುವವರೆಗೂ ಆಶಾ ಸಂಗೀತಪ್ರಿಯರ ಮನಗೆದ್ದಳು.

ಈಕೆಯ ಈ ಪರಿಯ ವರ್ಸಟ್ಯಾಲಿಟಿ ಗಾಯನಕ್ಕೆ ತಕ್ಕ ಪುಷ್ಟಿಯನ್ನು ನೀಡಿದವರು ಸಂಗೀತ ನಿರ್ದೇಶಕ ಆರ್ ಡಿ ಬರ್ಮನ್ (ಪಂಚಮ್ ದಾ). ಎಪ್ಪತ್ತು, ಎಂಬತ್ತರ ದಶಕಗಳಲ್ಲಿ ತನ್ನ ಯಶಸ್ಸಿನ ಉತ್ತುಂಗದಲ್ಲಿದ್ದ ಆರ್ ಡಿ ಬರ್ಮನ್’ರವರ ಸಂಗೀತಕ್ಕೆ ಜೀವವಾಗಿ ಈಕೆಯ ಧ್ವನಿ ಹೊಂದತೊಡಗಿತ್ತು. ಜೋಡಿ ನೋಡುಗರಿಗೆ ಒಂದು ಹೊಸ ಸಂಗೀತ ಲೋಕವನ್ನೇ ಸೃಷ್ಟಿಸಿ ಕೊಟ್ಟಿತ್ತು. ಸರಿ ಸುಮಾರು 28 ವರ್ಷಗಳ ಕಾಲ ಸಂಗೀತ ಪ್ರಿಯರನ್ನು ರಂಜಿಸಿದ್ದಲ್ಲದೆ 1980ರಲ್ಲಿ ಇಬ್ಬರು ವಿವಾಹ ಬಂಧನಕ್ಕೂ ಒಳಗಾಗುತ್ತಾರೆ. ಹೀಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಭಾಷೆಗಳಲ್ಲಿ ಹದಿಮೂರು ಸಾವಿರಕ್ಕೂ ಹೆಚ್ಚಿನ ಹಾಡುಗಳನ್ನು ಹಾಡಿರುವ ಆಶಾ ಅತಿ ಹೆಚ್ಚು ಸ್ಟುಡಿಯೋ ರೆಕಾರ್ಡಿಂಗ್ಸ್ ಮಾಡಿರುವ ವ್ಯಕ್ತಿಯಾಗಿ ಗಿನ್ನೆಸ್ ದಾಖಲೆಯನ್ನೂ ತನ್ನದಾಗಿಸಿಕೊಂಡಿದ್ದಾಳೆ. ಅಲ್ಲದೆ ಗ್ರಾಮಿ ಅವಾರ್ಡ್’ಗೆ ಹೆಸರಿಸಲ್ಪಟ್ಟ ಭಾರತದ ಮೊದಲ ‘ಹಾಡುಗಾರ್ತಿ’ ಎಂಬ ಹೆಗ್ಗಳಿಕೆಯೂ ಆಶಾ ಬೋಸ್ಲೆಯದು.

 

ಅಕ್ಕನ ಹಾದಿಯಲ್ಲೇ ನಡೆದು ಬಂದ ಆಶಾ ಆಕೆಯನ್ನು ಸ್ಪೂರ್ತಿಯ ಸೆಲೆಯಾಗಿಸಿಕೊಂಡಳೆ ವಿನಹ ಎಂದಿಗೂ ಆಕೆಯ ಹೆಗ್ಗಳಿಕೆಯನ್ನು ಬಳಸಿ ಮೇಲೇರಲಿಲ್ಲ. ಲತಾ ನಿರಾಕರಿಸಿದ ಹಾಡುಗಳು ಮಾತ್ರ ಆಶಾಳ ಪಾಲಾಗುತ್ತಿದ್ದವು ಎಂಬ ಅಪವಾದ ಹಿಂದಿನಿಂದಲೂ ಇದ್ದಿತು. ಆದರೆ ವಾಸ್ತವದಲ್ಲಿ ಆಶಾ ಲತಾಳಾಗಿ ಅಥವಾ ಲತಾ ಆಶಾಳಾಗಿ ಹಾಡಲು ಸಾಧ್ಯವೇ ಇಲ್ಲವೆಂಬುದು ಸಾರ್ವತ್ರಿಕ ಸತ್ಯವಾಗಿದ್ದಿತು. ಇಬ್ಬರೂ ತಮ್ಮದೇ ಆದ ವಿಶಿಷ್ಟ ಲಯವನ್ನು ಕಂಡುಕೊಂಡಿದ್ದರು. ಗಂಡುಬೀರಿ ಅಥವಾ ಸಿಡುಕಿನ ವ್ಯಕ್ತಿತ್ವದ ನಾಯಕಿಯ ಪಾತ್ರಗಳಿಗೆ ಜೀವತುಂಬುವ ಕಲೆ ಆಶಾಳ ಹೆಗ್ಗಳಿಕೆಯಾಗಿದ್ದರೆ, ಪ್ರೀತಿಯ ಬೇಗೆಯಲ್ಲಿ ಬೇಯುತ್ತಿರುವ ಹೃದಯದ ಚಡಪಡಿಕೆಯನ್ನು ಲತಾಳ ಕಂಠದಿಂದ ಕೇಳುವುದೇ ಮನಸ್ಸಿಗೆ ಒಂದು ಬಗೆಯ ಮುದ. ಒಂದು ಕೋನದಲ್ಲಿ ನಿಜಜೀವನದಲ್ಲೂ ಇಬ್ಬರದು ಅದೇ ಬಗೆಯ ವ್ಯಕ್ತಿತ್ವವಾಗಿದ್ದಿತು. ಆಶಾ ತನ್ನ ಹದಿನಾರನೆ ವಯಸ್ಸಿಗೇ, ಮನೆಯವರ ವಿರೋಧದ ನಡುವೆಯೇ ತನಗಿಂತ ಎರಡರಷ್ಟು ವಯಸ್ಸಿನ ಗಣಪತ್ ರಾವ್ ಬೋಸ್ಲೆಯವರನ್ನು ಹಠಮಾಡಿ ಮದುವೆಯಾಗಿ ತೋರಿಸಿದ ಧೈರ್ಯ ಮುಂದೆ ತನ್ನ 46ನೇ ವಯಸ್ಸಿನಲ್ಲಿ ತನಗಿಂತಲೂ ಕಿರಿಯರಾಗಿದ್ದ ಆರ್ ಡಿ ಬರ್ಮನ್ ಅವರನ್ನು ವರಿಸುವವರೆಗೂ ತೋರುತ್ತಿತ್ತು.

ತನ್ನ ಖಾಸಗಿ ಜೀವನವನ್ನು ತೆರೆದ ಪುಸ್ತಕದಂತೆ ಮಾಡಿಕೊಳ್ಳದ ಲತಾ ಮಾತ್ರ ಜೀವನದುದ್ದಕ್ಕೂ ಯಾರ ಕೈಯ್ಯನ್ನು ಹಿಡಿಯಲಿಲ್ಲ. ಗಾಢವಾದ ಪ್ರೇಮವೊಂದು ಇದಕ್ಕೆ ಕಾರಣವಾದರೂ ಅದಕೊಂದು ನಿಜ ರೂಪ ಇನ್ನೂ ಸಿಕ್ಕಿಲ್ಲ. ಈ ಒಂದು ಕಾರಣಕ್ಕೆ ಏನೋ ಲತಾಳ ಮಧುರ ಕಂಠದಲ್ಲಿ ಆ ಪರಿಯ ನೋವಿನ ಭಾವ ತುಂಬಿ ತುಳುಕುತ್ತಿರುವುದು. ಒಟ್ಟು ಮೂರು ಜನ ಕಿರಿಯ ಸಹೋದರಿಯರು ಹಾಗು ಒಬ್ಬ ತಮ್ಮನನ್ನೂ ಸಂಗೀತ ಲೋಕದ ದಿಗ್ಗಜರನ್ನಾಗಿ ಮಾಡಲು ಪ್ರೇರಣೆಯಾದದ್ದು ಮಾತ್ರ ಲತಾಳ ಹಿರಿಮೆ.

ಇಂದು ಒಮ್ಮೆ ಕೇಳಿ ಮರೆತುಹೋಗುವ ನೂರಾರು ಹಾಡುಗಳ ಮದ್ಯೆ ಆ ಕಾಲದ ಇಂತವರ ಹಾಡುಗಳು ಇನ್ನೂ ನಮ್ಮ ಹೃದಯದ ಆಳದಲ್ಲಿ ಎಲ್ಲೋ ಒಂದೆಡೆ ಮನೆಮಾಡಿಕೊಂಡಿವೆ ಎಂದರೆ ಅದು ಸಂಗೀತ, ಸಾಹಿತ್ಯ ಹಾಗು ಹಾಡುಗಾರರು, ಎಲ್ಲರಿಗು ಸಮಾನವಾದ ಮಾನ್ಯತೆಯನ್ನು ನೀಡುತ್ತಿದ್ದ ಸಂಗೀತ ನಿರ್ದೇಶಕರು ಹಾಗು ಸಂಗೀತದ ಪರಿಪೂರ್ಣ ಜ್ಞಾನವನ್ನು ಸಂಪಾದಿಸಿದ ಇಂತಹ ಹಲವಾರು ಸವಿಮಧುರ ಕಂಠಗಳೇ ಕಾರಣ. ಇಂದಿನ ತಾಂತ್ರಿಕ ಯುಗದಲ್ಲಿ ಸಾಹಿತ್ಯ ಹಾಗು ಹಾಡುಗಾರರನ್ನು (ಅರ್ಹರಾದ ಹಾಡುಗಾರರು) ಊಟಕ್ಕೆ ಇಡುವ ಉಪ್ಪಿನಕಾಯಿಯಂತೆ ಬೇಕೂ ಬೇಡವಾಗಿಸಿರುವ ಬಹಳಷ್ಟು ಸಂಗೀತ ನಿರ್ದೇಶಕರು ಕೇವಲ ಸಂಗೀತಕಷ್ಟೇ ಮಣೆ ಹಾಕುತ್ತಾರೆ. ಅದೂ ಸಹ ಕಂಪ್ಯೂಟರ್’ಗಳ ಮುಖೇನ ಮೂಡುವ ಯಾಂತ್ರಿಕ ಸ್ವರಗಳು. ಅದಾಗಲೇ ಸಾಹಿತ್ಯದ ವರ್ಚಸ್ಸನೇ ಬಹುವಾಗಿ ಹೊಸಕಿಹಾಕಿರುವ ಇಂದಿನ ಸಿನಿಪ್ರಪಂಚ ಹೀಗೆ ಮುಂದುವರೆದರೆ ನಾಳಿನ ದಿನಗಳಲ್ಲಿ ಹಾಡುಗಾರರ ಧ್ವನಿಯನ್ನೂ ಯಂತ್ರಗಳ ಮುಖಾಂತರವೇ ಮೂಡಿಸಿ, ಹಾಡುಗಾರರೆಂಬ ಪದವೇ ಮಾಯಾವಾಗಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಕಿವಿಗೆ ಇಂಪಾದ ಒಂದೇ ಕಾರಣಕ್ಕೆ ಇಂದು ಅಂತಹ ಹಾಡುಗಳೇ ಸೂಪರ್ ಹಿಟ್ ಹಾಡುಗಳೆನ್ನುವುದಾದರೆ ರಾಗ, ತಾಳ, ಶ್ರುತಿಗಳೊಟ್ಟಿಗೆ ಗಮಕಗಳ ಹದವಾದ ಮಿಶ್ರಣದೊಂದಿಗೆ ಸಂಗೀತವೆಂಬ ಅನಂತವನ್ನು ಸೃಷ್ಟಿಸುತ್ತಿದ್ದ ಹಾಡುಗಳ ಕತೆಯೇನು? ಗಿಟಾರ್, ಡ್ರಮ್ಸ್’ಗಳ ಮೂಲಕ ಮೂಡುವ ಸದ್ದಿಗೆ ರ್ಯಾಪ್ ಮಾಡುವ ಶೈಲಿಯನ್ನೇ ಸಂಗೀತವೆಂದು ಅರಿಯುತ್ತಿರುವ ಹೆಚ್ಚಿನ ಯುವ ಜನತೆಗೆ ತಬಲಾ, ಕೊಳಲು ಹಾಗು ತಂಬೂರದಿಂದ ಮೂಡುವ ಸ್ವರಗಳಿಗೂ ಗುನುಗುವುದನ್ನು ಹೇಳಿಕೊಡುವವರ್ಯಾರು? ಅಂದು ಕೇವಲ ಮೈಕೊಂದನ್ನು ಕೈಗೆ ಕೊಟ್ಟು ಕುಳಿತರೆ ಕೇಳುಗ ಒಂದು ಹೊಸ ಲೋಕದಲ್ಲೇ ಮುಳುಗಿ ಹೋಗುವಂತೆ ಮಾಡುತ್ತಿದ್ದ ಲತಾ ಹಾಗು ಆಶಾರಂತಹ ನೈಜ ಹಾಡುಗಾರ್ತಿಯರು ಹಾಗು ಆ ಸ್ಥರದ ಸಂಗೀತ ನಿರ್ದೇಶಕರು ಮುಂದೆಯೂ ಬರುವರೇ ಎಂಬುದೇ ಪ್ರಸ್ತುತ ಪ್ರಶ್ನೆ. ಇಂದಿನ ತಾಂತ್ರಿಕ ಸಂಗೀತ ಜಗತ್ತು ಮತ್ತು ಅದರ ಉದ್ದೇಶವನ್ನು ನೋಡಿದರೆ ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಕಷ್ಟವೇನಲ್ಲ!

‘ತೆರೆ ಬಿನ ಜಿಯಾ ಜಯೇ ನ’ ಎಂಬ ಸಾಹಿತ್ಯ ಹಾಗು ಅದಕ್ಕೆ ಪೂರಕವಾದ ಮಹಾದಾದ್ಭುತ ಕಂಠಸಿರಿಯ ಮುಖೇನ ಮನಸ್ಸಿನ ಭಾವಗಳೆ ಹೊರಬಂದು ಮಾತಿಗಿಳಿಯುವಂತೆ ಮಾಡುತಿದ್ದ ಆ ಹಾಡುಗಳೆಲ್ಲಿ?, ‘ಚಾರ್ ಬಾಟೆಲ್ ವೋಡ್ಕಾ, ಕಾಮ್ ಮೇರಾ ರೋಜ್ಕ’ ಎಂಬ ಹೆಂಡಗುಡುಕರ ಹೊಸಲೋಕವನ್ನು ಸೃಷ್ಟಿಸುವ ಗಲಭೆಗಳೆಲ್ಲಿ?

Facebook ಕಾಮೆಂಟ್ಸ್

ಲೇಖಕರ ಕುರಿತು

Sujith Kumar

ಹವ್ಯಾಸಿ ಬರಹಗಾರ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!