Featured ಪ್ರಚಲಿತ

ಜಾಲತಾಣಗಳಿಗೆ ಮೂಗುದಾರ: ಕರ್ನಾಟಕದಲ್ಲಿ ಬರಲಿದೆಯೇ ಅಘೋಷಿತ ಎಮರ್ಜೆನ್ಸಿ?

ಆ ಘಟನೆ ಇನ್ನೂ ಹಸಿರಾಗಿದೆ. ಫೇಸ್ಬುಕ್ನಲ್ಲಿ ನಿಲುಮೆ ಎಂಬ ಗ್ರೂಪ್ನಲ್ಲಿ ವಿವೇಕಾನಂದರ ಕುರಿತ ಒಂದು ಲೇಖನದ ಲಿಂಕ್ಅನ್ನು ಯಾರೋ ಹಂಚಿಕೊಂಡಿದ್ದರು. ವಿವೇಕಾನಂದರು ರೋಗಿಷ್ಠರಾಗಿದ್ದರು, ಮೂವತ್ತೊಂದು ಕಾಯಿಲೆಗಳಿಂದ ನರಳುತ್ತಿದ್ದರು, ತಿಂಡಿಪೋತರಾಗಿದ್ದರು, ಮಾಂಸದಡುಗೆ ಮಾಡುತ್ತಿದ್ದರು, ಶಿಕ್ಷಕನಾಗಲು ನಾಲಾಯಕ್ ಎನ್ನಿಸಿಕೊಂಡು ಕೆಲಸ ಕಳೆದುಕೊಂಡಿದ್ದರು ಎನ್ನುತ್ತ ವಿವೇಕಾನಂದರ ಮೇಲೆ ಆರೋಪಗಳ ಸಹಸ್ರನಾಮಾರ್ಚನೆ ಮಾಡಿದ್ದ ಆ ಲೇಖನವನ್ನು ನೋಡಿ ಉರಿದುಕೊಂಡ ಇನ್ಯಾರೋ ಒಬ್ಬರು ತನ್ನ ಕೋಪ ಹೊರಹಾಕುತ್ತ ಅಲ್ಲೊಂದು ಕಾಮೆಂಟ್ ಬರೆದಿದ್ದರು. ಅಷ್ಟೇ ಸಾಕಾಯಿತು, ಲೇಖನದ ಮೂಲಲೇಖಕನಿಗೆ ಪೊಲೀಸ್ ಸ್ಟೇಷನ್ ಹತ್ತಲು. ವಿಧಾನಸೌಧ ಪೊಲೀಸ್ ಸ್ಟೇಷನ್ನಲ್ಲಿ ಒಬ್ಬರಲ್ಲ ಇಬ್ಬರಲ್ಲ ಆರು ಮಂದಿಯ ಮೇಲೆ ಎಫ್ಐಆರ್ ದಾಖಲಾಯಿತು. ಇಂಥಾದ್ದೇ ಒಂದು ಅವಕಾಶಕ್ಕಾಗಿ ಕಾಯುತ್ತ ಕೂತಿದ್ದ ಬಕಪಕ್ಷಿಗಳಂತೆ ಪೊಲೀಸರು ತಂಡಗಳನ್ನು ಮಾಡಿಕೊಂಡು ದಶದಿಕ್ಕುಗಳಲ್ಲೂ ಹರಡಿ ಹೋಗಿ ಆರೋಪಿಗಳ ತಲಾಶ್ ಮಾಡತೊಡಗಿದರು. ಜಾಲತಾಣದಲ್ಲಿ ಒಂದು ದೊಡ್ಡ ಆಂದೋಲನವೇ ಪ್ರಾರಂಭಗೊಂಡಿತು. ಐ ಯಾಮ್ ವಿದ್ ನಿಲುಮೆ ಎಂಬ ಹೆಸರಲ್ಲಿ ಹ್ಯಾಷ್ ಟ್ಯಾಗ್ ಟ್ರೆಂಡ್ ಆಯಿತು. ಒಂದು ತಿಂಗಳ ಕಾಲ ಈ ಘಟನೆ ರಾಜ್ಯಾದ್ಯಂತ ಯುವಸಮೂಹದಲ್ಲಿ ದೊಡ್ಡ ಸಂಚಲನ ಎಬ್ಬಿಸಿತು.

ಎಲ್ಲವೂ ಆಯಿತು; ಆದರೆ ಇದರಿಂದ ಪ್ರಕರಣ ದಾಖಲಿಸಿದವರು ಸಾಧಿಸಿದ್ದಾದರೂ ಏನು ಎಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿಯಿತು. ಹೀಗೆ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಅಮಾಯಕ ವ್ಯಕ್ತಿಗಳ ಮೇಲೆ ಕೇಸ್ ಹಾಕಿದ್ದರಿಂದ ಸೋಷಿಯಲ್ ಮೀಡಿಯಾವನ್ನು ತಣ್ಣಗಾಗಿಸಲು ಅವರಿಗೆ ಸಾಧ್ಯವಾಯಿತೆ? ಸತ್ಯವನ್ನು ಮುಚ್ಚಿಡಲು ಸಾಧ್ಯವಾಯಿತೆ? ತನಗಾಗದ ಒಂದಷ್ಟು ಜನರನ್ನು ಒಂದೆರಡು ವಾರಗಳ ಕಾಲ ಅಟ್ಟಾಡಿಸಿದೆನೆಂಬ ಸ್ಯಾಡಿಸ್ಟ್ ಸಂತೋಷ ಬಿಟ್ಟರೆ ಅವರಿಗೆ ಸಿಕ್ಕಿದ್ದೇನು? ಈ ಪ್ರಶ್ನೆಗಳು ಇಂದು ಹಿಂದಿಗಿಂತ ಹೆಚ್ಚು ಪ್ರಸ್ತುತವಾಗಿವೆ. ಸೋಷಿಯಲ್ ಮೀಡಿಯಾ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಳ್ಳುವವರ ಬಗ್ಗೆ ಸ್ವಯಂಪ್ರೇರಣೆಯಿಂದ ಕೇಸು ದಾಖಲಿಸಿಕೊಂಡು ಶಿಸ್ತುಕ್ರಮ ಕೈಗೊಳ್ಳುತ್ತೇವೆ ಎಂದು ಕರ್ನಾಟಕ ರಾಜ್ಯ ಪೊಲೀಸರು ಇತ್ತೀಚೆಗೆ (ಫೆಬ್ರವರಿ 13ನೇ ತಾರೀಖಿನ ಪತ್ರಿಕಾ ವರದಿಗಳನ್ನು ನೋಡಿ) ಹೇಳಿಕೆ ಕೊಟ್ಟಿರುವುದರಿಂದ ಆ ಬಗ್ಗೆ ಒಂದು ವಿಸ್ತೃತ ಚರ್ಚೆಯನ್ನು ನಾವು ಹುಟ್ಟುಹಾಕಬೇಕಾದ ಅನಿವಾರ್ಯತೆ ಬಂದಿದೆ.

ಐಟಿ ಆಕ್ಟ್ ಜಾರಿಯಾದದ್ದು ಯಾವಾಗ?

ಭಾರತದಲ್ಲಿ ಐಟಿ ಕ್ರಾಂತಿ ಶುರುವಾಗಿದ್ದು ನಮ್ಮಲ್ಲೂ 1990ರ ದಶಕದಲ್ಲಿ ಇನ್ಫೋಸಿಸ್, ವಿಪ್ರೋ, ಟಿಸಿಎಸ್’ನಂತಹ ಮಾಹಿತಿ ತಂತ್ರಜ್ಞಾನಾಧಾರಿತ ಕಂಪೆನಿಗಳು ಕಣ್ಣುಬಿಟ್ಟ ಮೇಲೆ. ಅವಕಾಶಗಳ ಮಹಾದ್ವಾರ ತೆಗೆದ ಈ ಕ್ರಾಂತಿಯಿಂದಾಗಿ ಸಾವಿರಾರು ಯುವಕರು ಇಂಜಿನಿಯರಿಂಗ್ ಪದವಿ ಮುಗಿಸಿ ಕಂಪ್ಯೂಟರ್ ಆಧಾರಿತ ಉದ್ಯೋಗಗಳಿಗೆ ಸೇರುವಂತಾಯಿತು. 90ರ ದಶಕದ ಕೊನೆಯಲ್ಲಿ ಬಂದ ಅಟಲ್ ಬಿಹಾರಿ ವಾಜಪೇಯಿಯವರ ಎನ್.ಡಿ.ಎ ಸರಕಾರ ಕೂಡ ಈ ಕ್ರಾಂತಿಗೆ ಪೂರಕವಾಗಿಯೇ ಇತ್ತು. ಆದರೆ ಯಾವುದೇ ಬದಲಾವಣೆ ಒಳ್ಳೆಯದೆಷ್ಟೋ ಅಷ್ಟೇ ಕೆಟ್ಟದ್ದನ್ನೂ ತರುವ ಸಾಧ್ಯತೆ ಇದ್ದೇ ಇದೆ. ಮಾಹಿತಿ ತಂತ್ರಜ್ಞಾನದ ಕ್ರಾಂತಿ ತನ್ನೊಂದಿಗೆ ಒಂದಷ್ಟು ಹೊಸಬಗೆಯ ಅಪರಾಧಗಳನ್ನೂ ಭಾರತದ ನೆಲಕ್ಕೆ ತಂದಿತು. ಕಂಪ್ಯೂಟರ್ ಪಾಸ್ವರ್ಡ್ ಹ್ಯಾಕಿಂಗ್, ಬ್ಯಾಂಕಿನ ಆನ್ಲೈನ್ ಖಾತೆ ಹ್ಯಾಕಿಂಗ್, ಫಿಶಿಂಗ್, ಕಂಪ್ಯೂಟರ್ ವೈರಸ್, ಮಲ್ವೇರ್, ಸ್ಪೈವೇರ್, ಕೀಲಾಗ್ಗರ್, ಹೈಜಾಕ್ವೇರ್, ರೂಟ್ಕಿಟ್, ವರ್ಮ್, ಟ್ರೋಜನ್ ಹಾರ್ಸ್, ಸ್ಪೂಫಿಂಗ್, ಫ್ರೀಕಿಂಗ್ ಎಂಬ ಕಂಡುಕೇಳರಿಯದ ಹೆಸರುಗಳೆಲ್ಲ ನಿಧಾನವಾಗಿ ಚಲಾವಣೆಗೆ ಬರತೊಡಗಿದವು. ಕಂಪ್ಯೂಟರ್ನಲ್ಲಿ ವ್ಯವಹರಿಸುವುದು ತಿಳಿದಿದ್ದರೆ ಸಾಕು, ಹೊಸ ಬಗೆಯಲ್ಲಿ ಕಳ್ಳತನ ಮಾಡಬಹುದೆಂಬ ಸತ್ಯ ಜನಸಾಮಾನ್ಯರಿಗೆ ಗೊತ್ತಾಗುವಷ್ಟರಲ್ಲಿ ಅದೆಷ್ಟೋ ಬುದ್ಧಿವಂತರು ಅಮಾಯಕರ ತಿಜೋರಿಗಳನ್ನು ಬೇಟೆಯಾಡಿಯಾಗಿತ್ತು. ಹೀಗೆ ಹೆಚ್ಚತೊಡಗಿದ ಹೊಸ ಬಗೆಯ ಅಪರಾಧಗಳಿಗೆ ಸೈಬರ್ ಕ್ರೈಂ ಎಂಬ ಹೆಸರು ಬಂತು. ಅದನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಕೇಂದ್ರ ಸರಕಾರ ಗಂಭೀರವಾಗಿ ಯೋಚಿಸಿ 2000ನೇ ಇಸವಿಯಲ್ಲಿ ಮಾಹಿತಿ ತಂತ್ರಜ್ಞಾನ ಕಾಯ್ದೆಯನ್ನು ಜಾರಿಗೊಳಿಸುವ ಚಿಂತನೆ ನಡೆಸಿತು. ಆಗಿನ ಮಾಹಿತಿ ತಂತ್ರಜ್ಞಾನ ಸಚಿವ ಪ್ರಮೋದ್ ಮಹಾಜನ್ ನೇತೃತ್ವದಲ್ಲಿ ರಚನೆಯಾದ ಪರಿಣಿತರ ತಂಡ ಕಾಯ್ದೆಯನ್ನು ಸಿದ್ಧಪಡಿಸಿದ್ದೇ ತಡ, ಲೋಕಸಭೆಯಲ್ಲಿ ಆಂಗೀಕಾರವಾಗಿ ಅದೇ ವರ್ಷದ ಮೇ 9ರಂದು ರಾಷ್ಟ್ರಪತಿಗಳ ಅಂಕಿತವೂ ಬಿದ್ದಾಯಿತು. ಮೂಲ ಕಾಯ್ದೆಯಲ್ಲಿ 94 ವಿಭಾಗಗಳು, 13 ಅಧ್ಯಾಯಗಳು, 4 ಪರಿಶಿಷ್ಟಗಳಿದ್ದವು.

ಮಾಹಿತಿ ತಂತ್ರಜ್ಞಾನ ಕಾಯ್ದೆ 2000 (ಸಂಕ್ಷಿಪ್ತವಾಗಿ ಮುಂದೆ ಐಟಿ ಕಾಯ್ದೆ ಎನ್ನೋಣ) ಎಷ್ಟು ಪರಿಣಾಮಕಾರಿ, ಅದನ್ನು ಯಾವ್ಯಾವ ಅಪರಾಧಗಳಿಗೆ ಬಳಸಬಹುದು ಎಂಬ ತಿಳಿವಳಿಕೆ ಮೊದಮೊದಲ ವರ್ಷಗಳಲ್ಲಿ ಜನರಿಗಿರಲಿಲ್ಲ. ಅದರ ಬಿಗಿ ಅನುಭವಕ್ಕೆ ಬಂದದ್ದೇ 2010ರ ಸೆಪ್ಟೆಂಬರ್’ನಲ್ಲಿ, ಕಾರ್ಟೂನ್ ಬಿಡಿಸಿದನೆಂಬ ಕಾರಣಕ್ಕೆ ಅಸೀಮ್ ತ್ರಿವೇದಿಯೆಂಬ ಪತ್ರಕರ್ತ/ಕಾರ್ಟೂನಿಸ್ಟ್ ಜೈಲು ಪಾಲಾದಾಗ. ಆತನ ವಿರುದ್ಧ ಐಟಿ ಕಾಯ್ದೆಯಲ್ಲಿರುವ 66ಎ ಎಂಬ ಸೆಕ್ಷನ್ನಲ್ಲಿ ಕೇಸು ದಾಖಲಿಸಲಾಯಿತು. ಪ್ರಕರಣದಲ್ಲಿ ಆತ ತಪ್ಪಿತಸ್ಥನೆಂದು ಸಾಬೀತಾದರೆ 1 ಲಕ್ಷ ರುಪಾಯಿ ದಂಡ ಕಟ್ಟಿ, ಮೂರು ವರ್ಷ ಜೈಲುವಾಸ ಮಾಡಬೇಕಾದ ಪರಿಸ್ಥಿತಿ! 2012ರ ಏಪ್ರಿಲ್’ನಲ್ಲಿ ಜಾಧವಪುರ ವಿವಿಯ ಪ್ರೊಫೆಸರ್ ಒಬ್ಬರನ್ನು, ಆತ ಮಮತಾ ಬ್ಯಾನರ್ಜಿಯ ಒಂದು ಕಾರ್ಟೂನ್ಅನ್ನು ಈಮೇಲ್ನಲ್ಲಿ ತನ್ನ ಗೆಳೆಯರೊಂದಿಗೆ ಹಂಚಿಕೊಂಡರು ಎಂಬ ಕ್ಷುಲ್ಲಕ ಕಾರಣಕ್ಕೆ ಮತ್ತೆ ಸೆಕ್ಷನ್ 66ಎ ಮತ್ತು ಬಿ ಅಡಿ ಬಂಧಿಸಿ ಜೈಲಿಗೆ ಹಾಕಲಾಯಿತು. ಅದೇ ವರ್ಷದ ಅಕ್ಟೋಬರ್’ನಲ್ಲಿ ಪಾಂಡಿಚೇರಿಯಲ್ಲಿ ಒಬ್ಬ ವರ್ತಕ, ಕಾರ್ತಿ ಚಿದಂಬರಂನ ಭ್ರಷ್ಟಾಚಾರದ ವ್ಯವಹಾರಗಳನ್ನು ಟ್ವಿಟ್ಟರ್’ನಲ್ಲಿ ಪ್ರಶ್ನಿಸಿದ ಎಂಬ ಒಂದೇ ಕಾರಣಕ್ಕೆ ಆತನ ವಿರುದ್ಧ 66ಎ ಎಂಬ ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲಾಯಿತು. ಶಿವಸೇನೆ ಮುಖ್ಯಸ್ಥ ಬಾಳಾ ಠಾಕ್ರೆ ತೀರಿಕೊಂಡಾಗ, ಇಡೀ ಮುಂಬೈ ನಗರವನ್ನು ಈ ಸಾವಿನ ನೆಪದಲ್ಲಿ ಬಂದ್ ಮಾಡುವುದು ಸರಿಯೇ ಎಂದು ಫೇಸ್ಬುಕ್ನಲ್ಲಿ ಪ್ರಶ್ನಿಸಿದ ಓರ್ವ 20 ವರ್ಷದ ಯುವತಿಯನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ತಮಾಷೆಯೆಂದರೆ, ಆ ಪೋಸ್ಟ್’ನ್ನು ಲೈಕ್ ಮಾಡಿದ ಮತ್ತೊಬ್ಬಾಕೆ ಕೂಡ ಪೊಲೀಸರ ಅತಿಥಿಯಾದಳು. ಒಟ್ಟಲ್ಲಿ ರಾಜಕೀಯದಲ್ಲಿ ಪ್ರಭಾವಶಾಲಿಗಳಾದ ವ್ಯಕ್ತಿಗಳು ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಗ್ಗುಬಡಿಯಲು ಈ ಐಟಿ ಆಕ್ಟ್’ನ್ನು ಬಳಸಿಕೊಳ್ಳುತ್ತಿದ್ದಾರೆಂಬುದು ನಿಚ್ಚಳವಾಯಿತು.

ಐಟಿ ಆಕ್ಟ್’ನಲ್ಲಿರುವ ಕೆಲವು ಅಂಶಗಳ ವಿರೋಧಾಭಾಸಗಳನ್ನು ಮೊತ್ತ ಮೊದಲ ಬಾರಿಗೆ ಪ್ರಶ್ನಿಸಿದ್ದು ಅಮಿತಾಬ್ ಠಾಕೂರ್ ಎಂಬ ಐಪಿಎಸ್ ಅಧಿಕಾರಿ; ಅಲಹಾಬಾದ್ ಕೋರ್ಟ್ನ ಲಕ್ನೋ ವಿಭಾಗೀಯ ಪೀಠದಲ್ಲಿ ಪೆಟಿಶನ್ ಹಾಕುವ ಮೂಲಕ. ಅದಾಗಿ ಕೆಲವು ದಿನಗಳಾಗುತ್ತಲೇ ದೆಹಲಿಯಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದ ಶ್ರೇಯಾ ಸಿಂಘಲ್ ಎಂಬ ಯುವತಿ ಐಟಿ ಕಾಯ್ದೆಯ ಪೈಶಾಚಿಕ ಸೆಕ್ಷನ್ಗಳನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದರು. ಐಟಿ ಕಾಯ್ದೆಯ 66ಎ ಬಹಳ ಅಸ್ಪಷ್ಟವಾಗಿದ್ದು ದುರುಪಯೋಗಕ್ಕೆ ಅವಕಾಶ ನೀಡುವಂತಿದೆ. ಅಲ್ಲದೆ, ಅದು ಭಾರತದ ಸಂವಿಧಾನ ದೇಶದ ಪ್ರತಿಯೊಬ್ಬ ನಾಗರಿಕನಿಗೆ ದಯಪಾಲಿಸುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಪೂರ್ಣ ವಿರುದ್ಧವಾಗಿದೆ. ಸಂವಿಧಾನದ ಆರ್ಟಿಕಲ್ 14, 19(1)(ಎ) ಮತ್ತು 21 – ಇವಕ್ಕೆ ಐಟಿ ಕಾಯ್ದೆ ವಿರುದ್ಧವಾಗಿದೆ ಎಂದು ಶ್ರೇಯಾ ವಾದಿಸಿದರು. ಶ್ರೇಯಾ, ಮೌತ್ಶಟ್.ಕಾಮ್ ವೆಬ್ಪತ್ರಿಕೆಯ ಫೈಸಲ್ ಫಾರುಖಿ ಮತ್ತು ಕಾಮನ್ ಕಾಸ್ ಎಂಬ ಎನ್.ಜಿ.ಓ ನಡೆಸುತ್ತಿರುವ ಪ್ರಶಾಂತ್ ಭೂಷಣ್ – ಈ ಮೂವರ ಅರ್ಜಿಗಳನ್ನು ವಿಚಾರಣೆಗೆತ್ತಿಕೊಂಡ ಸರ್ವೋಚ್ಛ ನ್ಯಾಯಾಲಯ 2014ರಲ್ಲಿ ಕೇಂದ್ರ ಸರಕಾರವನ್ನು ಪ್ರಶ್ನಿಸಿತು. ಐಟಿ ಕಾಯ್ದೆಯಲ್ಲಿ ಹಲವಾರು ಅಸ್ಪಷ್ಟತೆ, ಗೊಂದಲಗಳಿರುವುದರಿಂದ ಅದರಲ್ಲಿರುವ ಕೆಲವು ಸೆಕ್ಷನ್’ಗಳನ್ನು ತೆಗೆಯಬೇಕಾಗುತ್ತದೆಂದು ಹೇಳಿ, 2015ರ ಮಾರ್ಚ್ 24ರಂದು 66ಎ’ಯನ್ನು ಅನೂರ್ಜಿತಗೊಳಿಸಿತು. ಆ ಸೆಕ್ಷನ್ ಸಂಪೂರ್ಣವಾಗಿ ಅಸಾಂವಿಧಾನಿಕ ಎಂಬುದೇ ಕೋರ್ಟ್ ಎತ್ತಿ ಹಿಡಿದ ಅಂಶ.

ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿಯಲ್ಲಿ ಎನ್ನುತ್ತಿದೆ!

ಐಟಿ ಕಾಯ್ದೆಯ ಸೆಕ್ಷನ್ 66ಎ ಪೂರ್ಣವಾಗಿ ಅಸಾಂವಿಧಾನಿಕ ಎಂಬ ಅಂಶವನ್ನು ಎತ್ತಿಹಿಡಿದು ಸರ್ವೋಚ್ಛ ನ್ಯಾಯಾಲಯ ಅತಿ ಮಹತ್ವದ ತೀರ್ಪನ್ನೇನೋ ಕೊಟ್ಟಿದೆ. ಆದರೆ ಅದರ ಇನ್ನಿತರ ಪೈಶಾಚಿಕ ಸೆಕ್ಷನ್ಗಳು ಹಾಗೆಯೇ ಉಳಿದುಕೊಂಡಿವೆ. ಉದಾಹರಣೆಗೆ, ಸೆಕ್ಷನ್ 66ಸಿ – ಇದು “ಇನ್ನೊಬ್ಬರ ಪಾಸ್ವರ್ಡ್ ಕಳ್ಳತನ”ಕ್ಕೆ ಸಂಬಂಧಿಸಿದ್ದು. ಆದರೆ ಈ ಇಂದ್ರನ ಗದೆಯನ್ನು ಯಾರು ಯಾರ ಮೇಲೆ ಬೇಕಾದರೂ ಹಿಂದೆಮುಂದೆ ಯೋಚಿಸದೆ ಪ್ರಯೋಗಿಸಿಬಿಡಬಹುದು. ಉದಾಹರಣೆಗೆ ಅಮರ್ ಎಂಬಾತ, ಭರತ್ ತನ್ನ ಈಮೇಲ್ ಅಥವಾ ಫೇಸ್ಬುಕ್ ಅಥವಾ ಮತ್ಯಾವುದೋ ಎಲೆಕ್ಟ್ರಾನಿಕ್ ಮಾಧ್ಯಮದ ಪಾಸ್ವರ್ಡ್ ಕಳುವು ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರಾಮಾಗಿರಬಹುದು! ಅದು ಜಾಮೀನುರಹಿತ ಪ್ರಕರಣವಾದ್ದರಿಂದ ಜೈಲು ಶಿಕ್ಷೆ ತಪ್ಪಿಸಿಕೊಳ್ಳುವ ಮತ್ತು ತನ್ನ ನಿರಪರಾಧಿತ್ವವನ್ನು ಸಾಬೀತುಪಡಿಸುವ ಎಲ್ಲ ತಲೆನೋವೂ ಭರತ್’ಗೆ ವರ್ಗಾವಣೆಯಾಗುತ್ತವೆ! ಹಾಗೆಯೇ ಸೆಕ್ಷನ್ 66ಡಿ, ಕಂಪ್ಯೂಟರ್ ಬಳಸಿ ಮೋಸ ಮಾಡಿದ್ದಕ್ಕೆ ಸಂಬಂಧಿಸಿದ ಸೆಕ್ಷನ್. ಉದಾಹರಣೆಗೆ, ದೀಪಕ್ ಎಂಬಾತನಿಂದ ಈಶ್ವರ್ ಎಂಬವನು ಇ-ವರ್ಗಾವಣೆಯ ಮೂಲಕ ದುಡ್ಡು ಪಡೆದು ನಂತರ ನಗದಿನ ರೂಪದಲ್ಲಿ ಮರಳಿಸಿದರೂ ಕೂಡಾ ದೀಪಕ್ ತಾನು ಕೊಟ್ಟ ಸಾಲ ವಾಪಸು ಬಂದಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶವಿದೆ. ಇದು ಕೂಡ ಜಾಮೀನುರಹಿತ ಪ್ರಕರಣವಾದ್ದರಿಂದ, ತನ್ನ ಅಮಾಯಕತ್ವವನ್ನು ಸಾಬೀತುಪಡಿಸಲು ಈಶ್ವರ್’ಗೆ ಅವಕಾಶವನ್ನೇ ಕೊಡದೆ ಪೊಲೀಸ್ ವ್ಯವಸ್ಥೆ ತನ್ನ ಕೆಲಸ ಮಾಡಬಹುದು. ಒಟ್ಟಲ್ಲಿ ಅಧಿಕಾರ ಮತ್ತು ದುಡ್ಡು ಇದ್ದರೆ ಐಟಿ ಕಾಯ್ದೆಯ ಹಲವು ಸೆಕ್ಷನ್ಗಳ ಮೂಲಕ ವೈರಿಗಳನ್ನು ಮತ್ತು ಸೈದ್ಧಾಂತಿಕವಾಗಿ ಭಿನ್ನರಾದವರನ್ನು ಅತ್ಯಂತ ವ್ಯವಸ್ಥಿತವಾಗಿ ಹಣಿಯಬಹುದು.

ಐಟಿ ಕಾಯ್ದೆಯಲ್ಲಿರುವ ಕೆಲವು ಅಪಸವ್ಯಗಳು ಇವು:

(1) ಪತ್ರಕರ್ತರಿಗೆ, ಲೇಖಕರಿಗೆ ತಮ್ಮ ಅಭಿಪ್ರಾಯವನ್ನು ಪತ್ರಿಕೆ/ಟಿವಿ ಮೂಲಕ ಹಂಚಿಕೊಳ್ಳುವುದಕ್ಕೆ ಅವಕಾಶವಿದೆ. ಪತ್ರಿಕೆಗಳಲ್ಲಿ ಅಂಕಣ, ಲೇಖನ, ಕಾರ್ಟೂನ್ ಇತ್ಯಾದಿ ವೇದಿಕೆಗಳ ಮೂಲಕ ಪತ್ರಕರ್ತರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ದಾಖಲಿಸಬಹುದು. ಅದು ಸಂವಿಧಾನವೇ ಅವರಿಗೆ ಕೊಟ್ಟಿರುವ ಸ್ವಾತಂತ್ರ್ಯ. ಆದರೆ, ತಾವು ಪತ್ರಿಕೆಯಲ್ಲಿ ಬರೆದ ಲೇಖನವನ್ನು ಅಥವಾ ಅದರ ಒಂದು ತುಣುಕನ್ನು ಅದೇ ಲೇಖಕರು ತಮ್ಮ ಜಾಲತಾಣದ ಅಕೌಂಟ್ ಮೂಲಕ ಹಂಚಿಕೊಂಡರೆ ಐಟಿ ಕಾಯ್ದೆಯಲ್ಲಿ ಶಿಕ್ಷೆಗೊಳಪಡಬಹುದು! ಪತ್ರಿಕೆಯಲ್ಲಿ ಅವರಿಗೆ ಸಿಗುವ ಸ್ವಾತಂತ್ರ್ಯ, ಅದೇ ಅಭಿಪ್ರಾಯವನ್ನು ಜಾಲತಾಣದಲ್ಲಿ ಬರೆದುಕೊಳ್ಳುವಾಗ ಮೊಟಕಾಗುತ್ತದೆ. ಇದು ಸಂವಿಧಾನಕ್ಕೇ ಮಾಡುವ ಅಣಕ ಅಲ್ಲವೆ?

(2) ಸಾಮಾಜಿಕ ಜಾಲತಾಣಗಳಲ್ಲಿ ಜನರು ನೇರವಾಗಿ ಒಬ್ಬ ವ್ಯಕ್ತಿ/ಸಂಸ್ಥೆಯನ್ನು ಸೂಚಿಸಿದರೆ ಐಟಿ ಕಾಯ್ದೆಯಡಿ ಶಿಕ್ಷೆಗೊಳಪಡಬಹುದು. ಆದರೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹೆಸರು ತಿರುಚಿದರೆ ಅವರನ್ನು ಪೊಲೀಸರು ಮುಟ್ಟಲಾರರು! ಉದಾಹರಣೆಗೆ, ನನ್ನದೇ ಒಂದು ಪ್ರಕರಣವಿದೆ. ಹಿಂದೆ, ಸರಕಾರದ ಉನ್ನತ ಅಧಿಕಾರಿಯೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬ ನನ್ನ ಹೆಸರನ್ನು ತಿರುಚಿ ರೋತಾ ಎಂದು ಬರೆದಿದ್ದ. ಆತ ಬರೆದ ಪೋಸ್ಟ್ ನನಗೇ ಸಂಬಂಧಿಸಿದ್ದೆಂದು ಖಚಿತವಿದ್ದರೂ ನನ್ನ ಹೆಸರು ನೇರವಾಗಿ ಪ್ರಸ್ತಾಪವಾಗದಿರುವ ಕಾರಣ ಐಟಿ ಕಾಯ್ದೆಯಡಿಯಲ್ಲಿ ನಾನು ನ್ಯಾಯಕ್ಕಾಗಿ ಬೇಡಿಕೆ ಸಲ್ಲಿಸಲಾಗಲಿಲ್ಲ. ಅಂದರೆ ಐಟಿ ಕಾಯ್ದೆ ಅಮಾಯಕರ ಬಲಿ ಪಡೆಯುವುದು ಮಾತ್ರವಲ್ಲ, ಹೆಸರು ತಿರುಚಿ ಬರೆಯುವ ಬುದ್ಧಿವಂತ ಹೇಡಿಗಳ ರಕ್ಷಣೆಯನ್ನೂ ಮಾಡುತ್ತದೆ ಎಂದಾಯಿತು.

(3) ನ್ಯಾಯಜಗತ್ತಿನಲ್ಲಿ ಲೈಬಲ್ ಮತ್ತು ಸ್ಲ್ಯಾಂಡರ್ ಎಂಬ ಎರಡು ಪಾರಿಭಾಷಿಕ ಪದಗಳನ್ನು ಬಳಸುತ್ತಾರೆ. ಶಾಶ್ವತವಾಗಿ ದಾಖಲೆಯಲ್ಲಿ ಉಳಿಯುವುದು (ಪತ್ರಿಕೆ, ಪುಸ್ತಕ ಇತ್ಯಾದಿ) ಲೈಬಲ್ ಆದರೆ, ತಾತ್ಕಾಲಿಕ ಅಸ್ತಿತ್ವವಿರುವುದು (ಭಾಷಣದಲ್ಲಿ ಹೇಳಿದ ಮಾತು, ಮಾತುಕತೆಯ ನಡುವೆ ಬಂದುಹೋದ ಸಾಲುಗಳು ಇತ್ಯಾದಿ) ಸ್ಲ್ಯಾಂಡರ್ ಎನಿಸಿಕೊಳ್ಳುತ್ತದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಪೋಸ್ಟ್ಗಳು ಏಕಕಾಲಕ್ಕೆ ಲೈಬಲ್ ಮತ್ತು ಸ್ಲ್ಯಾಂಡರ್ ಆಗಬಲ್ಲವು. ಏಕೆಂದರೆ ಇಲ್ಲಿ ಪೋಸ್ಟ್ ಬರೆದವನು ಅದನ್ನು ಅಳಿಸಿಬಿಟ್ಟರೆ ಆ ಪೋಸ್ಟ್ ಮುಂದೆಂದೂ ದಾಖಲೆಯಾಗಿ ಪರಿಗಣಿಸಲ್ಪಡುವುದಿಲ್ಲ. ಪೋಸ್ಟ್’ನ್ನು ಅಳಿಸಿದ ಮೇಲೆ ಅದನ್ನು ಬೇರೆಯವರು ಯಾರೂ ಶೇರ್ ಮಾಡಿಕೊಳ್ಳಲು ಕೂಡ ಸಾಧ್ಯವಿಲ್ಲ. ಪೋಸ್ಟ್’ನ ಸ್ಕ್ರೀನ್’ಶಾಟ್ ತೆಗೆದು ಯಾರ್ಯಾರೋ ಹಂಚಿಕೊಂಡರೆ ಅದಕ್ಕೆಲ್ಲ ಮೂಲ ಲೇಖಕ ಜವಾಬ್ದಾರನಾಗುವುದಿಲ್ಲ. ಅಗತ್ಯ ಬಿದ್ದರೆ ಆತನೇ, ತನ್ನ ಪೋಸ್ಟ್ ಅಳಿಸಲ್ಪಟ್ಟ ಮೇಲೂ ಸ್ಕ್ರೀನ್’ಶಾಟ್ ರೂಪದಲ್ಲಿ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಹರಿದಾಡುತ್ತಿದೆ; ಇದು ಸರಿಯಲ್ಲ ಎಂದು ಹಾಗೆ ಹಂಚಿಕೊಳ್ಳುತ್ತಿರುವವರ ಮೇಲೆ ಪ್ರಕರಣ ದಾಖಲಿಸಬಹುದು. ಇಂಥ ವಿರೋಧಾಭಾಸಕ್ಕೆ ಐಟಿ ಕಾಯ್ದೆಯಲ್ಲಿ ಉತ್ತರವಿದೆಯೇ? ಸದ್ಯಕ್ಕೆ ಇಲ್ಲ.

(4) ಐಟಿ ಕಾಯ್ದೆಯನ್ನು ತಂದದ್ದೇ ದೇಶದೊಳಗಿನ ಸೈಬರ್ ಅಪರಾಧಗಳನ್ನು ತಡೆಯುವ ನಿಟ್ಟಿನಲ್ಲಿ. ಆದರೆ ಕಾಯ್ದೆಯಲ್ಲಿ ಸೈಬರ್ ಅಪರಾಧ (ಸೈಬರ್ ಕ್ರೈಂ) ಎಂದರೇನು ಎಂದು ನಿರ್ದಿಷ್ಟಪಡಿಸಲಾಗಿಲ್ಲ. ನಿಘಂಟಿನ ಪ್ರಕಾರ ಸೈಬರ್ ಎಂದರೆ “ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ್ದು” ಎಂಬುದು ಸ್ಥೂಲಾರ್ಥ. ಇಂದು ಎಲ್ಲ ಪತ್ರಿಕೆ/ಟಿವಿಗಳೂ ಅಂತರ್ಜಾಲ ಆವೃತ್ತಿ ಹೊಂದಿವೆ. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವುದು ಸೈಬರ್’ಗೆ ಸಂಬಂಧಿಸಿದ್ದಾದರೆ ಅಂತರ್ಜಾಲ ಆವೃತ್ತಿ ಇರುವ ಎಲ್ಲ ಪತ್ರಿಕೆ/ಟಿವಿ/ರೇಡಿಯೋಗಳೂ ಸೈಬರ್ ವ್ಯಾಪ್ತಿಗೆ; ತನ್ಮೂಲಕ ಸೈಬರ್ ಕ್ರೈಂ ಮತ್ತು ಐಟಿ ಕಾಯ್ದೆಯ ವ್ಯಾಪ್ತಿಗೆ ಬಂದೇ ಬರುತ್ತವೆ. ಆದರೆ ಐಟಿ ಕಾಯ್ದೆ ಸದ್ಯಕ್ಕೆ ಜಾಲತಾಣಗಳಲ್ಲಿ ಬರೆದುಕೊಳ್ಳುವವರನ್ನಷ್ಟೇ ಶಿಸ್ತುಕ್ರಮಕ್ಕೆ ಗುರಿಯಾಗಿಸುವ ಆಸಕ್ತಿ ತೋರುತ್ತಿದೆ.

ಈ ಕಾಯ್ದೆ ಕಠಿಣಗೊಂಡರೆ ಕಷ್ಟ ಯಾರಿಗೆ?

2000ದಲ್ಲಿ ಜಾರಿಗೊಂಡ ಐಟಿ ಕಾಯ್ದೆಯನ್ನು 2008ರಲ್ಲಿ ತಿದ್ದುಪಡಿ ಮಾಡಲಾಯಿತು. ಆದರೆ ಅದರ ಮುಖ್ಯ ಭಾಗಗಳಲ್ಲಿ ಹೆಚ್ಚಿನ ಬದಲಾವಣೆಯೇನೂ ಆಗಿಲ್ಲ. ಕಾಯ್ದೆಯ ಹೆಚ್ಚಿನ ಭಾಗವನ್ನೆಲ್ಲ 1860ನೇ ಇಸವಿಯ ಇಂಡಿಯನ್ ಪೀನಲ್ ಕೋಡ್ ಮೇಲೆ ಆಧರಿಸಿ ಬರೆಯಲಾಗಿದೆ. ಅಂದರೆ ಕಂಪ್ಯೂಟರ್ ಎಂದರೆ ಏನೆಂದೇ ಗೊತ್ತಿಲ್ಲದ ಕಾಲದಲ್ಲಿ ಬರೆದ ಶಿಕ್ಷೆಯ ವಿವರಗಳನ್ನಿಟ್ಟುಕೊಂಡು ಐಟಿ ಕಾಯ್ದೆಯನ್ನು ಬರೆಯಲಾಗಿದೆ ಎಂಬುದನ್ನು ಗಮನಿಸಬೇಕು. ಈ ಕಾಯ್ದೆಯಲ್ಲಿ ಶಿಕ್ಷೆಗೊಳಪಡುವವರ ಮನೋಧರ್ಮವನ್ನು ಗಣನೆಗೇ ತೆಗೆದುಕೊಂಡಿಲ್ಲ ಎಂಬುದಕ್ಕೆ ಹೆಚ್ಚಿನವೆಲ್ಲ ಕ್ರಿಮಿನಲ್ ಅಪರಾಧಗಳ ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವುದೇ ಸಾಕ್ಷಿ. ಅಂದರೆ ಮನೆಗೆ ಕನ್ನ ಹಾಕಿ ದುಡ್ಡು-ಬಂಗಾರ ದೋಚುವ ಸಾಂಪ್ರದಾಯಿಕ ಕಳ್ಳನಿಗೂ ಸಮಾಜದಲ್ಲಿ ಸ್ಥಾನಮಾನ ಅನುಭವಿಸುತ್ತ ಸೈಬರ್ ಕಳ್ಳತನದಲ್ಲಿ ತೊಡಗುವ ವ್ಯಕ್ತಿಗೂ ಐಟಿ ಕಾಯ್ದೆ ಹೆಚ್ಚಿನ ವ್ಯತ್ಯಾಸವನ್ನೇನೂ ಕಾಣುವುದಿಲ್ಲ ಎಂದು ಅರ್ಥ. ಮಾಹಿತಿಕನ್ನ (ಹ್ಯಾಕಿಂಗ್) ಹಾಕುವ ಆಧುನಿಕ ಕಳ್ಳರ, ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ-ಸಂವಾದ ಮಾಡುವ ಗೌರವಾನ್ವಿತ ವ್ಯಕ್ತಿಗಳ ವಿಚಾರಣೆ ಬೇರೆ ರೀತಿಯಲ್ಲಿ ನಡೆಯಬೇಕು; ಅವರನ್ನು ಬೇರೆ ರೀತಿಯಲ್ಲಿ ನೋಡಿಕೊಳ್ಳಬೇಕೆಂಬ ಸೂಕ್ಷ್ಮತೆಯನ್ನು ಈ ಕಾಯ್ದೆಯಲ್ಲಿ ಕಾಣಲಾರೆವು.

ಸದ್ಯಕ್ಕಂತೂ ಐಟಿ ಕಾಯ್ದೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಲು ರಾಜ್ಯ ಸರಕಾರ ಹೊರಟಿರುವುದು ಸ್ಪಷ್ಟ. ಇಂದು ಪೊಲೀಸ್ ಇಲಾಖೆಯ ಮೇಲೆ ರಾಜ್ಯ ಸರಕಾರದ ಕೆಲವು ಪ್ರಭಾವಿಗಳ ಒತ್ತಡ ಯಾವ ಮಟ್ಟದಲ್ಲಿದೆಯೆಂದರೆ, ನಿಜವಾಗಿಯೂ ಗಂಭೀರ ಪ್ರಕರಣಗಳಾದ ಮಾಹಿತಿಕನ್ನ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಬಳಸಿ ಬೇರೆಯವರ ಖಾತೆಯ ದುಡ್ಡು ಎಗರಿಸುವುದು, ಅಂತರ್ಜಾಲ ಬಳಸಿ ಹೈಟೆಕ್ ವೇಶ್ಯಾವಾಟಿಕೆ, ಐಸಿಸ್ನಂತಹ ಭಯೋತ್ಪಾದಕ ಸಂಘಟನೆಗಳು ಜಾಲತಾಣಗಳ ಮೂಲಕ ಜನರನ್ನು ತಮ್ಮ ಬಳಗಕ್ಕೆ ಸೇರಿಸಿಕೊಳ್ಳುತ್ತಿರುವುದು, ಬಿಟ್ ಕಾಯಿನ್ ಧಂದೆಗಳು, ಅಂತರ್ಜಾಲ ಬಳಸಿ ಮಕ್ಕಳ ಲೈಂಗಿಕ ಶೋಷಣೆ – ಇತ್ಯಾದಿಯನ್ನು ಕೈಬಿಟ್ಟು ಪೊಲೀಸರು ಜಾಲತಾಣದಲ್ಲಿ ಯಾರೋ ಇಬ್ಬರು ಸೈದ್ಧಾಂತಿಕವಾಗಿ ಮಾಡಿಕೊಂಡ ಜಗಳಕ್ಕೆ ತಮ್ಮ ಸಮಯ-ಬುದ್ಧಿವಂತಿಕೆ ವಿನಿಯೋಗಿಸುವಂತಾಗಿದೆ. ಸೈಬರ್ ಕ್ರೈಂ ಎಂಬ ಹೆಸರಲ್ಲಿ ದಾಖಲಾಗುತ್ತಿರುವ ಅರ್ಧಕ್ಕರ್ಧ ಪ್ರಕರಣಗಳೆಲ್ಲ ಜಾಲತಾಣದಲ್ಲಿ ನಡೆಯುವ ಒಂದಿಲ್ಲೊಂದು ಕ್ಷುಲ್ಲಕ ಜಗಳಕ್ಕೆ ಸಂಬಂಧ ಪಟ್ಟಿದ್ದು. ಹೆಚ್ಚಿನವೆಲ್ಲವೂ ವೈಯಕ್ತಿಕ ದ್ವೇಷಸಾಧನೆಯ ಪ್ರಕರಣಗಳಷ್ಟೇ. ಪರಿಸ್ಥಿತಿ ಹೀಗಿದ್ದರೂ ಪೊಲೀಸರು “ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ ತರುವಂಥ, ಸಂಘಸಂಸ್ಥೆಗಳ ಹಾಗೂ ವ್ಯಕ್ತಿಗತ ನಿಂದನೆ ಮಾಡುವಂಥ ಸಂದೇಶ, ಫೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುವವರ ವಿರುದ್ಧ ಐಪಿಸಿ ಸೆಕ್ಷನ್ 153(ಎ) ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ” ಹೇಳಿದ್ದಾರೆ. ತಪ್ಪಿತಸ್ಥರ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡು ಕ್ರಮ ಜರುಗಿಸುತ್ತೇವೆ ಎಂದೂ ಒಂದು ಮಾತು ಸೇರಿಸಿದ್ದಾರೆ. ಕಳೆದ ನಾಲ್ಕೈದು ವರ್ಷಗಳಿಂದ ಕೆಲವು ಫೇಸ್ಬುಕ್ ಪೇಜ್’ಗಳಲ್ಲಿ ಹಿಂದೂಗಳನ್ನು, ಭಾರತವನ್ನು ಅತ್ಯಂತ ಅಸಭ್ಯ ಭಾಷೆಯಲ್ಲಿ ಹೀಯಾಳಿಸುತ್ತಿದ್ದರೂ ಅಂಥವರ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸರು ಈಗ ಯಾರ ಮೇಲೆ ತಮ್ಮ ಆಕ್ರೋಶ ತೋರಿಸುತ್ತಿದ್ದಾರೆ ಎಂಬುದು ಪ್ರಶ್ನಾರ್ಹವಾಗುತ್ತದೆ.

ಏಕಾಏಕಿ 153(ಎ) ಮತ್ತು ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುತ್ತೇವೆ ಎಂದು ಹೇಳುವ ಮೊದಲು ಅವರು ಕೆಲವು ವಿಷಯಗಳನ್ನು ಸ್ಪಷ್ಟಪಡಿಸಬೇಕು. ಮೊದಲನೆಯದಾಗಿ ವ್ಯಕ್ತಿಗತ ನಿಂದನೆ, ಸಮಾಜದ ಸ್ವಾಸ್ಥ್ಯಕ್ಕೆ ಧಕ್ಕೆ – ಇವನ್ನೆಲ್ಲ ನೀವು ಹೇಗೆ ನಿರ್ಧರಿಸುತ್ತೀರಿ? ಈ ರೀತಿ ಹೇಳಿದರೆ ನಿಂದನೆ; ಈ ರೀತಿ ಹೇಳಿದರೆ ಅಲ್ಲ – ಎಂಬ ಸ್ಪಷ್ಟವಾದ ಸೂಚನೆಯ ಪಟ್ಟಿ ನಿಮ್ಮಲ್ಲಿ ಇದೆಯೇ? ಜಾಲತಾಣಗಳಲ್ಲಿ ಅದೆಷ್ಟೋ ಸಲ ಅಸಭ್ಯ ಭಾಷೆಯಲ್ಲಿ ಬರೆದುಕೊಂಡವರ ವಿರುದ್ಧ ಪೊಲೀಸರಿಗೆ ಮಾಹಿತಿ, ದೂರು ಎಲ್ಲವನ್ನು ಕೊಟ್ಟರೂ ಕ್ರಮ ಕೈಗೊಳ್ಳದ ನಿದರ್ಶನಗಳಿವೆ. ಬರೆದುಕೊಂಡವರು ಸರಕಾರದ ಕೃಪಾಕಟಾಕ್ಷ ಪಡೆದಿದ್ದಾರೆಂಬುದೇ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿರಲು ಪ್ರಮುಖ ಕಾರಣ ಎಂದು ನಾವು ಭಾವಿಸಬೇಕೆ? ಇನ್ನು, ಒಬ್ಬ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಭಟನೆಗೆ ಕರೆ ಕೊಡುವುದಕ್ಕೂ ಬೀದಿಯಲ್ಲಿ ನಿಂತು (ಅಥವಾ ಪತ್ರಿಕೆ/ಟಿವಿ ಮಾಧ್ಯಮದಲ್ಲಿ) ಹೇಳುವುದಕ್ಕೂ ವ್ಯತ್ಯಾಸ ಇಲ್ಲವೇ? ಸಾಮಾಜಿಕ ಜಾಲತಾಣದಲ್ಲಿ ಜನ ಪ್ರತಿಭಟನೆ ಮಾಡಬೇಕು ಎಂದು ಹೇಳಿದ್ದನ್ನೇ ಅಪಾರ್ಥ ಮಾಡಿಕೊಂಡು 153(ಎ) ಸೆಕ್ಷನ್ನಲ್ಲಿ ಪೊಲೀಸರು ಕೇಸ್ ದಾಖಲಿಸಿಕೊಂಡ ನಿದರ್ಶನವಿದೆ. ಒಟ್ಟಲ್ಲಿ ಕರ್ನಾಟಕದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುವವರ ಮೇಲೆ ಲಾಠಿ ಬೀಸಬೇಕೆಂಬ ಪೊಲೀಸರ ಉದ್ದೇಶ ಸ್ಪಷ್ಟ.

ಇದಕ್ಕೆ ಸರಕಾರದ ಕುಮ್ಮಕ್ಕೂ ಇದೆ ಎಂದು ಊಹಿಸಲು ಹಲವು ಕಾರಣಗಳಿವೆ. ಮೊದಲನೆಯದಾಗಿ ಕರ್ನಾಟಕದ ಪ್ರಸಕ್ತ ಸರಕಾರಕ್ಕೆ ಜಾಲತಾಣದಲ್ಲಿ ದೊಡ್ಡ ಬೆಂಬಲವಿಲ್ಲ. ಹಾಗೆ ಹುಸಿ ಜನಪ್ರಿಯತೆ ಹೆಚ್ಚಿಸಿಕೊಳ್ಳಲು ಹೋಗಿ 85ಕ್ಕೂ ಹೆಚ್ಚು ನಕಲಿ ಟ್ವಿಟ್ಟರ್ ಖಾತೆಗಳನ್ನು ತೆರೆದದ್ದು ಜಗಜ್ಜಾಹೀರಾಗಿದೆ. ಇನ್ನು ನಾಲ್ಕೈದು ತಿಂಗಳಲ್ಲಿ ಪ್ರಾರಂಭವಾಗುವ ಚುನಾವಣಾ ಕಾವು ಜಾಲತಾಣದಲ್ಲೂ ಬಿಸಿ ಪಡೆಯುತ್ತದೆ ಎಂಬುದು ಸರಕಾರಕ್ಕೆ ಗೊತ್ತು. ಅಷ್ಟರೊಳಗೆ ತನ್ನ ವಿರುದ್ಧ ಬರೆಯುತ್ತಿರುವವರನ್ನು ಜಾಲತಾಣದಲ್ಲಿ ಮೌನವಾಗಿಸಬೇಕು; ಅದಕ್ಕಾಗಿ ಪೊಲೀಸ್ ವ್ಯವಸ್ಥೆಯನ್ನು ಎಗ್ಗಿಲ್ಲದೆ ಬಳಸಬೇಕು ಎಂಬುದು ಸರಕಾರದ ಚಿಂತನೆ. ಹಾಗಾಗಿ 153(ಎ) ಮತ್ತು ಐಟಿ ಕಾಯ್ದೆಯನ್ನು ಬಳಸುವ ಮಾತಾಡುತ್ತಿದೆ. ಆ ಮೂಲಕ ಜಾಲತಾಣಿಗರನ್ನು ಜಾಮೀನುರಹಿತ ಕೇಸ್ಗಳಲ್ಲಿ ಸಿಕ್ಕಿಸಿ 3ರಿಂದ 5 ವರ್ಷದವರೆಗೆ ಜೈಲಲ್ಲಿ ಕೂಡಿಹಾಕಬೇಕು ಎಂಬ ಸರ್ವಾಧಿಕಾರಿ ಪ್ರವೃತ್ತಿಯಲ್ಲದೆ ಇಲ್ಲಿ ಬೇರೇನೂ ಕಾಣುತ್ತಿಲ್ಲ. ಸರಕಾರದ ವಿರುದ್ಧ ಬರೆಯುತ್ತಿರುವವರು ಯಾರು? ಬಲಪಂಥೀಯರು. ಕಾಂಗ್ರೆಸ್ ಬಗ್ಗೆ ಒಲವಿಲ್ಲದವರು. ಕಾಂಗ್ರೆಸ್ ಬಗ್ಗೆ ಒಲವಿದ್ದರೂ ನಾಲ್ಕು ವರ್ಷಗಳಲ್ಲಿ ರಾಜ್ಯ ಸರಕಾರದ ಸಾಧನಾಶೂನ್ಯತ್ವ ಕಂಡು ಭ್ರಮನಿರಸನಗೊಂಡವರು. ಇವರ್ಯಾರೂ ಮುಂದಿನ ಚುನಾವಣೆಯಲ್ಲಿ ಮತ್ತೆ ಅದೇ ಪಕ್ಷಕ್ಕೆ ಮತ ಹಾಕರೆಂಬುದು ಸ್ಪಷ್ಟ. ಹಾಗಾಗಿ ಇವರನ್ನು ಮೌನವಾಗಿಸಿದರೆ ಕನಿಷ್ಠಪಕ್ಷ ಈಗಾಗಲೇ ಕುಸಿದಿರುವ ತನ್ನ ಜನಪ್ರಿಯತೆಯನ್ನು ರಸಾತಳಕ್ಕೆ ಹೋಗದಂತೆ ತಡೆಯಬಹುದು; ಡ್ಯಾಮೇಜ್ ಕಂಟ್ರೋಲ್ ಮಾಡಬಹುದು ಎಂದು ಸರಕಾರ ಯೋಚಿಸಿರಬಹುದು. ಸೈಬರ್ ಅಪರಾಧಗಳನ್ನು ಹ್ಯಾಂಡಲ್ ಮಾಡಲೆಂದೇ ಸರಕಾರದ ಗೃಹ ಇಲಾಖೆ ಪ್ರತ್ಯೇಕ ಸೈಬರ್ ಅಪರಾಧ ಠಾಣೆಯನ್ನೂ ತೆರೆಯಲು ಹೊರಟಿದೆ.

ನಗಲಿಕ್ಕೂ ಪರ್ಮಿಟ್ ಪಡೆಯಬೇಕಾದ ಸ್ಥಿತಿ ಇದೆ

ಜಾಲತಾಣವೆಂಬುದು ಮುಕ್ತವೇದಿಕೆ. ಹಾಗೆಂದ ಮಾತ್ರಕ್ಕೆ ಸಾಂಪ್ರದಾಯಿಕ ಮಾಧ್ಯಮಗಳೆಲ್ಲ ಸಾಚಾ, ಜಾಲತಾಣ ಮಾಡುವುದೆಲ್ಲ ತಪ್ಪು ಎಂಬ ನೇರ ಗೆರೆ ಎಳೆಯಬೇಕಿಲ್ಲ. ಸಮಾಜದಲ್ಲಿರುವ ವ್ಯಕ್ತಿಗಳೇ ಜಾಲತಾಣದಲ್ಲೂ ಸಕ್ರಿಯರಾಗಿರುವುದರಿಂದ ಅಲ್ಲೂ ಸಮಾಜದ ಎಲ್ಲ ಧನ-ಋಣ ಅಂಶಗಳೂ ಕಂಡುಬರಬಹುದು. ಕಾಲಕ್ರಮೇಣ ಜಾಲತಾಣ ಸ್ವಯಂಶಿಸ್ತು ರೂಢಿಸಿಕೊಳ್ಳಬಹುದು. ಅದು ಹಾಗೆ ಸ್ವಾಭಾವಿಕವಾಗಿ ಶಿಸ್ತುಬದ್ಧತೆ ರೂಢಿಸಿಕೊಳ್ಳುವಂತೆ ಕಾನೂನು ಅದರ ಕೈಹಿಡಿಯಬೇಕೇ ಹೊರತು ಜಾಲತಾಣದ ತಲೆ ಕಡಿಯುತ್ತೇನೆನ್ನುತ್ತ ದಾಳಿ ಮಾಡಬಾರದು. ಜಾಲತಾಣಗಳಲ್ಲಿ ಸಣ್ಣ ಮಟ್ಟದ ಹಾಸ್ಯ, ಮುಕ್ತತೆ, ಕಿಚಾಯಿಸುವಿಕೆ, ಚರ್ಚೆ, ಸಂವಾದ ಎಲ್ಲವೂ ಬೇಕು. ಅಂತಹ ವಾತಾವರಣವೇ ಜಾಲತಾಣವನ್ನು ಜೀವಂತವಾಗಿಡುತ್ತದೆ. ಆದರೆ ಈಗ ಸರಕಾರ ಮಾಡಹೊರಟಿರುವುದು ಜಾಲತಾಣದ ಸರ್ವನಿಯಂತ್ರಣ. ಐಟಿ ಆಕ್ಟ್ ಹೆಸರಲ್ಲಿ ತನ್ನ ಸರ್ವಾಧಿಕಾರ ಪ್ರದರ್ಶನ. ಪೊಲೀಸರು ತಾವು ಹೇಳಿದಂತೆ, ಜಾಲತಾಣದಲ್ಲಿ ಬರೆದುಕೊಂಡವರ ಮೇಲೆಲ್ಲ ತಮ್ಮದೇ ಅಂತಿಮ ನಿರ್ಣಯ ಎನ್ನುತ್ತ 153(ಎ) ಮತ್ತು ಐಟಿ ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಸ್ವಯಂ ಪ್ರಕರಣಗಳನ್ನು ದಾಖಲಿಸುತ್ತ ಹೋದರೆ ಅದಕ್ಕೆ ಯಾರು ಹೊಣೆ? ಸರಕಾರದ ಈ ದಮನಕಾರಿ ಮನಃಸ್ಥಿತಿಯನ್ನು ತಡೆಯುವುದು ಸದ್ಯದ ತುರ್ತು ಕೆಲಸ. ಕಳೆದ ನಾಲ್ಕು ವರ್ಷಗಳಲ್ಲಿ, ನಿಲುಮೆಯ ಪ್ರಕರಣವೂ ಸೇರಿದಂತೆ ಐದಾರು ಪ್ರಮುಖ ಸನ್ನಿವೇಶಗಳಲ್ಲಿ ಪೊಲೀಸರು ಮತ್ತು ಸರಕಾರ ಹೇಗೆ ವ್ಯವಹರಿಸುತ್ತಾರೆ ಎಂಬುದನ್ನು ನಾವು ನೋಡಿದ್ದೇವೆ. ಯಾವ ತಪ್ಪೂ ಮಾಡದಿದ್ದರೂ ನಿಲುಮೆ ಬಳಗದ ಅಡ್ಮಿನ್ಗಳನ್ನು ಕೊಲೆಗಾರರನ್ನು ಬೇಟೆಯಾಡುವಂತೆ ಪೊಲೀಸರು ಹುಡುಕಿದ್ದರು. ವಿ.ಆರ್. ಭಟ್ ಅವರ ಪ್ರಕರಣದಲ್ಲಿ ಬರೆದ ಸಣ್ಣ ಕಾಮೆಂಟ್’ನ್ನೇ ಆನೆಯಷ್ಟು ಮಾಡಿಕೊಂಡು ನಾಲ್ಕು ತಂಡ ರಚಿಸಿ ಕರ್ನಾಟಕದಾದ್ಯಂತ ಆರೋಪಿಯನ್ನು ತಲಾಶ್ ಮಾಡಿದ್ದರು. ಆದರೆ ಸರಕಾರದ ಕೆಲವು ಪ್ರಭಾವಿ ವ್ಯಕ್ತಿಗಳ ಜೊತೆ ಗುರುತಿಸಿಕೊಂಡಿದ್ದ ವಿವಿಯೊಂದರ ಪೋಸ್ಟ್ ಡಾಕ್ಟರೇಟ್ ಫೆಲೋ ಒಬ್ಬನ ಅಂಥಾದ್ದೇ ವಿಷಯದಲ್ಲಿ ಪೊಲೀಸರು ನಿಷ್ಕ್ರಿಯರಾದರು. ಅಥವಾ ಅವರು ಹಾಗಿರುವಂತೆ ಮೇಲಿಂದ ನಿರ್ದೇಶನ ಬಂದಿತ್ತು. ಡಾ. ಎಂ. ಕಲ್ಬುರ್ಗಿಯವರ ಕೊಲೆಯಾದಾಗ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಶುರುಮಾಡುವ ಬದಲು ಫೇಸ್ಬುಕ್, ಟ್ವಿಟ್ಟರ್’ಗಳಲ್ಲಿ ಪೋಸ್ಟ್ ಹಾಕುತ್ತಿದ್ದವರ ಬೆನ್ನ ಹಿಂದೆ ಪೊಲೀಸರನ್ನು ಛೂ ಬಿಡಲಾಗಿತ್ತು. ಅದರಿಂದ ಪೊಲೀಸ್ ವ್ಯವಸ್ಥೆ ತನ್ನ ಮುಖ್ಯ ಕೆಲಸ ಬಿಟ್ಟು ಸಿಕ್ಕಸಿಕ್ಕ ಜಾಲತಾಣಿಗರನ್ನು ಬಂಧಿಸುವುದರಲ್ಲಿ ನಿರತವಾಗಿ ಕೊಲೆ ತನಿಖೆಯೇ ಹಳ್ಳ ಹಿಡಿಯುವಂತಾಯಿತು. ಇಂತಹ ಒಂದಲ್ಲ ಎರಡಲ್ಲ ಹತ್ತುಹಲವು ಪ್ರಕರಣಗಳು ಐಟಿ ಆಕ್ಟ್’ನ ದುರ್ಬಳಕೆ ಕರ್ನಾಟಕದಲ್ಲಿ ಯಾವ್ಯಾವ ರೀತಿಯಲ್ಲಿ ಆಗುತ್ತಿದೆಯೆಂಬುದನ್ನು ಹೇಳುತ್ತಿವೆ.

ಜಾಲತಾಣಿಗರು ಎಚ್ಚೆತ್ತುಕೊಳ್ಳಬೇಕಿದೆ. 153(ಎ) ಮತ್ತು ಐಟಿ ಆಕ್ಟ್ ಮೇಲೆ ಪ್ರಕರಣಗಳನ್ನು ದಾಖಲಿಸುತ್ತೇವೆ ಎಂದು ಪೊಲೀಸರು ಮೊದಲಿಗೇ ಹೇಳಿ ಬಿಟ್ಟಿರುವದರಿಂದ ಅವರ ತನಿಖೆ, ವಿಚಾರಣೆ ಇತ್ಯಾದಿ ಯಾವ ದಾರಿಯಲ್ಲಿ ಸಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಸದ್ಯದ ಅವರ ಗುರಿ ಜಾಲತಾಣಗಳಲ್ಲಿ ಬರೆಯುತ್ತಿರುವ ನಿಷ್ಠುರವಾದಿಗಳು. ಇದ್ದುದನ್ನು ಇದ್ದಂತೆ ಹೇಳುವವರು. ಸರಕಾರದ ಹುಳುಕುಗಳನ್ನು ಎತ್ತಿ ಸಮಾಜದೆದುರು ಹಿಡಿಯುವವರು. ಸರಕಾರದ ವೈಫಲ್ಯಗಳನ್ನು ಜಾಲತಾಣ ಮತ್ತು ವಾಟ್ಸಾಪ್ ಮೂಲಕ ಬಿತ್ತರಿಸುವವರು. ಇವರನ್ನೆಲ್ಲ ಬಂಧಿಸಿ ಪೊಲೀಸರು ವಿಚಾರಣೆ ನಡೆಸಲು ಪ್ರಾರಂಭಿಸುವ ಮುನ್ನ ಐಟಿ ಆಕ್ಟ್ ಬಗ್ಗೆಯೇ ಒಂದು ದೊಡ್ಡ ಚರ್ಚೆ ಪ್ರಾರಂಭವಾಗಬೇಕಿದೆ. ಜಾಲತಾಣದಲ್ಲಿ ಯಾವ ಬಗೆಯ ಸಭ್ಯತೆಯನ್ನು ನಿರೀಕ್ಷಿಸುತ್ತಿದ್ದೇವೆ? ಯಾವ ಮಾತು ನಿಂದನಾರ್ಹ? ಜಾಲತಾಣಗಳಿಗೆ ಅನ್ವಯಿಸುವ ಕಾನೂನು ಪತ್ರಿಕೆ/ಟಿವಿಯಂಥ ಮಾಧ್ಯಮಗಳಿಗೂ ಅನ್ವಯಿಸುತ್ತದಾ? ಜಾಲತಾಣದಲ್ಲಿ ತನ್ನ ಫೋಟೋ ಹಾಕಿದರೆಂದು ಸಿಕ್ಕಸಿಕ್ಕವರ ಮೇಲೆ ಒಬ್ಬ ವ್ಯಕ್ತಿ ಐಟಿ ಕಾಯ್ದೆಯನ್ನು ಝಳಪಿಸಬಹುದಾದರೆ ದಿನನಿತ್ಯ ಒಬ್ಬರಲ್ಲಾ ಒಬ್ಬರ ಫೋಟೋ, ಹೆಸರು ಬಳಸಿ ವರದಿ ಪ್ರಕಟಿಸುವ ಟಿವಿ/ಪತ್ರಿಕೆಗಳಿಗೆ ಮೂಗುದಾರ ಯಾರು ತೊಡಿಸುವುದು? ಮಾಧ್ಯಮದ ಮಂದಿ ಜಾಲತಾಣಿಗರಿಗಿಂತ ಹೇಗೆ ಭಿನ್ನ ಮತ್ತು ಮೇಲೆ? ಜಾಲತಾಣಿಗರೆಂದರೆ ಅಡ್ನಾಡಿಗಳು, ಅರೆಬೆಂದವರು, ವಿಫಲರು ಎಂದೆಲ್ಲ ತಮ್ಮ ಷರಾ ಬರೆಯಲು ಪತ್ರಿಕೆಗಳಿಗೆ ಅಧಿಕಾರ ಕೊಟ್ಟವರು ಯಾರು? ಎಲ್ಲಕ್ಕಿಂತ ಮಿಗಿಲಾಗಿ ಜಾಲತಾಣವೆಂಬ ಮುಕ್ತ ಸಂವಾದ ವೇದಿಕೆಯ ಮೇಲೆ ಐಟಿ ಆಕ್ಟ್ ಎಂಬ ವಜ್ರಾಯುಧ ಬಳಸಿ ತನ್ನ ಪೌರುಷ ತೋರಿಸಲು ಸರಕಾರಕ್ಕಾಗಲೀ ಪೊಲೀಸರಿಗಾಗಲೀ ಇರುವ ಅರ್ಹತೆ ಏನು?

ಐಟಿ ಆಕ್ಟ್ ಚರ್ಚೆಯನ್ನು ನಾವು ಶೀಘ್ರ ಕೈಗೆತ್ತಿಕೊಳ್ಳಬೇಕಿದೆ. ಇಲ್ಲವಾದರೆ ಇನ್ನೊಂದು ವರ್ಷದಲ್ಲಿ ಕರ್ನಾಟಕದಲ್ಲಿ ಆ ಕಾಯ್ದೆಯ ಹೆಸರಲ್ಲಿ ಅಘೋಷಿತ ಎಮರ್ಜೆನ್ಸಿಯ ಕರಿನೆರಳು ಮುಸುಕಲಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!