ಪ್ರಚಲಿತ

ಉಕ್ಕಿನ ಮನುಷ್ಯನಿಗೆ ಒಲಿದು ಬರಲಿ ದೇಶದ ಪರಮೋಚ್ಚ ಹುದ್ದೆ!!

ಲಾಲ್ ಕೃಷ್ಣ ಅಡ್ವಾಣಿ!!!

ಈ ಹೆಸರು ಕೇಳಿದ ಕೂಡಲೇ ಬಿಜೆಪಿ ಅಭಿಮಾನಿಯೊಬ್ಬನಿಗೆ ಆಗುವ ರೋಮಾಂಚನ, ಹೆಮ್ಮೆ, ಮನಸ್ಸಲ್ಲಿ ಮೂಡುವ ಗೌರವ ಅಷ್ಟಿಷ್ಟಲ್ಲ. ಇವತ್ತು ಭಾರತೀಯ ಜನತಾ ಪಕ್ಷ ಈ ಪರಿ ಹೆಮ್ಮರವಾಗಿ ಬೆಳೆದು ನಿಂತಿದೆಯೆಂದರೆ ಅದಕ್ಕೆ ಅಡ್ವಾಣಿಯೆಂಬ ಮಹಾಪುರುಷನ ಕೊಡುಗೆ ಅಪಾರ. ರಾಮ ನಾಮ ಮತ್ತು ಹಿಂದುತ್ವದ ಮೂಲಕ ಬಿಜೆಪಿಯ ಬೇರುಗಳನ್ನು ಗಟ್ಟಿ ಮಾಡಿದ ಕೀರ್ತಿ ಅಡ್ವಾಣಿಯವರಿಗೆ ಸಲ್ಲಬೇಕು. ಅಡ್ವಾಣಿ ರಾಮ ರಥ ಯಾತ್ರೆ ಮತ್ತು ಸ್ವರ್ಣ ಜಯಂತಿ ರಥ ಯಾತ್ರೆಗಳ ಮೂಲಕ ಬಿಜೆಪಿಗೆ ಶಕ್ತಿ ತುಂಬಿದವರು. ಅಡ್ವಾಣಿ ಎಂದರೆ ಆದರ್ಶ, ತ್ಯಾಗ ಹಾಗೂ ತತ್ವ ಸಿದ್ಧಾಂತಗಳ ಧ್ಯೋತಕ. ಅಡ್ವಾಣಿ ಎಂದರೆ ಈಗಿನ ಪ್ರಧಾನಿ ಮೋದಿಯವರನ್ನೂ ಸೇರಿಸಿದಂತೆ ಹಲವಾರು ಸೆಕೆಂಡ್ ಜನರೇಶನ್ ನಾಯಕರನ್ನು ಯಾವುದೇ ಸ್ವಾರ್ಥವಿಲ್ಲದೇ ಬೆಳೆಸಿದ ರಾಜಕೀಯ ಗುರು. ಡೈರಿಯೊಂದರಲ್ಲಿ ತನ್ನ ಹೆಸರಿಗೆ ಹೋಲಿಕೆಯಾಗಬಲ್ಲ ಇನ್ಷಿಯಲ್ ಪ್ರಸ್ತಾಪವಾದಾಗ ಹಿಂದೂ ಮುಂದೂ ನೋಡದೇ ಅಧಿಕಾರ ತ್ಯಾಗ ಮಾಡಿದ ಅಪರೂಪದ ರಾಜಕಾರಣಿ ಅಡ್ವಾಣಿ. ಇಂತಹ ಅಡ್ವಾಣಿ ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಒಮ್ಮೆಯಾದರೂ ದೇಶದ ಪ್ರಧಾನಿಯಾಗಬೇಕಿತ್ತು ಎನ್ನುವುದು ಅವರ ಅಭಿಮಾನಿಗಳ ಆಸೆಯಾಗಿತ್ತು. ಆದರೆ ವಾಜಪೇಯಿಯವರ ರಾಜಕೀಯ ನಿವೃತ್ತಿಯ ನಂತರ ಅಡ್ವಾಣಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆಗೆ ಹೋದಾಗ ಸೋಲನ್ನೆದುರಿಸಬೇಕಾಯಿತು. ಅಡ್ವಾಣಿ ಪ್ರಧಾನಿ ಪಟ್ಟಕ್ಕೇರುವುದು ಕನಸಾಗಿಯೇ ಉಳಿಯಿತು.

ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತು ಅಂದ್ರೆ ಸಧ್ಯದ ರಾಜಕೀಯದಲ್ಲಿ ಎಲ್ಲೋ ಒಂದು ಕಡೆ ತೆರೆಮರೆಗೆ ಸರಿದಿದ್ದ ಉಕ್ಕಿನಪುರುಷನ ಹೆಸರು ಮತ್ತೆ ಚಾಲ್ತಿಯಲ್ಲಿದೆ. ಗುಜರಾತಿನ ಸೋಮನಾಥದಲ್ಲಿ ಇತ್ತೀಚಿಗೆ ನಡೆದ ಸಭೆಯೊಂದರಲ್ಲಿ ಪ್ರಧಾನಿ ಮೋದಿ ದೇಶದ ಪರಮೋಚ್ಚ ಹುದ್ದೆ ರಾಷ್ಟ್ರಪತಿ ಸ್ಥಾನಕ್ಕೆ ತಮ್ಮ ರಾಜಕೀಯ ಗುರು ಅಡ್ವಾಣಿಯವರ ಹೆಸರು ಸೂಚಿಸಿದ್ದಾರೆ ಅನ್ನುವ ಗುಸುಗುಸು ಸುದ್ದಿ ಸಾಮಾಜಿಕ ಜಾಲತಾಣ ಮತ್ತು ಸುದ್ದಿವಾಹಿನಿಗಳಲ್ಲಿ ಹರಿದಾಡುತ್ತಿದೆ. ಯಾವ ಸೋಮನಾಥದಲ್ಲಿ ೧೯೯೨ರಲ್ಲಿ ಅಡ್ವಾಣಿಯವರು ಅಯೋಧ್ಯಾ ರಥಯಾತ್ರೆ ಶುರುಮಾಡಿದ್ದರೋ ಅದೇ ಸೋಮನಾಥದಲ್ಲಿ ನಡೆದ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅಡ್ವಾಣಿಯವರ ಹೆಸರು ಘೋಷಿಸಿ ರಾಷ್ಟ್ರಪತಿ ಮಾಡಲು ಹೊರಟಿದ್ದಾರೆ ಅನ್ನುವ ಸುದ್ದಿ ಬಿಜೆಪಿ ಕಾರ್ಯಕರ್ತರನ್ನು ಹರ್ಷಕ್ಕೀಡುಮಾಡಿದೆ. ೧೯೯೨ರ ರಥಯಾತ್ರೆಗೆ ಅಡ್ವಾಣಿ ತಮ್ಮ ಸಾರಥಿಯಾಗಿ ಆಯ್ಕೆ ಮಾಡಿದ್ದು ಈಗಿನ ಪ್ರಧಾನಿ ಮೋದಿಯವರನ್ನು. ಈ ರಥಯಾತ್ರೆಯ ಮೂಲಕ ಮೋದಿ ರಾಷ್ಟ್ರ ಮಟ್ಟದ ನಾಯಕನಾಗಿ ಗುರುತಿಸಿಕೊಂಡರು. ಹಿಂದೆ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತ್ತಾದರೂ ರಾಷ್ಟ್ರದ ಅತ್ಯುನ್ನತ ಹುದ್ದೆಗೆ ತನ್ನದೇ ಪಕ್ಷದ ವ್ಯಕ್ತಿಯನ್ನು ನೇಮಿಸುವ ಬಿಜೆಪಿಯ ಆಸೆ ಈಡೇರಿರಲಿಲ್ಲ.ಆದರೆ ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಾಗಲೇ ದೇಶದ ಮುಂದಿನ ರಾಷ್ಟ್ರಪತಿ ಅಡ್ವಾಣಿ ಆಗಲಿದ್ದಾರೆ ಎನ್ನುವ ಲೆಕ್ಕಾಚಾರ ಬಿಜೆಪಿಯ ಹೆಚ್ಚಿನ ಕಾರ್ಯಕರ್ತರು ಮತ್ತು ಅಭಿಮಾನಿಗಳ ಮನಸ್ಸಲ್ಲಿ ಮನೆಮಾಡಿಯಾಗಿತ್ತು.

ಕೆಲವು ಜನ ಅಡ್ವಾಣಿ ಮತ್ತು ಮೋದಿ ಸಂಬಂಧ ಹಳಸಿದೆ ಅನ್ನುವ ಆರೋಪ ಮಾಡಿದರೂ ಪ್ರಧಾನಿ ಮೋದಿ ಮಾತ್ರ ಈ ಕುರಿತು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಮೋದಿಯವರನ್ನು ಗುಜರಾತ್ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಮತ್ತು  ಮೋದಿಯವರ ಯಾವುದೇ ಕೈವಾಡವಿಲ್ಲದಿದ್ದರೂ ವಿರೋಧಿಗಳು ಮತ್ತು ಮಾಧ್ಯಮಗಳು ಗೋಧ್ರಾ ಹತ್ಯಾಕಾಂಡದ ಕಳಂಕ ಮೋದಿಯವರ ಮೇಲೆ ಕಟ್ಟಲೆತ್ನಿಸಿದಾಗ ತನ್ನ ಶಿಷ್ಯನಿಗೆ ಬೆಂಬಲವಾಗಿ ನಿಂತವರು ಅಡ್ವಾಣಿ. ೧೯೯೬ರಲ್ಲಿ ಪ್ರಧಾನಿಯಾಗಲು ಎಲ್ಲಾ ಅವಕಾಶಗಳಿದ್ದರೂ ವಾಜಪೇಯಿಯವರನ್ನು ಪ್ರಧಾನಿಯನ್ನಾಗಿ ಆಯ್ಕೆ ಮಾಡಿಸಿ ಅಧಿಕಾರಕ್ಕಾಗಿ ಹಪಹಪಿಸೋ ವ್ಯಕ್ತಿ ತಾನಲ್ಲ ಎನ್ನುವುದನ್ನು ಎತ್ತಿ ತೋರಿಸಿದ ಉದಾರ ಮನೋಭಾವ ಅಡ್ವಾಣಿಯವರದ್ದು. ಸಂಘ ಪರಿವಾರದ ಗರಡಿಯಲ್ಲಿ ಪಳಗಿ ಒಬ್ಬ ಉತ್ತಮ ವಾಗ್ಮಿಯಾಗಿ,  ಸಂಸದೀಯ ಪಟುವಾಗಿ, ದೇಶದ ಗೃಹ ಮಂತ್ರಿಯಾಗಿ ಮತ್ತು ಉಪಪ್ರಧಾನಿಯಾಗಿ ಆಡಳಿತ ನಡೆಸಿದ ಅನುಭವ ಇರುವ ಅಡ್ವಾಣಿ ರಾಷ್ಟ್ರಪತಿ ಸ್ಥಾನಕ್ಕೆ ಉತ್ತಮ ಮತ್ತು ಅರ್ಹ ಆಯ್ಕೆ ಎನ್ನುವುದರಲ್ಲಿ ಸಂಶಯವೇ ಇಲ್ಲ.

ಸಧ್ಯ ರಾಷ್ಟ್ರಪತಿ ಸ್ಥಾನಕ್ಕೆ ಅಮಿತಾಬ್ ಬಚ್ಚನ್, ನಾರಾಯಣ ಮೂರ್ತಿ, ರಜನೀಕಾಂತ್ ಮುಂತಾದವರ ಹೆಸರು ಕೇಳಿ ಬರುತ್ತಿದ್ದರೂ ರಾಜಕೀಯೇತರ ವ್ಯಕ್ತಿಗಳ ಆಯ್ಕೆಯ ಸಾಧ್ಯತೆ ಬಹಳ ಕಮ್ಮಿ. ಹಿರಿಯ ರಾಜಕಾರಣಿ ಮುರಳಿ ಮನೋಹರ್ ಜೋಷಿ ಹೆಸರು ಚಾಲ್ತಿಯಲ್ಲಿದ್ದರೂ ಆರೆಸ್ಸೆಸ್ ಅಡ್ವಾಣಿಯವರ ಪರ ಒಲವು ಹೊಂದಿದೆ ಅನ್ನಲಾಗುತ್ತಿದೆ. ಅಲ್ಲದೆ ಜೋಶಿಯವರ ಹೆಸರು ಉಪರಾಷ್ಟ್ರಪತಿ ಹುದ್ದೆಗೂ ಕೇಳಿಬರುತ್ತಿದೆ. ಮೋದಿಯವರು ರಾಜಕೀಯ ಪಟ್ಟುಗಳನ್ನು ಜೋಷಿಯವರ ಬಳಿಯೂ ಕಲಿತುಕೊಂಡಿದ್ದರು. ಅಡ್ವಾಣಿಯವರನ್ನು ರಾಷ್ಟ್ರಪತಿ ಹಾಗೂ ಜೋಷಿಯವರನ್ನು ಉಪರಾಷ್ಟ್ರಪತಿ ಮಾಡಿ ತನ್ನ ಇಬ್ಬರೂ ಗುರುಗಳಿಗೆ ಗುರು ದಕ್ಷಿಣೆ ಸಲ್ಲಿಸುವ ಸುಯೋಗ ಮೋದಿಯವರ ಪಾಲಿಗೆ ದಕ್ಕಿದೆ ಅಂದರೆ ಖಂಡಿತಾ ಅತಿಶಯೋಕ್ತಿ ಆಗಲಾರದು.

ಇತ್ತೀಚೆಗಷ್ಟೇ ಮುಗಿದ ಪಂಚರಾಜ್ಯ ಚುನಾವಣೆಗಳಲ್ಲಿ ಗಣನೀಯ ಸಾಧನೆ ಮಾಡಿರುವ ಬಿಜೆಪಿ ಕೆಲವೊಂದು ಸಣ್ಣ ಪಕ್ಷಗಳ ಜೊತೆ ಮೈತ್ರಿ ಮಾಡಿಕೊಂಡರೆ ತನ್ನದೇ ಪಕ್ಷದ ವ್ಯಕ್ತಿಯೊಬ್ಬರನ್ನು ರಾಷ್ಟ್ರಪತಿಯನ್ನಾಗಿ ನೇಮಿಸುವ ಹಾದಿ ಸಲೀಸು.  ಜುಲೈ ತಿಂಗಳಲ್ಲಿ ಪ್ರಣಬ್ ಮುಖರ್ಜಿ ಅಧಿಕಾರ ಕೊನೆಗೊಳ್ಳಲಿದ್ದು ಮುಂದಿನ ರಾಷ್ಟ್ರಪತಿ ಆಯ್ಕೆಯ ಲೆಕ್ಕಾಚಾರಗಳು ಈಗಿನಿಂದಲೇ ಗರಿಗೆದರಿವೆ. ರಾಷ್ಟ್ರಪತಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಧ್ಯಕ್ಕೆ ಎನ್‌ಡಿಎ ಸುಮಾರು ೨೦೦೦೦ ಮೌಲ್ಯದ ಮತಗಳನ್ನು ಎರವಲು ಪಡೆಯುವ ಅನಿವಾರ್ಯತೆ ಇದ್ದು, ಎಐಡಿಎಂಕೆ (೨೩ ಸಾವಿರ ಮೌಲ್ಯದ ಮತ) ಅಥವಾ ಬಿಜೆಡಿ (೧೭ ಸಾವಿರ ಮೌಲ್ಯದ ಮತ) ಜೊತೆ ಮೈತ್ರಿ ಮಾಡಿಕೊಂಡರೆ ಎನ್‌ಡಿಎ ಹಾದಿ ಸುಗಮವಾಗಲಿದೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಕೇಸ್ ಮರುಜೀವ ಪಡೆದುಕೊಂಡಿದ್ದು ಅದು ಅಡ್ವಾಣಿಯವರಿಗೆ ಹಿನ್ನಡೆಯಾಗದಿರಲಿ ಅನ್ನುವುದು ಎಲ್ಲರ ಬಯಕೆ.

ಬಿಜೆಪಿಯ ಏಳಿಗೆಗಾಗಿ ತನ್ನ ಸರ್ವಸ್ವವನ್ನೇ ಧಾರೆ ಎರೆದಿರುವ, ಹಿಂದುತ್ವದ ಮೂಲಕ ಬಿಜೆಪಿಯ ಬೇರುಗಳನ್ನು ಗಟ್ಟಿಗೊಳಿಸಿ ಪಕ್ಷವನ್ನು ದೇಶಾದ್ಯಂತ ಪರಿಚಯಿಸಿದ ಅಡ್ವಾಣಿಯವರನ್ನು ಮೋದಿ ಮತ್ತು ಅಮಿತ್ ಶಾ ಕೆಟ್ಟದಾಗಿ ನಡೆಸಿಕೊಂಡರು ಎನ್ನುವ ಆರೋಪಕ್ಕೆ ಉತ್ತರ ನೀಡಲು ಮೋದಿ ಮತ್ತು ಅಮಿತ್ ಶಾ ಜೋಡಿಗಿದು ಸಕಾಲ. ಮೋದಿ ಮತ್ತು ಅಮಿತ್ ಶಾ ಕಾರ್ಯವೈಖರಿಯ ಬಗ್ಗೆ ಅಡ್ವಾಣಿ ಆಕ್ಷೇಪ ವ್ಯಕ್ತಪಡಿಸಿದ್ದರೂ ತನ್ನ ಗುರುವಿನ ವೈಮನಸ್ಸನ್ನು ದೊಡ್ಡ ವಿಷಯ ಮಾಡದೇ ಗುರುದಕ್ಷಿಣೆ ಕೊಡಲು ಮೋದಿಯವರಿಗೆ ಬಹುದೊಡ್ಡ ಅವಕಾಶ ಬಂದೊದಗಿದೆ.  ಸಧ್ಯದಲ್ಲೇ ಈ ಕುರಿತಾಗಿ ಅಧಿಕೃತ ಘೋಷಣೆ ಹೊರಬೀಳಲಿದ್ದು ಅಡ್ವಾಣಿಯವರ ಆಯ್ಕೆ ಬಹುತೇಕ ಖಚಿತ ಎನ್ನಲಾಗುತ್ತಿದೆ. “ರೈಸಿನಾ ಹಿಲ್” ರಾಷ್ಟ್ರಪತಿ ಭವನದಲ್ಲಿ ಅಡ್ವಾಣಿಯವರು ವಿರಾಜಮಾನರಾಗಲಿ ಎನ್ನುವುದು ಅವರ ಅಭಿಮಾನಿಯಾಗಿ ಆಶಯ. ಸಧ್ಯ ೮೯ ವರ್ಷ ತುಂಬಿ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿರುವ ಬಿಜೆಪಿಯ ಪರಮೋಚ್ಚ ನಾಯಕ ಲಾಲ್ ಕೃಷ್ಣ ಅಡ್ವಾಣಿಯವರಿಗೆ ನಮ್ಮ ದೇಶದ ಪರವೊಚ್ಚ ಹುದ್ದೆ ರಾಷ್ಟ್ರಪತಿ ಪದವಿ ಒಲಿದು ಬರಲಿ ಎನ್ನುವುದೇ ಎಲ್ಲರ ಹಾರೈಕೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!