ಪ್ರವಾಸ ಕಥನ

ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ


ಮೊದಲ ಭಾಗ:

ಧನುರ್ಮಾಸದಲ್ಲಿ ತೀರ್ಥ ಕ್ಷೇತ್ರ ದರ್ಶನ

 

ಕನ್ಯಾಕುಮಾರಿ.

ಶ್ರೀ ಕ್ಷೇತ್ರ ರಾಮೇಶ್ವರದಿಂದ 309 ಕೀ.ಮೀ.ದೂರದಲ್ಲಿರುವ ಈ ಕ್ಷೇತ್ರ ತಲುಪಿದಾಗ ಸೂರ್ಯಾಸ್ತಮಾನದ ಸಮಯ.  ಆದರೆ ಮೋಡ ಕವಿದ ವಾತಾವರಣದಿಂದಾಗಿ ಹತಾಷರಾದೆವು.  ಸಮುದ್ರದಲ್ಲಿ ತೃಪ್ತಿಯಾಗುವವರೆಗೂ ಆಟವಾಡಿ ಕುದುರೆಯೇರಿ ಒಂದು ರೌಂಡ್ ಸುತ್ತಾಡಿ ಸಿಗುವ ಕುರುಕುಲು ಕಾಫಿ ಹೀರಿ ವ್ಯವಸ್ಥೆಗೊಂಡ ರೂಮು ಸೇರಿಕೊಂಡು ಪವಡಿಸಿದ್ದೆ ಗೊತ್ತಾಗಲಿಲ್ಲ.  ಎಲ್ಲಿ ಹೋದರೂ ನಡಿಗೆ ಅನಿವಾರ್ಯ. ಬೆಳಗಿನ ಸೂರ್ಯೋದಯ ವೀಕ್ಷಿಸಲು ಕಡಲ ತೀರಕ್ಕೆ ಬೇಗನೆ ಬಂದರೂ ಆಗಲೂ ಮೋಡ ಮರೆಯಾಗಿರಲಿಲ್ಲ.  ಅಲ್ಲೂ ನಿರಾಸೆಯೆ ಕಾದಿತ್ತು.

ಈ ಊರು ಹಳೆಯ ತಿರುವಾಂಕೂರ್ ರಾಜ್ಯದ ದಕ್ಷಿಣದಲ್ಲಿರುವ ಚಿಕ್ಕ ಹಳ್ಳಿ.  ಶ್ರೀ ಮಹಾವಿಷ್ಣುವಿಗೂ ಆರನೆಯ ಅವತಾರವಾದ ಪರಶುರಾಮನಿಗೂ ಈ ಪುಣ್ಯ ಕ್ಷೇತ್ರಕ್ಕೂ ಬಹಳ ಹತ್ತಿರ ಸಂಬಂಧವಿದೆ.  ಇತಿಹಾಸದಲ್ಲಿ ಪುರಾಣ ಕಥೆಯಿದೆ.  ಈಗ ಕನ್ಯಾಕುಮಾರಿ ಕ್ಷೇತ್ರ ತಮಿಳುನಾಡಿನ ಒಂದು ಭಾಗವಾಗಿದೆ.  ಪಾಂಡ್ಯ ರಾಜರ ಕಾಲದಲ್ಲಿ ಕುಲದೇವತೆಯಾಗಿ ಪೂಜಿಸಲ್ಪಡುತ್ತಿದ್ದಳೆಂದೂ ಇತಿಹಾಸ ಹೇಳುತ್ತದೆ.   ಭೂಗರ್ಭ ಶಾಸ್ತ್ರಜ್ಞರು ಲಮೂರಿಯಾ ಎಂಬ ಖಂಡವಿತ್ತೆಂದೂ ಅಲ್ಲಿ ಪರಲಿ ನದಿ ಹರಿಯುತ್ತಿತ್ತೆಂದು ಅಭಿಪ್ರಾಯ ಪಟ್ಟಿದ್ದಾರೆ.

ಹೊಸ ಜಿಲ್ಲೆಯಾಗಿ ರೂಪುಗೊಂಡಿರುವ ಈ ಸ್ಥಳವು ಮೂರು ಸಮುದ್ರಗಳಿಂದ ಕೂಡಿದ್ದು ಪೂರ್ವಕ್ಕೆ ಬಂಗಾಳ ಕೊಲ್ಲಿ, ಪಶ್ಚಿಮಕ್ಕೆ ಹಿಂದೂ ಮಹಾ ಸಾಗರ, ಉತ್ತರಕ್ಕೆ ಅರೇಬಿಯಾ ಸಮುದ್ರ ಆವರಿಸಿದ್ದು ದೇವಿ ಪರಾಶಕ್ತಿಯ ಪುಣ್ಯ ಕ್ಷೇತ್ರವಾಗಿದೆ.  ದೇಶದ ದಕ್ಷಿಣ ಭಾಗದ ತುದಿಯಲ್ಲಿದ್ದು ಪವಿತ್ರ ಯಾತ್ರಾ ಸ್ಥಳವಾಗಿದೆ.  ಸೂರ್ಯಾಸ್ತಮಾನ, ಸೂರ್ಯೋದಯದ ಅದ್ಭುತ ದೃಶ್ಯ ಸವಿಯಲು ಎಲ್ಲಾ ಜಾತಿ ಧರ್ಮದವರು ಬಂದು ಸಮುದ್ರ ಸ್ನಾನ ಮಾಡಿ ದೇವಿಯ ದರ್ಶನ ಮಾಡುತ್ತಾರೆ.

ದೇವಿ ಕನ್ಯಾಕುಮಾರಿಯ ತಪಸ್ಸು ಮತ್ತು ಪ್ರತಿಷ್ಠೆಯ ಕುರಿತು ಒಂದು ಕಥೆಯಿದೆ.  ಭರತನೆಂಬ ರಾಜರ್ಷಿಗೆ ಒಬ್ಬಳೇ ಮಗಳು ಎಂಟು ಜನ ಗಂಡು ಮಕ್ಕಳು.  ರಾಜ್ಯವನ್ನು ಸಮಪಾಲಾಗಿ ಹಂಚಲಾಗಿ ಒಂದು ಭೂ ಭಾಗವು ಕುಮಾರಿಗೆ ಬಂದು ಅದೇ ಈಗ ಕನ್ಯಾಕುಮಾರಿ ಕ್ಷೇತ್ರವೆಂದು ಹೆಸರಾಗಿದೆ.  ರಾಕ್ಷಸ ರಾಜನಾದ ಬಾಣಾಸುರನ ಅತ್ಯಾಚಾರ ಅಧರ್ಮ ಸಹಿಸಲಾರದೆ ಭೂಮಾತೆಯು ಶ್ರೀ ಮಹಾವಿಷ್ಣುವಿನ ಮೊರೆ ಹೊಕ್ಕಲಾಗಿ ದೇವ ಪರಾಶಕ್ತಿಯೇ ಬರಬೇಕೆಂದು ಹೇಳಲಾಗಿ ಯಾಗದ ಮಹಿಮೆಯಿಂದ ಪ್ರತ್ಯಕ್ಷಳಾದ ದೇವಿ ಕನ್ಯೆಯಾಗಿ ಕನ್ಯಾಕುಮಾರಿಯನ್ನು ತಲುಪಿ ಘೋರ ತಪಸ್ಸು ಮಾಡತೊಡಗಿದಳು.  ದಿನ ಕಳೆದಂತೆ ಆಕೆಯಲ್ಲಿ ಉಂಟಾದ ಯೌವ್ವನ ಕಂಡು ಪರಶಿವನು ವಿವಾಹವಾಗಲು ನಿರ್ಧರಿಸಿದನು.  ಮದುವೆ ಸುದ್ದಿ ತಿಳಿದ ದೇವರ್ಶಿ ನಾರದರು ಒಂದು ಕೋಳಿಯ ರೂಪ ತಾಳಿ ಮುಹೂರ್ತಕ್ಕೂ ಮೊದಲೆ ಬೆಳಗಿನ ಕೂಗು ಕೂಗಿ ವಿವಾಹದ ಮುಹೂರ್ತ ತಪ್ಪಿಸಲಾಗಿ  ದೇವಿ ಕನ್ಯಾಕುಮಾರಿಯಾಗಿಯೆ ಇರಲು ನಿಶ್ಚಯಿಸಿದಳು. ಮಾಡಿದ ಅಡಿಗೆ ಮರಳಾಗಿ ಇಂದಿಗೂ ಅಲ್ಲಿಯ ಮರಳು ವಿವಿಧ ವರ್ಣಗಲ್ಲಿರುವುದು ಕಾಣಬಹುದು.

ಇತ್ತ ಬಾಣಾಸುರನು ಮದುವೆಯಾಗಲು ಬಂದಾಗ ದೇವಿ ತಿರಸ್ಕರಿಸಲಾಗಿ ಕುಪಿತಗೊಂಡು ಕತ್ತಿಯನ್ನು ತೆಗೆಯಲಾಗಿ ಈ ಸಮಯಕ್ಕೆ ಕಾಯುತ್ತಿದ್ದ ದೇವಿಯು ತನ್ನ ಚಕ್ರಾಯುಧದಿಂದ ಸಂಹರಿಸಿ ದೇವತೆಗಳನ್ನು ಸಂತೋಷಗೊಳಿಸಿದಳು.  ಪ್ರತಿ ವರ್ಷ ಆಕ್ಟೋಬರ್ ತಿಂಗಳಿನಲ್ಲಿ ನವರಾತ್ರಿ ಉತ್ಸವ, ವೈಶಾಖ ಮಾಸದಲ್ಲಿ ರಥೋತ್ಸವಗಳು ಹತ್ತು ದಿನಗಳು ನಡೆಯುತ್ತವೆ.

ಈ ದೇವಾಲಯವು ಸಾವಿರಾರು ವಷ೯ಗಳ ಇತಿಹಾಸ ಹೊಂದಿದ್ದು ಪೂರ್ವ ದಿಕ್ಕಿನ ದ್ವಾರ ಮುಚ್ಚಿರುವುದರಿಂದ ಭಕ್ತರು ಉತ್ತರದ ದ್ವಾರದಿಂದ ಪ್ರವೇಶಿಸಬೇಕು.  ಎಲ್ಲಾ ಪೂಜೆಗೂ ಕಛೇರಿಯಲ್ಲಿ ಚೀಟಿ ಪಡೆದು ಮಾಡಿಸಲು  ಅನುಕೂಲವಿದೆ.  ಪೂರ್ವಾಭಿಮುಖವಾಗಿ ನಿಂತ ದೇವಿ ಎಡಗೈಯ್ಯಲ್ಲಿ ಮಾಲೆ ಹಿಡಿದು ಚಂದನದ ಲೇಪನದಿಂದ ಅಮೂಲ್ಯ ವಜ್ರಾಭರಣಗಳಿಂದ ವಿಧ ವಿಧವಾದ ಹೂಗಳಿಂದ ಶೃಂಗಾರಗೊಂಡ ದೇವಿಯ ಮೂಗುತಿಯು ಅಮೂಲ್ಯವಾದ ವಜ್ರದ ಕಾಂತಿಯಿಂದ  ಮಿಂಚುತ್ತಿರುತ್ತದೆ.

ಹತ್ತಿರವಿರುವ ಸ್ನಾನ ಘಟ್ಟಗಳು – ಸಾವಿತ್ರಿ, ಗಾಯತ್ರಿ, ಸರಸ್ವತಿ, ಕನ್ಯಾ, ಸ್ಥಾಣು, ಮಾತೃ,ಪಿತೃ ಮುಂತಾದವುಗಳಿದ್ದು  ಮೂರು ಸಮುದ್ರಗಳು ಕೂಡುವ ಘಟ್ಟದಲ್ಲಿ ಸ್ನಾನ ಮಾಡಿದರೆ ಆತ್ಮ ಪರಿಶುದ್ಧತೆ, ಯಾರು ತಮ್ಮ ಪಾಪಗಳನ್ನು ಕಳೆದುಕೊಳ್ಳಬೇಕೊ ಅವರು ಕನ್ಯಾ ಘಟ್ಟದಲ್ಲಿ ಸ್ನಾನ ಮಾಡಬೇಕು, ಪರಶುದ್ಧವಾದ ಮನಸ್ಸಿನಿಂದ ಈ ಘಟ್ಟದಲ್ಲಿ ಸ್ನಾನ ಮಾಡಿದರೆ ಸೃಷ್ಟಿ ಕರ್ತನಾದ ಮನುವಿನ ಲೋಕ ಸೇರಬಹುದೆಂಬ ಪ್ರತೀತಿ ಇದೆ.

ಇಲ್ಲಿ ಭೇಟಿ ಕೊಡಬೇಕಾದ ಇನ್ನೊಂದು ಸ್ಥಳ ಗಾಂಧೀಜಿ ಮಂಟಪ.  12 ಫೆಬ್ರವರ 1948 ರಂದು ಗಾಂಧೀಜಿ ಅಸ್ಥಿ ಸಿಂಚನ ಇಲ್ಲಿ ನಡೆದಿದೆ. ಈ ಜಾಗದ ಕುರುಹಾಗಿ ಅವರ ಅನುಯಾಯಿಗಳಲ್ಲೊಬ್ಬರಾದ ಶ್ರೀ ಆಚಾರ್ಯ ಕೃಪಲಾನಿಯವರಿಂದ 20-6-1954 ರಲ್ಲಿ ಶಂಖುಸ್ಥಾಪನೆಗೊಂಡ ಕಾರ್ಯ 1956ರಲ್ಲಿ ಪೂರ್ಣಗೊಂಡಿದೆ.  ಅಕ್ಟೋಬರ್ 2 ಗಾಂಧಿ ಜಯಂತಿಯಂದು ಮಧ್ಯಾಹ್ನ 12 ಗಂಟೆಗೆ ಮಂಟಪದ ಮೇಲ್ಮಟ್ಟದಲ್ಲಿ ಮಾಡಿರುವ ಒಂದು ರಂದ್ರದ ಮೂಲಕ ಸ್ಥಾಪಿಸಲ್ಪಟ್ಟ ಗಾಂಧೀ ಪ್ರತಿಮೆಗೆ ಸೂರ್ಯನ ಕಿರಣ ಬೀಳುತ್ತದೆ.

ಈ ಊರಿನಲ್ಲಿ ಊಟ, ವಸತಿ ಸೌಕರ್ಯ ತುಂಬಾ ಚೆನ್ನಾಗಿದೆ.  ಅಂಗಡಿ ಮುಂಗಟ್ಟುಗಳು ಹೇರಳವಾಗಿದೆ.  ಪ್ರಕೃತಿ ಮಾತೆಯ ತವರು, ಎತ್ತ ನೋಡಿದರತ್ತತ್ತ ರುದ್ರರಮಣೀಯ ಸಮುದ್ರ ತಾಣ.  ಸಾರಿಗೆ ಸೌಕರ್ಯ ಕೂಡಾ ಚೆನ್ನಾಗಿದೆ.  ಮನಕೊಪ್ಪುವ ಮನದಣಿಯೆ ಕಾಲಾಡಿಸುತ್ತ ಕಾಲ ಕಳೆಯುವ ನವೋಲ್ಲಾಸದ ಜನರಿಗೆ ಹೇಳಿ ಮಾಡಿಸಿದ ಊರಿದು.

ಪೂರ್ತಿ ಕನ್ಯಾಕುಮಾರಿ ವೀಕ್ಷಣಾ ನಂತರ ಮುಂದಿನ ಭೇಟಿಯತ್ತ ಹೊರಟೆವು.

ಸ್ವಾಮಿ ವಿವೇಕಾನಂದ ರಾಕ್ ಮೆಮೋರಿಯಲ್ :

ಕನ್ಯಾಕುಮಾರಿಯಿಂದ ಅರ್ಧ ಕೀ.ಮೀ.ಸಮುದ್ರದ ಮಧ್ಯೆ ಮೂರು ಸಮುದ್ರಗಳ ಸಂಗಮ ಜಾಗದಲ್ಲಿ ಎರಡು ಶಿಲೆಗಳಿವೆ.  ಅದರಲ್ಲಿ ಒಂದು ಶಿಲೆ 3 ಎಕರೆಯಷ್ಟು ವಿಶಾಲ ಜಾಗ ಸಮುದ್ರ ಮಟ್ಟದಿಂದ 55 ಅಡಿ ಎತ್ತರವಿದ್ದು “ಶ್ರೀ ಪಾದ ಪಾರೈ” ಎಂದು ಕರೆಯುತ್ತಾರೆ.  ಇಲ್ಲಿಗೆ ತಲುಪಲು ಬೋಟಲ್ಲಿ ತೆರಳಬೇಕು.

ಈ ಜಾಗಕ್ಕೆ ಕಾಲಿಟ್ಟ ತಕ್ಷಣ “ವಾವ್!” ಎಂದು ಉಧ್ಗರಿಸದ ಜನರಿಲ್ಲ.  ಎತ್ತ ನೋಡಿದರೂ ನೀರೆ ನೀರು. ದ್ವೀಪವಲ್ಲವೆ?  ಛಾಯಾ ಗ್ರಾಹಕರು ಹಿಡಿದ ಕ್ಯಾಮರಾ ಬಿಡಲೊಲ್ಲರು.

ಸ್ವಾಮಿ ವಿವೇಕಾನಂದರು ಉತ್ತರ ಅಂಚಿನಲ್ಲಿರುವ ತಮ್ಮ ತೀರ್ಥ ಯಾತ್ರೆಯನ್ನು ಆರಂಭಿಸಿ ಮಾರ್ಗದಲ್ಲಿ ಸಿಗುವ ಪುಣ್ಯ ಕ್ಷೇತ್ರ ಸಂದರ್ಶಿಸುತ್ತ ಕೊನೆಗೆ ಕನ್ಯಾಕುಮಾರಿ ತಲುಪಿದರು.  ದೇವಿ ದರ್ಶನ ಮಾಡಿ ಈಜುತ್ತ ಈ ಜಾಗಕ್ಕೆ ಬಂದು ಧ್ಯಾನಾಸಕ್ತರಾಗಿ ಕುಳಿತರು.  ನಂತರ 1962ರಲ್ಲಿ ಸ್ವಾಮೀಜಿಯವರ ವರ್ಧಂತಿ ಶತಮಾನೋತ್ಸವ ಇಲ್ಲಿ ನಡೆದು ಅವರ ಹೆಸರಿನಲ್ಲಿ ಸ್ಥಾಯೀಸ್ಮಾರಕವನ್ನು ನಿರ್ಮಿಸಲು ತೀರ್ಮಾನಿಸಿ,  ಅಖಿಲ ಭಾರತ ಸಮಿತಿಯನ್ನು ಸ್ಥಾಪಿಸಿ ಕಾರ್ಯದರ್ಶಿಯಾದ ಶ್ರೀ ಏಕನಾಥ ರಾನಡೇ ಮತ್ತು ಪ್ರಸಿದ್ಧ ವಾಸ್ತು ಶಿಲ್ಪಿಯಾದ ಶ್ರೀ ಎಸ್. ಕೆ.ಆಚಾರ್ಯರಿಂದ ರೂಪರೇಶೆ ಚಿತ್ರಿಸಿ 85×38ಅಡಿಗಳ 85ಲಕ್ಷ ರೂ.ಗಳಲ್ಲಿ ನುಣುಪಾದ ಕಪ್ಪು ಕಲ್ಲಿನಲ್ಲಿ ಭವ್ಯ ಮಂಟಪ ನಿರ್ಮಾಣವಾಗಿದೆ.  ಪ್ರಧಾನ ಗೋಪುರ 66 ಅಡಿ ಎತ್ತರವಿದೆ. ಪ್ರಧಾನ ದ್ವಾರದಲ್ಲಿ ಅಜಂತಾ ಎಲ್ಲೋರಾದ ಕೆತ್ತನೆಗಳಿವೆ.  ದೊಡ್ಡ ಹಾಲಿನ ಮಧ್ಯದಲ್ಲಿ ಸರಿಯಾಗಿ ಗೋಪುರದ ಕೆಳಗೆ ವಿವೇಕಾನಂದರ ಕಂಚಿನ ವಿಗ್ರಹ ನಿಂತ ನಿಲುವು ನೋಡುತ್ತ ನಿಂತರೆ ಮೈ ಮರೆಯುವಂತಿದೆ.  ತದೇಕ ಚಿತ್ತದಿಂದ ದಿಟ್ಟ ನಿಲುವಿನ ಮುಖದ ತೇಜಸ್ಸು ಅವರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.  8.6 ಅಡಿ ಎತ್ತರ 4.6ಅಡಿ ಎತ್ತರದ ವೇದಿಕೆಯ ಮೇಲಿರುವ ಮೂರ್ತಿಯನ್ನು  2-9-1970 ರಂದು ಆಗಿನ ರಾಷ್ಟ್ರಪತಿಗಳಾದ ಶ್ರೀ ವಿ.ವಿ.ಗಿರಿಯವರಿಂದ ಉದ್ಘಾಟನೆ ನೆರವೇರಿತು.

ಇಲ್ಲಿರುವ ನಿಶ್ಯಬ್ಧವಾದ ಧ್ಯಾನ ಮಂದಿರದಲ್ಲಿ ಪ್ರತಿ ದಿನ ಎರಡೂ ಹೊತ್ತು ಭಜನೆ  ನಡೆಯುತ್ತದೆ. ಪುಸ್ತಕ ಮಳಿಗೆಗಳೂ  ಇವೆ.

ಇಲ್ಲಿ ನಿರ್ಮಾಣಗೊಂಡ ತಮಿಳು ಕವಿ ಶ್ರೀ ತಿರುವಾಲ್ಲೂರವರ ಅತ್ಯಂತ ದೊಡ್ಡ ಪ್ರತಿಮೆ ಕನ್ಯಾಕುಮಾರಿಯಿಂದಲೆ ಗೋಚರಿಸುತ್ತದೆ.

ಈ ಊರಿನ ಉತ್ತರ ದಿಕ್ಕಿನಲ್ಲಿ ವಿಶ್ವನಾಥ ಸ್ವಾಮಿಯ ಚಿಕ್ಕ ಗುಡಿ, ಚಕ್ರ ತೀರ್ಥವೆಂಬ ಕೆರೆ ಸ್ಮಶಾನ, ಊರಿನ ಮಧ್ಯದಲ್ಲಿ ಸಂತ ಫ್ರಾಂಸಿಸ್ ಚರ್ಚ ಕೂಡಾ ಇದೆ.

ಕನ್ಯಾಕುಮಾರಿ ಯಾತ್ರಿಕರನ್ನು ಸೆಳೆಯುವುದು ಅಲ್ಲಿಯ ಸುತ್ತುವರಿದ ನೀಲ ಸಮುದ್ರ, ದೇವಾಲಯಗಳು, ಮಹನೀಯರ ಪ್ರತಿಮೆ, ಧ್ಯಾನ ಮಂದಿರ, ಅಲ್ಲಿರುವ ವ್ಯವಸ್ಥೆ, ಸೂರ್ಯಾಸ್ತ, ಸೂರ್ಯೋದಯ ಹೀಗೆ ಅನೇಕ ಕಾರಣಗಳು ಮತ್ತೆ ಮತ್ತೆ ಹೋಗಬೇಕೆನ್ನುವ ಅಸೆ ಹುಟ್ಟಿಸುವುದು ಖಂಡಿತ.

ಮಧ್ಯಾಹ್ನದ ಭೋಜನದ ಸಮಯವಾಗಿತ್ತು ಎಲ್ಲ ಪ್ರದೇಶ ವೀಕ್ಷಿಸಿ ವಾಪಸ್ ಕನ್ಯಾಕುಮಾರಿಗೆ ಬಂದಾಗ.  ನಂತರದ ಮುಂದಿನ ಕ್ಷೇತ್ರದತ್ತ ನಮ್ಮ ಪಯಣ ಶುರುವಾಗಿದ್ದು ಮದುರೈನತ್ತ.

ಶ್ರೀ ಕ್ಷೇತ್ರ ಮಧುರೈ.

ಈ ಕ್ಷೇತ್ರ ತಲುಪಿದಾಗ ಸಂಜೆ 3.40pm.  ಕನ್ಯಾಕುಮಾರಿಯಿಂದ 247 ಕಿ.ಮೀ. ದೂರವಿದ್ದು ದೇವಸ್ಥಾನದ ಬಾಗಿಲು ಸಾಯಂಕಾಲ ನಾಲ್ಕು ಗಂಟೆಗೆ ತೆಗೆಯುತ್ತಾರೆ.  ಬಿಗಿ ಸೆಕ್ಯುರಿಟಿಯಲ್ಲಿ ಚೆಕಿಂಗ್ ಮುಗಿಸಿ ದರ್ಶನ ಟಿಕೆಟ್ ಪಡದು ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕು.

ಪುರಾತನ ಕಾಲದ ಪಾಂಡ್ಯ ದೇಶದ ಕೇಂದ್ರ ಸ್ಥಳ ಮಧುರೈ.  ವೈಗೈ ನದಿಯ ತೀರದಲ್ಲಿ ಬೆಳೆದ ಮಹಾ ನಗರವಿದು.  ದೇವಿ ಮೀನಾಕ್ಷಿ ದೇವಿಯೊಂದಿಗೆ ಮಹಾದೇವನು ತನ್ನ ಭಕ್ತರಿಗಾಗಿ 64 ಲೀಲೆಗಳನ್ನು ಪ್ರದರ್ಶಿಸಿದ ನೆಲೆವೀಡಿದು. ಅಂಬರ ಚುಂಬಿತ ನಾಲ್ಕು ಗೋಪುರಗಳು ಎರಡು ಮೈಲಿ ದೂರದಿಂದಲೆ ಸ್ವಾಗತಿಸುತ್ತವೆ. ಮೊದಲನೆ ಸೇವೆ ಮೀನಾಕ್ಷಿಗೆ ಮೂಡಣ ದಿಕ್ಕಿನಿಂದ ಪ್ರವೇಶ. ಅಷ್ಟಶಕ್ತಿ ಮಂಡಲ, ವಿನಾಯಕ, ಸುಬ್ರಹ್ಮಣ್ಯ, ಇದರ ನಡುವೆ ಮೀನಾಕ್ಷಿ ಕಲ್ಯಾಣದ ಕಥಾ ರೂಪಕಗಳು ,ಒಳಗಡೆ ದೊಡ್ಡದಾಗಿ ನಿಂತಿರುವ ಎಂಟು ಕಂಬಗಳಲ್ಲಿ ಅಷ್ಟ ಶಕ್ತಿ ಶಿಲ್ಪ ಸೌಂದರ್ಯ, ತಿರುವಿಳೈಯಾಡಲ್ ಎಂಬ ಶಿವಲೀಲಾ ವಿಲಾಸದ ಚಿತ್ರಗಳು ತುಂಬಿದ ಈ ಮಂಟಪದಲ್ಲಿ ಧರ್ಮ ಚತುಷ್ಟರು, ದ್ವಾರ ಪಾಲಕರು ಕಾಣುತ್ತಾರೆ.

ಮುಂದೆ ಮೀನಾಕ್ಷಿ ನಾಯಕನ್ ಮಂಟಪದಲ್ಲಿ ಯಾಳ್ಳೀ ಎಂಬ ತೋರಣ ಶಿಲ್ಪ, ಕೆಳಗಡೆ ಚಿಕ್ಕ ಚಿಕ್ಕ ಶಿಲ್ಪವಿರುವ ಆರು ರೀತಿಯ ಕಂಬಗಳು, ಬೇಡ ಬೇಡತಿಯರ ಶಿಲ್ಪ, ಮಂಡಲದ ಪಶ್ಚಿಮದ ಕೊನೆಯಲ್ಲಿ ಹಿತ್ತಾಳೆಯ ಸಾವಿರದೆಂಟು ದೀಪ ಪ್ರಣತೆಗಳು ಕಣ್ಣು ತುಂಬುತ್ತವೆ.

ನಂತರದ ಕತ್ತಲೆಯ ಮಂಟಪ ಮುದಪಿಳ್ಳೈ ಭಿಕ್ಷಾಟನ ದೇವನ ಸೌಂದರ್ಯದಲ್ಲಿ ಮೋಹಿತರಾಗಿ ನಿಂತಿರುವ ದಾರುಕಾವನದ ಮುನಿಪತಿಯ ಪಕ್ಕದಲ್ಲಿ ಮೋಹಿನಿಯ ಮಂಟಪ.  ಇಲ್ಲಿಂದ ದಾಟಿದರೆ ಪೊಟ್ತ್ರಾಮರೈಕುಳಂ ಎಂಬ ಕೊಳ ಇಂದ್ರನು ಪೂಜೆಗಾಗಿ ಸ್ವರ್ಣ ಕಮಲಗಳನ್ನು ತಿರಿದನಂತೆ.  ಈ ಕೊಳವು ಉದ್ದ ಚೌಕಾಕಾರವಾಗಿ ಸುಂದರ ಮೆಟ್ಟಿಲುಗಳಿವೆ. ಸುತ್ತ ಕಬ್ಬಿಣದ ಬೇಲಿ ನೀರಿಗಿಳಿಯದಂತೆ ಕಾವಲಿದೆ.  ಉತ್ತರ ದಿಕ್ಕಿನ ತೀರದಲ್ಲಿರುವ ಕಂಬಗಳಲ್ಲಿ 24 ಪುರಾತನ ಮಹಾ ಕವಿಗಳ ಶಿಲಾ ವಿಗ್ರಹ ಕಂಡರೆ ಗೋಡೆಗಳಲ್ಲಿ ತಿರುವಿಳೈಯಾಡಲ್ ಪುರಾತನ ಲೀಲಾ ವಿಲಾಸಗಳನ್ನು ವರ್ಣ ಚಿತ್ರಗಳಲ್ಲಿ ಚಿತ್ರಿಸಲಾಗಿದೆ.  ಮೂಡುಗಡೆಯ ತೀರದಲ್ಲಿ ನಿಂತು ಅಮ್ಮನವರ ಆಲಯಗಳ ಸ್ವರ್ಣ ವಿಮಾನಗಳನ್ನು ದರ್ಶನ ಮಾಡಬಹುದು.

ಕೊಳದ ಪಶ್ಚಿಮ ಬದಿಯಲ್ಲಿ ಊಂಜಲ್ ಮಂಟಪ, ಉಯ್ಯಾಲೆ, ಆರುಪಡೈವೀಡು ಎಂಬ ಆರು ದೇವಾಲಯಗಳ ಚಿತ್ರಗಳು, ರಾಣಿ ಮಂಗಮ್ಮ ಮತ್ತು ಅಮಾತ್ಯ ರಾಮಪ್ಪಯ್ಯನ್ ರೂಪ ಶಿಲ್ಪಗಳಿವೆ.

ಊಂಜಲ್ ಮಂಟಪದ ಹತ್ತಿರ ಕಿಳಿಕ್ಕೂಡು ಮಂಟಪದಲ್ಲಿ ವಾಲಿ, ಸುಗ್ರೀವ ಪುರುಷಾಮೃಗ,ದ್ರೌಪತಿ ಮೇಲ್ಭಾಗದ ತೊಲೆಗಳಲ್ಲಿ ವಿನಾಯಕ,ಸುಬ್ರಹ್ಮಣ್ಯ, ಪರಮಶಿವರ ಬೇರೆ ಬೇರೆ ಭಂಗಿಯ ವರ್ಣ ಚಿತ್ರಗಳು ಕಣ್ಮನ ಸೆಳೆಯುತ್ತವೆ.  ಅಮ್ಮನವರ ನೇರಕ್ಕೆ ಎದುರಲ್ಲಿ ಕಲ್ಯಾಣ ವೈಭವ,ಮಕುಟೌಭಿಷೇಕದ ಭವ್ಯ ದೃಶ್ಯ ವರ್ಣ ಚಿತ್ರದಲ್ಲಿ ಆಕರ್ಷಕವಾಗಿವೆ.

ಮೀನಾಕ್ಷಿ ಆಲಯ. ಎರಡು ಪ್ರಾಕಾರಗಳಿವೆ.  ಎರಡನೆ ಪ್ರಾಕಾರದಲ್ಲಿ ಬಂಗಾರದ ಧ್ವಜಸ್ತಂಭ, ತಿರುಮಲೈ ನಾಯಕ ಮಂಟಪ, ವಿಘ್ನೇಶ್ವರ ಕೂಡಲ್ ಕುಮರರ ಸನ್ನಿಧಿ, ಎರಡು ದೊಡ್ಡ ದ್ವಾರ ಪಾಲಕರ ತಾಮ್ರದ ವಿಗ್ರಹ, ಅರುಣಗಿರಿನಾಥರ ಸ್ತೋತ್ರ ಕೊರೆಯಲ್ಪಟ್ಟಿದೆ.  ಇಲ್ಲಿಂದ ಭಕ್ತರು ಮೀನಾಕ್ಷಿ ದೇವಿಯ ಮಹಾಮಂಟಪವನ್ನು ಪ್ರವೇಶಿಸಬಹುದು.  ಇದೇ ಮೊದಲನೆ ಪ್ರಾಕಾರ. ಐರಾವತ, ವಿನಾಯಕ, ಕುಮರನ್ ಸನ್ನಿಧಿ ಶಯನ ಮಂದಿರಗಳಿವೆ. ಪಶ್ಚಿಮದಲ್ಲಿ ಅರ್ಧ ಮಂಟಪ ಗರ್ಭ ಗುಡಿಗಳಿರುತ್ತವೆ. ಗರ್ಭ ಗುಡಿಯೊಳಗೆ ಕೈಯಲ್ಲಿ ಗಿಳಿಯನ್ನೇರಿಸಿಕೊಂಡ ಹೂಚೆಂಡನ್ನು ಧರಿಸಿ ನಿಂತಿರುವ ದೇವಿ ಮೀನಾಕ್ಷಿ  ದರ್ಶನ.

ಅರ್ಚನೆಯನ್ನು ಮಾಡಿಸಿ ದೇವಿಯ ಅಡಿದಾವರೆಗೆ ನಮಸ್ಕರಿಸಿ ಪರವಶರಾಗುವಷ್ಟು ಮನಮೋಹಕ ನಿಂತ ಮೂರ್ತಿ ಆ ತಾಯಿ ಮೀನಾಕ್ಷಿ.  ಅಷ್ಟು ಹೊತ್ತು ಕೊಂಕಣ ಸುತ್ತಿ ಸುತ್ತಿ ಮೈಲಾರಕ್ಕೆ ಬಂದ ಆಯಾಸ ಕ್ಷಣ ಮಾತ್ರದಲ್ಲಿ ಕರಗಿ ದೇವಾಲಯದ ವೈಭೋಗ ಅಲ್ಲಿಯ ಶಿಲ್ಪ ಕಲೆ ಆ ತಾಯಿಯ ದರ್ಶನ ಬಂದಿದ್ದು ಸಾರ್ಥಕ ಭಾವನೆ ತನು ಮನದೊಳಗೆಲ್ಲ. ವಜ್ರ ವೈಢೂರ್ಯಗಳಿಂದ ಸರ್ವಾಲಂಕೃತ ದೇವಿ  ಕಳೆ ಕಳೆಯಾಗಿ ಎಣ್ಣೆ ದೀಪದ ಬೆಳಕಲ್ಲಿ ಕಂಗೊಳಿಸುತ್ತಾಳೆ.  ಸರತಿಯಲ್ಲಿ ಸಾಗುವಾಗ ತುಪ್ಪದ ದೀಪ, ದೇವಿ ದೀಪಕ್ಕೆ ಎಣ್ಣೆ ಎಲ್ಲವೂ ದೊರೆಯುತ್ತದೆ.  ಅವರವರ ಇಷ್ಟಾನುಸಾರ ಕಾಣಿಕೆ ಹರಕೆ ಸಲ್ಲಿಸಬಹುದು.

ಇಲ್ಲಿಂದ ಮುಂದೆ ಮುಕ್ಕುರುಣಿ ವಿಘ್ನೇಶ್ವರ ಎಂಟಡಿ ಎತ್ತರವಿರುವಿದ್ದು, ಬಗೆ ಬಗೆಯ ಶಿಲ್ಪಗಳಿರುವ ಮಂಟಪ, ಕಾಳಿಕಾ ದೇವಿ, ಶಿವನ ಊರ್ಧ್ವತಾಂಡವ, ಅಘೋರ ವೀರಭದ್ರ ಶಿಲ್ಪಗಳು ಒಮ್ಮೆ ಮೈ ನಡುಗುವಷ್ಟು ಬೃಹದಾಕಾರದಲ್ಲಿ ಕೆತ್ತಲಾಗಿದೆ.

ಮುಂದೆ ಸ್ವಾಮಿ ಸನ್ನಿಧಿಗೆ ಹೋಗುವ ದ್ವಾರದ ಎರಡೂ ಬದಿಯಲ್ಲಿ 12 ಅಡಿ ಎತ್ತರದ ದ್ವಾರಪಾಲಕರು, ತಿರುವಿಳೈಯಾಡಲ್ ಪೀಠ, ಮಂಟಪದ ಸುತ್ತ 63 ನಾಯನ್ಮಾರ್ಗಳೆಂಬ ಮಹಾ ಭಕ್ತರನ್ನೂ , ಸರಸ್ವತಿ ಗುಡಿ, ಉತ್ಸವ ಮೂರ್ತಿ,ಕಾಶೀ ವಿಶ್ವನಾಥ, ಭಿಕ್ಷಾಟನರ್, ಸಿದ್ದರು,ದುರ್ಗೆ ಇವರೆಲ್ಲರ ಗುಡಿಗಳಿವೆ.  ಕದಂಬ ವೃಕ್ಷ, ಕನಕ ಸಭೆ, ಯಾಗ ಶಾಲೆ, ರತ್ನ ಸಭೆ,ವನ್ನೀ ವೃಕ್ಷ, , ಭಾವಿ ಇವುಗಳನ್ನೆಲ್ಲ ಈ ಪ್ರಾಕಾರದಲ್ಲಿ ಕಾಣಬಹುದು.

ಇಲ್ಲಿಂದ ಆರು ಕಾಲು ಪೀಠ ದಾಟಿ ಬೆಳ್ಳಿಯಂಬಲದಲ್ಲಿ ನೃತ್ಯ ಭಂಗಿಯ ನಟರಾಜ, ಗಭ೯ಗುಡಿಯಲ್ಲಿ 8 ಆನೆಗಳು, 32 ಸಿಂಹಗಳು, 64 ಭೂತ ಗಣಗಳು ಈ ವಿಮಾನವನ್ನು ಹೊತ್ತುಕೊಂಡಿರುವಂತೆ ನಿರ್ಮಿಸಲಾಗಿದೆ.  ಗರ್ಭ ಗುಡಿಯೊಳಗೆ ಲಿಂಗ ರೂಪದ ಚೊಕ್ಕನಾಥ ಸ್ವಾಮಿಗೆ ನಮಿಸಿ ಧನ್ಯರಾಗುತ್ತೇವೆ.

ಇಲ್ಲಿಂದ ಕಂಬತ್ತಡಿ ಮಂಟಪದಿಂದ ಹೊರಗೆ ಬಂದು ದೇವಾಲಯದ ಉಳಿದ ಭಾಗ ವೀಕ್ಷಿಸಬಹುದು.

ಆಯಿರಕ್ಕಾಲ್ ಮಂಟಪ ಮೇಲ್ಭಾಗದಲ್ಲಿ 60 ಸಂವತ್ಸರ ಕೆತ್ತಿದ್ದು ಹಲವಾರು ಶಿಲ್ಪಗಳ ಕೆತ್ತನೆಯುಳ್ಳ 985 ಕಂಬಗಳಿದ್ದು ಯಾವ ಕೋನದಿಂದ ನೋಡಿದರೂ ನೇರವಾದ ಸಾಲಿನಲ್ಲಿರುವಂತೆ ನಿಲ್ಲಿಸಲ್ಪಟ್ಟಿರುವುದು ನೋಡುಗರು ಬೆರಗಾಗುವಂತೆ ಮಾಡುತ್ತದೆ.  ಮನ್ಮಥ, ಕಲಿ ಮೊದಲಾದ 20 ಅದ್ಭುತ ಶಿಲ್ಪಗಳು ಇಲ್ಲಿವೆ.  ಮುಂಗೈಯರ್ಕರಸಿ ಮಂಟಪದಲ್ಲಿ ಶಿವಲಿಂಗವಿದೆ.

ಮೀನಾಕ್ಷಿ ಸುಂದರೇಶ್ವರ ಆಲಯಗಳಿಗೆ ನಾಲ್ಕು ದೊಡ್ಡ ದೊಡ್ಡ ಗೋಪುರಗಳು ನಾಲ್ಕು ದಿಕ್ಕಿಗಿದ್ದು ಅದರಲ್ಲಿ ದಕ್ಷಿಣದ ಗೋಪುರ 160 ಅಡಿ ಎತ್ತರವಿದ್ದು 16ನೇ ಶತಮಾನದಲ್ಲಿ ಶೆಲ್ವರ್ ಚೆಟ್ಟಿಯಾರ್ ನಿರ್ಮಿಸಿದ್ದು ಸ್ವಲ್ಪ ಬಾಗಿದ ಹಾಗಿರುವುದೆ ಇದರ ವಿಶೇಷ.  154 ಅಡಿಗಳ ಎತ್ತರವಿರುವ ಉತ್ತರ ದಿಕ್ಕಿನ ಗೋಪುರದಿಂದ ದೇವಸ್ಥಾನಕ್ಕೆ ಮೊದಲು ಪ್ರವೇಶವಾದರೆ, ಪೂರ್ವ ದಿಕ್ಕಿನ ಗೋಪುರ 13ನೇ ಶತಮಾನದಾಗಿದ್ದು 153 ಅಡಿ ಎತ್ತರ, ಪಶ್ಚಿಮ ಗೋಪುರ 14ನೇ ಶತಮಾನದ್ದಾಗಿದೆ.

ಉತ್ತರ ದಿಕ್ಕಿನಲ್ಲಿ  5 ನಾದ ಸ್ತಂಭಗಳಿವೆ.   ಒಂದೊಂದು 22 ಚಿಕ್ಕ ಕಂಬಗಳನ್ನೊಳಗೊಂಡಿದೆ. ತಟ್ಟಿದರೆ ವಿಧವಿಧವಾದ ಸುನಾಧವನ್ನು ಹೊರಡಿಸುವುದು ಶಿಲ್ಪಿಯ ಅದ್ಭುತ ಕಲೆಯೇ ಸರಿ.  ದೇವಾಲಯದ ಹೊರಗಡೆ ಪುದು ಮಂಟಪ, ರಾಯ ಗೋಪುರ,ತಿರುಮಲೈ ನಾಯಕರ್ ಮಹಲು ಅನತಿ ದೂರದಲ್ಲಿ ವೀಕ್ಷಿಸಬಹುದು.

ಒಂದು ಸಾರಿ ಇಂದ್ರನು ಬ್ರಹ್ಮಹತ್ಯಾ ದೋಷ ಕಳೆದುಕೊಳ್ಳಲಿಕ್ಕಾಗಿ  ಕ್ಷೇತ್ರಾಟನೆ ಮಾಡುತ್ತಿರುವಾಗ ಇಲ್ಲಿಯ ಕದಂಬ ವನದಲ್ಲಿ ಸ್ವಯಂಭೂ ಲಿಂಗವನ್ನು ಪ್ರತಿಷ್ಠಾಪಿಸಲಾಗಿ ಅವನ ಪಾತಕ ದೋಷ ಪರಿಹಾರವಾಗಿ ಆನಂದಗೊಂಡು ವಿಮಾನದಲ್ಲಿ ತನ್ನ ಲೋಕಕ್ಕೆ ಹೋದನು.  ಅಂದಿನಿಂದ ಇಲ್ಲಿ ದೇವ ಪೂಜೆ ನಡೆಯುತ್ತಿದ್ದು ಕಾಲ ಕ್ರಮೇಣ ಬೆಳೆಯಿತೆಂದೂ ಇತಿಹಾಸ ಹೇಳುತ್ತದೆ. ಮದುರೈ ದೇವಾಲಯವು ಸ್ವಾಮಿಯ ಆಲಯ ಮತ್ತು ಇಂದ್ರ ವಿಮಾನ ಪ್ರಾಮುಖ್ಯತೆ ಪಡೆದಿದೆ.  3600 ವರ್ಷಗಳಿಗಿಂತ ಹಿಂದಿನದು.  7ನೇ ಶತಮಾನದಿಂದಲೂ ಬೆಳೆದುಕೊಂಡು ಬಂದು 12 ರಿಂದ 18 ನೇ ಶತಮಾನಗಳ ಮಧ್ಯದ 600 ವರ್ಷ ಕಾಲದಲ್ಲಿ ಅಭಿವೃದ್ಧಿಗೊಂಡು ಪೂರ್ತಿಯಾಗಿದೆ.

ಇಲ್ಲಿ ಪ್ರತಿ ತಿಂಗಳೂ ವೈಭವದಿಂದ ಉತ್ಸವಗಳನ್ನು ನಡೆಸುತ್ತ ಬಂದಿದ್ದಾರೆ.  ಒಟ್ಟಿನಲ್ಲಿ ಅತ್ಯದ್ಭುತವಾದ ಈ ದೇವಾಲಯ ನೋಡಲು ಅದೆಷ್ಟು ಸಮಯ ಮೀಸಲಿಟ್ಟರೂ ಸಾಲದು.  ಎಲ್ಲ ಅನುಕೂಲಗಳಿರುವ ಊರು ಈ ದೇವಸ್ಥಾನದ ಸೊಬಗು ಸವಿಯಲು ಒಮ್ಮೆ ತಾಯಿ ದರ್ಶನಕ್ಕೆ ಪಾತ್ರರಾಗಬೇಕು.

ಇವೆಲ್ಲ ಕ್ಷೇತ್ರ ದರ್ಶನದಿಂದ ಮನಸ್ಸಿಗೆ ಶಾಂತಿ,ಸಮಾಧಾನ,ನೆಮ್ಮದಿ ತುಂಬಿಕೊಂಡು ಬೆಂಗಳೂರಿನ ಮನೆ ಸೇರಿದಾಗ ಡಿಸೆಂಬರ್ 26ರ ಮಧ್ಯರಾತ್ರಿ ಕಳೆದಿತ್ತು.

-ಗೀತಾ ಹೆಗಡೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!