Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತು – 3

ಶುರುವಿನೆರಡು ಕಂತುಗಳಲ್ಲಿ ಶುಕಗಳ ಮುದ್ದು ಪುಟಗಳನ್ನು ನೋಡಿರುವಿರಿ. ಶುಕಲೋಕದ ಪ್ರೀತಿ, ಮಮಕಾರವನ್ನು ಉಂಡಿರುವಿರಿ. ನಾನೀಗ ಗಿಳಿಗಳ ಇನ್ನೊಂದು ಮುಖವನ್ನು ಪರಿಚಯಿಸುವೆ.

ಗಿಳಿಗಳಿಗೆ “ Flying Monkey ’’ ಎಂಬ ಹೆಸರುಂಟು. ನಿಜಕ್ಕೂ ಇವು ಹಾರುವ ಮಂಗಗಳೇ. ಮಂಗಗಳು ಸಾಮಾನ್ಯವಾಗಿ ತಮ್ಮ ಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ತಿನ್ನುವುದಿಲ್ಲ. ತಾವು ತಿನ್ನುವುದಕ್ಕಿಂತ ಮೂರು ಪಾಲು ಹಾಳು ಮಾಡುತ್ತವೆ. ತೆಂಗಿನ ತೋಟವಿರುವವರು ಮಂಗನಿಂದ ಆಗುವ ನೋವನ್ನು, ನಷ್ಟವನ್ನು ಅರಿಯಬಹುದು. ಗಿಳಿಗಳೂ ಹಾಗೆ, ತಮ್ಮ ಅಗತ್ಯಕ್ಕಿಂತ ಬಹು ಪಾಲು ಹಾಳು ಮಾಡುತ್ತವೆ. (ನಮ್ಮ ದೃಷ್ಟಿಯಲ್ಲಿ, ಆದರೆ ಅದೇನು ಉದ್ದೇಶವೋ ಸೃಷ್ಟಿಯಲ್ಲಿ!) ಒಂದು ಹಣ್ಣು ತಿನ್ನುವಾಗ ಹತ್ತು ಹಣ್ಣು ಕೆಳಗೆ ಹಾಕಿರುತ್ತದೆ. ಮಂಗಗಳು ಹೇಗೆ ಗುಂಪು ಗುಂಪಾಗಿ ತೋಟಕ್ಕೆ ದಾಳಿ ನಡೆಸುತ್ತವೆಯೋ ಹಾಗೆ ಗಿಳಿಗಳೂ ಕೂಡ. ಒಂದು ಗುಂಪಿನಲ್ಲಿ ಕನಿಷ್ಠ 20 ಹಕ್ಕಿಗಳಾದರೂ ಇರುತ್ತವೆ. ನಾ ಕಂಡಂತೆ ಭತ್ತದ ಕೊಯ್ಲಿನ ಸಮಯದಲ್ಲಿ 200-300 ಸಂಖ್ಯೆ ಕೂಡಾ ದಾಟುತ್ತವೆ. ಮುಸ್ಸಂಜೆ ಹೊತ್ತಿನಲ್ಲಿ ಒಂದೇ ಕಡೆ ಸಾವಿರಗಟ್ಟಲೆ ಸೇರುವುದೂ ಇದೆ. ಎಲ್ಲಾ ಹಕ್ಕಿ ಸಂತತಿಗಳು ಅವನತಿಯತ್ತ ಸಾಗುತ್ತಿದ್ದರೆ ಗಿಳಿಗಳು ಮಾತ್ರ ಸಂಖ್ಯೆಯಲ್ಲಿ ಏರುತ್ತಲೇ ಇವೆ. ಪೇಟೆಗಳಲ್ಲಂತೂ ಏನಿಲ್ಲದಿದ್ದರೂ ಗಿಳಿಗಳಿಗೆ ಕೊರತೆ ಇಲ್ಲ. ವಾಸಸ್ಥಾನ, ದೇವಸ್ಥಾನಗಳ ಸುತ್ತೆಲ್ಲ ಮಂಗಗಳು ಇದೇ ರೀತಿ ಹೌದಲ್ಲಾ? ಪಾರಂಪರಿಕ ಕಟ್ಟಡಗಳ ಸಂದು ಸಂದುಗಳಲ್ಲಿ ಈ ಗಿಳಿಗಳು ಸಂತಾನೋತ್ಪತ್ತಿ ಮಾಡುತ್ತವೆ ಮತ್ತು ಏನನ್ನೂ ಬಿಡದೆ ತಿಂದು ಹಾಕುತ್ತವೆ, ಹಾಳು ಮಾಡುತ್ತವೆ.

01

10

ನಾವು ಅಂದು ಸಾಕಿದ್ದ ಚೆಲುವಿಯ(ಗಿಳಿ) (link previous article) ಕಥೆಯನ್ನು ನೆನೆದು ಕೊಳ್ಳಿ. “ಗಿಳಿಗಳು ಹೊಟ್ಟೆ ಬಾಕಗಳೆಂದು ನಮಗೆ ತಿಳಿಯುತ್ತದೆ’’. ದಾಳಿಂಬೆ ಹಣ್ಣು ಇವಕ್ಕೆ ಬಲು ಇಷ್ಟವಾದುದರಿಂದ ಇವಕ್ಕೆ ದಾಡಿಮ-ಪ್ರಿಯ ಎಂದೇ ಹೆಸರುಂಟು. ದಾಳಿಂಬೆ ತೋಟಗಳಲ್ಲಂತೂ ಇವುಗಳ ಉಪಟಳ ತಾಳಲಾರದೆ ಇಡೀ ಜಮೀನಿಗೆ ಬಲೆಯನ್ನು ಹೆಣೆಯುತ್ತಾರೆ. ಇದರಿಂದ ಅನೇಕ ಗಿಳಿಗಳು ಸಾಯುತ್ತಿರುವುದನ್ನು ಆಗಾಗ ಪತ್ರಿಕೆಗಳಲ್ಲಿ ಗಮನಿಸಿರಬಹುದು. ಇನ್ನು ಮಾವಿನ ಹಣ್ಣಿನ ಸಮಯದಲ್ಲಿ ಮಾಲಿಕರು ಮಾವಿನ ಮರಗಳನ್ನು ಕಳ್ಳರಿಂದ ರಕ್ಷಿಸುವುದಕ್ಕಿಂತ ಹೆಚ್ಚು ಗಿಳಿಗಳನ್ನು ಓಡಿಸುವುದರಲ್ಲಿ ನಿರತರಾಗಿರುತ್ತಾರೆ. ಮಾವಿನ ಕಾಯಿಯೂ, ಎಲೆಯೂ ಹಸಿರಾಗಿ ಗಿಳಿಯನ್ನೇ ಹೋಲುವುದರಿಂದ ಅವು ಬಂದು ಹಣ್ಣನ್ನು ಮೇಯುವುದು ಕಾಣಿಸುವುದೇ ಇಲ್ಲ. ಸೀಬೆ(ಪೇರಳೆ) ನಮಗೆ ಲಭಿಸುವುದಕ್ಕಿಂತ ಹೆಚ್ಚು ಅವುಗಳಿಗೇ ದೊಡ್ಡ ಪಾಲು. ಸೀತಾಫಲ, ರಾಮಫಲ, ಲಕ್ಷ್ಮಣ ಫಲಗಳು ಇವಕ್ಕೆ ಬಲು ಪ್ರಿಯ.

03

ನಮ್ಮ ಗದ್ದೆಗೆ (ವಿಶೇಷವಾಗಿ ಜೋಳ,ನವಣೆ,ರಾಗಿ) ಬರುವ ಹಕ್ಕಿಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಳಿಗಳಿಗೆ ಸೇರುತ್ತದೆ. ಹಾಗಾಗಿ  ತೋಟಗಾರಿಕೆಯಲ್ಲಿ ಇದನ್ನು Pest ಎಂದು ಕರೆದರು. ಗದ್ದೆಯನ್ನು ನಿರ್ಲಕ್ಷ್ಯ ಮಾಡಿದರೆ ಒಂದು ಅಕ್ಕಿಯೂ ಸಿಗದಂತೆ ಖಾಲಿ ಮಾಡುವ ಸಾಮರ್ಥ್ಯ ಈ ಗಿಳಿಗಳಿಗಿವೆ. ಬತ್ತ, ರಾಗಿ, ಜೋಳ, ನವಣೆ, ಹಾರಕ, ಸಾಮೆ, ಬರಗು, ಕೊರ್ಲೆ, ಊದಲು, ನೀವು ಏನಾದರೂ ಹೆಸರಿಸಿ ಅದನ್ನು ತಿನ್ನಲು ಈ ಗಿಳಿಗಳು ಸಜ್ಜಾಗಿರುತ್ತವೆ. ಇನ್ನು ನಮ್ಮ ಪ್ರಕೃತಿಯ ಹೂತೋಟದಂತಿರುವ ಸೂರ್ಯಕಾಂತಿ ಗಿಳಿಗಳ ಅಚ್ಚುಮೆಚ್ಚು.  ಸೂರ್ಯಕಾಂತಿ ಎಣ್ಣೆಯನ್ನು ನೀವು ರುಚಿಸುವ ಮೊದಲು ದೊಡ್ಡ ಪಾಲು ಗಿಳಿಗಳಿಗೆ ಸಂದಿರುತ್ತದೆ. ಹೂವುಗಳ ರಾಜನಾದ ಗುಲಾಬಿ, ಸೇವಂತಿಗೆ, ಚೆಂಡು ಹೂವುಗಳು ಗಿಳಿಗಳಿಗೆ ಅಚ್ಚು ಮೆಚ್ಚು. ಕೊಬ್ಬು(Cholesterol) ಇಳಿಸಿಕೊಡುವ ಗಿಡ ಅಗಸೆ. ನಾವು ಕೊಬ್ಬು ಇಳಿಸುವುದಕ್ಕಿಂತ ಮೊದಲೇ ಅಗಸೆ ಹೂವುಗಳನ್ನು ತಿಂದು ತೇಗಿರುತ್ತವೆ ಈ ಮುದ್ದಿನ ಗಿಳಿಗಳು! ಇನ್ನು ನಮ್ಮ ತರಕಾರಿಗಳಾದ ಬೆಂಡೆ, ತೊಂಡೆ ಅಲಸಂಡೆಯೂ ಇವಕ್ಕೆ ಬಲು ಪ್ರಿಯ.

02

ಗಿಳಿಗಳು ಗಿಡದಿಂದ ಮಾತ್ರ ತಿನ್ನುತ್ತವೆ ಎಂದುಕೊಳ್ಳಬೇಡಿ. ಇವು ನಾವು ದಾಸ್ತಾನು ಹೂಡಿದ ಕಣಗಳಿಂದ, ಕಣಜದಿಂದಲೂ ಆಹಾರ ಹೊಡೆಯುತ್ತವೆ. ಜೋಳವನ್ನು ಕಠಾವು ಮಾಡಿ ಗುಡ್ಡೇ ಹಾಕಿದರೆ ಮರುದಿನದಿಂದ ಅಲ್ಲಿ ಬಂದು ತಿನ್ನಲು ಗಿಳಿಗಳು ಕಾಯುತ್ತಿರುತ್ತವೆ. ಚಲಿಸುವ ವಾಹನದಲ್ಲಿ ಧಾನ್ಯವಿದ್ದರೆ ಅಲ್ಲೂ ಇವು ಬಂದು ತಿಂದ ನಿದರ್ಶನಗಳಿವೆ. ಗೋಣಿಚೀಲದಲ್ಲಿರುವ ಭತ್ತವನ್ನು ಒಟ್ಟೆ ಮಾಡಿ ತಿನ್ನುವುದನ್ನು ನಾವು ಪೇಟೆಗಳಲ್ಲಿ  ಕಾಣಬಹುದು. ಈಗ ಹೇಳಿ ಇವು ಮುದ್ದಿನ ಗಿಣಿಗಳೇ?

05

ಗಿಳಿಗಳಿಂದ ಆಗುವ ಉಪಟಳವನ್ನು ರೈತರಿಗೆ ಪಟ್ಟಿ ಮಾಡಲು ಹೇಳಿದರೆ ಬಹುಷಃ ಅದೊಂದು ಮಹಾಪ್ರಬಂಧವಾಗಬಹುದು! ಬೆಳೆ ರಕ್ಷಣೆಗಾಗಿ ಗಿಳಿಗಳನ್ನು ಹೇಗೆ ಓಡಿಸುವುದು ಎಂದು ಎಲ್ಲರೂ ಚಿಂತಿಸುವಂತೆ ಆಗಿದೆಯಾದರೂ, ಗಿಳಿಗಳು ಯಾಕೆ ಹೀಗೆ ನಮ್ಮ ಆಹಾರ ಬೆಳೆಗಳಿಗೆ ಮುಗಿ ಬೀಳುತ್ತಿವೆ ಎಂದು ಯೋಚಿಸಲೂ ಇಂದು ಯಾರಿಗೂ ಪುರುಸೋತ್ತಿಲ್ಲ. ನಮ್ಮ ತೋಟದಲ್ಲಿ ದೊಡ್ಡದಾದ ಒಂದು ಕಮ್ರಾಕ್ಷಿ/ ಧಾರೆಪುಳಿ ( Averrhoa carambola) ಮರವಿದೆ. ವರ್ಷಕ್ಕೆರಡು ಬಾರಿ ಸಾವಿರಗಟ್ಟಲೆ ಹಣ್ಣೂ ಬಿಡುತ್ತದೆ. ಬಲು ಹುಳಿಯಾದ ಹಣ್ಣು. ನಾವದನ್ನು ಜೂಸ್,ಜ್ಯಾಮ್, ನೋವಿನೆಣ್ಣೆ, ಒಣಗಿಸಿದ ಹಣ್ಣು ಮಾಡಲು ಬಳಸುತ್ತೇವೆ. ಈ ಹಣ್ಣೂ ಬಲು ಹುಳಿಯಿರುವುದರಿಂದಾಗಿ ಯಾವ ಹಕ್ಕಿಯೂ, ಅಳಿಲೂ ಇದರತ್ತ ಸುಳಿಯುತ್ತಿರಲಿಲ್ಲ. ನಾವು ಎಷ್ಟು ಕೊಯಿದು ಬಳಸಿದರೂ, ಕೆಲವಾರು ಹಣ್ಣುಗಳು ಬಿದ್ದು ಕೊಳೆಯುವಷ್ಟು ಇಳುವರಿ ಈ ಕಮ್ರಾಕ್ಷಿ ಮರಕ್ಕೆ. ಕಳೆದ ನಾಲ್ಕು- ಐದು ವರ್ಷಗಳಿಂದ ಮೈಸೂರು ಪೇಟೆ ನಮ್ಮ ತೋಟದೆಡೆಗೆ ಬೆಳೆದುಕೊಂಡು ಬರುತ್ತಿದೆ, ಪರಿಣಾಮ ಎಲ್ಲೆಲ್ಲೂ ಗಿಡ ಮರಗಳ ಹನನ, ಹುಲ್ಲು ಮುಳ್ಳು ಕಳ್ಳಿಗಳ ಧಮನ! ಹಾಗಾಗಿ ಅಲ್ಲಲ್ಲೇ ಲಭ್ಯವಿರುತ್ತಿದ್ದ ಆಹಾರಕ್ಕೆ ಕೊರತೆ. ಇದರಿಂದಾಗಿ ಅತಿ ಹುಳಿಯಾದ, ತಿನ್ನಲ್ಲಿಕ್ಕೆ ಅಯೋಗ್ಯವಿದ್ದ ಕಮ್ರಾಕ್ಷಿಯೂ ಗಿಳಿಗಳಿಗೆ ಸಿಂಧುವಾಯಿತು! ಈ ಮೂರು ವರ್ಷಗಳಲ್ಲಿ ನಾವು ಕಮ್ರಾಕ್ಷಿಯನ್ನು ರಕ್ಷಿಸಲು ಮಾಡಿದ ಪ್ರಯತ್ನಗಳು ಅವೆಷ್ಟೋ… ಊಹೂ! ಯಾವುದೂ ಪರಿಣಾಮ ಬೀರಲಿಲ್ಲ. ನಾವೇನು ಮಾಡಿದರೂ ಗಿಳಿಗಳ ಹಸಿವಿನ ಮುಂದೆ ಅವು ಪರಿಣಾಮ ಕಾಣಲೇ ಇಲ್ಲ. ಗಿಳಿಗಳ ಹಸಿವು ಇಂಗಿಸುವುದು ಅಷ್ಟು ಸುಲಭವಲ್ಲ.

04

ಹಾಗಾದರೆ ಬೆಳೆ ರಕ್ಷಿಸುವುದು ಹೇಗೆ? ಗಿಳಿಗಳ ಹಸಿವನ್ನು ತಗ್ಗಿಸುವುದು ಹೇಗೆ? ಗಿಳಿಗಳು ನಮ್ಮ ಬೆಳೆಗಳಲ್ಲದೆ ಏನನ್ನು ತಿನ್ನುತ್ತವೆ ಎಂಬುದರ ಅಧ್ಯಯನವನ್ನು ಸ್ಥಳೀಯವಾಗಿ ಮಾಡಿದರೆ ತಕ್ಕ ಮಟ್ಟಿನ ಪರಿಹಾರ ಲಭ್ಯ. ನಮ್ಮ ಸುತ್ತಮುತ್ತ ನನ್ನ ಐದು ವರ್ಷದ ಅನುಭವದಲ್ಲಿ ಗಿಳಿಗಳು ಬೇಲಿಗೆಂದು ನೆಟ್ಟ ಭೂತಾಳೆಯ ಹೂವು, ಕಾಯಿಗಳನ್ನು, ರಸ್ತೆ ಬದಿಯಲ್ಲಿ ಹೇರಳವಾಗಿ ಲಭ್ಯವಿರುವ ನಾಯಿ ತುಳಸಿಯ ಬೀಜಗಳನ್ನು, ದಶಂಬರದಿಂದ ಮಾರ್ಚ್’ವರೆಗೆ ಲಭ್ಯವಿರುವ ಮುತ್ತುಗ, ಬೂರುಗದಂಥ ಹೂವುಗಳನ್ನು, ತದನಂತರ ಬರುವ ಅವುಗಳ ಹಣ್ಣುಗಳನ್ನು, ಆಕಾಶ ಮಲ್ಲಿಗೆಯ ಹೂವುಗಳನ್ನು, ಒಣ ಪ್ರದೇಶದಲ್ಲಿ ಹೇರಳವಾಗಿ ಬರುವ ಎಲಚಿ/ಬುಗರಿ ಹಣ್ಣುಗಳನ್ನು, ಈಗೀಗ ಎಲ್ಲೆಲ್ಲೂ ಬೆಳಸುತ್ತಿರುವ ಸಿಂಗಾಪುರ ಚೆರ್ರಿ ಹಣ್ಣುಗಳನ್ನು, ಇದಲ್ಲದೆ ಚೂರಿ ಹಣ್ಣು, ಕೊಟ್ಟೆ ಹಣ್ಣು ಹೀಗೆ ಇತರೆ ಮುಳ್ಳು ಗಿಡದ ಹಣ್ಣುಗಳನ್ನು ಯಾವುದೇ ಹುಲ್ಲಿನ ಬೀಜಗಳನ್ನು ಇವು ಬಲು ಸಂತೋಷದಿಂದ ತಿನ್ನುತ್ತವೆ. ನಮ್ಮ ಮೈಸೂರು ಪ್ರಾಂತ್ಯದಲ್ಲಂತೂ ಅಭಿವೃದ್ಧಿಯ ಹೆಸರಿನಲ್ಲಿ ಈ ಮೇಲೆ ಹೆಸರಿಸಿದ ಎಲ್ಲಾ ಗಿಡಗಳನ್ನು ಹೇಳ ಹೆಸರಿಲ್ಲದಂತೆ ಮಾಡಿಯಾಗಿದೆ. ಪರಿಣಾಮ ನಮ್ಮ ತೋಟದ ಕಮ್ರಾಕ್ಷಿ ಹಣ್ಣಿಗೂ ತಟ್ಟಿದೆ!

06

07

09

08

ಇನ್ನೂ ಅಲ್ಲಿ ಇಲ್ಲಿ ಇರುವ ತೋಟಗಳಾದರೋ ಬರೀ ತೆಂಗು, ಕಂಗು. ಸ್ವಂತಕ್ಕೆಂದು ಕೂಡಾ ಹಣ್ಣುಗಳನ್ನು ಬೆಳಸದ, ಬಳಸದ ಈ ಕಾಲ ಘಟ್ಟದಲ್ಲಿ ಹಕ್ಕಿಗಳಿಗಾಗಿ ಪೇರಳೆ, ಸೀತಾಫಲ, ಮಾವು, ಹಲಸು, ಪುನಾರ್ಪುಳಿ, ಜಾರಿಗೆ, ಅಬ್ಳುಕದಂಥಾ ಹಣ್ಣಿನ ಗಿಡ ಬೆಳಸಿ ಎಂದು ಹೇಳಿದರೆ ಕೇಳದಷ್ಟು ಪೇಟೆಯ ಗದ್ದಲದಲ್ಲಿ ನಾವು ಕಿವುಡಾಗಿದ್ದೇವೆ. ಆರ್ಥಿಕ ಏಕಬೆಳೆ ಪದ್ಧತಿಯೇ ವೈಜ್ಞಾನಿಕ ಮತ್ತು ಶ್ರೇಷ್ಠವೆಂದು ಸಮರ್ಥಿಸುತ್ತಿದ್ದೇವೆ. ವಿದ್ಯಾಭ್ಯಾಸ ಮನುಷ್ಯನ ಸ್ವಾರ್ಥವನ್ನು ಹೆಚ್ಚಿಸುತ್ತಿದೆಯೇ ವಿನಃ ಇತರೆ ಪ್ರಾಣಿ ಪಕ್ಷಿಗಳೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ ಮತ್ತು ಈ ಭೂಮಿಯನ್ನು ಬದುಕಿಸುವ ಕರ್ತವ್ಯವಿದೆ ಎಂಬುದನ್ನು ಮರೆಸಿದೆ. ಶುಕಲೋಕವು ಸಂತೋಷದಿಂದಿದ್ದು ಆಹಾರ ಎಲ್ಲೆಲ್ಲೂ ಲಭ್ಯವಿದ್ದರೆ ಆಗ ನಿಜವಾದ ಅಭಿವೃದ್ಧಿ, ಆಗಲೇ ನಿಜವಾದ ಆಹಾರ ಭದ್ರತೆ! ಆಗಲೇ ವಿಜ್ಞಾನಕ್ಕೂ ತತ್ತ್ವಜ್ಞಾನಕ್ಕೂ ಅರ್ಥ.

ಚಿತ್ರಲೇಖನ : ಡಾ. ಅಭಿಜಿತ್ ಎ.ಪಿ.ಸಿ

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!