ಪ್ರಚಲಿತ

ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆಯುವುದು ಸರಿಯೇ??

ಅನಾಣ್ಯೀಕರಣವಾಗಿ ಒಂದು ತಿಂಗಳ ಬಳಿಕ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನಾನು ಸಂಸತ್ತಿನಲ್ಲಿ ಮಾತನಾಡಿದರೆ ಭೂಕಂಪನವಾಗಬಹುದು ಮತ್ತು ಅನಾಣ್ಯೀಕರಣ ಭಾರತದ ಇತಿಹಾಸದಲ್ಲೇ ಬಹಳ ದೊಡ್ಡ ಹಗರಣ ಎಂಬ ಹೇಳಿಕೆಯನ್ನು ಕೊಡುತ್ತಾರೆ. ದೇಶದೆಲ್ಲೆಡೆ ರಾಹುಲ್ ಅವರ ಈ ಭೂಪಂಕನದ ಹೇಳಿಕೆಯ ಟ್ರೋಲ್ ಹರಿದಾಡತೊಡಗಿತು. ಇಷ್ಟಕ್ಕೇ ಸುಮ್ಮನಾಗದೆ ಕೆಲದಿನಗಳ ನಂತರ ಮೋದಿಯವರ ಮೇಲೆ ಆಪಾದನೆಯೊಂದನ್ನು ರಾಹುಲ್ ಮಾಡಿದರು. ಪ್ರಧಾನಿ ಮೋದಿಯವರು ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಮತ್ತು ನನ್ನ ಬಳಿ ಇದಕ್ಕೆ ಪೂರಕವಾದ ದಾಖಲೆಗಳಿವೆ ಅಂತ ಹೇಳುತ್ತಾರೆ. ಬಹುತೇಕ ದೇಶವಾಸಿಗಳು ರಾಹುಲ್  ಅವರ ಈ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೂ ಒಂದು ಮಟ್ಟಕ್ಕೆ ಕೂತೂಹಲದಿಂದ ರಾಹುಲ್ ಕಡೆಗೆ ನೋಡಿದ್ದರು. ರಾಹುಲ್ ಬಳಿ ಮೋದಿಯವರ ಬಗ್ಗೆ ಅದೇನು ಸಾಕ್ಷಾಧಾರಗಳಿರಬಹುದು ಎಂದು ಯೋಚಿಸಿದ್ದಂತೂ ಸುಳ್ಳಲ್ಲ.

ಗುಜರಾತಿನ ಮೆಹನ್ಶಾದಲ್ಲಿ ನಡೆದ ಸಮಾವೇಶದಲ್ಲಿ ರಾಹುಲ್, ಮೋದಿಯವರು ಬಿರ್ಲಾ ಗ್ರೂಪಿನಿಂದ ಕಿಕ್ ಬ್ಯಾಕ್ ಪಡೆದಿದ್ದಾರೆ ಅಂತ ಆರೋಪ ಮಾಡುತ್ತಾರೆ ಮತ್ತು ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡುತ್ತಾರೆ. ಅಸಲಿಗೆ ರಾಹುಲ್ ಮಾಡಿದ ಆರೋಪಗಳು ಹಳೇ ಬಾಟಲಿಗೆ ಹೊಸ ಮದ್ಯವನ್ನು ತುಂಬಿಸಿದ ಹಾಗೆ ಇತ್ತು! ಯಾಕೆಂದರೆ  ಅದಾಗಲೇ ಕೇಜ್ರಿವಾಲ್ ಮತ್ತು ಪ್ರಶಾಂತ್ ಭೂಷಣ್ ಇದೇ ದಾಖಲೆಯ ಹುರುಳನ್ನಿಟ್ಟುಕೊಂಡು ಮೋದಿಯವರನ್ನು ಹಣಿಯಲು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಮುಖಭಂಗಕ್ಕೊಳಗಾಗಿದ್ದರು. ನ್ಯಾಯಮೂರ್ತಿ ಕೇಹರ್ ಮತ್ತು ಮಿಶ್ರಾ ಅವರನ್ನೊಳಗೊಂಡ ಪೀಠ ಕೇವಲ ನೀವು ಆಪಾದನೆ ಮಾಡಿದ ಕೂಡಲೇ ದೊಡ್ಡ ಹುದ್ದೆಯ ಮೇಲಿರುವ ವ್ಯಕ್ತಿಯೊಬ್ಬರ ಮೇಲೆ ತನಿಖೆಗೆ ಆದೇಶಿಸಲಾಗದು. ನೀವು ತಂದಿರುವ ದಾಖಲೆಯನ್ನು ಮುಂದಿಟ್ಟು ನಾವು ಪ್ರಧಾನಿಯವರ ವಿರುದ್ಧ ತನಿಖೆಗೆ ಆಗ್ರಹಿಸಲು ಸಾಧ್ಯವಿಲ್ಲ. ಒಂದು ವೇಳೆ ತನಿಖೆಗೆ ಆಗ್ರಹಿಸಿದರೆ ನಾಳೆ ಇನ್ನೊಬ್ಬ ಬಂದು ನಾನೂ ಪ್ರಧಾನಿಯವರಿಗೆ ದುಡ್ಡು ಕೊಟ್ಟಿದ್ದೆ ಅನ್ನೋ ಬಾಲಿಶ ಆರೋಪ ಮಾಡಬಹುದು ಹಾಗೂ ಸಹಾರ ಕಂಪನಿಯ ದಾಖಲೆಗಳನ್ನು ನಂಬಲಸಾಧ್ಯ, ಅವರ ದಾಖಲೆಗಳು ಯಾವಾಗ ಸರಿಯಾಗಿತ್ತು? ನೀವು ಅವರ ದಾಖಲೆಯ ಮೇಲೆ ನಂಬಿಕೆಯಿರಿಸಿ ಈ ಕೇಸನ್ನು ದಾಖಲಿಸಿದ್ದೀರಾ ? ಗುರುತರವಾದ ಆರೋಪ ಮಾಡುವಾಗ ಪೂರಕವಾದ ದಾಖಲೆಗಳನ್ನು ತನ್ನಿ ಅಂತ ಛೀಮಾರಿ ಹಾಕಿತ್ತು. ನೀವು ತಂದಿರುವ ದಾಖಲೆಗಳು ಅನಧಿಕೃತ ಮತ್ತು ಕಾಲ್ಪನಿಕ ದಾಖಲೆಗಳು ಅಂತ ಮುಖಕ್ಕೆ ಹೊಡೆದಂತೆ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಸಾರಾಸಗಟಾಗಿ ಹೇಳಿದ್ದರು. ಇಷ್ಟಾದರೂ  ರಾಜಕೀಯವಾಗಿ ಲಾಭ ಪಡೆಯಲೆಂದೇ ರಾಹುಲ್ ಮತ್ತದೇ ಹಳೇ ಕ್ಯಾಸೆಟ್ ತೇಲಿ ಬಿಟ್ಟರು.

ಅಷ್ಟಕ್ಕೂ ಕೇಜ್ರಿವಾಲ್, ರಾಹುಲ್ ಮತ್ತಿತರರು ಮೋದಿಯವರ ಮೇಲೆ ಆರೋಪ ಮಾಡುತ್ತಿರುವ ಸೋಕಾಲ್ಡ್ ದಾಖಲೆಗಳು ಸಿಕ್ಕಿದ್ದು ಐಟಿ ವಿಭಾಗವು ಆದಿತ್ಯ ಬಿರ್ಲಾ ಮತ್ತು ಸಹಾರಾ ಸಂಸ್ಥೆಗಳಿಗೆ ದಾಳಿ ಮಾಡಿದಾಗ. ಸಿಎಂ ಗುಜರಾತ್, ಸಿಎಂ ದೆಹಲಿ ಅಲ್ಲದೇ ಇನ್ನೂ ಕೆಲವೊಂದು ಹೆಸರು ಕಂಪ್ಯೂಟರ್ ಫೈಲ್’ನಲ್ಲಿ ದಾಖಲಾಗಿದ್ದು ದಾಳಿ ವೇಳೆ ಪತ್ತೆಯಾಗಿತ್ತು. ಸಿಎಂ ಗುಜರಾತ್ ಎಂದು ಮೋದಿಯವರ ಬಗ್ಗೆ ಉಲ್ಲೇಖ ಮಾಡಿದ್ದು ಅನ್ನುವುದು ಕಾಂಗ್ರೆಸ್ ಮತ್ತು ಕೇಜ್ರಿವಾಲರ ಆರೋಪ. ಒಂದು ವೇಳೆ ಸಿಎಂ ಗುಜರಾತ್ ಅನ್ನುವುದು ಮೋದಿ ಅವರನ್ನು ಸೂಚಿಸಿ ಬರೆದದ್ದು ಅಂತಾನೇ ಅಂದುಕೊಳ್ಳೋಣ, ಸಿಎಂ ದೆಹಲಿ ಅಂತಾನೂ ಅದೇ ದಾಖಲೆಯಲ್ಲಿ ಉಲ್ಲೇಖವಾಗಿದೆಯಲ್ಲ?. ಸಿಎಂ ದೆಹಲಿ ಅಂದರೆ ಆಗಿನ ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರು ಅಂತ  ಬಿಡಿಸಿ ಹೇಳುವುದೇನೂ ಬೇಕಿಲ್ಲ ತಾನೇ?. ಆದರೆ ಶೀಲಾ ಅವರ ಬಗ್ಗೆ ತುಟಿಪಿಟಿಕ್ ಅನ್ನದೇ ಕೇವಲ ಮೋದಿ ವಿರುದ್ಧ ಆರೋಪ ಮಾಡುತ್ತಿರುವುದೇಕೆ.? ನೆನಪಿರಲಿ, ಶೀಲಾ ಅವರು ಕಾಂಗ್ರೆಸ್ಸಿನ ಉತ್ತರಪ್ರದೇಶದ ಮುಖ್ಯಮಂತ್ರಿ ಅಭ್ಯರ್ಥಿ! ಒಂದು ವೇಳೆ ಶೀಲಾರವರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆ ಮಾಡಿ ಮೋದಿಯವರ ಮೇಲೆ ಈ ಆರೋಪವನ್ನು ಮಾಡಿದ್ದರೆ ದೇಶದ ಜನ ರಾಹುಲ್ ಅವರನ್ನು ಸ್ವಲ್ಪವಾದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರೇನೋ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಬಿರ್ಲಾ ಕಂಪನಿಯ ಮೇಲೆ ಐಟಿ ದಾಳಿಯಾಗಿದ್ದು ಯುಪಿಎ ಸರ್ಕಾರದ ಕಾಲಾವಧಿಯಲ್ಲಿ. ಆವಾಗಲೇ ಮೋದಿ ಮತ್ತು ಉಳಿದ ಯಾರೆಲ್ಲಾ ಹೆಸರು ದಾಖಲೆಗಳಲ್ಲಿ ಪತ್ತೆಯಾಗಿತ್ತೋ ಅವರ ಮೇಲೆ ತನಿಖೆಗೆ ಆದೇಶಿಸಬೇಕಾಗಿತ್ತಲ್ಲ?. ಹೋಗಲಿ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಮೋದಿ ವಿರುದ್ಧ ಕ್ಯಾಂಪೇನ್’ಗೆ ಬಳಸಬಹುದಿತ್ತಲ್ಲ?. ಅದೂ ಹೋಗಲಿ ಬಿಡಿ, ಮೋದಿ ಅಧಿಕಾರಕ್ಕೆ ಬಂದ ಮೇಲಾದರೂ ಅದರ ಬಗ್ಗೆ ಮಾತನಾಡಬಹುದಿತ್ತಲ್ಲ?. ಏಕಾಏಕಿ ಅನಾಣ್ಯೀಕರಣದ ಸಂದರ್ಭವೇ ಏಕೆ ಬಳಸಿಕೊಳ್ಳುತ್ತಿರುವುದು. ಉತ್ತರ ತುಂಬಾ ಸಿಂಪಲ್. ಅನಾಣ್ಯೀಕರಣವಾಗಿ ದೇಶದ ಜನ ಮೋದಿಯ ವಿರುದ್ಧ ದಂಗೆ ಏಳುತ್ತಾರೆ ಅನ್ನೋ ಹುಸಿ ನಂಬಿಕೆಯಲ್ಲಿದ್ದವು ವಿರೋಧ ಪಕ್ಷಗಳು. ಆದರೆ ಜನಗಳೆಲ್ಲ ಮೋದಿಗೆ ಬೆಂಬಲವಾಗಿ ನಿಂತು ಮೋದಿ ವರ್ಚಸ್ಸು ಇನ್ನೂ ವೃದ್ಧಿಸುತ್ತಿದೆ ಅನ್ನುವುದು ಖಾತ್ರಿಯಾದಾಗ ರೋಸಿ ಹೋದ ಕೇಜ್ರಿವಾಲ್ ಕಿಕ್ ಬ್ಯಾಕ್ ಪ್ರಕರಣದ ಬಗ್ಗೆ ದೆಹಲಿ ವಿಧಾನಸಭೆಯಲ್ಲಿ ಮಾತನಾಡುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸುಪ್ರೀಂ ಕೊರ್ಟಿನಲ್ಲಿ ಮುಖಭಂಗಕ್ಕೊಳಗಾಗುತ್ತಾರೆ. ಮತ್ತೀಗ ರಾಹುಲ್ ಸರದಿ!

ಯುಪಿಎ ಸರಕಾರದ ಬಹುದೊಡ್ಡ ಹಗರಣಗಳಲ್ಲೊಂದಾದ ವಿವಿಐಪಿಗಳ ವಿಮಾನ ಖರೀದಿ ಕುರಿತಾದ ಆಗಸ್ಟಾ ವೆಸ್ಟ್ ಲ್ಯಾಂಡ್ ಹಗರಣಕ್ಕೆ ಸಂಬಂಧಿಸಿದಂತೆ ಇಟಲಿಯ ಕೋರ್ಟಿನ ವಿಚಾರಣೆಯ ವರದಿಯಲ್ಲಿ ಸಿಗ್ನೋರಾ ಗಾಂಧಿ, ಎಪಿ(ಅಹ್ಮದ್ ಪಟೇಲ್), ಮತ್ತು ಮಾಜಿ ವಾಯುಸೇನಾ ಮುಖ್ಯಸ್ಥ ತ್ಯಾಗಿ ಅವರ ಹೆಸರು ದಾಖಲೆಯೊಂದರಲ್ಲಿ ಇದೆ ಮತ್ತು ಆ ದಾಖಲೆ ಕೋರ್ಟಿಗೆ ಸಲ್ಲಿಕೆಯಾಗಿದೆ ಅಂತ ಹೇಳುತ್ತದೆ. ಆ ಸಮಯದಲ್ಲಿ ಟೈಮ್ಸ್ ನೌ ಸುದ್ದಿವಾಹಿನಿ ಕಾಂಗ್ರೆಸ್ ಪಕ್ಷಕ್ಕೆ ಪ್ರಶ್ನೆಯ ಮೇಲೆ ಪ್ರಶ್ನೆ ಹಾಕಿದಾಗ ಆ ವಾಹಿನಿಗೆ ಬಹಿಷ್ಕಾರ ಹಾಕುತ್ತೆ ಕಾಂಗ್ರೆಸ್ ಪಕ್ಷ! ಮತ್ತು ಕೇವಲ ಪೇಪರೊಂದರಲ್ಲಿ ಸಿಗ್ನೋರಾ ಗಾಂಧಿ ಎಂದು ಹೆಸರು ಪ್ರಸ್ತಾಪವಾದಾಗ ಸೋನಿಯಾ ಗಾಂಧಿ ಅವರು ಆಗಸ್ಟಾ ಹಗರಣದಲ್ಲಿ ಪಾಲುದಾರರು ಎಂದು ಹೇಗೆ ಹೇಳಬಹುದು ಎಂದು ಕಾಂಗ್ರೆಸ್ ಪಕ್ಷ ಕೇಳಿತ್ತು.  ಈಗ ಕಾಂಗ್ರೆಸ್ ಪಕ್ಷದ ಲಾಜಿಕ್ ಹಿಡಿದು ಹೊರಟರೆ ಮೋದಿಯವರ ಹೆಸರು ನೇರವಾಗಿ ಕಾಗದ ಮತ್ತು ಕಂಪ್ಯೂಟರ್ ದಾಖಲೆಯಲ್ಲಿ ಕಂಡು ಬಂದಿಲ್ಲ. ಕೇವಲ ಸಿಎಂ ಗುಜರಾತ್ ಅಂತ ಬರೆದಿದ್ದಕ್ಕೆ ಮೋದಿಯವರ ಹೆಸರು ಎಳೆದು ತರಬಹುದೇ? ಆಯ್ತು ಕಾಂಗ್ರೆಸ್ ಪಕ್ಷದ ಲಾಜಿಕ್ ಬಿಟ್ಟಾಕೋಣ. ಸಿಎಂ ಗುಜರಾತ್ ಅಂತ ಬರೆದಿದ್ದನ್ನು ಪರಿಗಣಿಸಬಹುದಾದ್ರೆ, ಸಿಎಂ ದೆಹಲಿ, ಜಯಂತಿ ನಟರಾಜನ್ ಹೆಸರು ಬರೆದಿದ್ದನ್ನೂ ಪರಿಗಣಿಸಬೇಕಲ್ಲವೇ?? ಅಡ್ವಾಣಿಯವರ ಹೆಸರು ಹವಾಲಾ ಡೈರಿಯಲ್ಲಿ ಬಂದ ಕೂಡಲೇ ರಾಜೀನಾಮೆ ನೀಡಿದ್ದರು. ಅದರಂತೆ ಮೋದಿಯವ್ರೂ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅನ್ನುವುದು ಕಾಂಗ್ರೆಸ್ ಪಕ್ಷದ ಇನ್ನೊಂದು ವಾದ. ಈ ವಾದವನ್ನೇ ಹಿಡಿದು ಹೋದ್ರೆ, ಇದು ನ್ಯಾಶನಲ್ ಹೆರಾಲ್ಡ್ ಹಗರಣದಲ್ಲಿ ಬೇಲ್ ಪಡೆದ ರಾಹುಲ್ ಮತ್ತು ಸೋನಿಯಾಗಾಂಧಿಗೂ ಅನ್ವಯಿಸಬೇಕಲ್ಲವೇ? ಕಾಂಗ್ರೆಸ್ ಪಕ್ಷದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಲ್ಲವೇ?

ಉತ್ತರ ಪ್ರದೇಶ ಚುನಾವಣೆಯಲ್ಲಿ ಎರಡಂಕಿಯ ಸ್ಥಾನಗಳು ಬಂದರೆ ಸಾಕು ಅನ್ನೋ ಪರಿಸ್ಥಿತಿಗೆ ತಲುಪಿರುವ ಕಾಂಗ್ರೆಸ್’ಗೆ ಸಧ್ಯದ ಸಮಾಧಾನದ ಸಂಗತಿಯೆಂದರೆ ರಾಹುಲ್ ಒಬ್ಬ ವಿರೋಧ ಪಕ್ಷದ ನಾಯಕನಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿರುವುದು. ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನೂ ಕಿಕ್ ಬ್ಯಾಕ್ ಪಡೆದಿದ್ದಾರೆ ಅಂತ ಆರೋಪಿಸಿ ಷಡ್ಯಂತ್ರ ನಡೆಸಲಾಯಿತು. ಈಗ ಮೋದಿಯವರನ್ನೂ ಕಿಕ್ ಬ್ಯಾಕ್ ಖೆಡ್ಡಾಕ್ಕೆ ಬೀಳಿಸಿ ತನ್ನ ರಾಜಕೀಯ ಅಸ್ತಿತ್ವವನ್ನು ಉಳಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ.  ಸುಳ್ಳನ್ನು ನೂರು ಬಾರಿ ಹೇಳಿದರೆ ಜನ ನಂಬಲೂಬಹುದು ಅನ್ನುವ ಲೆಕ್ಕಾಚಾರ ವಿರೋಧ ಪಕ್ಷದವರದ್ದಾಗಿರಬಹುದು. ತಪ್ಪು ಯಾರು ಮಾಡಿದರೂ ತಪ್ಪೇ. ಪ್ರಧಾನಿಯನ್ನೂ ಸೇರಿಸಿ. ಇಲ್ಲಿ ಪ್ರಶ್ನೆ ಇರುವುದು ಸೂಕ್ತವಾದ ದಾಖಲೆಗಳನ್ನಿಟ್ಟು ಆರೋಪ ಮಾಡಿದರೆ ಏನೋ ಸರಿ, ಆದರೆ ಖುದ್ದು ತನ್ನ ಮೇಲೆ ಬೆಟ್ಟದಷ್ಟು ಹಗರಣಗಳ ಸರಮಾಲೆಯನ್ನಿಟ್ಟು ಇನ್ನೊಬ್ಬರ ಮೇಲೆ ನಿರಾಧಾರ ಆರೋಪ ಮಾಡುವುದು ಗಾಜಿನ ಮನೆಯಲ್ಲಿ ಕುಳಿತು ಕಲ್ಲು ಹೊಡೆದಂತಲ್ಲವೇ??

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!