Featured ಅಂಕಣ

ಬಿಟ್ಟಿ ಗಂಜಿಗಾಗಿ ಬೇಕೆ ಇಂಥ ಭಂಡ ಬಾಳು?

ನಮ್ಮಲ್ಲಿ ಅನುದಿನವೂ ನಕಲಿ ಹೋರಾಟಗಾರರು,ಖೊಟ್ಟಿ ವಿಚಾರವಾದಿಗಳು, ಸ್ವಯಂಘೋಷಿತ ಸಾಕ್ಷಿಪ್ರಜ್ಞೆಗಳು ನಾಯಿಕೊಡೆಯಂತೆ ಹುಟ್ಟಿಕೊಳ್ಳುತ್ತಿದ್ದಾರೆ. ಇವರೆಲ್ಲರ ಅಜೆಂಡಾ ಒಂದೇ: ಸದ್ಯಕ್ಕೆ ಅಧಿಕಾರದಲ್ಲಿರುವ ಬಿಜೆಪಿ ಸರಕಾರವನ್ನು ಯೇನಕೇನ ಪ್ರಕಾರೇಣ ಉರುಳಿಸಬೇಕು; ಅಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಪರಂಗಿಮುಖಿ ಸೋನಿಯಾ ಗಾಂಧಿಗೆ ಅಧಿಕಾರದ ಗದ್ದುಗೆ ಕೊಡಿಸಬೇಕು. ಬಿಜೆಪಿಯನ್ನು ಕೆಳಗಿಳಿಸುವ ಸುಲಭ ಉಪಾಯ ಏನು? ಆ ಪಕ್ಷಕ್ಕೆ ಈ ಹಿಂದಿನ ಕಾಂಗ್ರೆಸ್ ಸರಕಾರಗಳು ಮೆತ್ತಿರುವ ಕೋಮುವಾದಿ ಬಣ್ಣವನ್ನು ತೊಳೆದು ಹೋಗದಂತೆ ನೋಡಿಕೊಂಡು,ಇನ್ನಷ್ಟು ದಪ್ಪದ ಮತ್ತೊಂದು ಪದರ ಹಚ್ಚುವುದು. ಅದರ ಅಂಗವಾಗಿಯೇ ಸಮಾಜವಾದಿ ಪಕ್ಷದ ಆಡಳಿತವಿದ್ದರೂ ಉತ್ತರ ಪ್ರದೇಶದಲ್ಲಿ ನಡೆದ ಅಖ್ಲಾಕ್‍ನ ಹತ್ಯೆಯ ಕಳಂಕವನ್ನು ಕೇಂದ್ರ ಸರಕಾರದ ಮುಖಕ್ಕೆ ಮೆತ್ತಲಾಯಿತು. ತೃಣಮೂಲ ಕಾಂಗ್ರೆಸ್‍ನ ಅಧಿಕಾರವಿದ್ದರೂ ಪಶ್ಚಿಮ ಬಂಗಾಳದಲ್ಲಿ ಹಿಂದೂ-ಮುಸ್ಲಿಂ ಕೋಮುದಳ್ಳುರಿಯ ಹೊಗೆಯನ್ನು ಮೋದಿಯತ್ತ ಊದಲಾಯಿತು. ಕಾಂಗ್ರೆಸ್‍ನ ಅಧಿಕಾರವಿದ್ದ ಕರ್ನಾಟಕದಲ್ಲಿ ನಡೆದು ಹೋದ ಡಾ. ಕಲ್ಬುರ್ಗಿ ಕೊಲೆಯ ಪಾಪವನ್ನು ಮೋದಿಯ ಸರಕಾರಕ್ಕೆ ಅಂಟಿಸಿ ದೇಶಾದ್ಯಂತ ಗಂಜಿ ಕೇಂದ್ರಗಳನ್ನು ತಿಂಗಳುಗಟ್ಟಲೆ ಚಾಲೂ ಇಡಲಾಯಿತು. ಅಖ್ಲಾಕ್‍ನ ಕೊಲೆಯ ಹೊಣೆಯನ್ನು ಇದುವರೆಗೆ ಯಾರಾದರೂ ವಹಿಸಿಕೊಂಡಿದ್ದಾರೆಯೇ? ಇಲ್ಲ. ಅದರ ತನಿಖೆ ಪೂರ್ತಿಯಾಗಿ ತಪ್ಪಿತಸ್ಥರು ಯಾರೆಂಬುದಾದರೂ ಪತ್ತೆಯಾಗಿದೆಯೇ? ಅದೂ ಇಲ್ಲ. ಬಿಡಿ,ಕಲ್ಬುರ್ಗಿಯವರ ಕೊಲೆ ಪ್ರಕರಣವನ್ನು ಮುಂದುವರಿಸಲು ದುಡ್ಡಿನ ಅಡಚಣೆ ಎಂದು ಸಿದ್ದರಾಮಯ್ಯನ ಸರಕಾರ ಕೈ ಚೆಲ್ಲಿ ಕೂತಿದೆ. ಯಾವ ಎಡಬಿಡಂಗಿ ಬುದ್ಧಿಜೀವಿಗಾದರೂ ರಾಜ್ಯ ಸರಕಾರವನ್ನು ಎದುರು ಹಾಕಿಕೊಂಡು ಪ್ರಶ್ನಿಸುವ ಛಾತಿ ಇದೆಯೇ? ಇಲ್ಲ. ಕೊಲೆಯ ತನಿಖೆ ಇನ್ನೂ ಬಗೆ ಬಗೆಯ ಕಾರಣಗಳಿಗಾಗಿ ಕುಂಟುತ್ತ ಸಾಗಿದೆಯೆಂದ ಮೇಲೆ ಅದರಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ಮುಖವಾಣಿ ಬುದ್ಧಿಜೀವಿಗಳ ಕೈವಾಡವೇ ಇದೆಯೆಂಬ ಸಂದೇಶ ಹೊಮ್ಮುತ್ತದಲ್ಲವೆ?ಕಲ್ಬುರ್ಗಿಯವರು ಅತ್ತ ಬಂದೂಕಿನಿಂದ ಸಿಡಿದುಬಂದ ಗುಂಡಿಗೆ ನಿಂತು ನೆಲಕ್ಕೊರಗಿದ್ದರಷ್ಟೇ. ಇತ್ತ ಬರಗೂರು ರಾಮಚಂದ್ರಪ್ಪ ಎಂಬ ಕಾಂಗ್ರೆಸ್ ಸಾಹಿತಿ, ಆ ಕೊಲೆಯನ್ನು ಇಂತಿಂಥವರೇ ಮಾಡಿದ್ದಾರೆಂಬ ಅಂತಿಮ ತೀರ್ಪು ನೀಡಲು ಟಿವಿ ಚಾನೆಲುಗಳಿಗೆ ಫೋನ್ ಹಚ್ಚಿ ಕೂತಾಗಿತ್ತು. ಈ ಉಪಕಾರಕ್ಕೆ ಋಣಸಂದಾಯವೆಂಬಂತೆ ಅವರೀಗ ರಾಯಚೂರಿನಲ್ಲಿ ನಡೆವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು!

ಎರಡೂವರೆ ವರ್ಷಗಳೇ ಉರುಳಿ ಹೋದರೂ ಬಿಜೆಪಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಯಾವ ಪ್ರಯತ್ನವೂ ಯಶ ಕಾಣದೆ ಹೋದದ್ದರಿಂದ ತೀವ್ರ ಚಡಪಡಿಕೆಗೆ ಸಿಲುಕಿರುವ ಕಾಂಗ್ರೆಸ್ ಪಕ್ಷ ಇದೀಗ ದಲಿತರನ್ನು ಮುಂದಿಟ್ಟುಕೊಂಡು ಬಿಜೆಪಿಗೆ ಕೋಮುವಾದಿಯ ಪಟ್ಟ ಕಟ್ಟಲು ಟೊಂಕ ಕಟ್ಟಿ ನಿಂತಿದೆ. ಇಷ್ಟು ದಶಕಗಳ ಕಾಲ ಕಾಂಗ್ರೆಸ್‍ನ ಹೆಸರಲ್ಲಿ ಅಕ್ಕಿ ಬೇಳೆ ಸಂಪಾದಿಸಿಕೊಂಡ ಒಂದಷ್ಟು ಆಸ್ಥಾನ ವಿದ್ವಾಂಸರು ಕಳೆದ ಕೆಲ ತಿಂಗಳುಗಳಿಂದ ಪುಂಖಾನುಪುಂಖವಾಗಿ ಕತೆ-ಕಾದಂಬರಿಗಳನ್ನು ಸತ್ಯವೆಂಬ ಹೆಸರಲ್ಲಿ ಹೊಸೆದೂ ಹೊಸೆದು ಮಾರುಕಟ್ಟೆಗೆ ಬಿಡುತ್ತಿದ್ದಾರೆ. ಮೊನ್ನೆಯಷ್ಟೇ ವಿಶ್ವಾಸಾರ್ಹ ಪತ್ರಿಕೆಯಲ್ಲಿ ಒಬ್ಬ ಕಾಂಗ್ರೆಸ್ ಸಾಹಿತಿ ಬರೆದುಕೊಂಡಿದ್ದ ಸಾಲುಗಳನ್ನು ನೋಡಿ: “ಈ ಹೊತ್ತಿನ ಭಾರತವು ಒಂದು ಬಗೆಯ ಭ್ರಮೆ ಮತ್ತು ಉನ್ಮಾದಗಳಲ್ಲಿ ನರಳುತ್ತಿದೆ. ಹಲವು ರೀತಿಯ ಭ್ರಾಮಕಗಳನ್ನು ದೇಶದ ತುಂಬಾ ತೇಲಿಬಿಟ್ಟು,ದೇಶದ ಜನರನ್ನು ಹಿಂದೆಂದೂ ಕಂಡಿರದ ರೀತಿಯಲ್ಲಿ ವ್ಯವಸ್ಥಿತವಾಗಿ ವಂಚಿಸಲಾಗುತ್ತಿದೆ. ಇದರಿಂದ ದೇಶದ ವಾಸ್ತವ ಸಮಸ್ಯೆಗಳು ತೆರೆಮರೆಗೆ ಸರಿದಿವೆ. ನಾಡಿನಾದ್ಯಂತ ದಲಿತರ ಮತ್ತು ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ಬಡವ ಮತ್ತು ಶ್ರೀಮಂತರ ನಡುವಣ ವ್ಯತ್ಯಾಸ ಇನ್ನಷ್ಟು ಹೆಚ್ಚಾಗಿ,ಅಪಾಯದ ಅಂಚಿಗೆ ತಲುಪಿದೆ” – ಹೀಗೆ ಯಾವುದೇ ಲಂಗು ಲಗಾಮಿಲ್ಲದೆ ಅತಿಸಾರ ಭೇದಿಯಂತೆ ಇಲ್ಲವೇ ಹೋರಿ ಉಚ್ಚೆ ಹುಯ್ಯುತ್ತ ಹೋದಂತೆ ಥಾನುಗಟ್ಟಲೆ ಬರೆದುಕೊಂಡು ಹೋಗಬಹುದು. ತಾನು ಬರೆದ ಯಾವ ಮಾತಿಗೂ ಪುರಾವೆ, ಸಾಕ್ಷಿ, ದಾಖಲೆ ಒದಗಿಸಬೇಕಾದ ಜರೂರತ್ತಿಲ್ಲ. ಬರೆದು ಯಾರನ್ನಾದರೂ ಎಚ್ಚರಿಸುವ, ಆಗಿರುವ ತಪ್ಪುಗಳನ್ನು ಸರಿಪಡಿಸುವ ಹೊಣೆಗಾರಿಕೆಯನ್ನೇನೂ ಹೊರಬೇಕಿಲ್ಲವಲ್ಲ! ಇಷ್ಟಿಷ್ಟು ಬರೆದರೆ ಇಂತಿಂಥ ಕಡೆಗಳಲ್ಲಿ ಈ ಬಗೆಯ ಗಂಜಿ ಸಿಗುತ್ತದೆಂಬುದು ಖಾತ್ರಿಯಾದರೆ ಸಾಕು! ಯಾವ್ಯಾವ ದೊಂಬರಾಟಗಳನ್ನಾಡಿದರೂ ಕೇಂದ್ರದ ಸರಕಾರ ಅಲುಗಾಡುವುದಿಲ್ಲವೆಂಬುದು ಖಾತರಿಯಾದ ಮೇಲೆ ಈ ಬಗೆಯ ಪಿಷ್ಟ ವಿಸರ್ಜನೆ ಎಡಪಂಥೀಯ ವಲಯದಲ್ಲಿ ಅಸಾಧ್ಯವೆನ್ನುವಷ್ಟು ಮಟ್ಟಿಗೆ ಹೆಚ್ಚಿವೆ. ಕಾಂಗ್ರೆಸ್ ಸರಕಾರಗಳಿಂದ ಕಾಲಕಾಲಕ್ಕೆ ನೀರು-ನೆರಳು ಸಂಪಾದಿಸಿದ ಗಿರೀಶ ಕಾರ್ನಾಡ,ಚಂದ್ರಶೇಖರ ಕಂಬಾರ, ದೇವನೂರು ಮಹಾದೇವ,ಚಂದ್ರಶೇಖರ ಪಾಟೀಲ, ಕುಂ. ವೀರಭದ್ರಪ್ಪ,ಬರಗೂರು ರಾಮಚಂದ್ರಪ್ಪ ಮುಂತಾದ ಸಾಹಿತಿಗಳ ಜೊತೆಜೊತೆಗೆ ಚಿಕ್ಕಾಸಿನ ಮೌಲ್ಯವಿಲ್ಲದ ಕೆ. ಮರುಳಸಿದ್ದಪ್ಪ, ದಿನೇಶ್ ಅಮೀನ್‍ಮಟ್ಟು,ಪುರುಷೋತ್ತಮ ಬಿಳಿಮಲೆ, ಕೆ.ಎಸ್. ಭಗವಾನ್,ಗೌರಿ ಲಂಕೇಶ್ ಮುಂತಾದ ನಾಲಾಯಕ್ ಬರಹಗಾರರು ಪಾಪ, ಕಾಂಗ್ರೆಸ್‍ನ ಗಂಜಿ ಋಣ ತೀರಿಸುವ ಕೊನೆಯ ಪ್ರಯತ್ನದಲ್ಲಿ ಇನ್ನಿಲ್ಲದಂತೆ ತೊಡಗಿಕೊಂಡಿದ್ದಾರೆ.

ಒಂದಾನೊಂದು ಕಾಲವಿತ್ತು. ಸಾಹಿತಿಗಳು, ಕವಿಗಳು,ಪತ್ರಕರ್ತರು ಎಂದರೆ ಜನಸಾಮಾನ್ಯರು ಭಯಮಿಶ್ರಿತ ಭಕ್ತಿಯಲ್ಲಿ ನೋಡುತ್ತಿದ್ದರು. ಯಾರಾದರೊಬ್ಬರ ವಿಚಾರವಾದಿ ಸಾಹಿತ್ಯ ಕೃತಿ ಹೊರಬಂದರೆ ಅದನ್ನು ಕಣ್ಣಿಗೊತ್ತಿಕೊಂಡು ಓದಿ ಅರ್ಥೈಸಿಕೊಳ್ಳಲು ಯತ್ನಿಸುವ ಓದುಗ ವರ್ಗವಿತ್ತು. ನೀಷೆ, ಸಾತ್ರ್ರೆ, ಕಾರ್ಲ್ ಮಾಕ್ರ್ಸ್, ಸ್ಟಾಲಿನ್, ಮಾವೋ,ನೆರೂಡ ಎನ್ನುತ್ತ ಒಂದಕ್ಕೊಂದು ಸಂಬಂಧವಿಲ್ಲದ ಹತ್ತಾರು ಹೆಸರುಗಳನ್ನು ಒಂದರ ಮೇಲೊಂದರಂತೆ ತಮ್ಮ ಬರಹಗಳಲ್ಲಿ ತಂದರಂತೂ ಮುಗಿದೇಹೋಯಿತು, ಅಂಥ ಮಹಾತ್ಮರನ್ನು ನಡೆದಾಡುವ ವಿಶ್ವಕೋಶಗಳೆಂದು ಜನ ಗೌರವಿಸಿ ತಲೆ ಬಾಗುತ್ತಿದ್ದರು. ಸಾಹಿತಿಗಳು ಬರೆದಿರುವಂತೆಯೇ ಪ್ರಪಂಚ ನಡೆಯುತ್ತಿದೆಯೆಂದು ಜನಸಾಮಾನ್ಯರು ತಿಳಿದಿದ್ದರು. ಯಾಕೆಂದರೆ ಲೋಕ ವ್ಯವಹಾರವನ್ನು ಖುಲ್ಲಂಖುಲ್ಲಾ ತಿಳಿಸುವ ಸಾಮಾಜಿಕ ಜಾಲತಾಣಗಳಾಗಲೀ, ವೆಬ್ ಪತ್ರಿಕೆಗಳಾಗಲೀ ಇರಲಿಲ್ಲವಲ್ಲ. ಇದ್ದದ್ದೊಂದೇ ಸರಕಾರದ ಕಪಿಮುಷ್ಟಿಯಲ್ಲಿದ್ದ ದೂರದರ್ಶನ. ಹಾಗಾಗಿ,ಜನಾಭಿಪ್ರಾಯವನ್ನು ರೂಪಿಸುವ ಸುಲಭಮಾರ್ಗವಾಗಿ ಕಾಂಗ್ರೆಸ್ ಸರಕಾರ ಬುದ್ಧಿಜೀವಿಗಳನ್ನು ಬಳಸಿಕೊಂಡಿತು. ಹಿಟ್ಲರ್’ನಿಗೆ ಒಬ್ಬ ಗೊಬೆಲ್ಸ್ ಇದ್ದರೆ ಇಲ್ಲಿ ಕಾಂಗ್ರೆಸ್ ಸರಕಾರಕ್ಕೆ ನೂರಾರು ಗೊಬೆಲ್ಸ್’ಗಳು ಹುಟ್ಟಿಕೊಂಡರು. ಇವರು ಹೇಳಿದ್ದೇ ವೇದವಾಕ್ಯವಾಯಿತು. ಸರಕಾರಕ್ಕೆ ಸಹಾಯ ಮಾಡುವ ಕತೆಗಳನ್ನು ಹೆಣೆದು ಜನಾಭಿಪ್ರಾಯ ರೂಪಿಸಿದ ಬುದ್ಧಿಜೀವಿಗಳನ್ನು ವಿವಿಧ ನಿಗಮ-ಸಮಿತಿಗಳಿಗೆ, ಅಕಾಡೆಮಿಗಳಿಗೆ ತುರುಕಿ ಸಾಕುವ ಕೆಲಸ ನಡೆಯಿತು. ಕಾಲಕಾಲಕ್ಕೆ ಪ್ರಶಸ್ತಿ-ಪುರಸ್ಕಾರಗಳನ್ನು ಕೊಟ್ಟು ಅವರನ್ನು ಸಂತುಷ್ಟಗೊಳಿಸುವ ಜಾಣ್ಮೆಯನ್ನು ಸರಕಾರ ಮೆರೆಯಿತು. ಅದರ ಹೊರತಾಗಿ ಬುದ್ಧಿಜೀವಿಗಳು ವಿದೇಶ ಪ್ರವಾಸ ಮಾಡುವ, ಸ್ಕಾಲರ್‍ಶಿಪ್ ಹೆಸರಲ್ಲಿ ವರ್ಷಾನುಗಟ್ಟಲೆ ಕೂಳೆ ಹೊಡೆಯುವ ಸೌಲಭ್ಯವನ್ನೂ ಸಂಪಾದಿಸಿದರು. ಒಟ್ಟಾರೆ ಹೇಳಬೇಕೆಂದರೆ, ದೇಶದ ಜನರ ಅಭಿಪ್ರಾಯವನ್ನು ಸರಕಾರದ ಇಚ್ಛೆಯಂತೆ ತಿರುಗಿಸಬಲ್ಲ ಬಲಾಢ್ಯರು ಎಂಬ ಕಾರಣಕ್ಕೆ ಬುದ್ಧಿಜೀವಿಯೆಂಬ ದಂಡಪಿಂಡ ಪರಂಪರೆ ಭಾರತದಲ್ಲಿ ಹುಲುಸಾಗಿ ಬೆಳೆಯಿತು.

ನಮಗೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಭಾರತೀಯವಾದದ್ದೆಲ್ಲ ಕೀಳು ಎಂಬ ಮನಸ್ಥಿತಿಯಲ್ಲಿ ಹಲವರಿದ್ದರು. ಯಾರು ಒಪ್ಪಲಿ ಬಿಡಲಿ,ರಾಜಾರಾಮ್ ಮೋಹನ್ ರಾಯರಿಂದ ಹಿಡಿದು ಜವಹರ್ ಲಾಲ್ ನೆಹರೂವರೆಗೂ ಹಲವಾರು ದೊಡ್ಡ ಹೆಸರಿನ ವ್ಯಕ್ತಿಗಳೆಲ್ಲ ಗುಪ್ತವಾಗಿಯಾದರೂ ಬಿಳಿಸಂಸ್ಕøತಿಯ ಆರಾಧಕರಾಗಿದ್ದರು. ಅವರಲ್ಲಿ ಹೆಚ್ಚಿನವರಿಗೆ, ಭಾರತೀಯರಿಗೆ ತಮ್ಮ ನೆಲವನ್ನು ತಾವಾಗಿ ಆಳುವ ಛಾತಿ, ಬುದ್ಧಿವಂತಿಕೆಗಳಿಲ್ಲ. ಏನಿದ್ದರೂ ಪರಂಗಿಗಳ ಕೈಯಲ್ಲಿ ಆಳಿಸಿಕೊಳ್ಳಲಿಕ್ಕೇ ಹುಟ್ಟಿದ ಬಡಪಾಯಿಗಳು ಎಂಬ ಅನ್ನಿಸಿಕೆಯೇ ಇತ್ತು. ಹಾಗಾಗಿ ಭಾರತವನ್ನು ತುಚ್ಛೀಕರಿಸಿ ವಿಮರ್ಶಿಸುವ ಪಾಶ್ಚಾತ್ಯ ಚಿಂತಕರ ಎಡಬಿಡಂಗಿ ಬರಹಗಳಿಗೆ ಇವರೆಲ್ಲ ಆತುಕೊಂಡರು. ತನ್ನ ವ್ಯಾಸಂಗದ ಬಹುಭಾಗವನ್ನು ಪಾಶ್ಚಾತ್ಯ ನೆಲದಲ್ಲಿ ಪೂರೈಸಿಕೊಂಡ ಅಂಬೇಡ್ಕರ್ ಕೂಡ ಓದಿದ್ದು ಬಿಳಿಯರು ಬರೆದ ಭಾರತೀಯತೆಯ ಚಿತ್ರಣವನ್ನೇ. ಆದರೆ ತಾನು ಭಾರತದ ನಾಡಿಮಿಡಿತವನ್ನು ಅತ್ಯಂತ ಸಮರ್ಥವಾಗಿ ಅರ್ಥೈಸಿಕೊಂಡಿದ್ದೇನೆಂಬ ಭ್ರಮೆಯಲ್ಲಿ ಅವರು ವೇದಗಳಲ್ಲಿ ಜಾತೀಯತೆ ಕಂಡರು; ಮನುಸ್ಮøತಿಯನ್ನು ನಿಷೇದಾತ್ಮಕ ಎಂದು ಭಾವಿಸಿದರು; ವರ್ಣ ಮತ್ತು ಜಾತಿಗಳ ಬಗ್ಗೆ ತನ್ನದೇ ಆದ ತಪ್ಪು ಸಿದ್ಧಾಂತಗಳನ್ನು ರೂಪಿಸಿಕೊಳ್ಳುತ್ತ ಹೋದರು. ಒಂದೇ ಒಂದು ಉದಾಹರಣೆ ಕೊಡುವುದಾದರೆ, ವಿದೇಶೀಯರು ಹುಟ್ಟಿಸಿದ ಆರ್ಯ-ದ್ರಾವಿಡ ಕಲ್ಪನೆಯನ್ನೇ ಆ ನಂತರದವರೆಲ್ಲ ಕುರುಡಾಗಿ ಒಪ್ಪಿಕೊಂಡು ಕನಿಷ್ಠ ಇನ್ನೂರು ವರ್ಷಗಳ ಕಾಲ ಭಾರತದಲ್ಲಿ ತಪ್ಪು ಇತಿಹಾಸ ಬರೆದರು. ಅಂಥ ದುರಂತಗಳು ಅದೆಷ್ಟು ಗಾಢವಾಗಿ ನಮ್ಮ ಮನಸ್ಸುಗಳ ಆಳಕ್ಕೆ ಇಳಿದಿದೆಯೆಂದರೆ, ಆರ್ಯರ ಆಕ್ರಮಣದ ಸಿದ್ಧಾಂತ ಸಂಪೂರ್ಣ ನಿರಾಧಾರಿತವೆಂದು ವೈಜ್ಞಾನಿಕವಾಗಿ ಸಾಧಿತವಾದ ಮೇಲೂ ಇರ್ಫಾನ್ ಹಬೀಬ್, ರೊಮಿಲಾ ಥಾಪರ್ ಮೊದಲಾದವರು ಅದನ್ನು ಒಪ್ಪಿಕೊಳ್ಳಲು ಸುತಾರಾಂ ಸಿದ್ಧರೇ ಇಲ್ಲ! ಯಾವುದೇ ಸಿದ್ಧಾಂತ ತಪ್ಪೆಂದು ನಿರೂಪಿಸಲ್ಪಟ್ಟಾಗ ತಮ್ಮ ದೋಷವನ್ನು ತಿದ್ದಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವಿಲ್ಲದೆ ಈ ಎಡಪಂಥೀಯ ಇತಿಹಾಸಕಾರರು ತಾವು ನಂಬಿದ ಮಿಥ್ಯೆಗಳಿಗಾಗಿ ವೈಜ್ಞಾನಿಕ ಆಧಾರಗಳನ್ನು ಅಲ್ಲಗಳೆಯುವ ಮಟ್ಟಕ್ಕೆ ಹೋಗುತ್ತಿದ್ದಾರೆ!

ಮೊದಮೊದಲಿಗೆ ಕಾಂಗ್ರೆಸ್ ಬೆಳೆಸಿದ ಬುದ್ಧಿಜೀವಿಗಳಲ್ಲಿ ಪಂಡಿತರಿದ್ದರು ನಿಜ. ನೆಹರೂರವರ ಕಮ್ಯುನಿಸಂ ಧೋರಣೆಯಿಂದಾಗಿ ಸ್ವಾತಂತ್ರ್ಯಾನಂತರ ರಷ್ಯಾ ನಮ್ಮನ್ನು ಹತ್ತಿರ ಬಿಟ್ಟುಕೊಂಡಿತು. ಎರಡನೇ ಮಹಾಯುದ್ಧದ ಬಳಿಕ ಜಗತ್ತಿನ ಪೂರ್ವ ಭಾಗದಲ್ಲಿ ಪ್ರಬಲ ರಾಷ್ಟ್ರವಾಗಿ ಬೆಳೆಯುವ ಉದ್ದೇಶವಿದ್ದ ರಷ್ಯಾ ಭಾರತವನ್ನು ತನ್ನ ಬುಟ್ಟಿಯಲ್ಲಿಟ್ಟು ಜೋಪಾನ ಮಾಡಬಯಸಿದ್ದು ಅನಿರೀಕ್ಷಿತವೇನಲ್ಲ. ಅಮೆರಿಕಾ ಖಂಡಕ್ಕೆ ಪ್ರತಿಸ್ಪರ್ಧಿಯಾಗಿ ಬೆಳೆಯುವ ಆಶಯವಿದ್ದ ರಷ್ಯಾ ತನ್ನ ಸುತ್ತಮುತ್ತಲಿನ ಹಲವು ದೇಶಗಳಿಗೆ ಕಮ್ಯುನಿಸಂ ಬೋಧಿಸಿತು. ಭಾರತದ ಹಲವು ವಿಶ್ವವಿದ್ಯಾಲಯಗಳು ಕಮ್ಯುನಿಸಮ್ಮಿನ ಕಮ್ಮಾರಸಾಲೆಗಳಾದವು. ದೇಶದೊಳಗೆ ಹಲವು ಪ್ರಕಾಶನ ಸಂಸ್ಥೆಗಳಿಗೆ ರಷ್ಯಾ ಹಲವು ಕೋಟಿ ರುಪಾಯಿಗಳನ್ನು ದೇಣಿಗೆಯಾಗಿ ನೀಡಿ ದಂಡಿಯಾಗಿ ಕಮ್ಯುನಿಸಂ ಸಾಹಿತ್ಯವನ್ನು ಪ್ರಕಟಿಸಲು ಅನುವು ಮಾಡಿಕೊಟ್ಟಿತು. ಒಂದು ರೀತಿಯಲ್ಲಿ ಜ್ಞಾನಸ್ಫೋಟದಂತೆ ನಡೆದ ಈ ಕಾರ್ಯಕ್ರಮದಿಂದ ಕಮ್ಯುನಿಸಂ ವಿಚಾರಧಾರೆಗೆ ಸರ್ವಮಾನ್ಯತೆ ಲಭ್ಯವಾಯಿತು. ವಿದೇಶೀ ಚಿಂತಕರ ಹೆಸರು ಹೇಳಿಕೊಂಡು ಸರಕಾರದ ಪಡಸಾಲೆಗಳಲ್ಲಿ ಓಡಾಡುವ ದಪ್ಪಕಟ್ಟಿನ ಕನ್ನಡಕದ ಪ್ರಭೃತಿಗಳೆಲ್ಲ ವಿಶ್ವಗುರುಗಳು ಎಂಬ ಭ್ರಮೆಯನ್ನು ಜನಸಾಮಾನ್ಯರು ಬೆಳೆಸಿಕೊಂಡರು. ಅಂಥದೊಂದು ವೈಚಾರಿಕ ತೊಗಲು ಬೆಳೆಸಿಕೊಂಡರೆ ಬೇಗಬೇಗನೆ ಯಶಸ್ಸಿನ ಮೆಟ್ಟಿಲು ಹತ್ತಬಹುದೆಂಬ ಸೂಕ್ಷ್ಮವನ್ನು ಅರಿತ ಅವಕಾಶವಾದಿಗಳು ಕೂಡಲೇ ಕಮ್ಯುನಿಸಂ ಪ್ರಚಾರಕರಾಗಿಬಿಟ್ಟರು. ಸರಕಾರದ ತುತ್ತೂರಿ ಊದುವುದು ತಮ್ಮ ನೈತಿಕತೆಗೊಂದು ಕಪ್ಪುಚುಕ್ಕೆ ಎಂದು ಅವರಿಗೆ ಅನಿಸಲೇ ಇಲ್ಲ. ಈ ಎಲ್ಲ ಬೆಳವಣಿಗೆಗಳ ಉತ್ತುಂಗವನ್ನು ನಾವು ಇಂದಿರಾ ಗಾಂಧಿ ಹೇರಿದ ಎಮರ್ಜೆನ್ಸಿಯಲ್ಲಿ ನೋಡುತ್ತೇವೆ. ಸಂವಿಧಾನವೇ ನಮ್ಮ ಪವಿತ್ರಗ್ರಂಥ,ಪ್ರಜಾಪ್ರಭುತ್ವವೇ ದೇವರ ಗುಡಿ ಎನ್ನುತ್ತಿದ್ದ ಮಹಾಮಹಿಮರೆಲ್ಲ ಎಮರ್ಜೆನ್ಸಿಯ ಸಮಯದಲ್ಲಿ ಅದನ್ನು ಹೇರಿದ್ದ ಸರ್ವಾಧಿಕಾರಿ ಪ್ರಧಾನಿಯ ಬೆಂಬಲಕ್ಕೆ ನಿಂತುಬಿಟ್ಟರಲ್ಲ! ಇದಕ್ಕಿಂತ ದೊಡ್ಡ ಅಸಲಿಯತ್ತಿನ ಅನಾವರಣ ಬೇಕೆ?

ಬರಬರುತ್ತ ವಿಚಾರವಾದಿಗಳು ವಿಚಾರವ್ಯಾಧಿಗಳಾದರು. ಬುದ್ಧಿಜೀವಿಗಳು ಬುದ್ಧಿಗೇಡಿಗಳಾದರು. ಸರಕಾರದಿಂದ ಹಲವು ವರ್ಷ ಗಂಜಿ ಗಿಟ್ಟಿಸಿ ಕೊನೆಗೆ ಅದರ ಅಡಿಯಾಳುಗಳೇ ಆಗಿಬಿಟ್ಟರು. ಏನೇ ಬರಲಿ, ಕಾಂಗ್ರೆಸ್‍ನ್ನು ಸಮರ್ಥಿಸಿಕೊಳ್ಳುವುದೇ ತಮ್ಮ ಜೀವನದ ಪರಮೋದ್ದೇಶವೆಂದು ನಂಬಿದರು. ಕಾಂಗ್ರೆಸ್ ಅಧಿಕಾರದಿಂದ ಇಳಿದದ್ದೇ ಆದರೆ ಬುದ್ಧಿಜೀವಿಗಳ ಗಂಜಿ ಸಂಪಾದನೆಗೆ ಕೊಕ್ಕೆ ಬೀಳುತ್ತದೆಂಬ ಹುಸಿ ಅಪಾಯವನ್ನು ಆ ಪಕ್ಷವೇ ಹರಡತೊಡಗಿತು. ಹೀಗಾಗಿ, ಏನಾದರಾಗಲಿ ತಮ್ಮ ಅಸ್ತಿತ್ವ ನಿರಾತಂಕವಾಗಿರಬೇಕಾದರೆ ಕಾಂಗ್ರೆಸ್ ಅಧಿಕಾರದಲ್ಲಿರುವುದು ಅನಿವಾರ್ಯವೆಂದು ಬುದ್ಧಿಜೀವಿಗಳೂ ನಂಬಿದರು. ಹೀಗೆ ಭಾರತದಲ್ಲಿ ಸ್ವಾತಂತ್ರ್ಯಾನಂತರ ಮೊಳಕೆಯೊಡೆದ ಬುದ್ಧಿಜೀವಿ ವರ್ಗ ಕಮ್ಯುನಿಸಂ ಮತ್ತು ಕಾಂಗ್ರೆಸ್‍ನ ಅಕ್ರಮ ಸಂತಾನ. ಬುದ್ಧಿಜೀವಿಗಳಿಗೆ ಬೇಕಾದ ಬೌದ್ಧಿಕ ಕಲ್ಮಷವನ್ನು ಕಮ್ಯುನಿಸಂ ಪೂರೈಸಿದರೆ, ಅವರನ್ನು ಖುಷಿಯಾಗಿಡಲು ಅಕಾಡೆಮಿಗಳ ಸದಸ್ಯತ್ವ,ಪ್ರಶಸ್ತಿಗಳ ಕೊಡುಗೆ ಕೊಟ್ಟು ಸಾಕಿದ್ದು ಕಾಂಗ್ರೆಸ್. ಬುದ್ಧಿಜೀವಿ ಪರಂಪರೆ ಇಳಿದಿರುವ ಬೌದ್ಧಿಕ ಅಧಃಪತನವನ್ನು ಇಂದು ನಾವು ಕರ್ನಾಟಕದ ಕೆಲವು ಪ್ರಭೃತಿಗಳನ್ನು ನೋಡಿ ಅರ್ಥೈಸಿಕೊಳ್ಳಬಹುದು. ಕರ್ನಾಟಕದಲ್ಲಿ ೯೦ರ ದಶಕದಲ್ಲಿ ಇದೇ ಬುದ್ಧಿಜೀವಿಗಳು ನಕ್ಸಲಿಸಂ ಪ್ರಚಾರಕರಾದರು. ನಂತರದ ದಿನಗಳಲ್ಲಿ ಗುಂಡೂರಾವ್, ಬಂಗಾರಪ್ಪ,ಮೊಯಿಲಿ ಸರಕಾರಗಳನ್ನು ಸಮರ್ಥಿಸಿಕೊಂಡು ಪ್ರಶಸ್ತಿಗಳನ್ನು ಗೋರಿಕೊಳ್ಳುವ ಭಟ್ಟಂಗಿಗಳಾದರು. ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ಭಟ್ಟಂಗಿಗಳ ಸಂತತಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ರಾಜ್ಯದಲ್ಲಿ ಒಂದಿಲ್ಲೊಂದು ಪ್ರಕರಣವನ್ನು ಸೃಷ್ಟಿಸಿ ಬೆಳೆಸಿ ವಿಷ ಹರಡುವ ಕೆಲಸಕ್ಕಿಳಿದಿದೆ. ಹುಚ್ಚಂಗಿ ಪ್ರಸಾದ್, ಕಲ್ಬುರ್ಗಿ, ಪ್ರವೀಣ್ ಪೂಜಾರಿ,ಟಿಪ್ಪು ಸುಲ್ತಾನ್ – ಹೀಗೆ ತಮ್ಮ ಬೇಳೆ ಬೇಯಿಸಿಕೊಳ್ಳಲು ಇವರು ಯಾರನ್ನು ಬೇಕಾದರೂ ಬಳಸಿಕೊಳ್ಳಬಲ್ಲರು. ಸಿದ್ಧಾಂತಗಳಿಗೆ ಎಳ್ಳುನೀರು ಬಿಡಿ, ನಾಲ್ಕು ದಿನ ಗಂಜಿ ಸಂಪಾದಿಸಿ – ಇದೊಂದೇ ಸದ್ಯದ ಅಜೆಂಡಾ.

ಈಗ ಸಾರ್ವಜನಿಕರು ಮಾಡಬೇಕಾದ್ದೇನು? ಬಹಳ ಸರಳ. ಸಾಹಿತಿ, ಚಿಂತಕ, ಸಾಕ್ಷಿಪ್ರಜ್ಞೆ, ಬುದ್ಧಿಜೀವಿ ಎಂಬ ನಾನಾ ವಿಶೇಷಣಗಳನ್ನು ತಲೆ ಮೇಲೆ ಹೊತ್ತ ಅವಕಾಶವಾದಿಗಳನ್ನು ನೇರಾನೇರ ಪ್ರಶ್ನಿಸಿ. ಅವರು ಬರೆದದ್ದನ್ನು, ವೇದಿಕೆಯಲ್ಲಿ ನಿಂತು ಉಸುರಿದ್ದನ್ನು ಕುರುಡಾಗಿ ಒಪ್ಪಬೇಡಿ. ಟೌನ್‍ಹಾಲ್ ಎದುರು ಗೋಮಾಂಸ ಭಕ್ಷಣೆಗೆ ಕುಮ್ಮಕ್ಕು ಕೊಡುವ ವ್ಯಕ್ತಿಯ ಜ್ಞಾನಪೀಠಕ್ಕೇನು ಬೆಲೆ? ಚಿದಾನಂದ ಮೂರ್ತಿಯವರಂಥ ಜ್ಞಾನವೃದ್ಧ ವಯೋವೃದ್ಧರನ್ನು ಸಭಾಂಗಣದಿಂದ ಪೊಲೀಸರು ದರದರನೆ ಎಳೆದು ಹೊರಗೆ ಒಯ್ದಾಗ ಮುಖ್ಯಮಂತ್ರಿಯ ಜೊತೆ ವೇದಿಕೆಯಲ್ಲಿ ಕೂತು ಆ ನಾಟಕವನ್ನು ಮೂಕಪ್ರೇಕ್ಷಕನಂತೆ ನೋಡಿದ ವ್ಯಕ್ತಿಯ ಜ್ಞಾನಪೀಠಕ್ಕೇನು ಬೆಲೆ? ಬಿಜೆಪಿ, ಆರೆಸ್ಸೆಸ್ ಸಿದ್ಧಾಂತಗಳನ್ನು ನಖಶಿಖಾಂತ ದ್ವೇಷಿಸುವ;ಮೈಯೆಲ್ಲ ಹಿಂದುತ್ವದ ವಿರುದ್ಧ ವಿಷ ತುಂಬಿಕೊಂಡ ವ್ಯಕ್ತಿ ರಾಯಚೂರಿನಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನಾದರೇನು ಬಂತು?ಈ ವ್ಯಕ್ತಿಗಳನ್ನು ಅವರ ಎಲ್ಲ ಗೌರವ, ಮಾನ-ಸಂಮಾನಗಳನ್ನು ಕಳಚಿಟ್ಟು ನೇರ ಪ್ರಶ್ನಿಸಬೇಕಾಗಿದೆ. ಅವರ ಚಿಂತನೆಯ ಧಾಟಿಯನ್ನು, ಬರಹಗಳನ್ನು,ವೇದಿಕೆಯಿಂದ ಹೊರಡಿಸುವ ಆಜ್ಞೆಗಳನ್ನು, ಭೀಷಣ ಭಾಷಣಗಳ ಒಳತಿರುಳನ್ನು ನಾವು ಕೆಚ್ಚೆದೆಯಿಂದ ಪ್ರಶ್ನಿಸಬೇಕಾಗಿದೆ. ಹಾಗೆ ಮಾಡಿಯೇ ಬುದ್ಧಿಜೀವಿಗಳ ಮುಖವಾಡಗಳನ್ನು ಕಳಚಿ ಬಿಡಬಹುದು. ಹೆಚ್ಚಿನವರ ಜ್ಞಾನವೆಲ್ಲ ಐದು-ಹತ್ತು ನಿಮಿಷಗಳ ಮಾತುಗಳಾಚೆ ಹೊಸದೇನನ್ನೂ ಕಾಣಿಸುವುದಿಲ್ಲವಾದ್ದರಿಂದ ಇವರನ್ನು ಬೌದ್ಧಿಕವಾಗಿ ಬೆತ್ತಲೆಗೊಳಿಸುವುದು ಏನೇನೂ ಕಷ್ಟವಲ್ಲ.

ಬುದ್ಧಿಜೀವಿಗಳು ಈಗಾಗಲೇ ಹಾಸ್ಯಾಸ್ಪದರಾಗಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಲ್ಲಿ ಅವರು ಊದಿಕೊಂಡು ಬಂದ ದೊಡ್ಡ ಗುಳ್ಳೆಯನ್ನು ಜಾಲತಾಣಗಳು ಕಳೆದ ಮೂರ್ನಾಲ್ಕು ವರ್ಷಗಳಲ್ಲೇ ಒಡೆದು ಬಿಟ್ಟಿವೆ. ಬುದ್ಧಿಜೀವಿಗಳು ಇದುವರೆಗೆ ನಮಗೆ ಹೇಗೆ ಮಂಕುಬೂದಿ ಎರಚುತ್ತಾ ಬಂದರು, ಹೇಗೆ ಸತ್ಯದ ತಲೆ ಮೊಟಕಿ ಸುಳ್ಳಿನ ಹವಾ ಎಬ್ಬಿಸಿದರು ಎಂಬುದು ನಿಧಾನವಾಗಿಯಾದರೂ ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಮುಂದುವರಿದು, ಈ ಬುದ್ಧಿಜೀವಿಗಳೇ ಸಮಾಜದ ಸ್ವಾಸ್ಥ್ಯಕ್ಕೆ ಬಹುದೊಡ್ಡ ಕಂಟಕವೆಂಬ ಸತ್ಯವೂ ಅನಾವರಣಗೊಳ್ಳುತ್ತಿದೆ. ಯಾವ ಪ್ರಕರಣವನ್ನು ಅವರು ತಾವಾಗಿ ಸೃಷ್ಟಿಸುತ್ತಾರೋ ಆ ವಿಷಯದಲ್ಲಿ ಶಕ್ತಿ ಮೀರಿ ಕಿರುಚಾಡಿ ಗದ್ದಲವೆಬ್ಬಿಸುವುದು ಅವರ ತಂತ್ರ. ಹುಚ್ಚಂಗಿ ಪ್ರಸಾದ್ ಪ್ರಕರಣವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಬಹುದು. ಅದೊಂದು ವ್ಯವಸ್ಥಿತ ಷಡ್ಯಂತ್ರವಾಗಿದ್ದುದರಿಂದ ಘಟನೆ ನಡೆಯಿತೆಂದು ಹೇಳಿದ ಮೂರ್ನಾಲ್ಕು ದಿನಗಳಲ್ಲೇ ಇಡೀ ರಾಜ್ಯದ ಬುದ್ಧಿಜೀವಿಗಳೆಲ್ಲ ಒಟ್ಟಾಗಿ ನರಿಗಳಂತೆ ಊಳಿಟ್ಟದ್ದೇ ಊಳಿಟ್ಟದ್ದು. ಹುಚ್ಚಂಗಿ ಪ್ರಸಾದ್ ಪರವಾಗಿ ಹತ್ತಾರು ಲೇಖನಗಳು ಬರೆಯಲ್ಪಟ್ಟವು; ಹತ್ತಾರು ವೇದಿಕೆಗಳ ಪೋಡಿಯಂಗಳನ್ನು ಗುದ್ದಿ ಗುದ್ದಿ ಆಕ್ರೋಶಕಾರೀ ಭಾಷಣಗಳನ್ನು ಮಾಡಲಾಯಿತು; ಹಲವು ಕವಿ-ಕವಯತ್ರಿಯರು ಸಿಕ್ಕಿದ್ದೇ ಅವಕಾಶವೆಂಬಂತೆ ತಮ್ಮ ಎಂದಿನ ಹತ್ತಾರು ರೆಡಿಮೇಡ್ ಪದಗಳನ್ನು ಹಾಕಿ ಕರುಣಾಜನಕ ಕಾವ್ಯಪ್ರವಾಹ ಹರಿಸಿದರು. ಹುಚ್ಚಂಗಿ ಪ್ರಸಾದ್‍ನ ಕೈಗೆ ಬ್ಯಾಂಡೇಜ್ ಸುತ್ತಿ ಉತ್ಸವ ಮೂರ್ತಿಯಂತೆ ಕೇರಳದಲ್ಲೊಂದು ಟೂರ್ ಮಾಡಿಸಿಕೊಂಡು ಬರಲಾಯಿತು. ಒಟ್ಟಲ್ಲಿ ಇದು ಇನ್ನೊಂದು ಅಖ್ಲಾಕ್ ಪ್ರಕರಣದಷ್ಟೇ ದೊಡ್ಡ ಸಂಗತಿಯಾಗಬೇಕು; ಇದಕ್ಕೂ ಬಿಜೆಪಿ ಮತ್ತು ಸಂಘವನ್ನು ಗುರಿಯಾಗಿಸಬೇಕು; ಕೇಂದ್ರ ಸರಕಾರದ ಮೇಲೆ ಹರಿಹಾಯಬೇಕು ಎಂದು ಮೊದಲೇ ನಿಶ್ಚಯಿಸಲಾಗಿತ್ತು. ಆದರೆ ವರ್ಷದೊಳಗಾಗಿ ಪೊಲೀಸರು ಪ್ರಾಮಾಣಿಕವಾದ ತನಿಖೆ ನಡೆಸಿ ಅದಷ್ಟೂ ಒಂದು ಕಾಲ್ಪನಿಕ ಸೃಷ್ಟಿಯೆಂಬ ಸತ್ಯವನ್ನು ಹೊರಗೆಳೆದು ಬಿ ರಿಪೋರ್ಟ್ ಕೊಟ್ಟು ಪ್ರಕರಣಕ್ಕೆ ಇತಿಶ್ರೀ ಹಾಕಿದ್ದಾರೆ. ಹಾಗಾದರೆ ಈ ವಿಷಯದಲ್ಲಿ ಪೊಲೀಸರನ್ನು ತಿಂಗಳುಗಟ್ಟಲೆ ಅಲೆದಾಡಿಸಿದ, ದಿಕ್ಕು ತಪ್ಪಿಸಿದ; ಮತ್ಯಾವುದೇ ಪ್ರಮುಖ ಪ್ರಕರಣಗಳಲ್ಲಿ ಅವರು ತೊಡಗಿಕೊಳ್ಳದಂತೆ ಮಾಡಿದ; ರಾಜ್ಯಾದ್ಯಂತ ದಲಿತರನ್ನು ಸುಖಾಸುಮ್ಮನೆ ಹುಚ್ಚೆಬ್ಬಿಸಿದ ಜನರಿಗೆ ಏನು ಶಿಕ್ಷೆ? ಸುಳ್ಳು ಕೇಸು ದಾಖಲಿಸಿದ ಹುಚ್ಚಂಗಿ ಪ್ರಸಾದ್‍ಗೆ ಶಿಕ್ಷೆ ಆಗುತ್ತದೆಯೇ? ಆತನ ಪರವಾಗಿ ಕಂಠ ಶೋಷಣೆ ಮಾಡಿಕೊಂಡು ಮೋದಿಯನ್ನೂ ಇತರ ಬಲಪಂಥೀಯರನ್ನೂ ವಾಚಾಮಗೋಚರ ಬಯ್ದುಕೊಂಡ ಒಬ್ಬನಾದರೂ ಬುದ್ಧಿಜೀವಿ ತಪ್ಪಾಯಿತು ಎಂದು ನಾಲಗೆ ಕಚ್ಚಿದ್ದನ್ನು ನೋಡಿದ್ದೀರಾ? ಪರಿಸ್ಥಿತಿ ಹೀಗಿರುವಾಗ ಈ ಬುದ್ಧಿಜೀವಿಗಳನ್ನು ಸಮಾಜದ್ರೋಹಿಗಳೆಂದೇ ಬಗೆದು ಅವರ ಬೌದ್ಧಿಕ ದಿವಾಳಿತನವನ್ನು ಲೋಕದೆದುರು ಅನಾವರಣ ಮಾಡಬೇಕಾದ ಜರೂರತ್ತು ಇದೆ ಅನ್ನಿಸುವುದಿಲ್ಲವೇ?

(ಇವತ್ತಿನ(12-10-2016) ವಿಶ್ವವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನದ ಪೂರ್ಣಪಾಠ ಇದು)

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!