Featured ಅಂಕಣ

ನಮ್ಮೆಲ್ಲರ ಒಳಗೂ ಒಂದು ಹನೇಹಳ್ಳಿಯಿದೆ

ಖಂಡಾಂತರ ವಲಸೆ ಹೋಗುವ ಹಕ್ಕಿಗಳ ಬಗ್ಗೆ ಇತ್ತೀಚೆಗೆ ಒಂದು ಡಾಕ್ಯುಮೆಂಟರಿ ನೋಡುತ್ತಿದ್ದಾಗ ಅದರಲ್ಲಿದ್ದ ಸಂಗತಿಯೊಂದು ಗಮನ ಸೆಳೆಯಿತು. ಅದೇನೆಂದರೆ ಕೆಲ ಹಕ್ಕಿಗಳು ಯಾವ ಗಡಿರೇಖೆಗಳ ತಲೆನೋವೂ ಇಲ್ಲದೆ ಸಾವಿರಾರು ಮೈಲಿಗಳ ದೂರಪ್ರಯಾಣ ಮಾಡುತ್ತವೆ. ಒಂದು ಜಾತಿಯ ಕೊಕ್ಕರೆಗಳು ಉತ್ತರಧ್ರುವದಿಂದ ಹೊರಟು ಯುರೋಪಿನ ಹಲವು ನದಿ-ಕೆರೆ-ಸಮುದ್ರಗಳಲ್ಲಿ ಇಷ್ಟಿಷ್ಟು ದಿನವೆಂಬಂತೆ ತಂಗಿ ಗೂಡು ಕಟ್ಟಿ ಮರಿ ಹುಟ್ಟಿಸಿ ಅವುಗಳನ್ನು ಬೆಳೆಸಿ ಆಫ್ರಿಕಾ ಖಂಡದತ್ತ ಸಾಗಿ, ಬೇಸಿಗೆ ಬರುವುದರೊಳಗಾಗಿ ಮಕ್ಕಳು ಮರಿ ಸಮೇತ ವಾಪಸು ಹೊರಟು ಉತ್ತರ ಧ್ರುವವನ್ನು ಸೇರುತ್ತವೆ. ಏಳೆಂಟು ಸಾವಿರ ಮೈಲಿಗಳ ಈ ಪ್ರಯಾಣದಲ್ಲಿ ಅವು ಪ್ರತಿವರ್ಷವೂ ತಾವು ಈ ಹಿಂದೆ ನೆಲೆಸಿದ್ದ ಮರಗಳಿಗೇ ಬಂದು, ಹಿಂದೆ ಕಟ್ಟಿ ಸಂಸಾರ ನಡೆಸಿದ್ದ ಗೂಡುಗಳಿಗೇ ಮರಳಿ ಸಂಸಾರ ಹೂಡುತ್ತವೆ! ಮೇಫ್ಲೈ ಎಂಬ ಕೀಟವೂ ಹಾಗೆಯೇ, ನದಿಯಾಳದಲ್ಲಿ ಲಾರ್ವಾ ಸ್ಥಿತಿಯಲ್ಲಿದ್ದದ್ದು ಬೆಳೆದು ರೆಕ್ಕೆ ಮೂಡಿಸಿಕೊಂಡು ಹೊರಬಂದು ಸಂಗಾತಿಯನ್ನು ಕೂಡಿದ ಮೇಲೆ ತಾನೆಲ್ಲಿ ಹುಟ್ಟಿದ್ದೆನೋ ನಿರ್ದಿಷ್ಟವಾಗಿ ಅದೇ ಜಾಗಕ್ಕೆ ಮರಳಿ ಮೊಟ್ಟೆಯಿಟ್ಟು ಇಹಲೋಕ ತ್ಯಜಿಸುತ್ತದೆ. ದಟ್ಟಕಾಡುಗಳಲ್ಲಿ ಬೆಳೆದ ಬೃಹದ್ವೃಕ್ಷಗಳ ಪೊಟರೆಗಳನ್ನು ಮನೆ ಮಾಡಿಕೊಳ್ಳುವ ಮಂಗಟ್ಟೆಗಳ ಕತೆಯೂ ಹೀಗೆಯೇ. ಅವು ತಮ್ಮ ಮನೆಯನ್ನು ಜೀವನಪೂರ್ತಿ ನೆನಪಿಟ್ಟುಕೊಂಡು ಪ್ರತಿ ವರ್ಷದ ಸಂತಾನಾಭಿವೃದ್ಧಿ ಸಮಯದಲ್ಲಿ ಅವವೇ ಮನೆಗಳಿಗೆ ವಾಪಸಾಗುತ್ತವೆ. ಒಂದು ಬಗೆಯಲ್ಲಿ ಈ ಹಕ್ಕಿ, ಕೀಟಗಳನ್ನೆಲ್ಲ ಅದ್ಯಾವುದೋ ಅದೃಶ್ಯ ದಾರಕ್ಕೆ ಕಟ್ಟಿ ಯಾರೋ ಆಡಿಸುವಂತಿದೆಯಲ್ಲ? ಜಗತ್ತಿನ ಯಾವ ಗಡಿಘರ್ಷಣೆಯ ರಗಳೆಯೂ ಇಲ್ಲದೆ ಸ್ವಚ್ಛಂದ ಹಾರಾಡುವ ಈ ಬಾನಾಡಿಗಳಿಗೂ ಯಾಕೆ ಮೂಲದ ಸೆಳೆತ?

ಹರೂನ್ ಯಾಹ್ಯಾ ಎಂಬ ಟರ್ಕಿಶ್ ಲೇಖಕ ಬರೆದ ಸಣ್ಣ ಪದ್ಯ ಹೀಗಿದೆ:

ಜಗತ್ತಿನ ಯಾವ ಮೂಲೆಗೆ ಹಾರುವ ಅವಕಾಶವಿದ್ದರೂ

ಯಾಕೆ ನೆಚ್ಚಿಕೂತಿದೆ ಈ ಹಕ್ಕಿ ಒಂದೇ ಗೆಲ್ಲನ್ನು?

ಇದೇ ಪ್ರಶ್ನೆ ಚುಚ್ಚುತ್ತೆ ಬಳಿಕ

ನನ್ನನ್ನು.

ಹೌದಲ್ಲವಾ? ಹಕ್ಕಿಗೆ ರೆಕ್ಕೆ ಇದೆ, ಎತ್ತ ಬೇಕಾದರೂ ಹಾರಬಹುದಲ್ಲ ಎಂದು ಯೋಚಿಸುವ ನಾವು ನಮಗೂ ಕಾಲುಗಳಿವೆ, ಎತ್ತ ಬೇಕಿದ್ದರೂ ಸಾಗುವ ಅವಕಾಶ ನಮಗೂ ಇದೆ ಎಂಬುದನ್ನು ಮರೆತೇ ಬಿಡುತ್ತೇವೆ. ಜಗತ್ತಿನಲ್ಲಿ, ನಿಂತ ನೆಲದಲ್ಲಿ ಬೇರುಬಿಟ್ಟವು ವೃಕ್ಷಗಳು ಮಾತ್ರವೇನಲ್ಲ, ನಾವೂ ಕೂಡ.

ನಮ್ಮೆಲ್ಲರ ಬದುಕುಗಳೂ ಸರಪಳಿ ಕಟ್ಟಿದ ಲಾಯದ ಆನೆಯಂತೆ ಒಂದು ನಿರ್ದಿಷ್ಟ ವೃತ್ತದೊಳಗೇ ಸುತ್ತುತ್ತಿವೆ. ಓ ನನ್ನ ಚೇತನಾ, ಆಗು ನೀ ಅನಿಕೇತನಾ ಎಂದ ಕವಿಗೂ ತನ್ನ ಕುಪ್ಪಳಿಯನ್ನೂ ಮೈಸೂರನ್ನೂ ತ್ಯಜಿಸಿ ಬದುಕಲು ಆಗಲಿಲ್ಲ. ಬೇಂದ್ರೆಯವರಂತೂ ಸಾಧನಕೇರಿಯಲ್ಲೇ ಜಗತ್ತನ್ನು ಸೃಷ್ಟಿಸಿಕೊಂಡು ಬದುಕಿದರು. ಇಡೀ ಪ್ರಪಂಚವನ್ನು ಸುತ್ತಿಬಂದಿದ್ದ ಶಿವರಾಮ ಕಾರಂತರು ಕೋಟ ಮತ್ತು ಪುತ್ತೂರುಗಳನ್ನು ತನ್ನ ಕಾರ್ಯಕ್ಷೇತ್ರವಾಗಿಸಿಕೊಂಡು ದುಡಿದರು. ಮಲ್ಲಿಗೆಯ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ಕೊನೆಯವರೆಗೂ ಮೈಸೂರಿನ ಗುಂಗಿನಿಂದ ಹೊರಬರಲಿಲ್ಲ. ಕವಿ, ಕತೆಗಾರ ಜಯಂತ ಕಾಯ್ಕಿಣಿಯವರು ಕಾಯಕವೇ ಕೈಲಾಸವಾದ ಮುಂಬಯಿಯನ್ನೂ ಕೈಲಾಸವೇ ಕಾಯಕವಾದ ಗೋಕರ್ಣವನ್ನೂ ಮತ್ತೆಮತ್ತೆ ತನ್ನ ಕೃತಿಗಳ ಮೂಲಕ ಧೇನಿಸಿದರು. ತನ್ನ ಬದುಕಿನ ಮುಕ್ಕಾಲು ಪಾಲನ್ನು ಬಹುರಾಷ್ಟ್ರೀಯ ಕಂಪೆನಿಗಳಲ್ಲೂ ಅವುಗಳ ವಿದೇಶೀ ಆಫೀಸುಗಳಲ್ಲೂ ಕಳೆದ ವಿವೇಕ ಶಾನಭಾಗರ ಬಹುತೇಕ ಕತೆಗಳು ಶುರುವಾಗಿ ಕೊನೆಗಾಣುವುದು ಅಂಕೋಲಾದಲ್ಲಿ. ಅಮೆರಿಕ, ರಾಜಸ್ಥಾನ, ಬಂಗಾಳ, ಮಧ್ಯಪ್ರದೇಶ, ಬೆಂಗಳೂರು ಎನ್ನುತ್ತ ಲೋಕಸಂಚಾರಿಯಾಗಿದ್ದ ಕೃಷ್ಣಾನಂದ ಕಾಮತರು ಬದುಕಿನ ಇಳಿಗಾಲವನ್ನು ಹುಟ್ಟೂರು ಹೊನ್ನಾವರದಲ್ಲಿ ಕಳೆಯಬೇಕೆಂದು ಬಗೆದು “ಮರುಪಯಣ” ಎಂಬ ಪುಸ್ತಕವನ್ನೇ ಬರೆದಿದ್ದರು. ಎಲ್ಲೆಲ್ಲೋ ಸುತ್ತಾಡಿದರೂ ಮನುಷ್ಯ ತನ್ನ ಹುಟ್ಟೂರ ನೆನಪನ್ನು ಹೀಗೆ ಬೆಚ್ಚಗೆ ಕಾಯ್ದುಕೊಳ್ಳುವ ಸಂಗತಿ ನಿಜಕ್ಕೂ ಕುತೂಹಲಕರವಾಗಿದೆ.

“ಉತ್ತರ ಕನ್ನಡ ಜಿಲ್ಲೆ, ಅದರಲ್ಲೂ ನನ್ನ ಹುಟ್ಟೂರಾದ ಹನೇಹಳ್ಳಿ – ಇವು ನನ್ನ ಮಟ್ಟಿಗೆ ಬರೇ ನೆಲದ ಹೆಸರುಗಳಲ್ಲ. ಬದಲಾಗಿ ನನ್ನ ಸಾಹಿತ್ಯದ ಹುಟ್ಟಿಗೆ ಕಾರಣವಾಗಿ, ಅದರ ಚೈತನ್ಯಕ್ಕೆ ನಿರಂತರವಾದ ಜೀವಸೆಲೆಯಾಗಿ ನಿಂತ ಪ್ರೇರಕಶಕ್ತಿಗಳು” ಎಂದವರು ಕತೆಗಾರ, ಕಾದಂಬರಿಕಾರ ಯಶವಂತ ಚಿತ್ತಾಲ. ಗಜಿಬಿಜಿ ನಗರವಾದ ಮುಂಬಯಿಯ ಮನೆಯ ಬಾಲ್ಕನಿಯಲ್ಲಿ ವಿಶಾಲ ಕಿಟಕಿಗೆ ಮುಖಮಾಡಿ ಕೂತು ಪೆನ್ನು ಹಿಡಿದರೆ ಚಿತ್ತಾಲರ ಮೈಮನಗಳನ್ನು ತುಂಬಿಕೊಳ್ಳುತ್ತಿದ್ದದ್ದು ಹುಟ್ಟಿದ ಊರಾದ ಹನೇಹಳ್ಳಿಯ ಹಚ್ಚಹಸುರಿನ ಬಯಲು, ಗದ್ದೆ, ಮರಮಟ್ಟು. ಬೊಮ್ಮಿ, ಮೋನು, ದೋಶಿ, ಗಿರಿಯಣ್ಣ, ಬುಡಾಣಸಾಬ, ವೋಮೂ, ಉತ್ತುಮಿ, ಪಾರೂ, ಪರಮೇಶ್ವರಿ, ಪದ್ದಕ್ಕ, ವಲ್ಲೀಗದ್ದೆ ಸುಬ್ಬ ಅಬ್ಬಬ್ಬ, ಆ ಹನೇಹಳ್ಳಿಯ ನಟವರ್ಗ ಬಹುದೊಡ್ಡದು! ನಾಲ್ಕು ಮತ್ತೊಂದು ಮೆಟ್ಟಿಲಿರುವ ಈ ಇಗರ್ಜಿಯನ್ನೇ ಕೈತಾನ ಭಾರವಾದ ಹೃದಯದಿಂದ ಏದುಸಿರು ಬಿಡುತ್ತ ಹತ್ತಿದ್ದು? ಯಾವುದೇ ಊರಿನ ಸರ್ವಸಾಧಾರಣ ಗುಡಿಯಂತಿರುವ ಈ ದೇವಸ್ಥಾನವೇ ಆಬೋಲಿನಳ ಕತೆಯಲ್ಲಿ ಮುಖ್ಯ ಪಾತ್ರವಾಗಿ ಬಂದದ್ದು? ಎಂದು ನಾವು ಅಚ್ಚರಿಪಡುವಷ್ಟು ಸರಳವಾದ ಹಳ್ಳಿಯನ್ನೂ ಚಿತ್ತಾಲರು ದೇಶದ ಅನನ್ಯ ಗ್ರಾಮವೆಂಬ ಭ್ರಮೆ ಹಿಡಿಸುವಷ್ಟು ಅದ್ಭುತವಾಗಿ ಕಟ್ಟಿಕೊಡುತ್ತಾರೆ. ತಮ್ಮ ಸ್ನೇಹಿತರನ್ನು ಅವರು ಹಳ್ಳಿಗೆ ಕರೆದುಕೊಂಡು ಹೋದರೆ ಅಲ್ಲಿನ ಹಾದಿಬೀದಿಗಳನ್ನು ತೋರಿಸುತ್ತ ತಮ್ಮ ಕತೆಗಳ ಪಾತ್ರಗಳು ಅಲ್ಲಿ ಏನೇನು ಮಾಡಿದವು, ಯಾವ ಸಂಭಾಷಣೆ ನಡೆಸಿದವು ಎಂಬುದನ್ನು ಫೋಟೋಗ್ರಾಫಿಕ್ ಸ್ಮರಣೆಯಿಂದ ವಿವರಿಸುತ್ತಿದ್ದರು. ಅಂದರೆ ಅವರು ಹನೇಹಳ್ಳಿಯನ್ನು ಕಾಟಾಚಾರಕ್ಕೆ ಕತೆಯಲ್ಲಿ ತರುತ್ತಿರಲಿಲ್ಲ. ಅಥವಾ ಹಳ್ಳಿಯ ಪ್ರಸ್ತಾಪ ಮಾಡುವುದು ಅವರ ಕೃತಿತಂತ್ರವೂ ಆಗಿರಲಿಲ್ಲ. ಹನೇಹಳ್ಳಿಯ ಜೀವಂತಿಕೆಯನ್ನು ಮೈಯ ನರನಾಡಿಗಳಲ್ಲಿ ತುಂಬಿಸಿಕೊಂಡು, ಅದನ್ನು ಓದುಗನೊಡನೆ ಹಂಚಿಕೊಳ್ಳುವ ಉತ್ಸಾಹದಿಂದಲೇ ಅವರೆಲ್ಲ ಬರವಣಿಗೆಗಳು ಪ್ರಾರಂಭವಾಗುತ್ತಿದ್ದವು. ಹನೇಹಳ್ಳಿಯ ಪ್ರಸ್ತಾಪವಿಲ್ಲದ ಚಿತ್ತಾಲರ ಕತೆಗಳನ್ನು ಊಹಿಸಿಕೊಳ್ಳುವುದು ಕಷ್ಟವಲ್ಲ, ಅಸಾಧ್ಯ.

ಕೆಲವು ದಿನಗಳ ಹಿಂದೆ ಬೆಂಗಳೂರಲ್ಲಿ ಒಬ್ಬ ಕಾಶ್ಮೀರೀ ಪಂಡಿತ ಸಿಕ್ಕಿದ್ದ. “ನಮ್ಮ ನೆಲವನ್ನು ಪ್ರತ್ಯೇಕತಾವಾದಿಗಳು ಬಿಟ್ಟುಕೊಡಬೇಕು. ಕೇಂದ್ರ ಸರಕಾರ ಈ ವಿಷಯದಲ್ಲಿ ಕಠಿಣ ನಿಲುವು ತಳೆಯಲೇಬೇಕು” ಎನ್ನುವುದು ಅವನ ವಾದ. “ಆ ಊರು ನಿನಗೇಕೆ ಬೇಕು? ಒಂದು ವೇಳೆ ನಿಮಗಲ್ಲಿ ವಾಸ ಮಾಡುವ ಅವಕಾಶ ಕಲ್ಪಿಸಿದರೂ ಭಯದ ವಾತಾವರಣದಲ್ಲೇ ಬದುಕಬೇಕಾಗುತ್ತದೆ. ಅದೂ ಅಲ್ಲದೆ, ಅಲ್ಲೀಗ ನಿಮ್ಮದೆಂದು ಹೇಳಿಕೊಳ್ಳುವ ಯಾವ ಆಸ್ತಿಪಾಸ್ತಿಯೂ ಉಳಿದಿಲ್ಲ” ಎಂದರೆ, “ಪರವಾಗಿಲ್ಲ. ಅಲ್ಲಿ ಭಿಕ್ಷೆ ಬೇಡಿ ಬದುಕುವುದಕ್ಕೂ ನಾವು ತಯಾರು” ಎಂದಿದ್ದನವ! ಇದೇ ಭಾವನೆ ಟಿಬೆಟನ್ನರಲ್ಲೂ ಇರುವುದನ್ನು ಗಮನಿಸಬಹುದು. ತಮ್ಮ ತಾಯ್ನಾಡಿನಿಂದ ಹೊರಹಾಕಿಸಿಕೊಂಡ ಟಿಬೆಟನ್ನರ ಹೊಸ ತಲೆಮಾರಿನ ಮಕ್ಕಳು ಆ ಊರನ್ನೇ ನೋಡಿರದೆ ಇದ್ದರೂ ಮತ್ತೆಂದಾದರೂ ಅದು ತಮ್ಮ ತೆಕ್ಕೆಗೆ ಬೀಳಬಹುದು; ಆಗ ಹೋಗಿ ಹೊಸ ಬದುಕು ಕಟ್ಟಿಕೊಳ್ಳಬೇಕೆಂಬ ಕನಸು ಕಾಣುತ್ತಿದ್ದಾರೆ. ಕೋಲ್ಕತ್ತದಲ್ಲೊಮ್ಮೆ ನನಗೆ ಮಂಗೋಲನ್ ಪ್ರಜೆಯೊಬ್ಬನ ಪರಿಚಯವಾಗಿತ್ತು. ಯಾವುದೋ ಭಾನಗಡಿಯಲ್ಲಿ ಸ್ವದೇಶದಿಂದ ಹೊರಬಿದ್ದು ಕೊನೆಗೆ ಕೋಲ್ಕತ್ತದ ಬೀದಿಯಲ್ಲಿ ಬದುಕು ಅರಳಿಸಿಕೊಂಡವನಿಗೆ ಇದ್ದ ಏಕೈಕ ಆಸೆ – ತನ್ನ ಜೀವಮಾನವೆಲ್ಲಾ ದುಡಿದು ಗಳಿಸುವ ದುಡ್ಡಲ್ಲಿ ಹೇಗಾದರೂ ಮಾಡಿ ಹುಟ್ಟೂರಿಗೆ ಮರಳಿ ಹೋಗಬೇಕೆಂಬುದಷ್ಟೇ! ಇಸ್ರೇಲ್ ಎಂಬ ರಾಷ್ಟ್ರ ಹುಟ್ಟಿದ್ದು ಇಂಥ ಭಾವನಾತ್ಮಕ ಸಂಬಂಧದಿಂದಲೇ. ಒಮ್ಮೆ ಒಬ್ಬ ರಾಜಕಾರಣಿ, ಯಹೂದಿಗಳ ರಾಷ್ಟ್ರಸ್ಥಾಪನೆಗಾಗಿ ಹೋರಾಡಿದ ಶಾಯಿಮ್ ವೀಜ್‍ಮನ್‍ರಲ್ಲಿ ಹೇಳಿದನಂತೆ, “ಪ್ರಪಂಚದಲ್ಲಿ ಎಲ್ಲಿ ಬೇಕಾದರೂ ನೆಲೆ ಕಾಣುವ ಅವಕಾಶವಿರುವಾಗ ನೀವೇಕೆ ಪ್ಯಾಲೆಸ್ಟೀನ್ ಆಕ್ರಮಿತ ಜಾಗದಲ್ಲೇ ಪಾಲು ಕೇಳುತ್ತೀರಿ? ಅದೊಂದನ್ನು ಬಿಟ್ಟು ಬೇರೆಲ್ಲಾದರೂ ಬದುಕು ಕಟ್ಟಿಕೊಳ್ಳಲು ನಿಮಗೆ ಸಾಧ್ಯವಿಲ್ಲವೆ?”. ಆಗ ವೀಜ್‍ಮನ್, “ಅಂದ ಹಾಗೆ, ಮೊನ್ನೆ ಭಾನುವಾರ ಯಾಕೆ ನೀನು ತಾಯಿಯನ್ನು ನೋಡಲೆಂದು ಇಪ್ಪತ್ತು ಮೈಲಿ ದೂರದ ಹಳ್ಳಿಗೆ ಹೋದೆ? ಇಲ್ಲೇ ಪಕ್ಕದ ಬೀದಿಯಲ್ಲಿ ಅನಾಥಾಶ್ರಮದ ಯಾರನ್ನಾದರೂ ಮಾತಾಡಿಸಬಹುದಿತ್ತಲ್ಲ?” ಎಂದರು. ವಾದ ತಣ್ಣಗಾಯಿತು.

ಸಂಸ್ಕೃತದಲ್ಲೊಂದು ಮಾತೇ ಉಂಟು. ಹಾಲಿನಲ್ಲೇ ಮೀಯಿಸಿ ದಾಳಿಂಬೆ ಫಲ ತಿನ್ನಿಸಿ ರಾಜಸಭೆಯಲ್ಲಿ ಪಂಡಿತ ಹಕ್ಕಿಯೆಂದು ಮರ್ಯಾದೆ ಮಾಡಿದರೂ ಗಿಳಿ ತನ್ನ ಹುಟ್ಟಿದಡವಿಯನ್ನೇ ನೆನಯುತ್ತದಂತೆ. “ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಎಂದ ಪಂಪನಂತೆ! ನಾವೆಲ್ಲ ಹುಟ್ಟಿದೂರನ್ನು ಬಿಟ್ಟು ಎಲ್ಲೆಲ್ಲೋ ಹೋದರೂ ತೊಗಲ ಮೇಲಿನ ಮಚ್ಚೆಯಂತೆ ಜನ್ಮಭೂಮಿಯ ನೆನಪುಗಳನ್ನು ಮರೆಯದೇ ಹೊತ್ತೊಯ್ಯುತ್ತೇವೆ. ಒಮ್ಮೆ ಕವಿ, ಭಾಷಾವಿಜ್ಞಾನಿ ಎ.ಕೆ. ರಾಮಾನುಜನ್ ಅವರಿಗೆ ಜನಪದ ಕತೆಗಳನ್ನು ಸಂಗ್ರಹಿಸಬೇಕಾದ ಜವಾಬ್ದಾರಿ ಹೆಗಲೇರಿತು. ಅವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದವರು. ಯೋಜನೆ ಮುಗಿಸಲು ಹೆಚ್ಚು ದಿನ ಉಳಿದಿರಲಿಲ್ಲ. ಅಷ್ಟು ಕಡಿಮೆ ದಿನಗಳಲ್ಲಿ ಕೆಲಸ ಬಿಟ್ಟು ಲ್ಯಾಟಿನ್ ಅಮೆರಿಕದ ಗುಡ್ಡಗಾಡುಗಳಲ್ಲಿ ಅಲೆದಾಡಿಕೊಂಡು ಜನಪದ ಕತೆಗಳನ್ನು ಸಂಗ್ರಹಿಸುವುದು ಹೇಗೆ ಎಂದು ಅವರ ಸಹೋದ್ಯೋಗಿ ಚಿಂತೆ ಪಡುತ್ತಿದ್ದರು. ಆದರೆ ರಾಮಾನುಜನ್ ಕೇವಲ ಎರಡೇ ದಿನದಲ್ಲಿ ತನಗೆ ವಹಿಸಿದ್ದ ಜವಾಬ್ದಾರಿಯನ್ನು ಪೂರೈಸಿ ಕತೆಗಳ ದೊಡ್ಡ ಕಟ್ಟನ್ನೇ ತಂದು ಮೇಜಿನ ಮೇಲಿಟ್ಟರಂತೆ! ಹೇಗೆ ಸಾಧ್ಯವಾಯಿತಿದು ಎಂದು ಕೇಳಿದಾಗ, ರಾಮಾನುಜನ್ ಹೇಳಿದ್ದು: “ನನ್ನ ವಿದ್ಯಾರ್ಥಿಗಳೆಲ್ಲರೂ ಅಮೆರಿಕಾದ ಬೇರೆ ಬೇರೆ ದೇಶ, ಪ್ರಾಂತ್ಯಗಳಿಂದ ಬಂದವರು. ಕ್ಲಾಸಿಗೆ ಹೋಗಿ ನಿಮಗೆ ತಿಳಿದಿರುವ, ಅಮ್ಮನೋ ಅಜ್ಜಿಯೋ ಹೇಳಿರುವ ಜನಪದ ಕತೆಗಳನ್ನು ಬರೆದು ತನ್ನಿ ಎಂದೆ. ಒಂದೇ ದಿನದಲ್ಲಿ ಪ್ರತಿ ವಿದ್ಯಾರ್ಥಿಯೂ 2-3 ಕತೆಗಳನ್ನು ಬರೆದುಕೊಟ್ಟ”. ವಿದ್ಯಾರ್ಥಿಗಳು ವಿಶ್ವವಿದ್ಯಾಲಯ ಸೇರಿದರೂ ತಮ್ಮ ಊರುಗಳನ್ನೂ ಅಲ್ಲಿನ ಜಾನಪದವನ್ನೂ ಮರೆತಿರಲಿಲ್ಲ. ಅವರೆಲ್ಲರೂ ತಂತಮ್ಮ ಊರುಗಳನ್ನು ಹೃದಯಗಳಲ್ಲಿ ಹೊತ್ತುಕೊಂಡೇ ತಿರುಗಾಡುತ್ತಿದ್ದರು!

ಇಲ್ಲಿ ಇನ್ನೂ ಒಂದು ವಿಶೇಷವನ್ನು ಗಮನಿಸಬೇಕು. ಚೊಕ್ಕಾಡಿಯಂಥ ಗ್ರಾಮಪರಿಸರದಲ್ಲೇ ತನ್ನ ಬೇರನ್ನೂ ಚಿಗುರನ್ನೂ ಹಬ್ಬಿಸಿಕೊಂಡ ಸುಬ್ರಾಯ ಚೊಕ್ಕಾಡಿಯವರಂತೆ ಒಂದೇ ಊರನ್ನು ಕರ್ಮಭೂಮಿಯೂ ಕಾವ್ಯೋದ್ಯೋಗ ಭೂಮಿಯೂ ಮಾಡಿಕೊಂಡವರಿದ್ದಾರೆ. ಇನ್ನು, ಹುಟ್ಟಿದೂರಿಂದ ಕಾರಣಾಂತರ ಬೇರೆಯಾಗಿ ಬದುಕತೊಡಗಿ ಭಾವನಾಕೋಶದಲ್ಲಿ ಅದನ್ನು ಉಳಿಸಿಕೊಂಡವರೂ ಇದ್ದಾರೆ. ಹನೇಹಳ್ಳಿಯನ್ನು ತನ್ನ ಬಹಳಷ್ಟು ಬರಹಗಳ ಮುಖ್ಯ ವೇದಿಕೆಯಾಗಿ ಬಳಸಿಕೊಂಡ ಚಿತ್ತಾಲರು ಕಿಷ್ಕಿಂಧೆಯಂತಿದ್ದ ಮುಂಬಯಿಯನ್ನು ಕರ್ಮಭೂಮಿಯಾಗಿ ಆರಿಸಿಕೊಂಡರೂ ಪೆನ್ನು ಹಿಡಿದಾಗೆಲ್ಲ ಹನೇಹಳ್ಳಿಯನ್ನಷ್ಟೇ ಉಸಿರಾಡುತ್ತಿದ್ದರು. ಬರೆಯಬಯಸಿದ ಪ್ರದೇಶದಿಂದ ಭೌಗೋಳಿಕವಾಗಿ ದೂರವಾದಾಗ ಹುಟ್ಟುವ ಪರಕೀಯತೆಯೇ ಲೇಖಕನ ಬರಹದೊಳಗಿನ ವಿವರಗಳಿಗೆ ಮಾರ್ದವತೆ ಮತ್ತು ತೀವ್ರತೆ ತುಂಬುತ್ತದೆಯೋ ಏನೋ. ಯು.ಆರ್. ಅನಂತಮೂರ್ತಿ ಅಗ್ರಹಾರದ ದಟ್ಟ ವಿವರಗಳಿರುವ ಸಂಸ್ಕಾರವನ್ನು ಬರೆದದ್ದು ಇಂಗ್ಲೆಂಡಿನಲ್ಲಿ. ಬಳ್ಳಾರಿ ವಿವರಗಳಿರುವ ವಸುಧೇಂದ್ರರ ಬಹುತೇಕ ಕತೆಗಳು ಜನ್ಮ ತಳೆದದ್ದು ಬೆಂಗಳೂರಿನ ಟ್ರಾಫಿಕ್ಕಿನಲ್ಲಿ ಉರಿವ ಕೆಂಪು ದೀಪಗಳ ಕೆಳಗೆ. ಹೆಚ್ಚು ಕನ್ನಡಿಗರು ಬೆಂಗಳೂರಿನಂಥ ನಗರಗಳಲ್ಲಿ ಸೆಟ್ಲ್ ಆಗುತ್ತ ಹೋದಂತೆ ರಾಜ್ಯದ ಮೂಲೆಮೂಲೆಯ ಹೆಸರು ಕೇಳಿಲ್ಲದ ಊರುಗಳೆಲ್ಲ ಕೇಂದ್ರವಾಗಿರುವ ಕತೆ-ಕಾದಂಬರಿಗಳು ಪ್ರಕಟವಾಗುತ್ತಿವೆ. ಮಹಾನಗರದ ನಡುವೆ ದಿಗಂಬರರಂತೆ ನಿಂತ ಲೇಖಕರಿಗೆ ತಂತಮ್ಮ ಊರುಗಳನ್ನು ಕತೆಗಳಲ್ಲಾದರೂ ಕಾಣಬೇಕು, ಮರುಸೃಷ್ಟಿಸಬೇಕು ಎಂಬ ಒತ್ತಡ ಹುಟ್ಟುತ್ತಿದೆ. ನಕ್ಷತ್ರಲೋಕಕ್ಕೆ ರೈಲುಬಿಟ್ಟರೂ ನಮ್ಮ ಕಾಲುಗಳನ್ನು ಮಾತ್ರ ಹುಟ್ಟಿದೂರಿನ ಕೆಸರಿನ ಗದ್ದೆಯಲ್ಲೇ ಹೆಚ್ಚುಹೆಚ್ಚು ಆಳವಾಗಿ ಊರಿಕೊಳ್ಳುತ್ತಿದ್ದೇವೆ.

ಇದಕ್ಕೆ ತದ್ವಿರುದ್ಧವಾದ ಗುಣಧರ್ಮ ನದಿಯದ್ದು. ಅದು ಅದೆಷ್ಟೊಂದು ರಾಜ್ಯ-ದೇಶಗಳಲ್ಲಿ ಹರಿದರೂ ಯಾವ ಮಣ್ಣಿನ ಹಂಗನ್ನೂ ಉಳಿಸಿಕೊಳ್ಳದೆ ತನ್ನ ಪಾಡಿಗೆ ತಾನು ನಿರ್ಭಾವುಕವಾಗಿ ಹರಿದು ಸಮುದ್ರವನ್ನು ಸೇರಿಬಿಡುತ್ತದೆ. ಹುಟ್ಟಿದೂರ ನೆನಪಿಲ್ಲದೆ ಮೆಟ್ಟಿದೂರ ಬಂಧವಿಲ್ಲದೆ ಸರಾಗವಾಗಿ ಹರಿವಂತೆ ಕಾಣಿಸುವ ನದಿಗೆ ಜನ್ಮವಿತ್ತ ಜಾಗ, ಮೂಲತಃ, ಸಮುದ್ರವೇ ತಾನೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Rohith Chakratheertha

ಓದಿದ್ದು ವಿಜ್ಞಾನ, ಮುಖ್ಯವಾಗಿ ಗಣಿತ. ಬೆಂಗಳೂರಿನಲ್ಲಿ ನಾಲ್ಕು ವರ್ಷ ಉಪನ್ಯಾಸಕನಾಗಿ ಕಾಲೇಜುಗಳಲ್ಲಿ ಪಾಠ ಮಾಡಿದ್ದ ಇವರು ಈಗ ಒಂದು ಬಹುರಾಷ್ಟ್ರೀಯ ಕಂಪೆನಿಯಲ್ಲಿ ಉದ್ಯೋಗಿ. ಹವ್ಯಾಸವಾಗಿ ಬೆಳೆಸಿಕೊಂಡದ್ದು ಬರವಣಿಗೆ. ಐದು ಪತ್ರಿಕೆಗಳಲ್ಲಿ ಸದ್ಯಕ್ಕೆ ಅಂಕಣಗಳನ್ನು ಬರೆಯುತ್ತಿದ್ದು ವಿಜ್ಞಾನ, ಗಣಿತ, ವ್ಯಕ್ತಿಚಿತ್ರ, ಮಕ್ಕಳ ಕತೆ ಇತ್ಯಾದಿ ಪ್ರಕಾರಗಳಲ್ಲಿ ಇದುವರೆಗೆ ೧೩ ಪುಸ್ತಕಗಳ ಪ್ರಕಟಣೆಯಾಗಿವೆ. ಉದ್ಯೋಗ ಮತ್ತು ಬರವಣಿಗೆಯಿಂದ ಬಿಡುವು ಸಿಕ್ಕಾಗ ತಿರುಗಾಟ, ಪ್ರವಾಸ ಇವರ ಖಯಾಲಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!