Featured ಪರಿಸರದ ನಾಡಿ ಬಾನಾಡಿ

ಶುಕಲೋಕದಲ್ಲೊಂದು ಸುತ್ತ – ಭಾಗ 2

ಶುಕಲೋಕದಲ್ಲೊಂದು ಸುತ್ತ

ಮುದ್ದಿನ ಗಿಳಿ

ಗಿಳಿ ಎಂದಾಕ್ಷಣ ಅನೇಕರಿಗೆ ಅದರ ಮುದ್ದಾದ ಮೈ ನೆನಪಾಗುತ್ತದೆ. ಅದರೊಂದಿಗೆ ಅದರ  ಚುಯ್ ಚುಯ್ ಕೂಗು ಕೆಲವೊಮ್ಮೆ ಹಿತವಾಗಿಯೂ ಮತ್ತೆ ಕೆಲವೊಮ್ಮೆ ಕರ್ಕಶವಾಗಿಯೂ ಕೇಳೀತು. ಅದೇನಿದ್ದರೂ ಅವರವರ ಭಾವಕ್ಕೆ! ಭಾವುಕನಾದ ಮಾನವನ ಸಾಂಗತ್ಯದಲ್ಲಿ ಗಿಳಿಯ ಆ ಕೂಗು ಮಾತಾಗಿ ಮಾರ್ಪಡುತ್ತದೆ. ನಾವಾಡುವ ಅನೇಕ ಪದಗಳನ್ನು ಅವು ಪುನರಾವರ್ತಿಸುತ್ತವೆ. ಅದರ ಮಾತು ಮಗುವಿನ ತೊದಲು ನುಡಿಯಂತಿರುತ್ತದೆ. ಮಗು ಎಲ್ಲರಿಗೂ ಮುದ್ದು. ಹಾಗಾಗಿ ಗಿಳಿಯೂ ಮುದ್ದು. ಈ ಮುದ್ದಿನಿಂದಾಗಿಯೇ ಗಿಳಿಗಳನ್ನು ಸಾಕತೊಡಗಿದರು. ಸಾಕುವುದಕ್ಕಾಗಿ ಬಂಧಿಸತೊಡಗಿದರು. ಮುದ್ದಿನ ಮಕ್ಕಳನ್ನೇ ಮನೆಯೊಳಗೆ ಬಂಧನದಲ್ಲಿರುವಂತೆ ಸಾಕುತ್ತಿರಲೇನು ಅತಿಶಯವು ಗಿಳಿಗಳನ್ನು ಬಂಧಿಸಿ ಸಾಕುವುದರಲ್ಲಿ!

04

ಗಿಳಿಗಳನ್ನು ಸಾಕುತ್ತಿರುವುದು ಇಂದು ನಿನ್ನೆಯದಲ್ಲ. ಅದರ ಉಲ್ಲೇಖವನ್ನು ಪ್ರಾಚೀನ ಸಾಹಿತ್ಯಗಳಲ್ಲೂ ಕಾಣಬಹುದು. ಒಮ್ಮೆ ಶ್ರೀ ಶಂಕರಾಚಾರ್ಯರು ಮಾಹಿಷ್ಮತಿ ನಗರದಲ್ಲಿರುವ ಮಂಡನಮಿಶ್ರರನ್ನು ವೇದಾಂತ ವಿಷಯದಲ್ಲಿ ಚರ್ಚಿಸಲು ಹೋಗಿದ್ದಾಗ ಮಂಡನಮಿಶ್ರರ ಮನೆಯ ಜಗುಲಿಯಲ್ಲಿ ಶುಕ ಸಾರಿಕೆ (ಹೆಣ್ಣು ಗಿಳಿ)ಗಳು ಕೂಡಾ ವೇದಾಂತ ವಿಷಯವಾಗಿ ಚರ್ಚಿಸುತ್ತಿದ್ದವು ಎಂಬುದರ ಉಲ್ಲೇಖವಿದೆ. ಮಾನವನ ಪಾಂಡಿತ್ಯಕ್ಕನುಗುಣವಾಗಿ ಶುಕವೂ ಅಷ್ಟಿಷ್ಟು ಗ್ರಹಿಸುತ್ತವೆ ಎನ್ನುವುದಕ್ಕೂ ಇದು ಒಂದು ನಿದರ್ಶನ, ಮತ್ತು ಆ ಕಾಲದಲ್ಲೂ ಗಿಳಿಗಳನ್ನು ಸಾಕುತ್ತಿದ್ದರು ಎನ್ನುವುದಕ್ಕೂ ಪುರಾವೆ.

ನಮ್ಮ ಪ್ರೀತಿ ನಿಷ್ಕಲ್ಮಷವೂ ಸಹಜವೂ ಆಗಿದ್ದಾಗ ಯಾವುದನ್ನಾದರೂ ಬಂಧಿಸಿ ಅರಿಯುವ, ಅನುಭವಿಸುವ ಅಗತ್ಯ ಬರುವುದಿಲ್ಲ. ಇದು ಕೇವಲ ಗಿಣಿಗೆಂದೇನೂ ಅಲ್ಲ. ಪ್ರಕೃತಿಯೊಳಗೊಂದೊಂದು ವಿಷಯಗಳಿಗೂ ಇದು ಹೌದು. ಅಂದು ಮಂಡನಮಿಶ್ರರ ಮನೆಯಂಗಳದಲ್ಲಿ ಮನಸೇಚ್ಚೆ ಗಿಳಿಗಳು ಚರ್ಚಿಸುತ್ತಿದ್ದುದು ಈ ವಿಷಯಗಳನ್ನೇ. ಪ್ರಕೃತಿಯಲ್ಲಿ ಉಣಲು, ಉಡಲು, ಅಡಗಲು ಬೇಕಾದುದೆಲ್ಲವೂ ತಾನಾಗಿ ಬೆಳೆಯುತ್ತಿರಲು, ಪ್ರಕೃತಿಯು ಋತು ಬದ್ಧವಾಗಿ ಕೃಷಿ ಮಾಡುತ್ತಿರಲು, ನಮ್ಮಂಥಾ ಖಗ ಮೃಗಗಳಿಗೆಲ್ಲಾ ಅಡಿಗಡಿಗೆ ಆಹಾರ ಆನಂದಗಳು ಸಿಗುತ್ತಿರಲು, ಈ ಮನುಜರೇನು ಮಹಾ ಕೃಷಿ ಮಾಡುವುದು? ಕೈಗಾರಿಕೆ ಮಾಡುವುದು? ವ್ಯಾಪಾರ ಮಾಡುವುದು? ಭವಿಷ್ಯಕ್ಕೆಂದು ಕೂಡಿ ಹಾಕುವುದು? ಸಂಪತ್ತನ್ನು ಕೂಡಿಹಾಕುವುದಕ್ಕಿಂತ ಹೆಚ್ಚಿನ ಬಂಧನ ಯಾವುದು? ಹರಿವ ನೀರನ್ನು ಹೀಗೊಂದು ಅಣೆಕಟ್ಟು ಕಟ್ಟಿ ಬಂಧಿಸಲು ಈ ಮನುಜರಿಗೆ ಅಧಿಕಾರ ಕೊಟ್ಟವರು ಯಾರು? ಎಂದೆಲ್ಲ ಆ ಗಿಣಿಗಳು ಅದ್ಯಾವುದೋ ಹುಲ್ಲಕ್ಕಿ ಜಗಿಯುತ್ತಾ ಆಧ್ಯಾತ್ಮಿಕವಾಗಿ ಚರ್ಚಿಸುತ್ತಿದ್ದಿರಬಹುದು. ಆ ದೊಡ್ಡ ದೊಡ್ಡ ವಿಷಯ ನಮಗ್ಯಾಕೆ ಬಿಡಿ. ನಮ್ಮ ಹೊಟ್ಟೆಯ ವಿಷಯ ಸಾಕು ಬಿಡಿ.

ಮೊದ ಮೊದಲು ಗಿಳಿಶಾಸ್ತ್ರ ಹೇಳುವವರು ಹೊಟ್ಟೆಪಾಡಿಗಾಗಿ ಗಿಳಿಗಳನ್ನು ಬಂಧಿಸಿ ಅದರಿಂದ ಶಾಸ್ತ್ರ ಹೇಳುಸುತ್ತಿದ್ದರು. ಪಂಜರದೊಳಗಣ ಗಿಳಿ ಶಾಸ್ತ್ರ ಹೇಳುವವನು ಇಡುತ್ತಿದ್ದ ರಾಶಿ ಚೀಟಿಗಳಲ್ಲೊಂದು ಚೀಟಿಯನ್ನು ಎತ್ತಿ ಕೊಡುತ್ತಿತ್ತು. ಅದರೊಳಗೆ ಭವಿಷ್ಯ ಕೇಳುವವನ ಭವಿಷ್ಯ ಅಡಗಿರುತ್ತಿತ್ತು.

ಗ್ರಹಗತಿಯ ತಿದ್ದುವನೆ ಜೋಯಿಸನು ಜಾತಕದಿ?

ವಿಹಿತವಾಗಿಹುದದರ ಗತಿ ಸೃಷ್ಟಿವಿಧಿಯಿಂ

ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ

ಸಹನೆ ವಜ್ರದ ಕವಚ- ಮಂಕುತಿಮ್ಮ

01

ಆದರೂ ಅನೇಕರು ಮಾನಸಿಕ ದೌರ್ಬಲ್ಯದಿಂದ ಪಂಜರದೊಳಗೆ ಬಿದ್ದವರೆ/ ಪಂಜರದ ಗಿಳಿಯ ಭವಿಷ್ಯಕ್ಕೆಳಸುವವರೆ. ಇಂದು 1973ರ ವನ್ಯಜೀವಿ ಕಾಯ್ದೆಯಡಿ ಗಿಣಿ ಸಾಕಬಾರದೆಂದಿರುವುದರಿಂದ, ಭವಿಷ್ಯ ವಾಚನಕ್ಕೆ ಇನ್ನೂ ನಾಜೂಕಾದ ಕಂಪ್ಯೂಟರ್ ತಜ್ಞತೆಗಳು ಬಂದಿರುವುದರಿಂದ, ಹೊಟ್ಟೆಪಾಡಿಗಾಗಿ ಗಿಳಿ ಹೆಕ್ಕಿ ಕೊಡುವ ಕಾಳುಗಳು ಸಾಕಾಗದಿರುವುದರಿಂದ ಗಿಳಿಶಾಸ್ತ್ರ ಹಾಗೆ  ಹಾಗೆ ಮಾಯವಾಗಿದೆ. ಹಾಗೆಂದು ಬಂಧನದ ಗಿಳಿಯೇನೂ ಮಾಯವಾಗಿಲ್ಲ. ಗಿಳಿಯ ಇನ್ನೊಂದು ರೂಪವಾದ Love Birds ಗಳು ಪೇಟೆಯ ಮನೆಗಳಲ್ಲಿ ಕಾಣತೊಡಗಿವೆ. ಅದು ಈಗ ದೊಡ್ಡ ಉದ್ಯಮವಾಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೆ.

ನಾವೂ ಗಿಳಿ ಸಾಕಿದ್ದೆವು.

ಸುಮಾರು 15 ವರ್ಷಗಳ ಹಿಂದೆ ಸತ್ತ ಅಡಿಕೆ ಮರವನ್ನು ತರಿಯುತ್ತಿದ್ದಾಗ ಅದರ ಪೊಟರೆಯೊಳಗಿದ್ದ ಸಾರಿಕೆಯೊಂದು ನಮಗೆ ಸಿಕ್ಕಿತು. ಆ ಮರಿ ಹಾರಲು ಇನ್ನೂ ಶಕ್ತವಾಗಿರಲಿಲ್ಲ. ನಾನು ಮತ್ತು ನನ್ನ ತಂಗಿ ಅದನ್ನು ಸಾಕೋಣವೆಂದು ನಿರ್ಧರಿಸಿ ಪೇಟೆಯಿಂದ ಒಂದು ಗೂಡನ್ನು ತರಿಸಿಕೊಂಡೆವು. ಆ ಸಾರಿಕೆಗೆ ಚೆಲುವಿ ಎಂದು ಹೆಸರಿಟ್ಟೆವು. ನಮ್ಮನೆಯ ಬಾಲ್ಕಾನಿಯಲ್ಲಿ ಪಂಜರವನ್ನು ನೇಲಿಸಿದೆವು.

ಚೆಲುವಿಗೆ ಆಹಾರ ಕೊಡುವುದು ನಮ್ಮಮ್ಮನ ಕೆಲಸವಾಗಿತ್ತು. ಚೆಲುವಿಯೋ ಹೊಟ್ಟೆಬಾಕಿ. ಬೆಳಿಗ್ಗಿಂದ ಸಂಜೆಯವರೆಗೆ ಎಷ್ಟು ಕೊಟ್ಟರೂ ತಿನ್ನುತ್ತಿತ್ತು. ಪುಟ್ಟ ಮರಿಯ ಹಸಿವು ಇಂಗಿಸುವುದೇ ನಮಗೆ ಸವಾಲಾಗಿತ್ತು. ಖಾರದ ಹಸಿಮೆಣಸಿನಕಾಯಿ ಚೆಲುವಿಗೆ ಬಲು ಪ್ರಿಯ! ಶಾಲೆಯಿಂದ ಬಂದ ನಂತರ ಅದನ್ನು ಪಂಜರದಿಂದ ತೆಗೆದು ಕೋಣೆಯೊಳಗೆ ತೆಗೆದುಕೊಂಡು ಹೋಗಿ ಹಸಿಮೆಣಸು ಕೊಟ್ಟು ಅದರೊಡನೆ ಆಡುವುದು ನಮ್ಮ ದಿನಚರಿಯಾಗಿ ಬಿಟ್ಟಿತ್ತು. ನಮ್ಮನ್ನು ಬೆಳಗ್ಗೆ ಏಳಿಸುವ ಕೆಲಸವೂ ಚೆಲುವಿಯದೇ ಆಗಿತ್ತು.

ಪಂಜರದೊಳಗೆ ಇರಿಸಿದ ಮಾರನೇ ದಿನ ಬೆಳಿಗ್ಗೆ ನಮ್ಮೆಲ್ಲರಿಗೂ ಆಶ್ಚರ್ಯ ಕಾದಿತ್ತು. ಚೆಲುವಿಯ ಅಪ್ಪ ಅಮ್ಮ ಪಂಜರದ ಮೇಲೆ ಕುಳಿತು ಕಂದಮ್ಮನನ್ನು ಮಾತಾಡಿಸುತ್ತಿದ್ದವು. ಅಪ್ಪ ಅಮ್ಮ ಅಲ್ಲದೆ ಇನ್ನೂ 10-15 ಗಿಳಿಗಳು ಅಲ್ಲಿದ್ದವು. ಅರ್ಧಗಂಟೆ ಕಾಲ ಅಲ್ಲೇ ಇರುತ್ತಿದ್ದವು. ಚೆಲುವಿ ಬರಲಾರಳು ಎಂದು ಗೊತ್ತಾದಮೇಲೆ ಎಲ್ಲವೂ ಅಲ್ಲಿಂದ ಹೋಗುತ್ತಿದ್ದವು. ತಮ್ಮ ನಿತ್ಯ ಕಾರ್ಯ ಮುಗಿಸಿ ಸಂಜೆ ಮನೆಗೆ ಹೋಗುವಾಗ ಪುನಃ ಚೆಲುವಿಯ ಕುಶಲವನ್ನು ವಿಚಾರಿಸುತ್ತಿದ್ದವು. ನಾವು ಚೆಲುವಿಯನ್ನು ಸುಮಾರು ಆರು ತಿಂಗಳು ಸಾಕಿರಬಹುದು. ಈ ಆರೂ ತಿಂಗಳಲ್ಲಿ ಒಂದು ದಿನವೂ ಬಿಡದಂತೆ ಇಡೀ ಗಿಳಿಗಳ ಪಟ್ಲಾಂ ಭೇಟಿಕೊಡುತ್ತಿದ್ದವು. ಆರು ತೀಂಗಳಲ್ಲಿ ಚೆಲುವಿಯು ನಮಗೆ ಬಹುತೇಕ ಒಗ್ಗಿ ಬಿಟ್ಟಿತ್ತು. ನಮ್ಮ ಹೆಗಲೇರಿ ಅದು ನಮ್ಮ ತೋಟದ ತುಂಬ ಸವಾರಿ ಮಾಡುತ್ತಿತ್ತು. ಅದೊಂದು ದಿನ ನಾವು ಪಂಜರದ ಕೀಲಿ ಸರಿಯಾಗಿ ಹಾಕದ ಕಾರಣ ಚೆಲುವಿಯು ಪಂಜರದಿಂದ ಹೊರಬಂದು ನಮ್ಮನ್ನು ಕರೆಯುತ್ತಿತ್ತು. ಆ ಕರೆ ನಮಗೆ ಕೇಳಿಸುವುದಕ್ಕಿಂತ ಮೊದಲು, ನಮ್ಮನೆ ಮಾರ್ಜಾಲಕ್ಕೆ ಕೇಳಿಸಿತ್ತು. ಹಾಗಾಗಿ ಚೆಲುವಿಯ ಕಥೆ ಮುಗಿದಿತ್ತು. ಅಣ್ಣ ತಂಗಿಯರಿಗೆ ಬೇಸರ ಬಹಳವಾಗಿತ್ತು.

15 ವರ್ಷ ಕಳೆದರೂ ಚೆಲುವಿಯಷ್ಟೇ ಹಸುರಾಗಿ ಅದರ ನೆನಪು ಇನ್ನೂ ಇದೆ. ಮಾಸದ ನೆನಪಿಗೆ ವರ್ಷದ ಹಿಂದೆ ಮತ್ತೆರಡು ಗಿಳಿಮರಿಗಳನ್ನು ಸಾಕಿದ ಅನುಭವ ಸೇರಿದೆ. ಮತ್ತದೇ ಸತ್ತ ಕಂಗಿನ ಮರದ ಪೊಟರೆಯೊಳಗೆ ಸಿಕ್ಕಿದ ಮರಿಗಳು. ನಮ್ಮ ತೋಟದ ಕೆಲಸದ ಮಾದೇವ ಅದನ್ನು ಸಾಕಲು ಇಚ್ಚಿಸಿದ. ಹಾಗೆ ಸಾಕುವುದು ದ್ರೋಹದ ವಿಷಯವಾದರೂ ಆ ಮರಿಗಳು ಹಾರಲು ಅಶಕ್ತವಿರುವುದರಿಂದ ಒಂದೆರಡು ತಿಂಗಳು ಸಾಕಿ ಬಿಟ್ಟುಬಿಡೋಣವೆಂದು ನಿರ್ಧರಿಸಿದೆವು. (ಮನಸ್ಸಿನ ಮೂಲೆಯಲ್ಲೆಲ್ಲೋ ಅಧ್ಯಯನದ, ಆ ಚೆಲುವಿನಾಸ್ಪಾದನೆಯ ವಾಸನೆ ಇದ್ದಿರಬಹುದು.) ಅರರೆ ಏನಾಶ್ಚರ್ಯ! ಈ ಬಾರಿಯೂ ಅದೇ ಅನುಭವ. ಗಿಳಿಗಳ ತಂಡ ಬೆಳ್ಳಂಬೆಳಿಗ್ಗೆ ಅಲ್ಲಿ ಹಾಜರ್. ಮಕ್ಕಳೀರ್ವರನ್ನು ಕರೆದುಕೊಂಡು ಹೋಗುವ ಹಂಬಲ. ನಾನು ಈ ಬಾರಿ ಅಲ್ಲಿನ ಆಗುಹೋಗುಗಳನ್ನು ದಾಖಲಿಸತೊಡಗಿದೆ. ನಾನು ಗಮನಿಸಿದಂತೆ ತಾಯಿ ಮತ್ತು ತಂದೆ ಪಂಜರದ ಮೇಲೆ ಕುಳಿತುಕೊಂಡು ಮಕ್ಕಳನ್ನು ಮಾತನಾಡಿಸುತ್ತಿದ್ದವು. ಉಳಿದ 15- 20 ಗಿಳಿಗಳು ಅಲ್ಲೇ ಪಕ್ಕದಲ್ಲಿರುವ ಗಿಡ, ಮರಗಳಲ್ಲಿ ಕುಳಿತು ಜೋರಾಗಿ ಕೂಗುತ್ತಿದ್ದವು. ನಾವೇನಾದರು ಪಂಜರದ ಸಮೀಪ ಹೋದರೆ ಈ ಅಪ್ಪ ಅಮ್ಮರಿಗೆ ಇತರೆ ಗಿಳಿಗಳು ಎಚ್ಚರಿಕೆಯ ಸಂದೇಶ ಕೊಡುತ್ತಿದ್ದವು, ಸಂದೇಶ ತಲುಪುತ್ತಿದ್ದಂತೆ ಪಂಜರದ ಮೇಲಿಂದ ಹಾರಿ ಬಿಡುತ್ತಿದ್ದವು. ಸಾಯಂಕಾಲವೂ ಇದೇ ದೃಶ್ಯ.

ಅದೊಂದು ದಿನ ಬೆಳಗ್ಗೆ ಗಿಳಿಗಳ ಹರಟೆ ಬಲು ಜೋರಾಗಿಯೇ ಇತ್ತು. ನಾನು ನನ್ನ ಕ್ಯಾಮೆರಾದೊಂದಿಗೆ ಅಲ್ಲಿಗೆ ಹೋದೆ. ಮತ್ತೆ ಮತ್ತೆ  ಆಶ್ಚರ್ಯ. ಗಂಡು/ಅಪ್ಪ ಗಿಳಿ ತನ್ನ ಕೂಸುಗಳಿಗೆ ತಾನು ತಂದಿದ್ದ ಸೀಬೆ ಹಣ್ಣಿನ ಗುಟುಕು ಕೊಡುತ್ತಿತ್ತು. ಮರಿಗಳೇರಡೂ ಪಂಜರದಿಂದ ಹೊರಗೆ ತಮ್ಮ ಕೊಕ್ಕನ್ನು ತೂರಿಸಿ ತುತ್ತು ಸ್ವೀಕರಿಸುತ್ತಿದ್ದವು, ಈ ಪರಿ ಬಾಂಧವ್ಯವನ್ನು ನೋಡಿ ನನ್ನ ಕಣ್ಣು ತುಂಬಿದ್ದವು. ನಮ್ಮೆಲ್ಲರ ಮನೆ ಮನೆಯೊಳಗೂ ಇಂಥಾ ಬಾಧವ್ಯ ಸದಾ ಇರಲೆಂದು ಆಶಿಸಿದವು. ಕ್ಯಾಮೆರಾ ಕಣ್ಣು ಆ ದೃಶ್ಯವನ್ನು ಹಾಗೆ ಸೆರೆ ಹಿಡಿದಿತ್ತು. ಚೆಲುವಿಗೆ ದೊರೆತ ಆರು ತಿಂಗಳ ಕಾಲದ ದೀರ್ಘ ಪ್ರೀತಿಯನ್ನು. ಈ ಜೋಡಿಗಳಿಗೆ ಪಂಜರದೊಳಗಿದ್ದರೂ ಅಪ್ಪ ಅಮ್ಮರ ಕೈ ತುತ್ತು ಸಿಗುತ್ತಿದ್ದುದನ್ನು, ಅದರೊಂದಿಗೆ ಇಡೀ ಗಿಳಿಗಳ ಹಿಂಡಿನ ಅನುಕಂಪವನ್ನು ಗಮನಿಸಿದರೆ ಶುಕಲೋಕದಲ್ಲೊಂದು ಪ್ರೀತಿಯ ಪಾಠ ತೆರೆಯುತ್ತದೆ. ಮಾನವರಲ್ಲಿ ಸಂಬಂಧಗಳು ಕಳೆದುಕೊಳ್ಳುತ್ತಿರುವ ಈ ಹೊತ್ತಿನಲ್ಲಿ ಶುಕ ಲೋಕದ ಪಾಠ ಬಲು ಮಹತ್ವದ್ದಾಗಿದೆ.

02

08

ನನ್ನ ಪಕ್ಷಿವೀಕ್ಷಣೆಗೆ ಪ್ರೇರಕರಾದ, ಹಿರಿಯ ಸ್ನೇಹಿತರಾದ ವಿಜಯಲಕ್ಷ್ಮಿಯವರು ಕೂಡಾ ಶುಕಲೋಕದ ಪ್ರೀತಿ, ಮಮತೆಯನ್ನು ದಾಖಲಿಸಿದ್ದಾರೆ. ಅವರು ಪಕ್ಷಿವೀಕ್ಷಣೆ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ವಿದ್ಯುತ್ ತಂತಿಗೆ ಸಿಲುಕಿ ಅಸುನೀಗಿದ್ದ ಗಿಳಿಯನ್ನು ಮತ್ತೊಂದು ಗಿಳಿ ಬಂದು ತಂತಿಯಿಂದ ಬಿಡಿಸಲು ಯತ್ನಿಸುತ್ತಿಂತೆ. ಎಷ್ಟು ಪ್ರಯತ್ನಿಸಿದರೂ ಅದಕ್ಕೆ ಬಿಡಿಸಲಾಗಲಿಲ್ಲವಂತೆ. ತನ್ನ ಕೊಕ್ಕನ್ನು ಅದರ ಕೊಕ್ಕಿಗೆ ಸವರಿ ಪ್ರೀತಿ ವ್ಯಕ್ತ ಪಡಿಸುವ ಪರಿಯು ಅವರ ಕ್ಯಾಮೆರಾದಲ್ಲೂ  ಸೆರೆಯಾಗಿದೆ. ಇದು ನಿಜಕ್ಕೂ ಮನ ಕಲುಕುವಂತಾದ್ದು.

03

ಶುಕಲೋಕದ ದಾಂಪತ್ಯ –

ಶುಕ ಸಾರಿಕೆಯರದ್ದು Monogyny . ಅಂದರೆ ಸಂತಾನೋತ್ಪತ್ತಿಯ ಅವಧಿಯ ಮಟ್ಟಿಗೆ ಒಂದು ಗಂಡಿಗೆ ಒಂದು ಹೆಣ್ಣು. ಮುಂದಿನ ಸಂತಾನೋತ್ಪತ್ತಿ ಸಮಯದಲ್ಲಿ ಅದು ಬೇರಾಗಬಹುದು. ಇಲ್ಲಿ ಸಾರಿಕೆಗೆ (ಹೆಣ್ಣು) ಗಂಡಿನ ಆಯ್ಕೆಯ ಸ್ವಾತಂತ್ರ್ಯ. ಯಾವ ಶುಕವು ಅತಿ ಎತ್ತರಕ್ಕೆ ಹಾರಬಲ್ಲುದೋ ಅಂಥಾ ಶುಕವನ್ನು ಆರಿಸುತ್ತದೆ. ತನ್ನೆರಡು ರೆಕ್ಕೆಯನ್ನು ಮೇಲ್ಮುಖವಾಗಿ ಕುಳಿತಲ್ಲೇ ಹಾರಿಸುತ್ತಾ ತನ್ನ ಒಪ್ಪಿಗೆಯನ್ನು ಸೂಚಿಸುತ್ತದೆ. ಒಪ್ಪಿಗೆ ಸೂಚಿಸಿದ ನಂತರ ಬೋಳು ಮರದ ತುದಿಯಲ್ಲಿ ಗಂಡು ಹಕ್ಕಿ ಕುಳಿತು ಹೆಣ್ಣನ್ನು ತನ್ನತ್ತ ಸೆಳೆಯುತ್ತದೆ. ಸಾರಿಕೆಯು ತುಸು ಕೆಳಗೆ ಕುಳಿತು ಗಂಡಿನ ಕೊಕ್ಕನ್ನು ಸವರುತ್ತದೆ. ಆಗ ತಾನು ತಿಂದ ಆಹಾರವನ್ನು ವಾಕರಿಸಿ ತೆಗೆದು ಹೆಣ್ಣಿಗೆ ತಿನ್ನಿಸುತ್ತದೆ.

05

ಗಿಳಿಗಳು ಗೂಡು ಮಾಡುವುದಿಲ್ಲ, ಮರದ ಪೊಟರೆಯೊಳಗೆ 2-3 ಮೊಟ್ಟೆಗಳನ್ನಿಡುತ್ತದೆ. ಕಾವು ಕೊಡುವುದು ಹೆಣ್ಣಿನ ಕರ್ತವ್ಯವಾದರೆ, ಮರಿ ಹುಟ್ಟಿದ ನಂತರ ಶುಕಸಾರಿಕೆಯರಿಬ್ಬರೂ ಕಂದಮ್ಮಗಳಿಗೆ ಆಹಾರವನ್ನು ತಂದೊದಗಿಸುತ್ತವೆ. ಗಿಳಿಗಳು ಮೊದಲೇ ತಿಳಿಸಿದಂತೆ ಸಂಘ ಜೀವಿ. ಸಂತಾನೋತ್ಪತ್ತಿ ಸಮಯದಲ್ಲೂ ಹತ್ತಿರಹತ್ತಿರದ ಮರಗಳಲ್ಲಿ ಇತರೆ ಗಿಳಿಗಳು ದಾಂಪತ್ಯ ಮಾಡುವುದನ್ನು ನಾವು ಕಾಣಬಹುದು. ಸದಾ ಗುಂಪಾಗಿ ಹಾರುವುದನ್ನೂ ನೋಡಬಹುದು.

06

07

ಗಿಳಿಗಳಲ್ಲಿನ ಪೌರುಷ-

ಮುದ್ದಿನ ಗಿಳಿಗೆ ಇನ್ನೊಂದು ಮುಖವಿದೆ. ತಮ್ಮ ಮರಿಗಳಿಗೆ ತೊಂದರೆಯಾದರೆ ಇವು ಸುಮ್ಮನೆ ಕೂರುವ ಜಾಯಮಾನವದ್ದಲ್ಲ. ಎಂಥಾ ಹಿಂಸ್ರ ಪಕ್ಷಿಯನ್ನಾದರೂ ಕುಕ್ಕಿ ಹೊರಗಟ್ಟುವ ಕೆಚ್ಚು ಇವಕ್ಕಿದೆ. ಅಂಬರಕೀಚುಗ, ಮೈನಾದಂಥಾ ಧೈರ್ಯಶಾಲಿ ಹಕ್ಕಿಗಳು ಎಲ್ಲಿ ವಾಸಿಸುತ್ತವೋ ಅಲ್ಲಿ ಗಿಳಿಗಳು ಜಾಣ್ಮೆಯಿಂದ ಸಂತಾನೋತ್ಪತ್ತಿ ಮಾಡುವುದೂ ಉಂಟು.

ನಮ್ಮ ತೋಟದಲ್ಲೊಮ್ಮೆ ಗಿಳಿಯ ಪೊಟರೆಗೆ ಕೇರೆ ಹಾವು ನುಗ್ಗಿತ್ತು. ಗಿಳಿಗಳ ತಂಡ ಎಷ್ಟು ಅರಚಿದರೂ, ಕುಟುಕಿದರೂ ಕೇರೆ ಹಾವಿಗೆ ಅದು ನಾಟಲಿಲ್ಲ. ಈ ಅರಚಾಟವನ್ನು ಕೇಳಿದ ಗೊರವಂಕ(ಮೈನಾ) ಗಿಳಿಗಳ ಸಹಾಯಕ್ಕೆ ಧಾವಿಸಿದವು. ನಿಮಿಷಗಳಲ್ಲಿ ಗೊರವಂಕಗಳು ಹಾವನ್ನು ಅಟ್ಟಿಸಿಬಿಟ್ಟಿದ್ದವು. ಈ ನಿದರ್ಶನದಿಂದ ಜೀವಪ್ರಪಂಚದಲ್ಲಿರುವ ಪ್ರೀತಿಯ, ಕಳಕಳಿಯ ಇನ್ನೊಂದು ಪುಟ ತೆರದಂತಾಗಿದೆ.

ಮತ್ತಷ್ಟು ಶುಕಲೋಕದ ಪುಟಗಳಿಗಾಗಿ ಕಾದು ನೋಡಿ.

ಮುಂದಿನ ಕಂತಿನಲ್ಲಿ – ಶುಕಲೋಕದಲ್ಲೊಂದು ಸುತ್ತ ಭಾಗ 3 – ಗಿಳಿಗಳಲ್ಲ, ಇವು ಹಾರುವ ಮಂಗಗಳು!

ಚಿತ್ರಗಳು: ಡಾ ಅಭಿಜಿತ್ ಎ.ಪಿ.ಸಿ. ವಿಜಯಲಕ್ಷ್ಮಿ ರಾವ್, ಜಿತೇಶ್ ಪೈ.

Facebook ಕಾಮೆಂಟ್ಸ್

ಲೇಖಕರ ಕುರಿತು

Dr. Abhijith A P C

ಲೇಖಕರಾದ ಡಾ. ಅಭಿಜಿತ್ ಎ.ಪಿ.ಸಿ ಹೋಮಿಯೋಪಥಿ ವೈದ್ಯಶಾಸ್ತ್ರವನ್ನೋದಿ ಮೈಸೂರಿನ ಜೆ.ಪಿ.ನಗರದಲ್ಲಿ ವೈದ್ಯ ಕೃಷಿ ಮಾಡುತ್ತಿದ್ದಾರೆ . ಆದರೂ ತಾವು ಹುಟ್ಟಿದ ನೆಲವನ್ನು ಮರೆಯಲಿಲ್ಲ . ಜೊತೆಜೊತೆಯಾಗಿ ತಮ್ಮ ಮನೆತನದ ಭೂಮಿಯಲ್ಲಿ ಅನ್ನದ ಕೃಷಿಯನ್ನೂ ಮಾಡುತ್ತಿ ದ್ದಾರೆ. ಈ ನಡುವೆ ಬೇಡವೆಂದರೂ ನಮ್ಮ ಸುತ್ತ ಹಾರುವ ಓಡಾಡುವ ಆ ಮೂಲಕ ಪ್ರಕೃತಿ ನೀತಿ ಪಾಠ ಹೇಳುವ ಖಗಮೃಗಗಳನ್ನು ನೋಡುತ್ತಾರೆ .

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!