ಕಥೆ ಕಾದಂಬರಿ

ಕರಾಳ ಗರ್ಭ- ಭಾಗ 6

ನಾನು ಮಹಾ ನ್ಯಾಯ ನೀತಿ ಅನ್ನುವ ಪ್ರಾಣಿ, ಜೋಕ್ ಮಾಡುವುದು ಬಿಟ್ಟರೆ ಅದೊಂದೆ ನನಗೆ ಪರಮ ಪ್ರಿಯವಾಗಿರುವುದು..ನನಗೆ ಮೃದುಲಾ ಕಡೆಯವರ ಮೇಲೆ ಸಿಟ್ಟು ಉಕ್ಕಿತ್ತು…ನನ್ನ ಕಕ್ಷಿದಾರರೇ ಆಗಿ ಬಂದು, ವಿಷಯ ಗುಪ್ತವಾಗಿರಲಿ ಎಂದು ನನ್ನಿಂದ ವಾಗ್ದಾನ ಪಡೆದವರು, ನನ್ನಿಂದಲೇ ಬ್ಲ್ಯಾಕ್’ಮೈಲರನ್ನು ಗುಪ್ತವಾಗಿಟ್ಟಿದ್ದಕ್ಕೆ…..

ಆದರೆ ಇದಕ್ಕೂ ಹೆಚ್ಚಿನ ಶಾಕ್ ನನಗೆ ಕೊನೆಯ ಹಳೆ ಹರಿದ ಪತ್ರಗಳ ಫೈಲಿನಲ್ಲಿ ನೋಡಿದಾಗ ಆಯಿತು. ಹಳೆಯದಾಗಿ ಮಾಸಿಹೋಗಿರುವ ರಿಜಿಸ್ಟ್ರಾರ್ ಆಫೀಸಿನ ಮೇ ತಿಂಗಳ ದತ್ತು ಮಕ್ಕಳ ರೆಕಾರ್ಡ್ಸ್ ಇದರಲ್ಲಿದೆ…

ಇವನ ಬಳಿ! ಹೇಗೆ ಬಂತು??..ತಾನಂತೂ ಅಪ್ಲಿಕೇಶನ್  ಹಾಕಿರಲಾರ.. ಇಲ್ಲವೇ ಕದ್ದಿರಬೇಕು..

ಓಹ್ ಗಾಡ್, ನನ್ನ ತಲೆಯನ್ನು ಮಾರಿದರೆ ಯಾವ ಲ್ಯಾಬ್’ನವರೂ ತೆಗೆದುಕೊಳ್ಳಲಾರರು..ಬೆಳೆಯದ ಬ್ರೈನ್ ಎಂದು..

ಈಗ ಗೊತ್ತಾಗುತ್ತಿದೆ!!!…ನಾನು ಆ ಕೆಲಸದವಳನ್ನು ನೋಡಿದ್ದು ರಿಜಿಸ್ಟ್ರಾರ್ ಆಫೀಸಿನಿಂದ ಹೊರಬರುವಾಗ ಡಿಕ್ಕಿ ಹೊಡೆದಾಗ ಅಲ್ಲವೇ?..ಹೂಂ, ಸಂದೇಹವೆ ಇಲ್ಲಾ… ಮತ್ತೆ ಜಾನಿ ಅವಳು ನನ್ನ ಗರ್ಲ್’ಫ್ರೆಂಡ್ ;ಲೂಸಿಯಾ ಆಫೀಸಿನಲ್ಲಿ ನನ್ನ ಬಗ್ಗೆ ಕದ್ದು ಕೇಳಿದ್ದಳು ಅಂದಿದ್ದನಲ್ಲಾ?..ಹೌದು, ಯಾಕಿರಬಾರದು, ಎರಡು ಆಫೀಸಿಗೂ ಅವಳೇ ಕಸ ಗುಡಿಸುತ್ತಿರಬೇಕು..ಇದು ಚಿಕ್ಕ ಊರು, ಏನಿದೆ ಆಶ್ಚರ್ಯ?..

ಅದಕ್ಕಿಂತಾ ಹೆಚ್ಚಾಗಿ ಜಾನಿಗೆ ಬ್ಲ್ಯಾಕ್ ಮೈಲ್’ನಲ್ಲಿ ಒತ್ತಾಸೆಯಾಗಿ ನಿಂತು, ಅನುಮಾನ ಬಂದ ಮೇ ತಿಂಗಳ ರೆಕಾರ್ಡ್ಸ್ ಕದಿಯಲು ಆ ದರಿದ್ರ ಸರಕಾರಿ ಆಫೀಸಿನಿಂದ ಅವಳಿಗೆ ಕಷ್ಟವೇನಾದೀತು… ಎಲ್ಲಾ ಕಡೆ ಕಸ ಗುಡಿಸಿಕೊಂಡು ಬರುವಾಗ?…

ಆದರೆ ಒಂದು ನಿಮಿಷ ತಾಳಪ್ಪಾ, ಪತ್ತೇದಾರಿ ಮೇಧಾವಿ! ಎಂದು ಬುದ್ದಿ ಹೇಳಿದೆ..ಈ ಜಾನಿಯಂತವನಿಗೆ ಮೃದುಲಾ ಬಗ್ಗೆ ತಿಳಿದಿದ್ದು ಹೇಗೆ, ಮೂವತ್ತೈದು ವರ್ಷದ ಹಿಂದೆ ಮೇ ತಿಂಗಳಲ್ಲೇ ದತ್ತು ಪಡೆದ ಕತೆಯ ವಿವರಗಳು ಎಲ್ಲಿ ಸಿಕ್ಕವು?..ಹೇಗೆ.. ಹೇಗೆ?

ಹಾಗಾದರೆ ಅವನು ನಾನು ತಿಳಿದಂತೆ ಪೆದ್ದನಂತೂ ಅಲ್ಲಾ, ಒಳ್ಳೆ ಪತ್ತೆದಾರನೇ ಆದರೆ ಕೆಟ್ಟ ದಾರಿ ತುಳಿದಿದ್ದಾನೆ!..ನನಗಿಂತಾ ಒಂದೆರಡು ಹೆಜ್ಜೆ ಮುಂದೆಯೇ ಇದ್ದಾನೆ, ಈ ವಿಚಾರಣೆಯಲ್ಲಿ ಪ್ರಗತಿ ಸಾಧಿಸುವಲ್ಲಿ!…ಆದರೆ ನಮ್ಮವರು ಇವನ ಬ್ಲ್ಯಾಕ್’ಮೈಲಿಗೆ ಒಪ್ಪುವಂತಾ ಸೀಕ್ರೆಟ್ ಏನು ಹೇಳಿರಬಹುದು? ..

ತಲೆ ಸಿಡಿಯುವಂತಾಯ್ತು..ಮೇ ತಿಂಗಳ ಮಕ್ಕಳ ದತ್ತು ರೆಕಾರ್ಡ್ಸ್ ಎಲ್ಲವನ್ನೂ ಜೇಬಿಗೆ ತುರುಕಿಕೊಂಡೆ..ಮಿಕ್ಕ ಎಲ್ಲಾ ಪತ್ರಗಳನ್ನು ಕೆದರಿ ಹರಡಿ ಹಾಗೆಯೇ ಎದ್ದು ಬಂದೆ..ಜಾನಿಗೆ ತಿಳಿದರೆ ಹಾಳಾಗಿ ಹೋಗಲಿ ಏನು ಮಾಡಬಲ್ಲಾ,?…ಅವನ ಮನೆಯ ಬಾಗಿಲನ್ನು ಲಾಕ್ ಮಾಡಿ ಹೊರಬಂದೆ..

ಅದೇ ಕ್ಷಣವೇ “ಠಪ್ ಪ್!” ಎಂದು ನನ್ನ ತಲೆಯ ಹಿಂಭಾಗಕ್ಕೆ ಆ ಪ್ಯಾಸೇಜಿನಲ್ಲಿ ಕಾದು ಕುಳಿತಿದ್ದವನೊಬ್ಬ ಜೋರಾಗಿ ಬಡಿದಿದ್ದ..”ದರಿದ್ರ ಜಾನಿ,,,!” ಎಂದು ಅವನು ಕಿರುಚಿದ್ದು ನನಗೆ ಕಣ್ಕತ್ತಲೆ ಬರುತ್ತಿರುವಂತೆಯೇ ಕೇಳಿಸಿತು. ಅಷ್ಟೇ ನನಗೆ ಜ್ಞಾಪಕವಿರುವುದು ನೋಡಿ…ನನ್ನ ಜಗತ್ತು ಕತ್ತಲಾಗಿತ್ತು,ಕುಸಿದಿದ್ದೆ.

ನನಗೆಚ್ಚರವಾದಾಗ , ಜಾನಿ ಮನೆಯ ಬಾಗಿಲಿನಲ್ಲೇ ಬಿದ್ದಿದ್ದೆ, ತಲೆಯಲ್ಲಿ ಬಾಂಬ್ ಸಿಡಿದಂತೆ ನೋಯುತಿತ್ತು..ಮುಖ ಕಿವಿಚಿಕೊಂಡೆದ್ದೆ, .. ಮುಟ್ಟಿನೋಡಿದರೆ ತಲೆಯ ಹಿಂದೆ ಬೋರೆ ಬಂದಿತ್ತು..ತೂರಾಡುತ್ತಾ ಎದ್ದು ಅತ್ತಿತ್ತ ನೋಡಿದೆ…ಹತ್ತು ನಿಮಿಷಗಳೇ ಕಳೆದಿರಬಹುದು.. ಯಾರೂ ಇಲ್ಲಾ..ಗಾಬರಿಯಿಂದ ನನ್ನ ಜೇಬು ಮುಟ್ಟಿ ನೋಡಿದೆ, ಆ ಎಲ್ಲ ಪತ್ರಗಳು ಅಲ್ಲೇ ಇವೆ..

ನನ್ನ ಮೇಲೆ ದಾಳಿ ಮಾಡಿದವನು ನನ್ನನ್ನೇ ಕತ್ತಲಲ್ಲಿ ಜಾನಿ ಎಂದು ತಪ್ಪು ತಿಳಿದಿರಬಹುದೆಂದು ಅರಿವಾಯಿತು. ಅವನಿಗೆ ಈ ಪತ್ರಗಳು ಬೇಕಿರಲಿಲ್ಲವೆ… ಏಕೆ?..ಅವನು ಜಾನಿಯ ವೈರಿಯೆ? ಅದಕ್ಕೇ ತನ್ನ ತಪ್ಪಿನ ಅರಿವಾಗಿ ನನ್ನನ್ನು ಬಿಟ್ಟು ಹೋದನೆ…ಯಾರು?

ನನ್ನ ಕಾರನ್ನು ಸಿಡಿಯುವ ತಲೆಯಲ್ಲೇ ಕೆಟ್ಟದಾಗಿ ಗೇರ್ ಕದಲಿಸುತ್ತಾ ವಡ್ಡು ವಡ್ಡಾಗಿ ಡ್ರೈವ್ ಮಾಡುತ್ತಾ ನನ್ನ ಲಾಡ್ಜಿಗೆ ಬಂದೆ. ಸಂಜೆ ಏಳು ಗಂಟೆಯಾಗುತ್ತಿತ್ತು..ಬೆಡ್ ಮೇಲೆ ಕುಸಿದು ಕುಳಿತು ಬಾಯಿಗೆ ಎರಡು ಸಾರಿಡಾನ್ ಹಾಕಿಕೊಂಡೆ… ಕುಳಿತಲ್ಲೇ ಲೂಸಿಯಾ ಆಫೀಸಿಗೆ ಫೋನ್ ಮಾಡಿದೆ..

ಅವಳೇ ಮೊದಲಿಗೆ “ಹಾಯ್ ವಿಜಯ್, ನಾನಿಂದು ಆಫೀಸಿನಲ್ಲಿ ಲೇಟ್…” ಎಂದಳು

“ಗೊತ್ತಾಯಿತು…” ಎಂದೆ ಸ್ವಲ್ಪ ಗಂಭೀರವಾಗಿ,.ಅವಳಿಗೆ ಅರಿವಾಗಿರಬೇಕು ನನ್ನ ಮೂಡ್..

“ಯಾಕೆ ಏನಾಯಿತು?..ಏನಾದರೂ ಕಂಡು ಹಿಡಿದ್ರಾ?”ಎಂದಳು ಆಸಕ್ತಿಯಿಂದ.

“ನಿಮಗೆಲ್ಲಾ ಗೊತ್ತಿದ್ದ ವಿಷಯವನ್ನೇ ಮತ್ತೆ ಕಂಡು ಹಿಡಿಯಲು ನನ್ನನ್ನು ಬಾಡಿಗೆಗೆ ತೆಗೆದುಕೊಳ್ಳುವ ಉದ್ದೇಶವಾದರೂ ಏನಿತ್ತು, ಮಿಸ್.ಲೂಸಿಯಾ?” ಎಂದೆ ಕುಪಿತನಾಗಿ…ಇವರ ನಾಟಕಕ್ಕೂ ಮಿತಿ ಬೇಡವೆ?

“ಏನು ಹೇಳುತ್ತಿದ್ದೀರಿ ನೀವು?…ನಂಗೇನೂ ಅರ್ಥವಾಗುತ್ತಿಲ್ಲಾ..ಸರಿಯಾಗಿ ಹೇಳಿ” ಎಂದಳು ರಂಪ ಮಾಡುವ ಮಗುವಿನೊಂದಿಗೆ ತಾಯಿ ಮನವೊಲಿಸುವಂತೆ.

ಉಫ್ಹ್ಹ್, ಇವಳಿಗೆ ಗೊತ್ತು ಮಾಡಿಸಬೇಕಂತೆ…ಅಪರೂಪಕ್ಕೆ ಬ್ಯಾಗಿನಿಂದ ತೆಗೆದು ಒಂದು ಸಿಗರೇಟ್ ಹಚ್ಚಿಯೇ ಬಿಟ್ಟೆ..ವಿಕ್ರಮ್ ಬೇಡಾ ಅಂತಾ ಹೇಳಿದ್ದರೆ ಕತ್ತೆ ಬಾಲ!

ನಿಧಾನವಾಗಿ ಅವಳಿಗೆ ಬೆಳಗಿನಿಂದ ನೆಡೆದುದರ ವರದಿ ನೀಡಿದೆ: ನಾನು ಭೇಟಿ ಮಾಡಿದ ವ್ಯಕ್ತಿಗಳು, ಸರಕಾರಿ ಆಫೀಸಿನಲ್ಲಿ ಕಳೆದುಹೋದ ಮುಖ್ಯವಾದ ಕಡತದ ಪತ್ರಗಳು, ಆ ಹುಚ್ಚಿಡಿದಿದೆ ಎನ್ನಲಾದ ಸೂಲಗಿತ್ತಿಯ ಬರೆದ ಒಗಟಿನ ಮಾತು…ಜಾನಿಯ ರೂಮಿನಲ್ಲಿ ಸಿಕ್ಕ ಶಾಕ್ ಆಗುವಂತಾ ದಾಖಲೆ ಪತ್ರಗಳು.ಮೃದುಲಾ – ಫರ್ನಾಂಡೆಸ್  ಜತೆಗೆ ಜಾನಿಯ ವ್ಯವಹಾರ…ಕೊನೆಗೆ ಯಾರೋ ನನ್ನ ತಲೆಗೆ ಬಡಿದು ಬೀಳಿಸಿದ್ದು….ಎಲ್ಲಾ!

“ಈಗ ನಮ್ಮ ಕೇಸ್ ಓಪನ್ ಆಗಿ ಹರಿದು ಬಿದ್ದಿದೆ..ನನಗೆ ಮಾತ್ರ ಯಾಕೋ ಮೋಸ ಮಾಡಿದಿರಿ…. ಇನ್ನು ನಾನು ವಾಪಸ್ ಹೋಗ್ತೇನೆ..ಕೆಲಸ ಮಾಡಲಾರೆ!.”ಎಂದೆ ಕೊನೆಗೆ ಮುನಿಸಿನಿಂದ.

“ತಾಳಿ, ತಾಳಿ, ವಿಜಯ್…ಮೊದಲನೆಯದಾಗಿ ನಿಮ್ಮ ಮೇಲೆ ದಾಳಿಯಾಗಿ ನಿಮಗೆ ನೋವಾಗಿದ್ದಕ್ಕೆ ನನಗೂ ಬಹಳ ನೋವು, ಕೋಪ ಎರಡೂ ಆಗಿದೆ…ಇದ್ಯಾಕೋ ಸಿವಿಲ್ ಕೇಸಿನಿಂದ ಕ್ರಿಮಿನಲ್ ಕೇಸಿಗೆ ತಿರುಗಿದೆ… ಎರಡನೆಯದಾಗಿ ನಮ್ಮ ಫರ್ನಾಂಡೆಸ್ ಆಫೀಸಿನಿಂದ ಜಾನಿಗೆ ಬ್ಲ್ಯಾಕ್’ಮೈಲ್’ಗೆ ದುಡ್ದು ತೆತ್ತಿದ್ದಾಗಲೀ ನನಗಂತೂ ಖಂಡಿತಾ ಗೊತ್ತಿರಲ್ಲಿಲ್ಲಾ, ಅವನ ಸುಳಿವೇ ನನಗಿರಲಿಲ್ಲ…ಅಂದರೆ, ನಮ್ಮ ಆಫೀಸಿನ ಕಡೆಯಿಂದ, ಅದೂ ನನ್ನ ಗಾಡ್’ಫಾದರ್ ಫರ್ನಾಂಡೆಸ್’ರಿಂದಲೇ ನನಗೇ ಮೋಸವಾಗಿದೆ ಅಂತಾಯಿತು, ಛೆ!…” ಎಂದು ನಿಲ್ಲಿಸಿದಳು ನೊಂದು.

ನನ್ನ ಕಡೆ ಮೌನ.

“ನನ್ನನ್ನು ನಂಬುತ್ತೀರಾ ತಾನೆ, ವಿಜಯ್?., ನಿಮ್ಮನ್ನು ಏಮಾರಿಸುವಷ್ಟು ನಾನು ಕೆಟ್ಟವಳೇ?..ನಿಮಗೆ ಏಟು ಬಿದ್ದುದಕ್ಕೂ ನಾನೇ ಕಾರಣ ಎನ್ನುತ್ತೀರಾ?.”ಎಂದು ಲೂಸಿಯಾ ಖಡಾಖಂಡಿತವಾಗಿ ಕೇಳಿದಾಗ, ನಾನು ಸ್ವಲ್ಪ ಕೋಪ ನುಂಗಿಕೊಂಡು,

” ನೋ, ನಿಮ್ಮನ್ನು ನೋಡಿದರೆ ಹಾಗನಿಸುವುದಿಲ್ಲಾ… “ಎಂದು ರಾಗವೆಳೆದು ನಿಲ್ಲಿಸಿದೆ.

” ಓಹೋ…ನೋಡಿದ್ದೆಲ್ಲಾ ನಂಬಬಾರದು ಎಂದು ತಾನೆ?…ಸರಿ..ನಿಮ್ಮ ವಿಷಯಕ್ಕೇ ಬರೋಣಾ..ನೀವು ಬಂದ ಕೆಲಸ ಹೇಗೆ ಮುಗಿಯಿತು ಅನ್ನುತ್ತೀರಿ?..ಮೃದುಲಾ ಕಡೆ ನೀವು ಅಡ್ವಾನ್ಸ್ ಒಂದು ಲಕ್ಷ ರೂ ಪಡೆದದ್ದು, ಮುಖ್ಯವಾಗಿ ಆಕೆಯ ಹೆತ್ತ ತಂದೆ ತಾಯಿಯರನ್ನು ಇಲ್ಲಿ ಪತ್ತೆ ಹಚ್ಚಲು ತಾನೆ?….ಈಗ ಜಾನಿ ರೂಮಿನಲ್ಲಿ ಸಿಕ್ಕ ಮೇ ತಿಂಗಳ ಮಕ್ಕಳನ್ನು ದತ್ತು ಕೊಟ್ಟವರ -ಪಡೆದವರ ಕುಲ ಗೋತ್ರವೆಲ್ಲಾ ನಿಮ್ಮ ಕೈಯಲ್ಲೇ ಇದೆಯಲ್ಲಾ..ಅದನ್ನಾದರೂ ಮಾಡಲ್ಲವೇಕೆ?” ಎಂದಳು ಲೂಸಿಯಾ.

ಸ್ವಲ್ಪ ತಬ್ಬಿಬ್ಬಾದೆ. ಪರವಾಗಿಲ್ಲಾ, ಈ ಲಾಯರ್ ಚುರುಕಾಗಿಯೇ ಇದ್ದಾಳೆ.

” ಯೋಚಿಸುತ್ತೇನೆ!” ಎಂದು ಜೇಬಿನಲ್ಲಿ ತುರುಕಿದ್ದ ಆ ರೆಕಾರ್ಡ್ಸ್ ಪತ್ರಗಳನ್ನು ಹೊರತೆಗೆದೆ.

” ಸುಮ್ಮನೆ ಒಬ್ಬರೇ ಯೋಚಿಸಬೇಡಿ, ನನ್ನ ಆಫೀಸಿಗೆ ಬನ್ನಿ, ನಾನು ನಿಮಗೆ ಸಾಥ್ ಕೊಡುತ್ತೇನೆ. ಒಟ್ಟಿಗೆ ಕಂಡು ಹಿಡಿಯೋಣಾ..ಆಗಲಾದ್ರೂ ನಿಮಗೆ ನನ್ನ ಮೇಲೆ ವಿಶ್ವಾಸ ಬರಬಹುದು..”ಎಂದಳು ಸ್ವಲ್ಪ ನಿರಾಸೆಯಿಂದ..

ನನಗೆ ಮತ್ತೆ ವಿಶ್ವಾಸ, ಉತ್ಸಾಹವನ್ನು ಆ ಮಾತಿನಲ್ಲಿ ತುಂಬಿ ಕಳಿಸಿದ್ದಳು… ಗುಡ್ ಗರ್ಲ್!..

” ನಿನ್ನ ಬಾಗಿಲನ್ನು ತಟ್ಟುವುದರ ಸದ್ದು ಕೇಳಿಸಿತೆ?, ಅದು ನಾನೇ ಬಂದೆ ಅಂದುಕೋ!” ಎಂದು ಗಡಿಬಿಡಿಯಿಂದ ಅವಳ ಆಫೀಸಿಗೆ ಒಡನೆಯೇ ಧಾವಿಸಿದೆ

ತನ್ನ ಟೇಬಲ್ ಲ್ಯಾಂಪ್ ಬೆಳಕಿನಲ್ಲಿ ಲೂಸಿಯಾಳ ಕಂಗಳು ನಾ ತಂದ ಕಾಗದ ಪತ್ರಗಳನ್ನೆಲ್ಲಾ ಕೂಲಂಕಷವಾಗಿ ವ್ಯವಸ್ಥಿತವಾಗಿ ಪರಿಶೀಲಿಸುತ್ತಿವೆ.. ನನಗೆ ಎರಡು ಗ್ಲಾಸ್ ಕಾಫಿ, ಬಿಸ್ಕೆಟ್ಸ್ ಎಲ್ಲ ಕೊಟ್ಟು ಉಪಚರಿಸಿ , ನನಗೆ ಸಾಂತ್ವನ ಹೇಳಿ ಮುಂದಿನ ದಾರಿಯ ಜವಾಬ್ದಾರಿಯನ್ನು ಈಗ ತಾನೇ ಹೊತ್ತಿದ್ದಾಳೆ.

ನಂಬಲರ್ಹ ವಿಶ್ವಾಸಿ ಆಕರ್ಷಕ ಯುವತಿ ಇವಳು ಎನಿಸಿತು.. ಈ ಸ್ನೇಹ ಮುಂದುವರೆಯುವಂತಾದ್ದೆ? ಎಂದು ಮನ ಉತ್ತರ ಹುಡುಕಿತು.

ಲೂಸಿಯಾ ತನ್ನ ಸಮಯವನ್ನು ತೆಗೆದುಕೊಂಡು ಕೊನೆಗೆ ,

“ ಇದರಲಿ ನಾಲ್ಕು ಹೆಸರುಗಳಿದ್ದಾವೆ, ಮೇ ತಿಂಗಳಲ್ಲಿ ದತ್ತು ಕೊಟ್ಟ ತಂದೆತಾಯಂದಿರು!. ನಾವು ಅರ್ಧರ್ಧ ಹಂಚಿಕೊಳ್ಳೋಣ. ನೀವು ಇಬ್ಬರನ್ನು ಖುದ್ದಾಗಿ ಪತ್ತೆ ಹಚ್ಚಿ ಭೇಟಿ ಮಾಡಿ ಅವರೇ ಅಲ್ಲವೇ ಎಂದು ಕಂಡುಹಿಡಿಯರಿ…” ಎಂದಳು.

” ಈ ನಾಲ್ವರಲ್ಲಿ ಯಾರಾದರೂ ಗೊತ್ತೆ, ನಿನಗೇ ಈ ಊರಿನಲ್ಲಿ?” ಎಂದು ಚೂಯಿಂಗ್ ಗಂ ಬಾಯಿಗೆಸದುಕೊಂಡೆ..

ಲೂಸಿಯಾ ಹೌದೆಂದು ತಲೆಯಲ್ಲಾಡಿಸಿದಳು,” ಹಾ…ನಂಗೆ ಇದರಲ್ಲಿ ನಂಬೂದರಿ ಎನ್ನುವವರ ಮಗಳು ರಚನಾ ಅಂತಾ, ಇಲ್ಲಿನ ಪೋಲಿಸ್ ಕಮೀಶನರರ ಪತ್ನಿ..ಈ ಪತ್ರಗಳಲ್ಲಿ ನಂಬೂದರಿ ಮನೆಯವರು ಹೆಣ್ಣು ಮಗು ದತ್ತು ಕೊಟ್ಟರು ಅಂತಿದೆ..ಆದರೆ ಯಾಕೋ ಇಲ್ಲಿ ಹೊಸಮನಿಯವರಿಗೆ ಆ ಮಗುವನ್ನು ದತ್ತು ಕೊಟ್ಟರೋ ಇಲ್ಲವೋ ಎಂಬ ಪುರಾವೆಯಿಲ್ಲಾ..ಈ ರಚನಾ ಮನೆಯವರೇ ಆಗಿದ್ದರೆ ಪ್ರಾಯಶಃ ಈ ವಿಷಯ ಅವರಿಗೆ ಗೊತ್ತಿರಬಹುದು..  ಜತೆಗೆ ಆ ಮುದಿ ಸೂಲಗಿತ್ತಿ ಸುಬ್ಬಮ್ಮ ಹೇಳಿದ “ನಂಬೂದರಿಯ ಒಗಟೂ “ ಇದಕ್ಕೇ ಬೆರಳು ತೋರಿಸುತ್ತದೆ, ಅವಳು ಅಷ್ಟು ಹುಚ್ಚಿ ಇರಲಾರಳು…ಇದನ್ನು ಮೊದಲು ನೋಡಿ…ಇನ್ನೊಂದು ಕೇಸ್ ಕರುಣಾಕರನ್ ದಂಪತಿಗಳದ್ದಂತೆ  ಅವರ್ಯಾರೋ ತಿಳಿಯದು..ಹುಡುಕಿನೋಡಿ…”

“ಓಕೇ…ಇನ್ನು ಮಿಕ್ಕ ಎರಡನ್ನು ನೀನು ವಿಚಾರಿಸು, ನಾನು ಇವೆರಡನ್ನೂ ಕೈಗೆತ್ತಿಕೊಳ್ಳುತ್ತೇನೆ “ಎಂದೆ

“ಅಬ್ಬಾ…ಸುಸ್ತಾಯಿತಪ್ಪಾ,,,”ಎಂದು ತನ್ನ ಕಪ್’ನಲ್ಲಿ ತಣ್ಣಗಾಗಿದ್ದ ಕಾಫಿಯನ್ನು ಒಂದೇ ಗುಟುಕಿಗೆ ನುಂಗಿ, ತಲೆ ಕೂದಲಲ್ಲಿ ಕೈಯಾಡಿಸಿದಳು..ಅಂತದರಲ್ಲೂ ಚೆನ್ನಾಗಿ ಫ್ರೆಶ್ ಆಗಿಯೇ ಕಾಣುತ್ತಾಳೆ!

“ಹೇಗೂ ನಾಳೆ ಬೆಳಿಗ್ಗೆ ನಾವು ಮೃದುಲಾ ಮತ್ತು ಫರ್ನಾಂಡೆಸ್ ಜತೆ ಮಾತಾಡಿ, ನಮ್ಮ ಪ್ರತಿಭಟನೆ ಹೇಳೋಣಾ…ಯಾಕೆ ಅಂತಾ ಅವರು ಹೇಳುವವರೆಗೂ ಬಿಡುವುದು ಬೇಡ..ನನಗೆ ಇಲ್ಲಿ ವಿಡಿಯೋ ಕಾನ್ಫರೆನ್ಸ್ ಕಾಲ್ ಮಾಡುವ ಸೌಕರ್ಯ ಇದೆ,,ಬೆಳಿಗ್ಗೆ ಬೇಗ ಬಂದು ಬಿಡಿ ಇಲ್ಲಿಗೆ.”ಎಂದು ಫೈಲ್ಸ್ ಮುಚ್ಚಿಟ್ಟಳು.

ನನ್ನ ಮುಖ ನೋಡುತ್ತಾ “ಈಗ ತಲೆ ತುಂಬಾ ನೋಯುತ್ತಿದೆಯೆ?..” ಎಂದಳು ಕಳಕಳಿಯ ಕಂಗಳಿಂದ.

“ ಹೂಂ, ಆದರೆ ಬರೇ ಅವನು ಹೊಡೆದ ಏಟಿನಿಂದಲೇ ಅಂತಲ್ಲಾ..ನನಗೆ ಹೆಚ್ಚು ಯೋಚಿಸಿದರೂ ತಲೆ ನೋವು ಬರತ್ತೆ, ಸ್ವಲ್ಪ ಬುದ್ದಿ ಕಡಿಮೆಯಲ್ಲವೆ?” ಎಂದು ಹುಳ್ಳಗೆ ನಕ್ಕೆ..

ಮುಂದಕ್ಕೆ ಕೈ ಚಾಚಿ ನನ್ನ ಕೈ ತಟ್ಟಿ “ ಎಲ್ಲಾ ಕಂಡು ಹಿಡಿಯುವಿರಂತೆ, ಈಗಿನ ಸಮಸ್ಯೆ ನೀವೇ ಪರಿಹರಿಸುತ್ತೀರಿ, ನೋಡಿ..ನಾನಿಲ್ಲವೆ?” ಎಂದಳು ಲೂಸಿಯಾ.

“ ಮೈ ಹೂ ನಾ?” ಎಂದೆ ಥೇಟ್ ಶಾರುಖ್ ಖಾನ್ ಸ್ಟೈಲಿನಲ್ಲಿ. ಇಬ್ಬರೂ ನಕ್ಕೆವು.

“ಬನ್ನಿ ಹೋಗೋಣಾ, ಒಂಬತ್ತಾಗುತ್ತಿದೆ” ಎಂದು ಎದ್ದಳು..

”ಮಧ್ಯಾಹ್ನ ಉಟ ಮಾಡಿದ್ದಿರಿ ತಾನೆ?” ಎಂದಳು ಆಫೀಸಿಗೆ ಬೀಗ ಹಾಕಿ ಹೊರಬರುವಾಗ.

“ಮಾಡಿದ್ದೆ, ಏನೆಂದು ಜ್ಞಾಪಕವಿಲ್ಲಾ…ನೀವು ಹೊರಡಿ, ನಾನು ಲಾಡ್ಜ್ ಬಳಿ ಮಾಡಿಕೊಳ್ಳುತ್ತೇನೆ “ ಎಂದೆ

“ ಊ ಹೂ…ಮನೆಯಲ್ಲಿ ಬೆಳಿಗ್ಗೆ ಚಪಾತಿ ಮತ್ತು ಪಲ್ಯ, ವೆಜಿಟೆಬಲ್ ಪುಲಾವ್ ಮಾಡಿದ್ದೆ, ಪಚಡಿ ಇದೆ..ಎರಡು ಬಾಟಲ್ ಫ್ಯಾಂಟಾ ಇದೆ, ಇಬ್ಬರಿಗೆ ಸಾಕಾಗುತ್ತೆ, ಒಬ್ಬಳಿಗೆ ಜಾಸ್ತಿಯಾಗುತ್ತೆ..”ಎಂದು ತಲೆಯೆತ್ತಿ ನೋಡಿದಳು,ಹಿತವಾದ ಒತ್ತಾಯವಿತ್ತು. ಒಬ್ಬಳೇ ಇದ್ದಾಳೆ, ನನ್ನಂತೆ ಒಂಟಿಜೀವ!

ನನ್ನ ಬಾಡಿಗೆ ಹೊಂಡಾ ಕಾರಿನಲ್ಲಿ ಅವಳ ಕಾರ್ ಹ್ಯುಂದೈ i10 ಅನ್ನು ಸ್ವಲ್ಪ ಅಂತರ ಬಿಟ್ಟು ಹಿಂಬಾಲಿಸಿದೆ..ಜಾನಿಗಿಂತಾ ಚೆನ್ನಾಗಿ ಹಿಂಬಾಲಿಸುತ್ತಿದ್ದೇನಲ್ಲ ಎನಿಸಿತು.

ಅವಳಂತೆಯೆ ಚಿಕ್ಕ ಚೊಕ್ಕ ಮನೆ…ಮುಂದೆ ಚಿಕ್ಕ ಗಾರ್ಡೆನ್, ನಾಯಿ ಇಲ್ಲ..ಒಳಗೆ-ಹೊರಗೆ ಬಿಳಿ ಬಣ್ಣದ ಗೋಡೆಗಳು, ನೀಟಾಗಿ ಚೆನ್ನಾಗಿಟ್ಟುಕೊಂಡಿದ್ದಾಳೆ…ನನ್ನ ಬ್ಯಾಚೆಲರ್ ಗೂಡಿಗಿಂತಾ ವಾಸಿ..

ಸ್ವಲ್ಪ ಹೊತ್ತಿನಲ್ಲೇ ಮೈಕ್ರೋವೇವ್’ನಲ್ಲಿ ಬಿಸಿ ಮಾಡಿ ಟೇಬಲ್ ಮೇಲೆ ಊಟ ಬಡಿಸಿದಳು.

ಸ್ವಲ್ಪ ನಕ್ಕೆ.

“ಏನು?” ಎಂದಳು.

“ಇವತ್ತೇಕೆ ನನ್ನ ಊಟದ ದಾರಿ ನಿಮ್ಮ ಮನೆಯ ಒಳಗೆ ಬಂದಿತು ಅಂತಾ..” ಎನ್ನುತ್ತಾ ಗಬಾ ಗಬಾ ತಿಂದೆ..ಎಷ್ಟು ಹಸಿವಾಗಿತ್ತು ಎಂದು ನನಗೇ ಅರಿವಾಗಿರಲಿಲ್ಲ.

“ನಿಮಗೆ ದಾರಿ ತೋರಿಸಿದರೂ, ನಾವು ದಾರಿ ತಪ್ಪುವುದಿಲ್ಲಾ ಎಂಬ ವಿಶ್ವಾಸ ಬಂತು, ಅದಕ್ಕೇ ಕರೆದೆ “ಎಂದು ಮುಗುಳ್ನಕ್ಕಳು..ಅವಳ ನಗೆಯ ಹೊಳಪು ಸುತ್ತಲಿನ ಬಿಳಿ ಗೋಡೆಗಳನ್ನೂ ಕಪ್ಪುಗಟ್ಟಿಸುವಂತಿತ್ತು.

ಊಟ ಮಾಡುವಾಗ, “ವಾಹ್! ರುಚಿಯಾಗಿದೆ, ಮತ್ತೆ ಕರೆಯುತ್ತೀರಾ?” ಎಂದೆ.

“ಹೀಗೇನು ದಿನಾ ಕರೆಯುತ್ತೀನೋ ಇಲ್ವೋ…ಇವತ್ತು ಮನಸ್ಸಾಯಿತು ಕರೆದೆ” ಎಂದಳು ಹುಷಾರಾಗಿ,

“ ಮನಸ್ಸಿನ ಮಾತನ್ನು ಕೇಳಬೇಕು” ಎಂದೆ ಮಾರ್ಮಿಕವಾಗಿ.

“ಆದರೆ ಬುದ್ದಿ  ‘ಬೇಡಾ ’ ಎಂದು ಎಚ್ಚರಿಸಿದರೆ…?” ಎಂಬ ಪ್ರಶ್ನೆ…ಎಷ್ಟಾದರೂ ಲಾಯರ್ ಅಲ್ಲವೆ?

ಈ ಬಾರಿ ಕೈ ಚಾಚಿ ನನ್ನ ಕೈಯಿಂದ ಅವಳ ಕೈ ತಟ್ಟಿದೆ. ಹತ್ತಿಯಂತೆ ಮೃದುವಾಗಿತ್ತು.

“ ಮನಸ್ಸಿನ ವಿಷಯದಲ್ಲಿ ಬೇರೆ ಯಾವುದರ ಮಾತೂ ಕೇಳಬಾರದು” ಎಂದೆ.

“ಗುಡ್ ನೈಟ್” ವಿನಿಮಯ ಮಾಡಿಕೊಂಡು ವಿದಾಯ ಹೇಳಿದ್ದೆವು.

ನನ್ನ ಮನದ ಇಂಗಿತ ಅವಳಿಗರ್ಥವಾಯ್ತು ಎಂದುಕೊಂಡೆ..ನನಗಂತೂ ಸ್ಪಷ್ಟವಾಗುತ್ತಿತ್ತು.

ಮುಂದುವರೆಯುತ್ತದೆ……

Facebook ಕಾಮೆಂಟ್ಸ್

ಲೇಖಕರ ಕುರಿತು

Nagesh kumar

ನಾಗೇಶ್ ಕುಮಾರ್ ಸಿ ಎಸ್ ಹುಟ್ಟಾ ಬೆಂಗಳೂರಿನವನಾಗಿದ್ದು, ಸಿವಿಲ್ ಎಂಜಿನಿಯರಿಂಗ್ ಸ್ನಾತಕೋತ್ತರ ಪದವೀಧರ. ಈಗ ಚೆನ್ನೈ ನಗರದಲ್ಲಿ ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ, ಕುಟುಂಬ ಸಮೇತ ತಮಿಳು ನಾಡಿನ ಕನ್ನಡ ಪರ ಸಂಸ್ಥೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!