ಅಂಕಣ

ನರಮಾನವನಾಗಿ ರಾಮನ ಜನುಮ – 4

ನರಮಾನವನಾಗಿ ರಾಮನ ಜನುಮ – 3

ಒಟ್ಟಾರೆ ರಾಮನ ಮಾನವ ಮನದ ಮಾನಸಿಕ ತುಮುಲ, ತಾಕಲಾಟಗಳಿಗೆಲ್ಲ ಮದ್ದು ಲೇಪಿಸುವ ಹಾಗೆ, ಬರಿ ಅವನ ಆಂತರ್ಯದ ನೋವನ್ನರಿಯುವುದಷ್ಟೆ ಅಲ್ಲ, ನಿಷ್ಠೆಯಿಂದ ಅದನ್ನು ಪರಿಹರಿಸುವ ದಾರಿ ಹುಡುಕುವ ಹನುಮನಂತಹ ಬಂಟನೂ ಸಿಕ್ಕಿದ್ದು ರಾಮನ ಪರಿತಪ್ತ ಮನವನ್ನು ಅದೆಷ್ಟೊ ನಿರಾಳವಾಗಿಸಿತೆನ್ನಬೇಕು. ಅಂತೆಯೆ ಸೂಕ್ತ ಸಾಂಗತ್ಯ, ಸಹಚರ್ಯದ ಕೆಳೆಯಿದ್ದರೆ ಅತಿಮಾನುಷ ಶಕ್ತಿ, ಪವಾಡ , ಮಹಿಮೆಗಳ ಹಂಗಿಲ್ಲದೆ, ಈ ಭೂಮಿಯ ಮೇಲಿನ ಜೀವನವನ್ನು ಸುಗಮಗೊಳಿಸಿಕೊಳ್ಳುತ್ತ, ಕಷ್ಟಗಳಿಗೆ ಪರಿಹಾರ ಹುಡುಕಿಕೊಳ್ಳುತ್ತಾ ಸಾಗಬಹುದೆಂಬ ಸಂದೇಶವೂ ಸಹ. ಧರ್ಮಸೂಕ್ಷ್ಮತೆಯೆಲ್ಲಾ ಬಲ್ಲ ಹನುಮ ಬರಿ ಸೀತೆಯನ್ನು ಕಂಡು ಹಿಡಿದುದು ಮಾತ್ರವಲ್ಲದೆ ಅವಳಲ್ಲಿ, ಶ್ರೀರಾಮನೆ ಬಂದು ಬಿಡಿಸಿಕೊಳ್ಳುವ ತನಕ ಸೈರಣೆಗೆ ಬೇಕಾದ ಧೈರ್ಯ, ಆತ್ಮವಿಶ್ವಾಸಗಳನ್ನು ತುಂಬಿ ಬರುತ್ತಾನೆ. ಅಂತೆಯೆ ಮರೆಯದೆ ಮುದ್ರೆಯುಂಗುರದ ಜತೆ ಮಿಕ್ಕ ಕುರುಹುಗಳೆಲ್ಲವನ್ನು ಅರುಹಿ ಅವಳಿಗೆ ತಾನು ಸತ್ಯವಾಗಿಯೂ ಶ್ರೀರಾಮದೂತನೆಂದು ಯಾವ ಅನುಮಾನಕ್ಕೆಡೆಯಿರದಂತೆ ನಿರೂಪಿಸಿದ ನಂತರವೆ ಹೊರಡುತ್ತಾನೆ – ಮತ್ತೆ ಅವಳಿಂದಲೂ ಗುರುತಿನ ಮೊಹರನ್ನು ಪಡೆದು. ಮತ್ತೆ ರಾಮನಲ್ಲಿ ಅನ್ನಾಹಾರ ತೊರೆದು , ಬಿಚ್ಚಿದ ಮುಡಿ ಕಟ್ಟದೆ ರಾಮನಿಗಾಗಿಯೆ ಹಂಬಲಿಸುತ್ತ ಅತ್ತು, ಕಾದು ಕುಳಿತಿರುವ ಸೀತಾಮಾತೆಯ ಚಿತ್ರಣವನ್ನು ತೆರೆದಿಟ್ಟಾಗ ಅವಳ ಗುರುತಿನ ಮುದ್ರೆಯನ್ನೆ ನೋಡುತ್ತ ಕುಳಿತ ಶ್ರೀ ರಾಮನಿಗೆ ಸೀತೆಯಂತೆ ಕಂಬನಿ ಹರಿಸಿ ನಿರಾಳವಾಗಲಿಕ್ಕೂ ಆಗದ ಅಸಹಾಯಕ ಪರಿಸ್ಥಿತಿ. ಪುರುಷನಾಗಿ ಕನಿಷ್ಠ ಗಟ್ಟಿ ಮನಸ್ಥೈರ್ಯವನ್ನಾದರೂ ಪ್ರಕಟಿಸಬೇಕಾದ ಅನಿವಾರ್ಯ – ಬಾಹ್ಯದಲ್ಲಾದರು. ಮತ್ತೆ ಇಲ್ಲೂ ಶ್ರೀ ರಾಮ ಸಾಮಾನ್ಯ ಮಾನವನಂತೆ ಕಳೆದುಕೊಂಡ ಪತ್ನಿಗಾಗಿ ದುಃಖಿಸಿ, ವಿಲಪಿಸುವ ದೃಶ್ಯ ಭಗವಂತನ ಸರ್ವಶಕ್ತನೆಂಬ ಆಯಾಮಕ್ಕೆ ಸಂಪೂರ್ಣ ವಿರುದ್ಧಾರ್ಥಕವಾದದ್ದು.

ಕಡೆಗು ಕಂಡು ಹಿಡಿದನೆ ಹನುಮ ಸೀತೆಯನಡಗಿಸಿಟ್ಟಾ ನಿಲ್ದಾಣ
ಮಾತೆಗಿತ್ತ ವಚನ ಸೂಕ್ಷ್ಮ, ರಾಮ ಬರಲಿಹ ಬಿಡಿಸೊ ಜೋಪಾನ
ತೊರೆದನ್ನಾಹಾರ ಬಿಚ್ಚಿಟ್ಟ ಮುಡಿಯಲಿ, ಕುಳಿತವಳಾ ನೆನೆನೆನೆದೆ
ಭಾರದ ಕಂಬನಿ ಕಾಣಿಸದಂತೆ, ಮುಡಿ ಕಚ್ಚಿ ಸಹನೆ ಪುರುಷನೆದೆ || ೧೬ ||

ಕೊನೆಗೂ ಸೀತೆಯಿರುವ ಜಾಗ ಅರಿತಾಯ್ತಲ್ಲಾ – ಇನ್ನೇಕೆ ತಡವೆಂದು ದಂಡಯಾತ್ರೆಗೂ ಹೊರಟಿದ್ದಾಯಿತು. ಆದರೂ ಯುದ್ಧ ಸಾರುವ ಮುನ್ನ ಒಂದು ಸಂಧಿಯ ಅವಕಾಶ ಕೊಡುವುದು ಯುದ್ಧ ಧರ್ಮ. ಸ್ವತಃ ತಮ್ಮ ವಿಭೀಷಣನ ಬುದ್ದಿ ಮಾತನ್ನು ಕೇಳದಿದ್ದ ರಾವಣ ಇದಕ್ಕೆಲ್ಲ ಬಗ್ಗುವವನಲ್ಲವೆಂದು ಗೊತ್ತಿದ್ದರೂ ಕರ್ತವ್ಯವೆಂಬಂತೆ ಅದನ್ನು ಮಾಡಿ ಮುಗಿಸಿದ್ದಾಯ್ತು. ಆದರೆ ಆಗ ರಾವಣನ ಮನಸತ್ವವೆ ಬೇರೆ ರೀತಿಯದು – ಕದ್ದು ತಂದಾಯಿತು , ನೈತಿಕವೊ ಅನೈತಿಕವೊ ಕೆಟ್ಟುದ್ದಾಯಿತು. ಸರಿ ತಪ್ಪುಗಳ ಜಿಜ್ಞಾಸೆಗಿಂತ ಹೆಣ್ಣೆಂಬ ಮಾಯೆಯ ಸಿಕ್ಕಿನಲ್ಲಿ ಸಿಲುಕಿಕೊಂಡ ಮೇಲೆ ಗೆದ್ದರೆ ಸೀತೆಯಂತ ಸ್ತ್ರೀರತ್ನದ ಕೈವಶ, ಸೋತರೆ ವೀರ ಸ್ವರ್ಗಕ್ಕೆ ರಹದಾರಿ ಎಂಬ ಅಂತಿಮ ತೀರ್ಮಾನಕ್ಕೆ ಈಗಾಗಲೆ ಬಂದಾಗಿ ಹೋಗಿದೆ. ಈಗೇನಿದ್ದರೂ ಯುದ್ದವಷ್ಟೆ ಬಾಕಿಯಾಗುಳಿದ ದಾರಿ.

ಅಂತೂ ದಂಡಯಾತ್ರೆಗೆ ಗಮನ, ಲಂಕೆಯತ್ತಾ ಹೊರಟ ಪಯಣ
ಹೇಳಿದ ಮಾತ ಕೇಳನೆ ರಾವಣ, ಹೇಳಿ ಸೋತನಲ್ಲವೆ ವಿಭೀಷಣ
ಕದ್ದಾಯಿತು ಬಿದ್ದ ಮೇಲೆಂತ ಗುನುಗು, ಹೆಣ್ಣೆ ಮಾಯೆಯ ಸೆರಗು
ಗೆಲ್ಲೆ ಸುಂದರಿ ವಶದೆ ಜಗ ಬೆರಗು, ಸೋಲೆ ವೀರ ಸ್ವರ್ಗ ಮೆರುಗು || ೧೭ ||

ಇತ್ತ ಶ್ರೀರಾಮನ ಪರಿಸ್ಥಿತಿಯೇನೂ ತೀರಾ ಭಿನ್ನವೇನಲ್ಲ – ಕಾರಣ ವಿಭಿನ್ನವಾಗಿದ್ದರೂ ಕೂಡ. ದುರ್ಗುಣಗಳ ರೂಪದ ರಾವಣನ ಆಕ್ರಮಣ ನಡೆದದ್ದು ಶ್ರೀರಾಮನೆಂಬ ಸದ್ಗುಣ ತತ್ವಗಳ ಮೇಲೆ. ಅತಿಮಾನುಷವೆನಿಸುವ ದೈತ್ಯಬಲದೊಡನೆ ಬರುವ ದುರ್ಗುಣವನ್ನು ಕೇವಲ ಮಾನವ ರೂಪದ ಸಾತ್ವಿಕ ಸದ್ಗುಣ ಬಲದಿಂದ ಎದುರಿಸಬೇಕಾದ ಧರ್ಮಯುದ್ಧ. ಆ ಸಾತ್ವಿಕ ಮನಸಿಗೆ ಯುದ್ಧ ಬೇಕಿತ್ತೆ, ಬೇಡವೆ, ಸಕಾರಣವೆ, ವಿನಾಕಾರಣವೆ ಎಂಬುದೆಲ್ಲ ಬರಿ ಅಸಂಬದ್ಧ ಪ್ರಲಾಪದಂತೆ ಭಾಸವಾಗುವುದು ಈ ಪರಿಸ್ಥಿತಿಯ ಸಹಜ ಪ್ರತಿಕ್ರಿಯೆ. ಈಗ ವಿಧಿಯಿಲ್ಲದೆ ಯುದ್ದ ಮಾಡುವ ಪರಿಸ್ಥಿತಿ – ಅದಕ್ಕೆಳೆದ ದಾನವನ ಕಾರಣ ಮೂಲ ಸರಿಯೊ, ತಪ್ಪೊ ಎಂದು ವಿಶ್ಲೇಷಿಸುತ್ತ ಕೂಡುವ ಸಮಯವದಲ್ಲ. ಈಗ ನೀರಿಗೆ ಬಿದ್ದ ಮೇಲೆ ಈಜಿ ದಡ ಸೇರುವ ಪ್ರಬುದ್ಧತೆಗಷ್ಟೆ ಜಾಗ. ಜಗದ ಚರಾಚರದೆಲ್ಲದರ ನಿರ್ವಹಣಾ ಭಾರ ಹೊತ್ತ ಸೂತ್ರಧಾರಿ , ಈ ಮನುಜನವತಾರವೆಂಬ ಸೀಮಿತ ಪರಿಧಿಯ ಒಂದೆ ಕಾರಣದಿಂದ ತನ್ನಧಿಕಾರದ ಹಂಗಿನಲ್ಲಿರುವ ಅದೇ ಸೃಷ್ಟಿಯ ಕಲ್ಲು ಬಂಡೆಗಳನ್ಹೊರಿಸಿ ಸಮುದ್ರಕ್ಕೆ ಸೇತುವೆ ಕಟ್ಟುವ ಸಾಹಸಕ್ಕಿಳಿಯಬೇಕಾಯ್ತು. ತನ್ನಾಣತಿಯಳವಿನೊಳಗೆ ಇರುವ ಚರಾಚರ ಪ್ರಪಂಚದ ಮಿತಿಗಳೊಡ್ಡುವ ಎಲ್ಲಾ ತರದ ಪರದಾಟ, ಗೋಳನ್ನು ತಾನೇ ಅನುಭವಿಸಬೇಕಾಗಿ, ಎದುರಿಸಬೇಕಾಗಿ ಬಂದದ್ದು ವಿಪರ್ಯಾಸವೆ ಆದರೂ, ಶ್ರೀ ರಾಮನ ಪಾತ್ರದ ಶ್ರೇಷ್ಠತೆಯಿರುವುದು ಅದನ್ನು ನಿಭಾಯಿಸಿದ ತರದಲ್ಲಿ. ಅದನ್ನು ಮಾನವ ಪಾತ್ರದಲ್ಲೆ ನಿಭಾಯಿಸಿದ ರೀತಿ ನಾಯಕತ್ವದ ಉದಾತ್ತತೆಗೊಂದು ಉತ್ತಮ ಉದಾಹರಣೆ. ತನ್ನ ಪರಮಾಧಿಕಾರವನ್ನು ದುರುಪಯೋಗಪಡಿಸಿಕೊಳ್ಳದ ಸಚ್ಛಾರಿತ್ರಕೆ ಮೆರುಗೀವ ನಡುವಳಿಕೆಯ ಹಲವು ಮಜಲುಗಳಲ್ಲಿನ ಮತ್ತೊಂದು ಮುಖ.

ವಿಧಿಯಿಲ್ಲದೆ ಮಾಡುತ ಯುದ್ಧ, ಸಕಾರಣ ವಿಶ್ಲೇಷಣೆ ಅಸಂಬದ್ಧ
ನೀರಿಗಿಳಿಸಿದವನಾರೊ ದಾನವ, ಈಜಿ ಮುಳುಗಿಸಬೇಕೆ ಪ್ರಬುದ್ಧ
ಮಾಯಾ ಜಗದ ಸೂತ್ರಧಾರಿ, ಆಗಿದ್ದೂ ಬ್ರಹ್ಮಾಂಡ ಸ್ಥಿತಿಗಧಿಕಾರಿ
ಹೊರಿಸಬೇಕಾಯ್ತೆ ಬಂಡೆ ಕಲ್ಲು, ಮುಳುಗದ ಸೇತುವೆ ಕಟ್ಟೊ ಬಾರಿ || ೧೮ ||

ಎದುರಾದ ಅಡ್ಡಿ ಆತಂಕಗಳೇನು ಒಂದೆ ಎರಡೆ? ದೈವತ್ವವಿಲ್ಲದ ಮಾನವ ರೂಪಿ ರಾಮ ಸಾಗರ ದಾಟಲು ಸಹಾಯ ಬೇಡಲು ಹೊರಟರೆ ಅಲ್ಲೂ ನಿರ್ಲಕ್ಷ್ಯದ ಧಾರ್ಷ್ಟ್ಯ. ದಂಡಂ ದಶಗುಣಂ ಭವೇತ್ ಅನ್ನುವಂತೆ ವಿನಯದ ಮಾತಿಗೆ ಬಗ್ಗದಿದ್ದಾಗ ಆಕ್ರೋಶದಿಂದ ಬುದ್ದಿ ಕಲಿಸಲು ಬಿಲ್ಲು ಬಾಣವೆತ್ತಿದಾಗಷ್ಟೆ ಸಾಗರೇಶ್ವರ ನಿದ್ದೆಯಿಂದೆದ್ದು ಬಂದವನಂತೆ ಶರಣಾಗಿ ಕ್ಷಮೆ ಯಾಚಿಸಿದ್ದು. ಅತಿ ಮಾನುಷ ಶಕ್ತಿಯಿಲ್ಲವೆಂದರಿವಾಗಿಬಿಟ್ಟರೆ ಭಗವಂತನಿಗೂ ಪರಿಗಣನೆಯಿಡದ ಸಾಮನ್ಯ ಮನಸತ್ವಕ್ಕೊಂದು ಉದಾಹರಣೆ ಸಹ. ರಾಮಚಂದ್ರನ ಕೋಪಕ್ಕೆ ಕದಲಿ ಹೋದ ಸಾಗರೇಶ್ವರ ಬಂಡೆಗಳನ್ನು ಮುಳುಗಿಸದೆ ತೇಲಿಸುವ ವಚನವಿತ್ತ ಮೇಲೆಯೆ ಕಲ್ಲಿನ ಸೇತುವೆ ಕಟ್ಟುವ ಕಾರ್ಯ ಆರಂಭವಾಗಿದ್ದು. ಎದ್ದು ಬಿದ್ದು ಸೇತುವೆಯನ್ನು ಕಟ್ಟಿ ಮುಗಿಸುತ್ತೆಲ್ಲ ಸೈನ್ಯ ಸಮೇತ ಆ ಬದಿಯನ್ನು ಸೇರಿದ ಮೇಲೆ ಪ್ರತ್ಯಕ್ಷ ಯುದ್ದ ಆರಂಭವಾಗಿ ಹೋಯ್ತು. ಆ ಯುದ್ಧವೆ ಒಂದು ದೊಡ್ಡ ಕಾಂಡವಾಗಿ ಸಾಮಾನ್ಯನ ಹಾಗೆ ಏನೆಲ್ಲಾ ಎದುರಿಸಬೇಕಾಗಿ ಬಂತು – ರಾಮ? ನಿಕುಂಭಿಳಾ ಯಾಗಕ್ಕೆಣಿಸಿದ ಇಂದ್ರಜಿತ್ತುವಿನೊಡನೆ ಸೆಣೆಸಾಟ, ಶರಾಘಾತದಿಂದ ಜೀವನ್ಮರಣ ಸ್ಥಿತಿಯಲಿದ್ದ ಲಕ್ಷ್ಮಣನ ಬದುಕಿಸೊ ಸಂಜೀವಿನಿ ದಿವ್ಯೌಷದದ ಪ್ರಸಂಗ, ಮಹಿರಾವಣನಿಂದ ಅಪಹೃತರಾಗಿ ಸಿಕ್ಕಿಬಿದ್ದ ಸಂದಿಗ್ದ – ಹೀಗೆ ಏನೇನೊ ತೊಳಲಾಟ, ತೊಡಕುಗಳ ನಡುವೆಯೆ ಹೆಣಗಬೇಕಾದ ಪರಿಸ್ಥಿತಿ ಬಂದರೂ ತನ್ನ ದೈವಿ ದಿವ್ಯ ಶಕ್ತಿಯ ಬಳಕೆಗೆಣಿಸದೆ ಕೇವಲ ಮಾನವನಂತೆ ಅವನ್ನೆಲ್ಲ ಎದುರಿಸಿದ. ಕೆಲವೊಮ್ಮೆಯಂತೂ ಅಸಹಾಯಕ ಸ್ಥಿತಿಯಲ್ಲಿ ಹನುಮನಂತಹ ಭಂಟನ ಜತೆ ಇರದಿದ್ದರೆ ಏನೆಲ್ಲಾ ರಾದ್ದಾಂತವಾಗುತ್ತಿತ್ತೊ ಯಾರು ಬಲ್ಲರು? ಕೇವಲ ಮಾನವ ಪಾತ್ರದಲ್ಲೆ ತನ್ನ ಹೋರಾಟ ಮುಂದುವರೆಸಿದ ಶ್ರೀ ರಾಮ, ಆ ಮಾನವ ಶಕ್ತಿಯ ಪರಿಮಿತಿಯಲ್ಲೆ ಇಂದ್ರಜಿತು, ಕುಂಭಕರ್ಣರನ್ನು ಸೋಲಪ್ಪುವಂತೆ ಮಾಡಿ ಅಂತಕನೆಡೆಗಟ್ಟಿದ. ಅಂತೆಯೆ ಸಾವಿನಂಚಿನಿಂದ ತಮ್ಮ ಲಕ್ಷ್ಮಣನನ್ನು ಹಿಂದಕ್ಕೆ ಮರಳಿ ಪಡೆದ – ಅಲ್ಲೂ ಜಾಂಬವಂತನೆಂಬ ವಯೋವೃದ್ಧ ಜ್ಞಾನಿಯ ಸುಜ್ಞಾನದ ನೆರವಿನಿಂದ. ಹೀಗೆ ಶಕ್ತಿಬಲ, ಬುದ್ದಿಬಲ, ಜ್ಞಾನ ಬಲ – ಎಲ್ಲವನ್ನು ಅವರಿವರಿಂದ ಎರವಲು ಪಡೆದ ಸಾಮಾನ್ಯ ಮಾನವನಾಗೆ ಈ ಭೂಮಿಕೆ ನಿರ್ವಹಿಸಿದ್ದು ಒಂದು ದೊಡ್ಡ ಅತಿಶಯವೆಂದೆ ಹೇಳಬೇಕು.

ಸಹಕರಿಸದ ಸಾಗರಾಕ್ರೋಶ ಘನ, ದಾಟಿ ಬಂದು ಮೆಟ್ಟಿ ವರುಣನ
ಬೀಡು ಬಿಟ್ಟು ದಡದಲಿ ಜತನ, ಸುದ್ದಿ ಮುಟ್ಟಿ ಅಲುಗಿಸೆ ರಾವಣನ
ಶುರುವಾಯ್ತೆ ಘನಘೋರಯುದ್ಧ, ಇಂದ್ರಜಿತು ಕುಂಭಕರ್ಣನು ಬಿದ್ದ
ಭೀತಿ ಬಿಡದೆ ಕಾಡಿತ್ತಲ್ಲಾ ಸಮೃದ್ಧ, ಸಂಜೀವಿನಿಗೆ ಲಕ್ಷ್ಮಣ ಬದುಕಿದ || ೧೯ ||

ವಿವರಿಸುತ್ತ ಹೋದರೆ ಇಡೀ ರಾಮಾಯಣದ ಕಥಾನಕವೆಲ್ಲ ಸರಕಾಗಿ ಬಂದು ನಿಲ್ಲುತ್ತವೆ ಈ ದೈವತ್ವ – ಮಾನವತ್ವದ ತಾಕಲಾಟದ ಕುರುಹಾಗಿ. ಈ ಹೊಯ್ದಾಟಗಳಲ್ಲಿ ಕಾಣಿಸಿಕೊಳ್ಳುವ ಮತ್ತೊಂದು ವಿಪರ್ಯಾಸವೆಂದರೆ ಅದೆ ಎರಡು ತತ್ವಗಳ ನಡುವಿನ ನಿರಂತರ ದ್ವಂದ್ವ. ಒಂದೆಡೆ ಶ್ರೀರಾಮನ ದೈವಸಂಭೂತತ್ವದ ಅರಿವಿನಿಂದ ಹುಟ್ಟುವ ಭಕ್ತಿ, ಆರಾಧನಾ ಭಾವ ಅವನಿಂದ ಅದೇ ಮಟ್ಟದ ನಿಲುವು ಪ್ರತಿಕ್ರಿಯೆಗಳನ್ನು ಬಯಸುತ್ತದೆ. ಮತ್ತೊಂದೆಡೆ ಸಾಮಾನ್ಯನ ಪಾತ್ರದಲ್ಲಿ ತೊಳಲಾಡುವಾಗ ಸುಲಭದಲ್ಲಿ ಅದನ್ನು ಒಪ್ಪಿಕೊಳ್ಳಲಾಗದೆ ಅರ್ಧ ಮಾನವತ್ವದ ಮಿಕ್ಕರ್ಧ ದೈವತ್ವದ ತಕ್ಕಡಿಯಲ್ಲಿ ತೂಗುವ ದ್ವಂದ್ವಕ್ಕೆ ಸಿಲುಕಿ ಗೊಂದಲಕ್ಕೊಳಗಾಗುತ್ತದೆ. ಆ ಗೊಂದಲದಲ್ಲೆ ಶ್ರೀರಾಮನ ಆ ಹೊತ್ತಿನ ನಡೆ ಸರಿಯ, ತಪ್ಪಾ ಎನ್ನುವ ಚರ್ಚೆಗೂ ಗ್ರಾಸವಾಗುತ್ತದೆ. ಆಗೆಲ್ಲ ಮರೆತು ಹೋಗುವ ಒಂದು ಪ್ರಮುಖ ಅಂಶವೆಂದರೆ – ಈ ಮಾನವವತಾರದ ಪಾತ್ರದಲ್ಲಿ ರಾಮನಿಗೂ ಮಾನವ ಸಹಜ ದ್ವಂದ್ವ, ಗೊಂದಲ, ಕಾಳಜಿ, ಸಾಮಾಜಿಕ ಮತ್ತು ಪರಿಸರದ ಪರಿಗಣನೆಯಿರುತ್ತವೆಯೆಂಬುದು. ನ್ಯಾಯಾನ್ಯಾಯ ತಕ್ಕಡಿಯಲ್ಲಿ ತೂಗಿ ವೈಯಕ್ತಿಕ ಮತ್ತು ಸಮಷ್ಟಿಯ ಹಿತಾಸಕ್ತಿಗಳ ನಡುವೆ ಹೋಲಿಸಿ ನೋಡಿ ಕೈಗೊಳ್ಳುವ ನಿರ್ಧಾರಗಳು ಎಲ್ಲರಿಗೂ ಸಮ್ಮತವಾಗದೆಂಬುದು ಒಂದು ಸತ್ಯ; ಕೆಲವರಿಗೆ ಅಪ್ರಿಯವಾದರೂ ಕರ್ತವ್ಯ ನಿರ್ವಹಣೆಯ ನಿಷ್ಠೆಯನ್ನು ಪ್ರಸ್ತುತಪಡಿಸಬೇಕಾದ ನಾಯಕತ್ವದ ಅನಿವಾರ್ಯ. ಇದೆಲ್ಲದರ ನಡುವೆ ತನ್ನ ಸ್ವಂತ ಅನಿಸಿಕೆ, ಆಘಾತ, ಭಾವನೆಗಳನ್ನೆಲ್ಲ ಮುಚ್ಚಿಟ್ಟು ಕಲ್ಲು ಮನಸಿನಿಂದ ನಿರ್ಧಾರ ಕೈಗೊಳ್ಳುವ ಸಂಧರ್ಭಗಳೆ ಹೆಚ್ಚು. ಅದೇನೆ ಇದ್ದರೂ ಇತ್ತ ಯುದ್ಧಕಾಂಡಕ್ಜೆ ಮರಳಿ ಬಂದರೆ, ಕೊನೆಗೆ ರಾವಣನ ಜತೆಯೂ ಘನಘೋರ ಕದನ ನಡೆಯುವ ಹೊತ್ತು. ಮತ್ತೆ ಸಾಮಾನ್ಯ ಮಾನವನ ಹಾಗೆ ಅವನನ್ನು ಸಂಹರಿಸಲು ಮಾಡುವ ಯತ್ನ ಮತ್ತೆ ಮತ್ತೆ ವಿಫಲವಾಗುತ್ತ ಹೋಗುತ್ತದೆ – ವಿಭೀಷಣನಿಂದ ಅವನ ಹೃದಯ ಕಲಶವಿರುವ ನಿಖರ ಅಂಗಾಂಗದ ಭಾಗ ತಿಳಿಯುವವರೆಗೆ. ಅಲ್ಲೂ ಸಾಮಾನ್ಯನ ಹಾಗೆ ಮತ್ತೊಬ್ಬರಿಂದ ದೊರೆತ ಸುಳಿವಿನ ಆಧಾರದ ಮೇಲೆ ರಾವಣ ಸಂಹಾರವಾಗುತ್ತದೆ – ಅವನ ಶಾಪ ವಿಮೋಚನೆಗೆ ಸ್ವಯಂ ತಾನೆ ಮೂಲ ಕಾರಣವಾಗಬೇಕಾದ ಅನಿವಾರ್ಯವಿದ್ದರೂ ಸಹ! ಕೊನೆಗೆ ಕೇವಲ ಒಂದು ಶಾಪ ವಿಮೋಚನೆಗೆ ಎಷ್ಟೆಲ್ಲಾ ಕ್ಲೇಷ, ಏನೆಲ್ಲ ಹೋರಾಟ ಎಂದನಿಸದೆ ಇರದು.

ಪಡಬಾರದ ಪಾಡ ಪಡುತಲೆ ರಾಮ, ಕೊನೆಗೂ ರಾವಣನ ಆಗಮ
ಕತ್ತರಿಸಿ ತರಿದರು ತಲೆ ತೋಳು, ಮರಳಿ ಚಿಗುರುವ ದೈತ್ಯ ಮರ್ಮ
ಕೊನೆಗರಿವಾಗುತೆ ಜೀವ ರಹಸ್ಯ, ಗುರಿಯಿಡುತಲೆ ಹೃದಯ ಕಲಶ
ಧರೆಗುರುಳಿದ ರಾವಣ ಪೌರುಷ, ಶಾಪವಿಮೋಚನೆ ಹೆಸರಲಿ ಕ್ಲೇಷ || ೨೦ ||

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!