ಅಂಕಣ

ನರಮಾನವನಾಗಿ ರಾಮನ ಜನುಮ – 2

ಆಯಿತು – ಯಾವುದಾವುದೊ ನೆಪವೊ, ಜಗನ್ನಾಟಕದ ಸೊಗವೊ ಕಾಡಿಗಂತೂ ಹೊರಟಿದ್ದಾಯಿತು. ಹೇಳಿ ಕೇಳಿ ಪತಿಯೆ ಪ್ರತ್ಯಕ್ಷ ದೈವವೆನ್ನುವ ಕಾಲಮಾನ. ಪತಿಯ ಬೆನ್ನಿಡಿದು ಬಾಳುವುದೆ ಪತಿವ್ರತಾಸತಿಯ ಪರಮ ಧರ್ಮವೆನ್ನುವ ಕಾಲ. ವನವಾಸಕ್ಕೆ ಹೊರಟವನ ಹಿಂದೆ ಸೀತಾ ಮಾತೆಯೂ ಹೊರಟಾಗ ಬೇಡವೆನ್ನಲಾದೀತೆ? ಅದೆ ಲಾಘವದಲ್ಲಿ ನಲ್ಮೆಯ ಸೋದರ ಲಕ್ಷ್ಮಣನೂ ನಾರುಮಡಿಯುಟ್ಟು ಬಿಲ್ಲು ಬಾಣ ಹಿಡಿದು ತಾನು ಹೊರಟೆಬಿಟ್ಟ. ಜತೆಗೆ ವೈಭವೋಪೇತ ಒಡವೆ, ವಸ್ತ್ರಾಭರಣಗಳೆಲ್ಲವನ್ನು ಕಳಚಿಟ್ಟು ಕೇವಲ ನಾರುಮಡಿಯ ಸೀರೆಯನುಟ್ಟು ನಿರಾಭರಣ ಸುಂದರಿಯಂತೆ ಸೀತೆಯೂ ಸಿದ್ದಳಾಗಿ ನಿಂತಿದ್ದಾಳೆ. ಇವರೆಲ್ಲರಿಗೂ ಮೊದಲೆ ಧನುಸ್ಸಿನ ಜತೆ, ಶರಗಳನ್ನು ಬೆನ್ನಲ್ಲಿ ಹೊತ್ತುಕೊಂಡು ಹೊರಡಲು ಸಿದ್ದನಾಗಿ ನಿಂತಿದ್ದ ರಾಮನ ಮೊಗದಲ್ಲಿದ್ದುದು ವಿಷಾದದ ನಗೆಯೊ, ಹಸಾದದ ನಗೆಯೊ ಹೇಳಬಲ್ಲವರಾರು? ಇಡೀ ಮನುಕುಲದ ಹಣೆ ಬರಹ ನಿಭಾಯಿಸುತ್ತ ಸ್ಥಿತಿ ಪಾಲಕನಾಗಿದ್ದ ಭಗವಂತನೆ ಮಾನವ ರೂಪ ತಳೆದು ವನವಾಸಕ್ಕೆ ಹೊರಡುವಂತಹ ಈ ಹಣೆಬರಹವನ್ನು ಬರೆದವರಾದರೂ ಯಾರು? ವಿಧಾತನಿಗೆ ವಿಧಿ ಬರಹ ಬರೆಯುವಂತಹ ಸ್ಥಿತಿ ಬರಬೇಕಾದರೆ ಇನ್ನು ಹುಲು ಮಾನವರೇನು ಲೆಕ್ಕ? ಎಂದೆಲ್ಲಾ ಜಿಜ್ಞಾಸೆ ಹುಟ್ಟುವುದು ಸಹಜ. ಅದನ್ನೆಲ್ಲ ಸಹಜವಾಗಿ ಸಾಮಾನ್ಯ ಮಾನವನಂತೆ ಅಂಗೀಕರಿಸಿ, ಭರಿಸುವ ವಿಶಿಷ್ಟ ಪಾತ್ರ ಶ್ರೀ ರಾಮಚಂದ್ರನ ಪಾತ್ರಧಾರಿ ಶ್ರೀ ಹರಿಯ ಹಿರಿಮೆಗಿಟ್ಟ ಕಿರೀಟ.

ಬಿಡಲುಂಟೆ ಬರುವೆನೆಂದವಳ ಹಿಂದೆ, ಸತಿ ಧರ್ಮಕೆ ಮನ್ನಣೆ
ಕಷ್ಟವೊಸುಖವೊ ನಿಭಾಯಿಸಲೆ ಜತೆಗಣುಗದಮ್ಮ ಲಕ್ಷ್ಮಣನೆ
ನಾರುಮಡಿಯನುಟ್ಟು ಒಡವೆ ವಸ್ತ್ರ ಕಳಚಿಡುವ ಕರ್ಮಕಾಂಡ
ಭಗವಂತನ್ಹಣೆಯಲೆ ಯಾರು ಬರೆದರೊ ಬರಹದೀ ಹಳವಂಡ || ೦೬ ||

ಹದಿನಾಲ್ಕು ವರ್ಷದ ವನವಾಸವಾದರೂ ಏನು ಮಹಾ ಲೆಕ್ಕ? ಅರಮನೆಯಿರದಿದ್ದರೇನಂತೆ – ಪ್ರೀತಿಯ ಸತಿಯೊಡನೆ ಕಾಡಿನ ಸುಂದರ ಪ್ರಕೃತಿಯ, ನೈಸರ್ಗಿಕ ವಾತಾವರಣದಲ್ಲಿ ಆನಂದದಿಂದ ಜೋಡಿ ಹಕ್ಕಿಯ ಹಾಗೆ ವಿಹರಿಸಿಕೊಂಡಿರುವುದು ಒಂದು ರೀತಿಯ ಭಾಗ್ಯವಲ್ಲವೆ? ಜತೆಗೆ ಯಾವುದೆ ಚಿಂತೆ, ಅಪಾಯಗಳು ಕಾಡದಂತೆ ಕಾವಲಿಗೆ ಪ್ರೀತಿಯ ತಮ್ಮ ಲಕ್ಷ್ಮಣ ಕಣ್ಣಿಗೆ ಕಣ್ಣಾಗಿ ಕಾದಿರುವಾಗ ಶತ್ರುಗಳ ಭೀತಿಯಾದರೂ ಎಲ್ಲಿಯದು? ಈ ನೆಪದಲ್ಲಿಯಾದರೂ ರಾಜ್ಯಭಾರದ ಹೊಣೆ ತಪ್ಪಿ ಪ್ರಿಯ ಸತಿಯೊಡನೆ, ನಲ್ಮೆಯ ಸೋದರನೊಡನೆ ಉಲ್ಲಾಸಕರವಾಗಿ ಕಾಲ ಕಳೆಯುವ ಅಭೂತಪೂರ್ವ ಅವಕಾಶ ಸಿಕ್ಕಿತಲ್ಲ – ಎಂದು ಅಂದುಕೊಂಡಿದ್ದವನನ್ನು ಅರೆ ಕಾಲದ ನೆಮ್ಮದಿಗೂ ಬಿಡಲಿಲ್ಲ ಈ ಭೂಲೋಕದ ವಿಧಿ. ವಿಧಿ ಚಿತ್ತವಿದ್ದಂತಾಗಲಿ ಎಂದು ಕಾನನದ ಕಠಿಣ ಜೀವನ ಭರಿಸಲು ಸಿದ್ದರಾದವರಿಗೆ ಮಾಯಾವಿಯಾಟದ ಮಾಯೆಯಂತೆ ಬಂದೆರಗಿತ್ತು ಶೂರ್ಪನಖಿಯ ರೂಪದಲ್ಲಿದ್ದ ದುರದೃಷ್ಟ. ಮೋಹ ಪಾಶದಿಂದ ಬಂಧಿಸಿ ವಶಪಡಿಸಿಕೊಳ್ಳುವೆನೆಂಬ ಹಮ್ಮಿನಿಂದ ಬಂದವಳ ಅಂಗಛ್ಛೇದನವಾಗಿ, ಅದೇ ಅವರನ್ನು ಕಾಡುವ ಬೆನ್ನು ಬಿಡದ ಭೂತದಂತಹ ದುರ್ವಿಧಿಯಾಗಿ ಹೋಯ್ತು. ಕಾಡಿನಲ್ಲೂ ನೆಮ್ಮದಿಯಾಗಿರ ಬಿಡದ ಕಂಟಕ, ಸೀತಾಪಹರಣಕ್ಕೆ ನಾಂದಿ ಹಾಕುತ್ತ ಮುಂದಿನ ಮಹಾನ್ ವಿರಹೋದ್ವೇಗಪೂರ್ಣ ಅನಿವಾರ್ಯ ವಿದಾಯಕ್ಕೆ ಮುನ್ನುಡಿ ಹಾಕಿಬಿಟ್ಟಿತು.

ಆದದ್ದಾಯಿತು ವಿಧಿ ಚಿತ್ತ, ಎಂದು ನಡೆದವರ ಕಾಡಿದಾ ಭೂತ
ಕಾನನ ಕುಟೀರದಿ ನಿರಾಳ ಬಿಡದೆ ಶೂರ್ಪನಖಿಯಾಗಿ ಕಾಡಿತ್ತ
ಮೋಹಿಸಿ ಬಂದವಳ ಮೋಹವೆ ಕುತ್ತು ಮೋಸವಾಗಿ ಹೋಯ್ತ
ಕೋಪದಲಿ ಕತ್ತರಿಸಿದ ಕಿವಿ ಮೂಗು ಶಾಪವಾಗಿ ಬೆನ್ಹತ್ತಿದ ಕಾಟ || ೦೭ ||

ಅಲ್ಲಿಂದಾಚೆಗೆ ನಡೆದ ಘಟನೆಗಳಲ್ಲಿ ಶ್ರೀ ರಾಮನ ನೇರ ಹಸ್ತಕ್ಷೇಪದಿಂದ ಅನಾಹುತಗಳಾದ ಯಾವ ಪ್ರಸಂಗವೂ ಕಾಣದಿದ್ದರೂ ನಿಮಿತ್ತ ಮಾತ್ರರಂತೆ ತಮ್ಮ ಪಾಲಿನ ಕರ್ಮ ನಿಭಾಯಿಸಿದ ಮಿಕ್ಕವರ ಕಾರಣದಿಂದಾಗಿ ಪಾಡು ಅನುಭವಿಸಬೇಕಾದ ಸಂಕಟಕ್ಕೊಳಗಾದವನು ಶ್ರೀರಾಮ. ಶೂರ್ಪನಖಿಯನ್ನು ವಿರೂಪಗೊಳಿಸಿದ್ದು ಲಕ್ಷ್ಮಣಾದರೂ, ನಿಜವಾಗಿ ಏಟು ಬಿದ್ದು ಸತಿಯಪಹರಣದಲ್ಲಿ ಪರ್ಯಾವಸಾನವಾಗಿದ್ದು ಮತ್ತು ಹಾನಿಯಾಗಿಸಿದ್ದು ಶ್ರೀ ರಾಮನಿಗೆ. ಶೂರ್ಪಿಣಿಯ ಮಾತಿಗೆ ಮರುಳಾಗಿ ಸೀತಾಪಹರಣದ ಸಾಹಸಕ್ಕೆ ಕೈಯಿಟ್ಟ ರಾವಣನೂ ನೇರವಾಗಿ ಮುಖಾಮುಖಿ ಎದುರಿಸುವ ಧೈರ್ಯ ಸಾಲದೆ, ರಾಮ ಲಕ್ಷ್ಮಣರಿಬ್ಬರೂ ಇರದ ಹೊತ್ತಿನಲ್ಲಿ ಮೋಸದಿಂದ ಕದ್ದುಕೊಂಡು ಹೋದದ್ದು ರಾಮನ ಪಾಲಿಗಂತೂ ತೀರಾ ದಾರುಣವಾದ ಪ್ರಕರಣ. ಹಿಂದೆ ಮುಂದೆ ಗೊತ್ತಿಲ್ಲದೆ ಹಾಗೆ ಹೋಗಿ, ಹೀಗೆ ಬರುವಷ್ಟರಲ್ಲಿ ಹೆಂಡತಿಯೆ ಮಾಯವೆಂದರೆ ಹೇಗೆ ಸಹಿಸಲಾದೀತು? ಈ ಕಲಿಯುಗದಲ್ಲೂ, ಘೋರ ಪಾತಕ ನಡೆಸಿದ ತಪಿತಸ್ಥನಿಗೆ ವಿಚಾರಣೆ ಮಾಡಿ ತನ್ನನ್ನು ರಕ್ಷಿಸಿಕೊಳ್ಳುವ ವಾದ ಮಾಡಲು ಅವಕಾಶ ಕೊಡುತ್ತಾರೆ. ಅಂತಹದ್ದರಲ್ಲಿ ಯುದ್ಧವಿಲ್ಲ, ವಿಚಾರಣೆಯಿಲ್ಲ; ಬರಿಯ ಹೇಡಿತನ, ಮೋಸದ ಮುಸುಕನ್ನು ಹೊದ್ದು ವಿದ್ರಾವಕ ವಿರಹ ವೇದನೆಗೆ ಗುರಿಮಾಡಿದ ರಾವಣನ ಕ್ರೌರ್ಯವನ್ನು ಸಹಿಸಿಕೊಂಡೆ ಬಳಲಬೇಕಾಯ್ತು ಶ್ರೀ ರಾಮಚಂದ್ರ – ತನ್ನ ತಪ್ಪಿಲ್ಲದೆಯೆ, ಜತೆಗೆ ಯಾವುದೆ ಮುಂಜಾಗರೂಕತೆ, ಮುನ್ನೆಚ್ಚರಿಕೆಯ ಅವಕಾಶವನೂ ಒದಗಿಸದೆ.

ಮುಂಗೋಪದಲಿ ಕೊಯ್ದವ ಲಕ್ಷ್ಮಣ, ಸಂಕಟದ ಪಾಲಿಗೆ ರಾಮ
ಶೂರ್ಪಿಣಿ ತಂತ್ರಕೆ ಬಲಿಯಾದ ರಾವಣ, ಸೀತಾಪಹರಣ ಕ್ರಮ
ತಪ್ಪೆಸಗದೆಲೆ ತಪ್ಪಿತಸ್ತನ ಸ್ಥಾನ, ವಿಚಾರಣೆಗೂ ಮೊದಲೇ ಶಿಕ್ಷೆ
ಅನುಭವಿಸುವಂತೆ ಮಾಡಿದ ದುಷ್ಟನ, ಹೇಡಿತನ ಬಿಡಿಸಿದ ನಕ್ಷೆ || ೦೮ ||

ನೋಡಿ ಇದೆಂತಹ ವಿಪರ್ಯಾಸ? ಇಡಿ ಸೃಷ್ಟಿಯ ಪಾಲಕ, ಪೋಷಕನಾಗಿ, ಸ್ಥಿತಿ ಪರಿಪಾಲಕನಾಗಿ ಎಲ್ಲರ ಪಾಪ ಪುಣ್ಯದ ಲೆಕ್ಕವನ್ನಿಡುವ , ಮನ್ನಿಸುವ ಸಾಮರ್ಥ್ಯವಿರುವ ಜಗದೋದ್ದಾರಕ ಪ್ರಭುವೆಂಬ ಪಟ್ಟ ಧರಿಸಿದವನಿಗೂ ಬಿಡದೆ ಕಾಡಿತ್ತು ಭೂಲೋಕದಲ್ಲಿನ ಕರ್ಮಕಾಂಡ. ಮನಸ್ಸು ಮಾಡಿದ್ದರೆ ದೈವತ್ವದ ನೆಪದಡಿ ಅದನ್ನೆಲ್ಲಾ ನಿವಾಳಿಸಿ ಎಸೆದುಬಿಡಬಹುದಾಗಿತ್ತಾದರೂ, ಮನುಜ ರೂಪನ್ನು ಹೊತ್ತ ಮೇಲೆ ಮನುಜನಾಗಿಯೆ ನಡೆದು, ಬಾಳಿ, ಬದುಕಿ ತೋರಿಸುವ ಆಕಾಂಕ್ಷೆಗೇನೊ ಎಂಬಂತೆ ಸತ್ಯ, ಧರ್ಮ, ನ್ಯಾಯ, ನಿಷ್ಠೆಗಳಂತಹ ನೈತಿಕ ಮೌಲ್ಯದ ಹೆಸರಿನಲ್ಲಿ ಸಾಮಾನ್ಯ ಮಾನವನ ಹಾಗೆ ಸೀತಾಮಾತೆಯನ್ಹುಡುಕುತ್ತ , ಆ ಪ್ರಕ್ರಿಯೆಯಲ್ಲಿ ತಾನೂ ವಿರಹದ ದಳ್ಳುರಿಯಲ್ಲಿ ಬೇಯುತಿದ್ದರೂ ತೋರಿಸಿಕೊಳ್ಳದ ಸ್ಥಿತಪ್ರಜ್ಞನ ಹಾಗೆ ನಾಯಕತ್ವದ ಧೀಮಂತಿಕೆಯನ್ನು ಪ್ರದರ್ಶಿಸಿದ್ದು ಕಡಿಮೆಯ ಮಾತೇನಲ್ಲ. ಇಲ್ಲಿ ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಈ ಪರಿಸ್ಥಿತಿಯನ್ನು ಅವನು ತಾನಾಗೆ ಆರೋಪಿಸಿಕೊಂಡಿದ್ದೂ ಅಲ್ಲ. ಯಾರಾರದೊ ಸಂಸರ್ಗದ ಏನೇನೊ ಕಾರಣಗಳು ಸಂಗಮಿಸಿ, ಪರಿಣಾಮ ಮಾತ್ರ ಶ್ರೀ ರಾಮನ ತಲೆಗೆ ಕಟ್ಟಿಬಿಟ್ಟಂತಹ ಎಡಬಿಡಂಗಿ ಸಂಧರ್ಭವೆ. ಆದರೆ ಅದನ್ನೆಲ್ಲ ನೆಪವಾಗಿ ಕೂಡ ಆಡದೆ, ಹೊರಗೂ ತೋರಿಸಿಕೊಳ್ಳದೆ, ಯಾರಿಂದ ಬಂದದ್ದಾದರೂ, ಸರಿ – ಬಂದ ಮೇಲೆ ಅನುಭವಿಸಿ ತೀರದೆ ವಿಧಿಯಿಲ್ಲ ಎಂಬ ಸಿದ್ದಾಂತಕ್ಕೆ ಬದ್ದನಾಗಿ ಬಾಳುತ್ತ ಮೇಲ್ಪಂಕ್ತಿ ಹಾಕುವ ಅನಿವಾರ್ಯಕ್ಕೆ ಸಿಕ್ಕಿದ ಅಮಾಯಕ ಪಾತ್ರ ಶ್ರೀ ರಾಮಚಂದ್ರನ ಪಾಲಿನ ಸರಕು. ಆ ಪಾತ್ರ ನಿಭಾಯಿಸುವ ನಿಷ್ಠೆಯಲ್ಲೆ ಮಿಕ್ಕೆಲ್ಲರನ್ನು, ಮಿಕ್ಕೆಲ್ಲವನ್ನು ಉದ್ದರಿಸುವ ಸ್ವಯಂ ಪ್ರಭು, ತಾನೆ ವಿರಹ-ನೋವು-ಸಂಕಟ-ಅನುಭವಿಸಿದ್ದೇನು ಸಣ್ಣ ಮಾತೆ?

ಪಾಪ ಪುಣ್ಯದ ಲೆಕ್ಕ ಮನ್ನಿಸುವ ಪ್ರಭುವಿಗೂ ಬಿಡದೆಲೆ ಕರ್ಮ
ಮನುಜ ರೂಪದಿ ಸ್ವಯಂ ನಡೆದು ತೋರಿಸಲೆಂದೇನು ಮರ್ಮ
ಧರ್ಮದ ಹೊರೆಯನ್ಹೊತ್ತು ಕಳುವಾದ ಸೀತೆಗ್ಹುಡುಕಾಡಿದಾಟ
ಜಗದೋದ್ದಾರಕನಾಗಿಯೂ ತಾನೆ ಅನುಭವಿಸಿ ವಿರಹ ಸಂಕಟ || ೦೯ ||

ಹೋಗಲಿ, ಕದ್ದು ಹೋದ ಎಂದವನ ಜಾಡು ಹಿಡಿದು ಸದೆ ಬಡಿದು ಸೀತೆಯನ್ನು ಬಿಡಿಸಿಕೊಂಡು ಬರುವ ಹಾಗಾದರೂ ಇತ್ತೆ? ಅದೂ ಇಲ್ಲ. ಮೊದಲಿಗೆ ಎಲ್ಲಿ ಹೋಗಿದ್ದೆಂದು ಗೊತ್ತಿಲ್ಲ. ಸೀತೆಯನ್ನು ಕಾಪಾಡಲೆತ್ನಿಸಿ ಪ್ರಾಣ ತೆತ್ತ ಜಟಾಯುವಿನಿಂದ ರಾವಣನೆಂಬೊಬ್ಬ ದುಷ್ಟ ದಾನವ ರಾಜ, ಸೀತೆಯನ್ನು ಹೊತ್ತೊಯ್ದನೆಂಬ ಸುದ್ದಿ ಮಾತ್ರ ಗೊತ್ತು. ಅವನಂತಹ ಬಲಶಾಲಿಯ ಜತೆ ಹೋರಾಡಲು ಒಂದು ಪಿಳ್ಳೆ ಸೈನ್ಯವೂ ಇಲ್ಲ. ಬಿಲ್ಲು ಬಾಣ, ಜತೆಗಿರುವ ತಮ್ಮನನ್ನು ಬಿಟ್ಟರೆ ಮಿಕ್ಕುಳಿದಿರುವುದೆಲ್ಲ ಬರಿ ವೇದನೆ, ನೆನಪು , ನೋವು, ಯಾತನೆಗಳೆ. ಸರಿ ಹೊಡೆದಾಡಲು ಸೈನ್ಯವೊಂದಾದರೂ ಇರಬೇಕಲ್ಲ ಎಂದು ಹುಡುಕಿಕೊಂಡು ಹೋದರೆ ಸಿಕ್ಕಿದ್ದು ಹನುಮ, ಸುಗ್ರೀವರ ಸಖ್ಯ. ಅದನ್ನು ಗಟ್ಟಿಗೊಳಿಸಿ ದೊಡ್ಡ ವಾನರ ಸೈನ್ಯದ ಸಹಾಯ ಪಡೆಯಬೇಕೆಂದು ಅದಕ್ಕಾಗಿ ವಾಲಿ ವಧೆಯನ್ನು ನಿಭಾಯಿಸಬೇಕಾಯ್ತು. ಆ ವಧೆಯ ಹಿನ್ನಲೆಯಲ್ಲೂ ಮತ್ತೊಂದು ವಿಪರ್ಯಾಸ. ವಾಲಿ ಎಂತಹ ಬಲಶಾಲಿಯೆಂದರೆ ಹಿಂದೊಮ್ಮೆ ಸಮುದ್ರದಲ್ಲಿ ಅರ್ಘ್ಯ ನೀಡುತ್ತಿದ್ದಾಗ ಮೋಸದಿಂದ ಹಿಂದಿನಿಂದ ಬಂದು ಹಿಡಿದುಕೊಳ್ಳಲು ರಾವಣ ಯತ್ನಿಸಿದಾಗ, ಏನೂ ಅರಿಯದವನ ಹಾಗೆ ರಾವಣನಂತಹ ರಾವಣನನ್ನೆ ತನ್ನ ತೋಳಡಿಯ ಕಂಕುಳ ಸಂದಿಯಲ್ಲಿ ಸಿಲುಕಿಸಿ ಗಟ್ಟಿಯಾಗಿ ಹಿಡಿದುಕೊಂಡೆ ಏನು ಆಗಿಲ್ಲದವನಂತೆ ನೀರಿನಲ್ಲಿ ಮುಳುಗೇಳುತ್ತಿದ್ದುದನ್ನು ಕಂಡು ಭಯ ಭೀತನಾದ ರಾವಣೇಶ್ವರ, ವಾಲಿಯ ಹಿಡಿತ ಸಡಿಲವಾಗುತ್ತಿದ್ದಂತೆ ಎದ್ದೆನೊ, ಬಿದ್ದೆನೊ ಎಂಬಂತೆ ಅಲ್ಲಿಂದ ಹೆದರಿ ಜಾರಿಕೊಂಡು ಓಡಿಹೋದವನು. ಹೀಗಿರುವಾಗ ಸುಗ್ರೀವನ ಬದಲು ವಾಲಿಯ ಸಹಾಯ ಬೇಡಿದ್ದರೆ, ಅರಿವಿಗೆ ನಿಲುಕುವ ಮೊದಲೆ ರಾವಣನನ್ನು ಹೊಸಕಿ ಹಾಕಿ ಸೀತಾಮಾತೆಯನ್ನು ಶ್ರೀ ರಾಮನಿಗೆ ತಂದೊಪ್ಪಿಸಿಬಿಡಬಲ್ಲ ಸಾಮರ್ಥ್ಯವಿದ್ದವನು. ಹಾಗೇನಾದರೂ ಆಗಿದ್ದರೆ ರಾಮಾಯಣ ಕಥನವೆ ಬಹುಬೇಗ ಮುಗಿದು ಹೋಗುತ್ತಿತ್ತೊ ಏನೊ? ಆದರೂ ನೈತಿಕತೆ, ಸತ್ಯದ ನಿಷ್ಟೆ ಮತ್ತು ಸೂಕ್ತವಲ್ಲದ ಪ್ರಲೋಭನೆಗೊಳಗಾಗದ ಅಚಲ ಮನೋಭಾವ – ಹೀಗೆ ಏನೆಲ್ಲ ಗುಣಗಳನ್ನು, ನಡುವಳಿಕೆಯನ್ನು ತಾನೆ ಬದುಕಿ ನಿರೂಪಿಸಿ ತೋರಿಸಬೇಕಿತ್ತೇನೊ ಎಂಬಂತೆ ವಾಲಿಯನ್ನು ವಧಿಸಿ ಸುಗ್ರೀವನ ಜತೆಗೂಡಿದ – ಅಲ್ಲಿಂದಾಚೆಗಷ್ಟೆ ಸುಗ್ರೀವನ ಜತೆ ಹುಡುಕಲು ಆರಂಭಿಸಬೇಕು ಎಂಬ ಸ್ಪಷ್ಟ ತಿಳುವಳಿಕೆ ಇದ್ದರೂ ಸಹ. ಇಲ್ಲೂ ಪ್ರದರ್ಶಿತವಾಗುವುದು ನೈತಿಕ ಸಹನೆಯ ಪರಾಕಾಷ್ಟತೆ, ಅಡ್ಡದಾರಿ ಹಿಡಿಯೆನೆಂಬ ಧೃಢ ಮನೋಭಾವ. ಆ ವಿಳಂಬದ ನೋವಿನ ಜತೆ ತಾನೆ ಬದುಕಿ ತೋರಿಸುವ ಉದಾತ್ತ ನಾಯಕತ್ವ. ಇದು ಶ್ರೀ ರಾಮನ ಪಾತ್ರದ ವೈಶಿಷ್ಟ್ಯತೆಗೆ ಹಿಡಿದ ಮತ್ತೊಂದು ಕನ್ನಡಿ.

ದಾರಿಯಲಿ ಸಖ್ಯ ಸುಗ್ರೀವ ಹನುಮ, ವಾಲಿ ವಧೆ ಸಮಾಗಮ
ವಾಲಿಯನ್ಹಿಡಿದಿದ್ದರೆ ರಾವಣನನೊಂದೇ ಏಟಿಗ್ಹಿಡಿವ ಪರಾಕ್ರಮ
ಅಲ್ಲೂ ಕಾಡಿತ್ತೆ ರಾಮನ ಗ್ರಹಚಾರ ಸಂಕಟಕೆ ಕೊನೆಯೆ ಇರದೆ
ಬೇಡವಿತ್ತೆ ವಾಲಿರಾಮಸಖ್ಯ ಮುಗಿಸದಿರೆ ರಾಮಾಯಣ ವೇಗದೆ || ೧೦ ||

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!