ಅಂಕಣ

ಕಗ್ಗಕೊಂದು ಹಗ್ಗ ಹೊಸೆದು 

ಮಂಕುತಿಮ್ಮನ ಕಗ್ಗ – ಟಿಪ್ಪಣಿ -4

ಏನು ಜೀವನದರ್ಥ ? ಏನು ಪ್ರಪಂಚಾರ್ಥ ? |
ಏನು ಜೀವಪ್ರಪಂಚಗಳ ಸಂಬಂಧ ? ||
ಕಾಣದಿಲ್ಲಿರ್ಪುದೇನಾನುಮುಂಟೆ ? ಅದೇನು ? |
ಜ್ಞಾನ ಪ್ರಮಾಣವೇಂ ? – ಮಂಕುತಿಮ್ಮ ||

ನಾವೆಲ್ಲಾ ನಡೆಸಲೇಬೇಕಾದ ಈ ಜೀವನದರ್ಥವೇನು, ಉದ್ದೇಶವೇನು ? ಅದನ್ನು ನಡೆಸುವ ರಂಗವೇದಿಕೆಯಾದ ಈ ಪ್ರಪಂಚದ ಅರ್ಥವೇನು, ಉದ್ದೇಶವೇನು ? ಇವೆರಡರ ನಡುವಿನ ಸಂಬಂಧ, ನಂಟಾದರು ಎಂತದ್ದು, ಯಾವ ಉದ್ದೇಶದ್ದು? ಅದನ್ನರಿಯಲು ಪೂರಕವಾಗಬಹುದಾಗಿದ್ದ ಕಣ್ಣಿಗೆ ಕಾಣದ್ದೇನೊ ಇಲ್ಲಿರುವುದೆ – ನಾನು ಎಂಬುದರ ಇರುವಿಕೆಯ ಜತೆಯಲ್ಲೆ? ಇರುವುದಾದರೆ ಏನು ಆ ಕಾಣದ್ದು ? ಕಣ್ಣಿಗೆ ಕಾಣಿಸದ ವಸ್ತುವೆಂಬ ಜ್ಞಾನವಷ್ಟೆ ಅದನ್ನು ಪ್ರಮಾಣೀಕರಿಸುವ ದಾರಿಯೆ, ಸಾಕ್ಷ್ಯಾಧಾರವೆ ?  ಎಂದು ಜಿಜ್ಞಾಸೆ , ಶೋಧನೆಗಿಳಿದಿದ್ದಾನೆ ಮಂಕುತಿಮ್ಮ.

‘ಜೀವ’ವಿರುವೆಲ್ಲಾ ಅಸ್ತಿತ್ವಗಳು ಋತುಗಳಡಿ ಬದಲಾಗುವ ‘ವನ’ದ ಹಾಗೆ ಹುಟ್ಟು ಸಾವಿನ ನಿರಂತರ ಚಕ್ರದಲ್ಲಿ ತೊಡಗಿಸಿಕೊಂಡಿರುವ ಬದುಕು ಒಂದೆಡೆ. ‘ಪಂಚ’ ಭೂತಗಳೆ ಮೂಲ ಸರಕಾಗಿ ಹುಟ್ಟಿಬಂದ ಪ್ರ’ಪಂಚ’ವೆಂಬ ಜೀವ-ನಿರ್ಜೀವಗಳ ಮೊತ್ತದ ಅಸ್ತಿತ್ವದ ಅಚ್ಚರಿ ಇನ್ನೊಂದೆಡೆ. ಇವೆರಡೂ ಹೀಗೆ ಅಸ್ತಿತ್ವದಲ್ಲಿರುವ ಉದ್ದೇಶವೇನಿರಬಹುದು ? ಯಾವುದರ ಸಂಕೇತವನ್ನು ನೀಡುತ್ತಿದೆ ಇವುಗಳ ಇರುವಿಕೆ? ಪ್ರಪಂಚವೆಂಬ ರಂಗಮಂಚದ ಮಹಾನ್ ವೇದಿಕೆಯಲ್ಲಿ ನಡೆಯುವ ಜೀವನವೆಂಬ ಮಹಾನ್ ನಾಟಕದ ಅರ್ಥವೇನು? ಅದರಲ್ಲಿ ಪಾತ್ರ ನಿರ್ವಹಿಸುವ ಸಕಲ ಜೀವರಾಶಿಗಳ ಪ್ರೇರಣೆ, ಗುರಿಯಾದರು ಏನು ? ಜೀವನದೊಲವಿನೊಡನೆ ಪ್ರಪಂಚದ ಆ ಪ್ರಾಪಂಚಿಕತೆಯನ್ನು ಬಂಧಿಸಿರುವ ಸಂಬಂಧವೇನು? ಯಾವ ರೀತಿಯ ನಂಟು ಅವೆರಡನ್ನು ಹೀಗೆ ಸಮಷ್ಟಿಯಲ್ಲಿಟ್ಟಿದೆ ? ಯಾರೂ ನಿಯಂತ್ರಿಸದಿದ್ದರು ತಂತಾನೆ ನಡೆದುಕೊಂಡು ಹೋಗುವ ಆ ‘ಸ್ವಯಂಭು – ಸ್ವಯಂಚಾಲಕತ್ವದ’ ಪರಿಯನ್ನು ಇಷ್ಟು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ನಡೆಸುತ್ತಿರುವುದಾದರು ಯಾರು ಎನ್ನುವುದೆ ಗೊತ್ತಾಗದಲ್ಲಾ ? ನಮಗರಿವಿಲ್ಲದ, ಕಣ್ಣಿಗೆ ಕಾಣಿಸದಿರುವ ಯಾವುದೊ ಒಂದು ಅದೆಲ್ಲವನ್ನು ನಡೆಸುತ್ತಿದೆಯೆ – ಅದರಲ್ಲೆ ನಮ್ಮನ್ನೂ ಪಗಡೆಯ ಕಾಯಾಗಿ ಬಳಸಿಕೊಂಡು ? ಆ ಕಾಣದಿದ್ದರು ಇಲ್ಲಿರುವ ಅದರೊಳಗೆ, ನಮಗೇ ಕಾಣದ ‘ನಮ್ಮ’ ಅಂಶವೂ ಸೇರಿಕೊಂಡಿದೆಯೆ , ನಮ್ಮರಿವಿಲ್ಲದೆಯೆ (ನಾನುಮುಂಟೆ) ?

ಇಲ್ಲಿ ಒಂದೆಡೆ ಕಾಣದ ಆ ಅಗಾಧ ಶಕ್ತಿಯ ಕುರಿತ ಸೂಚನೆಯಿದ್ದರೆ ಮತ್ತೊಂದೆಡೆ ನಮ್ಮಲ್ಲಿದ್ದೂ ನಮಗೇ ಕಾಣದ ಕೌತುಕವು ಆ ಕಾಣದ್ದರ ಜತೆಗಿದೆಯೆ ಎಂಬ ಪ್ರಶ್ನೆಯೂ ಇದೆ. ಇದನ್ನು ಮೊದಲೆರಡು ಸಾಲಿಗೆ ಸಡಿಲವಾಗಿ ಸಮೀಕರಿಸಿದರೆ, ಜೀವ-ಪ್ರಪಂಚಗಳ ನಡುವಿನ ಸಂಬಂಧವಿರುವ ಹಾಗೆ ನಮ್ಮಲ್ಲಿನ ಅಂತರಾಳದ ಅಪರಿಚಿತ ಕೌತುಕಕ್ಕೂ ಮತ್ತು ಆ ಅಗಾಧಶಕ್ತಿಗೂ ಇರಬಹುದಾದ ಸಂಬಂಧವನ್ನು ಸಂಕೇತಿಸುತ್ತದೆ. ಒಟ್ಟಾರೆ, ಕಾಣಿಸದ್ದೇನೊ ಇಲ್ಲಿದ್ದು ಸೂತ್ರವನ್ನಾಡಿಸುತ್ತಿದೆಯೆ, ಅದರೊಳಗೆ ನನ್ನನ್ನು ಒಂದು ಸೂತ್ರದ ಗೊಂಬೆಯಾಗಿಸಿಕೊಂಡು – ಎನ್ನುವ ಪ್ರಶ್ನೆ ಕವಿಯದು. ಹಾಗೇನಾದರು ಇದ್ದಲ್ಲಿ ಅದೇನು ? ಎಂದರಿಯುವ ಕುತೂಹಲವಿದ್ದರು, ಅರಿವಾಗುತ್ತಿಲ್ಲದ, ಕಾಣಿಸುತ್ತಿಲ್ಲದ ಬೇಸರವೂ ಇದೆ. ಅದರಿಂದಾಗಿಯೆ ಕೊನೆಯ ಸಾಲಲ್ಲಿ – ಅದನ್ನು ಕಾಣಲಾಗದ ಸ್ಥಿತಿಯಿದ್ದರು, ಅದರ ಕುರಿತಾದ ವಿವರಣೆ ನೀಡುವ ವೇದ ಶಾಸ್ತ್ರಾದಿಗಳ ಜ್ಞಾನಮೂಲಕ್ಕೇನು ಕೊರತೆಯಿಲ್ಲವಾದ ಕಾರಣ, ಆ ಜ್ಞಾನ-ಪಾಂಡಿತ್ಯವನ್ನಷ್ಟೆ ಆ ಕಾಣದುದರ ಇರುವಿಕೆಗೆ ಪ್ರಮಾಣ, ಸಾಕ್ಷಿ ಎಂದಂದುಕೊಂಡು, ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳಬೇಕೆ ? ಎಂಬ ನಿರಾಶಾಪೂರ್ಣ ಹತಾಶೆಯನ್ನು ವ್ಯಕ್ತಪಡಿಸುತ್ತಾನೆ ಮಂಕುತಿಮ್ಮ.

ಸೃಷ್ಟಿರಹಸ್ಯದ ನಿಗೂಡತೆಯನ್ನು ಜೀವನ, ಪ್ರಪಂಚದಸ್ತಿತ್ವಗಳ ಮುಖೇನ ಪ್ರಶ್ನಿಸುತ್ತಲೆ ಆ ಕಾಣದ ಪರಮಾತ್ಮತ್ವದ ಜತೆ ನಾನೆಂಬ ‘ಪರಮಾತ್ಮ ಸ್ವರೂಪಿ’ ಯನ್ನು ಸಮೀಕರಿಸಿ ಅದ್ವೈತ ಸಮಷ್ಟಿತ್ವದ ಕುರುಹು ನೀಡುತ್ತಲೆ ಆಧ್ಯಾತ್ಮಿಕದ ಸಹಯೋಗವನ್ನೊದಗಿಸುವ ಈ ಸಾಲುಗಳು, ಅದೇ ವೇದಾಂತದ ಬ್ರಹ್ಮಜ್ಞಾನ ಸಾರವಾದ ‘ಅಜ್ಞಾನ’ವನ್ನು ತೊಡೆಯುವ ‘ಜ್ಞಾನ’ದ ಜೊತೆಗೂ ಜೋಡಿಸಿಕೊಳ್ಳುತ್ತ ತನ್ನ ಅಧ್ಯಾತ್ಮಿಕ ಮುಖವನ್ನು ಪರಿಪೂರ್ಣಗೊಳಿಸಿಕೊಂಡಿವೆಯೆನಿಸುತ್ತದೆ. ಇಲ್ಲಿನ ಅದ್ಭುತವೆಂದರೆ ಆ ಆಧ್ಯಾತ್ಮಿಕದ ಅರಿವು, ಪಾಂಡಿತ್ಯವಿರದವರೂ ಸಹ ಸಾಮಾನ್ಯ ಸ್ತರದಲ್ಲೆ ಓದಿ ಜೀರ್ಣಿಸಿಕೊಂಡರು ಅವರು ಅರ್ಥೈಸಿಕೊಳ್ಳುವ ಸಾರಕ್ಕೂ, ಪಂಡಿತರು ಬಿಡಿಸಿಟ್ಟುಕೊಳ್ಳುವ ಸಾರಕ್ಕೂ ಮೂಲಭೂತ ವ್ಯತ್ಯಾಸವಿರುವುದಿಲ್ಲ ಎನ್ನುವುದು. ಅಲ್ಲಿನ ಪದಗಳು ಸ್ಪುರಿಸುವ ವಿವಿಧಾರ್ಥಗಳು ಅವರವರ ಬೌದ್ಧಿಕ ಮತ್ತು ಪಾಂಡಿತ್ಯಪೂರ್ಣ ಸ್ತರಕ್ಕೆ ಹೊಂದಾಣಿಕೆಯಾಗುವಂತಹದ್ದು (ಅವರವರ ಭಾವಕ್ಕೆ ….)

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!