ಸಿನಿಮಾ - ಕ್ರೀಡೆ

ನಲುವತ್ತೆರಡರಲ್ಲೂ ಬತ್ತದ ಉತ್ಸಾಹ

ಆ ಹುಡುಗ ತನ್ನ ಐದನೇ ವರ್ಷದಿಂದಲೇ ಟೆನ್ನಿಸ್ ಆಡಲು ಶುರುಮಾಡಿದ. ಅದೇ ಹುಡುಗ ಇಂದು ಭಾರತದ ಗೆಲುವಿನ ತಿರಂಗವನ್ನು ವಿಶ್ವದ ಮೂಲೆ ಮೂಲೆಯ ಟೆನ್ನಿಸ್ ಅಂಗಳದಲ್ಲಿ ಹಾರಿಸುತ್ತಿದ್ದಾನೆ. ಕನಸುಗಳನ್ನು ಟೆನ್ನಿಸ್ ಅಂಗಳದಲ್ಲಿಯೇ ಕಂಡ ಆ ಹುಡುಗ ಹಿಂದುಸ್ತಾನದ ಕೋಟಿ ಜನರ ಆಶೀರ್ವಾದದಿಂದ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿಯೂ ಮತ್ತೆ ಟೆನ್ನಿಸ್ ಅಂಗಳದಲ್ಲಿ ನಿಂತು ಹೇಳುತ್ತಾನೆ “ ನನ್ನ ತೊಳಲ್ಲಿ ಇನ್ನೂ ಶಕ್ತಿಯಿದೆ, ನನ್ನೊಳಗಿನ ಭಾರತದ ಕೋಟಿ ಜನರ ಹಾರೈಕೆಯ ಶಕ್ತಿಯನ್ನ ಒಗ್ಗೂಡಿಸಿ ಟೆನ್ನಿಸ್ ಬ್ಯಾಟ್ ನಲ್ಲಿ ಚೆಂಡನ್ನು  ಬಾರಿಸಿದರೆ ಆ ಚೆಂಡು  ಎದುರಾಳಿಯ ಅಳತೆಗೂ ಮೀರಿ ಅವನ ಬ್ಯಾಟ್ ಅನ್ನೇ ಹುಡಿಮಾಡಬಲ್ಲುದು “. ಇದು ಕೇವಲ ಧಿಮಾಕಿನ ಮಾತಲ್ಲ. ಮಹಾಮಾರಿ ರೋಗವನ್ನು ಗೆದ್ದ ಆ ಹುಡುಗ ಆಡಿದ ಮಾತಿನಂತೆ ಜಯಿಸಿ ತೋರಿಸಿದ್ದ. ಅದು ಒಮ್ಮೆ ಕ್ಯಾನ್ಸರ್ ಎಂದು ಮತ್ತೊಮ್ಮೆ  ಬ್ರೈನ್ ಟ್ಯೂಮರ್ ಎಂದು ಕಡೆಗೆ ಅದು ಬ್ರೈನ್’ಗೆ ಇನ್’ಫೆಕ್ಷನ್ ಆಗಿದೆ ಎಂದು ಹೇಳಲಾಗಿತ್ತಾದರೂ, ಒಟ್ಟಿನಲ್ಲಿ ಅದು ಪೇಸ್’ರನ್ನು ಒಮ್ಮೆಗೆ ಜರ್ಜರಿತಗೊಳಿಸಿತ್ತು. ಆದರೆ ಈ ಹುಡುಗ ತಾನು ಸೋತೆ ಎಂದು ಎಂದುಕೊಳ್ಳಲೇ ಇಲ್ಲ, ಆಸ್ಪತ್ರೆಯ ಹಾಸಿಗೆಯ ಮೇಲೂ ಆಪರೇಷನ್’ಗೂ ಮುಂಚೆ ಗೆಲುವಿನ ನಗೆ ಬೀರಿದ್ದ. 2003 ರಲ್ಲಿ ವಿಂಬಲ್ಡನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರೂ ಗೆಲುವನ್ನು ಸಂಭ್ರಮಿಸುವ ಸಮಯದಲ್ಲಿ ಒರ್ಲಂಡೊದ ಆಂಡರ್ಸನ್ ಕಾನ್ಸರ್ ಸೆಂಟರ್ ಗೆ ಆತನನ್ನು ಸೇರಿಸಲಾಗುತ್ತೆ. ಆಗ ಅಲ್ಲಿಯ ವೈದ್ಯರೂ “ ಈತ ಇನ್ನೂ ಕೇವಲ ಆರು ತಿಂಗಳು ಮಾತ್ರ ಬದುಕಬಲ್ಲ ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ ” ಎಂದು ಹೇಳಿದ್ದರು. ಆದರೆ ಆತ್ಮಸ್ಥೈರ್ಯ ಮನುಷ್ಯನನ್ನು ಕುರುಡು ಯೋಚನೆಗಳಿಂದ, ದಿಢೀರನೆ ಬಂದೆರಗುವ ಸೋಲಿನಿಂದ, ಬದುಕು ಸಾಕು ಎಂಬ ನಿರ್ಧಾರದಿಂದ ವಿಮುಖನನ್ನಾಗಿಸಬಹುದು. ಆ ಹುಡುಗನ ಆತ್ಮಸ್ಥೈರ್ಯವು ಗಟ್ಟಿಯಾಗಿತ್ತು. ಆತನ ಗುರಿ ಸ್ಪಷ್ಟವಾಗಿತ್ತು, ತನ್ನ ಜೀವನದ ಯಶಸ್ಸಿನ ಉತ್ತುಂಗದಲ್ಲಿದ್ದ ಆತ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳಲೂ ತಯಾರಿರಲಿಲ್ಲ, ಮತ್ತೆ ಟೆನ್ನಿಸ್ ಬ್ಯಾಟ್ ಹಿಡಿದು ಅಂಗಳಕ್ಕೆ ಧುಮುಕಿಬಿಟ್ಟ. ಮತ್ತೆ ಗೆಲುವಿನ ಯಾನ ಪ್ರಾರಂಭವಾಯಿತು, ಆತ್ಮಸ್ಥೈರ್ಯದ ಎದುರು ಮಹಾಮಾರಿ ರೋಗವು ಆತನನ್ನು ಏನೂ ಮಾಡಲಾಗಲಿಲ್ಲ.

ನಾನು ಇಲ್ಲಿಯವರೆಗೆ ಹೇಳಿದ್ದು ಮತ್ತು ಮುಂದೆ ಹೇಳಬೇಕಿರುವುದು ಯಾರ ಬಗ್ಗೆ  ತಿಳಿಯಿತೇ?  “ ಲಿಯಾಂಡರ್ ವೇಸ್ ಪೇಸ್ ”. ಭಾರತದ ಟೆನ್ನಿಸ್’ನ ಡಬಲ್ಸ್ ವಿಭಾಗದ ಅಜರಾಮರ ನಮ್ಮ ಲಿಯಾಂಡರ್ ಪೇಸ್. ಇವತ್ತು ಎಂಟು  ಡಬಲ್ಸ್ ಗ್ರಾಂಡ್ ಸ್ಲಾಮ್ಸ್ ಮತ್ತು ಒಂಬತ್ತು ಮಿಶ್ರ ಡಬಲ್ಸ್ ಗ್ರಾಂಡ್ ಸ್ಲಾಮ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಪೇಸ್ ಜಗತ್ತಿನಲ್ಲಿ ಗ್ರಾಂಡ್ ಸ್ಲಾಮ್ಸ್ ಪ್ರಶಸ್ತಿಯನ್ನು ಗೆದ್ದಿರುವ  ಅತ್ಯಂತ ಹಿರಿಯ ಆಟಗಾರನಾಗಿದ್ದಾರೆ. 42 ವರ್ಷದ ಪೇಸ್ ಇವತ್ತಿಗೂ ಸತತ 3 ತಾಸು ಟೆನ್ನಿಸ್ ಅಂಗಳದಲ್ಲಿ ನಿರಂತರವಾಗಿ ಆಡಬಲ್ಲ, ಎದುರಾಳಿಗಳನ್ನು ಕಾಡಬಲ್ಲ. ನಲುವತ್ತೆರಡಾಗಿದ್ದರೂ ಉತ್ಸಾಹ ಒಂಚೂರೂ ಬತ್ತಿಲ್ಲ. ಅಬ್ಬಾ !!! ಅದೆಂತ ಸಾಮರ್ಥ್ಯ.

ಗೋವಾ ಮೂಲದ ಆದರೆ ಕಲ್ಕತಾದಲ್ಲಿ ನೆಲೆಯೂರಿರುವ ವೇಸ್ ಪೇಸ್ ಮತ್ತು ಜೆನೀಫರ್ ಅವರ ಮುದ್ದಿನ ಮಗನಾಗಿ ಜೂನ್ 17,1973 ರಂದು ಜನಿಸಿದ್ದರು ಪೇಸ್. ಇವರ ಕುಟುಂಬವೇ ಕ್ರೀಡಾ ಕುಟುಂಬ. ಅಪ್ಪ ವೇಸ್ ಪೇಸ್ ಭಾರತ ತಂಡವನ್ನು ಹಾಕಿಯಲ್ಲಿ ಪ್ರತಿನಿಧಿಸುತ್ತಿದ್ದರು,ಅವರು 1972 ರಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಹೆಮ್ಮೆಯ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಇನ್ನು ಪೇಸ್ ಅಮ್ಮ ಭಾರತದ  ಮಹಿಳಾ ಬಾಸ್ಕೆಟ್ ಬಾಲ್ ತಂಡದ ನಾಯಕಿಯಾಗಿದ್ದರು. ಕ್ರೀಡೆಯನ್ನು ರಕ್ತಗತವಾಗಿಯೇ ಪಡೆದುಕೊಂಡಿದ್ದ ಪೇಸ್ ತನ್ನನ್ನೂ ಕೂಡ ಕ್ರೀಡಾ ಲೋಕಕ್ಕೆ ಅರ್ಪಿಸಿಕೊಂಡಿದ್ದ.ತನ್ನ ಐದನೇ ವಯಸ್ಸಿನಲ್ಲಿಯೇ ಟೆನ್ನಿಸ್ ಬ್ಯಾಟ್ ಹಿಡಿದು ಮುಂದೊಂದು ದಿನ ಭಾರತದ ಪ್ರಮುಖ ಟೆನ್ನಿಸ್ ಪಟುವಾಗುವ ಸುಳಿವು ನೀಡಿದ್ದ ಪೇಸ್. ತನ್ನ ಬಾಲ್ಯದ ಶಿಕ್ಷಣವನ್ನು ಲಾ ಮಾರ್ಟೀಂಜರ್ ಶಾಲೆಯಲ್ಲಿ ಮತ್ತು ಉನ್ನತ ಶಿಕ್ಷಣವನ್ನು ಸೈಂಟ್ ಕ್ಸೇವಿಯರ್ ಕಾಲೇಜ್’ನಲ್ಲಿ ಮುಗಿಸಿದ್ದರು ಪೇಸ್. 1985 ರಲ್ಲಿ ಮದ್ರಾಸ್’ನಲ್ಲಿರುವ  ಬ್ರಿಟಾನಿಯ ಅಮೃತ್ರಾಜ್ ಟೆನ್ನಿಸ್ ಅಕಾಡಮಿಗೆ ಪೇಸ್ ಸೇರುತ್ತಾರೆ. ಡೇವ್ ಓಮೆರ ಅವರ ಗರಡಿಯಲ್ಲಿ ಪೇಸ್ ಟೆನ್ನಿಸ್ ಲೋಕಕ್ಕೆ ಕಾಲಿಟ್ಟರು.

1990 ರಲ್ಲಿ ಪೇಸ್ ಜೀವನಕ್ಕೆ  ಮಹತ್ವದ ತಿರುವೊಂದು ಸಿಕ್ಕಿತ್ತು. ಟೆನ್ನಿಸ್ಸನ್ನೇ ಉಸಿರಾಗಿಸಿಕೊಂಡು ತರಬೇತಿ ಪಡೆಯುತ್ತಿದ್ದ ಪೇಸ್ 1990 ರಲ್ಲಿ ನಡೆದ ವಿಶ್ವ ವಿಂಬಲ್ಡನ್ ಕಿರಿಯರ ಟೆನ್ನಿಸ್ ಪಂದ್ಯಾವಳಿಯನ್ನು ಗೆಲ್ಲುವುದರ ಮೂಲಕ ವಿಶ್ವದ ನಂಬರ್ ಒನ್ ಆಟಗಾರನಾದರು. ಇಡೀ ಭಾರತ ಪೇಸ್ ಎಂಬ ಮೀಸೆ ಮೂಡದ ಹುಡುಗನ ಸಾಧನೆಯನ್ನು ಕೊಂಡಾಡಿತ್ತು. ಮುಂದೆ ಪೇಸ್ ಎಂಬ ಟೆನ್ನಿಸ್ ಪ್ರತಿಭೆಯ ಅನಾವರಣ ಎಲ್ಲ ಪಂದ್ಯಾವಳಿಯಲ್ಲೂ ಪ್ರದರ್ಶನಗೊಳ್ಳತೊಡಗಿತು. 1990 ರಲ್ಲಿ ಪೇಸ್ ಭಾರತದ ಡೇವಿಸ್ ಕಪ್ ತಂಡವನ್ನು ಸೇರಿದರು.1996 ರಲ್ಲಿ ಅಟ್ಲಾಂಟ ಒಲಂಪಿಕ್ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಪೇಸ್ ಕಂಚಿನ ಪದಕವನ್ನು ಗೆಲ್ಲುವ ಮೂಲಕ 1952 ರ ನಂತರ ಒಲಂಪಿಕ್ ಒಂದರಲ್ಲಿ ವೈಯಕ್ತಿಕ ವಿಭಾಗದಲ್ಲಿ ಭಾರತ ಪದಕವೊಂದನ್ನು ಗೆಲ್ಲುವ ಮೂಲಕ ಇತಿಹಾಸವೇ ನಿರ್ಮಾಣವಾಯಿತು.ಪೇಸ್ ಎಂಬ ಟೆನ್ನಿಸ್ ಮಾಂತ್ರಿಕ ಯಶಸ್ಸಿನ ಉತ್ತುಂಗುಕ್ಕೆ ತಲುಪುವ ಲಕ್ಷಣ ಗೋಚರವಾಗತೊಡಗಿತು. 1994 ರಿಂದ ಪೇಸ್ ಮತ್ತು ಮಹೇಶ್ ಭೂಪತಿ ಜೋಡಿ ಡಬಲ್ಸ್ ವಿಭಾಗದಲ್ಲಿ ಜೋಡಿಯಾಗಿ ಆಡಲು ಶುರುಮಾಡಿದ್ದರು.1997 ಮತ್ತು 1998 ರ ಅವಧಿಯಲ್ಲಿ ಇದೆ ಜೋಡಿ ಏಟಿಪಿ(Association of Tennis Professionals ) ಆಯೋಜಿಸಿದ್ದ ಎಂಟು ಪಂದ್ಯಾವಳಿಯಲ್ಲಿ  ಆರು ಪಂದ್ಯಾವಳಿಯನ್ನು ಗೆದ್ದು ಟೆನ್ನಿಸ್ ಲೋಕದಲ್ಲಿ ಭಾರತದ ತ್ರಿವರ್ಣ ಧ್ವಜ ಎತ್ತರದಲ್ಲಿ ಹಾರಾಡುವಂತೆ ಮಾಡಿದ್ದರು. 1999 ರಲ್ಲಿ ನಡೆದ ನಾಲ್ಕೂ ಗ್ರ್ಯಾಂಡ್ ಸ್ಲಾಮ್ ಗಳ ಫೈನಲ್ ಪ್ರವೇಶಿಸಿದ ಈ ಜೋಡಿ ಎರಡು ಗ್ರ್ಯಾಂಡ್ ಸ್ಲಾಮ್ ಕಿರೀಟವನ್ನು ತನ್ನದಾಗಿಸಿಕೊಂಡಿತ್ತು.ಫ್ರೆಂಚ್ ಮತ್ತು ವಿಂಬಲ್ಡನ್ ಗ್ರ್ಯಾಂಡ್ ಸ್ಲಾಮ್ ಗೆದ್ದ  ಈ ಜೋಡಿ  ಏಟಿಪಿ(Association of Tennis Professionals ) ನೀಡುವ ಡಬಲ್ಸ್ ರಾಂಕಿಂಗ್ ನಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿತ್ತು.ಆದರೆ ಕೆಲವು ವೈಯಕ್ತಿಕ ಕಾರಣಗಳಿಂದ ಈ ಜೋಡಿ 2001 ರಲ್ಲಿ ಬೇರ್ಪಟ್ಟಿತು. ಆದರೆ ಪೇಸ್ ತಮ್ಮ ಡಬಲ್ಸ್ ಪಯಣವನ್ನು ಬೇರೆ ಬೇರೆ ಆಟಗಾರರೊಂದಿಗೆ ಮುಂದುವರೆಸಿ ಯಶಸ್ವಿಯಾದರು.ಭೂಪತಿಯಿಂದ ಬೇರ್ಪಟ್ಟ ನಂತರವೂ ಪೇಸ್ ಐದು ಗ್ರ್ಯಾಂಡ್ ಸ್ಲಾಂಗಳನ್ನು ಗೆದ್ದರು. ಮುಂದೆ ಮಾರ್ಟಿನಾ ನವ್ರಾಟಿಲೋವ, ಸಾನಿಯಾ ಮಿರ್ಜಾ ಜೊತೆ ಆಡಿದರು. ವಿಂಬಲ್ಡನ್, ಯುಎಸ್ ಓಪನ್, ಕಾಮನ್’ವೆಲ್ತ್ ಗೇಮ್ಸ್ ಮುಂತಾದ ಟೈಟಲ್’ಗಳನ್ನು ಗೆದ್ದುಕೊಂಡರು. ಇದಲ್ಲದೆ ಮೊನ್ನೆ ನಡೆದ 2015 ರ ವಿಂಬಲ್ಡನ್ ಮತ್ತು US ಓಪನ್ ಅನ್ನು ಮಾರ್ಟಿನಾ ಹಿಂಗೀಸ್ ಜೋಡಿಯಾಗಿ ಗೆದ್ದಿರುವ ಪೇಸ್ ಒಂಬತ್ತು ಮಿಕ್ಸಡ್ ಡಬಲ್ಸ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಅನಾರೋಗ್ಯಕ್ಕೆ ತುತ್ತಾದ ಬಳಿಕವೂ ಮತ್ತೆ ಟೆನ್ನಿಸ್ ಅಂಗಳದಲ್ಲಿ ಗೆಲ್ಲುತ್ತಲೇ ಹೋರಾಟ ಮುಂದುವರೆಸಿರುವ ಪೇಸ್ ನಿಜವಾಗಲೂ ನಮಗೆಲ್ಲ ಪ್ರೇರಕರೇ ಸರಿ. ಆ ಕೆಟ್ಟ  ದಿನವನ್ನು ನೆನಪಿಸಿಕೊಳ್ಳುವ ಪೇಸ್ “ ಆ ದಿನಗಳು ನನ್ನ ಜೀವನದ ಅನೇಕ ವಿಚಾರಗಳನ್ನು ನೆನಪಿಸಿಕೊಳ್ಳುವಂತೆ ಮತ್ತು ಅವುಗಳ ಬಗ್ಗೆ ಯೋಚಿಸುವಂತೆ ಮಾಡಿತು“ ಎಂದು ಹೇಳುತ್ತಾರೆ.

ಪೇಸ್ ಎಂಬ ಮಹಾನ್ ಆಟಗಾರನ ಬಗ್ಗೆ ಎಷ್ಟು ಬರೆದರೂ ಕಮ್ಮಿಯೇ ಸರಿ. ಭಾರತದ ಹೆಸರನ್ನು ಟೆನ್ನಿಸ್ ಲೋಕದಲ್ಲಿ ರಾರಾಜಿಸುವಂತೆ ಮಾಡಿದ ಪೇಸ್ ನಿಜವಾಗಲೂ ರಾಷ್ಟ್ರಪ್ರೇಮಿ ಕ್ರೀಡಾಪಟು..ಇಷ್ಟೊಂದು ಸಾಧನೆ ಮಾಡಿದ ಪೇಸ್’ರನ್ನು  ಅನೇಕ ಬಿರುದು ಮತ್ತು ಪ್ರಶಸ್ತಿಗಳು ಹುಡುಕಿಕೊಂಡು ಬಂದವು. ಭಾರತ ಸರ್ಕಾರ ನೀಡುವ ಪ್ರತಿಷ್ಠಿತ  ಅರ್ಜುನ ಪ್ರಶಸ್ತಿಯನ್ನು 1990 ರಲ್ಲಿ ಮತ್ತು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು 1996-97 ರಲ್ಲಿ ಪಡೆದರು. ಪೇಸ್ ಎಂಬ ಮಹಾನ್ ಕ್ರೀಡಾ ಪಟುವಿಗೆ ಭಾರತದ ನಾಗರೀಕ ಸಮ್ಮಾನವಾದ ಪದ್ಮಶ್ರೀ ಪ್ರಶಸ್ತಿಯನ್ನು ಭಾರತ ಸರ್ಕಾರ ನೀಡಿತು..ಹಾಗೆಯೇ 2014ರಲ್ಲಿ ಕೇಂದ್ರ ಸರ್ಕಾರ ಪದ್ಮ ಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಿತು.ಅಂದು ಆಸ್ಪತ್ರೆಯ ಹಾಸಿಗೆಯ ಮೇಲಿದ್ದ ಇದೇ ಹುಡುಗನ ಪರಿಸ್ಥಿತಿಯನ್ನು ಈಗ ಕಲ್ಪಿಸಿಕೊಂಡರೂ ಆಶ್ಚರ್ಯವೆನ್ನಿಸುತ್ತದೆ.

42 ವರ್ಷ ವಯಸ್ಸಿನಲ್ಲೂ ಎದುರಾಳಿಯ ಎದೆಯಲ್ಲಿ ನಡುಕ ಹುಟ್ಟಿಸುವ ಅದ್ಭುತ ಮನೋಸ್ಥೈರ್ಯ ಹೊಂದಿರುವ ಪೇಸ್ ಎಂಬ ಟೆನ್ನಿಸ್ ಲೋಕದ ದಿಗ್ಗಜನಿಗೆ ಒಂದು ದೊಡ್ಡ ಸಲಾಂ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasanna Hegde

ಹೆಸರು ಪ್ರಸನ್ನ ಹೆಗಡೆ.ಹುಟ್ಟಿದ್ದು,ಬೆಳೆದಿದ್ದು ಬದುಕನ್ನ ಅನುಭವಿಸಿದ್ದು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸಮೀಪದ ಹಳ್ಳಿಯೊಂದರಲ್ಲಿ.ನನ್ನ camera,ಪ್ರೀತಿಯ ನನ್ನ ನಾಯಿ ಜೊತೆಗಿದ್ದರೆ ನನ್ನನ್ನೂ ನಾ ಮರೆಯುತ್ತೇನೆ.ಹಾಗಾಗಿ ಪಕ್ಕಾ ಮಲೆನಾಡಿನ ಹುಡುಗ.ಅವಶ್ಯಕತೆ,ಅನಿವಾರ್ಯತೆಯ ಕಾರಣ ಬದುಕುತ್ತಿರುವುದು ಮೈಸೂರಿನಲ್ಲಿ.Chartered Accountancy ಯ ಭಾಗವಾದ Articleship ಅನ್ನು ಮಾಡುತ್ತಿದ್ದೇನೆ.ಬರೆಯುವುದು ಕೇವಲ ಹವ್ಯಾಸವಲ್ಲ ನನ್ನ ಜೀವನದ ಅವಿಭಾಜ್ಯ ಅಂಗ.ರಾಜಕೀಯವನ್ನ ನಾನು ಇಷ್ಟಪಡುತ್ತೇನೆ...ಆಸೆಯಿದೆ ಸಮಾಜಕ್ಕೆ ನನ್ನ ಕೈಲಾದಷ್ಟು ನೀಡಬೇಕೆಂಬುದು.. ಮತ್ತೇನು ನನ್ನ ಬಗ್ಗೆ ಹೇಳಿಕೊಳ್ಳುವಂತದ್ದಿಲ್ಲ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!